Blog

  • ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ : ಉತ್ತಮ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ – ಪೊಲೀಸ್ ಇನ್ಸ್ಪೆಕ್ಟರ್ ಸಾದಿಕ್ ಪಾಷಾ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ಇವರ ವತಿಯಿಂದ ನಗರದ ಕೊನಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.

    ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಉದ್ಘಾಟನೆ ಮಾತನಾಡಿದರು, ಶಾಲಾ ಮಕ್ಕಳಿಗೆ ಮಾದಕ ವಸ್ತು ಬಗ್ಗೆ ಮಾಹಿತಿ ನೀಡಿದರು ಮಾದಕ ವಸ್ತುಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ಹಾಳು ಮಾಡಿಕೊಳ್ಳದೇ ಉತ್ತಮ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಮಾಹಿತಿ ನೀಡಿದರು.

    ನಿವೃತ್ತ ಉಪನ್ಯಾಸಕರಾದ ಮಹಾಲಿಂಗಯ್ಯ ಮಾತನಾಡಿ ದುಶ್ಚಟಗಳಿಂದ ಆಗುವ ಪರಿಣಾಮ ಬಗ್ಗೆ ಮಾಹಿತಿ ನೀಡಿದರು,ಕಾನೂನು ಕ್ರಮ ಬಗ್ಗೆ ಮಾಹಿತಿ ನೀಡಿದರು ವಿದ್ಯಾರ್ಥಿಗಳು ಮಾದಕ ವಸ್ತುವಿಂದ ದೂರವಿರಬೇಕು ಹಾಗೂ ತಂದೆ ತಾಯಿ ಗುರುಗಳ ಮಾತುಗಳನ್ನು ಕೇಳಿ ಸಮಾಜಕ್ಕೆ ಉತ್ತಮ ಪ್ರಜೆ ಆಗಬೇಕೆಂದು ತಿಳಿಸಿದರು,

    ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಹೇಮಾವತಿ,ಉಪನ್ಯಾಸಕ ವೃಂದ, ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್ ವಲಯದ ಮೇಲ್ವಿಚಾರಕರಾದ ರಘು ಮತ್ತು ಸೇವಾಪ್ರತಿನಿಧಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

  • ರೈತರ ಬಂಧನ ಖಂಡಿಸಿ ಪ್ರತಿಭಟನೆ : ರೈತರ ಭೂಮಿ ಉಳಿಸುವಂತೆ ಆಗ್ರಹಿಸಿದ ಹೋರಾಟಗಾರರು

    ದೊಡ್ಡಬಳ್ಳಾಪುರ : ರಾಜ್ಯ ಸರ್ಕಾರ ದೇವನಹಳ್ಳಿ ರೈತ ಹೋರಾಟಗಾರರನ್ನು ದೌರ್ಜನ್ಯದಿಂದ ಬಂಧನ ಮಾಡಿರುವುದನ್ನು ವಿರೋಧಿಸಿ ಇಂದು ತಾಲೂಕು ಕಚೇರಿ ವೃತ್ತದಲ್ಲಿ ಸಿಐಟಿಯು, ಸಿಪಿಐ(ಎಂ),ಕೆ ಆರ್ ಎಸ್ ಪಕ್ಷ, ದಲಿತ ಹಾಗೂ ಪ್ರಗತಿಪರ ಚಿಂತಕರು , ಕನ್ನಡಪರ ಹೋರಾಟಗಾರರು ಪ್ರತಿಭಟನೆ ನೆಡೆಸಿದರು.

     

    ರೈತರು ತಮ್ಮ ಜೀವನಕ್ಕೆ ಆಧಾರವಾಗಿರುವ ಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆಗೆ ಮುಂದಾದರೆ ರಾಜ್ಯ ಸರ್ಕಾರ ತನ್ನ ಪೊಲೀಸ್ ಬಲವನ್ನು ಬಳಸುವ ಮೂಲಕ ರೈತರನ್ನು ಬಂಧನಕ್ಕೆ ಒಳಪಡಿಸಿದೆ ಇದು ಖಂಡನೀಯ ಎಂದು ಹೋರಾಟಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ರಾಜ್ಯ ಸರ್ಕಾರದ ಕೆ ಐ ಎ ಡಿ ಬಿ ಎಂಬ ಮಧ್ಯವರ್ತಿ ಸಂಸ್ಥೆಯು ಅಭಿವೃದ್ಧಿ ನೆಪದಲ್ಲಿ ರೈತರ ಫಲವತ್ತಾದ ಭೂಮಿಗಳನ್ನು ಕಸಿದುಕೊಳ್ಳುತ್ತಿದೆ . ರಾಜ್ಯದಲ್ಲಿ ಕಾರ್ಖಾನೆಗಳನ್ನು ನಿರ್ಮಿಸಲು ರೈತರ ಫಲವತ್ತಾದ ಭೂಮಿಯ ಬೇಕೆ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಎಷ್ಟೋ ಬರಡು ಭೂಮಿ ಇದೆ ಆ ಭೂಮಿಯನ್ನು ಬಳಕೆ ಮಾಡುವ ಮುಖಾಂತರ ರಾಜ್ಯ ಸರ್ಕಾರವು ಆ ಭಾಗದ ಲಕ್ಷಾಂತರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬಹುದಾಗಿದೆ ಆದರೆ ಇವರಿಗೆ ಬೆಂಗಳೂರು ಸುತ್ತಮುತ್ತ ಇರುವ ಫಲವತ್ತಾದ ಕೃಷಿ ಭೂಮಿಯೇ ಬೇಕು ಕಾರಣ ರಿಯಲ್ ಎಸ್ಟೇಟ್ ಮಾಫಿಯಾ ಎಂದು ಆರೋಪಿಸಿದರು.

     

    ರಾಜ್ಯ ಸರ್ಕಾರ ಹೇಳುವಂತೆ ನಿಜವಾಗಿಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಪರ ಇರುವುದೇ ಆದರೆ ಅಸಾಂವಿಧಾನಿಕವಾಗಿ ರೈತರ ಮೇಲೆ ಹಾಕಿರುವ ಕೇಸುಗಳನ್ನು ಈ ಕೂಡಲೇ ವಾಪಸ್ ಪಡೆಯಬೇಕು, ಕೆ ಐ ಎ ಡಿ ಬಿ ವಶಕ್ಕೆ ಪಡೆಯಲು ಮುಂದಾಗಿರುವ ಫಲವತ್ತಾದ ರೈತರ ಭೂಮಿಯನ್ನು ಉಳಿಸಲಿ ಎಂದರು.

    ಪ್ರತಿಭಟನೆಯಲ್ಲಿ ಪ್ರಾಂತ ರೈತಸಂಘದ ಆರ್‌.ಚಂದ್ರತೇಜಸ್ವಿ, ರಾಜ್ಯ ರೈತಸಂಘದ ಮುತ್ತೇಗೌಡ, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್, ಕರವೇ ಕನ್ನಡಿಗರ ಬಣದ ಚಂದ್ರಶೇಖರ್, ಕರವೇ ಶಿವರಾಮೇಗೌಡರ ಬಣದ ಹಮಾಮ್ ವೆಂಕಟೇಶ್, ಪ್ರಜಾವಿಮೋಚನಾ ಸಮಿತಿಯ ರಾಜ್ಯ ಮುಖಂಡ ಗೂಳ್ಯ ಹನುಮಣ್ಣ, ಸಿಐಟಿಯು ಮುಖಂಡ ಪಿಎ.ವೆಂಕಟೇಶ್, ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ ಮುಖಂಡರಾದ ಚೌಡಪ್ಪ, ರಘುಕುಮಾರ್, ಚಾಂದ್ ಮುಂತಾದವರು ಉಪಸ್ಥಿತರಿದ್ದರು.

  • ಮಾವು ಬೆಳೆಗಾರರಿಗೆ ಸಂತಸ ಸುದ್ದಿ : ಪ್ರತಿ ಕ್ವಿಂಟಾಲ್ ಮಾವು ಗೆ 1616 ರೂ. ದರ ನಿಗದಿ

    ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ, ಕೃಷಿ ಮಾರಾಟ ಮಂಡಳಿ ಹಾಗೂ ಸಹಕಾರ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಬೆಂಗಳೂರು ವತಿಯಿಂದ 2025-26ನೇ ಸಾಲಿನ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ (MIS-PDPS) ಮಾವು ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಗೆ ರೂ,1616 ದರ ನಿಗದಪಡಿಸಿದ್ದು ಅದರಂತೆ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ವತಿಯಿಂದ ಮಾವು ಖರೀದಿ ಮಾಡಲಾಗುತ್ತಿದೆ.

     

    *ನೋಂದಣಿ ಕೇಂದ್ರ/ ಖರೀದಿ ಕೇಂದ್ರದ ಸ್ಥಳ*

    ಹೊಸಕೋಟೆ-ಬೆಂಗಳೂರು ಹೈವೆಯ ವೈಟ್ ಫೀಲ್ಡ್ ನ ಖಾಜಿ ಸೊಣ್ಣೇನಹಳ್ಳಿ ಬಳಿಯ ಸಫಲ್ ಮಾರುಕಟ್ಟೆಯಲ್ಲಿ ಮಾವು ನೋಂದಣಿ, ಖರೀದಿ ಕೇಂದ್ರ ಸ್ಥಾಪಿಸಲಾಗಿದ್ದು ಮಾವು ಬೆಳೆಗಾರರು ಅಗತ್ಯ ದಾಖಲೆಗಳೊಂದಿಗೆ ಇಲ್ಲಿಗೆ ಭೇಟಿ ನೀಡಿ ಮಾವು ಮಾರಾಟ ಮಾಡಬಹುದಾಗಿದೆ.

     

    ಜೂನ್ 27 ರಿಂದ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತಿದ್ದು, ನೋಂದಣಿ ಪ್ರಕ್ರಿಯೆಗೆ ರೈತರು ಪಹಣಿ ಅಥವಾ ಆರ್.ಟಿ.ಸಿ ಆಧಾರ್ ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ (ಆಧಾರ್ ಜೋಡಣೆ ಕಡ್ಡಾಯ), ಭಾವಚಿತ್ರ ಹಾಗೂ FRUITS ತಂತ್ರಾಂಶದ ರೈತ ನೋಂದಣಿ ಸಂಖ್ಯೆ (FID)ಯನ್ನು ಕಡ್ಡಾಯವಾಗಿ ನೀಡಬೇಕು. FRUITS ತಂತ್ರಾಂಶದ ರೈತ ನೋಂದಣಿ ಸಂಖ್ಯೆಯನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಕೃಷಿ ಇಲಾಖೆಯಿಂದ ಪಡೆಯಬಹುದು.

     

    ಮಾವು ಬೆಳೆದು ಬೆಳೆ ಸಮೀಕ್ಷೆಯಲ್ಲಿ ಮಾವು ಬೆಳೆ ಎಂದು ಆರ್.ಟಿ.ಸಿ ವಾರು ನಮೂದಾಗಿರುವ ರೈತರು ಮಾತ್ರ ಅರ್ಹರಾಗಿರುತ್ತಾರೆ. ಈ ಯೋಜನೆಯಡಿ ಎಕರೆಗೆ 20 ಕ್ವಿಂಟಾಲ್ ನಂತೆ ಗರಿಷ್ಠ 5 ಎಕರೆಗೆ 100 ಕ್ವಿಂಟಾಲ್ ವರೆಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ನೀಡತಕ್ಕದ್ದು, ರೈತರ ಹೆಸರಿನ ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ DBT ಮೂಲಕ ಹಣ ಪಾವತಿಸಲಾಗುವುದು.

     

    ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು 94489 99214, ಹೊಸಕೋಟೆ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 98802 10892, ದೇವನಹಳ್ಳಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 94804 61234, ದೊಡ್ಡಬಳ್ಳಾಪುರ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 94821 29648, ನೆಲಮಂಗಲ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 98804 61607, ಹೊಸಕೋಟೆ ಎ.ಪಿ.ಎಂ.ಸಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗಳು 82173 81079 ಗೆ ಸಂಪರ್ಕಿಸಹುದು ಎಂದು ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ತಾಲ್ಲೂಕು ಘಟಕಕ್ಕೆ ನೂತನ ಸಾರಥಿಯಾಗಿ ಎಸ್‌.ಯು ರಮೇಶ್ ನೇಮಕ

    ದೊಡ್ಡಬಳ್ಳಾಪುರ : ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಎಸ್‌.ಯು ರಮೇಶ್ ನೇಮಕ ಮಾಡಲಾಗಿದೆ ಎಂದು ಹಿರಿಯ ಮುಖಂಡ ಮರಿಯಪ್ಪ ಅವರು ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಹಾಸಭಾ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾದ ಸಿದ್ದಯ್ಯ ಅವರು ಕಸಬಾ ಹೋಬಳಿ ಸೊಣಪನಹಳ್ಳಿಯ ರಮೇಶ್ ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ್ದು, ತಾಲ್ಲೂಕು ಕಾರ್ಯಕಾರಿ ಸಮಿತಿಯನ್ನು ರಚಿಸಿಕೊಂಡು ಸಮುದಾಯದ ಪರವಾಗಿ ಕೆಲಸ ಮಾಡಲು ಆದೇಶಿಸಿದ್ದಾರೆ, ರಮೇಶ್ ಅವರಿಗೆ ತಾಲ್ಲೂಕಿನ ಹಿರಿಯರ ಮತ್ತು ಯುವಜನರ ಬೆಂಬಲವಿದೆ. ಒಟ್ಟಾರೆ ಸಮುದಾಯದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ ಎಂಬ ಭರವಸೆ ನಮಗಿದೆ ಎಂದರು.

    ತಾಲೂಕಿನಲ್ಲಿ ಸಮುದಾಯಕ್ಕೆ ಬಲ ತುಂಬಲು ಸಿದ್ದಯ್ಯ‌ ಅವರು ಪತ್ರ ಕೊಟ್ಟಿದ್ದಾರೆ. ತಾಲ್ಲೂಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬುದು ನಮ್ಮ ಅಭಿಪ್ರಾಯ ಅದನ್ನು ರಮೇಶ್ ಅವರು ಸಮರ್ಥವಾಗಿ ನಿರ್ವಹಿಸ್ತಾರೆ ಎಂಬ ಆಶಯ ನಮ್ಮದು ಎಂದರು.

     

    ಪ್ರಾಸ್ತಾವಿಕವಾಗಿ ಗೂಳ್ಯ ಹನುಮಣ್ಣ ಮಾತನಾಡಿ ಕಳೆದ ಐದು ವರ್ಷಗಳಿಂದ ತಾಲ್ಲೂಕಿನಲ್ಲಿ ನಾವು ಮಾಡಿದ ಸಮುದಾಯಪರ ಕೆಲಸ ಮತ್ತು ಹೋರಾಟಗಳನ್ನು ಗುರುತಿಸಿದ ಮಹಾಸಭಾ ಅಧ್ಯಕ್ಷ ಸಿದ್ದಯ್ಯ ರಮೇಶ್ ಅವರನ್ನು ಕರೆದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ಮಾಡುವಂತೆ ತಿಳಿಸಿದ್ದಾರೆ, ರಮೇಶ್ ಅವರೊಟ್ಟಿಗೆ ಸಮುದಾಯವಿದೆ, ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದರು.

    ಮುಖಂಡರಾದ ಕಚೇರಿಪಾಳ್ಯ ಮುನಿರಾಜು ಅವರು ಮಾತನಾಡಿ, ನೂತನ ಅಧ್ಯಕ್ಷರಿಗೆ ಒಳ್ಳೆಯದಾಗಲಿ ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದ ಕೆಲಸಗಳಲ್ಲಿ ತೊಡಕು ಉಂಟಾಗಿತ್ತು, ಸರ್ಕಾರದಿಂದ ನಮ್ಮ ಸಮುದಾಯದಕ್ಕೆ ಸಿಗಬೇಕಾದ ಸೌಲಭ್ಯಗಳನ್ನ ತಲುಪಿಸುವಲ್ಲಿ ರಮೇಶ್ ಅವರು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

     

    ರಮೇಶ್ ಅವರು ಕೆಲಸ ಮಾಡುತ್ತಾರೆ ಎಂಬ ಭರವಸೆ ನಮಗಿದೆ. ತಾಲೂಕಿನಲ್ಲಿ ನಮ್ಮ ಸಮುದಾಯದ ಎಲ್ಲಾಯುವಕರು ಇವರಿಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.

    ಮಹಾಸಭಾದ ನೂತನ ಅಧ್ಯಕ್ಷ ರಮೇಶ್ ಮಾತನಾಡಿ, ನಾನು ಆರಂಭದಿಂದಲೂ ಸಮುದಾಯಕ್ಕಾಗಿ ಶ್ರಮಿಸ್ತಿದ್ದೇನೆ, ತಾಲ್ಲೂಕಿನ ಮುಖಂಡರು ಹಾಗೂ ಯುವ ಜನರ ಸಹಕಾರ ಪಡೆದು ಇನ್ನು ಹೆಚ್ಚಿನ ಕೆಲಸ ಮಾಡುತ್ತೇನೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ತಳಗವಾರ ಪುನೀತ್, ಛಲವಾದಿ ಸುರೇಶ್, ಹಮಾಮ್ ಸತೀಶ್, ಮುನಿರಾಜು ಆನಂದ ತಿಮ್ಮರಾಜು ಅಂಜಿನಪ್ಪ ಮುಂತಾದವರು ಉಪಸ್ಥಿತರಿದ್ದರು.

  • ಹೋಟೆಲ್ ನಿರ್ಮಾಣಕ್ಕಾಗಿ ತಂದಿಟ್ಟಿದ್ದ 2 ಟನ್ ಕಬ್ಬಿಣ ಕದ್ದು ರಾತ್ರೋರಾತ್ರಿ ಪರಾರಿಯಾದ ಚಾಲಾಕಿ ಕಳ್ಳರು

    ದೊಡ್ಡಬಳ್ಳಾಪುರ : ನಗರದ ಜಾಲಪ್ಪ ಕಾಲೇಜ್ ಹಿಂಭಾಗದ ಉಪನಗರ ಹೊರ ವರ್ತುಲ ರಸ್ತೆ (STRR )ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಸುಮಾರು 2 ಟನ್ ಗೂ ಅಧಿಕ ಕಬ್ಬಿಣವನ್ನು ನೆನ್ನೆ ರಾತ್ರಿ ಕಳವು ಮಾಡಿ ಚಾಲಾಕಿ ಕಳ್ಳರು ಪರಾರಿಯಾಗಿದ್ದಾರೆ.

    ತಾಲ್ಲೂಕಿನ ಕಕ್ಕೇಹಳ್ಳಿ ಸಮೀಪದ ಹೈವೆಯಲ್ಲಿ ಶ್ರೀ ಘಾಟಿ ಸುಬ್ರಮಣ್ಯ ಹೆಸರಿನ ನೂತನ ಹೋಟೆಲ್ ನಿರ್ಮಾಣ ಮಾಡುತ್ತಿದ್ದು, ನೆನ್ನೆ (ಜು. 25)ರಾತ್ರಿ ಸಿಸಿಟಿವಿ ಹೊಡೆದುಹಾಕಿ ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ಸುಮಾರು 2ಕ್ಕೂ ಅಧಿಕ ಕಬ್ಬಿಣ, ಸೆಂಟ್ರಿಂಗ್ ಕೆಲಸಕ್ಕೆ ಸಂಬಂಧಿಸಿದ ಕಬ್ಬಿಣದ ವಸ್ತುಗಳನ್ನು ಕಳವು ಮಾಡಲಾಗಿದೆ.

    ಈ ಕುರಿತು ಮಾಲೀಕರಾದ ಮಹದೇವ್ ಮಾತನಾಡಿ ನೆನ್ನೆ ರಾತ್ರಿ 12ಗಂಟೆಯವರೆಗೂ ಸಿಸಿಟಿವಿಯಲ್ಲಿ ಸ್ಥಳ ವೀಕ್ಷಣೆ ಮಾಡಿದ್ದೆ, ಬೆಳ್ಳಿಗೆ ಕಾರ್ಮಿಕರು ಕರೆ ಮಾಡಿ ಕಳುವಾಗಿದೆ ಎಂಬ ಮಾಹಿತಿ ನೀಡಿದರು.ಸ್ಥಳಕ್ಕೆ ಬಂದು ನೋಡಿದಾಗ ಕಟ್ಟಡ ನಿರ್ಮಾಣಕ್ಕಾಗಿ ಇರಿಸಿದ್ದ ಕಬ್ಬಿಣ ಕದ್ದು ಹೋಗಿದ್ದಾರೆ. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಕಳವು ಮಾಡಿದ್ದಾರೆ. ಮುಖ್ಯ ಹೆದ್ದಾರಿಯಲ್ಲೇ ಈ ರೀತಿ ಕಳ್ಳತನವಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

    ಕಟ್ಟಡ ನಿರ್ಮಾಣದ ಕೊಂಟ್ರಾಕ್ಟರ್ ಲೋಹಿತ್ ಮಾತನಾಡಿ ನೆನ್ನೆ ಸಂಜೆ ಸುಮಾರು 6ಗಂಟೆ ವರೆಗೂ ಕೆಲಸ ಮಾಡಿ ಮಳೆ ಬಂದ ಕಾರಣ ಕೆಲಸ ನಿಲ್ಲಿಸಿ ಮನಗೆ ಹೊರಟೆವು ಬೆಳ್ಳಿಗೆ ಬಂದು ನೋಡಿದಾಗ ನಮ್ಮ ಸಾಮಗ್ರಿಗಳು ಜೊತೆಗೆ ಕಟ್ಟಡ ನಿರ್ಮಾಣಕ್ಕಾಗಿ ಇಟ್ಟಿದ್ದ ಕಂಬಿಗಳನ್ನು ಕಳವು ಮಾಡಲಾಗಿದೆ. ನಮ್ಮ ಜೀವನಕ್ಕೆ ಆಧಾರವಾಗಿದ್ದ ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಿದ್ದ ವಸ್ತುಗಳನ್ನು ಖಾದೀಮರು ಕಳವು ಮಾಡಿದ್ದಾರೆ ಎಂದರು.

     

    ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆ ನಂತರ ಸತ್ಯ ಸತ್ಯತೆ ತಿಳಿದು ಬರಲಿದೆ

     

  • ಆಹಾರ ಘಟಕಗಳ ಮೇಲೆ ತಪಾಸಣೆ ಹೆಚ್ಚಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ‌ಸೂಚನೆ

    ಆಹಾರ ಘಟಕಗಳಾದ ಹೋಟೆಲ್, ಡಾಭಾ, ಬೇಕರಿ, ಬೀದಿಬದಿ, ರಸ್ತೆ ಬದಿ ಕ್ಯಾಂಟೀನ್, ಇತರೆ ಆಹಾರ ಸಂಬಂಧಿತ ಘಟಕಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳದ ಆಹಾರ ಘಟಕಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಹೆದ್ದಾರಿಗಳಲ್ಲಿನ ಡಾಭಾ, ರಸ್ತೆ ಬದಿ ಹೋಟೆಲ್, ಕ್ಯಾಂಟೀನ್ ಗಳಲ್ಲಿ ಆಹಾರ ಸುರಕ್ಷತೆ ಕ್ರಮಗಳು, ಆಹಾರದ ಗುಣಮಟ್ಟ ಕಾಯ್ದುಕೊಳ್ಳದೇ ವ್ಯಾಪಾರ ನಡೆಸುತ್ತಿರುತ್ತಾರೆ. ಅಂತಹ ಸ್ಥಳಗಳಲ್ಲಿ ಆಹಾರ ಸೇವನೆಯು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೇಯೇ ಕೆಲವು ಆಹಾರ ಘಟಕಗಳು ಲೈಸೆನ್ಸ್( ಪರವಾನಗಿ) ಪಡೆಯದೇ ನಡೆಸುತ್ತಿರುತ್ತಾರೆ. ಅಂತಹ ಜಾಗಗಳಲ್ಲಿ ಹೆಚ್ಚು ದಾಳಿ ನಡೆಸಿ ಕಳಪೆ ಆಹಾರ ತಯಾರಿಕೆ ಘಟಕಗಳು ಕಂಡು ಬಂದಲ್ಲಿ ದಂಡ ವಿಧಿಸುವುದರ ಜೊತೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದರು.

    Ad

    ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜು, ಅಂಗನವಾಡಿ, ವಸತಿ ನಿಲಯಗಳಲ್ಲಿ ಆಗಿಂದಾಗ್ಗೆ ತಪಾಸಣೆ ನಡೆಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಮಾತನಾಡಿ ಏಪ್ರಿಲ್ ಮಾಹೆಯಿಂದ ಮೇ ಮಾಹೆಯವರೆಗೆ ಜಿಲ್ಲೆಯಲ್ಲಿ 115 ಆಹಾರ ಘಟಕಗಳಲ್ಲಿ ತಪಾಸಣೆ ನಡೆಸಿ, 44 ಘಟಕಗಳಿಗೆ ನೋಟಿಸ್ ನೀಡಲಾಗಿದೆ. 07 ಘಟಕಗಳಿಗೆ ದಂಡ ವಿಧಿಸಿ 33,000 ರೂ.ದಂಡ ಸಂಗ್ರಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

     

    ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ, ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕರಾದ ರಮೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

    ದೊಡ್ಡಬಳ್ಳಾಪುರ :  ತಾಲೂಕಿನ ಕೊಡಿಗೇಹಳ್ಳಿ ವಲಯದ ಅರಳು ಮಲ್ಲಿಗೆ ಕಾರ್ಯಕ್ಷೇತ್ರದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

     

     

    ಕಾರ್ಯಕ್ರಮವನ್ನು ತಾಲೂಕಿನ ಯೋಜನಾಧಿಕಾರಿಯವರಾದ ದಿನೇಶ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು .

     

    ದೃಷ್ಟಿ ಐ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ಬಿ.ಪಿ ಶುಗರ್ ಹಾಗೂ ಕಣ್ಣಿನ ತಪಾಸಣೆ ಮಾಡಿಸಲಾಯಿತು ಈ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಅರೋಗ್ಯ ಕಾಪಾಡುವಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

    ಕಾರ್ಯಕ್ರಮದಲ್ಲಿ ಒಕ್ಕೂಟ ಅಧ್ಯಕ್ಷರಾದ ಪಾರ್ವತಮ್ಮ,ದೃಷ್ಟಿ ಆಸ್ಪತ್ರೆಯ ನೇತ್ರಾಧಿಕಾರಿ ನಾಯ್ಡು , ವಲಯದ ಮೇಲ್ವಿಚಾರಕರಾದ ಸವಿತ ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ಛಾಯಾ ಕುಮಾರಿ ಹಾಗೂ ಸೇವಾಪ್ರತಿನಿಧಿ ವಿಶಾಲಾಕ್ಷಿ ಸೇರಿದಂತೆ ಹಲವರು ಹಾಜರಿದ್ದರು.

  • ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಗೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ

    ದೊಡ್ಡಬಳ್ಳಾಪುರ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.

     

    ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಕೆಲ ವಾರ್ಡ್ ಗಳನ್ನು ಭೇಟಿ ಮಾಡಿ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಿದರು. ಕೆಲ ರೋಗಿಗಳನ್ನು ಮಾತನಾಡಿಸಿ ವೈದ್ಯಕೀಯ ಸೇವೆಗಳು ಯಾವ ರೀತಿಯಾಗಿ ಬಡವರಿಗೆ ಸಿಗುತ್ತಿದೆ ಎಂದು ರೋಗಿಗಳಲ್ಲಿ ಮಾಹಿತಿ ಕೇಳಿದರು ಜೊತೆಗೆ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಅವರಿಗೆ ಔಷಧಿಗಳು ಸರಿಯಾದ ರೀತಿ ಸಕಲಾಕ್ಕೆ ಸಿಗುತ್ತಿವೇಯೇ ಎಂಬುದನ್ನು ಪರಿಶೀಲಿಸಿ ರೋಗಿಗಳಿಗೆ ಯಾವುದೇ ರೀತಿಯ ಸೌಲಭ್ಯಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.

    ಹೆರಿಗೆಯಾದ ಮಹಿಳೆಯರ ವಾರ್ಡ್ ಪರಿಶೀಲಿಸಿ ತಾಯಿ ಮತ್ತು ಮಗುವಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿದೇಯೆ ಮತ್ತು ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯ ಸಕಲಕ್ಕೆ ಸಿಗುತ್ತೆದೇಯೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಮಹಿಳೆಯರಿಗೆ ವಿಶೇಷ ಕಾಳಜಿ ವಹಿಸುವ ಮೂಲಕ ಮಹಿಳಾ ಆರೋಗ್ಯದ ಕಡೆಗೆ ಗಮನ ಹರಿಸಿ. ಬಡವರಿಗೆ ಗುಣಮಟ್ಟದ ಆರೋಗ್ಯ ದೊರೆಯುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

     

    ಗರ್ಭಿಣಿ ಮತ್ತು ತಾಯಿಂದಿರಿಗೆ ಪ್ರೋತ್ಸಾಹಧನದ ಸೌಲಭ್ಯ ಕಲ್ಪಿಸಬೇಕು. ಕೆಲವರಿಗೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವುದಿಲ್ಲ ಅದಕ್ಕಾಗಿ ಅಂಗನವಾಡಿಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆರು ಗರ್ಭಿಣಿಯ ಮನೆಗೆ ತೆರಳಿದಾಗ ಸೌಲಭ್ಯಗಳ ಮಾಹಿತಿ ನೀಡಬೇಕು ಹಾಗೂ ತಾಯಿಂದಿರಿಗೆ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ವಿತರಿಸುವಾಗ ಮಾಹಿತಿ ನೀಡುವಂತೆ ತಿಳಿಸಿದರು. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಇದರ ಬಗ್ಗೆ ಅರಿವು ಮೂಡಿಸಲು ತಿಳಿಸಿದರು.

    ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬಳಸುತ್ತಿರುವ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ನೀರಿನ ಗುಣಮಟ್ಟ ಪರೀಕ್ಷೆಯ ವಿವರವನ್ನು ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕರು ಬಡವರು ಇರುತ್ತಾರೆ. ಅವರಿಗೆ ಸೌಲಭ್ಯಗಳ ಕೊರತೆಯಾಗಬಾರದು. ಬೇರಡೆ ಶಿಫಾರಸು ಮಾಡಬಾರದು. ಇಲ್ಲಿಯೇ ಸೌಲಭ್ಯಕ್ಕೆ ನೀಡಲು ಪ್ರಯತ್ನಿಸಬೇಕು ಎಂದರು

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ತಹಶೀಲ್ದಾರ್ ಅದ ವಿದ್ಯಾ ವಿಭಾ ರಾಥೊಡ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರೇಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮುದ್ದಣ, ಸಿ.ಎಮ್.ಒ ಆದ ಡಾ.ಪಿ.ಎಸ್ ರಮೇಶ್. ಟಿ.ಎಚ್.ಒ ಆದ ಡಾ. ಶಾರದ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

  • ವಿಳಂಬ ಮಾಡದೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ – ಡಾ.ನಾಗಲಕ್ಷ್ಮಿ ಚೌದರಿ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಅವರು ತುರ್ತು ಸಂದರ್ಭಗಳಲ್ಲಿ ಯಾವುದೇ ವಿಳಂಬ ಮಾಡದೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ ರವರಿಗೆ ತಿಳಿಸಿದರು.

    ಔಷಧಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಅವರು ಆಸ್ಪತ್ರೆಗೆ ಒಳರೋಗಿ ಹಾಗೂ ಹೊರರೋಗಿಗಳೊಂದಿಗೆ ಸಂವಾದ ನಡೆಸಿದರು ಆಸ್ಪತ್ರೆಯಲ್ಲಿ ಲಭ್ಯವಿರುವ ಔಷಧಿಗಳ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಲಭ್ಯವಿರುವ ಔಷಧಿಗಳನ್ನು ನೀಡುವಂತೆ ತಿಳಿಸಿದರು.

     

    ಆಸ್ಪತ್ರೆ ವಿರುದ್ಧ ನಿಲ್ಲದ ಆರೋಪ 

     

    ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮಿ ಚೌದರಿ ಭೇಟಿ ನೀಡಿದ ಸಂದರ್ಭ ಸ್ಕ್ಯಾನಿಂಗ್ ಮಾಡಿಸಲು ಟೋಕನ್ ಖಾಲಿಯಾಗಿದೆ ಎಂದು ಟೋಕನ್ ನೀಡಿಲ್ಲ,ಅಲ್ಲದೇ ಟೋಕನ್ ಇಲ್ಲದೆ ಸ್ಕ್ಯಾನಿಂಗ್ ಮಾಡಿಸಲು 500 ರೂಪಾಯಿ ಬೇಡಿಕೆ ಇಡುತ್ತಾರೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ, ಔಷಧಿಗಳನ್ನು ಖಾಸಗಿ ಮೆಡಿಕಲ್ ನಲ್ಲಿ ಬರೆದುಕೊಡುತ್ತಾರೆ ಎಂಬ ಹಲವು ಆರೋಪಗಳನ್ನು ಸಾರ್ವಜನಿಕರು ಮಾಡಿದರು. ಸ್ಕ್ಯಾನಿಂಗ್ ಮಾಡಿಸಲು ಬಂದು ಕಾದು ಕುಳಿತಿದ್ದ ವೃದ್ಧರನ್ನು ನೋಡಿದ ನಾಗಲಕ್ಷ್ಮಿ ಚೌದರಿ ಅವರು ಕೊಂಚ ಗರಂ ಆಗಿಯೇ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ. ರಮೇಶ್ ರವರಿಗೆ ಎಚ್ಚರಿಕೆ ನೀಡಿದರು. ತುರ್ತು ಸಂದರ್ಭಗಳಲ್ಲಿ ಟೋಕನ್ ಗೆ ಕಾಯದೆ ಚಿಕಿತ್ಸೆ ಸೌಲಭ್ಯ ಒದಗಿಸಬೇಕೆಂದು ತಿಳಿಸಿದರು.


    ನಂತರ ಪ್ರಸೂತಿ ವಿಭಾಗಕ್ಕೆ ಭೇಟಿ ನೀಡಿದ ಅವರು ಲಭ್ಯವಿರುವ ಉಪಕರಣಗಳು ಹಾಗೂ ಔಷಧಿಗಳನ್ನು ಕುರಿತಂತೆ ತಾವೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವೈದ್ಯರಿಂದ ಮಾಹಿತಿ ಪಡೆದರು. ಯಾವುದೇ ರೀತಿಯಲ್ಲಿ ಹಣ ಪಡೆಯದಂತೆ ಸಂಪೂರ್ಣ ಉಚಿತವಾಗಿ ಸೇವೆ ಸಲ್ಲಿಸುವಂತೆ ಸಿಬ್ಬಂದಿ ವರ್ಗಕ್ಕೆ ತಿಳಿಸಿದರು.

     

     

     

     

     

  • ಬಾಬಾ ಸಾಹೇಬ್ ಡಾ” ಬಿ. ಆ‌ರ್. ಅಂಬೇಡ್ಕ‌ರ್ ರ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ : ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಕರ್ನಾಟಕ ಭೀಮ್ ಸೇನೆ

    ದೊಡ್ಡಬಳ್ಳಾಪುರ : ಸರ್ಕಾರವು ಜೂನ್ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧ ದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಲು ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಳ ಸೂಚಿಸಿದ್ದು ನುಡಿದಂತೆ ನಡೆವ ಸರ್ಕಾರ ಎಂದು ಮತ್ತೊಮ್ಮೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಬೀತು ಮಾಡಿಕೊಂಡಿದೆ ನಮ್ಮ ಸಂಘಟನೆಯ ಮನವಿಗೆ ಸ್ಪಂದಿಸಿದ ಆಡಳಿತ ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಕರ್ನಾಟಕ ಭೀಮ ಸೇನೆ ರಾಜ್ಯ ಕಾರ್ಯದರ್ಶಿ ಮಂಜುನಾಥ್ ರಾವಣ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೆಲಂಗಣ ರಾಜ್ಯದಲ್ಲಿ 125 ಅಡಿ ಎತ್ತರ ಮತ್ತು ಆಂಧ್ರದಲ್ಲಿ 206 ಅಡಿ ಎತ್ತರದ ಅಂಬೇಡ್ಕ‌ರ್ ಪ್ರತಿಮೆ ನಿರ್ಮಾಣ ಮಾಡಿರುವಂತೆ ನಮ್ಮ ರಾಜ್ಯದಲ್ಲೂ 250 ಅಡಿ ಬೃಹತ್ ಎತ್ತರದ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ” ಬಿ. ಆ‌ರ್. ಅಂಬೇಡ್ಕ‌ರ್ ರವರ 250 ಅಡಿ ಎತ್ತರದ ಬೃಹತ್ ಪ್ರತಿಮೆ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕೆಂದು ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆ ವತಿಯಿಂದ, ಸಮುದಾಯದ ಪರವಾಗಿ ಹಾಗೂ ಬಾಬಾ ಸಾಹೇಬ್ ಡಾ” ಬಿ. ಆರ್.ಅಂಬೇಡ್ಕರ್ ರವರ ಅನುಯಾಯಿಗಳ ಪರವಾಗಿ ರಾಜ್ಯದ 30 ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿಗಳಿಗೆ ಏಕಕಾಲಕ್ಕೆ ಮನವಿಯನ್ನು ಸಲ್ಲಿಸಿದ್ದು,ನಮ್ಮ ಸಂಘಟನೆಯ ನಿರಂತರ ಒತ್ತಾಯ ಹಾಗೂ ಮನವಿಗೆ ಸ್ಪಂದಿಸಿ ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು, ಏಪ್ರಿಲ್ 14, 2025 ರಂದು ಬಾಬಾ ಸಾಹೇಬ್ ಡಾ” ಬಿ. ಆರ್.ಅಂಬೇಡ್ಕರ್ ರವರ 134 ನೇ ಜಯಂತಿಯಂದು ಪ್ರತಿಮೆ ಪ್ರತಿಷ್ಠಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದೂ ನಿಜಕ್ಕೂ ಶ್ಲಾಘನೀಯ,ಕರ್ನಾಟಕ ಭೀಮ್ ಸೇನೆ (ರಿ) ಸಂಘಟನೆಯ ಮನವಿಗೆ ಸ್ಪಂದಿಸಿದ ಆಡಳಿತ ಸರಕಾರಕ್ಕೆ ಹಾಗೂ ಈ ಒಂದು ವಿಷಯಕ್ಕೆ ಬೆಂಬಲ ಸೂಚಿಸಿದ ರಾಜ್ಯದ ಎಲ್ಲ ದಲಿತ ಹಾಗೂ ಪ್ರಗತಿಪರ ಸಂಘಟನೆಯ ಮುಖಂಡರಿಗೂ. ಹಾಗೂ ಈ ಮನವಿ ಸಲ್ಲಿಸಲು ನಿರಂತರವಾಗಿ ನಮ್ಮ ಜೊತೆ ಸಹಕರಿಸಿದ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು

    ಈ ಸಂದರ್ಭದಲ್ಲಿ ನರೆದಿದ್ದ ಹೋರಾಟಗಾರರು ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

     

    ದಲಿತ ಮುಖಂಡರಾದ ದಾಳಪ್ಪ ಮಾತನಾಡಿ ನಮ್ಮ ನಿರಂತರ ಹೋರಾಟ ಹಾಗೂ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರಕ್ಕೆ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಡಾ. ಬಿ ಆರ್ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದು ದಲಿತ ಹಾಗೂ ಶೋಷಿತ ಸಮುದಾಯದ ದೊಡ್ಡ ಕನಸಾಗಿತ್ತು ನಮ್ಮೆಲ್ಲರ ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದೆ . ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

     

    ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗುರುಪ್ರಸಾದ್ , ಕರ್ನಾಟಕ ಭೀಮ ಸೇನೆ ತಾಲೂಕು ಅಧ್ಯಕ್ಷ ದಾಳಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ರಮೇಶ್, ಕಾರ್ಯಕರ್ತರಾದ ಸಂಜೀವ್ ಸೇರಿದಂತೆ ಹಲವು ಹೋರಾಟಗಾರರು ಹಾಜರಿದ್ದರು.