Blog

  • ಮಹಿಳಾ ಕೇಂದ್ರಿತ ಗ್ಯಾರಂಟಿಗಳ ಅನುಷ್ಠಾನ ಲಿಂಗಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ

    ಬೆಂಗಳೂರು :ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ.

     

    ಅವರು ಇಂದು ( ಫೆಬ್ರವರಿ 07, 2025) ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಒಂದು ಜಗತ್ತು ಹಲವು ಸಾಧ್ಯತೆಗಳನ್ನು ಬಿಂಬಿಸುವ ಕರ್ನಾಟಕ ಕುರಿತಾದ ಪುಸ್ತಕವನ್ನು ನೀಡಿದರು.

    ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಸಾಧನೆಯಲ್ಲಿ ಕರ್ನಾಟಕವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಅಧ್ಯಕ್ಷರು ಆಸಕ್ತಿಯಿಂದ ಹೆಚ್ಚು ಮಾಹಿತಿ ಹಾಗೂ ವಿವರಗಳನ್ನು ಬಯಸಿದರು.

     

    ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಕೈಗೆ ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ತಲಾವಾರು ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ,ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದರು.

    ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು , ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

     

    ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು.ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

     

    *ನವೀಕರಿಸಬಹುದಾದ ಇಂಧನ ಉತ್ಪಾದನೆ ರಾಜ್ಯಕ್ಕೆ ಅಗ್ರಸ್ಥಾನ*

     

    ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕವು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.

    ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ ಮೆಚ್ಚಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ ಸಹಾಯದ ಅಗತ್ಯವಿದ್ದು, ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳ (SDG) ಡ್ಯಾಶ್‌ಬೋರ್ಡ್ ವೀಕ್ಷಿಸಿ ಶ್ಲಾಘಿಸಿದರು.

     

    ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಜಿ.ಸತ್ಯವತಿ ಮತ್ತಿತರರು ಇದ್ದರು

  • ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳ ವಿರುದ್ಧ ದೂರು ನೀಡಿ

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ನೊಂದಾಯಿತ ಲೇವಾದೇವಿ/ಗಿರವಿ ಸಂಸ್ಥೆಗಳು ಕರ್ನಾಟಕ ಲೇವಾದೇವಿ ಅಧಿನಿಯಮದಡಿ ಸಾರ್ವಜನಿಕರ ಭದ್ರತೆ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇಕಡಾ 14 ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವಾರ್ಷಿಕ ಶೇಕಡಾ 16 ರಷ್ಟು ಬಡ್ಡಿ ವಿಧಿಸಬೇಕು.

     

    ಹೆಚ್ಚುವರಿ ಬಡ್ಡಿ ವಿಧಿಸುತ್ತಿರುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಕಂಡ ಕಛೇರಿಗೆ ದೂರು ಸಲ್ಲಿಸಬಹುದು.

     

    ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿ, ಬೆಂಗಳೂರು ಪ್ರಾಂತ-ದೂ.ಸಂಖ್ಯೆ:080-26612911, ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ-ದೂ.ಸಂಖ್ಯೆ-080-22442152, ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರ ಕಚೇರಿ ದೊಡ್ಡಬಳ್ಳಾಪುರ, ದೂ.ಸಂಖ್ಯೆ:9901539026 ಸಂಪರ್ಕಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಂಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬಣ್ಣದ ಘಟಕಗಳಿಗೆ ನಗರಸಭೆ ನೋಟೀಸ್ ಹಿನ್ನಲೆ ಸಂಸ್ಕರಣಾ ಘಟಕ ನಿರ್ಮಿಸಿಕೊಡಲು ನೇಕಾರರ ಒತ್ತಾಯ

    ದೊಡ್ಡಬಳ್ಳಾಪುರ :ನಗರದಲ್ಲಿ ರೇಷ್ಮೆ ಬಣ್ಣ ಮಾಡುವ ಘಟಕಗಳು ಮಾಲಿನ್ಯಕಾರಕ ಎಂದು ನಗರಸಭೆಯಿಂದ ನೋಟೀಸ್ ನೀಡಿ ಘಟಕಗಳನ್ನು ಮುಚ್ಚಲು ಹೊರಟಿರುವ ಕ್ರಮದಿಂದ ನೇಕಾರಿಕೆ ಸಂಕಷ್ಟ ಎದುರಾಗಲಿದ್ದು,ನಗರಸಭೆ ಈ ಬಗ್ಗೆ ಕ್ರಮ ಕೈಗೊಂಡು ರೇಷ್ಮೆ ಮತ್ತು ಕೃತಕ ರೇಷ್ಮೆ ಬಣ್ಣ ಮಾಡುವ ಘಟಕಗಳಿಗೆ ಬಣ್ಣದ ನೀರು ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿಕೊಡಬೇಕೆಂದು ಒತ್ತಾಯಿಸಿ, ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ನೇಕಾರರು ಹಾಗೂ ಬಣ್ಣದ ಘಟಕಗಳ ಮಾಲೀಕರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

     

     

    ಈ ವೇಳೆ ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತ ರಾಜು ಮಾತನಾಡಿ, ಕೆಲವು ವರ್ಷಗಳಿಂದ ರೇಷ್ಮೆ ಬಣ್ಣ ಮಾಡಿದ ನೀರು ಕೆರೆಗಳಿಗೆ ಸೇರಿ ಕೆರೆಯ ನೀರು ಮಲೀನವಾಗುತ್ತಿದೆ ಎಂದು ನಗರಸಭೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಲಿಯವರು ಬಣ್ಣ ಮಾಡುವ ಘಟಕದ ಮಾಲಿಕರಿಗೆ ನೋಟಿಸ್ ನೀಡುವುದರ ಮೂಲಕ ಎಚ್ಚರಿಕೆಯನ್ನು ಕೋಡುತ್ತಿದ್ದು, ಕಳೆದವಾರ ಅಂತಿಮ ನೋಟಿಸ್ ನೀಡಿದ್ದು ಹೀಗೆ ಮುಂದುವರೆದರೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ . ರೇಷ್ಮೆ ಬಣ್ಣ ಮಾಡುವ ಘಟಕಗಳು ಏಳೆಂಟು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಬಣ್ಣದ ಘಟಕಗಳಿಂದ ಬಣ್ಣ ಹಚ್ಚಿದ ರೇಷ್ಮೆ ಮತ್ತು ಕೃತಕ ರೇಷ್ಮೆ ಸೀರೆ ನೇಯಲು ಉಪಯೋಗಿಸುತ್ತಿದ್ದರು. ದೊಡ್ಡಬಳ್ಳಾಪುರ ನಗರದಲ್ಲಿ ಸಾವಿರಾರು ಮಗ್ಗಗಳು ಇದರ ಮೇಲೆ ಅವಲಂಬಿತವಾಗಿದೆ ಬಣ್ಣ ಘಟಕದ ಮಾಲೀಕರು ಸ್ವಂತ ಮನೆ ಮತ್ತು ಭೂಮಿ ಹೊಂದಿರುವುದಿಲ್ಲ. ಬಹು ಪಾಲು ಜನ ನೆರೆ ರಾಜ್ಯಗಳಿಂದ ಬಂದು ಇಲ್ಲಿ ಜೀವನೋಪಾಯಕ್ಕಾಗಿ ಈ ವೃತ್ತಿಯಲ್ಲಿ ನಿರತರಾಗಿದ್ದಾರೆ ಇವರೆಲ್ಲ, ತುಂಬಾ ಬಡವರಾಗಿದ್ದು ಬಾಡಿಗೆ ಮನೆಯಲ್ಲಿ ಮತ್ತು ಬಾಡಿಗೆ ಜಾಗದಲ್ಲಿ ಜೋಪಡಿಗಳನ್ನು ಹಾಕಿಕೊಂಡು ವೃತ್ತಿ ನಡೆಸುತ್ತಿದ್ದಾರೆ ಕಳೆದ ಎಪ್ಪತೈದು ವರ್ಷಗಳಿಂದ ನಡೆಯುತ್ತಿದ್ದು ಇಷ್ಟು ವರ್ಷಗಳು ಬಣ್ಣ ತೊಳೆದ ನೀರಿನಿಂದ ಪರಿಸರ ಮಾಲಿನ್ಯ ಆಗದೇ ಇರುವುದು ಈಗ ಪರಿಸರ ಮಾಲಿನ್ಯದ ಪ್ರಶ್ನೆ ಮುಂದಿಟ್ಟ ಇಲಾಖೆಗಳು ನಮಗೆ ತೊಂದರೆ ಕೊಡುತ್ತಿರುವುದು ನೋಡಿದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಗಿದೆ. ನಗರದಲ್ಲಿ ನಿತ್ಯ ಕೆಲಸ ಮಾಡುವ ಐದಾರು ಘಟಕಗಳಿವೆ. ಇನ್ನು ಇಲ್ಲಿಂದ ಹೊರಬರುವ ತ್ಯಾಜ್ಯ ನೀರು ಮೂಲಕ ಎಂಟು ಕಿ.ಮೀ ದೂರದಲ್ಲಿರುವ ಕೆರೆಗೆ ಹೋಗುತ್ತದೆ ಎಂಬ ವಾದವು ಸರಿಯಿಲ್ಲ, ಚಿಕ್ಕತುಮಕೂರು ಕೆರೆಗೆ ಕೈಗಾರಿಕಾ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ರೇಷ್ಮೆ ಬಣ್ಣದ ಘಟಕಗಳ ಪ್ರಮಾಣ ತೀರ ಅಲ್ಪವಾಗಿದೆ. ಈ ಬಣ್ಣದ ನೀರು ಇಷ್ಟು ದೂರ ಸಾಗುವ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ನಮಗೂ ಸಹ ಜೀವ ಜಲವನ್ನು ಮಲಿನ ಮಾಡಲು ಇಷ್ಟವಿಲ್ಲ. ಘಟಕಗಳಿಂದ ಬಣ್ಣದ ನೀರನ್ನು ಸಂಸ್ಕರಿಸಿ ಕಾಲುವೆಗೆ ಬಿಡಿಯೆಂದು ಅಧಿಕಾರಿಗಳು ಹೇಳುತ್ತಿದ್ದು, ಸಂಸ್ಕರಣಾ ಘಟಕಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಇಲಾಖೆಗಳು ಒಂದೇ ಕಡೆ ಸಂಸ್ಕರಣಾ ಘಟಕವನ್ನು ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದರು.

     

    ಬಣ್ಣದ ಘಟಕದ ಮಾಲೀಕ ನಟರಾಜ್, ಸಾಯಿರಾಂ ಮಾತನಾಡಿ, ರೇಷ್ಮೆ ಬಣ್ಣ ಮಾಡುವ ಘಟಕಗಳು ಗುಡಿ ಕೈಗಾರಿಕೆಯಾಗಿದ್ದು, ಇದು ಸಹ ನೇಕಾರಿಕೆಯ ಒಂದು ಅಂಗವಾಗಿದೆ. ಮುಖ್ಯವಾಗಿ ಇದರಲ್ಲಿ ಯಾವುದೇ ಅಪಾಯಕರ ರಾಸಾಯನಿಕಗಳು ಇಲ್ಲ. ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದರು.

     

    ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ಕೆರೆ ಮಲಿನವಾಗುತ್ತಿರುವ ಕುರಿತು ದೂರುಗಳ ಬಂದ ಹಿನ್ನಲೆಯಲ್ಲಿ ಜಿಲ್ಲಾಕಾರಿಗಳ ಸಭೆಯ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ರೇಷ್ಮೆ ಬಣ್ಣದ ಘಟಕಗಳ ಮಾಲಿನ್ಯ ಪ್ರಮಾಣ ಕಡಿಮೆಯಿದೆ ಎನ್ನುವುದಕ್ಕೆ ವೈಜ್ಞಾನಿಕವಾಗಿ ಸಾಬೀತಾಗುವಂತೆ ಪರೀಕ್ಷೆ ನಡೆಸಲಾಗುವುದು. ನೇಕಾರರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಲಿ ಅಕಾರಿಗಳೊಂದಿಗೆ ಚರ್ಚಿಸಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

     

     

    ಈ ವೇಳೆ ನೇಕಾರರ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಜಿ.ಗೋಪಾಲ್, ಎನ್.ಲೋಕೇಶ್, ಉಪಾಧ್ಯಕ್ಷರಾದ ಎಸ್.ಎನ್.ಶಿವರಾಂ ಸಂಜೀವಪ್ಪ, ಕರ‍್ಯದರ್ಶಿ ರಮೇಶ್ ರೆಡ್ಡಿ ಖಜಾಂಚಿ ರಂಗಸ್ವಾಮಿ, ಬಣ್ಣದ ಘಟಕದ ಮಾಲೀಕರಾದ ಗೋವಿಂದಪ್ಪ, ರಾಮಚಂದ್ರಪ್ಪ ಹಾಜರಿದ್ದರು

  • ಫೆ.18,19 ರಂದು ಕ್ರೀಡಾ ಶಾಲೆ /ವಸತಿ ನಿಲಯ ಪ್ರವೇಶಕ್ಕೆ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆ

    ಬೆಂಗಳೂರು ಗ್ರಾಮಾಂತರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26 ನೇ ಸಾಲಿನಲ್ಲಿ ರಾಜ್ಯ ಕ್ರೀಡಾಶಾಲೆ /ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.

     

    ಕ್ರೀಡಾಶಾಲೆ /ವಸತಿ ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಪ್ರವೇಶಕ್ಕೆ ಬೆಂಗಳೂರು ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಗೆ ಈ ಹಿಂದೆ ನಿಗದಿ ಪಡಿಸಿದ್ದ ದಿನಾಂಕಗಳನ್ನು ಪರಿಷ್ಕರಿಸಿ ಫೆಬ್ರುವರಿ 18 ರಂದು ಕಿರಿಯರ ವಿಭಾಗಕ್ಕೆ ಹಾಗೂ ಫೆಬ್ರುವರಿ 19 ರಂದು ಹಿರಿಯರ ವಿಭಾಗಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದ್ದು ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

     

    ಹೆಚ್ಚಿನ ಮಾಹಿತಿಗಾಗಿ ದೂ.ಸಂ 080-29787443 ಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಬಸವರಾಜು ಎ.ಬಿ ಅಧಿಕಾರ ಸ್ವೀಕಾರ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಬಸವರಾಜು ಎ.ಬಿ ಅವರು ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

     

    ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

     

    ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಎ.ಬಿ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಾಗಿ ನೇಮಿಸಿ ಫೆ.03 ರಂದು ಸರ್ಕಾರ ಆದೇಶ ಹೊರಡಿಸಿತ್ತು.

     

    ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶಿಲ್ದಾರ್‌ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ ಪಾತ್ರವಹಿಸುತ್ತದೆ – ನ್ಯಾಯವಾದಿ ಜಿ.ಸುರೇಶ್ ಗೌಡ

    ವಿದ್ಯಾರ್ಥಿಗಳಿಗೆ ಉತ್ತಮ ಹವ್ಯಾಸಗಳು ಮತ್ತು ಪಠ್ಯೇತರ ಚಟುವಟಿಕೆಗಳು  ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯವಾದಿ ಜಿ.ಸುರೇಶ್ ಗೌಡ ತಿಳಿಸಿದರು.

    ಮಾರಸಂದ್ರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಪಿ.ಕೆ.ಬಿ  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ.  ಶಿಕ್ಷಣದ ಮಹತ್ವವನ್ನು ಅರಿತವರು ಜೀವನದಲ್ಲಿ ಯಶಸ್ಸು ಪಡೆಯುತ್ತಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ    ಶಿಸ್ತುಬದ್ದ ಓದು ಮತ್ತು   ಸಕಾರಾತ್ಮಕ  ಚಿಂತನೆಗಳು  ಪ್ರತಿಭೆಯ ಅನಾವರಣಕ್ಕೆ ಸಹಕಾರಿ ಆಗಲಿವೆ ಎಂದರು.

     

    ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಟಿ.ಎಂ.ಕರಗಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯವು ಬಹುಮುಖ್ಯವಾಗಿರುತ್ತದೆ.   ಮಾನವೀಯ ಮೌಲ್ಯಗಳೊಂದಿಗೆ  ಆರೋಗ್ಯಕರ ಜೀವನಶೈಲಿದಿಂದ  ಸುಶಿಕ್ಷಿತ   ಸಮಾಜ ನಿರ್ಮಾಣವಾಗುತ್ತದೆ. ಉತ್ತಮ ಫಲಿತಾಂಶ  ಮತ್ತು ಗುಣಮಟ್ಟದ ಶಿಕ್ಷಣ ನಮ್ಮ ವಿದ್ಯಾಸಂಸ್ಥೆಯ  ಗುರಿಯಾಗಿದೆ ಎಂದರು.

     

    ಕಾರ್ಯಕ್ರಮದಲ್ಲಿ   ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಅಧ್ಯಕ್ಷೆ ವಿಜಯ ಮಾರಹನುಮಯ್ಯ, ಪಿ.ಕೆ.ಬಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಆನಂದ,  ರಾಷ್ಟ್ರಪಶಸ್ತಿ ಪುರಸ್ಕತ ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ,    ಮುಖ್ಯಶಿಕ್ಷಕರುಗಳಾದ   ಎಂ.ರಾಹತ್ ನವಾಜ್ ಬೇಗಂ,  ಗೀತಾ,  ಉಪನ್ಯಾಸಕರುಗಳಾದ. ಎಚ್.ಬಿ.ಕೆಂಚಪ್ಪ,  ಎ.ಆರ್.ಗಂಗಾಧರೇಶ್ವರ, ಕೆ.ಆರ್.ಪ್ರಸನ್ನಕುಮಾರ್, ಅಜತ್, ಎಸ್.ನೇತ್ರಾ, ಟಿ.ಕೆ.ಅನುರಾಧ, ಎನ್.ಆಶಾ, ಡಿ.ಆರ್.ಗೀತಾ,  ಮಂಜುನಾಥ್  ಮುಂತಾದವರು ಭಾಗವಹಿಸಿದ್ದರು.

  • ಜಿಲ್ಲಾಡಳಿತ ಭವನದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ

    ಬೆಂಗಳೂರು ಗ್ರಾಮಾಂತರ : ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದಾಗಿದ್ದು, ಕ್ಯಾನ್ಸರ್ ರೋಗವನ್ನು ತಡೆಯಲು ಸಾರ್ವಜನಿಕರು ಜಾಗೃತರಾಗಿಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್ ಅನುರಾಧ ಅವರು ಹೇಳಿದರು.

     

    ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,ಬದಲಾದ ಜೀವನ ಶೈಲಿ, ಮನಸ್ಥಿತಿ, ಆಹಾರ ಪದ್ಧತಿಯಿಂದ ಕ್ಯಾನ್ಸರ್ ನಂತಹ ರೋಗಗಳು ಬರಲಾರಂಭಿಸಿತು. ಕ್ಯಾನ್ಸರ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಬರುತ್ತಿದ್ದೆ, ಯುವ ಸಮೂಹ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಜೀವನ ನಡೆಸಿ ಎಂದರು.

     

    ಪ್ರಸಕ್ತ ದಿನಗಳಲ್ಲಿ ಮಹಿಳೆಯರಲ್ಲೂ ಕೂಡ ಹೆಚ್ಚಾಗಿ ಕ್ಯಾನ್ಸರ್ ಕಂಡು ಬರುತ್ತಿದೆ. ಆರಂಭಿಕ ಹಂತದಲ್ಲಿ ಲಕ್ಷಣಗಳು ಕಂಡು ಬಂದಲ್ಲಿ ಭಯ ಪಡದೆ ಚಿಕಿತ್ಸೆ ಪಡೆಯಬೇಕು. ಮೊದಲ ಹಂತದಲ್ಲೇ ಪತ್ತೆ ಹಚ್ಚಿದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಪೂರ್ಣವಾಗಿ ಗುಣ ಪಡಿಸಬಹುದು. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಆರೋಗ್ಯ ಇಲಾಖೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

     

    ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಙರಾದ ಡಾ|| ಸೋನಿಯಾ ಅವರು ಮಾತನಾಡಿ ಕ್ಯಾನ್ಸರ್ ಬಂದರೆ ಸಾವು ಎಂಬ ಭಾವನೆ ಅನೇಕರಲ್ಲಿದೆ. ಆ ಮನೋಭಾವ ಹೋಗಬೇಕು. ಕ್ಯಾನ್ಸ‌ರ್ ರೋಗಿಗಳು ಕೂಡ ಸಾವನ್ನು ಗೆದ್ದು ಎಲ್ಲರಂತೆ ಜೀವನ ನಡೆಸಬಹುದು. ಹಾಗೆ ಕ್ಯಾನ್ಸ‌ರ್ ಬಾರದ ಹಾಗೆ ತಡೆಯುವುದು ಕೂಡ ಅತೀ ಮುಖ್ಯ.

     

    ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಲಕ್ಷಣಗಳು ತಿಳಿದ ಕೂಡಲೇ ಆಸ್ಪತ್ರೆಗೆ ಪರೀಕ್ಷಿಸಬೇಕು. ಆದರೇ ಮಹಿಳೆಯರು ಮುಜುಗರ ಪಡುತ್ತಾ ಹಾಗೆ ಉಳಿಯುತ್ತಾರೆ. ಯಾರು ಕೂಡ ಮುಜುಗರ ಪಡದೆ ಪ್ರಥಮ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕು. ಕ್ಯಾನ್ಸರ್ ಎಂದರೆ ಜನರು ಭಯ ಪಡುತ್ತಾರೆ. ಇದು ಒಂದು ಗುಣಪಡಿಸಬಹುದಾದ ಖಾಯಿಲೆ. ಸಾರ್ವಜನಿಕರು ಕೂಡ ಆಧುನಿಕ ಜೀವನಶೈಲಿ, ಫಾಸ್ಟ್ ಫುಡ್, ಧೂಮಪಾನ, ಮಧ್ಯಪಾನ ಸೇವನೆಗಳಿಂದ ದೂರವಿರಿ. ನಿಯಮಿತ ಗುಣಮಟ್ಟದ ಆಹಾರ ಸೇವನೆ, ಮನೋ ಶೈಲಿ, ಉತ್ತಮ ಯೋಗಾಭ್ಯಾಸ ಜೀವನದಲ್ಲಿ ರೂಡಿಸಿಕೊಂಡಲ್ಲಿ ರೋಗಗಳು ಮನುಷ್ಯನ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಸುನೀಲ್ ಕುಮಾರ್ ಎಂ. ಸಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಹೇಮಾವತಿ ಎ.ವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್, ಡಾ.ರಾಜೇಶ್ವರಿ, ಸಮುದಾಯ ಆರೋಗ್ಯಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಕರ್ನಾಟಕ ಡ್ರೈವರ್ಸ್ ಅಂಡ್ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ನೂತನ ತಾಲ್ಲೂಕು ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ

    ದೊಡ್ಡಬಳ್ಳಾಪುರ : ಕರ್ನಾಟಕ ಚಾಲಕ ಹಾಗೂ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆಡೆದಿದ್ದು, ತಾಲೂಕು ಚಾಲಕರ ಘಟಕದ ಅಧ್ಯಕ್ಷರಾಗಿ ಅವಿನಾಶ್ ಅವರನ್ನು ಆಯ್ಕೆ ಮಾಡಲಾಗಿದೆ.

    ಆಯ್ಕೆಯಾದ ನೂತನ ಅಧ್ಯಕ್ಷರಿಗೆ ಸಂಘದ ಪದಾಧಿಕಾರಿಗಳು ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿ ಶುಭಹಾರೈಸಿದ್ದಾರೆ.

     

    ಈ ಕುರಿತು ನೂತನ ಅಧ್ಯಕ್ಷ ಅವಿನಾಶ್ ಮಾತನಾಡಿ ಚಾಲಕರ ಸಮಸ್ಯೆಗಳು ಸಾಕಷ್ಟಿವೆ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಸಂಘದ ಬಲವರ್ತನೆಗೆ ಹೆಚ್ಚು ಒತ್ತು ನೀಡುವ ಮೂಲಕ ಚಾಲಕರ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಾಗುವುದು, ಸಂಘದ ಅಭಿವೃದ್ಧಿಗೆ ಶ್ರಮಿಸಲು ಉತ್ತಮ ಅವಕಾಶ ದೊರೆತಿದ್ದು, ಈ ಸದಾವಕಾಶ ಕಲ್ಪಿಸಿದ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು .

     

  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಆಲಹಳ್ಳಿ ಡೈರಿಗೆ 2 ಲಕ್ಷ ಅನುದಾನದ ಡಿ ಡಿ ವಿತರಣೆ

    ದೊಡ್ಡಬಳ್ಳಾಪುರ : ತಾಲೂಕಿನ ಆಲಹಳ್ಳಿ ಗ್ರಾಮದ ಡೈರಿಗೆ ಧರ್ಮಸ್ಥಳ ಯೋಜನೆ ವತಿಯಿಂದ 2 ಲಕ್ಷ ಅನುದಾನ ಮಂಜೂರಾತಿ ಆಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ದೇಶಕರಾದ ಉಮರಬ್ಬ DD ವಿತರಣೆ ಮಾಡಿದರು.

     

    ಈ ಸಂದರ್ಭದಲ್ಲಿ ಮಾತನಾಡಿದ avaru ಬೆಂಗಳೂರು ಗ್ರಾಮಾಂತರದಲ್ಲಿ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ಇದ್ದು, ಈ ಭಾಗದ ಹೆಚ್ಚಿನ ರೈತರು ಪಶುಸಂಗೋಪನೆಯಲ್ಲಿ ನಿರತರಾಗುವ ಮೂಲಕ ಹಾಲಿನ ಉತ್ಪಾದನೆಯಲ್ಲಿ ರಾಜ್ಯಕ್ಕೆ ಕೊಡುಗೆ ನೀಡುತ್ತಿದೆ ಎಂದರು.

     

    ರೈತರು ಹಾಲಿನ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಕಾಲಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸುವ ಮೂಲಕ ಜಾನುವಾರುಗಳ ಆರೋಗ್ಯ ಕಾಪಾಡುವುದರ ಜೊತೆ ಜೊತೆಗೆ ತಮ್ಮ ಹೈನುಗಾರಿಕೆಯನ್ನು ಕೂಡ ಅಭಿವೃದ್ಧಿಪಡಿಸಿಕೊಳ್ಳಲು ಮುಂದಾಗಬೇಕಿದೆ ಎಂದು ತಿಳಿಸಿದರು

     

    ಈ ಸಂದರ್ಭದಲ್ಲಿ ಹಾಲು ಉತ್ಪಾದನಾ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ ಮತ್ತು ಉಪಾಧ್ಯಕ್ಷರಾದ ನಾರಾಯಣಪ್ಪ ಕೇಂದ್ರ ಕಚೇರಿ ಯೋಜನಾಧಿಕಾರಿಯವರಾದ ಕಿಶೋರ್ ದೊಡ್ಡಬಳ್ಳಾಪುರ ಯೋಜನಾಧಿಕಾರಿ ಸುಧಾ ಭಾಸ್ಕರ್ ಮೇಲ್ವಿಚಾರಕರಾದ ಶಶಿಕಲಾ ಹಾಲು ಉತ್ಪಾದನಾ ಸಮಿತಿಯ ಸದಸ್ಯರು ಸಂಘದ ಸದಸ್ಯರು ಸೇವಾ ಪ್ರತಿನಿಧಿಗಳು ಹಾಜರಿದ್ದರು

  • ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡ ರಾಜ್ ವಂಶದ ಅಭಿಮಾನಿ ವೈ. ಎನ್.ನಾಗರಾಜು

    ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.

     

    ತಾಲೂಕಿನ ದರ್ಗಾ ಜೋಗಹಳ್ಳಿಯಲ್ಲಿ ನಡೆಯುತ್ತಿರುವ 1774 ನೇ ದಿನದ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಕರ್ನಾಟಕ ಜನಸೇನೆ ಕಾರ್ಯಾಧ್ಯಕ್ಷ ಎನ್.ವೈ ನಾಗರಾಜು ಪಾಲ್ಗೊಂಡು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಣೆ ಹಾಗೂ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡಿ ಮಾತನಾಡಿದರು ನಮ್ಮ ವಿಶೇಷ ದಿನವನ್ನು ಇಂದು ಅರ್ಥಪೂರ್ಣವಾಗಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಿರುವುದು ಸಂತಸ ತಂದಿದೆ. ಹಣವನ್ನು ದುಂದು ವೆಚ್ಚ ಮಾಡದೆ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡಿರುವುದು ವಿಶೇಷ, ಮುಂದೆ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಸೇವೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

    ಯುವ ಮುಖಂಡ ಬೀಡಿಕೆರೆ ವರುಣ್ ಮಾತನಾಡಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ನಿರಾಶ್ರಿತ ಕಡುಬಡವರಿಗೆ ಮಲ್ಲೇಶ್ ಮತ್ತು ತಂಡ ನಿತ್ಯ ನಿರಂತರ ಅನ್ನದಾಸೋಹ ನಡೆಸುತ್ತಿರುವುದು ಶ್ಲಾಘನೀಯ ವಿಷಯ , ಇಂತಹ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಜನಸೇನೆ ಕಾರ್ಯಾಧ್ಯಕ್ಷ ಎನ್.ವೈ ನಾಗರಾಜು ಅಣ್ಣನವರು ಪಾಲ್ಗೊಂಡು ಆಹಾರ ವಿತರಣೆ ಮಾಡಿರುವುದು , ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡುವ ಮೂಲಕ ಶುಭ ಹಾರೈಸಿರುವುದು ಸಂತಸ ತಂದಿದೆ ಮುಂದೆ ಇಂತಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಿ ನೆಡೆಯಲಿ ಎಂದು ಶುಭ ಹಾರೈಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

     

    ಕಾರ್ಯಕ್ರಮದ ಆಯೋಜಕ ಅನ್ನ ದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರ ದಾನಿಗಳ ನೆರವಿನಿಂದ ಈ ಅನ್ನದಾಸೋಹ ಕಾರ್ಯಕ್ರಮವು ನಡೆಯುತ್ತಿದ್ದು, ಪ್ರತಿನಿತ್ಯ ನೂರಾರು ಜನರ ಹಸಿವನ್ನು ನೀಗಿಸುತ್ತಿದೆ. ಇಂದಿನ ಕಾರ್ಯಕ್ರಮವು ವಿಶೇಷವಾಗಿದ್ದು, ಕಾರ್ಯಕ್ರಮದ ದಾನಿಗಳಾದ ನಾಗರಾಜು ರವರಿಗೆ ಶುಭ ಹಾರೈಸುತ್ತೇನೆ , ಅವರ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ, ಸಮಾಜಕ್ಕೆ ಅವರ ಸೇವೆ ಮತ್ತಷ್ಟು ಸಿಗುವಂತಾಗಲಿ ಎಂದರು

    ದಿನೇ ದಿನೇ ಆಹಾರ ಬಯಸಿ ಬರುವ ಜನಸಂಖ್ಯೆ ಹೆಚ್ಚಾಗುತ್ತಿದ್ದು , ದಾನಿಗಳ ಅವಶ್ಯಕತೆ ಇದೆ , ದಾನಿಗಳು ತಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಹಸಿದ ಹೊಟ್ಟೆಗಳಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು .

     

    ಕಾರ್ಯಕ್ರಮದಲ್ಲಿ ಕೆಂಪರಾಜು (ನಮ್ಮ ಕರ್ನಾಟಕ ಜನಸೇನೆ.ತಾಲೂಕುಅಧ್ಯಕ್ಷರು),ಮುನಿರಾಜು,ಶ್ರೀನಿವಾಸ್,ಆನಂದಪ್ಪ,ನಗರ ಮುಖಂಡರು ಯಶೋಧಮ್ಮ, ವರುಣ್ ಬೀಡಿಕೆರೆ ಸಮಾಜ ಸೇವಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.