Blog

  • ನಮ್ಮ ಗ್ಯಾರಂಟಿಗಳಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ: ಸಿಎಂ ಸಿದ್ದರಾಮಯ್ಯ

    ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

     

    ಈ ಕುರಿತು ಮಾತನಾಡುತ್ತಾ ಒಂದು ಅಧ್ಯಯನ ವರದಿಯಂತೆ ನಮ್ಮ ದೇಶದ 100 ಕೋಟಿ ದೇಶದ ಜನರಿಗೆ ಕೊಂಡುಕೊಳ್ಳುವ ಆಯ್ಕೆಯಿಲ್ಲ, ಶಕ್ತಿ ಇಲ್ಲ.ಮೊದಲ ವರ್ಗದಲ್ಲಿ 14 ಕೋಟಿ ಜನರಿದ್ದು, ಅವರ ಸರಾಸರಿ ವಾರ್ಷಿಕ ಆದಾಯ 15 ಸಾವಿರ ಡಾಲರ್ (13 ಲಕ್ಷ ರೂ.), 7 ಕೋಟಿ ಕುಟುಂಬಗಳ ತಲಾ ಆದಾಯ 3 ಸಾವಿರ ಡಾಲರ್ (2.62 ಲಕ್ಷ) 20.5 ಕೊಟಿ ಕುಟುಂಬಗಳ 100 ಕೋಟಿ ಜನರು ತಲಾ ಆದಾಯ 1 ಸಾವಿರ ಡಾಲರ್ (87 ಸಾವಿರ , ಅಂದರೆ ತಿಂಗಳಗೆ ಸುಮಾರು 7 ಸಾವಿರ), ಈ ವರ್ಗದವರಲ್ಲಿ ತಮ್ಮ ಅಗತ್ಯಗಳನ್ನು ಪೂರೈಸಲು ಹಣವಿರುವುದಿಲ್ಲ.

     

    143 ಕೋಟಿ ಜನ ಮುಖ್ಯವಾಹಿನಿಗೆ ತರುವ ವ್ಯವಸ್ಥೆಯೇನು ? ಈ ದಿಸೆಯಲ್ಲಿ ಅಂತಹ ಜನರಿಗೆ ಆರ್ಥಿಕ ಸಾಮಾಜಿಕ ಸಮಾನತೆ ತರಲು ನಮ್ಮ ಸರ್ಕಾರ ಮಾಡಿರುವ ಪ್ರಮಾಣಿಕ ಪ್ರಯತ್ನ ಈ ಗ್ಯಾರಂಟಿಗಳು.United Nations ನ General Assembly ಅಧ್ಯಕ್ಷರಾದ ಕ್ಯಾಮರೂನ್ ದೇಶದ ಪಿಲೆಮಾನ್ ಯಾಂಗ್ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿದ್ದಾರೆ.

     

    05-03-2025 ರಂದು ಕೇರಳ ಸರ್ಕಾರದ ಅಧಿಕಾರಿಗಳ ತಂಡ ಹಾಗೂ ಇತರೆ ದಿನಾಂಕಗಳಲ್ಲಿ ಆಂಧ್ರಪ್ರದೇಶದ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಅಧ್ಯಯನಕ್ಕೆ ರಾಜ್ಯಕ್ಕೆ ಆಗಮಿಸಿದ್ದರು. ಆ ತಂಡಗಳಿಗೆ ಗ್ಯಾರಂಟಿಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಯಿತು.

     

    ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ Indian Institute of Pubic Administration ಸಂಸ್ಥೆಯ ಅಧ್ಯಕ್ಷರು , ಕೇಂದ್ರಸಚಿವರಾಗಿದ್ದಾರೆ. ಉಪರಾಷ್ಟ್ರಪತಿಗಳ ಜಗದೀಪ್ ಧನಕರ್ ಅವರು ಅಧ್ಯಕ್ಷರಾಗಿ , ರಾಜ್ಯದ ಗ್ಯಾರಂಟಿಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

    ವಿರೋಧಪಕ್ಷದವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದಾರೆ. ಸರ್ಕಾರದಲ್ಲಿ ಗ್ಯಾರಂಟಿಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಫೆಬ್ರವರಿ ಅಂತ್ಯದಲ್ಲಿ 76509 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2024-25 ರಲ್ಲಿ 52009 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಇಡಲಾಗಿದ್ದು, ಅದರಲ್ಲಿ 41560 ಕೋಟಿ ವೆಚ್ಚ ಮಾಡಲಾಗಿದೆ.

    ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಅಧಿಕೃತ ವೆಬ್ ಸೈಟ್ WWW.VIJAYAMITRA.COM ಬಳಸಿ. ಹಾಗೂ ಈ ಲಿಂಕ್ ಬಳಸುವ ಮೂಲಕ https://chat.whatsapp.com/If9mzU5oyvwJoAt1aZdd19 ನಮ್ಮ ವಾಟ್ಸ್ಆಪ್ ಗ್ರೂಪ್ ಅನ್ನು ಕೂಡಲೇ ಸೇರಿ, ಮತ್ತು ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ :6361955699 

    ಅದರಲ್ಲಿ ಗೃಹ ಲಕ್ಷ್ಮಿ 28608 ಕೋಟಿ – ಖರ್ಚು 22611 ಕೋಟಿ , ಗೃಹಜ್ಯೋತಿ – 9657 ಕೋಟಿ –ಖರ್ಚು 8389 ಕೋಟಿ ,ಅನ್ನಭಾಗ್ಯ 8079 ಕೊಟಿ – ಖರ್ಚು 5590 ಕೋಟಿ ಶಕ್ತಿ ಯೋಜನೆಗೆ 5015 ಕೋಟಿಗಳಲ್ಲಿ -4821 ಕೋಟಿ , ಯುವನಿಧಿ 650 ಕೋಟಿ- ವೆಚ್ಚ 240 ಕೋಟಿ , ಒಟ್ಟು 52009 ರಲ್ಲಿ 41650 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯದ 1.26 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಅನ್ನಭಾಗ್ಯದ ಫಲಾನುಭವಿಗಳು , 1.60 ಕೋಟಿ ಕುಟುಂಬದ ಗೃಹಜ್ಯೋತಿಯಿಂದ ಲಾಭಪಡೆಡಿದ್ದಾರೆ ಎಂದು ತಿಳಿಸಿದ್ದಾರೆ.

     

  • ಮಾ.22ರ ಕರ್ನಾಟಕ ಬಂದ್ ಕುರಿತು ವಿವಿಧ ಕನ್ನಡ ಪರ ಸಂಘಟನೆಗಳು ಚರ್ಚೆ : ಬಂದ್ ಕೈ ಬಿಡಲು ಒಮ್ಮತದ ನಿರ್ಧಾರ

    ದೊಡ್ಡಬಳ್ಳಾಪುರ : ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯುಗಾದಿ ಹಬ್ಬ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಬಹಳಷ್ಟು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕಾರಣ ಬಂದ್ ಕೈ ಬಿಡಲು ನಿರ್ಧಾರ ಮಾಡಲಾಗಿದೆ

     

    ನಗರದ ಕನ್ನಡ ಜಾಗೃತ ಭವನದಲ್ಲಿ ನೆಡೆದ ಸಭೆಯಲ್ಲಿ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಮಾರ್ಚ್ 22ರ ಶನಿವಾರದಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ನೀಡಿರುವ ಬಂದ್ ಕುರಿತು ಚರ್ಚಿಸಿದರು.

     

    ನಾಡು ನುಡಿ ವಿಚಾರವಾಗಿ ನಮ್ಮ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂಘ ಸಂಸ್ಥೆಗಳು ಹಿಂಜರಿದ ಉದಾಹರಣೆ ಎಂದಿಗೂ ಇಲ್ಲ, ಆದರೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 21ರಿಂದ ಆರಂಭವಾಗಲಿದ್ದು , ನಾವು ಬಂದ್ ಗೆ ಕರೆ ನೀಡಿದರೆ, ಶಾಲಾ ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗುತ್ತದೆ ಅಲ್ಲದೇ ಪರೀಕ್ಷೆ ಕೇಂದ್ರಗಳಿಗೆ ಮಕ್ಕಳು ತೆರಳಲು ಕಷ್ಟವಾಗುತ್ತದೆ ಜೊತೆಗೆ ನಮ್ಮ ದೊಡ್ಡಬಳ್ಳಾಪುರ ಜನತೆ ಬಹುತೇಕ ನೇಕಾರಿಕಾ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ,ಯುಗಾದಿ ಹಬ್ಬದ ಸಂದರ್ಭದಲ್ಲಿ ಬಂದ್ ಮಾಡುವುದರಿಂದ ನೇಕಾರಿಕೆಯ ಮೇಲೆ ಪೆಟ್ಟು ಬೀಳುತ್ತದೆ ಅಲ್ಲದೇ ಸ್ಥಳೀಯ ವ್ಯವಹಾರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆಯೆಂದು ಚರ್ಚೆಯಲ್ಲಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಹಾಗಾಗಿ ಸರ್ವ ಸಂಘಟನೆಗಳ ಮುಖಂಡರು, ಪ್ರಮುಖರು ಒಮ್ಮತದಿಂದ ಮಾರ್ಚ್ 22ರಂದು ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಾಂಕೇತಿಕವಾಗಿ ಘೋಷಣೆ ಕೂಗುವ ಮೂಲಕ ಕರ್ನಾಟಕ ಬಂದ್ ಕೈ ಬಿಡಲು ನಿರ್ಧಾರ ಮಾಡಿದರು.

    ಸಭೆಯಲ್ಲಿ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರಮುಖರು ಹಾಜರಿದ್ದರು.

     

  • ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ : ಮುಖ್ಯ ಪರೀಕ್ಷೆಗೆ ಸುಗಮವಾಗಿ ನೆಡೆಸಲು ಸಕಲ ಸಿದ್ಧತೆ – ಸಯೀದಾ ಅನೀಸ್ ಮುಜಾವರ

    ದೊಡ್ಡಬಳ್ಳಾಪುರ : 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೆ ಸುಗಮವಾಗಿ ನೆಡೆಸಲು ಬೇಕಿರುವ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಅನೀಸ್ ಮುಜಾವರ ತಿಳಿಸಿದ್ದಾರೆ.

     

    ಈ ಕುರಿತು ಮಾತನಾಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ಗುರ್ತಿಸಿದ್ದು ಪರೀಕ್ಷೆಗೆ ಸಕಲ ಸಿದ್ಧತೆಯನ್ನು ಮಾಡಿ ಕೊಳ್ಳಲಾಗಿದೆ. ನಗರ ವ್ಯಾಪ್ತಿ-05 ಗ್ರಾಮೀಣ-09 ಕೇಂದ್ರಗಳನ್ನು ಮಾಡಲಾಗಿದೆ.

    ತಾಲ್ಲೂಕಿನಲ್ಲಿ ಒಟ್ಟು 67 ಪ್ರೌಢಶಾಲೆಗಳಿದ್ದು ಅದರಲ್ಲಿ ಸರ್ಕಾರಿ (17)ಇತರೆ ಸರ್ಕಾರಿ(04) ಅನುದಾನಿತ(12) ಮತ್ತು ಅನುದಾನರಹಿತ(34) ಶಾಲೆಗಳಿಂದ 3800(ಗಂಡು-1921 ಹೆಣ್ಣು-1879) ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಹೊಸದಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುತ್ತಾರೆ.

     

    ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಖಾಸಗಿಯಾಗಿ ಒಟ್ಟು -44 (ಗಂಡು-24 ಹೆಣ್ಣು-20) ಹಾಗೂ ಪುನಾವರ್ತಿತ ವಿದ್ಯಾರ್ಥಿಗಳು -99 (ಗಂಡು-75 ಹೆಣ್ಣು-24)

     

    ಒಟ್ಟಾರೆ ತಾಲ್ಲೂಕಿನಲ್ಲಿ ಗಂಡು-2020 ಹೆಣ್ಣು- 1923 ಸೇರಿದಂತೆ ಒಟ್ಟು-3943 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆಯಲಿದ್ದಾರೆ.

     

    ವಿಶೇಷವಾಗಿ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲಾ 14 ಕೇಂದ್ರಗಳಲ್ಲಿ ಸಿಸಿಟಿವಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಜಿಲ್ಲಾ ಪಂಚಾಯತ್ ಸಿ ಇ ಓ ಕಚೇರಿಯಲ್ಲಿನ ಇಯಂತ್ರಣ ಕೊಠಡಿಯಿಂದ ನಿಯಂತ್ರಿಸಲಾಗುತ್ತಿದೆ.ಪರೀಕ್ಷೆ ನಡೆಯುವ ಕೇಂದ್ರದ 200ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.ಜೊತೆಗೆ ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಪರೀಕ್ಷಾ ದಿನಗಳಂದು ಬೆಳಿಗ್ಗೆ 9.00 ರಿಂದ ಮದ್ಯಾಹ್ನ 3.00 ಗಂಟೆಯವರೆಗೆ ಯಾವುದೇ ರೀತಿಯ ಎಸ್.ಟಿ.ಡಿ.ಜೆರಾಕ್ಸ್ ಟೈಪಿಂಗ್ ಮುಂತಾದವುಗಳನ್ನು ತೆರೆಯಲು ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಿಗೆ ಅನಧಿಕೃತ ವ್ಯಕ್ತಿಗಳ ಅಥವಾ ಗುಂಪು ಸೇರದಂತೆ ಪೊಲೀಸ್ ರಕ್ಷಣೆ ಪಡೆಯಲಾಗಿದೆ.ಪರೀಕ್ಷೆ ಸುಗಮವಾಗಿ ನಡೆಯಲು ಬೆಸ್ಕಾಂ.ಪೊಲೀಸ್,ಆರೋಗ್ಯ,ಖಜಾನೆ ,ಕಂದಾಯ,ಸಾರಿಗೆ ಸೇರಿದಂತೆ ಇತರ ಇಲಾಖೆಗಳ ಸಹಾಯ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

    ಪರೀಕ್ಷಾ ಕಾರ್ಯಕ್ಕಾಗಿ 14 ಪರೀಕ್ಷಾ ಕೇಂದ್ರಗಳಿಗೆ 14 ಮುಖ್ಯ ಅಧಿಖಕ್ಷಕರು 14 ಕಸ್ಟೋಡಿಯನ್. 06, ಮಾರ್ಗಾಧಿಕಾರಿಗಳು, 14 ಮೊಬೈಲ್ ಸ್ವಾಧೀನಾಧಿಕಾರಿಗಳು, 14 ಸ್ಥಾನಿಕ ಜಾಗೃತದಳ,01 ವಿಚಕ್ಷಣ ದಳಗಳಿಗೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಬೇಸಿಗೆಯ ಬಿಸಿಲಿನಿಂದ ಬಳಲುವ ವಿದ್ಯಾರ್ಥಿಗಳಿಗೆ, ಪರೀಕ್ಷಾ ಆತಂಕದಲ್ಲಿರುವ ವಿದ್ಯಾರ್ಥಿಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಕೈಗೊಳ್ಳಲು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.ಪರೀಕ್ಷೆ ಪ್ರಾರಂಭದಲ್ಲಿಯೇ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ನಿಖರವಾಗಿ ಗುರುತಿಸಿ, ತಪಾಸಣೆಗೆ ಒಳಪಡಿಸಿ ಪರೀಕ್ಷಾ ಕೊಠಡಿಗಳಿಗೆ ಕಳುಹಿಸುವುದು. ವಿದ್ಯಾರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳನ್ನು ತರದಂತೆ ನೋಡಿಕೊಳ್ಳುವುದು. ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವುದನ್ನು ಪ್ರತಿ ಪರೀಕ್ಷಾ ದಿನಗಳಂದು ಬೆಳಗ್ಗೆ 8-30 ಗಂಟೆಗೆ ಖಚಿತಪಡಿಸಕೊಳ್ಳುವುದು. ಜಾಗರೂಕತರಯಿಂದ, ಬದ್ಧತೆಯಿಂದ, ಪಾರದರ್ಶಕವಾಗಿ ನಿಯಮಾನುಸಾರ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತಹ ಕ್ರಿಯಾಶೀಲ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ 7 ತಂಡಗಳ ಜಾಗೃತ ದಳದ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಭೇಟಿ ನೀಡುವ ಪರೀಕ್ಷಾ ಕೇಂದ್ರಗಳ ವೇಳಾ ಪಟ್ಟಿ ಹಂಚಿಕೆಯನ್ನು ಮಾಡಲು ತಿಳಿಸಲಾಗಿದೆ ಎಂದರು.

     

  • ಭಾರತ ಚುನಾವಣಾ ಆಯೋಗ : ಅಧಾರ್ ನೊಂದಿಗೆ ಎಪಿಕ್ (EPIC) ಜೋಡಣೆಗೆ ಶೀಘ್ರ ಕ್ರಮ – ಆಯುಕ್ತ ಜ್ಞಾನೇಶ್ ಕುಮಾರ್

    ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಜೋಡಣೆ (Link) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.

    ಇಂದು ಈ ಸಂಬಂಧ ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಕೇಂದ್ರ ಗೃಹ ಕಾರ್ಯದರ್ಶಿ, ಕಾರ್ಯದರ್ಶಿ ಶಾಸಕಾಂಗ ಇಲಾಖೆ, ಕಾರ್ಯದರ್ಶಿ ಮೇಟಿ ಮತ್ತು ಯುಐಡಿಎಐ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಮತ್ತು ಇಸಿಐನ ತಾಂತ್ರಿಕ ತಜ್ಞರೊಂದಿಗೆ ಇಂದು ಸಭೆ ನಡೆಸಿ ಚರ್ಚಿಸಿದರು.

     

    ಚುನಾವಣಾ ಆಯೋಗವು ಆರ್ಟಿಕಲ್ 326, ಆರ್‌ಪಿ ಆಕ್ಟ್, 1950 ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಕ್ರಮ ಕೈಗೊಳ್ಳುತ್ತದೆ. UIDAI ಮತ್ತು ECI ಯ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

     

    ಭಾರತದ ಸಂವಿಧಾನದ 326 ನೇ ವಿಧಿಯ ಪ್ರಕಾರ, ಮತದಾನದ ಹಕ್ಕನ್ನು ಭಾರತದ ನಾಗರಿಕರಿಗೆ ಮಾತ್ರ ನೀಡುವುದು, ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆ. ಆದ್ದರಿಂದ, EPIC ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಸಂವಿಧಾನದ 326 ನೇ ವಿಧಿ, 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 23(4), 23(5) ಮತ್ತು 23(6) ರ ನಿಬಂಧನೆಗಳ ಪ್ರಕಾರ ಕ್ರಮವಹಿಸಲಾಗುವುದು.

    ಅದರಂತೆ, ಯುಐಡಿಎಐ ಮತ್ತು ಇಸಿಐನ ತಾಂತ್ರಿಕ ತಜ್ಞರ ನಡುವಿನ ತಾಂತ್ರಿಕ ಸಮಾಲೋಚನೆಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ‌ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

     

  • ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಪ್ರತಿಭಟನೆ : ಹೋರಾಟದಲ್ಲಿದೊಡ್ಡಬಳ್ಳಾಪುರದ ಸಾವಿರಾರು ಪ್ರತಿಭಟನಾಕಾರರು ಭಾಗಿ

    ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಮಾ.19ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಒಳಮಿಸಲಾತಿ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನೆಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಲು ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಸಮುದಾಯದ ಸಾವಿರಾರು ಮುಖಂಡರು, ಪ್ರಮುಖರು ಬಸ್ ಗಳ ಮೂಲಕ ತೆರಳಿದರು.

     

    ಈ ಕುರಿತು ಮುಖಂಡ ಬಚ್ಚಳ್ಳಿ ನಾಗರಾಜು ಮಾತನಾಡಿ ಸುಪ್ರೀಂ‌ಕೋರ್ಟ್ ಆದೇಶದಂತೆ ಸರ್ಕಾರದ ದತ್ತಾಂಶಗಳನ್ನು ಪರಿಗಣಿಸಿ ಬಿಳಂಬ ನೀತಿ ಅನುಸರಿಸದೆ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು, ಮಾದಿಗ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರು ರಾಜ್ಯ ಸರ್ಕಾರ ಆದೇಶವನ್ನು ಜಾರಿಗೆ ತರಲು ಮುಂದಾಗುತ್ತಿಲ್ಲ , ಮುಖ್ಯಮಂತ್ರಿಗಳು ಈ ಕೂಡಲೇ ಯಥಾವತ್ತಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಲಿ ಇಲ್ಲವೇ ಕುರ್ಚಿ ಖಾಲಿ ಮಾಡಲಿ ಎಂದು ಆಗ್ರಹಿಸಿದರು.

     

    ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದ್ದರೆ ನಾವೇಗೆ ಹೋರಾಟಕ್ಕೆ ಮುಂದಾಗಬೇಕಿತ್ತು. ಇದು ನಮ್ಮ ಹಕ್ಕು, ಸುಪ್ರೀಂ ಕೋರ್ಟ್ ನೀಡುವ ಆದೇಶವನ್ನು ಯಥಾವತ್ತಾಗಿ ಸರ್ಕಾರ ಜಾರಿಗೊಳಿಸಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಮಾಡಲಿ ಎಂದರು.

     

    ಪ್ರಮುಖ ಹಕ್ಕೋತ್ತಾಯಗಳು

    ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸರ್ಕಾರದಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ಜಾರಿಗೊಳಿಸಬೇಕು.

     

    ನ್ಯಾ. ಸದಾಶಿವ ಆಯೋಗದ ವರದಿ ಮತ್ತು ಒಳಮೀಸಲಾತಿ ವರ್ಗಿಕರಣದ ಶಿಫಾರಸ್ಸಗಳನ್ನು ಸಚಿವ ಸಂಪುಟದಲ್ಲಿ ಅಧಿಕೃತಗೊಳಿಸಿ ಹೆಚ್ಚಳವಾಗಿರುವ ಮೀಸಲಾತಿಯ ಶೇ. 17 ರ ಅನುಪಾತದಲ್ಲಿ ಹೆಚ್ಚುವರಿ ಶೇ. 2 ಮೀಸಲಾತಿಯನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 7% ಮೀಸಲಾತಿಯನ್ನು ನಿಗದಿಪಡಿಸಬೇಕು.

     

    ಸಚಿವ ಸಂಪುಟವು ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿಗಳನ್ನು ತಡೆಹಿಡಿಯಬೇಕು.

     

    ನಿಜವಾದ 49 ಅಲೆಮಾರಿಗಳನ್ನು ಪ್ರತ್ಯೇಕವಾಗಿ ಗುರ್ತಿಸಿ ಶೇ.1 ಕ್ಕಿಂತ ಹೆಚ್ಚು ಒಳಮೀಸಲಾತಿಯನ್ನು ನೀಡಿ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಅಲೆಮಾರಿಗಳಿಗೆ ನ್ಯಾಯ ಒದಗಿಸಲು ಪ್ರತ್ಯೇಕ ಅಲೆಮಾರಿ ಆಯೋಗವನ್ನು ಸ್ಥಾಪಿಸಬೇಕು.

     

    ಸಮಾಜ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಮತ್ತು ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನವನ್ನು ಜನಸಂಖ್ಯಾವಾರು ಹಂಚಿಕೆ ಮಾಡಬೇಕು. ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ನಿಗಮ ಮಂಡಳಿಗಳಿಗೆ ತಲಾ ಒಂದು ಸಾವಿರ ಕೋಟಿ ಅನುದಾನ ಮೀಸಲಿಟ್ಟು ಅದೇ ವರ್ಷ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು.

     

    ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ರಾಮಮೂರ್ತಿ ರಾಮು ( ನೇರಳೆಘಟ್ಟ ), ಕೆ ವಿ ಮುನಿಯಪ್ಪ, ಟಿ.ಡಿ.ಮುನಿಯಪ್ಪ, ಅಂಜನಮೂರ್ತಿ,ರಾಮಕೃಷ್ಣಪ್ಪ, ಸೇರಿದಂತೆ ಹಲವು ಸಂಘಟನೆಗಳ ದಲಿತ ಮುಖಂಡರು ಉಪಸ್ಥಿತರಿದ್ದರು .

     

  • ಪುಟ್ಟ ಮಕ್ಕಳ ನಗುವಿನಲ್ಲಿ “ಅಪ್ಪು” ಸದಾ ಅಮರ – ನರಸಿಂಹಮೂರ್ತಿ

    ದೊಡ್ಡಬಳ್ಳಾಪುರ : ಡಾ.ಪುನೀತ್ ರಾಜಕುಮಾರ್ ರವರ 50 ನೇ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ಸ್ ಬುಕ್ ಪೆನ್ನು ಪೆನ್ಸಿಲ್ ವಿತರಣಾ ಕಾರ್ಯಕ್ರಮವನ್ನು ಮಾಡಲಾಯಿತು

    ಇಲ್ಲಿನ ವಿವೇಕಾನಂದ ನಗರದಲ್ಲಿ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಡಾ. ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

    ಕಾರ್ಯಕ್ರಮದ ಆಯೋಜಕ ಹಾಗೂ ಅಪ್ಪು ಅಭಿಮಾನಿ ನರಸಿಂಹಮೂರ್ತಿ ಮಾತನಾಡಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ಜೀವನವೇ ಒಂದು ಆದರ್ಶ ಅವರ ಸೇವಾ ಕಾರ್ಯಗಳು ನಮ್ಮೆಲರಿಗೂ ಸ್ಫೂರ್ತಿ,ಅವರ ಅಭಿಮಾನಿಗಳಾಗಿ ನಾವು ನಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಮಾಡುವ ಮೂಲಕ ಹೆಮ್ಮೆಯ ಅಭಿಮಾನಿಯಾಗಿ ಜೀವಿಸುತ್ತೇವೆ ಎಂದರು.

     

    ಈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು,ಕಿಚ್ಚ ಸುದೀಪ್ ಅಭಿಮಾನಿಗಳು, ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಪಾಲ್ಗೊಂಡು ಸಂಭ್ರಮಿಸಿರುವುದು ವಿಶೇಷ ಅಪ್ಪು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ,ಇಂದಿನ ದಿನವನ್ನು ನಾವು ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದ್ದೇವೆ. ಪುಟ್ಟ ಮಕ್ಕಳ ನಗುವಿನಲ್ಲಿ ನಮ್ಮ ನೆಚ್ಚಿನ ನಟ ಅಪ್ಪು ಅವರನ್ನು ಕಾಣುತ್ತೇವೆ ಎಂದು ಭಾವುಕರಾದರು.

    ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಶಬೀರ್,ಗುರುಪ್ರಸಾದ್,ದಯಾನಂದ,ನಾಗರಾಜು (ಹೊಡ್ಲು ),ಅಶ್ವಥ್,ಚೇರ್ಮನ್ ಮಹೇಶ್,ಪಿ ಸಿ.ನಾರಾಯಣ ಮೂರ್ತಿ,ದೇವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

     

     

     

     

  • “ಅಪ್ಪು”50ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ ಯುವ ಪಡೆ : ಎಳ್ಳುಪುರ ಕ್ರಾಸ್ ಗೆ ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು ಮರುನಾಮಕರಣ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಎಳ್ಳು ಪುರ ಕ್ರಾಸ್ ಅನ್ನು ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ 50ನೇ ವರ್ಷದ ಹುಟ್ಟು ಹಬ್ಬದಂದು ಅವರ ಸವಿನೆನಪಿಗಾಗಿ ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು  ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಲಾಯಿತು.

    ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್ ನಾಮಫಲಕ ಲೋಕಾರ್ಪಣೆ ಮಾಡಿ ಮಾತನಾಡಿದರು ಚಿತ್ರರಂಗದ ಇತಿಹಾಸದಲ್ಲಿ ಯಾವ ನಟರಿಗೂ ಸಿಗದ ಅತ್ಯುತ್ತಮ ಗೌರವ ಡಾ. ಪುನೀತ್ ರಾಜಕುಮಾರ್ ಅವರಿಗೆ ಲಭಿಸಿದೆ . ಅವರ ನಿಸ್ವಾರ್ಥ ಸೇವಾ ಕಾರ್ಯಗಳೇ ಇಂದು ಅವರನ್ನು ಪ್ರತಿಯೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿಸಿದೆ. ಅವರು ನಮ್ಮೊಂದಿಗೆ ಇಲ್ಲದೆ ಮೂರು ವರ್ಷ ಕಳೆದರೂ ಇಂದಿಗೂ ಅವರ ಸವಿ ನೆನಪಿರಲಿ ಸದಾ ಉತ್ತಮ ಸೇವಾ ಕಾರ್ಯಗಳು ನಡೆಯುತ್ತಿರುವುದು ಅವರ ಸರಳತೆ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿ ಯಾಗಿದೆ ಎಂದರು.

    ಸ್ಥಳೀಯವಾಗಿ ಎಳ್ಳು ಪುರ ಗ್ರಾಮದ ಯುವಕರು ಪ್ರತಿ ವರ್ಷವೂ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಪುನೀತ್ ರಾಜಕುಮಾರ್ ರವರ ಆದರ್ಶಗಳನ್ನು ಬಿತ್ತುತ್ತಿದ್ದಾರೆ , ಈ ಬಾರಿ ವಿಶೇಷವಾಗಿ ಅವರ ಹೆಸರಿನಲ್ಲಿ ಸ್ಥಳೀಯ ವೃತ್ತದ ನಾಮಕರಣಕ್ಕೆ ಮುಂದಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಕೇವಲ ಸಂಭ್ರಮಾಚರಣೆಗೆ ಸೀಮಿತವಾಗದೆ ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ಅನ್ನ ದಾಸೋಹವನ್ನು ಸಹ ಏರ್ಪಡಿಸಿದ್ದಾರೆ. ಪುನೀತ್ ರಾಜಕುಮಾರ್ ರವರ ಆಶಯದಂತೆ ಯುವಕರು ಸೇವಾ ಕಾರ್ಯಗಳಲ್ಲಿ ಮತ್ತಷ್ಟು ಪಾಲ್ಗೊಳ್ಳಲಿ ಎಂದು ಹಾರೈಸಿದರು.

    ಕಾರ್ಯಕ್ರಮದ ಆಯೋಜಕ ಏಳ್ಳುಪುರ ಪುನೀತ್ ಅಪ್ಪು ಮಾತನಾಡಿ ಪ್ರತಿ ವರ್ಷವೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇವೆ. ಅಂತೆಯೇ ಈ ಬಾರಿ ಎಲ್ಲ ಯುವಕರ ಆಶಯದಂತೆ ಹಿರಿಯರ ಮಾರ್ಗದರ್ಶನದೊಂದಿಗೆ ನಮ್ಮ ಎಳ್ಳುಪುರ ಕ್ರಾಸ್ ಅನ್ನು ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು ಮರುನಾಮಕರಣ ಮಾಡಲಾಗಿದೆ. ಪುನೀತ್ ರಾಜಕುಮಾರ್ ಅವರು ಸದಾ ಅಮರರು ಅವರು ನಮ್ಮೊಂದಿಗೆ ಸದಾ ಇರುತ್ತಾರೆ ಎಂಬ ಭಾವನೆ ಎಲ್ಲರಲ್ಲೂ ಮೂಡಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

    ಅಭಿಮಾನಿಗಳಿಗೆ ಅನ್ನದಾಸೋಹ ಏರ್ಪಡಿಸಿದ್ದು, ಕೇಕ್ ಕತ್ತರಿಸಿ ಸಿಹಿ ಹಚ್ಚುವ ಮೂಲಕ ತಮ್ಮ ನೆಚ್ಚಿನ ನಾಯಕ ನಟರ ಹುಟ್ಟುಹಬ್ಬವನ್ನು  ಸಂಭ್ರಮಿಸಿದರು.

    ಗ್ರಾಮದ ಹಿರಿಯ ಮುಖಂಡ ರಾಮಾಂಜಿನಪ್ಪ ಮಾತನಾಡಿ ಯುವಕರ ಈ ಕಾರ್ಯ ಶ್ಲಾಘನೀಯ. ಡಾಕ್ಟರ್ ಪುನೀತ್ ರಾಜಕುಮಾರ್ ಹೆಸರನ್ನು ಎಳ್ಳುಪುರ ವೃತ್ತಕ್ಕೆ ನಾಮಕರಣ ಮಾಡಿರುವುದು ಅರ್ಥಪೂರ್ಣವಾಗಿದೆ. ಇಂತಹ ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಯುವಕರ ನಡೆ ಮತ್ತಷ್ಟು ಹೆಚ್ಚಾಗಲಿ ಸೇವಾ ಕಾರ್ಯಗಳ ಮೂಲಕ ಪುನೀತ್ ರಾಜಕುಮಾರ್ ರವರ ಕೀರ್ತಿ ಮತ್ತಷ್ಟು ಹೆಚ್ಚಾಗಲಿ ಎಂದು ಹಾರೈಸಿದರು.

    ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಮುನಿಶಂಕರ್,ರಾಮಾಂಜಿನಪ್ಪ,ಬೀರಸಂದ್ರ ಚಂದ್ರಣ್ಣ,ರಘು ಸೇರಿದಂತೆ ಸ್ಥಳೀಯ ಗ್ರಾಮಸ್ಥರು , ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳು ಹಾಜರಿದ್ದರು.

  • ಅಪ್ಪು ಅಮರ ವಿಶೇಷ ಕಾರ್ಯಕ್ರಮ: ಅನ್ನದಾಸೋಹ ಸಮಿತಿಯೊಟ್ಟಿಗೆ ಹಸಿದವರಿಗೆ ಆಹಾರ ವಿತರಣೆ ಮಾಡಿದ ಅಭಿಮಾನಿಗಳು

    ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇವರ ಹುಟ್ಟು ಹಬ್ಬದ ಅಂಗವಾಗಿ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡಲಾಯಿತು.

    1818 ನೇ ದಿನದ ಅನ್ನ ದಾಸೋಹಕ್ಕೆ ಡಾ. ಶಿವರಾಜಕುಮಾರ್ ಹಾಗೂ ಡಾ.ಪುನೀತ್ ರಾಜಕುಮಾರ್ ರವರ ಅಭಿಮಾನಿಗಳು ಸಹಾಯ ಹಸ್ತ ನೀಡುವ ಮೂಲಕ ಕೇಕ್ ಕತ್ತರಿಸಿ ಸಿಹಿ ವಿತರಣೆ ಹಾಗೂ ಆಹಾರ ವಿತರಣೆ ಮಾಡುವ ಮೂಲಕ ಸಂಭ್ರಮಿಸಿದರು.

    ಬೆಂಗಳೂರು ಗ್ರಾಮಾಂತರ ಡಾ.ಶಿವರಾಜ್ ಕುಮಾರ್ ಸಂಘದ ಜಿಲ್ಲಾಧ್ಯಕ್ಷರಾದ ಡಿ .ಸಿ.ಚೌಡರಾಜ್ ಮಾತನಾಡಿ ರಾಜ್ ಕುಟುಂಬವೂ ಸದಾ ಕೇವಲ ನಟನೆಯಿಂದ ಅಷ್ಟೇ ಅಲ್ಲದೆ ಸೇವಾ ಕಾರ್ಯಗಳಿಂದ ಜನರಿಗೆ ತುಂಬಾ ಹತ್ತಿರವಾಗಿದೆ. ಪುನೀತ್ ರಾಜಕುಮಾರ್ ಅವರ ಸೇವಾ ಕಾರ್ಯಗಳು ನಮಗೆ ಸದಾ ಸ್ಪೂರ್ತಿ , ಇಂದು ಅವರ ಹೆಸರಿನಲ್ಲಿ ಅನ್ನದಾನ ಮಾಡುತ್ತಿರುವುದು ಸಂತಸ ತಂದಿದೆ , ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಯೋಜನೆ ಮಾಡಿಕೊಟ್ಟ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

    ಪುನೀತ್ ರಾಜ್ ಕುಮಾರ್ ಸಂಘದ ತಾಲೂಕು ಕಾರ್ಯಾಧ್ಯಕ್ಷ ಡಿ. ಎನ್.ತಿಮ್ಮರಾಜು ಹಾಗೂ ತಾಲ್ಲೂಕು ಅಧ್ಯಕ್ಷರಾದ ಮಂಜುನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಪುನೀತ್ ರಾಜಕುಮಾರ್ ರವರು ಸದಾ ಅಮರ , ಅವರ ಅಭಿಮಾನಿಗಳ ಸೇವಾ ಕಾರ್ಯಗಳಲ್ಲಿ ಅವರು ಸದಾ ನಮ್ಮೊಂದಿಗಿದ್ದಾರೆ , ಅವರ ಆಶಯದಂತೆ ನಾವು ಜೀವನ ನಡೆಸುತ್ತೇವೆ, ಮುಂದೆ ಉತ್ತಮ ಸೇವಾ ಕಾರ್ಯಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಮೂಲಕ ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತೇವೆ ಎಂದರು.

    ಕಾರ್ಯಕ್ರಮದಲ್ಲಿ ಡಾ. ಶಿವರಾಜಕುಮಾರ್ ಸಂಘದ ಪದಾಧಿಕಾರಿಗಳು, ಡಾ.ಪುನೀತ್ ರಾಜಕುಮಾರ್ ಸಂಘದ ಎಲ್ಲಾ ಪದಾಧಿಕಾರಿಗಳು, ಅಭಿಮಾನಿಗಳು ಹಾಜರಿದ್ದರು.

  • ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರು ಬಳಸಿದ ಬ್ಯಾನರ್ ಅಳವಡಿಕೆ ಆರೋಪ ಸಂಘಟನೆಯ ಬ್ಯಾನರ್ ತೆಗೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಂದ ಪ್ರತಿಭಟನೆ

    ದೊಡ್ಡಬಳ್ಳಾಪುರ : ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(47-74/75)ಯ ಹೆಸರನ್ನು ಬಳಕೆ ಮಾಡಿ, ಸಂಘಟನೆಯ ಹೆಸರಿನಲ್ಲಿ ಅಧ್ಯಯನ ಶಿಬಿರವನ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಶಿಬಿರ ಬಳಿಯ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಸಂಘಟನೆಯ ಬ್ಯಾನರ್ ತೆಗೆಯುವಂತೆ ಆಗ್ರಹಿಸಿದ್ದಾರೆ.

    ತಾಲೂಕಿನ ಬೆಸೆಂಟ್ ಪಾರ್ಕ್ ನಲ್ಲಿ ಹೆಣ್ಣೂರು ಶ್ರೀನಿವಾಸ್ ರವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರವನ್ನು ನಡೆಸುತ್ತಿದ್ದಾರೆ, ಅಧ್ಯಯನ ಶಿಬಿರವನ್ನ ಕರ್ನಾಟಕ ದಲಿತ ಸಂಘರ್ಘ ಸಮಿತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಬೆಸೆಂಟ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

     

    ಇದೇ ವೇಳೆ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜು ಮಾತನಾಡಿ ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (47-74/75)ಯನ್ನು ರಾಜ್ಯ ಸಂಚಾಲಕರಾದ ಶಿವಮೊಗ್ಗ ಎಂ.ಗುರುಮೂರ್ತಿಯವರು ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ಸಂಘಟಿಸುವ ಮೂಲಕ ಬಲಿಷ್ಠ ಸಂಘಟನೆಯನ್ನಾಗಿ ಮಾಡಿದ್ದಾರೆ, ಸಂಘಟನೆ ಹಕ್ಕುದಾರಿಕೆಗಾಗಿ 11 ವರ್ಷಗಳ ಕಾಲ ನಿರಂತರ ಹೋರಾಟವನ್ನ ಮಾಡಿದ್ದಾರೆ, ಶಿವಮೊಗ್ಗ ಸಿವಿಲ್ ಕೋರ್ಟ್ , ಭದ್ರಾವತಿ ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನೆ ಎಂ.ಗುರುಮೂರ್ತಿಯವರಿಗೆ ಸೇರಿದ್ದು ಎಂದು ತೀರ್ಪು ನೀಡಲಾಗಿದೆ ಆದರೆ ಇಂದು ನಮ್ಮ ಸಂಘಟನೆಯ ಬ್ಯಾನರ್ ಅಡಿಯಲ್ಲಿ ನಮಗೆ ಯಾವುದೇ ಮಾಹಿತಿ ನೀಡದೆ ಅಧ್ಯಯನ ಶಿಬಿರ ಆಯೋಜನೆ ಮಾಡಿರುವುದು ಖಂಡನೀಯ ನಾವು ಯಾವುದೇ ಕಾರ್ಯಕ್ರಮ ನಿಲ್ಲಿಸಲು ಬಯಸುವುದಿಲ್ಲ ,, ಆದರೆ ನಮ್ಮ ಸಂಘಟನೆಯ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ನಮಗೆ ನೋವುಂಟು ಮಾಡಿದೆ ಕೂಡಲೇ ಬ್ಯಾನರ್ ತೆಗೆಯಬೇಕೆಂದು ಕಾರ್ಯಕ್ರಮ ಆಯೋಜಕರನ್ನು ಒತ್ತಾಯಿಸಿದರು

    ಬೆಂಗಳೂರು ಜಿಲ್ಲಾ ಸಂಚಾಲಕರಾದ ರಾಮಮೂರ್ತಿ(ರಾಮು)ನೇರಳಘಟ್ಟ ಮಾತನಾಡಿ ಕೋರ್ಟ್ ತೀರ್ಪುಗಳು ನಮ್ಮ ಪರವಾಗಿದ್ದರೂ, ಹೆಣ್ಣೂರು ಶ್ರೀನಿವಾಸ್ ನಮ್ಮ ಸಂಘಟನೆ ಹೆಸರನ್ನು ಬಳಸಿಕೊಂಡು ಶಿಬಿರವನ್ನ ನಡೆಸುತ್ತಿದ್ದಾರೆ, ಸಂಘಟನೆ ಬ್ಯಾನರ್ ಬಳಸದಂತೆ ವಿನಂತಿ ಮಾಡಲಾಗಿದೆ ಆದರೆ ಅವರು ನಮ್ಮ ಯಾವುದೇ ಮನವಿಗಳಿಗೆ ಸ್ಪಂದಿಸದ ಕಾರಣ ಹೋರಾಟಕ್ಕೆ ಮುಂದಾಗಿದ್ದೇವೆ, ಸಮಾಜದಲ್ಲಿ ಬಿರುಕು ಮೂಡಿಸುವ ಮತ್ತು ಸಮುದಾಯದ ಜನತೆಯಲ್ಲಿ ಗೊಂದಲ ಸೃಷ್ಟಿ ಮಾಡುವ ಇಂತಹ ಕಾರ್ಯಗಳನ್ನು ನಾವು ಎಂದಿಗೂ ಪ್ರೋತ್ಸಾಹಿಸುವುದಿಲ್ಲ , ನಾವು ಕಾರ್ಯಕ್ರಮಕ್ಕೆ ತೊಂದರೆ ನೀಡುವುದಿಲ್ಲ ನಮ್ಮ ಆಗ್ರಹ ನಮ್ಮ ಸಂಘಟನೆ ಬ್ಯಾನರ್ ಬಳಸ ಬೇಡಿ ಎನ್ನುವುದು ಅಷ್ಟೇ, ಬ್ಯಾನರ್ ತೆಗೆಯುವವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಪ್ರತಿಭಟನಾಕಾರರು ಅಧ್ಯಯನ ಶಿಬಿರದ ಮುಂಭಾಗದಲ್ಲಿ ಕುಳಿತು ಶಿಬಿರದ ಆಯೋಜಕರಿಗೆ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

     

    ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಬಸವರಾಜು,ಬೆಂಗಳೂರು ಜಿಲ್ಲಾ ಸಂಚಾಲಕ ರಾಮಮೂರ್ತಿ (ರಾಮುನೇರಳಘಟ್ಟ), ಜಿಲ್ಲಾ ಮಹಿಳಾ ಸಂಚಾಲಕರಾದ ನಾಗರತ್ನಮ್ಮ , ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನ ಸಂಚಾಲಕರು ಜಿ.ನರಸಿಂಹಮೂರ್ತಿ,ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಬೈಲಾಂಜಿನಮೂರ್ತಿ, ಎನ್.ನರಸಿಂಹಮೂರ್ತಿ,ಮನೋಜ್.ವಿ, ನಾಗರತ್ನಮ್ಮ ಮಲ್ಲೋಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ, ಹನುಮಂತಯ್ಯ, ಹನುಮಯ್ಯ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಂದಿಗುಂದ ಮೈಲಾರಪ್ಪ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

     

  • ದೊಡ್ಡಬಳ್ಳಾಪುರ ತಾಲೂಕು ಕನಸವಾಡಿಯಲ್ಲಿ ನಡೆವ ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನಲೆ ಸಂಘ-ಸಂಸ್ಥೆಗಳ ಪ್ರಮುಖರ ಪೂರ್ವಭಾವಿ ಸಭೆ

    ದೊಡ್ಡಬಳ್ಳಾಪುರ : ತಾಲೂಕಿನ ಕನಸವಾಡಿಯಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಕನ್ನಡದ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

     

    ನಗರದ ಕನ್ನಡ ಜಾಗೃತ ಭವನದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನಲೆ ಸಂಘ-ಸಂಸ್ಥೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಏಪ್ರಿಲ್‌ 12 ಮತ್ತು 13ರಂದು ಸಮ್ಮೇಳನ ನಡೆಯಲಿದ್ದು, ವಿಚಾರಗೋಷ್ಠಿ, ಕವಿಗೋಷ್ಠಿ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಪ್ರಾತಿನಿಧ್ಯ ನೀಡಲಾಗುವುದು. ಜಿಲ್ಲೆ ಹಾಗೂ ತಾಲೂಕಿನ ಜ್ವಲಂತ ಸಮಸ್ಯೆಗಳು, ಕೃಷಿಕರು, ನೇಕಾರರ ಸಂಕಷ್ಟಗಳು, ಕೈಗಾರಿಕೀಕರಣದಿಂದ ಎದುರಾಗಿರುವ ಸವಾಲುಗಳ ಕುರಿತು ಚರ್ಚಿಸುವ ಗೋಷ್ಠಿಗಳನ್ನು ಏರ್ಪಡಿಸಲಾಗುವುದು.

     

    ಸಮ್ಮೇಳನ ಆಯೋಜನಾ ತಾಲೂಕಿನ ಸ್ಥಳೀಯ ಸಾಧಕರೊಬ್ಬರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು. ಸಮ್ಮೇಳನದ ಸಮಗ್ರ ಆಯೋಜನೆ, ಕಾರ್ಯನಿರ್ವಹಣೆಗೆ ಎಲ್ಲ ಕನ್ನಡಪರ, ಪ್ರಗತಿಪರ, ರೈತ, ದಲಿತ, ಮಹಿಳಾ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಹಕರಿಸುವಂತೆ ಮನವಿ ಮಾಡಿದರು.

     

    ಸಭೆಯಲ್ಲಿ ಸಲಹೆ-ಸೂಚನೆಗಳನ್ನು ನೀಡಿ ಮಾತನಾಡಿದ ಸಂಘಟನೆಗಳ ಮುಖಂಡರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಚಾರ. ಸಮ್ಮೇಳನ ಕೇವಲ ಸಾಹಿತ್ಯಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಈ ನೆಲದ ಸಮಸ್ಯೆಗಳಿಗೆ ದನಿಯಾಗಬೇಕು. ರೈತರ ಹೋರಾಟಗಳು, ನೇಕಾರರ ಸಂಕಷ್ಟ, ಕೈಗಾರಿಕೆಗಳ ಅತಿಯಾದ ಬೆಳವಣಿಗೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು ಸೇರಿದಂತೆ ಜ್ವಲಂತ ಸಮಸ್ಯೆಗಳ ಚರ್ಚೆಗೆ ವೇದಿಕೆಯಾಗಬೇಕು. ಕೇವಲ ಚರ್ಚೆಗಷ್ಟೇ ಸೀಮಿತವಾಗದೆ ಸರ್ಕಾರದ ಮೇಲೆ ಪ್ರಭಾವ ಬೀರುವ ಪ್ರಯತ್ನವಾಗಬೇಕು ಎಂದರು.

    ಸಮ್ಮೇಳನಾಧ್ಯಕ್ಷತೆಗೆ ಸ್ಥಳೀಯ ಸಾಧಕರನ್ನು ಗುರ್ತಿಸಿ ಆಯ್ಕೆ ಮಾಡಬೇಕು. ಹೋರಾಟಗಾರರು, ಇತರೆ ಕ್ಷೇತ್ರಗಳಲ್ಲಿನ ಸಾಧಕರನ್ನೂ ಪರಿಗಣಿಸುವುದು ಅಗತ್ಯ. ಸಂಘ-ಸಂಸ್ಥೆಗಳಿಗೆ ನಿರ್ದಿಷ್ಟ ಹೊಣೆಗಾರಿಕೆಯನ್ನು ವಹಿಸಿ, ತೊಡಗಿಸಿಕೊಳ್ಳುವ ಪ್ರಯತ್ನ ಆಗಬೇಕು. ಒಟ್ಟಾರೆಯಾಗಿ ತಾಲೂಕಿನಲ್ಲಿ ನಡೆವ ಸಮ್ಮೇಳನ ಮಾದರಿಯಾಗಿ ರೂಪುಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಬೆಂ.ಗ್ರಾ ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್, ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ಮೇಳನದ ರೂಪರೇಷೆಗಳನ್ನು ವಿವರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು, ಸಭೆಯಲ್ಲಿ ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಮಾಜಿ ಅಧ್ಯಕ್ಷ ಬಿ.ಜಿ.ಅಮರನಾಥ್, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ, ದೊಡ್ಡತುಮಕೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್, ಕನ್ನಡ ಜಾಗೃತಿ ವೇದಿಕೆಯ ನಾಗರಾಜ್, ಅಗ್ನಿ ವೆಂಕಟೇಶ್, ಪತ್ರಕರ್ತರಾದ ಗಂಗರಾಜು ಶಿರವಾರ, ರಾಜುಸಣ್ಣಕ್ಕಿ, ತೆರದಾಳ್‌ ಶ್ರೀನಿವಾಸ್, ಕೊತ್ತೂರಪ್ಪ, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಎಂ.ಕೆ.ವತ್ಸಲ, ಕರ್ನಾಟಕ ರಾಜ್ಯ ರೈತ ಸಂಘದ ಸತೀಶ್‌, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಡಾ,ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಉಪಾಧ್ಯಕ್ಷ ವಿ.ಪರಮೇಶ್, ಶಿವರಾಜ್‌ಕುಮಾರ್‌ ಕನ್ನಡ ಸೇನಾ ಸಮಿತಿಯ ಜೆ.ಆರ್.ರಮೇಶ್, ಕರವೇ ಪ್ರವೀಣ್‌ಶೆಟ್ಟಿ ಬಣದ ಹಮಾಮ್‌ ವೆಂಕಟೇಶ್, ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಗ್ರಾಪಂ ಸದಸ್ಯೆ ನಾಗರತ್ನಮ್ಮ, ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಕಾರ್ಯದರ್ಶಿ ಎ.ಜಯರಾಮ್, ಸುರೇಶ್‌, ತೂಬಗೆರೆ ಷರೀಫ್, ಉದಯ ಆರಾಧ್ಯ ಮತ್ತಿತರರು ಪಾಲ್ಗೊಂಡಿದ್ದರು.