Blog

  • ಏ.28 ಕ್ಕೆ ಮುಖ್ಯಮಂತ್ರಿಗಳ ಜಿಲ್ಲಾ ಭೇಟಿ :ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸಚಿವ ಮುನಿಯಪ್ಪ ಸೂಚನೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಸೌಲಭ್ಯ ವಿತರಣೆಗಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಏಪ್ರಿಲ್ 28 ರಂದು ಜಿಲ್ಲೆಗೆ ಆಗಮಿಸುತ್ತಿದ್ದು ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಸೂಚಿಸಿದರು.

     

    ಈ ಸಂಬಂಧ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ಕಾರ ಅಧಿಕಾರಕ್ಕೆ ಬಂದು ಮುಂದಿನ ತಿಂಗಳಿಗೆ 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳ ಸಾಧನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.

     

    ಜಿಲ್ಲೆಯಲ್ಲಿ ನಿವೇಶನ ರಹಿತ ಅರ್ಹರನ್ನು ಗುರ್ತಿಸಲಾಗಿದ್ದು, ಫಲಾನುಭವಿಗಳಿಗೆ ಮುಖ್ಯಮಂತ್ರಿಗಳಿಂದ ಹಕ್ಕು ಪತ್ರ ವಿತರಿಸಲಾಗುವುದು. ಇದಕ್ಕಾಗಿ ಸಂಬಂಧಿಸಿದ ಆಯಾ ತಾಲ್ಲೂಕು ತಹಶೀಲ್ದಾರ್ ಗಳು, ಇಒ ಗಳು ಶೀಘ್ರ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಪಡಿಸಿ ಎಂದರು. ಪೋಡಿ ದುರಸ್ತಿ ಜಮೀನುಗಳಿಗೆ ಹಕ್ಕು ಪತ್ರ ವಿತರಿಸುವುದು, ವಸತಿ ರಹಿತರಿಗೆ ವಸತಿ ಸೌಲಭ್ಯ ವಿತರಣೆ ಮಾಡಲಾಗುವುದು.

     

    ಜಿಲ್ಲೆಯಲ್ಲಿ ಶಂಕುಸ್ಥಾಪನೆಗೆ, ಉದ್ಘಾಟನೆಗೆ ಸಿದ್ಧವಿರುವ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಿ, ವಿವಿಧ ಇಲಾಖೆಗಳು ಎರಡು ವರ್ಷಗಳಲ್ಲಿ ಮಾಡಿರುವಂತಹ ಆಯವ್ಯಯ, ಅಭಿವೃದ್ಧಿ ಕೆಲಸಗಳು, ಸೌಲಭ್ಯ ಪಡೆದ ಫಲಾನುಭವಿಗಳ ಮಾಹಿತಿ ನೀಡಿ ಜೊತೆಗೆ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳನ್ನು ವಿತರಿಸುವ ಸಲುವಾಗಿ ಸಂಬಂಧಪಟ್ಟ ಇಲಾಖೆಗಳು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ವರದಿ ನೀಡಿ ಎಂದರು.

     

    *ಉದ್ಯೋಗ ಭಾಗ್ಯ*

    ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 10000 ಕ್ಕು ಅಧಿಕ ಅಭ್ಯರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ 2000 ಕ್ಕು ಅಧಿಕ ಅಭ್ಯರ್ಥಿಗಳು ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಹಲವು ಅಭ್ಯರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಲಾಗುವುದು. ಈ ಸಂಬಂಧ ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ರೈತರು ಭೂಮಿ ಕಳೆದುಕೊಂಡಿದ್ದಾರೆ, ಅಂತಹ ಕುಟುಂಬಗಳಿಗೆ ಒಂದು ಉದ್ಯೋಗ ಸಿಗಬೇಕು ಎನ್ನುವುದು ನನ್ನ ಗುರಿ. ಕುಟುಂಬಕ್ಕೆ ಒಂದು ಉದ್ಯೋಗ, ಸ್ಥಳಿಯರಿಗೆ ಮೊದಲ ಆದ್ಯತೆ ನೀಡಿ, ಅರ್ಹರಿಗೆ ಉದ್ಯೋಗ ಕಲ್ಪಿಸಿ ಎಂದು ಕಂಪನಿ ಮುಖ್ಯಸ್ಥರಿಗೆ ಹೇಳಿದರು.

     

    ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ ಕಂಪನಿಗಳಿಗೆ ಅವಶ್ಯಕತೆ ಇರುವಂತಹ ಕೌಶಲ್ಯ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಿ ಎಂದರು.

     

    ಸಭೆಯಲ್ಲಿ ಹೊಸಕೋಟೆ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷರಾದ ಶಾಂತಕುಮಾರ್, ದೊಡ್ಡಬಳ್ಳಾಪುರ ಮಾಜಿ ಶಾಸಕರಾದ ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಮೈಸೂರಿನ ವಾಜಮಂಗಲದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ : ಭಾವಚಿತ್ರ, ಫ್ಲೆಕ್ಸ್ ಗಳನ್ನು ಹರಿದು ವಿಕೃತಿ ಮೆರೆದ ಕಿಡಿಗೇಡಿಗಳು

    ಮೈಸೂರು : ದೇಶಕ್ಕೆ ಸಂವಿಧಾನ ನೀಡಿದ ವಿಶ್ವ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ, ಫ್ಲೆಕ್ಸ್ ಗಳನ್ನು ವಿಕೃತಿ ಮಾಡಿ , ಹೊಲಸು ಎರಚಿ, ನೀಲಿ ಧ್ವಜಗಳನ್ನು ಹರಿದು ವಿಕೃತಿ ಮೆರೆದಿರುವ ದುರ್ಘಟನೆ ಮೈಸೂರಿನ ವಾಜಮಂಗಲದಲ್ಲಿ ನೆಡೆದಿದೆ.

    ಏಪ್ರಿಲ್‌ 14 ರಂದು ಇಲ್ಲಿನ ಸಿದ್ಧಾರ್ಥ ಯುವಕರ ಸಂಘವು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಆಚರಿಸಿ, ಮೆರವಣಿಗೆ, ಅನ್ನದಾನ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗಿತು,ಈ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಡಾ. ಅಂಬೇಡ್ಕರ್ ಅವರ ಫ್ಲೆಕ್ಸ್, ಕಟೌಟ್ ಗಳನ್ನು ಹರಿದು ವಿಕೃತಿ ಮೆರೆಯಲಾಗಿದೆ. ನೀಲಿ‌ ಧ್ವಜಗಳನ್ನು ಹರಿದು ಹಾಕಲಾಗಿದೆ. ಶುಕ್ರವಾರ ಮಧ್ಯರಾತ್ರಿ ಮುಂಜಾನೆ 3ರ ನಡುವೆ ಈ ಕೃತ್ಯ ನಡೆದಿದ್ದು, ವಾಜಮಂಗಲ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಗೆ ಬರುವ ವಾಜಮಂಗಲದಲ್ಲಿ ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.

    ನೀಚರ ಈ ಕೃತ್ಯದಿಂದ ರೊಚ್ಚಿಗೆದ್ದಿರುವ ಗ್ರಾಮಸ್ಥರು ಬೀದಿಗಿಳಿದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ.

  • ನಗರದ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ಶಾಸಕರಿಂದ ಇ-ಖಾತಾ ಪತ್ರಗಳ ವಿತರಣಾ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಜಮೀನಿನ ಅಧಿಕೃತ ದಾಖಲೆ ಹಾಗೂ ಆಸ್ತಿಗಳ ಮೂಲಕ ನಡೆಸುವ ವಹಿವಾಟುಗಳಿಗೆ ಅಲ್ಲದೇ ಗ್ರಾಮ ಠಾಣಾ ವ್ಯಾಪ್ತಿಯ ಹೊರಗಿನ ನಾಗರಿಕರಿಗೆ ಇ-ಖಾತಾದಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸಾರ್ವಜನಿಕರು ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗದೆ, ಇ ಖಾತಾ ಅಭಿಯಾನದ ಮೂಲಕ ಅರ್ಜಿ ಸಲ್ಲಿಸಿ 30 ದಿನಗಳಲ್ಲಿ ಪಡೆಯಬಹುದಾಗಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

    ನಗರದ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ನಗರಸಭೆ ವತಿಯಿಂದ ನಡೆದ ಇ-ಖಾತಾ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಏ.4 ರಿಂದ ಪ್ರಾರಂಭವಾಗಿರುವ ಇ-ಖಾತಾ ಅಭಿಯಾನದಲ್ಲಿ ಸರ್ಕಾರ ಸೂಚಿಸಿರುವ ಐದು ದಾಖಲಾತಿಗಳನ್ನು ಸಲ್ಲಿಸುವ ಮೂಲಕ 30 ದಿನಗಳಲ್ಲಿ ಇ-ಖಾತೆಗಳನ್ನು ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಮಧ್ಯವರ್ತಿಗಳ ಮೊರೆ ಹೋಗಬೇಡಿ. ಎಷ್ಟೋ ಬಿ ಖಾತೆಯ ಆಸ್ತಿಗಳಿಗೆ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಖಾತೆಗೆ ಒಳಪಡದೇ, ದುಪ್ಪಟ್ಟು ತೆರಿಗೆ ಕಟ್ಟಬೇಕಾಗಿರುತ್ತದೆ. ಅಂತಹ ಆಸ್ತಿಗಳು ಇ ಖಾತೆ ಮಾಡಿಸಿಕೊಂಡರೆ ಮಾಮೂಲಿನಂತೆ ತೆರಿಗೆ ಕಟ್ಟಿದರೆ ಸಾಕು. ಆಸ್ತಿಯ ಮೇಲಿನ ಸಾಲ, ಮಾರಾಟ ಮೊದಲಾದ ಸಂದರ್ಭಗಳಲ್ಲಿ ಇ ಖಾತೆಯ ಅವಶ್ಯಕವಿರುತ್ತದೆ. ಭೂಮಿ ಬೆಲೆ ಚಿನ್ನದಂತಾಗಿದ್ದು, ಆಸ್ತಿಗಳನ್ನು ಇಂದು ಮಾರುವುದು ಸುಲಭ ಆದರೆ ಮತ್ತೆ ಪಡೆಯಬೇಕಾದರೆ ಕಷ್ಟಸಾಧ್ಯವಿದೆ. ಆದ್ದರಿಂದ ಯಾರೂ ಆಸ್ತಿಗಳನ್ನು ಮಾರಾಟ ಮಾಡದೇ ಉಳಿಸಿಕೊಂಡು ಸಕಾಲಕ್ಕೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಕಿವಿ ಮಾತು ಹೇಳಿದರು.

    13 ನೇ ವಾರ್ಡ್ ಅಭಿವೃದ್ದಿ:

    ವಾರ್ಡ್‍ನ ನಗರಸಭಾ ಸದಸ್ಯ ಬಂತಿ ವೆಂಕಟೇಶ್ ಮಾತನಾಡಿ, ನೇಕಾರರು ಹೆಚ್ಚಾಗಿರುವ 13ನೇ ವಾರ್ಡ್ ಭುವನೇಶ್ವರಿ ನಗರದಲ್ಲಿ ಇ ಖಾತೆಗಳಾಗದೇ ಸಮಸ್ಯೆಗಳಾಗಿದ್ದು, ಇಂದು ಅದನ್ನು ಪರಿಹರಿಸುವತ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಭುವನೇಶ್ವರಿ ನಗರದ ಮುಖ್ಯರಸ್ತೆಗೆ 28 ಲಕ್ಷ ರೂಗಳು, ನಗರೋತ್ಥಾನದಿಂದ ವಾರ್ಡ್‍ನಲ್ಲಿ ಡಾಂಬರೀಕರಣ, ಕಾಂಕ್ರಿಟ್ ರಸ್ತೆ ಸೇರಿದಂತೆ 75 ಲಕ್ಷ ರೂಗಳ ಕಾಮಗಾರಿಗಳು ನಡೆಯಲಿವೆ. ಅಂತೆಯೇ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ, ಸೇರಿದಂತೆ ನೀರು, ಚರಂಡಿ ಮೊದಲಾದ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಅಲ್ಪ ಸಂಖ್ಯಾತರ ನೀಯಿಂದ 35 ಲಕ್ಷ ರೂ ಕಾಮಗಾರಿಗಳು ನಡೆಯಲಿವೆ ಎಂದರು.
    ಇದೇ ವೇಳೆ ಇ ಖಾತೆ ಮಾಡಿಸಿಕೊಂಡ ನಾಗರಿಕರಿಗೆ ನಗರಸಭೆಯಿಂದ ಇ ಖಾತೆಗಳ ಪತ್ರಗಳನ್ನು ಶಾಸಕರು ವಿತರಿಸಿದರು.


    ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರ ಕೆ.ಆನಂದ್, ಮಾಜಿ ಅಧ್ಯಕ್ಷ ಬಿ.ಮುದ್ದಪ್ಪ, ನಗರಸಭಾ ಸದಸ್ಯ ವೆಂಕಟೇಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.

  • ಹಳ್ಳಿಗಳ ಸಮಗ್ರ ಅಭಿವೃದ್ಧಿ ನರೇಗಾ:ಜಿಲ್ಲೆಗೆ 4ನೇ ಸ್ಥಾನ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತಿದ್ದು, ಇದರಿಂದ ರಾಜ್ಯದಲ್ಲಿ ಜಿಲ್ಲೆಯು ಮಾನವ ದಿನಗಳ ಸೃಜನೆಯಲ್ಲಿ ಗುರಿ ಮೀರಿ ಸಾಧನೆಮಾಡಿದ್ದು, ನರೇಗಾ ಯೋಜನೆಯಡಿ 4ನೇ ಸ್ಥಾನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪಡೆದುಕೊಂಡಿದೆ.

     

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕಳೆದ 2023-24ನೇ ಸಾಲಿನಲ್ಲಿ 14ನೇ ಸ್ಥಾನದಲ್ಲಿತ್ತು. ಆರ್ಥಿಕ ವರ್ಷ 2024-25ನೇ ಸಾಲಿನಲ್ಲಿ 14 ಲಕ್ಷ ಗುರಿಗೆ 16,310 ಲಕ್ಷ ಮಾನವ ದಿನಗಳ ಸೃಜನೆ ಮಾಡಿ ಶೇ 116.50% ಪ್ರಗತಿಯನ್ನು ಸಾಧಿಸಿದೆ. ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿ ಆಸ್ತಿಗಳ ಸೃಜನೆ ಮಾಡುವ ಮೂಲಕ ಗ್ರಾಮೀಣ ಜನರ ಸಬಲೀಕರಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಿ, ಗುರಿಯನ್ನು ಮಿರಿ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು 4ನೇ ಸ್ಥಾನದಲ್ಲಿದೆ – *ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್‌ಅನುರಾಧ*

     

    ಈ ಯೋಜನೆಯಲ್ಲಿ ಜಿಲ್ಲೆಯಲ್ಲಿ ಮಾನವ ದಿನಗಳ ಸೃಜನೆಯಲ್ಲಿ ತಾಲ್ಲೂಕುವಾರು ಪ್ರಗತಿಯನ್ನು ಸಾಧಿಸಿದೆ, ದೇವನಹಳ್ಳಿ ತಾಲ್ಲೂಕು ಶೇ 113.48%, ದೊಡ್ಡಬಳ್ಳಾಪುರ ತಾಲ್ಲೂಕು ಶೇ 104.19%, ಹೊಸಕೋಟೆ ತಾಲ್ಲೂಕು 139.30% ಮತ್ತು ನೆಲಮಂಗಲ ತಾಲ್ಲೂಕು ಶೇ 91.38% ಪ್ರಗತಿಯನ್ನು ಸಾಧಿಸಿದೆ. ಸದರಿ ಯೋಜನೆಯಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ ಒಟ್ಟು 1,19,669 ಉದ್ಯೋಗ ಚೀಟಿಯನ್ನು ಹೊಂದಿರುವ ನೋಂದಾಯಿತ ಕುಟುಂಬಗಳಿದ್ದು, ಅದರಲ್ಲಿ 2,61,128 ಜನರು ಕೂಲಿಕಾರರಿದ್ದು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

     

    ಯೋಜನೆಯಲ್ಲಿ ಉದ್ಯೋಗ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ವಾರ್ಷಿಕವಾಗಿ 100 ದಿನಗಳ ಉದ್ಯೋಗವನ್ನು ನೀಡಲಾಗುತ್ತಿದ್ದು, ಅರ್ಥಿಕವಾಗಿ ಸಬಲರಾಗಲು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ, ಸಾಮಾಜಿಕ ಅರಣ್ಯ ಇಲಾಖೆ, ಪಂಚಾಯತ್‌ ರಾಜ್‌ ಇಂಜನಿಯರಿಂಗ್‌ (ಪಿಆರ್‌ಇಡಿ) ಇಲಾಖೆಗಳು ಮಹತ್ವದ ಪಾತ್ರವನ್ನು ವಹಿಸಿವೆ, ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಸಮುದಾಯ ಚಟುವಟಿಕೆಗಳು ಸಮಗ್ರವಾಗಿ ಶಾಲಾಭಿವೃದ್ಧಿ, ಸ್ಮಶಾನ, ಚರಂಡಿ, ಬೂದು ನೀರು ನಿರ್ವಹಣೆ ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ, ಸಂಜೀವಿನಿ ಭವನ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM)ಗಳ ಅಭಿವೃದ್ದಿ ಸಹಕಾರಿಯಾಗಿದೆ. ಹಾಗೇ ವೈಯಕ್ತಿಕ ಕಾಮಗಾರಿಗಳಾದ ಹಸುಶೆಡ್‌, ಕುರಿಶೆಡ್‌, ಹಂದಿಶೆಡ್‌, ಕೋಳಿಶೆಡ್‌, ವಸತಿ ಯೋಜನೆಯ ಫಲಾನುಭವಿಗಳು, ವಿಶೇಷ ಚೇತನರು, ಹಿರಿಯ ನಾಗರಿಕರು ಮತ್ತು ಗರ್ಭಿಣಿ ಸ್ತ್ರೀಯರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

     

    ಸ್ವಚ್ಚ ಭಾರತ್‌ ಮಿಷನ್‌ ಮತ್ತು ಬೂದು ನೀರು ನಿರ್ವಹಣೆ ಗ್ರಾಮೀಣ ಯೋಜನೆ ಅಧೀನದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಕ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದರ ಹೊರತಾಗಿ ನರೇಗಾ ಮೂಲಕವೂ ವಿಶೇಷ ಯೋಜನೆ ರೂಪಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ.

     

    ಮಹಿಳಾ ಸಬೀಕರಣಕ್ಕೆ ಸಹಕಾರಿಯಾದ ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ, ಅರ್ಥಿಕ ವರ್ಷ 2024-25ನೇ ಸಾಲಿನಲ್ಲಿ ಶೇ 51.97% ಪ್ರಗತಿಯನ್ನು ಸಾಧಿಸಲಾಗಿರುತ್ತದೆ. ಮುಖ್ಯವಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ.

     

     

    *ಸ್ತ್ರೀ ಚೇತನ, ದುಡಿಯೋಣ ಬಾ ಅಭಿಯಾನ*

    ಮಹಿಳೆಯರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವುದಕ್ಕೆ ಏಪ್ರಿಲ್‌ 1ರಿಂದ ಜೂನ್‌ 30 ರವರೆಗೆ ಮೂರು ತಿಂಗಳ ಕಾಲ ಅಭಿಯಾನವನ್ನು ಹಮ್ಮಿಕೊಂದಿದೆ. ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸ್ತ್ರೀಚೇತನ ಮತ್ತು ದುಡಿಯೋಣ ಬಾ ಅಭಿಯಾನ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಶೇ60% ಗುರಿ ಸಾಧಿಸಲು, ಕರಪತ್ರ ವಿತರಣೆ, ಮನೆ ಮನೆಗೆ ಭೇಟಿ, ಆಟೋ ಮೂಲಕ ಪ್ರಚಾರ ಮಾಡುವುದು, ವಾರ್ಡ್‌ಗಳಲ್ಲಿ ಸಭೆ ಮಾಡುವುದು, ಗ್ರಾಮಗಳಲ್ಲಿನ ಸಭೆ ಮೂಲಕ ಇನ್ನೂ ಹೆಚ್ಚಿನ ಪ್ರಚಾರ ಮಾಡಲು ಯೋಜನೆ ರೂಪಿಸಿ 101 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.

     

    ಆರ್ಥಿಕ ವರ್ಷ 2025-26 ನೇ ಸಾಲಿನಲ್ಲಿ 15ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಹೊಂದಲಾಗಿದ್ದು. ಗ್ರಾಮ ಪಂಚಾಯಿತಿಗಳಿಂದ ಬಂದಂತಹ ಯೋಜನೆಗಳಿಗೆ ರಾಜ್ಯದಿಂದ ಅನುಮೊದನೆಯನ್ನು ಪಡೆದುಕೊಂಡು ಕಾಮಗಾರಿಗಳಿಗೆ ನಿಯಮಾನುಸಾರ ಚಾಲನೆ ನೀಡಲಾಗಿರುತ್ತದೆ. ನೈಸರ್ಗಿಕ ಸಂಪನ್ಮೂಲಗಳಾದ ಜಲ ಸಂರಕ್ಷಣೆ, ಅರಣ್ಯೀಕರಣ, ಗ್ರಾಮಗಳ ಸ್ವಚ್ಚತೆ ಮತ್ತು ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್‌ ತಿಳಿಸಿದ್ದಾರೆ

     

  • ಮರಳೇನಹಳ್ಳಿಯಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಸಂಪ್ರೋಕ್ಷಣಾ ಮಹೋತ್ಸವ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಕಸಬಾ ಹೋಬಳಿ ಮರಳೇನಹಳ್ಳಿ ಗ್ರಾಮದಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಸಂಪ್ರೋಕ್ಷಣಾ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನೇರವೇರಿತು.

    ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಭಾಗವಹಿಸಿದ್ದರು.

    ವಿಗ್ರಹ ಪ್ರತಿಷ್ಠಪನಾ ಅಂಗವಾಗಿ ಗಣಪತಿ ಪೂಜೆ, ನಂದಿ ಹೋಮ, ಪುಣ್ಯ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ ಸೇರಿದಂತೆ ವಿವಿಧ ಪೂಜಾವಿಧಿವಿಧಾನಗಳು ನಡೆದವು.

    ಶಾಸಕ ಧೀರಜ್ ಮುನಿರಾಜು ಮಾತನಾಡಿ ಗ್ರಾಮಸ್ಥರು ಒಗ್ಗೂಡಿ ನೂತನ ದೇವಸ್ಥಾನವನ್ನು ನಿರ್ಮಿಸುವ ಮೂಲಕ ಗ್ರಾಮದ ಕಲ್ಯಾಣಕ್ಕೆ ಒತ್ತು ನೀಡಿದ್ದಾರೆ. ದೇವರು ಮತ್ತಷ್ಟು ಸುಖ, ಶಾಂತಿ, ನೆಮ್ಮದಿ ನೀಡುವ ಮೂಲಕ ಎಲ್ಲರ ಆರೋಗ್ಯವನ್ನು ಕಾಪಾಡಲಿ. ಮುಂದಿನ ದಿನಗಳಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸಿ ಎಂದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ ಹಿಂದು ಧರ್ಮದಲ್ಲಿ ವಿವಿಧ ಧಾರ್ಮಿಕ ಆಚರಣೆಗಳಿಗೆ ಮಹತ್ವದ ಅರ್ಥ ಇದೆ. ಎಲ್ಲ ಆಚರಣೆಗಳೂ ವೈಜ್ಞಾನಿಕವಾಗಿರುತ್ತದೆ. ದೇಗುಲಗಳು ನೆಮ್ಮದಿಯ ತಾಣಗಳಾಗಬೇಕು. ನಮ್ಮ ಧರ್ಮದಲ್ಲಿ ತಾಯಿ-ತಂದೆಯನ್ನು ದೇವರಂತೆ ಕಾಣುವ ಆಚಾರವಿದೆ. ಇದನ್ನು ಎಲ್ಲರೂ ಅರಿಯಬೇಕು. ಪಾಲಕರು ಹಾಗೂ ಗುರುಹಿರಿಯರನ್ನು ಗೌರವಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ತಾಲ್ಲೂಕಿಗೆ ಬಂದ ನಂತರ ಹಲವಾರು ದೇವಾಲಯಗಳ ನಿರ್ಮಾಣ ಹಾಗೂ ಜೀರ್ಣೊದ್ದಾರ ಕಾರ್ಯಗಳನ್ನು ದೇವರ ಅನುಗ್ರಹದಿಂದ ಮಾಡಿದ್ದು, ನಿರಂತರ ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಭಗವಂತ ಕರುಣಿಸಿದ್ದಾನೆ, ಮುಂದೆಯೂ ನನ್ನ ಕೈಲಾದ ಸೇವೆಯನ್ನು ಸದಾ ಮಾಡುತ್ತೇನೆ ಎಂದರು.

    ನನ್ನ ಬಳಿ ದೇವಾಲಯ ನಿರ್ಮಾಣ ವಿಚಾರವಾಗಿ ಬರುವ ಎಲ್ಲರಿಗೂ ನಾನು ಸದಾ ಹೇಳುತ್ತೇನೆ ಕಲ್ಲು ನನಗೆ ಬಿಡಿ ಅದರ ಕೂಲಿ ನಿಮ್ಮದಿರಲಿ ಎಂದು ಕಾರಣ ಕಲ್ಲು ಕೊಡುವ ಶಕ್ತಿ ದೇವರು ನನಗೆ ನೀಡಿದ್ದಾರೆ ಹಾಗಾಗಿ ತಾಲ್ಲೂಕಿನಲ್ಲಿ ಎಷ್ಟೇ ದೇವಾಲಯದ ನಿರ್ಮಾಣ ಮಾಡಿದರು ಆ ದೇವಾಲಯಕ್ಕೆ ಬೇಕಿರುವ ಕಲ್ಲು ನಾನು ವ್ಯವಸ್ಥೆ ಮಾಡುತ್ತೇನೆ ಎಂದರು.

    ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ಮರಳೇನಹಳ್ಳಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಗ್ರಾಮದ ಸಮಸ್ತ ಗ್ರಾಮಸ್ಥರಿಗೆ ತಾಯಿ ಶುಭ ಉಂಟುಮಾಡಲಿ ಎಂದು ಹಾರೈಸಿದರು.

    ಸ್ಥಳೀಯ ಮುಖಂಡ ಅಂಬರೀಷ್ ಮಾತನಾಡಿ ಗ್ರಾಮಸ್ಥರ ಹಲವು ವರ್ಷಗಳ ಕನಸು ಇಂದು ನೆರವೇರಿದೆ, ಗ್ರಾಮ ದೇವತೆಯ ಪ್ರತಿಷ್ಠಾಪನಾ ಕಾರ್ಯವನ್ನು ಸರ್ವ ಗ್ರಾಮಸ್ಥರು ಒಟ್ಟಾಗಿ ನೆರವೇರಿಸಿದ್ದು, ಈ ಕಾರ್ಯಕ್ಕೆ ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು, ಮಾಜಿ ಶಾಸಕರಾದ ಟಿ. ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ. ಮುನೇಗೌಡ ಸೇರಿದಂತೆ ಹಲವು ಗಣ್ಯರು ಪಕ್ಷತೀತವಾಗಿ ಕೈಜೋಡಿಸಿದ್ದು ಎಲ್ಲರಿಗೂ ನಮ್ಮ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಅಲ್ಲದೇ ನಿರಂತರ ಶ್ರಮಪಟ್ಟು ದೇವಾಲದ ಸಂಪೂರ್ಣ ಜವಾಬ್ದಾರಿ ಹೊತ್ತ ಸ್ಥಳೀಯ ಗ್ರಾಮಸ್ಥರಿಗೆ ಹಾಗೂ ನಾಗೇಶ್ ಕುಟುಂಬದವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.

    ಗ್ರಾಮದ ಮುಖಂಡರಾದ ರಂಗನಾಥ, ಶಿವಣ್ಣ, ನಾಗೇಶ್, ನಾಗರಾಜು, ಗ್ರಾಮ ಪಂಚಾಯತ್ ಸದಸ್ಯ ನೇರಳಘಟ್ಟ ರಂಗನಾಥ, ಅಂಬರೀಶ್ ಸೇರಿದಂತೆ ಮರಳೇನಹಳ್ಳಿ ಹಾಗೂ ಶ್ರೀನಿವಾಸಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

  • ನಿಧನ ವಾರ್ತೆ: ಅಂತರಹಳ್ಳಿಯ ಎಚ್ ರಾಮಯ್ಯನವರ ಧರ್ಮಪತ್ನಿ ರುದ್ರಮ್ಮ ( 77) ಇನ್ನಿಲ್ಲ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಅಂತರಹಳ್ಳಿಯ ಎಚ್ ರಾಮಯ್ಯನವರ ಧರ್ಮಪತ್ನಿ ರುದ್ರಮ್ಮ(77) ಅವರು ನಿಧನರಾಗಿದ್ದಾರೆ

    ರುದ್ರಮ್ಮ ರವರು ತಾಲ್ಲೂಕಿನ ಹಲವಾರು ಸಂಘ ಸಂಸ್ಥೆಗಳಿಗೆ ಶಾಲೆಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ,ರುದ್ರಮ್ಮರವರ ಪತಿ ಹೆಚ್.ರಾಮಯ್ಯರವರು ನಿವೃತ್ತ ಇಂಜಿನಿಯರ್ ಆಗಿದ್ದು, ರಾಜಾಜಿನಗರದ ವಾಣಿ ಮಹಿಳಾ ಪ್ರೌಢಶಾಲೆ ಅಧ್ಯಕ್ಷರಾಗಿ ಹಾಗೂ ಸಿಟಿಜನ್ ಕೋಅಪಪರೇಟಿವ್ ಬ್ಯಾಂಕ್ ನ ಮಾಜಿನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

    ಇವರ ನಿಧನಕ್ಕೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಜಿ ಶಾಸಕ ಗಂಟಿಗಾನಹಳ್ಳಿ ಕೃಷ್ಣಪ್ಪ,ಕಂಟನಕುಂಟೆ ಪಂಚಾಯ್ತಿ ಮಾಜಿ ಅದ್ಯಕ್ಷ ನಾರಾಯಣಸ್ವಾಮಿ,ಅಂತರಹಳ್ಳಿ ಅಶೋಕ, ರಾಜಕೀಯ ಮುಖುಂಡರಾದ ಕೋಳೂರು ನಂಜೇಗೌಡ,ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

  • ಇದು ಕಾಂಗ್ರೆಸ್ ಹೋರಾಟವಲ್ಲ, ಜನಸಾಮಾನ್ಯರ ಹೋರಾಟ – ರವಿ ಸಿದ್ದಪ್ಪ

    ದೊಡ್ಡಬಳ್ಳಾಪುರ : ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿಯ ಜನಕ್ರೋಶ ಯಾತ್ರೆ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ನೆಡೆಸುತ್ತಿರುವ ಹೋರಾಟದಲ್ಲಿ ತಾಲ್ಲೂಕಿನ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ತಿಳಿಸಿದರು.

    ಪ್ರತಿಭಟನೆಗೆ ಹೊರಡುವ ಮುನ್ನ ನಗರದ ಪ್ರವಾಸಿ ಮಂದಿರ ಮುಂಭಾಗ ಮಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿರಾಜ್ಯ ಸುಳ್ಳುಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಕೆಲವು ಅನಿವಾರ್ಯತೆಗಳಿಂದಾಗಿ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ಬೃಹದಾಕಾರವಾಗಿ ಬಿಂಬಿಸಿ ಯಾತ್ರೆ ಹೆಸರಿನಲ್ಲಿ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು

     

    ಇಂದು ನಮ್ಮ ತಾಲ್ಲೂಕಿನಿಂದ ರಾಜ್ಯ ಕಾಂಗ್ರೆಸ್ ನೆಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ ಸಲುವಾಗಿ ಸಾವಿರಾರು ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು, ಸಾರ್ವಜನಿಕರು ತೆರಳುತ್ತಿದ್ದವೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಆಡಳಿತ ಸಹಿಸಲಾಗದ ಬಿಜೆಪಿ ಉನ್ನರಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದರು

     

    ಶ್ರೀ ಕ್ಷೇತ್ರ ಘಾಟಿಸುಬ್ರಮಣ್ಯ ಪ್ರಾಧಿಕಾರದ ಸದಸ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ರಂಗಪ್ಪ ಮಾತನಾಡಿ ಈ ಹೋರಾಟವು ಕೇವಲ ಪಕ್ಷದ ಹೋರಾಟವಾಗಿ ಉಳಿಯದೆ ರಾಜ್ಯದ ಜನತೆ ಪಾಲ್ಗೊಳ್ಳುವ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರ ಜನಪರವಾಗಿದೆ ಎಂಬುದನ್ನು ಸಾಕ್ಷಿಯಾಗಿಸಿದೆ, ಬಿಜೆಪಿಪಕ್ಷದ ಸುಳ್ಳು ಆರೋಪಗಳಿಗೆ ಉತ್ತರವನ್ನು ಪ್ರತಿಭಟನೆಮೂಲಕ ನೀಡಲಾಗುವುದು ಎಂದರು.

     

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇವತಿ ಅನಂತ ರಾಮ್ ಮಾತನಾಡಿ ಇಂದಿನ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಮಹಿಳಾ ಶಕ್ತಿ ಹರಿದು ಬರುತ್ತಿದ್ದು, ಬಿಜೆಪಿ ಸುಳ್ಳು ಆರೋಪಗಳನ್ನು ಹಾಗೂ ಕೇಂದ್ರದ ದೋರಣೆ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ, ರಾಜ್ಯ ಬಿಜೆಪಿಗೆ ಇದೊಂದು ಪಾಠವಾಗಲಿದೆ ಎಂದರು.

    ಹೋರಾಟದಲ್ಲಿ ಮುಖಂಡರಾದ ವೆಂಕಟೇಶ್ (ಅಪ್ಪಿ ), ಲಕ್ಷ್ಮ ನಾಯಕ್, ಹಾಡೋನಹಳ್ಳಿ ಸವಿತಾ ತಾ ಕೃಷಿ ಸಮಾಜದ ಅಧ್ಯಕ್ಷ ಮುರಳಿಧರ್,ತೂಬಗೆರೆ ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆ ಕಾಂತಮ್ಮ, ಪಿ ಐ ಎಲ್ ಡಿ ಬ್ಯಾಂಕ್ ನಿರ್ದೇಶಕಿ ಶೋಭಾ, ದೊಡ್ಡ ತಿಮ್ಮನ ಹಳ್ಳಿ ಅಶ್ವತ್ಥಪ್ಪ,ಚಿಕ್ಕ ಮುದ್ದೇನಹಳಿ ನಾರಯಣಪ್ಪ ಹಾಗೂ ತಾಲ್ಲೂಕಿನ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು

     

  • ದೊಡ್ಡಬಳ್ಳಾಪುರ : ಹೊಸ ಪ್ರಯತ್ನಕ್ಕೆ ಮುಂದಾದ ಗೀತಂ ವಿಶ್ವ ವಿದ್ಯಾಲಯ : ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಿಸಲು ಆರ್ಟಿಫಿಷಿಯಲ್ ರೊಬೋಟಿಕ್‌ ಜೊತೆಗೆ ಸಿರೇನಾ ಆರ್ &‌ ಡಿ ವಿಭಾಗ ಉದ್ಘಾಟನೆ

    ದೊಡ್ಡಬಳ್ಳಾಪುರ :ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ವಿಭಾಗವನ್ನು ಎಂಜಿನಿಯರಿಂಗ್ ಕಾಲಿನ್ಸ್ ಏರೋಸ್ಪೇಸ್ ನ ಉಪಾಧ್ಯಕ್ಷ ಸವ್ಯಸಾಚಿ ಶ್ರೀನಿವಾಸ್ ಅವರು ಉದ್ಘಾಟನೆ ಮಾಡಿದರು.

    ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಗೀತಂ ಯೂನಿರ್ವಸಿಟಿಯ ಉಪಕುಲಪತಿ ಪ್ರೊ. ಕೆ.ಎನ್ ಎಸ್ ಆರ್ಚಾಯ ಮಾತನಾಡಿ, ಗೀತಂ ಯೂನಿರ್ವಸಿಟಿಯಲ್ಲಿ ಸಿರೆನಾ ಟೆಕ್ನೋಲಾಜೀಸ್ ಸಹಭಾಗಿತ್ವದಲ್ಲಿ ನೂತನವಾಗಿ ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ವಿಭಾಗವನ್ನು ಪ್ರಾರಂಭ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗವಾಗಲಿದೆ. ರೊಬೋಟಿಕ್‌, ಆರ್ಟಿಫಿಷಿಯಲ್ ಆರ್ &‌ ಡಿ ಕೋರ್ಸ್ ಮುಗಿಯುವದೊಳಗೆ ಒಳ್ಳೆ ಸಂಬಳ ಸಿಗುವ ಕೆಲಸ ಪಡೆಯಬಹುದು ಎಂದರು.

    ಸಿರೆನಾ ಟೆಕ್ನೋಲಾಜೀಸ್ ಕಂಪನಿಗೆ ನಮ್ಮ ಕಾಲೇಜಿನಿಂದ ಈಗಾಗಲೇ 11 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದು ನಮ್ಮ ಯೂನಿರ್ವಸಿಟೆಗೆ ಹೆಮ್ಮೆಯ ಸಂಗತಿ. ಮುಂದೆ ಈ ಕೋರ್ಸ್ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಆಗಲಿ ಎಂದು ಆಶಿಸಿದರು.

    ನಾಲ್ಕು ವರ್ಷಗಳ ರೋಬೋಟಿಕ್ ಮತ್ತು ಎಐ ಇಂಟೆಲಿಜೆನ್ಸ್ ಕೋರ್ಸ್ ವಿದ್ಯಾರ್ಥಿಗಳನ್ನು ಪರಿಗಣಿತರಾಗಿಸುವುದಷ್ಟೇ ಅಲ್ಲದೇ ಪ್ರಸ್ತುತ ಸ್ಪರ್ಧಾತ್ಮಕ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಪ್ರಯೋಗಿಕವಾಗಿ ರೋಬೋಟಿಕ್ ಸೈನ್ಸ್ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ನಮ್ಮ ಗೀತಂ ವಿಶ್ವವಿದ್ಯಾಲಯವು ನೂತನ ಪ್ರಯತ್ನಕ್ಕೆ ಮುಂದಾಗಿದ್ದು, ನಮ್ಮ ಪ್ರಯತ್ನಕ್ಕೆ ಸಿರೆನಾ ಟೆಕ್ನೋಲಾಜೀಸ್ ಸಹಕಾರ ನೀಡಿದೆ ಎಂದರು.

    ವಿದ್ಯಾರ್ಥಿಗಳನ್ನು ಕಲಿಕಾ ಹಂತದಲ್ಲೇ ಪ್ರಾಯೋಗಿಕವಾಗಿ ಪರಿಣಿತಿಪಡೆಯಲು ಸಹಕಾರಿಯಾಗಿದೆ. ಸತತ ಮೂರು ತಿಂಗಳ ನಮ್ಮೆಲ್ಲರ ಪ್ರಯತ್ನ‌ ಇಂದು ಇದು ಫಲದಾಯಕವಾಗಿದೆ ಎಂದರು.

    ಈ ವೇಳೆ ಸಿರೆನಾ ಟೆಕ್ನೋಲಾಜೀಸ್ ನ ಹರಿಹರನ್ ಭೋಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

     

     

     

  • ಕೇಂದ್ರ ಹಾಗೂ ರಾಜ್ಯ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ – ಮಾಜಿ ಶಾಸಕ ಟಿ. ವೆಂಕಟರಮಣಯ್ಯ

    ದೊಡ್ಡಬಳ್ಳಾಪುರ : ಬಿಜೆಪಿಯ ಜನಕ್ರೋಶ ಯಾತ್ರೆ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಅಪಕಾರನಹಳ್ಳಿ ಟಿ.ವೆಂಕಟರಮಣಯ್ಯ ಹೇಳಿದರು.

     

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯದ ಜನತೆಗೆ ಸುಳ್ಳುಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಕೆಲವು ಅನಿವಾರ್ಯತೆಗಳಿಂದಾಗಿ ರಾಜ್ಯ ಸರ್ಕಾರ ಅಲ್ಪಮಟ್ಟದ ಬೆಲೆ ಏರಿಕೆ ಮಾಡಿದ್ದನ್ನು ಬೃಹದಾಕಾರವಾಗಿ ಬಿಂಬಿಸಿ ಯಾತ್ರೆ ಹೆಸರಿನಲ್ಲಿ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.

     

    ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿರುವುದನ್ನು ಮರೆ ಮಾಚಲು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದೆ. ಸಿದ್ದರಾಮಯ್ಯ ಸರ್ಕಾರವು ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡಿರುವುದನ್ನು ಸಹಿಸದ ಬಿಜೆಪಿ ಸುಖಾಸುಮ್ಮನೆ ಪ್ರತಿಭಟನೆಗಳ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ ದೇಶದಲ್ಲಿ ಏನಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ ಎಂದರು.

     

    ತಾಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದೆ

     

    ಮಾತೆತ್ತಿದರೆ ಶಾಸಕರು ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ. ಜೊತೆಗೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದೆ ಹಾಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ ಎಂಬ ಹಸಿ ಸುಳ್ಳನ್ನು ಹೇಳಿ ಸಣ್ಣ ಪುಟ್ಟ ಕಾಮಗಾರಿಗೆ ದೊಡ್ಡ ಮಟ್ಟದ ಪ್ರಚಾರ ಪಡೆಯುತ್ತಿದ್ದಾರೆ. ಎರಡನೇ ಬಾರಿ ನಾನು ಶಾಸಕನಾದಾಗ ಬಿಜೆಪಿ ಅಧಿಕಾರದಲ್ಲಿತ್ತು. ಆಗ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರ ಅನುದಾನ ಕಡಿತ ಮಾಡಿತ್ತು ಎನ್ನುವುದನ್ನು ಶಾಸಕರು ನೆನಪು ಮಾಡಿಕೊಳ್ಳಲಿ. ಆದರೆ ನಮ್ಮ ಸರ್ಕಾರ ನಮ್ಮ ಕ್ಷೇತ್ರಕ್ಕೆ ಸುಮಾರು ಐದು ನೂರು ಕೋಟಿ ರೂಗಳ ಅನುದಾನ ಕೊಟ್ಟಿದೆ. ಆದರೆ ಇದೆಲ್ಲವನ್ನು ಮರೆಮಾಚಿ ಸರ್ಕಾರದಲ್ಲಿ ಯಾವುದೇ ಅನುದಾನಕ್ಕೆ ಪ್ರಯತ್ನಿಸದೆ ಸರ್ಕಾರದ ವಿರುದ್ಧ ಸುಳ್ಳುಗಳನ್ನು ಹೇಳಿಕೊಂಡು ಶಾಸಕರು ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಅಪಕಾರನಹಳ್ಳಿ ವೆಂಕಟರಮಣಯ್ಯ ಆರೋಪಿದ್ದಾರೆ.

     

    ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಜನವಿರೋಧಿ ನೀತಿ ಜೊತೆಗೆ ಬೆಲೆ ಏರಿಕೆ ಬಗ್ಗೆ ಬಿಜೆಪಿ ನಾಯಕರು ಬಾಯಿ ಬಿಡುತ್ತಿಲ್ಲ. ಇದಲ್ಲದೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನಗಳ ಕಡಿತದ ಬಗ್ಗೆ ಸೊಲ್ಲೆತ್ತದ ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ವಿಪರ್ಯಾಸವೆಂದರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವುದು ಕಟು ಸತ್ಯ. ಹೀಗಾಗಿ ಬಿಜೆಪಿ ಯ ಹಸಿ ಸುಳ್ಳುಗಳ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ 17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

     

     

    ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಉಸ್ತುವಾರಿ ಸುರ್ಜೆವಾಲಾ ಹಾಗೂ ಎಲ್ಲಾ ಸಚಿವರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನಿಂದ ಸಹ ಸಾಕಷ್ಟು ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

    ಸುದ್ದಿ ಗೋಷ್ಠಿಯಲ್ಲಿ ಡಿಪಿಎ ಅಧ್ಯಕ್ಷ ಚುಂಚೆಗೌಡ, ತಾಲೂಕು ಅಧ್ಯಕ್ಷ ಬೈರೇಗೌಡ, ಕಸಬಾ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಕೆ. ಪಿ. ಜಗನ್ನಾಥ್, ಡಿಪಿಎ ಸದಸ್ಯ ಅಂಜನ್ ಮೂರ್ತಿ, ಮುಖಂಡರಾದ ಆದಿತ್ಯ ನಾಗೇಶ್, ಸಿ. ಡಿ. ಅಶ್ವಥ್ ನಾರಾಯಣ ಗೌಡ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಹಾಜರಿದ್ದರು.

  • ಭೂಗಳ್ಳರಿಂದ ಸರ್ಕಾರಿ ಗೋಮಾಳ ಉಳಿಸಿ ಸ್ಥಳೀಯ ಕುಟುಂಬಗಳಿಗೆ ನಿವೇಶನ ಕಲ್ಪಿಸುವುದು ನಮ್ಮ ಉದ್ದೇಶ – ಚಂದ್ರಶೇಖರ್

    ದೊಡ್ಡಬಳ್ಳಾಪುರ : ಆಶ್ರಯ ಯೋಜನೆಯಡಿಯಲ್ಲಿ ಗ್ರಾಮದ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸುವ ಸಲುವಾಗಿ ರಾಮಯ್ಯನ ಪಾಳ್ಯದ ಸರ್ಕಾರಿ ಜಾಗದ ಸರ್ವೇ ಕಾರ್ಯವನ್ನು ಅಧಿಕಾರಿಗಳು ನೆಡೆಸಿದರು.

    ಸ್ಥಳೀಯ ಗ್ರಾಮಸ್ಥರು ಹಾಗೂ ವಕೀಲರಾದ ಚಂದ್ರಶೇಖರ್ ಮಾತನಾಡಿ ತಾಲ್ಲೂಕಿನ ರಾಮಯ್ಯನ ಪಾಳ್ಯದ (ದಿನ್ನೆ )ಬಳಿ ಸರ್ವೇ ನಂ 22 ರ ಸರ್ಕಾರಿ ಗೋಮಾಳ ಜಾಗ ಕುರಿತಂತೆ ಸರ್ವೇ ಮಾಡಿ ನಮ್ಮ ಗ್ರಾಮದ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಹಿಂದುಳಿದ ವರ್ಗದ ಹಲವು ಕುಟುಂಬಗಳು ನಿವೇಶನ ರಹಿತರಾಗಿದ್ದು, ಸ್ಥಳೀಯ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸುವಂತೆ ಕೋರಿ ಹಲವು ಬಾರಿ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಪಂಚಾಯಿತಿ ಮಟ್ಟದ ಅಧಿಕಾರಿಗಳು ತಾಲೂಕಿನ ದಂಡಾಧಿಕಾರಿಗಳಿಗೆ ಸರ್ಕಾರಿ ಸರ್ವೇ ಮಾಡಿಸುವಂತೆ ಕೋರಿದ್ದು , ಅಂತೆಯೇ ಇಂದು ತಾಲೂಕು ಆಡಳಿತ ವತಿಯಿಂದ ನಮ್ಮ ರಾಮಾಯಣ ಪಾಳ್ಯ ಗ್ರಾಮದ ದಿಣ್ಣೆಯ ಬಳಿ ಸರ್ವೆ ನಡೆಯುತ್ತಿದೆ,

    ಸ್ಥಳೀಯವಾಗಿ ಭೂಮಿಯ ಬೇರೆ ಹೆಚ್ಚಾಗಿದ್ದು , ಇದನ್ನು ಅರಿತ ಕೆಲವು ಭೂಗಳ್ಳರು ಸರ್ಕಾರಿ ಗೋಮಾಳ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸುವ ಮೂಲಕ ಮಾರಾಟಕ್ಕೆ ಮುಂದಾಗಿದ್ದಾರೆ ,ಸ್ಥಳೀಯ ಗ್ರಾಮಸ್ಥರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದ ಹಾಗೂ ಭೂಗಳ್ಳರ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಈ ಸರ್ಕಾರಿ ಸರ್ವೆ ನಡೆಯುತ್ತಿದ್ದು , ಅಧಿಕಾರಿಗಳು ತ್ವರಿತಗತಿಯಲ್ಲಿ ಸರ್ಕಾರಿ ಜಾಗದ ಸರ್ವೆ ವರದಿ ಸಲ್ಲಿಸುವ ಮೂಲಕ ಸ್ಥಳೀಯ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕೆಂದು ಮನವಿ ಮಾಡಿದರು.

    ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯ ರಘು ಕುಮಾರ್ ಮಾತನಾಡಿ ಸ್ಥಳೀಯ ನಿವಾಸಿಗಳಿಗೆ ನಿವೇಶನ ಕಲ್ಪಿಸುವಂತೆ ಕೋರಿ ಹಲವು ಬಾರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಇತ್ತೀಚಿನ ದಿನಗಳಲ್ಲಿ ಸ್ಥಳೀಯವಾಗಿ ಭೂಮಿ(ಜಮೀನು ) ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು ಇದನ್ನು ಅರಿತ ಕೆಲವರು ಸರ್ಕಾರಿ ಗೋಮಾಳ ಜಾಗಕ್ಕೆ ನಕಲಿ ದಾಖಲಾತಿ ಸೃಷ್ಟಿಸಿಕೊಂಡು ಮಾರಾಟ ಮಾಡಲು ಮುಂದಾಗಿದ್ದಾರೆ , ಸರ್ಕಾರಿ ಜಾಗವನ್ನು ಆಶ್ರಯ ಯೋಜನೆ ಅಡಿ ಸ್ಥಳೀಯ ಕುಟುಂಬಗಳಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಈ ಸರ್ವೇ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು

    ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಕೀಲ ಚಂದ್ರಶೇಖರ್, ಸದಸ್ಯರು ರಘುಕುಮಾರ್, ಮಣಿ ಜಿ ಗೋವಿಂದರಾಜು, ನಾರಾಯಣಪ್ಪ, ನಾಗೇಶ್, ನಾಗರಾಜು, ಮುರುಗೇಶ್, ಗಂಗಾಧರ್ ಗ್ರಾಮಲೆಕ್ಕಾಧಿಕಾರಿ ಗುರುಪ್ರಸಾದ್, ಸರ್ವೇಯರ್ ಪ್ರಕಾಶ್ ರೆಡ್ಡಿ ಸೇರಿದಂತೆ ಹಲವರು ಹಾಜರಿದ್ದರು.