Blog

  • Doddaballapura : ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನಲೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ಶಾಂತಿಸಭೆ

    ದೊಡ್ಡಬಳ್ಳಾಪುರ : ನಗರದ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಯುಗಾದಿ ಮತ್ತು ರಂಜಾನ್ ಹಬ್ಬದ ಕುರಿತು ಶಾಂತಿ ಸಭೆಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ನೆಡೆಸಲಾಯಿತು.

    ಯುಗಾದಿ ಮತ್ತು ರಂಜಾನ್ ಹಬ್ಬದ ಧಾರ್ಮಿಕ ಆಚರಣೆಯ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳಿದ್ದಲ್ಲಿ ಅನುಮತಿ ಮೇರೆಗೆ ಶಾಂತಿಯುತವಾಗಿ ಆಚರಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಕೆ ಬಾಬಾ ತಿಳಿಸಿದರು.

     

    ವಿವಿಧ ಸಮುದಾಯಗಳ ಮುಖಂಡರುಗಳ ಸಮ್ಮುಖದಲ್ಲಿ ಸಭೆ ನಡೆಸಿ ಯುಗಾದಿ ಮತ್ತು ರಂಜಾನ್ ಹಬ್ಬದ ಧಾರ್ಮಿಕ ಆಚರಣೆಯ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳಿದ್ದಲ್ಲಿ ಅನುಮತಿ ಮೇರೆಗೆ ಶಾಂತಿಯುತವಾಗಿ ಆಚರಿಸಲು ಸೂಚಿಸಲಾಗಿದೆ.

     

    ಧಾರ್ಮಿಕ ವಿಚಾರವಾಗಿ ಪ್ರಚೋದನಾಕಾರಿ ಪೋಸ್ಟ್ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ,ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದರು.

    ಹಾಗೂ ಈ ಸಂದರ್ಭದಲ್ಲಿ ಜೂಜು, ಮಟ್ಕಾ, ಇಸ್ಪೀಟ್ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

     

    ಯುಗಾದಿ ಮತ್ತು ರಂಜಾನ್ ಹಬ್ಬದ ವೇಳೆಯಲ್ಲಿ ಹೆಚ್ಚಿನ ಜನಸಂದನಿ ಇದ್ದು ಸಾರ್ವಜನಿಕರು ತಮ್ಮ ಆಭರಣ ಮತ್ತು ಬೆಲೆ ಬಾಳುವ ವಸ್ತುಗಳ ಕುರಿತು ಹೆಚ್ಚಿನ ಜಾಗೃತೆ ವಹಿಸಬೇಕೆಂದು ಅಧಿಕಾರಿಗಳಿಳು ಸೂಚನೆ ನೀಡಿದರು.

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ನಗರ ಪೊಲೀಸ್ ಠಾಣ ಸಿಬ್ಬಂದಿ ಹಾಜರಿದ್ದರು.

     

     

  • ಕಳಪೆ ಮೂಲಸೌಕರ್ಯ ಹೊಂದಿರುವ ಪ್ಯಾರಾ ಮೆಡಿಕಲ್ ಸಂಸ್ಥೆ ಮುಚ್ಚಲು ಆದೇಶ

    ಕಳಪೆ ಗುಣಮಟ್ಟದ ಪ್ಯಾರಾ-ಮೆಡಿಕಲ್ ಕಾಲೇಜುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಳಪೆ ಮೂಲ ಸೌಕರ್ಯ ಹೊಂದಿರುವ ಸಂಸ್ಥೆಗಳು ಹಾಗೂ ಅಂಗಸಂಸ್ಥೆಗಳನ್ನು ಮುಚ್ಚಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ನಿರ್ದೇಶನ ನೀಡಿದ್ದಾರೆ.

     

    ಮೂಲಸೌಕರ್ಯ ಮತ್ತು ಬೋಧನಾ ಮಾನದಂಡಗಳನ್ನು ಪೂರೈಸಲು ವಿಫಲವಾದ ಸಂಸ್ಥೆಗಳನ್ನು ಕೂಡಲೇ ಮುಚ್ಚುವಂತೆ ಸೂಚನೆ ನೀಡಲಾಗಿದೆ.

     

    ಗುರುವಾರ ವಿಕಾಸಸೌಧದಲ್ಲಿ ನಡೆದ ರಾಜ್ಯ ಪ್ಯಾರಾ-ಮೆಡಿಕಲ್ ಮಂಡಳಿಯ ಪರಿಶೀಲನಾ ಸಭೆಯಲ್ಲಿ ಸಚಿವರು, ಹಲವಾರು ಖಾಸಗಿ ಕಾಲೇಜುಗಳಲ್ಲಿನ ನ್ಯೂನತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

     

    ಅಸಮರ್ಪಕ ಸೌಲಭ್ಯಗಳೊಂದಿಗೆ ಇಕ್ಕಟ್ಟಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜುಗಳಿವೆ. ಒಂದು ಸಂಸ್ಥೆಯು ನೂರಾರು ವಿದ್ಯಾರ್ಥಿಗಳಿಗೆ ಒಂದೇ ಸೂಕ್ಷ್ಮದರ್ಶಕವನ್ನು ನೀಡುತ್ತಿದೆ ಹಾಗೂ ಇನ್ನೊಂದು ಸರಿಯಾದ ಬೆಳಕಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ವರದಿ ನೀಡಿದ್ದಾರೆ.

     

    *ಭಾರಿ ಶುಲ್ಕ ಪಡೆದರೂ ಕಳಪೆ ಬೋಧನೆ*

     

    ಖಾಸಗಿ ಸಂಸ್ಥೆಗಳು ಅನುಮೋದನೆ ಪಡೆಯುವಾಗ ದಾರಿತಪ್ಪಿಸುವ ಮಾಹಿತಿ ನೀಡುತ್ತಿವೆ. ಭಾರಿ ಶುಲ್ಕವನ್ನು ವಿಧಿಸುತ್ತಿದ್ದರೂ ಅನುಮತಿಸಿದ ಗುಣಮಟ್ಟದ ಶಿಕ್ಷಣವನ್ನು ನೀಡಲು ವಿಫಲವಾಗಿವೆ ಎಂದು ಡಾ. ಪಾಟೀಲ್ ತಿಳಿಸಿದ್ದಾರೆ.

     

    ರಾಜ್ಯದ 566 ಪ್ಯಾರಾ-ಮೆಡಿಕಲ್ ಕಾಲೇಜುಗಳಲ್ಲಿ 529 ಖಾಸಗಿಯಾಗಿ ನಡೆಸಲ್ಪಡುತ್ತಿದ್ದು, 2024-25 ಶೈಕ್ಷಣಿಕ ವರ್ಷದಲ್ಲಿ 22,256 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಖಾಸಗಿ ಕಾಲೇಜುಗಳು ಮೂರು ವರ್ಷಗಳ ಕೋರ್ಸ್‌ಗೆ ವಾರ್ಷಿಕವಾಗಿ 20,000 ರೂ. ಶುಲ್ಕ ವಿಧಿಸುತ್ತವೆ, ಸರ್ಕಾರಿ ಸಂಸ್ಥೆಗಳು 8,500 ರೂ. ಶುಲ್ಕ ಪಡೆಯುತ್ತಿವೆ.

     

    ಹತ್ತಕ್ಕೂ ಹೆಚ್ಚು ಕಾಲೇಜುಗಳು ಪ್ಯಾರಾ-ಮೆಡಿಕಲ್ ಮಂಡಳಿಯ ಅನುಮೋದನೆಯಿಲ್ಲದೆ ವಿದ್ಯಾರ್ಥಿಗಳನ್ನು ಇತರ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿರುವುದು ಬಹಿರಂಗವಾಗಿದೆ. ಹಲವಾರು ಸಂಸ್ಥೆಗಳು ದಾಖಲಾದ ಕೋರ್ಸ್‌ಗಳಿಗೆ ಅಗತ್ಯವಾದ ಬೋಧನೆ, ತರಬೇತಿಯನ್ನು ನೀಡುವಲ್ಲಿ ವಿಫಲವಾಗಿರುವುದು ಕಂಡುಬಂದಿದೆ.

     

    “ಯಾವುದೇ ಪರಿಗಣನೆಯಿಲ್ಲದೆ ಅಂತಹ ಕಾಲೇಜುಗಳನ್ನು ಮುಚ್ಚಿ. ನಾವು ಈ ಸಂಸ್ಥೆಗಳಿಗೆ ಕಠಿಣ ಸಂದೇಶವನ್ನು ಕಳುಹಿಸಬೇಕು”. ವಿದ್ಯಾರ್ಥಿಗಳನ್ನು ಉತ್ತಮ ಸಂಸ್ಥೆಗಳಿಗೆ ಸ್ಥಳಾಂತರಿಸಬೇಕು ಎಂದು ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

     

    *ಪ್ಯಾರಾ ಮೆಡಿಕಲ್‌ ಕ್ಷೇತ್ರದಲ್ಲಿ ವಿವಿಧ ತರಬೇತಿ*

     

    ಕರ್ನಾಟಕದಲ್ಲಿ ಪ್ಯಾರಾ-ಮೆಡಿಕಲ್ ಸ್ಟ್ರೀಮ್ ಅಡಿ ವಿವಿಧ ಡಿಪ್ಲೊಮಾ ಕೋರ್ಸ್‌ಗಳು, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ (DMLT), ಡಿಪ್ಲೊಮಾ ಇನ್ ಮೆಡಿಕಲ್ ಇಮೇಜಿಂಗ್ ತಂತ್ರಜ್ಞಾನ (DMIT), ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ (DHI), ಡಿಪ್ಲೊಮಾ ಇನ್ ಮೆಡಿಕಲ್ ರೆಕಾರ್ಡ್ಸ್ ತಂತ್ರಜ್ಞಾನ (DMRT), ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅರಿವಳಿಕೆ ತಂತ್ರಜ್ಞಾನ (DOT & AT), ಡಿಪ್ಲೊಮಾ ಇನ್ ಡಯಾಲಿಸಿಸ್ ತಂತ್ರಜ್ಞಾನ (DDT), ಡಿಪ್ಲೊಮಾ ಇನ್ ಆಪ್ತಾಲ್ಮಿಕ್ ತಂತ್ರಜ್ಞಾನ (DOT), ಡಿಪ್ಲೊಮಾ ಇನ್ ಡೆಂಟಲ್ ಮೆಕ್ಯಾನಿಕ್ಸ್ (DDM) ಮತ್ತು ಡಿಪ್ಲೊಮಾ ಇನ್ ಡೆಂಟಲ್ ಹೈಜೀನ್ (DDH) ತರಬೇತಿ ನೀಡಲಾಗುತ್ತಿದೆ. ಇದರಲ್ಲಿ ಯಶಸ್ವಿಯಾದವರು ಆಸ್ಪತ್ರೆಗಳು, ವೈದ್ಯಕೀಯ ಮತ್ತು ದಂತ ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕ್ಲಿನಿಕಲ್ ಪ್ರಯೋಗಾಲಯಗಳಲ್ಲಿ ಹುದ್ದೆಗಳಿಗೆ ಅರ್ಹರಾಗುತ್ತಾರೆ.

     

    ಪ್ಯಾರಾ-ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವುದು ಮತ್ತು ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಹಾಗೂ ಸೂಕ್ತ ವೃತ್ತಿಜೀವನಕ್ಕೆ ಸರಿಯಾದ ತರಬೇತಿಯನ್ನು ಪಡೆಯುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

    ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್ ಮತ್ತು ಪ್ಯಾರಾ-ವೈದ್ಯಕೀಯ ಮಂಡಳಿಯ ವಿಶೇಷ ಅಧಿಕಾರಿ ಡಾ. ವಿಜಯ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.

     

  • ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ – ಮಹತ್ವದ ತೀರ್ಮಾನ

    ಕೃಷಿಕರ ಹಿತವನ್ನು ಪರಿಗಣಿಸಿ, ಬೆಂಬಲ ಬೆಲೆ ನಿಗದಿ ಕುರಿತ ಸಚಿವ ಸಂಪುಟ ಉಪಸಮಿತಿ ಸಭೆ ವಿಧಾನಸೌಧದಲ್ಲಿ ನಡೆಯಿತು.

    ತೊಗರಿ ಬೆಳೆ ಕುರಿತು ಕೇಂದ್ರ ಸರ್ಕಾರ ನಿಗದಿ ಮಾಡಿರುವ ₹7,550 ಬೆಂಬಲ ಬೆಲೆಯಲ್ಲಿ ₹450 ಹೆಚ್ಚುವರಿ ನೀಡುವ ನಿರ್ಧಾರ ಕೈಗೊಳ್ಳಲಾಯಿತು

    ಭೌಗೋಳಿಕ ಸೂಚ್ಯಂಕ (GI) ಹೊಂದಿರುವ ತೊಗರಿ ಖರೀದಿಗೆ ಅನುಮೋದನೆ ನೀಡಲು ನಿರ್ಧರಿಸಿ ರಾಗಿ ಖರೀದಿ ಮಿತಿಯನ್ನು 20 ಕ್ವಿಂಟಾಲ್ ನಿಂದ 30 ಕ್ವಿಂಟಾಲ್ ಗೆ ವೃದ್ಧಿ ಮಾಡಲಾಯಿತು.

    ಸಭೆಯಲ್ಲಿ ಆಹಾರ ಸಚಿವರು ಸೇರಿದಂತೆ ಹಲವು ಶಾಸಕರು,ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು

  • ಶುದ್ಧ ಸುರಕ್ಷಿತ ನೀರು ಕುಡಿಯುವುದು ಮಾನವನ ಹಕ್ಕು – ನಾಗಭೂಷಣ್

    ಶಿವಮೊಗ್ಗ: ಪ್ರತಿನಿತ್ಯ ಕುಡಿಯಲು ಬಳಸುವ ನೀರು ಶುದ್ಧತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರು ಅವಶ್ಯಕ ಎಂದು ಸಂಪನ್ಮೂಲ ವ್ಯಕ್ತಿ ನಾಗಭೂಷಣ್ ಹೇಳಿದರು.

     

     

    ವಿಶ್ವ ನೀರಿನ ದಿನ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕ್ಲಬ್ ಸದಸ್ಯರಿಗೆ ಆಯೋಜಿಸಿದ್ದ ನೀರು ಮತ್ತು ನೈರ್ಮಲ್ಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಸುರಕ್ಷಿತ ಕುಡಿಯುವ ನೀರು ನೈರ್ಮಲ್ಯ ಆರೋಗ್ಯ ಹಾಗೂ ಮಾನವನ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ.

     

     

    ಕುಡಿಯುವ ನೀರು ನೈರ್ಮಲ್ಯದ ಗುಣಮಟ್ಟವನ್ನು ಇನ್ನು ಸುಧಾರಿಸಬೇಕಿದೆ. ಅಸುರಕ್ಷಿತ ನೀರನ್ನು ಕುಡಿಯುವುದರಿಂದ ಅತಿಸಾರದಂತಹ ಕಾಯಿಲೆಗಳ ಮೂಲಕ ಮನುಷ್ಯನ ಆರೋಗ್ಯ ದುರ್ಬಲಗೊಳಿಸುತ್ತದೆ ಶುದ್ಧ ಸುರಕ್ಷಿತ ನೀರು ಕುಡಿಯುವುದು ಮಾನವನ ಹಕ್ಕು ಎಂದು ತಿಳಿಸಿದರು.

     

    ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಶುದ್ಧ ಕುಡಿಯುವ ನೀರಿನಿಂದ ರೋಗಗಳನ್ನು ತಡೆಗಟ್ಟಬಹುದು. ನೀರು ಮತ್ತು ನೈರ್ಮಲ್ಯದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಜಾಗೃತಿಗಳನ್ನು ಮೂಡಿಸಬೇಕು. ನೀರನ್ನು ಅನಾವಶ್ಯಕವಾಗಿ ಉಪಯೋಗಿಸಬೇಡಿ, ನೀರಿನ ಪ್ರಾಮುಖ್ಯತೆಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ರವಿ ಕೋಟೊಜಿ, ಜಯಶೀಲ ಶೆಟ್ಟಿ, ಬಸವರಾಜ್ ಬಿ, ಅರುಣ್ ಕುಮಾರ್, ರಮಾನಾಥ್ ಗಿರಿಮಾಜಿ, ಎಸ್ ಕೆ ಕುಮಾರ್, ರಮೇಶ, ಸಂತೋಷ್ ಬಿ ಎ, ಚಂದ್ರು ಜೆಪಿ, ಧರ್ಮೇಂದ್ರ ಸಿಂಗ್ ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

  • ಜಿಲ್ಲಾ ಲೇಖಕಿಯರು ಹಾಗೂ ವಾಚಕಿಯರ ಸಂಘದಿಂದ ವಿಶ್ವಮಹಿಳಾ ದಿನಾಚರಣೆ

    ಶಿವಮೊಗ್ಗ : ಜಿಲ್ಲಾ ಲೇಖಕಿಯರು ಹಾಗೂ ವಾಚಕಿಯರ ಸಂಘದ ವತಿಯಿಂದ ಇಂದು ವಿಶ್ವಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

     

    ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ವಿಜಯಾ ಶ್ರೀಧರ್ ಮಾತನಾಡಿದ, ಹೆಸರಾಂತ ಕವಿಗಳಾದ ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್ ರವರ ಕವನಗಳ ವೈಶಿಷ್ಟ್ಯತೆಯನ್ನು ಉದಾಹರಿಸುತ್ತಾ, ಕವನಗಳು ಸರಳ, ಸಹಜ ಹಾಗೂ ಪ್ರಾಸಬದ್ಧವಾಗಿರಬೇಕೆಂದು ಕವನ ರಚನೆಯ ಕುರಿತಾಗಿ ತಿಳಿಸಿದರು.

     

    ಗೌರವಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ತಮಗೆ ಬಾಲ್ಯದಿಂದಲೇ ಕವನ ರಚನೆಯ ಬಗೆಗೆ ಒಲವಿತ್ತು ಎಂದು ತಮ್ಮ ಬಾಲ್ಯದ ಕವನ ರಚನೆಯಲ್ಲಿನ ಆಸಕ್ತಿ ಬಗ್ಗೆ ತಿಳಿಸಿ, ಬಾಲ್ಯದಲ್ಲಿ ಅವರು ಬರೆದ ಸುಂದರ ಕವಿತೆಯೊಂದರ ಕುರಿತು ವಿವರಿಸಿದರು.

     

    ಮುಖ್ಯ ಅತಿಥಿಗಳಾಗಿ ಆಗನಿಸಿದ್ದ ಸುನೀತಾ ರಾವ್ ಮಾತನಾಡಿ, ಮಹಿಳಾ ದಿನಾಚರಣೆ ಪ್ರಾರಂಭವಾದದುದರ ಕುರಿತು ಮಾಹಿತಿ ನೀಡಿದರು. ಹಾಗೂ ಎಲ್ಲಿ ಮಹಿಳಾ ಶೋಷಣೆಯಾದರೂ ಅಲ್ಲಿ ಮಹಿಳೆಯರು ಸಂಘಟಿತರಾಗಬೇಕೆಂಬ ಕಳಕಳಿ ವ್ಯಕ್ತಪಡಿಸಿದರು.

     

    ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಕಾತ್ಯಾಯಿನಿ.ಸಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಮಾಲಾ ರಾಮಚಂದ್ರ ಎಲ್ಲರನ್ನೂ ಸ್ವಾಗತಿಸಿ, ಶ್ರೀರಂಜಿನಿ ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿ, ರುಕ್ಮಿಣಿ ಆನಂದ್ ವಂದಿಸಿದರು.

    ಕವಿಗೋಷ್ಠಿಯಲ್ಲಿ ಪ್ರಮುಖರಾದ ಗುಣ.ಎಸ್, ಇಂದಿರಾ, ಗಾಯತ್ರಿ ರಮೇಶ್, ಡಿ.ಬಿ.ನಾಗರತ್ನಮ್ಮ, ನಾಗರತ್ನಮ್ಮ ಸುಬ್ರಮಣ್ಯ, ಸು. ವಿಜಯಲಕ್ಷ್ಮೀ, ಉಷಾ ನಾಗರಾಜ್, ಜಯಲಕ್ಷ್ಮೀ ಚಂದ್ರಹಾಸ, ಸ್ಮಿತಾ ನಂದೀಶ್, ಜಯಶ್ರೀ ಗಣೇಶ್, ವಿಜಯಲಕ್ಷ್ಮೀ ಪಂಡಿತ್, ತಾರಾ ಪ್ರಸಾದ್, ಮಂಜುಳಾ ಉಮೇಶ್, ಹೇಮಾ, ಆಶಾಲತಾ, ದೇವಿ ನಾಗರತ್ನಮ್ಮ, ಕುಮುದಾ ಸುಶೀಲ್, ರಮಾಶಾಸ್ತ್ರಿ, ಸುಮಾ ಮಂಜುನಾಥ್, ರುಕ್ಮಿಣಿ ಆನಂದ್, ಸ್ತ್ರೀ ಸಂವೇದನೆಯ ಕುರಿತಾಗಿ ಕವನಗಳನ್ನು ವಾಚಿಸಿದರು.

     

  • ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕೇವಲ ಒಂದು ಸಂಸ್ಥೆಯಲ್ಲ, ದೇಶ ಕಾಯುವ ಒಂದು ಶಕ್ತಿ – ಕೊಂಡಜ್ಜಿ ಬ ಷಣ್ಮುಖಪ್ಪ

    ದೊಡ್ಡಬಳ್ಳಾಪುರ : ಸೌಟ್ಸ್ ಮತ್ತು ಗೈಡ್ಸ್ ಕಾರ್ಯ ವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸಲು ಈ ತರಬೇತಿ ಸಹಕಾರಿಯಾಗಲಿದೆ, ತರಬೇತಿಯಲ್ಲಿ ಕಲಿತ ವಿಚಾರಗಳನ್ನು ತಮಗೆ ಕಲ್ಪಿಸಿದ ಕ್ಷೇತ್ರಗಳಲ್ಲಿ ಬಳಕೆ ಮಾಡುವ ಮೂಲಕ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಭಾರತ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷ ಕೊಂಡಜ್ಜಿ ಬ ಷಣ್ಮುಖಪ್ಪ ತಿಳಿಸಿದರು.

    ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ತಾಲ್ಲೂಕಿನ ಅನಿಬೆಸೆಂಟ್ ಸೌಟ್ಸ್ ಮತ್ತು ಗೈಡ್ಸ್, ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯ ಮಟ್ಟದ ಆಯುಕ್ತರುಗಳ ತರಬೇತಿ ಶಿಬಿರ, ಅಗ್ರಗ್ರಾಮಿತ್ವ,ಅಂದಾಜು ಮತ್ತು ತರಬೇತಿ ಸಲಹೆಗಾರರ ತರಬೇತಿ ಶಿಬಿರದಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು

    1951ರಲ್ಲಿ ನನ್ನ ತಂದೆ ಸ್ಕೌಟ್ ಆಗಿ ಸೇವೆ ಸಲ್ಲಿಸಿದ್ದರು ಹಾಗಾಗಿ ನಾನು ಹುಟ್ಟುತಲೇ ಸ್ಕೌಟ್ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದರು. ನಾನು ತರಬೇತಿ ಪಡೆದು 50ವರ್ಷಗಳಾಗಿವೆ ನಿರಂತರ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಇಂದಿನ ಸ್ಕೌಟ್ ಅಂಡ್ ಗೈಡ್ಸ್ ಕೇವಲ ಒಬ್ಬರ ಶ್ರಮವಲ್ಲ ಇದು ಶಿಬಿರದಲ್ಲಿ ತರಬೇತಿ ಪಡೆದು ಶ್ರಮಿಸಿದ ಪ್ರತಿಯೊಬ್ಬರ ಸೇವೆಯ ಫಲ ಇದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕರೆದೋಯ್ಯಲು ನಿಮ್ಮಿಂದ ಮಾತ್ರ ಸಾಧ್ಯ ಹಾಗಾಗಿ ನಿರಂತರ ಪ್ರಯತ್ನ, ಪ್ರಾಮಾಣಿಕ ಶ್ರಮ ನಿಮ್ಮದಾಗಲಿ ಎಂದರು.

    ತರಬೇತುದಾರ ಮೊದಲು ತರಬೇತಿ ಸ್ಥಳಕ್ಕೆ ಭೇಟಿಕೋಟ್ಟು ತರಬೇತಿ ಪಡೆಯಲು ಬರುವ ಶಿಬಿರಾರ್ಥಿಗಳ ಸೌಲಭ್ಯ ಪರೀಕ್ಷಿಸುವುದು ಅಗತ್ಯ, ತರಬೇತುದಾರ ವಿಷಯವನ್ನು ಶಿಬಿರಾರ್ಥಿಗಳ ಮನಮುಟ್ಟುವಂತೆ ತಿಳಿಸುವುದು ಮುಖ್ಯವಾಗುತ್ತದೆ ಎಂದರು.

    ಸಮಾರೋಪ ಸಮಾರಂಭದಲ್ಲಿ ರಾಜ್ಯ ತರಬೇತಿ ಆಯುಕ್ತರಾದ ನಾಗೇಶ್ ಆರ್ ಶಿವಪೂರ್ , ರಾಜ್ಯ ಆಯುಕ್ತರಾದ ಸಿ.ಎಸ್ ರೆಡ್ಡಿ,ಜಿಮ್ಮಿ ಸಿಕ್ಖೇರಾ, ಎಲ್.ಟಿ (ಸೌಟ್), ಹೆಚ್.ಬಿ ಭರಶೆಟ್ಟಿ ಎಲ್.ಟಿ (ಸೌಟ್), ರಾಜ್ಯ ಆಯುಕ್ತರಾದ ಬಿ.ವಿ ರಾಮಲತಾ (ಗೈಡ್),ಗೀತಾ ನಟರಾಜ್‌,ರಾಜ್ಯ ಜಂಟಿ ಕಾರ್ಯದರ್ಶಿ ಕೃಪಾ ವಿಜಯ್,ಜಿಲ್ಲಾ ಸಂಘಟಕ ವಿಶ್ವನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

     

     

     

  • ಪ್ರತಿ ತಿಂಗಳು 11ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ನ್ಯಾಯಬೆಲೆ ಅಂಗಡಿಗಳು ಬಾಗಿಲು ತೆರೆಯುವಂತೆ ಆದೇಶವಿದ್ದರೂ ತಾಲ್ಲೂಕಿನಲ್ಲಿ ನಿಯಮದ ಉಲ್ಲಂಘನೆ – ಚಿದಾನಂದ್

    ದೊಡ್ಡಬಳ್ಳಾಪುರ : ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮ ಅನುಸಾರ ಸಮಯ ಪಾಲನೆ ಮಾಡದೇ ಇರುವುದರಿಂದ ಪಡಿತರ ಚೀಟಿದಾರರಿಗೆ ತೀವ್ರ ತೊಂದರೆಯಾಗುತ್ತಿದ್ದು ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಯುವ ಸಂಚಲನ ವತಿಯಿಂದ ಹೋರಾಟ ಕೈಗೊಳ್ಳಲಾಗುವುದು ಎಂದು ಸಂಘಟನೆಯ ಮುಖಂಡ ಚಿದಾನಂದ್ ತಿಳಿಸಿದರು

     

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ದೊಡ್ಡಬಳ್ಳಾಪುರ ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಯಮ ಅನುಸಾರ ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತುಪಡಿಸಿ ಪ್ರತಿ ಮಾಹೆ 11ನೇ ತಾರೀಕಿನಿಂದ ತಿಂಗಳ ಕೊನೆಯವರೆಗೆ ಬಾಗಿಲು ತೆರೆಯದ ಕಾರಣ ಅಂದಾಜು 70,000 ಪಡಿತರ ಚೀಟಿದಾರರು. ಸುಮಾರು 2.50.000 ಫಲಾನುಭವಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಬಹು ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಮಹಿಳೆಯಾರಿಗೆ ದಿನಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

     

    ತಾಲ್ಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸದೆ ಇರುವುದು ಆಹಾರ ಇಲಾಖೆಯ ಅಂಕಿಅಂಶಗಳಲ್ಲಿಯೇ ಇದ್ದರೂ,ಈ ಬಗ್ಗೆ ಕಳೆದ ಎರಡು ವರ್ಷದಿಂದ ನಿರಂತರವಾಗಿ ಸಂಬಂಧಪಟ್ಟ ಆಹಾರ ಇಲಾಖೆಯ ಅಧಿಕಾರಿಗಳಿಗೆ ಲಿಖಿತವಾಗಿ ಹಾಗೂ ಮೌಕಿಕವಾಗಿ ಅನೇಕ ಬಾರಿ ಮನವಿ ನೀಡಿದರೂ, ಹೋರಾಟ ಮಾಡಿದ್ದರೂ, ಇದುವರೆಗೂ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆ ಹರಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

     

    ಈ ಸಮಸ್ಯೆಯನ್ನು ಶೀಘ್ರವೇ ಬಗೆ ಹರಿಸದೆ ಇದ್ದಲ್ಲಿ ನಮ್ಮ ಹೋರಾಟವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ತಿಳಿಸಿದ್ದಾರೆ.

    ಸುದ್ದಿಗೊಷ್ಟಿಯಲ್ಲಿ ಯುವ ಸಂಚಲನ ಸಂಘಟನೆಯ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.

  • ಒತ್ತುವರಿಯಾಗಿರುವ ಸೋಮೇಶ್ವರ ಕುಂಟೆಯನ್ನು ತೆರವು ಗೊಳಿಸಿ ಪುನಸ್ಚೇತನ ಗೊಳಿಸಿ – ಬಿ. ಏಸ್. ಚಂದ್ರಶೇಖರ್

    ದೊಡ್ಡಬಳ್ಳಾಪುರ : ನಗರದ ಅಂಚಿಗಿರುವ ಕಸಬಾ ಹೋಬಳಿ ಗಂಗಾಧರಪುರ ಸರ್ವೇ ನಂಬರ್ 17ರಲ್ಲಿ ಎರಡು ಎಕರೆ ನಾಲ್ಕು ಗುಂಟೆ ಜಾಗ ಸೋಮೇಶ್ವರ ಕುಂಟೆ ಎಂದು ಸರ್ಕಾರಿ ದಾಖಲೆಗಳಲ್ಲಿ ನಮೂದಾಗಿದೆ. ಪ್ರಸ್ತುತ ಕುಂಟೆ ಜಾಗ ಕಸಕಡ್ಡಿಗಳಿಂದ ತುಂಬಿದ್ದು ಇದನ್ನು ಕುಂಟೆಯಾಗಿ ಉಳಿಸಿ ಅಭಿವೃದ್ಧಿ ಗೊಳಿಸಬೇಕೆಂದು ಕರವೇ ಕನ್ನಡಿಗರ ಬಣದ ಸ್ಥಾಪಕ ಅಧ್ಯಕ್ಷ ಬಿ. ಏಸ್. ಚಂದ್ರಶೇಖರ್ ಹೇಳಿದ್ದಾರೆ.

     

     

    ನಗರದ ಪ್ರವಾಸಿ ಮಂದಿರದಲ್ಲಿ ಕರವೇ ಕನ್ನಡಿಗರ ಬಣದಿಂದ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಚಂದ್ರಶೇಖರ್ ಮಾತನಾಡಿ ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಗಂಗಾಧರ ಪುರ ಸರ್ವೇ ನಂಬರ್ 17ರಲ್ಲಿ ಎರಡು ಎಕರೆ ನಾಲ್ಕು ಗುಂಟೆ ಜಾಗವಿದ್ದು ಇದು ಸ್ವಯಂಬುವೇಶ್ವರ ದೇವಾಲಯ ಸಮೀಪವಿದೆ. ಆದರೆ ಪ್ರಸ್ತುತ ಪಹಣಿಯಲ್ಲಿ ಎರಡು ಗುಂಟೆ ಚಿಲ್ಲರೆ ವಿಸ್ತೀರ್ಣದ ಬದಲಾಗಿ 0.00ನಮೂದಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಹಲವು ವರ್ಷಗಳ ಹಿಂದೆ ಇದಕ್ಕೆ ಸಂಬಂದಿಸಿದ ಜಾಗದಲ್ಲಿಬಡವರೊಬ್ಬರು ಮನೆಯನ್ನು ಕಟ್ಟಿದ್ದರು. ಅದನ್ನು ಅಕ್ರಮವೆಂದು ತಾಲೂಕು ಆಡಳಿತ ಮನೆಯನ್ನು ಕೆಡವಿದ್ದು ಇತಿಹಾಸ. ಎರಡು ಎಕರೆ ಚಿಲ್ಲರೆ ವಿಸ್ತೀರ್ಣದ ಜಾಗವನ್ನು ಬದಲಾದ ಪಹಣಿಯಲ್ಲಿ 0.00 ಎಂದು ನಮೂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಹಿಂದೆ ಅಕ್ರಮವೆಂದು ಬಡವರ ಮನೆಯನ್ನು ಕೆಡವಿದ್ದ ತಾಲೂಕು ಆಡಳಿತ ಸದರಿ ಜಾಗದಲ್ಲಿ ಕೆಲವು ಬಲಾಡ್ಯರು ಒತ್ತುವರಿ ಮಾಡಿಕೊಂಡಿದ್ದರೂ ಸಹ ತಾಲೂಕು ಆಡಳಿತ ಗಮನ ಹರಿಸದಿರುವುದು ಸಖೆದಾಶ್ಚರ್ಯ ಮೂಡಿಸಿದೆ.ಇದಕ್ಕೆ ಸಂಬಂಧಿಸಿದಂತೆ ನಮ್ಮ ಸಂಘಟನೆ ವತಿಯಿಂದ ಶಾಸಕರು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

     

     

    ಪ್ರಸ್ತುತ ವಾತಾವರಣದಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿರುವುದು ವಾಸ್ತವ. ಅದರಲ್ಲೂ ದಶಕಗಳ ಹಿಂದೆ ಸದಾ ನೀರಿನಿಂದ ತುಂಬಿರುತ್ತಿದ್ದ ಸೋಮೇಶ್ವರ ಕಲ್ಯಾಣಿಗೆ ಜಲದ ಸೆಲೆಯಾಗಿದ್ದ ಕುಂಟೆಯನ್ನು ಪುನರುಥಾನ ಗೊಳಿಸುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗಿತ್ತದೆ. ಜೊತೆಗೆ ಪರಿಸರಕ್ಕೆ ಕೊಡುಗೆಯಾಗುತ್ತದೆ, ಅಲ್ಲದೆ ಕಸದ ತ್ಯಾಜ್ಯಗಳಿಂದ ತುಂಬಿರುವ ಕುಂಟೆಯ ಹಳೆಯ ಸರ್ಕಾರಿ ದಾಖಲೆಗಳಂತೆ ಎರಡು ಎಕರೆ ನಾಲ್ಕು ಗುಂಟೆ ಜಾಗವನ್ನು ಸ್ವಚ್ಚ ಗೊಳಿಸಿ ಗಿಡ ಮರ ನೆಟ್ಟು ನವಿಕರಿಸುವುದರಿಂದ ಆಕರ್ಷಣಿಯವಾಗಿ ನಗರದ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಆಸಕ್ತಿ ಮೂಡಲು ಕಾರಣವಾಗುತ್ತದೆ. ಈಗ ನಮ್ಮ ನಗರದ ಮಧ್ಯಭಾಗದಲ್ಲಿರುವ ಸೋಮೇಶ್ವರ ಹೆಸರಿನ ಕುಂಟೆಯನ್ನು ಯಥಾವತ್ತಾಗಿ ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದೇವೆ ಎಂದ ಚಂದ್ರು ಈ ಹಿಂದೆ ಅಧಿಕಾರಿಗಳು ಗಂಗಾಧರ ಪುರ ಸರ್ವೇ ನಂಬರ್ 111ರ ಪೊಲೀಸ್ ವಸತಿ ಜಾಗವನ್ನು ಭೂ ಗಳ್ಳರಿಂದ ರಕ್ಷಿಸಿ ಮತ್ತೆ ಪೊಲೀಸ್ ಇಲಾಖೆ ಹೆಸರಿಗೆ ಆಗುವುದಕ್ಕೆ ನಮ್ಮೊಂದಿಗೆ ಸಹಕರಿಸಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿಗಳಾದ ಶಿವಶಂಕರ್, ಉಪವಿಭಾಗಾದಿ ಕಾರಿಗಳಾದ ದುರ್ಗಾಶ್ರೀ, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಪೌರಯುಕ್ತರಾದ ಕಾರ್ತಿಕೇಶ್ವರ್ ರವರ ಪಾತ್ರ ಹಾಗೂ ಶ್ರಮ ಅಪಾರವಾದುದು. ಇದಕ್ಕಾಗಿ ನಮ್ಮ ಸಂಘಟನೆ ಅವರಿಗೆ ಅಭಾರಿಯಾಗಿರುತ್ತದೆ. ಈಗ ನಶಿಸಿರುವ ಸೋಮೇಶ್ವರ ಕುಂಟೆಯನ್ನು ಉಳಿಸಲು ಈ ಬಾರಿಯೂ ನಮಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ವಿದೆ ಎಂದು ಚಂದ್ರಶೇಖರ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಆರ್. ರಮೇಶ್, ಜಿಲ್ಲಾಧ್ಯಕ್ಷ ಪುನೀತ್, ಕಾರ್ಯದರ್ಶಿ ತಾಯೆಗೌಡ, ವಾಸು, ತಾಲೂಕು ಅಧ್ಯಕ್ಷ ವಿನಯ್ ಕುಮಾರ್, ಉಪಾಧ್ಯಕ್ಷ ಅಶ್ವಥ್ ನಾರಾಯಣ್, ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಮಿಕ ಘಟಕದ ಶಿವಶಂಕರ ರೆಡ್ಡಿ, ಜಿಲ್ಲಾ ಯುವಘಟಕದ ಅಧ್ಯಕ್ಷ ರಂಜಿತ್ ಗೌಡ, ಮುಖಂಡರಾದ ಪ್ರಶಾಂತ್, ಗವಿಸ್ವಾಮಿ ಮುಂತಾದವರು ಹಾಜರಿದ್ದರು.

  • 50ನಿರಾಶ್ರಿತ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಯುಗಾದಿ ಆಚರಣೆ

    ದೊಡ್ಡಬಳ್ಳಾಪುರ : “ನಮ್ಮ ಚಾಲಕ ವೃತ್ತಿ” ವಾಕ್ಯದಡಿ ನಿರಂತರ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಚಾಲಕರನ್ನು ಗೌರವಿಸಿನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ನಿರಾಶ್ರಿತ 50 ಕಡುಬಡವ ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ಗಳನ್ನು SBI ಸಿಬ್ಬಂದಿ ಹೇಮಂತ್ ಕುಮಾರ್ ವಿತರಣೆ ಮಾಡಿದರು.

    ತಾಲ್ಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ನಿರಂತರವಾಗಿ ನೆಡೆಯುತ್ತಿರುವ 1829 ದಿನಗಳ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ನಿಷ್ಠಾವಂತ ಚಾಲಕರನ್ನು ಸ್ಮರಿಸುವ ನಿಟ್ಟಿನಲ್ಲಿ ಸದಾ ಸಮಾಜಮುಖಿ ಕಾರ್ಯಗಳನ್ನು ನಿರಂತರ ಮಾಡಿಕೊಂಡು ಬರುತ್ತಿದ್ದೇನೆ, ಅಂತೆಯೇ ಇಂದು ಮಲ್ಲೇಶ್ ರವರ ಸಹಕಾರದೊಂದಿಗೆ 50ಕುಟುಂಬಗಳಿಗೆ ಉಚಿತ ದಿನಸಿ ಕಿಟ್ ವಿತರಣೆ ಮಾಡಿದ್ದು, ಮುಂದೆ ಮತ್ತಷ್ಟು ಸೇವೆ ಸಲ್ಲಿಸಲು ತೀರ್ಮಾನಿಸಿದ್ದೇವೆ ಎಂದರು

     

    ಮುಖಂಡರಾದ ಹೂವಿನ ನರಸಿಂಹಯ್ಯ ಮಾತನಾಡಿ ಅಗತ್ಯ ದಿನಸಿ ವಿತರಣೆ ಮಾಡುವ ಮೂಲಕ ಹೇಮಂತ್ ಕುಮಾರ್ ರವರು ಯುಗಾದಿ ಹಬ್ಬದಂದು ನಿರಾಶ್ರಿತರಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದರೇ ತಪ್ಪಾಗಲಾರದು, ಇದು ಸಾಮಾನ್ಯ ವಿಷಯವಲ್ಲ, ಮಲ್ಲೇಶ್ ರವರು ನೆಡೆಸುತ್ತಿರುವ ನಿರಂತರ ಅನ್ನದಾಸೋಹಕ್ಕೆ ಸಾಥ್ ನೀಡುವ ಮೂಲಕ ಈ ಬಾರಿಯ ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸಿದರು.

    ಆಟೋ ಮಿತ್ರ ಗಂಗರಾಜು ಮಾತನಾಡಿ ಈ ಬಾರಿಯ ಯುಗಾದಿ ಹಬ್ಬ ವಿಶೇಷವಾಗಿ ದಿನಸಿ ಕಿಟ್ ಕೊಡುವ ಮೂಲಕ ಆಚರಿಸಲಾಗಿದೆ, ಕಾರ್ಯಕ್ರಮದ ಮೂಲಕ ಹಲವು ಕುಟುಂಬಗಳ ಸಂತಸಕ್ಕೆ ಕಾರಣರಾದ ಹೇಮಂತ್ ಕುಮಾರ್, ಮಲ್ಲೇಶ್, ಹಾಗೂ ನರಸಿಂಹಯ್ಯ ಮತ್ತು ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಾನಿಗಳ ನರವಿನಿಂದ ನಿರಂತರವಾಗಿ 1829 ದಿನಗಳ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಇಂದು ಸರಿಸುಮಾರು 50 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ . ಕಾರ್ಯಕ್ರಮಕ್ಕೆ ಸಹಾಯ ಹಸ್ತ ನೀಡಿದ ದಾನಿಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದರು.

    ಕಾರ್ಯಕ್ರಮದಲ್ಲಿ ನಿರಂತರ ಅನ್ನದಾಸೋಹ ಸಮಿತಿ ಸದಸ್ಯರು, ಚಾಲಕರು ಉಪಸ್ಥಿತರಿದ್ದರು.

  • ಜಿಲ್ಲಾಡಳಿತ ಭವನದಲ್ಲಿ ಅಗ್ನಿ ಬನ್ನಿರಾಯ ಜಯಂತಿ ಆಚರಣೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಅಗ್ನಿ ಬನ್ನಿರಾಯ’ ಜಯಂತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಆಚರಿಸಲಾಯಿತು.

     

    ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್ ಅವರು ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

     

    ಅಗ್ನಿ ಬನ್ನಿರಾಯರು ತಿಗಳ ಸಮುದಾಯದಲ್ಲಿ ಬಹಳ ಶ್ರಮ ಜೀವಿಗಳು ಅವರ ಶ್ರಮಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 28 ರಂದು ತಿಗಳರ ದೇವರಾದ ಅಗ್ನಿ ಬನ್ನಿರಾಯ ಜಯಂತಿಯನ್ನು ಆಚರಿಸಲಾಗುತ್ತದೆ.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನಾ, ಆಪ್ತ ಸಹಾಯಕ ಅಭಿಷೇಕ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.