Blog

  • ವಿದ್ಯಾರ್ಥಿಗಳ ಉತ್ತಮ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ – ಕವಿತಾ ಮಧುಸೂದನ್

    ದೊಡ್ಡಬಳ್ಳಾಪುರ : ಮಕ್ಕಳು ಸದಾ ನಾವು ಹೇಳಿದಂತೆ ಮಾಡದೇ ನಾವು ಮಾಡಿದಂತೆ ಮಾಡುವ ಮನಸ್ಥಿತಿ ಹೊಂದಿರುತ್ತಾರೆ ಹಾಗಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಿದ್ಧರಿರುವ ಎಲ್ಲಾ ಪ್ರಶಿಕ್ಷಣಾರ್ಥಿಗಳು ತಾವು ಮಾಡುವ ಉತ್ತಮ ಕಾರ್ಯಗಳಿಂದಲೇ ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬಿರಲು ಪ್ರಯತ್ನಸಬೇಕು ಎಂದು ಸಂಪನ್ಮೂಲ ವ್ಯಕ್ತಿಗಳಾದ ಕವಿತಾ ಮಧುಸೂದನ್ ತಿಳಿಸಿದರು.

    ತಾಲ್ಲೂಕಿನ ಹೊರವಲಯದ ಶ್ರೀ ಕೊಂಗಾಡಿಯಪ್ಪ ಶಿಕ್ಷಣ ವಿದ್ಯಾಲಯ ಬಿ. ಇಡಿ ಕಾಲೇಜು ವತಿಯಿಂದ ಆಯೋಜನೆ ಮಾಡಲಾಗಿದ್ದ ಸಮುದಾಯ ಜೀವನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು ಮಕ್ಕಳು ಒಂದು ಬೀಜವಿದ್ದಂತೆ ಭೂಮಿಯಲ್ಲಿ ಹೇಗೆ ಬೀಜವು ಮೊಳಕೆ ಹೊಡೆದು ಗಿಡವಾಗಿ ಬೆಳೆದು ಫಲ ಕೊಡುವುದೋ ಹಾಗೆ ನಮ್ಮಲ್ಲಿ ಕಲಿಕಾಭ್ಯಾಸ ಮಾಡಲು ಬರುವ ಮಕ್ಕಳು ಕೂಡ ಹಾಗೆ ನಾವು ಅವರಿಗೆ ಉತ್ತಮ ರೀತಿಯ ಪೋಷಣೆ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ ಎಂದರು.

     

    ಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ದೇಸಾಯಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸಿನಿಮಾದ ನಾಯಕರನ್ನು ನೆಚ್ಚಿನ ವ್ಯಕ್ತಿಗಳಾಗಿ, ಮಾದರಿಯಾಗಿ ತೆಗೆದುಕೊಳ್ಳುತ್ತಾರೆ ಆದರೆ ಅವರ ಜೀವನ ರೂಪಿಸುವಲ್ಲಿ ಪ್ರಮುಖ ಪತ್ರ ವಹಿಸಿದ ಶಿಕ್ಷಕರೇ ನಿಜವಾದ ಹೀರೊ ಎಂಬ ವಿಷಯವನ್ನು ಮರೆತಿರುವುದು ವಿಪರ್ಯಾಸ. ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು,ಈ ವಿಷಯಗಳನ್ನು ಶಿಕ್ಷಕರಾಗಿ ಸೇವೆ ಸಲ್ಲಿಸಲು ಸಿದ್ಧರಿರುವ ತಾವೆಲ್ಲರೂ ಅರಿತುಕೊಳ್ಳುವುದು ಮುಖ್ಯವಾಗಿದೆ ಎಂದರು.

    ಹೇಗೆ ಜೇನುಹುಳು ಶ್ರಮಪಟ್ಟು ಜೇನು ಸಂಗ್ರಹಿಸಿ ಬೇರೆಯವರಿಗೆ ನೀಡುವುದೋ ಹಾಗೆಯೇ ಶಿಕ್ಷಕರ ವೃತ್ತಿ ಜೇನು ಹುಳುವಿನ ಜೀವನಕ್ಕೆ ಹೋಲುತ್ತದೆ ನಮ್ಮ ಶ್ರಮ ಕೇವಲ ವಿದ್ಯಾರ್ಥಿಗಳ ಜೀವನ ಉತ್ತಮಗೊಳಿಸುವ ನಿಟ್ಟಿನಲ್ಲಿ ಸಾಗುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಕೊಂಗಾಡಿಯಪ್ಪ ಶಿಕ್ಷಣ ವಿದ್ಯಾಲಯ ಬಿ. ಇಡಿ ಕಾಲೇಜಿನ ಪ್ರಾಂಶುಪಾಲರಾದ ಮಂಜುನಾಥ್, ಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ದೇಸಾಯಿ, ಅಧ್ಯಕ್ಷರಾದ ರಾಮಶೆಟ್ರು, ಕಾರ್ಯದರ್ಶಿಗಳಾದ ಎಸ್ ಪ್ರಕಾಶ್, ಖಜಾಂಜಿಗಳಾದ ಜಗದೀಶ್ ಬಾಬು, ಉಪನ್ಯಾಸಕರಾದ ದೈಹಿಕ ಶಿಕ್ಷಣ ನಿರ್ದೇಶಕ ಹೇಮಂತ್ ಜಿ, ಸುಬ್ರಮಣಿ, ರಮ್ಯಾ, ಆಶಾ, ಶ್ರೀಕಾಂತ್, ನರೇಂದ್ರ ಸೇರಿದಂತೆ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

  • ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ : ಒಟ್ಟು ರೂ.64,51,009 ಹಣ ಸಂಗ್ರಹ

    ದೊಡ್ಡಬಳ್ಳಾಪುರ : ತಾಲೂಕಿನ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ, ದೇವಾಲಯದಲ್ಲಿ ಈ ದಿವಸ ಹುಂಡಿ ಎಣಿಕೆ ಮಾಡಲಾಯಿತು.

    ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಹುಂಡಿಯ ಎಣಿಕೆ ಮಾಡಲಾಗಿದ್ದು ರೂ.64,51,009 ಹಣ ಸಂಗ್ರಹವಾಗಿದೆ.ಹಾಗು ಇದರೊಂದಿಗೆ 44100 ರೂ.ಬೆಲೆ ಬಾಳುವ 7 ಗ್ರಾಂ ಚಿನ್ನ, 77500 ರೂ. ಬೆಲೆ ಬಾಳುವ 1.550 ತೂಕದ ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕುವ ಮೂಲಕ ಕಾಣಿಕೆ ರೂಪದಲ್ಲಿ ಹರಕೆ ತೀರಿಸಿಕೊಂಡಿದ್ದಾರೆ

    ದೇವಾಲಯದ ಹುಂಡಿಯನ್ನು ನಿಯಮಾನುಸಾರ ತೆಗೆದು ದೇವರ ದರ್ಶನಕ್ಕೆ ಬಂದ ಭಕ್ತರಿಂದ ಎಣಿಕೆ ಮಾಡಲಾಗಿತ್ತು

    ಈ ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಆಧಿಕಾರಿ ಎಂ. ನಾರಾಯಣಸ್ವಾಮಿ, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜೆ.ಎನ್‌.ರಂಗಪ್ಪ, ಆರ್.ವಿ.ಮಹೇಶ್ ಕೆ.ಎಸ್.ರವಿ, ಲಕ್ಷ್ಮಣ ನಾಯಕ್, ಹೇಮಲತಾ ರಮೇಶ್, ಪ್ರಧಾನ ಅರ್ಚಕ ಆರ್. ಸುಬ್ರಹ್ಮಣ್ಯ ಹಾಗು ಸಮಾಜ ಸೇವಕ ಮುತ್ತಣ್ಣ ದೇವಾಲಯದ ಸಿಬ್ಬಂದಿ, ಪೊಲೀಸ್ ಇಲಾಖೆ, ಕೆನರಾ ಬ್ಯಾಂಕ್ ಸಿಬ್ಬಂದಿ ಹಾಜರಿದ್ದರು.

     

     

  • ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರುಗ್ರಾಮಾಂತರ ಜಿಲ್ಲಾ ಪೊಲೀಸ್ ವತಿಯಿಂದ ವಿಶೇಷ ಸೂಚನೆಗಳು

    ಯುಗಾದಿ ಮತ್ತು ರಂಜಾನ್ ಹಬ್ಬದ ಧಾರ್ಮಿಕ ಆಚರಣೆಯ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳಿದ್ದಲ್ಲಿ ಅನುಮತಿ ಮೇರೆಗೆ ಶಾಂತಿಯುತವಾಗಿ ಆಚರಿಸಲು ಸೂಚಿಸಲಾಗಿದೆ.

     

    ಪ್ರಮುಖ ಅಂಶಗಳು : 

    1.ಯಾವುದೇ ಧಾರ್ಮಿಕ ವಿಚಾರವಾಗಿ ಪ್ರಚೋದನಾಕಾರಿ ಪೋಸ್ಟ್ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಅಪರಾಧ.

     

    2.ಬೆಂಗಳೂರು ಜಿಲ್ಲಾ ಸರಹದ್ದಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

     

    3.ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಪ್ರಚೋದನಾಕಾರಿ ಬರವಣಿಗೆ, ಸಂದೇಶ ಹಾಗೂ ಭಾಷಣ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು.

     

    4.ಜೂಜು, ಮಟ್ಕಾ, ಇಸ್ಪೀಟ್ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕ್ರಮ ವಹಿಸಲಾಗುವದು.

     

    5.ಯಾವುದೇ ಮತೀಯ ಗಲಭೆ ಮತ್ತು ಕೋಮುಗಲಭೆ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವದು.

     

    6.ಯುಗಾದಿ ಮತ್ತು ರಂಜಾನ್ ಹಬ್ಬದ ವೇಳೆಯಲ್ಲಿ ಹೆಚ್ಚಿನ ಜನಸಂದನಿಯಲ್ಲಿ ನಿಮ್ಮ ಆಭರಣ ಮತ್ತು ಬೆಲೆ ಬಾಳುವ ವಸ್ತುಗಳ ಮೇಲೆ ಗಮನವಿರಲಿ.

     

    7.ಸಂಚಾರ ಮತ್ತು ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದಲ್ಲಿ ಸ್ಥಳದಂಡ ಅಥವಾ ಕ್ರಮ ವಹಿಸಲಾಗುವದು ಅಲ್ಲದೇ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಪುಷ್ಪಾಂಡಜ ಮಹರ್ಷಿ ಆಶ್ರಮದಲ್ಲಿ ಅರಣಿಕರಣ ಮತ್ತು ಹಣ್ಣಿನ ಗಿಡ ನಾಟಿ ಕಾರ್ಯಕ್ರಮ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ ಗುರುಪೀಠದಲ್ಲಿ ಸಾಮಾಜಿಕ ಅರಣಿಕರಣ ಮತ್ತು ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮದಲ್ಲಿ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ದಿವ್ಯ ಜ್ಞಾನಾನಂದ ಸ್ವಾಮಿಜಿ ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತಾನಾಡಿದ ಸ್ವಾಮಿಜಿ ಗಳು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅದರಲ್ಲಿ ವಿಶೇಷವಾಗಿ ಕೆರೆ ಹೂಳೆತ್ತುವ ಕಾರ್ಯಕ್ರಮ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಉತ್ತಮ ಆಗಿದ್ದು ಮದ್ಯವರ್ಜನ ಶಿಬಿರಗಳು ನಡೆಯುತ್ತಿದ್ದು ಅತೀ ಉತ್ತಮ ಕಾರ್ಯಕ್ರಮ ಎಂದು ಅಭಿಪ್ರಾಯಪಟ್ಟರು.

     

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ಉಮರಬ್ಬ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಪ್ರತಿ ವರ್ಷ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಯಶಸ್ವಿಯಾಗಿ ಆಗುತ್ತಿದ್ದು ಗಿಡ ನಾಟಿ ಮಾಡಿದ ನಂತರ ಗಿಡಗಳ ರಕ್ಷಣೆ ಅತೀ ಮುಖ್ಯವಾಗಿದ್ದು ಎಂದರು ಪ್ರತಿಯೊಬ್ಬರೂ ಮನೆ ಹತ್ತಿರ/ಜಮಿನುಗಳಲ್ಲಿ ಗಿಡ ನಾಟಿ ಮಾಡುವಂತೆ ತಿಳಿಸಿದರು

     

    ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ಜನಜಾಗೃತಿ ಸದಸ್ಯರಾದ ರಮೇಶ್, ಪ್ರಗತಿಪರ ರೈತರಾದ ಸದಾನಂದ,ಕೃಷ್ಣೆಗೌಡ,ಗ್ರಾಮ ಪಂಚಾಯತ್ ಸಧಸ್ಯರಾದ ಆನಂದ್,ಡೈರಿ ಅಧ್ಯಕ್ಷರಾದ ರಾಮಣ್ಣ, ಒಕ್ಕೂಟದ ಅಧ್ಯಕರುಗಳು, ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ ವಲಯ ಮೇಲ್ವಿಚಾರಕರಾದ ಗಿರೀಶ್,TNO ರೇಣುಕಾ ಪ್ರಸಾದ್, ಶೌರ್ಯ ವಿಪತ್ತು ತಂಡದ ಸದಸ್ಯರು, ಸೇವಾ ಪ್ರತಿನಿಧಿಗಳು , VLE ,ಸಂಘದ ಸದಸ್ಯರು,ಮಠದ ಅಧಿಕಾರಿಗಳು ಉಪಸ್ಥಿತರಿದ್ದರು

  • ಏನಿದು ಆರ್‌ಡಿಎಸ್ಎಸ್ : ಹೊಸ ವಿದ್ಯುತ್ ಮೀಟರ್ ಕುರಿತಂತೆ ಒಂದಿಷ್ಟು ಮಾಹಿತಿ

    ಕೇಂದ್ರ ಇಂಧನ ಪ್ರಾಧಿಕಾರದ ನಿರ್ದೇಶನದಂತೆ 2021-22 ನೇ ಸಾಲಿನಲ್ಲಿ ಕೇಂದ್ರದ ಇಂಧನ ಸಚಿವಾಲಯವು ಪರಿಷ್ಕೃತ ವಿತರಣಾ ವಲಯ ಯೋಜನೆ (RDSS- Revamped Distribution Sector Scheme) ರೂಪಿಸಿತ್ತು. ಈ ಯೋಜನೆ ಒಪ್ಪಿಕೊಂಡಿದ್ದರೆ, ಎಲೆಕ್ಟ್ರಿಕಲ್ ಮೂಲ ಸೌಕರ್ಯವನ್ನು ಒದಗಿಸಲು ಕೇಂದ್ರ ಸರ್ಕಾರ ಶೇ. 60ರಷ್ಟು ಅನುದಾನ ನೀಡುತ್ತಿತ್ತು. ಜತೆಗೆ, ಸ್ಮಾರ್ಟ್ ಮೀಟರ್‌ಗಳ ಬದಲಾವಣೆ ಮಾಡಲು ಒಟ್ಟು ವೆಚ್ಚದ ಶೇ.15ರಷ್ಟು ಅಥವಾ ಗರಿಷ್ಠ 900 ರೂ. ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ, ರಾಜ್ಯ ಸರ್ಕಾರಗಳು ಸಂಬಂಧಿಸಿದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಇರುವ ಸಬ್ಸಿಡಿ, ಇತರೆ ಬಾಕಿಗಳನ್ನು ಪಾವತಿಸಿದರೆ ಮಾತ್ರ ಯೋಜನೆಯ ಅನುಕೂಲ ಪಡೆದುಕೊಳ್ಳಬಹುದು ಎಂದು ಹೇಳಿತ್ತು. ಅಲ್ಲದೆ, ಎಲ್ಲಾ ಗ್ರಾಹಕರೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯ ಎಂದು ಹೇಳಿತ್ತು. ಈ ಷರತ್ತುಗಳನ್ನು ಅಂದಿನ ಸರ್ಕಾರ ಒಪ್ಪದ ಕಾರಣ ರಾಜ್ಯವು ಕೇಂದ್ರದ ಆರ್ ಡಿಎಸ್ ಯೋಜನೆಯನ್ನು ಒಪ್ಪಿಕೊಂಡಿರಲಿಲ್ಲ. ಕೇಂದ್ರ ಸರ್ಕಾರದ ಆರ್ ಡಿಎಸ್ ಯೋಜನೆ ಒಪ್ಪಿಕೊಂಡಿದ್ದರೆ, ಹಾಲಿ ಗ್ರಾಹಕರು ಸೇರಿದಂತೆ ಎಲ್ಲರೂ ಸ್ಮಾರ್ಟ್ ಮೀಟರ್ ಅವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಇತ್ತು. ಆರ್‌ಡಿಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್‌ವೇರ್ ಸೇರಿ ದರ ನಿಗದಿಪಡಿಸಲಾಗುತ್ತದೆ

     

    *ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆಯೇ ವಿಭಿನ್ನ*

    “ಆರ್‌ ಡಿಎಸ್‌ಎಸ್‌ ಅನುಷ್ಠಾನಗೊಳಿಸಿರುವ ರಾಜ್ಯಗಳ ವಿದ್ಯುತ್‌ ಸರಬರಾಜು ಕಂಪನಿಗಳು ಎಲ್ಲಾ ಮನೆಗಳಲ್ಲಿ ಏಕ ಕಾಲದಲ್ಲಿ (Bulk replacement) ಸ್ಮಾರ್ಟ್ ಮೀಟರ್ ಅಳವಡಿಸಿ ಅದಕ್ಕೆ ಪೂರಕವಾದ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಪ್ರತಿ ತಿಂಗಳ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಅಂದರೆ, ಕಂತಿನಲ್ಲಿ ಸ್ಮಾರ್ಟ್‌ಮೀಟರ್‌ ಹಾಗೂ ತಾಂತ್ರಿಕ ನಿರ್ವಹಣೆ ವೆಚ್ಚವನ್ನು ಗ್ರಾಹಕರಿಂದ ವಸೂಲಿ ಮಾಡುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ಇರುವ ನಿಯಮದ ಪ್ರಕಾರ, ವಿದ್ಯುತ್‌ ಮೀಟರ್‌ಗಳನ್ನು ಗ್ರಾಹಕರೇ ಭರಿಸಬೇಕು. ಆರ್‌ಡಿಎಸ್ಎಸ್‌ ಅನುಷ್ಠಾನಗೊಳಿಸದ ಕಾರಣ ನಮ್ಮಲ್ಲಿ ಹೊಸ ಮತ್ತು ತಾತ್ಕಲಿಕ ಸಂಪರ್ಕಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುತ್ತಿರುವುದರಿಂದ ಮೀಟರ್‌ ದರವನ್ನು (ಸಿಂಗಲ್‌ ಫೇಸ್ – 4,998 ರೂ.) ಆ ಗ್ರಾಹಕರೇ ಭರಿಸಬೇಕಾಗುತ್ತದೆ. ಪ್ರತಿ ತಿಂಗಳ ತಾಂತ್ರಿಕ ನಿರ್ವಹಣೆ ವೆಚ್ವವನ್ನು ಬೆಸ್ಕಾಂ ಭರಿಸಿ, ನಂತರ ದರ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ತಾತ್ಕಾಲಿಕ ಸಂಪರ್ಕಕ್ಕೆ ಪ್ರಿ-ಪೇಯ್ಡ್‌ಗೆ ಮಾತ್ರ ಅವಕಾಶವಿದ್ದು, ಪೋಸ್ಟ್‌ ಪೇಯ್ಡ್‌ ಆಯ್ಕೆ ಇರುವುದಿಲ್ಲ. ಹೊಸ ಸಂಪರ್ಕಗಳಿಗೆ ಪ್ರಿ-ಪೇಯ್ಡ್‌ ಹಾಗೂ ಪೋಸ್ಟ್‌-ಪೇಯ್ಡ್‌ ಆಯ್ಕೆ ಲಭ್ಯವಿರುತ್ತದೆ”,

    *ದರ/ಸಾಫ್ಟ್‌ವೇರ್‌ ವ್ಯತ್ಯಾಸ ಏನು?*

    “ಆರ್‌ಡಿಎಸ್‌ಎಸ್‌ ಜಾರಿಯಲ್ಲಿರುವ ರಾಜ್ಯಗಳಲ್ಲಿ ಏಕಕಾಲದಲ್ಲಿ ಎಲ್ಲ ಹಾಲಿ ಮೀಟರ್‌ಗಳನ್ನು ಸ್ಮಾರ್ಟ್‌ ಮೀಟರ್‌ಗಳಾಗಿ ಬದಲಾಯಿಸಲಾಗುತ್ತದೆ. ಆಗ ಮೀಟರ್‌ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ಕಡಿಮೆ ಬೆಲೆಗೆ ಸಿಗುತ್ತದೆ. ನಿರ್ದಿಷ್ಟ ಪ್ರದೇಶದ ಪೂರ್ಣ ವ್ಯಾಪ್ತಿಯಲ್ಲಿ ಮೀಟರ್‌ಗಳನ್ನು ಬದಲಾಯಿಸುವುದರಿಂದ ಸಾರಿಗೆ, ಸಿಬ್ಬಂದಿ ವೆಚ್ಚ ಕಡಿಮೆಯಾಗುತ್ತದೆ. ಹಾಗಾಗಿ, ಇಡೀ ಪ್ರಕ್ರಿಯೆಯನ್ನು ಕಡಿಮೆ ಅವಧಿಯಲ್ಲಿಯೂ ಪೂರ್ಣಗೊಳಿಸಬಹುದಾಗಿದೆ. ಈ ರಾಜ್ಯಗಳಲ್ಲಿ ಸಂವಹನಕ್ಕಾಗಿ ರೇಡಿಯೋ ಫ್ರಿಕ್ವೆನ್ಸಿ (RF) ಅಥವಾ ಜಿಪಿಆರ್‌ಎಸ್‌ ತಂತ್ರಜ್ಞಾನಗಳ ಬಳಕೆ ಮಾಡಬಹುದಾದ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಮೀಟರ್‌ಗಳ ದರ ಸ್ವಾಪಬಲ್‌ ಮೀಟರ್‌ಗಿಂತ ಕಡಿಮೆ ಇರುತ್ತದೆ.

     

    “ರಾಜ್ಯದಲ್ಲಿ ಅಳವಡಿಸುತ್ತಿರುವ ಸ್ಮಾರ್ಟ್‌ ಮೀಟರ್‌ಗಳು – ರೇಡಿಯೋ ಫ್ರಿಕ್ವೆನ್ಸಿ (RF) ಮತ್ತು ಜಿಪಿಆರ್‌ಎಸ್‌ ತಂತ್ರಜ್ಞಾನಗಳೆರಡನ್ನು ಹೊಂದಿದ್ದು, ಅಗತ್ಯಕ್ಕೆ ಅನುಗುಣವಾಗಿ ಪರಸ್ಪರ ಬದಲಾಯಿಸಬಹುದಾದಾಗಿದೆ (Swappable Model).

     

    “ಕೇಂದ್ರ ಸರ್ಕಾರದ ಸಬ್ಸಿಡಿ ಸೇರಿ 10 ವರ್ಷಗಳ ಕಾಲ ಪ್ರತಿ ಸ್ಮಾರ್ಟ್ ಮೀಟರ್‌ ಮತ್ತು ತಾಂತ್ರಿಕ ನಿರ್ವಹಣೆಗೆ ಪ್ರತಿ ತಿಂಗಳು ತಗಲುವ ವೆಚ್ಚ -ಮಹಾರಾಷ್ಟ್ರದಲ್ಲಿ 120.34 ರೂ., ಪಶ್ಚಿಮ ಬಂಗಾಳದಲ್ಲಿ 117.81 ರೂ., ಸಿಕ್ಕಿಂ ರಾಜ್ಯದಲ್ಲಿ 148.88 ರೂ., ಮಣಿಪುರದಲ್ಲಿ 130.30 ರೂ., ಮಧ್ಯಪ್ರದೇಶದಲ್ಲಿ 115.84 ರೂ. ಆಗುತ್ತದೆ. ಕರ್ನಾಟಕದಲ್ಲಿ ಈ ಮೊತ್ತವು ಕೇವಲ 116.65 ರೂ. ಆಗುತ್ತದೆ.

     

    *ಸ್ಮಾರ್ಟ್‌ ಮೀಟರ್‌ ವೈಶಿಷ್ಟ್ಯ*     

    ಹಳೆಯ ಮಾದರಿಯ ಮೀಟರ್‌ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್‌ ಮೀಟರ್‌ಗಳು ಜಿಪಿಆರ್‌ಎಸ್‌ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ. ಅಡ್ವಾನ್ಸ್‌ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (AMI) ತಂತ್ರಜ್ಞಾನದ ಸ್ಮಾರ್ಟ್‌ ಮೀಟರ್‌ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಎಸ್ಕಾಂಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್‌ ಮಾಡಿಕೊಳ್ಳಬಹುದು. ಗ್ರಾಹಕರು ಮುಂಚಿತವಾಗಿ ಹಣ ಪಾವತಿಸಿ ವಿದ್ಯುತ್‌ ಬಳಸಬಹುದಾಗಿದೆ. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.

  • ತೂಬಗೆರೆ : ಅಭಿವೃದ್ಧಿ ಕಾಣದ ರಸ್ತೆಗಳಿಗೆ ಕಾಂಕ್ರೀಟ್ ಭಾಗ್ಯ : ಗ್ರಾಮಸ್ಥರಿಂದ ವಾರ್ಡ್ ಸದಸ್ಯರಾದ ಲೋಕೇಶ್ವರಿ ರವಿ ಸಿದ್ದಪ್ಪ ರವರಿಗೆ ಅಭಿನಂದನೆ

    ದೊಡ್ಡಬಳ್ಳಾಪುರ ತೂಬಗೆರೆ : ಸಂಪೂರ್ಣ ಹಾಳಾಗಿದ್ದ ರಸ್ತೆಯನ್ನು ವಾಹನ ಸವಾರರು ಪಾದಚಾರಿಗಳು ಸಂಚರಿಸಲು ಸಹಕಾರಿಯಾಗುವಂತೆ ಸಚಿವರ ಸಹಕಾರದಿಂದ ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತೂಬಗೆರೆ ಗ್ರಾಮಸ್ಥರು ಸ್ಥಳೀಯ 3ನೇ ವಾರ್ಡ್ ನ ಸದಸ್ಯರಾದ ಲೋಕೇಶ್ವರಿ ರವಿಸಿದ್ದಪ್ಪ ಅವರನ್ನು ಅಭಿನಂದಿಸಿದ್ದಾರೆ.

    ತೂಬಗೆರೆ ಗ್ರಾಮದ ಅಂಗಡಿ ಬೀದಿಯ ರಸ್ತೆಗಳು ಹಲವು ವರ್ಷಗಳಿಂದ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಸಂಪೂರ್ಣ ಹಳ್ಳಗಳಿಂದ ಕೂಡಿದ್ದು, ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದೆವು, ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ , ಆದರೆ ಪ್ರಸ್ತುತ 3ನೇ ವಾರ್ಡ್ ನ ಮುಖಂಡರಾದ ರವಿ ಸಿದ್ದಪ್ಪರವರು ವೈಯಕ್ತಿಕವಾಗಿ ಸ್ಥಳೀಯ ರಸ್ತೆಗಳ ಅಭಿವೃದ್ಧಿ ಕುರಿತು ಸಚಿವರ ಗಮನಕ್ಕೆ ತರುವ ಮೂಲಕ ರಸ್ತೆ ಸರಿಪಡಿಸಿರುವುದು ಸಂತಸದ ವಿಷಯವಾಗಿದೆ ಎಂದರು.

    ಕೇವಲ ರಸ್ತೆ ಅಷ್ಟೇ ಅಲ್ಲದೆ , ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಅವರ ಕಾರ್ಯವೈಕರಿ ಶ್ಲಾಘನೀಯವಾದದ್ದು, ಅವರ ಈ ಸಮಾಜಮುಖಿ  ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.

     

     

     

     

  • ಕೌಶಲ್ಯ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಮೂರು ತಿಂಗಳ ಉಚಿತ ಕೌಶಲ್ಯ ತರಬೇತಿ ಪಡೆದ ಮಹಿಳೆಯರಿಗೆ ಇಂದು ಪ್ರಮಾಣಪತ್ರ ವಿತರಿಸಲಾಯಿತು.

     

    ಈ ಸಂಬಂಧ ಜಿಲ್ಲಾಡಳಿತ ಭವನದ ಜಿಲ್ಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ನೀಡಲಾಯಿತು.

     

    ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಜೊತೆಗೆ ಆರ್ಥಿಕವಾಗಿ ಸಧೃಡರಾಗಬೇಕು ಎಂಬ ಉದ್ದೇಶದಿಂದ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಸೂಕ್ಷ್ಮ ಕೌಶಲ್ಯ ಪೂರ್ವಭಾವಿ ಅಭಿವೃದ್ಧಿ ತರಬೇತಿ ನೀಡಲಾಗಿದೆ.

     

    ಮಹಿಳೆಯರಿಗೆ ಸ್ವ ಉದ್ಯೋಗ ಕಲ್ಪಿಸಿಕೊಡುವ ವಿವಿಧ ಬಗೆಯ ತಿಂಡಿ ತಿನಿಸುಗಳು ತಯಾರಿ, ಕರಕುಶಲ ವಸ್ತುಗಳು ತಯಾರಿ,ಮಾರಾಟ, ಸೀರೆ-ಬಟ್ಟೆ ಉತ್ಪನ್ನಗಳನ್ನು ಮಾರಾಟ ಮುಂತಾದವುಗಳ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡಲಾಗಿದ್ದು. ತರಬೇತಿಯ ಜೊತೆಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಸ್ವ ಉದ್ಯೋಗ ಸೃಷ್ಟಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಲಿದೆ.

    ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಾ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ್, ಭಾರತದ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕರಾದ ಪ್ರಸಾದ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಾ ಯೋಜನಾ ನಿರ್ದೇಶಕರಾದ ಗೌತಮ್ ವಿಕಾಸ್, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ರಾಜೀವ್ ಸುಲೋಚನಾ, ಅಧಿಕಾರಿಗಳು ಮತ್ತು ಸ್ವ-ಸಹಾಯ ಗುಂಪುಗಳ ಮಹಿಳೆಯರು ಉಪಸ್ಥಿತರಿದ್ದರು.

  • ಕ್ಷಯ ಮುಕ್ತ ಭಾರತವನ್ನು ನಿರ್ಮಿಸಲು ಟಿಬಿ ಚಾಂಪಿಯನ್ ಗಳ ಸಹಭಾಗೀತ್ವದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಆಚರಣೆ

    ದೊಡ್ಡಬಳ್ಳಾಪುರ : ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದು ಕಾಯಿಲೆಯ ವಿರುದ್ಧ ಹೋರಾಡಿ ಟಿಬಿ ಯನ್ನು ಗೆದ್ದು ಬಂದ ಟಿಬಿ ಚಾಂಪಿಯನ್ ಗಳಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

    ಈ ಕಾರ್ಯಕ್ರಮವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲೆಕ್ಕ ಕೃಷ್ಣಾರೆಡ್ಡಿ ಹಾಗೂ ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ ನಾಗೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು

    ಈಗಾಗಲೇ ತಾಲೂಕಿನ ವ್ಯಾಪ್ತಿಯಲ್ಲಿ ಚಿಕಿತ್ಸೆಯನ್ನು ಪಡೆದು ಟಿಬಿ ಯಿಂದ ಗುಣಮುಖರಾಗಿರುವ ವ್ಯಕ್ತಿಗಳು ಟಿಬಿ ಚಾಂಪಿಯನ್ ಗಳಾಗಿದ್ದು,ಇವರುಗಳಲ್ಲಿ ಕೆಲ ಚಾಂಪಿಯನ್ ಗಳನ್ನು ಆಯ್ಕೆ ಮಾಡಿ ಇದು ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಟಿಬಿ ಚಾಂಪಿಯನ್ ಗಳು ಮುಂದಿನ ದಿನಗಳಲ್ಲಿ ಟಿ ಬಿ ಕಾಯಿಲೆ ತುತ್ತಾಗಿ ಬರುವ ಹೊಸ ಟಿಬಿ ರೋಗಿಗಳಿಗೆ ಮನೋಸ್ಥೈರ್ಯ ನೀಡಿ ಚಿಕಿತ್ಸೆ ಪೂರ್ಣವಾಗಿ ಪಡೆಯಲು ಮಾನವಲಿಸುವ ಮೂಲಕ ಕ್ಷಯ ಮುಕ್ತ ಭಾರತದ ನಿರ್ಮಾಣಕ್ಕೆ ಸಹಾಯಕವಾಗಲಿದ್ದಾರೆ ಎಂದರು.

    ಒಂದು ವೇಳೆ ಚಿಕಿತ್ಸೆ ಪ್ರಾರಂಭಿಸಿದ ನಂತರ ರೋಗಿಯು ಅರ್ಧದಲ್ಲಿ ಚಿಕಿತ್ಸೆ ಬಿಟ್ಟರೆ ಆತನಿಗೆ ತನ್ನ ಚಿಕಿತ್ಸೆ ಯ ಅನುಭವಗಳು ಮತ್ತು ಉದಾಹರಣೆಗಳನ್ನು ನೀಡುವುದರ ಮೂಲಕ ಚಿಕಿತ್ಸೆಯನ್ನು ಮುಂದುವರಿಸಲು ಆಪ್ತ ಸಮಾಲೋಚನೆ ಮಾಡುವುದು. ಶ್ರೀ ಶಕ್ತಿ ಸ್ವಸಹಾಯ ಸಂಘಗಳಲ್ಲಿ, ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ, ಸಮುದಾಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಾಜರಾಗಿ ಜಾಗೃತಿ ಮೂಡಿಸುವುದು ಟಿಬಿ ಬಗ್ಗೆ ಅರಿವು ಮೂಡಿಸುವುದು ಟಿಬಿ ಬಗ್ಗೆ ಇರುವಂತಹ ಕಳಂಕ ತಾರತಮ್ಯವನ್ನು ಹೋಗಲಾಡಿಸಿ ಕ್ಷಯ ಮುಕ್ತ ಭಾರತವನ್ನು ಮಾಡಲು ಕೈಜೋಡಿಸುವುದು. ಹಾಗೂ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಮಾಡುವಂತೆ ಮನವರಿಕೆ ಮಾಡುವುದು. ರೋಗಿಯನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಮಾನವಲಿಸುವುದು . ತಮ್ಮ ವ್ಯಾಪ್ತಿಯಲ್ಲಿ ಬರುವ ಕ್ಷಯ ರೋಗಿಗಳನ್ನು ದತ್ತು ಪಡೆದು ಫುಡ್ ಕಿಟ್ ವಿತರಣೆ ಮಾಡಲು ಸಾರ್ವಜನಿಕ ರಲ್ಲಿ ಮನವರಿಕೆ ಮಾಡುವುದು ಇವರ ಪ್ರಮುಖ ಕರ್ತವ್ಯ ಹಾಗೂ ಉದ್ದೇಶವಾಗಿರುತ್ತದೆ ಎಂದು ತಿಳಿದರು.

    ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಆಡಳಿತಧಿಕಾರಿ ಶಾರದಾ ನಾಗರಾಜ್ ಸೇರಿದಂತೆ ಜಿಲ್ಲಾ ಕ್ಷಯ ರೋಗ ನಿರಂತರ ಅಧಿಕಾರಿಗಳ ಕಚೇರಿಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.

     

     

     

  • ಜಿಲ್ಲಾಧಿಕಾರಿಗಳು ನಮ್ಮ ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಲಿ : ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆ ಹೊರಾಟ ಸಮಿತಿ ಅಗ್ರಹ

    ದೊಡ್ಡಬಳ್ಳಾಪುರ – ನಿಜವಾಗಲೂ ವಿಶ್ವ ಜಲ ದಿನಾಚರಣೆ ಆ ದಿನಕ್ಕೆ ಅರ್ಥ ಪೂರ್ಣ ಸಿಗಬೇಕಾದರೆ ಕೆರೆಗಳಿಗೆ ಹರಿಯುತ್ತಿರುವ ಕೊಳಚೆ ನೀರನ್ನು ನಿಲ್ಲಿಸಬೇಕು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕೆರೆಗಳ ಶುದ್ಧೀಕರಣಕ್ಕೆ ಮುಂದಾಗಬೇಕು ಇಲ್ಲವಾದಲ್ಲಿ ವಿಶ್ವ ಜಲ ದಿನಾಚರಣೆ ದಿನದಂದು ಗ್ರಾಮಸ್ಥರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿ ಹಾಗೂ ಕೆರೆ ಹೊರಾಟ ಸಮಿತಿ ಎಚ್ಚರಿಕೆ ನೀಡಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರು ಮಾತಾಡಿದರು ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಅನ್ನು ಜಿಲ್ಲಾಡಳಿತವು ಆಚರಿಸುತ್ತಿದೆ. ವಿಶ್ವ ಜಲ ದಿನಾಚರಣೆ ಆಚರಿಸುವುದು ಯಾವುದೋ ಒಂದು ಕೆರೆ ಯಾವುದೋ ಒಂದು ಕಲ್ಯಾಣಿ ಯಲ್ಲಿ ಬೆಳೆದಿರುವ ಗಿಡಗಂಟೆ ಕಿತ್ತು ಸ್ವಚ್ಛಗೊಳಿಸಿದ್ದೇವೆ ಎಂದು ಆಚರಿಸುವುದು ಯಾವುದೇ ಪ್ರಯೋಜನವಿಲ್ಲ,

    ಈಗಾಗಲೇ ಅರ್ಕಾವತಿ ನದಿ ಹೋರಾಟ ಸಮಿತಿಯು ಕೆರೆಯ ಉಳಿವಿಗಾಗಿ ಅರ್ಕಾವತಿ ನದಿಯ ಉಳಿವಿಗಾಗಿ ಮೂರು ವರ್ಷಗಳಿಂದ ನಿರಂತರ ಹೋರಾಟ ಮಾಡ್ತಾ ಬಂದಿದೆ. ಆದರೆ ಯಾವುದೇ ಕಿಲುಬು ಕಾಸಿನ ಕಾರ್ಯ ಆಗಿಲ್ಲ.

     

    ರಾಜ್ಯದಲ್ಲೇ ಅತಿ ಹೆಚ್ಚು ಕಲುಷಿತ ಗೊಂಡಿರುವ ನದಿಗಳ ಪೈಕಿ ಅರ್ಕಾವತಿ ನದಿಯೇ ಪ್ರಥಮ ಸ್ಥಾನದಲ್ಲಿದೆ ಆದ್ದರಿಂದ ಅರ್ಕಾವತಿ ನದಿ ಹೋರಾಟ ಸಮಿತಿಯು 22 ಮಾರ್ಚ್ 2025 ರಂದು ತಾಲೂಕು ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಮೌನಚರಣೆ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಸತೀಶ್,ವಸಂತ್ ಕುಮಾರ್, ಎಲ್ಐಸಿ ಮಂಜುನಾಥ್, ರಾಮಕೃಷ್ಣಪ್ಪ, ತಳವಾರ ನಾಗರಾಜ್,ನರಸಿಂಹ ಮೂರ್ತಿ,ಮುನಿಕೃಷ್ಣಪ್ಪ, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

  • ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸುವುದಿಲ್ಲ – ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ

    ದೊಡ್ಡಬಳ್ಳಾಪುರ:ಕನ್ನಡ ನಾಡು ನುಡಿ ಭಾಷೆಗೆ ಅವಹೇಳನಕಾರಿ ರೀತಿಯಲ್ಲಿ ವರ್ತಿಸಿದ ಎಂ ಇ ಎಂ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವುದರಿಂದ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡರ ಬಣ)ಯ ಬೆಂಬಲವಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.

     

    ಅವರು ಮಾತನಾಡಿ ಮಾ.21ರಿಂದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಮುಖ್ಯ ಪರೀಕ್ಷೆ ಪ್ರಾರಂಭವಾಗುತ್ತಿದ್ದು,ಪರೀಕ್ಷಾ ಸಮಯದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಹಲವು ಸಂಘಟನೆಗಳು ಕರೆದಿರುವ 22 ರ ಶನಿವಾರದ ಕರ್ನಾಟಕ ಬಂದ್ ಗೆ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಬಲ ನೀಡುತ್ತಿಲ್ಲ ಎಂದರು.

    ನಮ್ಮ ನಾಡು ನುಡಿ ನೆಲ ಭಾಷೆಗೆ ತೊಂದರೆ ಸಮಯದಲ್ಲಿ ಹಿತ ಕಾಪಾಡುವಲ್ಲಿ ಹೋರಾಟ ಮಾಡುವುದರ ಮೂಲಕ ನಾಡಿನ ರಕ್ಷಣೆ ಕರ್ನಾಟಕ ರಕ್ಷಣಾ ವೇದಿಕೆ ಸದಾ ಹೋರಾಟದ ಮಂಚೂಣಿಯಲ್ಲಿದ್ದು ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ನೇತೃತ್ವದಲ್ಲಿ ಹಲವಾರು ಹೋರಾಟಗಳಲ್ಲಿ ಭಾಗಿಯಾಗಿದ್ದೇವೆ.

    ಆದರೆ ಎಸ್ ಎಸ್ ಎಲ್ ಸಿ ಪರೀಕ್ಷಾ ಸಮಯದಲ್ಲಿ ಬಂದ್‌ ಮಾಡುವುದರಿಂದ ಅನೇಕ ರೀತಿಯಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗಬಹುದು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ಬಂದ್ ಗೆ ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂದರು.