Blog

  • ಜಿಲ್ಲಾಡಳಿತ ಭವನದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಆಚರಣೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಶ್ವ ಗುರು *ಜಗಜ್ಯೋತಿ ಬಸವಣ್ಣನವರ ಜಯಂತಿ* ಯನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.

     

    ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ವಿಕಲಚೇತನರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಗದೀಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ಕಟ್ಟುವ ಬಸವಣ್ಣನವರ ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ – ಗುರುರಾಜಪ್ಪ

    ದೊಡ್ಡಬಳ್ಳಾಪುರ : ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದ ಬಸವಣ್ಣನವರು ಅನುಭವ ಮಂಟಪದಲ್ಲಿ ಸರ್ವ ಸಮುದಾಯವರಿಗೂ ಸಮಾನ ಅವಕಾಶ ನೀಡಿದರು ಎಂದು ಕನ್ನಡಪರ ಹಿರಿಯ ಹೋರಾಟಗಾರ ಗುರುರಾಜಪ್ಪ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ  ನಡೆದ  ಬಸವ ಜಯಂತಿ   ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ನಿವಾರಿಸುವ ಕಡೆಗೆ ಬಸವಣ್ಣನವರು ಮೊದಲ ಆದ್ಯತೆಯನ್ನು ನೀಡಿದರು. ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ಕಟ್ಟುವ ಬಸವಣ್ಣನವರ ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿವೆ. ಬಸವಾದಿಶರಣರ ಚಿಂತನೆಗಳು ಭಾರತದ ಸಂವಿಧಾನದ ಆಶಯಗಳಿಗೆ ಪ್ರೇರಣೆಯಾಗಿವೆ ಎಂದರು.

     

    ಜ್ಞಾನಗಂಗಾ ಪ್ರೌಢಶಾಲೆಯ ಶಿಕ್ಷಕ ಕೋದಂಡರಾಮ್ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಗೆ ಬಸವಣ್ಣನವರ ಕೊಡುಗೆ ಅಪಾರವಾಗಿದೆ. ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ವಚನ ಸಾಹಿತ್ಯವಾಗಿದೆ. ಬಸವಣ್ಣ ಅವರ ನೇತೃತ್ವದಲ್ಲಿ ವಚನಕಾರರು ತಮ್ಮ‌ ವಚನಗಳಲ್ಲಿ ಸಾಮಾಜಿಕ, ಹಾಗೂ ತಾತ್ವಿಕ ಮೌಲ್ಯಗಳನ್ನು ಪ್ರತಿಪಾದಿಸಿದರು. ವಿಶ್ವ ಮಾನವತೆ ಮತ್ತು ವಿಶ್ವ ಶ್ರೇಷ್ಠ ಮೌಲ್ಯಗಳನ್ನು ಪ್ರತಿಪಾದಿಸಿದ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದರು.

     

    ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ ಮಾತನಾಡಿ, ಬಸವಣ್ಣನವರು ವಚನಗಳ ಮೂಲಕ ಸಾಮಾಜಿಕ ಅರಿವು ನೀಡಿದರು. ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದ ಬಸವಣ್ಣನವರಿಗೆ ಸಮ ಸಮಾಜವನ್ನು ಕಟ್ಟುವ ಮುಖ್ಯ ಗುರಿ ಹೊಂದಿದ್ದರು. ಬಸವಣ್ಣನವರು ಕಟ್ಟಿದ ಜಾತ್ಯತೀತವಾದ ಸರ್ವಸಮಾನತೆಯ ವ್ಯವಸ್ಥೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ ಎಂಬುದು ವಿಷಾದೀಯ ಸಂಗತಿಯಾಗಿದೆ. ಬಸವಣ್ಣನವರ ಆದರ್ಶಗಳನ್ನು, ಅವರ ವಚನಗಳ ವಿಚಾರಧಾರೆಯನ್ನು ಜನರು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಉಂಟು ಮಾಡಲು ಸಾಧ್ಯವೆಂದರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು,  ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್,  ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಷಫೀರ್, ಸೂರ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ  ಎಂ.ಸಿ.ಮಂಜುನಾಥ್, ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ,  ಪ್ರತಿನಿಧಿ ಷಫೀರ್,  ಕಲಾವಿದರುಗಳಾದ ಬಾಶೆಟ್ಟಿಹಳ್ಳಿ ಮಂಜುನಾಥ್,   ದರ್ಗಾಜೋಗಿಹಳ್ಳಿ ಮಲ್ಲೇಶ್  ಮುಂತಾದವರು ಭಾಗವಹಿಸಿದ್ದರು

  • ನಿಧನ ವಾರ್ತೆ : ಹಿರಿಯ ಪೈಲ್ವಾನ್ ಕೃಷ್ಣಮೂರ್ತಿ ಉರುಫ್ ಪೈಲ್ವಾನ್ ಮರಿಯಪ್ಪ ನವರು ನಿಧನ

    ದೊಡ್ಡಬಳ್ಳಾಪುರ: ನಗರದ ತಲಕ್ ವೆಂಕಟರಮಣಪ್ಪ ಗರಡಿ ಮನೆಯ ಹಿರಿಯ ಪೈಲ್ವಾನ್ ಕೃಷ್ಣಮೂರ್ತಿ ಉರುಫ್ ಪೈಲ್ವಾನ್ ಮರಿಯಪ್ಪ ನವರು ದೈವಾದೀನರಾಗಿದ್ದಾರೆ.

     

    ನಗರದ ಮಾರುತಿನಗರದಲ್ಲಿ ವಾಸವಾಗಿದ್ದ ಇವರು ಇಂದು ವಯೋಸಹಜ ಸಾವನ್ನಪ್ಪಿದ್ದಾರೆ. ಮೃತರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

    ತಲಾಕ್ ದೊಡ್ಡವೆಂಕಟರಮನಪ್ಪ ನವರ ಗರಡಿಮನೆಯ ಹಿರಿಯ ಪೈಲ್ವಾನ್ ಆಗಿದ್ದ ಇವರು ತಮ್ಮ ಇಳಿವಯಸ್ಸಿನಲ್ಲೂ ಯುವ ಪೀಳಿಗೆಗೆ ಕುಸ್ತಿ ಕಲಿಸುತ್ತಿದ್ದರು , ಇವರು ಕುಸ್ತಿಯಲ್ಲಿ ಡಾಬು ಗಿರ್ರ ಎಂಬ ಪಟ್ಟಿನಲ್ಲಿ ವಿಶೇಷತೆಯನ್ನು ಹೊಂದಿದ್ದು,ಸರಕಾರ ಗೌರವಧನವನ್ನು ಸಹ ಪಡೆಯುತ್ತಿದ್ದ ಅವರು ತಲಕ್ ವೆಂಕಟರಮಣಪ್ಪ ಗರಡಿ ಮತ್ತು ವ್ಯಾಯಾಮ ಶಾಲಾ ಟ್ರಸ್ಟ್ ನ ಗೌರವ ಅಧ್ಯಕ್ಷರು ಆಗಿ ಸೇವೆ ಸಲ್ಲಿಸುತ್ತಿದ್ದರು ,ತಾಲ್ಲೂಕಿನ ಕೋಟೆ ಗರಡಿ ಮನೆ ಸೇರಿದಂತೆ ಹಲವೆಡೆ ಪಂದ್ಯಗಳನ್ನು ಗೆದ್ದು ಹೆಸರುವಾಸಿಯಾಗಿದ್ದರು, ನಮ್ಮೆಲ್ಲರಿಗೂ ಸದಾ ಮಾರ್ಗದರ್ಶಕರಾಗಿ ದೇಸಿ ಕಲೆ ಕುಸ್ತಿಯ ಉಳಿವಿಗಾಗಿ ಸದಾ ಶ್ರಮಿಸುತ್ತಿದ್ದರು ಎಂದು ರಾಜಘಟ್ಟ ಗಣೇಶ್ ಸಂತಾಪ ವ್ಯಕ್ತಪಡಿಸಿದ್ದಾರೆ .

    ಮೃತ ಪೈಲ್ವಾನ್‌ ಮರಿಯಪ್ಪನವರಸಾವಿನ ಸುದ್ದಿ ತಿಳಿದ ಅವರ ಗರಡಿ ಮನೆಯ ಆಡಳಿತ ಮಂಡಳಿ ಮತ್ತು ಶಿಷ್ಯ ಬಳಗ ಮತ್ತು ಸಾರ್ವಜನಿಕರು ಕಂಬನಿ ಮಿಡಿದ್ದಿದ್ದು ಇಂದು ಸಂಜೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ನಾಡಿನ ಬಹು ಸಂಸ್ಕೃತಿ ಪ್ರತೀಕ ಕಾವೇರಿ ಆರತಿಗೆ ನೀಲನಕ್ಷೆ ವಾರದಲ್ಲಿ ರೆಡಿ: ಡಿಸಿಎಂ ಡಿ.ಕೆ. ಶಿವಕುಮಾರ್

    “ನಾಡಿನ ವಿವಿಧ ಸಂಸ್ಕೃತಿ ಒಳಗೊಂಡಂತೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಮಿತಿಯು ನೀಲನಕ್ಷೆ ರೂಪಿಸುತ್ತಿದ್ದು, ವಾರದಲ್ಲಿ ಸಿದ್ಧವಾಗಲಿದೆ. ದಸರಾಗೆ ಕಾರ್ಯಕ್ರಮ ನಡೆಸುವ ಉದ್ದೇಶವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

     

    ಮಂಡ್ಯ ಜಿಲ್ಲೆ ಕೆಆರ್ ಎಸ್ ನಲ್ಲಿ “ಕಾವೇರಿ ಆರತಿ” ನಡೆಸುವ ಸಂಬಂಧ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ, ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

     

    “ನಮ್ಮ ಸಂಸ್ಕೃತಿ, ಧಾರ್ಮಿಕ ಆಚರಣೆ ಸೇರಿಸಿ ಕಾರ್ಯಕ್ರಮ ರೂಪಿಸಲು ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಮಿತಿಗೆ ಸಲಹೆ ನೀಡಿದ್ದೇನೆ. ಈ ಸಮಿತಿ ಮುಂದಿನ 8-10 ದಿನಗಳಲ್ಲಿ ಕಾರ್ಯಕ್ರಮದ ನೀಲನಕ್ಷೆ ಸಿದ್ಧಪಡಿಸಲಿದೆ” ಎಂದು ತಿಳಿಸಿದರು.

     

    “ಕೊಡಗಿನಿಂದ ಹಿಡಿದು, ದಕ್ಷಿಣ ಕನ್ನಡ, ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು, ಚಾಮರಾಜನಗರ ಭಾಗದ ಜನರು ಈ ತಾಯಿಗೆ ನಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಕಾವೇರಿ ನೀರು ಬಳಸುವ ತಮಿಳುನಾಡಿನ ಜನರೂ ಕೂಡ ಬಂದು ಕಾವೇರಿ ತಾಯಿಗೆ ಪೂಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಈ ಕಾವೇರಿ ಆರತಿ ಕಾರ್ಯಕ್ರಮ ವಿನ್ಯಾಸ, ಸ್ವರೂಪ ಸೇರಿದಂತೆ ಇತರೆ ರೂಪುರೇಷೆಗಳ ಅಧಿಕಾರಿಗಳು ಹಾಗೂ ನಮ್ಮ ನಾಯಕರ ಜತೆ ಚರ್ಚೆ ಮಾಡಿದ್ದೇನೆ” ಎಂದು ತಿಳಿಸಿದರು.

     

    “ಚೆಸ್ಕಾಂ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಪ್ರವಾಸೋದ್ಯಮ, ಧಾರ್ಮಿಕ ದತ್ತಿ ಇಲಾಖೆ, ಇಬ್ಬರು ಜಿಲ್ಲಾಧಿಕಾರಿಗಳು, 2 ಸ್ಥಳೀಯ ಶಾಸಕರು ಹಾಗೂ ಪರಿಷತ್ ಸದಸ್ಯರು, ಸಿಇಓಗಳು, ಬಿಡ್ಬ್ಲ್ಯೂಎಸ್ಎಸ್ ಬಿ ಮುಖ್ಯಸ್ಥರು ಸೇರಿ ಸಮಿತಿ ರಚಿಸಲಾಗಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಮೂಲಸೌಕರ್ಯ ಕಲ್ಪಿಸುವ ಕೆಲಸ ಮಾಡಲಿದ್ದಾರೆ. ಚೆಸ್ಕಾಂ ಸಂಸ್ಥೆ ದೀಪಾಲಂಕಾರ ವ್ಯವಸ್ಥೆ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.

     

    “ಈ ಕಾವೇರಿ ಆರತಿಗೆ ಸರ್ಕಾರ 92 ಕೋಟಿ ನೀಡಲು ತೀರ್ಮಾನಿಸಿದ್ದು, ಇದರ ಜತೆಗೆ ಬೇರೆ ಇಲಾಖೆಗಳು ಅಗತ್ಯ ಸಹಕಾರ ನೀಡಲಿವೆ. ಕನಿಷ್ಠ ಸುಮಾರು 10 ಸಾವಿರ ಜನರು ಕೂತು ಈ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ಎಷ್ಟು ದಿನ ಕಾರ್ಯಕ್ರಮ ಮಾಡಬೇಕು ಎಂಬುದನ್ನು ಸಮಿತಿ ತೀರ್ಮಾನ ಮಾಡಲಿದೆ. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಇಲ್ಲಿನ ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚಿಸುತ್ತೇನೆ. ಧಾರ್ಮಿಕ ದತ್ತಿ ಇಲಾಖೆಯವರು ಕಾರ್ಯಕ್ರಮದಲ್ಲಿ ಯಾವ ರೀತಿ ಪೂಜೆ, ವೇದಗೋಷ್ಠಿ ಮಾಡಬೇಕು ಎಂದು ವರದಿ ನೀಡಿದ್ದು, ಎಲ್ಲವನ್ನು ಕ್ರೂಢೀಕರಿಸಿ ಅಂತಿಮ ರೂಪುರೇಷೆ ನೀಡಲಾಗುವುದು. ಈ ವಿಚಾರವಾಗಿ ಯಾವುದಾದರೂ ಸಂಘಟನೆಗಳು ನಮ್ಮ ಜತೆ ಚರ್ಚೆ ಮಾಡಲು ಇಚ್ಛಿಸಿದರೆ ಕರೆದು ಮಾತನಾಡುತ್ತೇವೆ. ಬೇರೆಯವರ ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಸಿದ್ಧವಿದೆ” ಎಂದು ಹೇಳಿದರು.

     

     

     

     

  • ಹೊರರಾಜ್ಯಗಳಲ್ಲಿ ತೂಬಗೆರೆ ಹಲಸಿಗೆ ಭಾರಿ ಬೇಡಿಕೆ

    ದೊಡ್ಡ ಬಳ್ಳಾಪುರ : ವರ್ಷದ ಮಾರ್ಚಿ ಎಪ್ರಿಲ್ ಮೇ ತಿಂಗಳಲ್ಲಿ ಬರುವ ಹಲಸು ಫಲವು ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲಿ ಹೆಚ್ಚು ದೊರೆಯುತ್ತದೆಯಲ್ಲದೆ ಇದು ರೈತರಿಗೆ ಲಾಭದಾಯಕವಾದ ಬೆಳೆಯೂ ಆಗಿದೆ. ಈ ಪ್ರದೇಶದ ಹಲಸು ಹೆಚ್ಚು ರುಚಿಕರವಾಗಿದ್ದು, ಸಾರ್ವಜನಿಕರಿಗೆ ಇಷ್ಟವಾಗುವಂತೆ ಬಣ್ಣಗಳಿಂದ ಕೂಡಿರುತ್ತೆ. ಹಳದಿ, ಕೆಂಪು, ಸಾಧಾರಣ ಕೆಂಪು ತೂಳೆ ಗಳಿದ್ದು, ಅದರಲ್ಲೂ ವಿಶೇಷವಾಗಿ ಕೆಂಪು ತೂಳೆಯ ಬಣ್ಣದ ಹಲಸಿನ ಹಣ್ಣಿಗೆ ಭಾರಿ ಬೇಡಿಕೆಯಿದೆ.

     

    ಹಸಿದು ಹಲಸು ತಿನ್ನು-ಉಂಡು ಮಾವು ತಿನ್ನು ಎಂದ ಗಾದೆ ಮಾತಿನಂತೆ ಹಲಸು ಹಣ್ಣಿನ ವಾಸನೆ ಹಾಗೂ ರುಚಿ ಗೆ ಮನ ಸೋಲದವರೆ ಇಲ್ಲ. ತಾಲ್ಲೂಕಿನ ತೂಬಗೆರೆ ಹೋಬಳಿ ಸುತ್ತ ಮುತ್ತಲಿನ ಕಾಚಹಳ್ಳಿ, ತೂಬಗೆರೆ, ನಾಗೆನಹಳ್ಳಿ, ನಾರಸಿಂಹಮ್ಮನಹಳ್ಳಿ, ಎದ್ದಲಹಳ್ಳಿ, ನೆಲ್ಲುಗುದಿಗೆ ಭಾಗದಲ್ಲಿ ಬೆಳೆದ ಹಲಸಸಿಗೆ ರುಚಿ ಹೆಚ್ಚು. ಅದರಲೂ ತೂಬಗೆರೆ ಕಾಚಹಳ್ಳಿ ಹಲಸು ಸಾಕಷ್ಟು ಪ್ರಸಿದ್ದಿ ಪಡೆದಿದೆ. ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಹಣ್ಣು ಸಂಗ್ರಹ ಮಾರಾಟಗಾರರು ದೊಡ್ಡಬಳ್ಳಾಪುರ ನಗರದ ಅಂಬೇಡ್ಕ‌ರ್ ವೃತ್ತ ಹಾಗೂ ಗೌರಿಬಿದನೂರು ರಸ್ತೆ ಬದಿಗಳಲ್ಲಿ ರಾಶಿ ಮಾಡಿಕೊಂಡು, ಆಂಧ್ರಪ್ರದೇಶದ ಹೈದರಾಬಾದ್, ಧರ್ಮಾವರಂ ಹಾಗೂ ತೆಲಂಗಾಣದ ತಿರುಪತಿಗೆ ರಫ್ತು ಮಾಡುತ್ತಾರೆ. ಅಲ್ಲಿ ಈ ಹಲಸಿಗೆ ಭಾರಿ ಬೇಡಿಕೆ ಇದೆ.

    ಆದರೆ ದಲ್ಲಾಳಿಗಳ ಹಾವಳಿಯಿಂದ ವರ್ಷ ಪೂರ್ತಿ ಕಾದು ಬೆಳೆ ಬೆಳೆದ ರೈತರ ಶ್ರಮ ಕ್ಷಣಮಾತ್ರದಲ್ಲಿ ದಲ್ಲಾಳಿಗಳ ಪಾಲಾಗುವುದು ಕಂಡಾಗ ನೋವುಂಟಾಗುತ್ತದೆ. ಸಂಕಷ್ಟದಿಂದ ಕಂಗಾಲಾಗಿರುವ ರೈತರ ಸಮಸ್ಯೆ ಕೇಳುವವರಿಲ್ಲದಾಗಿದೆ. ಇದಕ್ಕೆ ಸರ್ಕಾರ ಸೂಕ್ತವಾದ ಮಾರುಕಟ್ಟೆ ಕಲ್ಪಿಸಿದರೆ, ಈ ಸಮಸ್ಯೆ ಬಗೆಹರಿಸಬಹುದು ಎಂಬುದು ರೈತರ ಕೂಗು. 100 ರೂ. ಬೆಲೆ ಬಾಳುವ ಒಂದು ಹಲಸಿನ ಹಣ್ಣಿಗೆ ದಲ್ಲಾಳಿಗಳು ಕೇವಲ 20-30 ರೂ. ಬೆಲೆ ಕಟ್ಟಿ ರೈತರಿಂದ ಕೊಂಡು, ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಇದನ್ನು ತಪ್ಪಿಸಲು ರೈತರ ಬಗ್ಗೆ ಕಾಳಜಿ ವಹಿಸಿ ರೈತರಿಗೆ ನೆರವಾದರೆ ಅನ್ನದಾತರ ಬದುಕು ಕೊಂಚವಾದರೂ ಹಸನಾಗಬಹುದು ಅಲ್ಲವೇ…..

  • ವಸತಿ ಯೋಜನೆಗೆ ಸೂಕ್ತವಲ್ಲದ ಸ್ಥಳದಲ್ಲಿ ವಸತಿ ಯೋಜನೆ ರೂಪಿಸಿದ್ದಾರೆ ನಮಗೆ ವ್ಯವಸಾಯ ಮಾಡಲು ಅನುವು ಮಾಡಿಕೊಡಿ – ರೈತ ಲಕ್ಷ್ಮೀಗೌಡ

    ದೊಡ್ಡಬಳ್ಳಾಪುರ :ಸ್ಥಳೀಯ ಕೆಲಅಧಿಕಾರಿಗಳು ಬೇಕಂತಲೇ ನಮ್ಮನ್ನು ಒಕ್ಕಲೆಬ್ಬಿಸುವ ಸಲುವಾಗಿ ವಸತಿ ಯೋಜನೆಯನ್ನು ರೂಪಿಸಿದ್ದು ಕೂಡಲೇ ಯೋಜನೆ ರದ್ದುಗೊಳಿಸಿ ಸದರಿ ಜಾಗದಲ್ಲಿ ರೈತರು ವ್ಯವಸಾಯ ಮಾಡಲು ಅನುವು ಮಾಡಿಕೊಡಬೇಕೆಂದು ಕೂಗೋನಹಳ್ಳಿ ಗ್ರಾಮದ ರೈತ ಲಕ್ಷ್ಮೀಗೌಡ ಒತ್ತಾಯಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಕೂಗೋನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ. 67ರ ಗೋಮಾಳ ಜಮೀನಿನಲ್ಲಿ ನಾವುಗಳು ಸುಮಾರು 25 ವರ್ಷಗಳಿಂದ ರಾಗಿ, ಜೋಳ, ಅವರೆ, ಇತ್ಯಾದಿ ಬೆಳೆಗಳನ್ನು ಬೆಳೆದುಕೊಂಡು ಬರುತ್ತಿದ್ದು ಫಾರಂ-57ರ ಅಡಿಯಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿಯನ್ನು ಸಹ ಸಲ್ಲಿಸಿರುತ್ತೇವೆ. ಗ್ರಾಮ ಲೆಕ್ಕಾಧಿಕಾರಿಗಳು ರೆವಿನ್ಯೂ ಇನ್ಸ್‌ಪೆಕ್ಟರ್ ರವರು ಜಮೀನು ಸರ್ವೆ ಮಾಡಲು ಅನುಮತಿ ಪತ್ರವನ್ನು ನೀಡಿರುತ್ತಾರೆ. ಆದರೆ ನಮಗೆ ಗೊತ್ತಿಲ್ಲದೆ ನಮ್ಮ ಜಮೀನನ್ನು ರಾಜೀವ್ ಗಾಂದಿ ವಸತಿ ಯೋಜನೆಗೆ ಪಹಣಿ ಮಾಡಲಾಗಿದೆ, ಆದರೆ ಈ ಜಮೀನಿನಲ್ಲಿ ಬೃಹತ್ ವಿದ್ಯುತ್ ತಂತಿಗಳು ಹಾಗೂ ಕಂಬ ಇರುವ ಕಾರಣ ಸದರಿ ಸ್ಥಳವು ಯಾವುದೇ ವಸತಿ ಯೋಜನೆಗೆ ಲಾಯಕ್ಕಾದ ಜಮೀನಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ತಿಳಿಸಿದೆ ಎಂದರು.

    ವಸತಿ ಯೋಜನೆಗೆ ಸೂಕ್ತವಲ್ಲದ ಜಮೀನಿನಲ್ಲಿ ನಾವು ವ್ಯವಸಾಯ ಮಾಡುತ್ತಿದ್ದು ಜಮೀನಿನಲ್ಲಿ ಬೃಹತ್ ವಿದ್ಯುತ್ ಲೈನ್ ಗಳು ಹಾಗೂ ಕಂಬವಿರುವುದರಿಂದ ಸದರಿ ಜಾಗವು ವಸತಿ ಯೋಜನೆಗೆ ಸೂಕ್ತವಾಗಿರುವುದಿಲ್ಲ, ವಿದ್ಯುತ್ ನಿಯಮ 2010ರ ಅನುಬಂದದ ಪ್ರಕಾರ ಪ್ರಸ್ತುತ ಓವರ್ ಹೆಡ್ ವಿದ್ಯುತ್ ತಂತಿಗಳ ಕೆಳಗೆ ಯಾವುದೇ ಕಟ್ಟಡ ಲೇಔಟ್, ಶಾಲೆಗಳು ದೇವಸ್ಥಾನಗಳು, ವಾಸಕ್ಕೆ ಸುರಕ್ಷಿತವಾದ ಸ್ಥಳಗಳಾಗಿರುವುದಿಲ್ಲ. ವ್ಯವಸಾಯವನ್ನು ಬಿಟ್ಟು ಯಾವುದೇ ರೀತಿಯ ಲೇಔಟ್ ವಸತಿ ಯೋಜನೆಗೆ ರೂಪಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ತಿಳಿಸಿದೆ, ನಾವು ವ್ಯವಸಾಯ ಮಾಡುತ್ತಿರುವ ಜಮೀನಿನಲ್ಲಿ ಯಾವುದೇ ರೀತಿಯ ಕಟ್ಟಡ ಲೇಔಟ್ ಮಾಡಲು ವಿದ್ಯುತ್ ಬೃಹತ್ ಲೈನ್‌ಗಳು ಮತ್ತು ಕಂಬವಿರುವುದರಿಂದ ವಸತಿ ಯೋಜನೆಗೆ ರೂಪಿಸಿರುವ ಯೋಜನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

    ನಾವು ಸ್ವಾಧೀನದಲ್ಲಿರುವ ಜಮೀನಿನ ಮೇಲೆ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ ಈ ಪ್ರಕರಣ ಬಾಕಿ ಇದ್ದರೂ ಸಹ ಸಾರ್ವಜನಿಕರಿಗೆ ನಿವೇಶನ ಹಂಚಲು ಸ್ಥಳೀಯ ಅಧಿಕಾರಿಗಳು ಹೊರಟಿದ್ದಾರೆ,ಸದರಿ ಜಮೀನಿನಲ್ಲಿ ನಾವು ವ್ಯವಸಾಯ ಮಾಡುತ್ತಿರುವುದನ್ನು ವಕ್ಕಲೆಬ್ಬಿಸದೆ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಯಾವುದೇ ನಿವೇಶನಗಳ ಹಂಚಿಕೆ ಚಟುವಟಿಕೆ ನಡೆಸದಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.

     

     

     

  • ನಾವು ಮಾದಿಗರು ಎಂಬ ಶುದ್ಧ ಮಾಹಿತಿಯನ್ನು ಸರ್ಕಾರಕ್ಕೆ ನೀಡಿ : ನಮ್ಮ ಹಕ್ಕು ಪಡೆಯಲು ಸಹಕರಿಸಿ – ಡಾ ಶ್ರೀ ಶ್ರೀ ಸಿದ್ದರಾಜು ಸ್ವಾಮಿಜೀ

    ದೊಡ್ಡಬಳ್ಳಾಪುರ : ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗಾಗಿ ಸರ್ಕಾರ ನೇಮಿಸುವ ಶಿಕ್ಷಕರು ತಮ್ಮ ಮನೆಬಾಗಿಲಿಗೆ ಬರಲಿದ್ದಾರೆ ಈ ಸಮೀಕ್ಷೆಯು ಮೂರು ಹಂತದಲ್ಲಿ ನೆಡೆಯಲಿದ್ದು ಸಮುದಾಯದ ಎಲ್ಲಾ ಬಾಂಧವರು ತಪ್ಪದೆ ಸಮೀಕ್ಷೆಯಲ್ಲಿ ಸೂಕ್ತ ಮಾಹಿತಿ ನೀಡಿ ಮಾದಿಗ ಎಂದು ನಮೂದಿಸಬೇಕೆಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಸಿದ್ದರಾಜು ಸ್ವಾಮೀಜಿ ತಿಳಿಸಿದರು.

     

    ನಗರದ ಬಾಬು ಜಗಜೀವನ್ ರಾಮ್ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಮಾದಿಗ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸಮೀಕ್ಷೆಗೆ ಶಿಕ್ಷಕರು ತಮ್ಮ ಮಲೆ ಬಾಗಿಲಿಗೆ ಬಂದಾಗ ಮಾದಿಗ ಎಂದು ಬರೆಸಲು ನಾಚಿಕೆಪಡದೆ ಸ್ಪಷ್ಟವಾಗಿ ಜಾತಿಯನ್ನು ಮಾದಿಗ ಎಂದು ಬರೆಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಮಾದಿಗ ಸಮಾಜವು ಬಹು ಸಂಖ್ಯೆಯಲ್ಲಿದೆ ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಜನಾಂಗದ ಅಭಿವೃದ್ಧಿಗೆ ಇದು ಸೂಕ್ತ ಕಾಲ ಹಾಗಾಗಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಸೂಕ್ತ ಮಾಹಿತಿ ನೀಡಬೇಕು. ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯದ ಜನತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಪಡೆಯಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

     

    ಸಮುದಾಯದ ಮುಖಂಡ ರಾಮಕೃಷ್ಣ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ನಡೆಯುತ್ತಿರುವ ಸಮೀಕ್ಷೆಯು ಮೂರು ಹಂತದಲ್ಲಿ ನಡೆಯಲಿದ್ದು ಮೊದಲ ಹಂತದಲ್ಲಿ ಮೇ 5 ರಿಂದ 17 ವರೆಗೆ ಗಣತಿದಾರರು ಮನೆ, ಮನೆ ಭೇಟಿ ನೀಡಿ ಸಮೀಕ್ಷೆ ಮಾಡಲಿದ್ದಾರೆ, ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಮೂಲಕ ಸಮೀಕ್ಷೆ ಮಾಡುತ್ತಾರೆ. ಎರಡು ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಾರ್ವಜನಿಕರು , ಸಮುದಾಯದ ಬಾಂಧವರು ಮೂರನೇ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬಹುದಾಗಿದೆ ಎಂದರು.

    ನಮ್ಮ ಸಮುದಾಯಕ್ಕೆ ಸಂಬಂಧಪಟ್ಟ ಸಮೀಕ್ಷೆ ವರದಿಗಳು ಸೂಕ್ತ ರೀತಿಯಲ್ಲಿ ಸರ್ಕಾರಕ್ಕೆ ಲಭ್ಯವಿಲ್ಲದ ಕಾರಣ ನಮ್ಮ ಸಮುದಾಯಕ್ಕೆ ಸಿಗಬೇಕಿರುವ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸವಲತ್ತುಗಳು ಬೇರೆ ಸಮುದಾಯದ ಪಾಲಾಗುತ್ತಿವೆ. ನಮ್ಮ ಸಮುದಾಯವು ನಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಈ ಸಮೀಕ್ಷೆಯು ಸಹಕಾರಿಯಾಗಲಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಾದಾರ ಮಹಾ ಮುಖ್ಯಸ್ಥರಾದ ದೊಡ್ಡತುಮಕೂರು ಸಿ.ರಾಮಕೃಷ್ಣಪ್ಪ, ಮುಖಂಡರಾದ ಬಚ್ಚಹಳ್ಳಿ ನಾಗರಾಜ್,ಟಿ.ಡಿ‌ಮುನಿಯಪ್ಪ,ಮುನಿಸುಬ್ಬಯ್ಯಅಪ್ಪಕಾರನಹಳ್ಳಿ ಹನುಮಯ್ಯ, ಪುರುಷೋತ್ತಮ್,ವಿ.ವೆಂಕಟೇಶ್, ತಳವಾರ್ ನಾಗರಾಜ್, ಹಾದ್ರಿಪುರ ಹರ್ಷ,ವಕೀಲ ಕಾಂತರಾಜ್ , ಮುನಿರಾಜ್, ತಮಟೆ ಗಣೇಶ್,ವೆಂಕಟರಮಣಪ್ಪರಾಮದೇವನಹಳ್ಳಿ ಮುನಿರಾಜ್, ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರದ ಸದಸ್ಯ ಆರ್.ವಿ ಮಹೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ನೇರಳೆಘಟ್ಟ ರಾಮು, ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಯ್ಯ,ನಗರಸಭಾ ಸದಸ್ಯ ಶಿವಣ್ಣ, ಹುಲಿಕುಂಟೆನರಸಿಂಹಮೂರ್ತಿ,ಕೆಂಪವೆಂಕಟಯ್ಯ, ಮಂಜು ರಾಮದಾಸ್, ಕುರುಬರಹಳ್ಳಿ ಮಂಜು,ನರಸಿಂಹ ಮೂರ್ತಿ, ಕರೀಂ ಸೊಣ್ಣೇನಹಳ್ಳಿ ಮುನಿಯಪ್ಪ, ಗೊಲ್ಲಹಳ್ಳಿ ಮುನಿಯಪ್ಪ ಸೇರಿದಂತೆ ತಾಲೂಕಿನ ಹಲವು ಪ್ರಮುಖರು ಹಾಜರಿದ್ದರು.

     

     

  • ಮೇ 1ರಿಂದ ಲಂಚ ಮುಕ್ತ ಅಭಿಯಾನಕ್ಕೆ ಚಾಲನೆ – ಬಿ. ಶಿವಶಂಕರ್

    ದೊಡ್ಡಬಳ್ಳಾಪುರ : ನಮ್ಮ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮುಕ್ತವಿಚಾರವಾಗಿ ಹೆಚ್ಚಿನ ರೀತಿಯಲ್ಲಿ ಕರ್ತವ್ಯ ಮಾಡುವ ನಿಟ್ಟಿನಲ್ಲಿ ಮೇ 1ರಿಂದ ಲಂಚ ಮುಕ್ತ ಅಭಿಯಾನ ಮಾಡಲು ಮುಂದಾಗಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.

     

    ನಗರದ ಕೆ ಆರ್ ಎಸ್ ಕೇಂದ್ರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅದನ್ನು ನಿಲ್ಲಿಸುವ ನಿಟ್ಟಿನಲ್ಲಿ ನಮ್ಮ ತಂಡ ಶ್ರಮಿಸಲಿದೆ, ಕಂದಾಯ ಇಲಾಖೆ ನಗರ ಸಭೆ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತಿ ಸೇರಿದಂತೆ ತಾಲ್ಲೂಕಿನ ಎಲ್ಲಾ ಕಚೇರಿಗಳಿಗೆ ಭೇಟಿ ಕೊಟ್ಟು ಸಾರ್ವಜನಿಕರ ತೊಂದರೆಗಳಿಗೆ ನೇರವಾಗಿ ಸ್ಪಂದಿಸಲಾಗುವುದು ಎಂದರು. ಜಿಲ್ಲೆ ಅಥವಾ ತಾಲ್ಲೂಕಿನ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಹಣಕ್ಕಾಗಿ ಬೇಡಿಕೆ ಇಟ್ಟರೆ ಕೂಡಲೇ ನಮ್ಮ ಕೆ ಆರ್ ಎಸ್ ಪಕ್ಷವನ್ನು ಸಂಪರ್ಕಿಸಿ ನಿಮ್ಮೊಂದಿಗೆ ನಾವಿದ್ದೇವೆ ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ನಾವು ಹೋರಾಟ ಮಾಡುವ ಮೂಲಕ ತಕ್ಕ ಪಾಠ ಕಲಿಸಲಿದ್ದೇವೆ ಎಂದರು.

     

    ಅಲ್ಲದೇ ತಾಲ್ಲೂಕಿನ ಗ್ರಾಮಾಂತರ ಭಾಗದ ಹಲವು ಗ್ರಾಮಗಳ ಸರ್ಕಾರಿ ಗೋಮಾಳ ಜಾಗಗಳ ಒತ್ತುವರಿ ಹೆಚ್ಚಾಗಿದ್ದು, ಭೂಗಳ್ಳರಿಂದ ಭೂ ಕಬಳಿಕೆ ಹೆಚ್ಚಾಗಿದೆ, ಸರ್ಕಾರಿ ಜಾಗಗಳನ್ನು ಉಳಿಸುವನಿಟ್ಟಿನಲ್ಲಿ ಕೆ ಆರ್ ಎಸ್ ಪಕ್ಷವು ನೂತನ ಹೋರಾಟವನ್ನು ಪ್ರಾರಂಭಿಸಲಿದೆ, ಯಾವುದೇ ದಾಖಲಾತಿಗಳನ್ನು ಗಣನೆಗೆ ಪಡೆಯದೇ ಕೆಲ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸರ್ಕಾರಿ ಜಾಗಗಳನ್ನು ನೋಂದಣಿ ಮಾಡಲಾಗುತ್ತಿದೆ ಅಂತಹ ಅಧಿಕಾರಿ ಹಾಗೂ ಪ್ರಭಾವಿಗಳ ವಿರುದ್ಧ ನಮ್ಮ ಹೋರಾಟ ನೆಡೆಯಲಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮುರಾರಿ ದೊಡ್ಡಬಳ್ಳಾಪುರ , ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ,ತಾಲ್ಲೂಕು ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಲೀಮ್, ದೊಡ್ಡಬಳ್ಳಾಪುರ ತಾಲ್ಲೂಕು ಉಸ್ತುವಾರಿ ವೇಣು, ಸೇರಿದಂತೆ ಹಲವು ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

     

     

  • ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಸುಳ್ಳುಗಳೆಗೆ ಅಭಿವೃದ್ಧಿ ಮೂಲಕವೇ ಉತ್ತರ: ಗ್ರಾಮಾಂತರ ಜಿಲ್ಲೆಯಲ್ಲಿ ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಂದೇ ದಿನ ಚಾಲನೆ : ಸಿ.ಎಂ ಸಿದ್ದರಾಮಯ್ಯ

    ದೇವನಹಳ್ಳಿ : ಇಲ್ಲಿಯವರೆಗೆ ಗ್ಯಾರಂಟಿಗಳ ಮೂಲಕ 80 ಸಾವಿರ ಕೋಟಿ ರೂಪಾಯಿಯನ್ನು ಜನರ ಜೇಬಿಗೆ ಹಾಕಿದ್ದೇವೆ,ಬಿಜೆಪಿ ಕನ್ನಡಕದ ಗಾಜುಗಳು ಅವರ ಅಧಿಕಾರಾವಧಿಯ ಕಲೆಗಳಿಂದ ಕೂಡಿದೆ. ಅದಕ್ಕೇ ಅವರು ನೋಡುವ ಕಡೆಯಲ್ಲೆಲ್ಲಾ ಕಲೆಗಳೇ ಕಾಣುತ್ತಿವೆ. ಬಿಜೆಪಿ ತನ್ನ ಕನ್ನಡಕ ಕ್ಲೀನ್ ಮಾಡಿಕೊಂಡರೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾಣುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಗ್ರಾಮಾಂತರ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು ಗ್ರಾಮಾಂತರ ಜಿಲ್ಲೆಯಲ್ಲಿ ಸಾವಿರ ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಒಂದೇ ದಿನ ಚಾಲನೆ ನೀಡಿದ್ದೇವೆ.ಅಭಿವೃದ್ಧಿಗೆ ಹಣ ಇಲ್ಲ ಎನ್ನುವ ಬಿಜೆಪಿ ಪರಿವಾರದ ಸುಳ್ಳುಗಳೆಗೆ ಅಭಿವೃದ್ಧಿ ಮೂಲಕವೇ ಉತ್ತರ ನೀಡುತ್ತಿದ್ದೇವೆ ಎಂದರು.

    ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನಗಳನ್ನು ನೀಡಿ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿದೆ. ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತಲೇ ಇದ್ದೇವೆ. ಅಧಿಕಾರಕ್ಕೆ ಬಂದ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡಿ ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದರು.‌

  • ಕಾಶ್ಮೀರದಲ್ಲಿ ನೆಡೆದಿರುವ ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಬಿಜೆಪಿ ಪಕ್ಷದವರು ನಮ್ಮ ಸರ್ಕಾರದ ವಿರುದ್ಧ ಜನಕ್ರೋಶ ಪ್ರತಿಭಟನೆ ಮಾಡುವ ಬದಲು 11ವರ್ಷಗಳಿಂದ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

     

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಆಯೋಜನೆ ಮಾಡಲಾಗಿದ್ದ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ ಆಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಬಿಜೆಪಿ ಪಕ್ಷದವರು ಸದಾ ಹೇಳ್ತಾರೆ ನಮ್ಮ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ, ಸರ್ಕಾರ ದಿವಾಳಿಯಾಗಿದೆ ಅಂತಾರೆ, ಆದರೆ ನೆನಪಿರಲಿ ಈ ಬಾರಿ 38000ಕೋಟಿ ಹೆಚ್ಚಿನ ಬಜೆಟ್ ಮಂಡನೆ ಮಾಡಿದ್ದೇವೆ. ನಮ್ಮ ಸರ್ಕಾರ ದಿವಾಳಿಯಾಗಿಲ್ಲ, ದಿವಾಳಿಯಾಗಿದ್ದಾರೆ ನೂತನ ಯೋಜನೆಗಳ ಶಂಕುಸ್ಥಾಪನೆ ಮಾಡಲು ಸಾಧ್ಯವೇ ಎಂದರು.

     

     

    ಕಾಶ್ಮೀರದಲ್ಲಿ ನೆಡೆದಿರುವ ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ, ಭಯೋತ್ಪಾದನೆ ಉಗ್ರರ ದಾಳಿಯನ್ನು ನಾವು ಎಂದಿಗೂ ಸಹಿಸಲ್ಲ ಯುದ್ಧದ ಕುರಿತು ನನ್ನ ಹೇಳಿಕೆ ತಿರುಚಲಾಗಿದೆ, ದೇಶದಲ್ಲಿ ಭಯೋತ್ಪಾದಕ ಕೃತ್ಯ ಗಳನ್ನು ಬೇರು ಸಮೇತ ಕೀಳಬೇಕಿದೆ. ದೇಶಕ್ಕೆ ನಾಡಿಗೆ ಧಕ್ಕೆ ಆದರೆ ನಾವು ಸುಮ್ಮನಿರಲ್ಲ, ಇದು ಬುದ್ಧ ಬಸವಣ್ಣನವರ ನಾಡು ನಾವು ಯಾರ ಸುದ್ದಿಗೂ ಹೋಗಲ್ಲ ನಮ್ಮ ತಂಟೆಗೆ ಬಂದ್ರೆ ಸುಮ್ನೆ ಬಿಡೋ ಮತ್ತೆ ಇಲ್ಲ,

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ 1000ಕ್ಕೂ ಅಧಿಕ ವೆಚ್ಚದ ಕಾಮಗಾರಿಗಳ ಶಂಕು ಸ್ಥಾಪನೆ ಮಾಡಿದ್ದೇವೆ ಸ್ಥಳೀಯ ಶಾಸಕರ ಮುಖಂಡರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವೀಯಾಗಿದೆ ಎಂದರು

    ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಚಿವರು ಡಾ. ಎಚ್‌.ಸಿ ಮಹಾದೇವಪ್ಪ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವರು ಜಮೀರ್ ಅಹ್ಮದ್ ಖಾನ್, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್‌ ಮುನಿಯಪ್ಪ, ಕಂದಾಯ ಸಚಿವರು ಕೃಷ್ಣ ಬೈರೇಗೌಡ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರು ಎನ್‌.ಎಸ್ ಬೋಸರಾಜು ಸೇರಿದಂತೆ ಹಲವರು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿದರು.