Blog

  • ಜುಲೈ 12ರಂದು ರಾಷ್ಟ್ರೀಯ ಲೋಕ್‍ ಅದಾಲತ್‍ ನೆಡೆಯಲಿದೆ ಯಾವುದೇ ಶುಲ್ಕವಿಲ್ಲದೆ ಖರ್ಚು ವೆಚ್ಚವಿಲ್ಲದೇ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಿ – ಜಿಲ್ಲಾ ಸತ್ರ ನ್ಯಾಯಾಧೀಶರು ಕೆ ಬಿ ಗೀತಾ

    ಲೋಕ್‍ ಅದಾಲತ್‍ನ ಮೂಲ ಉದ್ದೇಶವೇನೆಂದರೇ ಯಾವುದೇ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸೌರ್ಹಾಧಯುತವಾದ ಜೀವನವನ್ನು ನಡೆಸಲು ಸಾಧ್ಯವಾಗಬೇಕು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೆ ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆಯಾದ ಕೆ.ಬಿ ಗೀತಾ ತಿಳಿಸಿದರು.

     

    ಈ ಕುರಿತು ಮಾಹಿತಿ ನೀಡಿರುವ ಅವರು ಜನತಾ ನ್ಯಾಯಾಲಯದಲ್ಲಿ ಒಬ್ಬರು ಹಾಲಿ ನ್ಯಾಯಾಧೀಶರು ಹಾಗೂ ನುರಿತ ವಕೀಲರು ಸಂಧಾನಕಾರರಾಗಿ ಇರುತ್ತಾರೆ. ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯವನ್ನು ಪ್ರವೇಶಿಸದೇ ಇರತಕ್ಕಂತಹ ಪ್ರಕರಣಗಳನ್ನು ಸಹ ನಾವು ಜನತಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

     

    ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ತೀರ್ಮಾನದಂತೆ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದವರ ನಿರ್ದೇಶನದಂತೆ ನಾವು ಪ್ರತಿ ಜಿಲ್ಲೆಯಲ್ಲಿಯೂ ಸಹ ಈ ವರ್ಷದ ಜುಲೈ 12ನೇ ತಾರೀಖು ರಾಷ್ಟ್ರೀಯ ಲೋಕ್‍ ಅದಾಲತ್‍ನ್ನು ಹಮ್ಮಿಕೊಂಡಿದ್ದೇವೆ. ಇದು ಈ ವರ್ಷದ 2ನೇ ಲೋಕ್‍ ಅದಾಲತ್‍ ಆಗಿದೆ ಎಂದು ತಿಳಿಸಿದರು.

     

     

    ಈ ಲೋಕ್‍ ಅದಾಲತ್‍ ಜಿಲ್ಲೆಯ ಹಾಗೂ ಪ್ರತಿಯೊಂದು ತಾಲೂಕಿನ ನ್ಯಾಯಾಲಯಗಳಲ್ಲಿಯೂ ಸಹ ನೆಡೆಯುತ್ತದೆ ಈ ಲೋಕ್‍ ಅದಾಲತ್‍ನ ಉಪಯೋಗಗಳೇನೆಂದರೆ ಪಕ್ಷಗಾರರು ತಮ್ಮ ಪ್ರಕರಣಗಳನ್ನು ನೇರವಾಗಿ ಶೀಘ್ರವಾಗಿ ಜನತಾ ನ್ಯಾಯಾಲಯದಲ್ಲಿ ಒಂದೇ ಸಿಟ್ಟಿಂಗ್‍ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಅವರು ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಬಹುದು, ಎರಡು ಪಕ್ಷಗಾರರಿಗೆ ಒಪ್ಪಿಗೆಯಾದ ತೀರ್ಮಾನವನ್ನು ಮಾತ್ರ ಲೋಕ್‍ ಅದಾಲತ್‍ನಲ್ಲಿ ತೀರ್ಮಾನ ಮಾಡಲಾಗುವುದು , ಆದ್ದರಿಂದ ಇಬ್ಬರು ಪಕ್ಷಗಾರರ ಒಪ್ಪಿಗೆಯಿಂದ ತೀರ್ಮಾನವಾಗುವುದರಿಂದ ಅವರ ಬಾಂದವ್ಯವು ಚೆನ್ನಾಗಿ ಆಗಿ, ವಿವಾಧವು ಸುಖಾಂತ್ಯವಾಗುತ್ತದೆ ಮತ್ತು ಅದರ ಮೇಲೆ ಯಾವುದೇ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶವಿಲ್ಲದಿರುವುದರಿಂದ ಅದು ಅಂತಿಮ ತೀರ್ಮಾನವಾಗುತ್ತದೆ, ನ್ಯಾಯಾಲಯದಲ್ಲಿ ದಾಖಲು ಮಾಡಿದಾಗ ಸಲ್ಲಿಸಿದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಆದ್ದರಿಂದ ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ತೀರ್ಮಾನವಾಗುತ್ತದೆ ಕೇವಲ ಮೋಸ ಅಥವಾ ಮಿಸ್‍ ರೆಪ್ರಸೆಂಟೇಷನ್‍ ನಂತಹ ಸಂದರ್ಭದಲ್ಲಿ ಮಾತ್ರ ಸದರಿ ಲೋಕ್‍ ಅದಾಲತ್‍ನ ತೀರ್ಮಾನದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದಾಗಿದೆ.

     

    ಇದರಿಂದ ಕೇವಲ ಅರ್ಧ ಅಡಿ, ಒಂದು ಅಡಿಗಾಗಿ ಅಕ್ಕಪಕ್ಕದ ಮನೆಯವರು ಏನಾದರೂ ದಾವೆಗಳನ್ನು ಸಲ್ಲಿಸಿದ್ದೆ ಆದರೆ ಅಂತಹ ದಾವೆಗಳು ತೀರ್ಮಾನವಾದಾಗ ನೆರೆಹೊರೆಯವರ ಸಂಬಂಧ ಚೆನ್ನಾಗಿ ಆಗುತ್ತದೆ ಸೌರ್ಹಾದಯುತವಾಗುತ್ತದೆ ಇದರಿಂದ ನಾವು ಉತ್ತಮ ದೇಶದ ನಿರ್ಮಾಣ ಮಾಡಲು ಸಹಾಯವಾಗುತ್ತದೆ ಎಂದರು.

     

     ರಾಜಿ ಸಂಧಾನದ ಮೂಲಕ ಲೋಕ್‍ ಅದಾಲತ್‍ನಲ್ಲಿ ಯಾವ ಯಾವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು…??

     

    ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಚೆಕ್ ಅಮಾನ್ಯದ ಪ್ರಕರಣಗಳು ಅಂದರೆ ಸೆಕ್ಷನ್ 138 ( Negotiable Instrument Act )ಕಾಯ್ದೆ ಯ 138 ರ ಅಡಿಯಲ್ಲಿ ಸಲ್ಲಿಸಿರುವ ಪ್ರಕರಣಗಳು ಸಲ್ಲಿಸಬಹುದಾದ ಪ್ರಕರಣಗಳು, ಬ್ಯಾಂಕ್‍ ವಸೂಲಾತಿ ಪ್ರಕರಣಗಳು, ಉದ್ಯೋಗ ಪುನಃ ಸ್ಥಾಪಿಸಲ್ಪಡಬೇಕಾದ ಪ್ರಕರಣಗಳು, ಇತರೆ ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಪಟ್ಟಂತಹ ಪ್ರಕರಣಗಳು, ವಿದ್ಯುತ್ ನೀರಿನ ಶುಲ್ಕದ ಪ್ರಕರಣಗಳು ಅದರಲ್ಲಿ Non Compoundable ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳು ಇತರೆ ಎಲ್ಲಾ ರಾಜಿ ಆಗ ತಕ್ಕಂತಹ ಅಪರಾಧಿಕ ಪ್ರಕರಣಗಳು ವೈವಾಹಿಕ ಪ್ರಕರಣಗಳು ಇತರೆ ಸಿವಿಲ್ ಪ್ರಕರಣಗಳನ್ನು ಸಹ ಇತ್ಯರ್ಥ ಪಡಿಸಿಕೊಳ್ಳಬಹುದು ಅದೇ ಪ್ರಕಾರ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿ ಇರತಕ್ಕಂತಹ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿ ಆಗಬಹುದಾದಂತಹ ಅಪರಾಧಿಕ ಪ್ರಕರಣಗಳು, ಬ್ಯಾಂಕ್‍ ವಸೂಲಾತಿ ಪ್ರಕರಣಗಳು, ಉದ್ಯೋಗ ಪುನರ್ ಸ್ಥಾಪಿಸಲ್ಪಡಬೇಕಾದ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನದ ಪ್ರಕರಣಗಳು, ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿನ ಪ್ರಕರಣಗಳು, ಕರ್ನಾಟಕ ವಿದ್ಯುತ್‍ ನಿಯಂತ್ರಣ ಆಯೋಗದ ಪ್ರಕರಣಗಳು, ಕರ್ನಾಟಕ ರಿಯಲ್‍ ಎಸ್ಟೇಟ್‍ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ ಅಥವಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನವನ್ನು ಹೊರತುಪಡಿಸಿದ ಉಳಿದ ಪ್ರಕರಣಗಳು, ಚೆಕ್‍ ಅಮಾನ್ಯದ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರದ ನ್ಯಾಯಾಧೀಕರಣದ ಪ್ರಕರಣಗಳು, ಕಾರ್ಮಿಕ ವಿವಾಧಗಳು, ವಿದ್ಯುತ್‍ ನೀರಿನ ಶುಲ್ಕಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗೆ ಸಂಬಂಧಿಸಿದ ಪ್ರಕರಣಗಳು, ಪಿಂಚಣಿ ಪ್ರಕರಣಗಳು, ರಾಜೀ ಯಾಗಬಹುದಾದಂತಹ ಎಲ್ಲಾ ಸಿವಿಲ್‍ ಪ್ರಕರಣಗಳು, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳು ಈ ರೀತಿಯ ಎಲ್ಲಾ ಪ್ರಕರಣಗಳನ್ನು ಲೋಕ್‍ ಅದಾಲತ್‍ನಲ್ಲಿ ರಾಜಿ ಮಾಡಿಕೊಳ್ಳಬಹುದು.

  • ನಿಸರ್ಗ ನಾರಾಯಣಸ್ವಾಮಿ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ ಅಭಿಮಾನಿಗಳು : ವೃದ್ಧರಿಗೆ ಹಣ್ಣು ಹಂಪಲು ವಿತರಣೆ

    ದೊಡ್ಡಬಳ್ಳಾಪುರ(ತೂಬಗೆರೆ): ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕನಿಸರ್ಗ ನಾರಾಯಣಸ್ವಾಮಿ ರವರ 56ನೇ ಹುಟ್ಟುಹಬ್ಬದ ಪ್ರಯುಕ್ತ ತೂಬಗೆರೆಯ ಆರ್ ಎಲ್ ಜಾಲಪ್ಪ ವೃದ್ಧಾಶ್ರಮದಲ್ಲಿ ನಾರಾಯಣಸ್ವಾಮಿ ಅಭಿಮಾನಿಗಳಿಂದ ವೃದ್ಧಾಶ್ರಮ ವಾಸಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

    ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ ಮಾತಾನಾಡಿ, ನಿಸರ್ಗ ನಾರಾಯಣಸ್ವಾಮಿ ಅವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶೋಷಿತರು, ಬಡವರು ಮತ್ತು ನಿರ್ಗತಿಕರ ಪಾಲಿಗೆ ಸದಾ ಸ್ಪಂದಿಸುವ ಗುಣ ಅವರಲ್ಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರ ಹುಟ್ಟುಹಬ್ಬದ ನಿಜವಾದ ಅರ್ಥವನ್ನು ಅಭಿಮಾನಿಗಳು ನೀಡಿದ್ದಾರೆ ಎಂದರು.

    ಯುವ ಮುಖಂಡ ಉದಯ ಆರಾಧ್ಯ ಮಾತಾನಾಡಿ, ನಿಸರ್ಗ ನಾರಾಯಣಸ್ವಾಮಿ ರವರು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಾದ್ಯಂತ ತಮ್ಮದೇ ಆದ ವರ್ಚಸ್ಸನ್ನು ಮೂಡಿಸಿದ್ದಾರೆ. ಬಡ ಮಧ್ಯಮ ವರ್ಗದಲ್ಲಿ ಹುಟ್ಟಿ ಬೆಳೆದು ಇಂದು ಸಕ್ರಿಯ ರಾಜಕಾರಣದಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದು ಸಮಾಜ ಸೇವೆಗೆ ತಮ್ಮ ಆದಾಯದ ಬಹುಪಾಲನ್ನು ಮೀಸಲಿಟ್ಟಿರುವುದು ಶ್ಲಾಘನೀಯ. ತೂಬಗೆರೆ ಜನರ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ಹೊಂದಿರುವ ನಾರಾಯಣಸ್ವಾಮಿ, ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

    ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡ ಶಶಿಕುಮಾರ್, ರೈತ ಮುಖಂಡ ನಾರಾಯಣಸ್ವಾಮಿ, ಯುವ ಮುಖಂಡ ಉದಯ ಆರಾಧ್ಯ, ನಾಗರಾಜು, ವಿಜಯ್, ಶಿವು ಮತ್ತಿತರರು ಹಾಜರಿದ್ದರು.

  • ಬೃಹತ್ ಮೆರವಣಿಗೆ ಮೂಲಕ ಕೆಂಪೇಗೌಡ ಜಯಂತೋತ್ಸವ ಆಚರಣೆಗೆ ಸಕಲ ಸಿದ್ಧತೆ

    ದೊಡ್ಡಬಳ್ಳಾಪುರ (ವಿಜಯಮಿತ್ರ ಸುದ್ದಿ ): ಕೆಂಪೇಗೌಡ ಜಯಂತ್ಯೋತ್ಸವದ ಅಂಗವಾಗಿ ಜೂನ್ 27ರ ಶುಕ್ರವಾರದಂದು ಬೆಳಿಗ್ಗೆ 9-30ಗಂಟೆಗೆ ನಗರದ ಶ್ರೀ ನೆಲದಾಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಹಳೇ ಬಸ್ ನಿಲ್ದಾಣದ ಮೂಲಕ ಬೆಳ್ಳಿರಥದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆಯನ್ನು ದೊಡ್ಡಬಳ್ಳಾಪುರದ ಪ್ರಮುಖ ರಸ್ತೆಗಳಲ್ಲಿ ತಾಲ್ಲೂಕಿನ ಸಮಸ್ತ ಜನತೆಯೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ಹೊರಟು ತಾಲ್ಲೂಕು ಕಛೇರಿಯಲ್ಲಿ ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಶ್ರೀ ಕೆಂಪೇಗೌಡ ಜಯಂತ್ಯೋತ್ಸವ ಆಚರಣಾ ಸಮಿತಿಯ ಅಧ್ಯಕ್ಷ ಟಿ ವಿ ಲಕ್ಷ್ಮಿ ನಾರಾಯಣ್ ತಿಳಿಸಿದರು.

     

     

    ನಗರದ ಒಕ್ಕಲಿಗರ ಭವನದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಹೆಸರಾಂತ ಜಾನಪದ ಕಲಾವಿದರ ತಂಡಗಳು ಭಾಗವಹಿಸಲಿದ್ದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನೆಡೆಸಿದ್ದು, ಮೆರವಣಿಗೆ ನಂತರ ಬೆಳಿಗ್ಗೆ 11-30 ರಿಂದ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಕೆಂಪೇಗೌಡರ ಆದ್ಧೂರಿ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿದೆ.ಈ ಭವ್ಯ ಸಮಾರಂಭಕ್ಕೆ ತಾಲ್ಲೂಕಿನ ನಗರ ಮತ್ತು ಹಳ್ಳಿಗಳ ಪ್ರತಿ ಮನೆಯಿಂದ ಎಲ್ಲಾ ಕುಲಬಾಂಧವರು, ಎಲ್ಲಾ ಸಮುದಾಯದ ನಾಗರೀಕರು ಹಾಗೂ ಎಲ್ಲಾ ಇಲಾಖೆ ಅಧಿಕಾರಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

     

     

    ಮುಖಂಡರಾದ ತಿ.ರಂಗರಾಜು ಮಾತನಾಡಿ ನಾಡ ಪ್ರಭು ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ ಅವರು ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಬೆಂಗಳೂರಿನಂತಹ ಮಹಾ ನಗರವನ್ನು ಕಟ್ಟಿದವರು, ಈ ಕಾರ್ಯಕ್ರಮ ಕೇವಲ ಒಂದು ಸಮುದಾಯದ ಕಾರ್ಯಕ್ರಮವಲ್ಲ, ಈ ಕಾರ್ಯಕ್ರಮದಲ್ಲಿ ರಾಜಕೀಯ ಬಳಸದೆ ಪಕ್ಷತೀತವಾಗಿ ಎಲ್ಲಾ ನಾಯಕರು, ಪ್ರಮುಖರು ಒಮ್ಮನಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ ಎಂದು ತಿಳಿಸಿದರು.

     

    ತಾಲ್ಲೂಕಿನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲು ನಾಯಕರ ಪಟ್ಟು 

    ನಮ್ಮ ಸಮುದಾಯವು ಹಲವು ವರ್ಷಗಳಿಂದ ನಮ್ಮ ತಾಲ್ಲೂಕಿನಲ್ಲಿ ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡುತ್ತಿದ್ದರು ಈವರೆಗೂ ಯಾವುದೇ ಬೆಳವಣಿಗೆ ಕಂಡಿಲ್ಲ, ತಾಲ್ಲೂಕು ಪ್ರತಿನಿಧಿಗಳು, ತಾಲ್ಲೂಕು ಆಡಳಿತ ಹಾಗೂ ಸಮುದಾಯದ ಪ್ರಮುಖರಲ್ಲಿ ಈ ಮೂಲಕ ಪ್ರತಿಮೆ ಸ್ಥಾಪಿಸಲು ಒತ್ತಾಯಿಸುತ್ತಿದ್ದೇವೆ. ಅಲ್ಲದೇ ಈ ಬಾರಿ ಯಾವುದೇ ಕಾರಣಕ್ಕೂ ನಾವು ಭರವಸೆಗೆ ಬಲಿಯಾಗುವುದಿಲ್ಲ, ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನೆ ಮಾಡಲೇ ಬೇಕು ಎಂಬುದು ನಮ್ಮೆಲ್ಲರ ಅಗ್ರಹವಾಗಿದ್ದು, ಈ ವರ್ಷ ಸ್ಥಳ ನಿಗದಿ ಮಾಡಿ ಗುದ್ದಲಿ ಪೂಜೆ ಮಾಡಿಸಿಯೇ ತಿರುತ್ತೇವೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

    ಸಮುದಾಯದ ಮುಖಂಡರಾದ ಕುರುವೆಗೆರೆ ನರಸಿಂಹಯ್ಯ ಮಾತನಾಡಿ ಸಮುದಾಯದ ಬಂಧು – ಮಿತ್ರರು ಒಟ್ಟಾಗಿ ಸೇರಲು ಇದೊಂದು ಸುವರ್ಣ ಅವಕಾಶ, ನಮ್ಮ ಸಮುದಾಯದ ಕೀರ್ತಿ ಹೆಚ್ಚಿಸಿದ ಮಹಾ ನಾಯಕ, ನಾಡಪ್ರಭು ಕೆಂಪೇಗೌಡ ಜಯಂತೋತ್ಸವವನ್ನು ಎಲ್ಲರೂ ಒಟ್ಟಾಗಿ ಅದ್ದೂರಿಯಾಗಿ ಆಚರಿಸೋಣ, ಈ ಕಾರ್ಯಕ್ರಮವು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗದೆ ತಾಲ್ಲೂಕಿನ ಎಲ್ಲಾ ಸಮುದಾಯಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ನಾಡಪ್ರಭು ಕೆಂಪೇಗೌಡರಿಗೆ ಗೌರವ ನಮನ ಸಲ್ಲಿಸಲಿ ಎಂದರು.

     

    ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ರಾಜಘಟ್ಟ ಶಿವಣ್ಣ,ಕುರುವೆಗೆರೆ ನರಸಿಂಹಯ್ಯ, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ ವಿ ಲಕ್ಷ್ಮಿ ನಾರಾಯಣ, ಲಕ್ಷ್ಮಮ್ಮ, ದೀಪು ಗೌಡ, ಶಾಂತಮ್ಮ, ಶ್ರೀನಿವಾಸಗೌಡ, ನಾಗೇಶ ಗೌಡ, ಮೆಳೇಕೋಟೆ ಅಶೋಕ್ ಗೌಡ, ಮಂಡಿ ಬ್ಯಾಡರಹಳ್ಳಿ ಅಶ್ವಥ್ ನಾರಾಯಣ, ರತ್ನಮ್ಮ ರವರನ್ನು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

     

     

  • BSP ಪಕ್ಷಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯಕ್ರಮ : ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ – ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ

    ದೊಡ್ಡಬಳ್ಳಾಪುರ : ಸಾರ್ವಜನಿಕರು ತಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳದಂತೆ ಮುಂಬರುವ ಚುನಾವಣೆಗಳಲ್ಲಿ ಮತದಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಶ್ರಮಿಸಬೇಕೆಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ ತಿಳಿಸಿದರು.

    ಸ್ಥಳೀಯವಾಗಿ ಪಕ್ಷ ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಆತ್ಮವಲೋಕನ ಸಭೆಯನ್ನು ಆಯೋಜನೆ ಮಾಡಲಾಗಿದ್ದು ತಾಲೂಕು ಹಾಗೂ ಹೋಬಳಿ ಮಟ್ಟಗಳ ಪುನರ್ ರಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕರಾದ ಅಶೋಕ್ ಚಕ್ರವರ್ತಿ ತಿಳಿಸಿದರು

     

    ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಹಲವು ಪ್ರಮುಖರು ಇಂದು ಅಧಿಕೃತವಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆಯಗುತ್ತಿದ್ದು, ಬಹುಜನ ಸಮಾಜ ಪಾರ್ಟಿ ಮುಂದಿನ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಸ್ಪರ್ದಿಸಲು ತಯಾರಿ ನೆಡೆಸುತ್ತಿದ್ದೆ ಪ್ರಮುಖವಾಗಿ ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಬಹುಜನ ಸಮಾಜ ಪಕ್ಷದ ಸಂಘಟನೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ ಎಂದರು.

    ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದವರನ್ನು ಪಕ್ಷದ ರಾಜ್ಯ ಸಂಯೋಜಕ ರಾದ ಅಶೋಕ್ ಚಕ್ರವರ್ತಿ ಪಕ್ಷದ ಶಾಲು ಹೊಡಿಸಿ ಪಕ್ಷಕ್ಕೆ ಸ್ವಾಗತಿಸಿದರು.

     

    ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹಯ್ಯ ಮಾತನಾಡಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಸಭೆ ತರಬೇತಿಗಳನ್ನು ರಾಜ್ಯಾದ್ಯಂತ ನಮ್ಮ ಮಾರ್ಗದರ್ಶಕರು ಹಾಗೂ ರಾಜ್ಯಸಂಯೋಜಕರಾದ ಅಶೋಕ್ ಚಕ್ರವರ್ತಿ ರವರ ನೇತೃತ್ವದಲ್ಲಿ ನೆಡೆಸುತ್ತಿದ್ದು ಮುಂಬರುವ ಚುನಾವಣೆಗಳಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಸಲಿದ್ದೇವೆ, ಪಕ್ಷದ ಗೆಲುವುಗಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಶ್ರಮಿಸಲು ಮುಂದಾಗಬೇಕು ಎಂದರು.

    ಬಹುಜನ ಸಮಾಜ ಪಕ್ಷಕ್ಕೆ ನೂರಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಬಂದು ಸೇರ್ಪಡೆಯಗುತ್ತಿರುವುದು ಸಂತಸ ತಂದಿದೆ ಅಲ್ಲದೇ ಪ್ರತಿಯೊಬ್ಬರಲ್ಲೂ ಪಕ್ಷ ಕಟ್ಟುವ ಹುಮ್ಮಸ್ಸು ದುಪ್ಪಟ್ಟಾಗಿದ್ದು ಬಹುಜನ ಸಮಾಜ ಪಕ್ಷವು ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು .

    ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮಂತರಾಯಪ್ಪ, ರಾಜ್ಯ ಕಾರ್ಯದರ್ಶಿ ಬಂಗಾರಪ್ಪ,ಜಿಲ್ಲಾಧ್ಯಕ್ಷರಾದ ನರಸಿಂಹರಾಜು, ಬೆಂಗಳೂರು ಗ್ರಾಮಾಂತರ ಉಸ್ತುವಾರಿಗಳಾದ ಆರ್. ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷರಾದ ದೊಡ್ಡಯ್ಯ, ಹೊಸಕೋಟೆ ತಾಲೂಕು ಅಧ್ಯಕ್ಷರಾದ ಬಲರಾಮು,ಹೊಸಕೋಟೆ ಉಸ್ತುವಾರಿಗಳಾದ ನಾರಾಯಣಸ್ವಾಮಿ,ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾದ ಪಿ. ಏನ್. ಫಿಳ್ಳಪ್ಪ, ನೆಲಮಂಗಲ ಉಸ್ತುವಾರಿ ಗಂಗಾಧರಪ್ಪ,ಸೌಭಾಗ್ಯಮ್ಮ,ನರಸಿಂಹಮೂರ್ತಿ, ದೇವನಹಳ್ಳಿ ಉಸ್ತುವಾರಿಗಳಾದ ನಂಜಪ್ಪ, ನಾಗಮಣಿ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ರಾಮಾಂಜಿನಪ್ಪ, ಕಾರ್ಯದರ್ಶಿ ಸಿನಪ್ಪ, ವಿಮಲಾ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

     

     

  • SKDRDP ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದ ರೋಜಿಪುರದಲ್ಲಿ ಉಚಿತ ಕಣ್ಣಿನ ತಪಾಸಣಾ ಹಾಗೂ ಆರೋಗ್ಯ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

     

    ತಾಲ್ಲೂಕು ಯೋಜನಾಧಿಕಾರಿಯಾದ ದಿನೇಶ್ ಎನ್.ಆರ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆ ಸಹಕಾರದಿಂದ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಉಚಿತ ಕಣ್ಣಿನ ತಪಾಸಣೆ ಅಷ್ಟೇ ಅಲ್ಲದೇ ಉಚಿತವಾಗಿ ಕನ್ನಡಕ ವಿತರಣೆ ಮಾಡುತ್ತಿದ್ದು, ಅವಶ್ಯಕತೆ ಇದ್ದಲ್ಲಿ ಕಣ್ಣಿನ ಆಪರೇಷನ್ ಮಾಡುವ ಅವಕಾಶವು ನಮ್ಮ ಯೋಜನೆ ಮಾಡಲಿದೆ ಎಂದು ತಿಳಿಸಿದರು

    ಕಾರ್ಯಕ್ರಮದಲ್ಲಿ ದೃಷ್ಠಿ ಕಣ್ಣಿನ ಆಸ್ಪತ್ರೆ ನೇತ್ರಾದಿಕಾರಿ ನಾಯ್ಡ,ಜನಜಾಗೃತಿ ಸದಸ್ಯರಾದ ರಮೇಶ್, ನಗರ ಸಭೆ ಸದಸ್ಯರಾದ ಹಂಸಪ್ರಿಯಾ, ಒಕ್ಕೂಟ ಅಧ್ಯಕ್ಷರಾದ ನಾಗರತ್ನ ವಲಯದ ಮೇಲ್ವಿಚಾರಕರಾದ ಗಿರೀಶ್ , ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಛಾಯಾ ಕುಮಾರಿ ಹಾಗೂ ಸೇವಾಪ್ರತಿನಿಧಿ ಅನಿತಾ, ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

  • ಕಲ್ಲುಕೋಟೆಯಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರೆ ಸಂಪನ್ನ

    ಐತಿಹಾಸಿಕ ಆಚರಣೆಯಾಗಿರುವ ಭೂತ ನೆರೆಗೆ ಹಾಗೂ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆ ಭಾನುವಾರ ಅದ್ದೂರಿಯಾಗಿ ನಡೆಯಿತು.

    ಬೆಳಿಗ್ಗೆಯಿಂದಲೇ ಅಭಿಷೇಕ, ಪೂಜೆ ಪುನಸ್ಕಾರ, ದೇವರ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜಾತ್ರೆಯ ಅಂಗವಾಗಿ ಕಲ್ಲು ಕೋಟೆ ಸುತ್ತಲಿನ 7 ಗ್ರಾಮಗಳ ಜನರು ಭಕ್ತಾದಿಗಳಿಗೆ ನೀರು ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿದರು. ಜಾತ್ರೆಯ ಪ್ರಯುಕ್ತ ವಿಶೇಷವಾಗಿ ಭೂತ ನೆರಿಗೆ ಅಚರಣೆ ನಡೆಯಿತು.

     

    ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಅರ್ಭಟ ಊರಿನ ವಿವಿಧಡೆ ಸಂಚರಿಸಿ, ಮನೆಮನೆಗೆ ತೆರಳಿ ಪ್ರಸಾದ ಸ್ವೀಕರಿಸಿ ನಂತರ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಾಲಯದಲ್ಲಿ ಮುಕ್ತಾಯವಾಯಿತು.

    ಕೆಂಚಣ್ಣ, ಕರಿಯಣ್ಣ, ಪಾಪಣ್ಣ, ಲಕ್ಷ್ಮೀನರಸಿಂಹಸ್ವಾಮಿ( ಭೂತಗಳ ವೇಷಧಾರಿಗಳು) ಆರಂಭದಲ್ಲಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಕೆರಳಲು ಧೂಪ ಹಾಕಿಸಿಕೊಂಡು ಆರಂಭಿಸಿದರು. ಭೂತಗಳ ಆರ್ಭಟವನ್ನು ನೋಡಿ ದಿಕ್ಕಾಪಾಲಾಗಿ ಓಡಿದರು. ಕೋಪಗೊಳ್ಳುವ ಕೆಂಚಣ್ಣ ಕರಿಯಣ್ಣ ಹಾಗೂ ಪಾಪಣ್ಣ ಲಕ್ಷ್ಮೀನರಸಿಂಹಸ್ವಾಮಿ ಭೂತಗಳು ಕೈಯಲ್ಲಿ ಭೂತದ ಗುರಾಣಿ ಹಿಡಿದು. ನರ್ತನ ಮಾಡುತ್ತ ಕೈಯಲ್ಲಿನ ಭತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸಿದವು. ಕೋಪ ಗೊಂಡಿರುವ ಭೂತಗಳನ್ನು ಸಮಾಧಾನ ಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸಲಾಯಿತು ಗ್ರಾಮದದಲ್ಲಿ ಅಡ್ಡಾಡಿದ ಭೂತಗಳು ಮನೆಗಳ ಬಳಿ ಬಂದು ಪೂಜೆ ಸ್ವೀಕರಿಸಿದ ನಂತರ ದೇವಾಲಯದಲ್ಲಿ ಭೂತ ನೆರಿಗೆ ಮುಕ್ತಾಯವಾಯಿತು.

     

     

  • ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಯೋಗಾಸನ ಅಗತ್ಯ – ಎ. ನಟರಾಜು

    11ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಯೋಗ ನಮನ ಸಲ್ಲಿಸಿದರು.

    ಯಾವುದೇ ವಯಸ್ಸಿನ ಅಂತರ ವಿಲ್ಲದೆ ಮನೆಯಲ್ಲೇ ಕುಳಿತು ಸರಳರೀತಿಯಲ್ಲಿ ಮಾಡಬಹುದಾದ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರು ನಿರಂತರ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರು.

    ಯೋಗ ಮಾಡುವುದರಿಂದ ನಮ್ಮ ದೇಹ ಸದೃಢವಾಗುವುದಲ್ಲದೆ, ಮಾನಸಿಕವಾಗಿ ನಾವು ಸದೃಢರಾಗುತ್ತೇವೆ. ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ಹಲವು ರೋಗ ಮುಕ್ತಾರಾಗಿ ಸದಾ ಉಲ್ಲಾಸಭರಿತರಾಗಿ ಜೀವಿಸಬಹುದಾಗಿದೆ. ಯೋಗಾಸನವೆಂದರೆ ಕಠಿಣ ಆಸನಗಳನ್ನೇ ಮಾಡಬೇಕು ಎಂದೇನಿಲ್ಲ ಸರಳ ಆಸನಗಳನ್ನು ಮಾಡುವ ಮೂಲಕ ನಿತ್ಯ ಯೋಗಾಸನದೊಂದಿಗೆ ಜೀವಿಸಬಹುದು ಎಂದು ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ಎ.ನಟರಾಜ್ ತಿಳಿಸಿದರು.

    ಈ ಸಂದರ್ಭದಲ್ಲಿ ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಕೆ ಆರ್.ಶ್ಯಾಮಸುಂದರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು,ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

  • ದೊಡ್ಡತುಮಕೂರು : ಶಾಲಾ ಮಕ್ಕಳೊಂದಿಗೆ ವಿಶ್ವ ಯೋಗ ದಿನದ ಆಚರಣೆ

    ದೊಡ್ಡಬಳ್ಳಾಪುರ : 11 ನೇ ವಿಶ್ವ ಯೋಗದಿನಾಚರಣೆ ಪ್ರಯುಕ್ತ ದೊಡ್ಡತುಮಕೂರು ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ವಿಶ್ವ ಯೋಗ ದಿನವನ್ನು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ಜಿ ಮಂಜುನಾಥ್( Lic )ರವರ ಮಾರ್ಗದರ್ಶನದೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು.

     

    ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚೈತ್ರ ಭಾಸ್ಕರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ಜಿ ಮಂಜುನಾಥ್( LIC), ಶಾಲೆಯ ಮುಖ್ಯ ಶಿಕ್ಷಕರಾದ ಎಂ. ಸತ್ಯವತಿ ಸೇರಿದಂತೆ ಗಣ್ಯರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

     

    ಯೋಗಾಸನದ ಪ್ರಮುಖ್ಯತೆ,ಯೋಗಾಸನ ಮಾಡುವುದರಿಂದ ಜೀವನ ಶೈಲಿಯಲ್ಲಿ ಆಗುವ ಬದಲಾವಣೆ, ಅರೋಗ್ಯ ಪ್ರಯೋಜನಗಳನ್ನು ಕುರಿತಂತೆ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಹಲವು ಸರಳ ಹಾಗೂ ಕುಳಿತು ಮಾಡುವ ಯೋಗಾಸನಗಳನ್ನು ಮಾಡಲಾಯಿತು

    ಈ ಸಂದರ್ಭದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಶ್ರೀರಾಮ್. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚೈತ್ರಾಭಾಸ್ಕರ್, ಮಾಜಿ ಉಪಾಧ್ಯಕ್ಷರಾದ ಚೈತ್ರ ಶ್ರೀಧರ್, ಸದಸ್ಯರಾದ ಟಿ ಪಿ ಲೋಕೇಶ್, ಮುಖ್ಯಶಿಕ್ಷಕಿ ಎಂ ಸತ್ಯವತಿ , ಶಿಕ್ಷಕರಾದ ಶಮಿನ್ ಬಾನು, ಎಚ್. ಎಲ್, ನೇತ್ರಾವತಿ, ಗ್ರಂಥಪಾಲಕರಾದ ಚನ್ನಮ್ಮ, ಸ್ಥಳೀಯ ಮುಖಂಡರಾದ ವಿಜಯಲಕ್ಷ್ಮಿ, ಪುಷ್ಪ ಕಲಾ, ವನಿತಾ, ಕೃಷ್ಣಮೂರ್ತಿ, ರಮೇಶ್, ಮಂಜುನಾಥ್, ಆರ್. ಗೋವಿಂದರಾಜು, ಎಂ. ಗೋವಿಂದರಾಜು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

  • ವಿಶ್ವ ಯೋಗ ದಿನಾಚರಣೆ ಸ್ಪೆಷಲ್ : ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನೆಡೆಯಲಿದೆ ಬೃಹತ್ ಯೋಗಾಸನ ಶಿಬಿರ

    ದೊಡ್ಡಬಳ್ಳಾಪುರ : ಕಳೆದ ಹತ್ತು ವರ್ಷಗಳಿಂದ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ನೆಡೆಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ಕೂಡ ಜೂನ್ 21ರ ಶನಿವಾರ ಬೆಳಿಗ್ಗೆ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಯೋಗಾಭ್ಯಾಸ ಆಯೋಜನೆ ಮಾಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಭಾಗವಹಿಸಬೇಕೆಂದು ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ತಿಳಿಸಿದರು.

     

    ನಗರದ ಕೆ ಎಂ ಎಚ್ ಕಲ್ಯಾಣ ಮಂಟಪದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಕಡಿಮೆ ಸಂಪನ್ಮೂಲವಿದ್ದರೂ ಜಿಲ್ಲಾ ಮಟ್ಟದ ಕಾರ್ಯಕ್ರಮದಂತೆ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ತಾಲ್ಲೂಕಿನ ಎಲ್ಲಾ ಯೋಗಪಟುಗಳು, ಯೋಗದ ಬಗ್ಗೆ ಅಭಿರುಚಿ ಹೊಂದಿರುವ ಆತ್ಮೀಯರು ಒಳಗೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಗೆ ಯೋಗಾಸನ, ಪ್ರಾಣಾಯಾಮ ನೀಡುವ ಮೂಲಕ ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ ಜೊತೆಗೆ ಉತ್ತಮ ಜೀವನಶೈಲಿ ಕಲ್ಪಿಸುವುದೇ ನಮ್ಮೆಲ್ಲರ ಮುಖ್ಯ ಉದ್ದೇಶವಾಗಿದೆ ಎಂದರು.

     

    ಕಾರ್ಯಕ್ರಮವು ಶನಿವಾರ ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗಲಿದ್ದು ಕಾರ್ಯಕ್ರಮದ ಮೊದಲು ಸ್ಥಳೀಯ ಯೋಗಪಟುಗಳು,ಯೋಗ ವಿದ್ಯಾರ್ಥಿಗಳು ಹಾಗೂ ಯೋಗ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಇರುತ್ತದೆ . ಕಾರ್ಯಕ್ರಮವನ್ನು ವಿಳಂಬ ಮಾಡದೆ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲಾಗುವುದು . ಭಾರತ ಸರ್ಕಾರ ಆಯುಷ್ ಇಲಾಖೆ ಈಗಾಗಲೇ ಸೂಚಿಸಿರುವ ಯೋಗಾಸನಗಳನ್ನು ತಾಲೂಕಿನ ಹಿರಿಯರಿಗೆ ನಮ್ಮ ಟ್ರಸ್ಟ್ ನ ಸಹಯೋಗ ಹಾಗೂ ತಾಲ್ಲೂಕಿನ ದಾನಿಗಳ ನೆರವಿನಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಳೆದ ಏಳು ದಿನಗಳಿಂದ ನಿರಂತರವಾಗಿ ಕುಳಿತು ಮಾಡುವ ಯೋಗಾಸನ, ಪ್ರಾಣಾಯಾಮ, ವ್ಯಾಯಾಮ ಅಭ್ಯಾಸ ಮಾಡಿಸುತ್ತಿದ್ದು, ಹೊಸದಾಗಿ ಬರುವ ಸಾರ್ವಜನಿಕರಿಗೆ ಈಗಾಗಲೇ ಅಭ್ಯಾಸ ಮಾಡಿರುವ ನಮ್ಮ ಶಿಬಿರಾರ್ಥಿಗಳು ಸಹಾಯ ಮಾಡಲಿದ್ದಾರೆ ಎಂದರು.

     

    ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವಿಶೇಷ ಮಾಹಿತಿ :- ಯೋಗಾಭ್ಯಾಸ ಮಾಡುವವರು ಮುಂಜಾನೆ ಶೌಚಾಧಿ ಕ್ರಿಯೆಗಳಿಂದ ಮುಕ್ತರಾಗಿ ಬಿಳಿ ವಸ್ತ್ರ ಧರಿಸಿ, ಜಮಖಾನ ಅಥವಾ ನೆಲಹಾಸು (ಮ್ಯಾಟ್) ತರುವುದು, ಯೋಗಾಸನ ಕಾರ್ಯಕ್ರಮಕ್ಕೆ ಸ್ತ್ರೀ, ಪುರುಷರು ಮತ್ತು ಮಕ್ಕಳೆಲ್ಲರಿಗೂ ಪ್ರವೇಶವಿರುತ್ತದೆ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಲಘು ಉಪಹಾರ , ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

     

     

    ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ನ ಅಧ್ಯಕ್ಷರಾದ ಕೆ ಎಂ ಹನುಮಂತರಾಯಪ್ಪ ಮಾತನಾಡಿ ದೇಶದ ಪ್ರಧಾನ ಮಂತ್ರಿಗಳು ಯೋಗ ದಿನದ ಆಚರಣೆ ಮಾಡುವಂತೆ ಕರೆ ಕೊಟ್ಟಾಗ ಮುಸ್ಲಿಂ ರಾಷ್ಟ್ರಗಳನ್ನು ಒಳಗೊಂಡಂತೆ ಹತ್ತಾರು ರಾಷ್ಟ್ರಗಳು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ . ಕಳೆದ ಹತ್ತು ವರ್ಷಗಳಿಂದ ತಾಲೂಕಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಶಿಸ್ತಿನೊಂದಿಗೆ ಆಚರಿಸಿಕೊಂಡು ಬರುತ್ತಿದ್ದು ಅಂತೆಯೇ ಈ ಬಾರಿಯೂ ಕೂಡ ತಾಲೂಕಿನ ಎಲ್ಲಾ ಯೋಗ ಕೇಂದ್ರಗಳಿಗೆ , ಯೋಗ ಪಟುಗಳಿಗೆ, ಯೋಗಾಸನ ಮಾಡಲು ಬಯಸುವ ಎಲ್ಲ ಮನಸ್ಸುಗಳಿಗೆ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದೇವೆ . ಯೋಗಾಸನ ಮಾಡುವುದು ತೋರ್ಪಡಿಕೆಗಲ್ಲ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಎಂಬುದು ಸಾರ್ವಜನಿಕರಿಗೆ ಅರಿವಾಗಬೇಕಿದೆ ಎಂದರು.

     

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆಯುವ ವಿಶ್ವ ಯೋಗ ದಿನದ ಆಚರಣೆಯಲ್ಲಿ ಯಾವುದೇ ಸರ್ಕಾರಿ ಹಣವನ್ನು ಬಳಸದೆ ದಾನಿಗಳಿಂದ ನೆರವಿನಿಂದ ಟ್ರಸ್ಟ್ ಸದಸ್ಯರ ನೆರವಿನಿಂದ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ವಿಶೇಷವಾಗಿದೆ, ಜಿಲ್ಲಾ ಕೇಂದ್ರವಲ್ಲದಿದ್ದರೂ ದೇವನಹಳ್ಳಿಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ವಿಶ್ವ ಯೋಗ ದಿನದ ಆಚರಣೆ ಮಾಡುವುದು ಸರಿಯಲ್ಲ, ನಮ್ಮ ದೊಡ್ಡಬಳ್ಳಾಪುರ ತಾಲೂಕು ಕಂದಾಯದಲ್ಲಾಗಲಿ, ವಿಸ್ತೀರ್ಣದಲ್ಲಾಗಲಿ, ಜನಸಂಖ್ಯೆಯಾಗಲಿ, ದೇವನಹಳ್ಳಿಗಿಂತಲೂ ಹೆಚ್ಚಿದೆ ಕೇವಲ ಕೆಲ ರಾಜಕೀಯ ಕಾರಣಗಳಿಂದಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ದೇವನಹಳ್ಳಿಯಲ್ಲಿ ಮಾಡುವುದು ಸರಿಯಲ್ಲ ಮುಂದೆಯಾದರೂ ನಮ್ಮ ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಡೆಯಲಿ ಎಂದರು.

     

    ತಾಲೂಕಿನಾದ್ಯಂತ ಯೋಗ ಉಪಶಿಬಿರಗಳ ಆಯೋಜನೆ 

    ಯೋಗಾಸನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಈ ನಿಟ್ಟಿನಲ್ಲಿ ತಾಲೂಕಿನ ಯಾವುದೇ ವಾರ್ಡ್, ಗ್ರಾಮಗಳಲ್ಲಿ ಸುಮಾರು 25 ರಿಂದ 50 ಜನ ಸೇರುವ ಯಾವುದೇ ಸಭಾಂಗಣ ಹೊರ ಮೈದಾನಗಳಲ್ಲಿ ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಯೋಗಾಸನ ಪ್ರಾಣಯಾಮ ಆರೋಗ್ಯ ಮಾಹಿತಿ ತಿಳಿಸಲು ಯೋಜನೆ ರೂಪಿಸಲಾಗಿದೆ . ಈ ಯೋಜನೆಯ ಪ್ರಯೋಜನವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕೆಂದು ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ಮನವಿ ಮಾಡಿದರು.

    ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ನ ಉಪಾಧ್ಯಕ್ಷರಾದ ತ.ನಾ.ಪ್ರಭುದೇವ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಯೋಗಾಸನ ಕೇಂದ್ರಗಳ ಮುಖಂಡರು, ನಿರಂತರ ಯೋಗಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ತಾಲೂಕಿನ ಎಲ್ಲ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂಬುದೇ ನಮ್ಮೆಲ್ಲರ ಉದ್ದೇಶ ಉತ್ತಮ ಆರೋಗ್ಯಕ್ಕಾಗಿ ಯೋಗಾಸನ ಅತ್ಯವಶ್ಯಕ ನಿರಂತರ ಸರಳ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ನಮ್ಮ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆ ಕಾಣಬಹುದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

     

    ಸಭೆಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಅಧ್ಯಕ್ಷರಾದ ಕೆ.ಎಂ. ಹನುಮಂತರಾಯಪ್ಪ, ಉಪಾಧ್ಯಕ್ಷರಾದ ತ.ನ.ಪ್ರಭುದೇವ್,ಡಾ. ವಿಜಯ ಕುಮಾರ್, ಕಾರ್ಯದರ್ಶಿಗಳಾದ ಬಿ.ಜಿ. ಅಮರನಾಥ್, ಸಹಕಾರ್ಯದರ್ಶಿಗಳಾದ ಎಂ.ಕೆ. ವತ್ಸಲ, ಖಜಾಂಚಿಗಳಾದ ಪಿ ಕೆ ಶ್ರೀನಿವಾಸ್, ಪ್ರಮುಖರಾದ ಬಿ ಎಲ್ ಸೀತಾರಾಮ್ , ಡಿ ವಿ ಗೀರಿಶ್, ಡಿ ಪಿ ಗೋಪಾಲ್ ಸೇರಿದಂತೆ ಹಲವರು ಹಾಜರಿದ್ದರು.

     

     

  • ಸಹಕಾರ ಡಿಪ್ಲೋಮಾ ಪ್ರವೇಶ ಅರ್ಜಿ ಆಹ್ವಾನ

    ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಆರು ತಿಂಗಳ ಅವಧಿಯ ರೆಗ್ಯುಲರ್ ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಜುಲೈ 1 ರಿಂದ ತರಬೇತಿಯು ಪ್ರಾರಂಭವಾಗಲಿದೆ.

     

    ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ,ಬೆಂಗಳೂರು ದಕ್ಷಿಣ (ರಾಮನಗರ),ತುಮಕೂರು,ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸೇರಿರುವ ಪಿಯುಸಿ ಉತ್ತೀರ್ಣರಾಗಿರುವ ಆಸಕ್ತ ಅಭ್ಯರ್ಥಿಗಳು ಜೂನ್ 30 ರೊಳಗೆ ಅರ್ಜಿ ಸಲ್ಲಿಸಬೇಕು. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮಾಸಿಕ 500 ರೂ. (ಐದು ನೂರು ರೂ.) ಗಳ ಶಿಷ್ಯ ವೇತನ ನೀಡಲಾಗುವುದು.ಈ ತರಬೇತಿಯು ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಪೂರಕವಾಗಲಿದೆ.ಸಹಕಾರ ಸಂಸ್ಥೆಗಳ ನೇಮಕಾತಿಗಳಲ್ಲಿ ಆದ್ಯತೆ ದೊರೆಯಲಿದೆ.

     

    ಆಸಕ್ತ ಅಭ್ಯರ್ಥಿಗಳು ಕೆಐಸಿಎಂ ನಂ 1/3 , 2 ನೇ ಮಹಡಿ ,3 ನೇ ಮುಖ್ಯ ರಸ್ತೆ ,ಚಾಮರಾಜಪೇಟೆ ಬೆಂಗಳೂರು -18 ಇಲ್ಲಿಗೆ ಭೇಟಿ ನೀಡಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ 080-355414407,9449007661 ,8105681745 ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.