Blog

  • ಕರವೇಯಿಂದ ಫೆಬ್ರವರಿ 1 ರಂದು ನೆಡೆಯಲಿದೆ ಮಹಾ ಸಂಘರ್ಷ ಯಾತ್ರೆ – ಪುರುಷೋತ್ತಮ್ ಗೌಡ

    ದೊಡ್ಡಬಳ್ಳಾಪುರ : ಕರ್ನಾಟಕದಲ್ಲಿ ಉತ್ತರ ಭಾರತೀಯರ ದಬ್ಬಾಳಿಕೆ ಹೆಚ್ಚಾಗಿದೆ, ಉತ್ತರ ಭಾರತೀಯರ ವಲಸೆ ಪರಿಣಾಯ ಕನ್ನಡಿಗರ ಅನ್ನವನ್ನ ಕಿತ್ತುಕೊಳ್ಳುತ್ತಿದ್ದಾರೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸುತ್ತಿರುವ ಕರವೇ ನಾರಾಯಣಗೌಡ ಬಣ ಫೆಬ್ರವರಿ 1 ರಂದು ಫ್ರೀಡಂ ಪಾರ್ಕ್ ಮಹಾ ಸಂಘರ್ಷ ಯಾತ್ರೆಗೆ ಚಾಲನೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಕರವೇ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ತಿಳಿಸಿದರು

    ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟದ ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಎಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು, ಎಲ್ಲ ಉತ್ಪನ್ನಗಳ ಮೇಲೆ ಶೇಕಡಾ 60 ರಷ್ಟು ಕನ್ನಡ ಬರಹ ಇರಬೇಕು, ರಾಜ್ಯದಲ್ಲಿರುವ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳು ಕನ್ನಡಿಗರಿಗೆ ಮಾತ್ರ ಸಿಗಬೇಕು ಎಂಬ ಮೂರು ಹಕ್ಕೊತ್ತಾಯಗಳನ್ನ ಸರ್ಕಾರದ ಮುಂದಿಡುತ್ತಿದ್ದೇವೇ, ನಾರಾಯಣಗೌಡರವರ ನೇತೃತ್ವದಲ್ಲಿ ಫೆಬ್ರವರಿ 1 ರಂದು ಫ್ರೀಡಂ ಪಾರ್ಕ್ ಮಹಾ ಸಂಘರ್ಷ ಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನ ನೀಡಲಾಗುವುದು ಎಂದರು

    ತಾಲೂಕು ಅಧ್ಯಕ್ಷರಾದ ಮಂಜುನಾಥ್ ನಾಯ್ಕ್ ಮಾತನಾಡಿ, ರಾಜ್ಯದಲ್ಲಿ ಉತ್ತರ ಭಾರತೀಯರ ವಲಸೆ ಹೆಚ್ಚಾಗಿದೆ, ರಾಜ್ಯದಲ್ಲಿನ ಉದ್ಯೋಗಗಳು ಪರಭಾಷಿಕರ ಪಾಲಾಗುತ್ತಿವೆ, ಬ್ಯಾಂಕ್ ಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗಳೇ ಇಲ್ಲದಂತ ಪರಿಸ್ಥಿತಿ ಇದೆ, ಇದರಿಂದ ಹಳ್ಳಿಯ ರೈತಾಪಿ ಜನರಿಗೆ ತೊಂದರೆಯಾಗುತ್ತಿದೆ, ಚಿನ್ನಾಭರಣ ಅಂಗಡಿಗಳಿಂದ ಹಿಡಿದು ಕ್ಷೌರದ ಅಂಗಡಿಗಳು ಉತ್ತರ ಭಾರತೀಯರ ಪಾಲಾಗುತ್ತಿವೆ, ಜಿಲ್ಲಾ ಕೇಂದ್ರಗಳಿಂದ ಹೋಬಳಿ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದು ಕನ್ನಡಿಗರ ಅನ್ನ ಕಸಿಯುತ್ತಿದ್ದಾರೆ, ನಾರ್ತಿ ದುರಹಂಕಾರಿಗಳೇ ರಾಜ್ಯ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಫೆಬ್ರವರಿ 1 ರಂದು ಮಹಾ ಸಂಘರ್ಷ ಯಾತ್ರೆ ಮಾಡಲಾಗುತ್ತಿದೆ ಎಂದರು

     

    ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್, ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷರಾದ ಶ್ರೀನಾಥ್, ನಗರ ಅಧ್ಯಕ್ಷರಾದ ಮುನಿರಾಜು ಸೇರಿದಂತೆ ಬುಲೆಟ್ ಬಾಬು(ಪೋಟೋಗ್ರಾಫಿ),ಮಧು, ಮನು ಇದ್ದರು

  • ಮಹಿಳಾ ಪೋಲಿಸ್ ಠಾಣೆ ಸ್ಥಳಾಂತರಿಸದಿರಲು ಕಾರ್ಯನಿರತ ಪತ್ರಕರ್ತರ ಸಂಘ ದಿಂದ ಮನವಿ.

    ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೋಲಿಸ್ ಠಾಣೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರ ಮಾಡಲು ಪ್ರಯತ್ನ ನಡೆಯುತ್ತಿದ್ದು ಠಾಣೆಯನ್ನು ಸ್ಥಳಾಂತರ ಮಾಡದಿರಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಸದಸ್ಯರು ದೊಡ್ಡಬಳ್ಳಾಪುರ ಉಪವಿಭಾಗದ ಡಿ.ವೈ ಎಸ್ ಪಿ ರವಿ ರವರಿಗೆ ಮನವಿ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್ ತಾಲ್ಲೂಕಿನಲ್ಲಿ ದಿನೇ ದಿನೇ ಕೌಟುಂಬಿಕ ಕಲಹಗಳು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಗಳು ಹೆಚ್ಚಾಗುತ್ತಿವೆ ಮಹಿಳಾ ಪೋಲಿಸ್ ಠಾಣೆ ದೊಡ್ಡಬಳ್ಳಾಪುರದಲ್ಲಿ ಇರುವುದರಿಂದ ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಹಾಗು ಮಹಿಳೆಯರಿಗೆ ಶ್ರೀರಕ್ಷೆಯಾಗಿದೆ ಠಾಣೆಯನ್ನು ಬೆಂಗಳೂರು ನಗರಕ್ಕೆ ಸ್ಥಳಾಂತರ ಮಾಡಿದರೆ ಸಾರ್ವಜನಿಕರಿಗೆ ಬೆಂಗಳೂರು ನಗರಕ್ಕೆ ತೆರಳಿ ದೂರು ದಾಖಲಿಸಲು ಅನಾನುಕೂಲ ವಾಗುವುದು.ಆದ್ದರಿಂದ ಮಹಿಳಾ ಪೋಲಿಸ್ ಠಾಣೆಯು ದೊಡ್ಡಬಳ್ಳಾಪುರದಲ್ಲೇ ಕಾರ್ಯ ನಿರ್ವಹಿಸುವುದು ಸೂಕ್ತ ಎಂದು ಗ್ರಹಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಠಾಣೆಯನ್ನು ಸ್ಥಳಾಂತರ ಮಾಡದಂತೆ ಮನವಿ ಮಾಡಿದರು.

    ನಂತರ ಮಾತನಾಡಿದ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರ ಚಂದ್ರಶೇಖರ್.ಡಿ ಉಪ್ಪಾರ್ ದೊಡ್ಡಬಳ್ಳಾಪುರದಲ್ಲಿ ಆಗಬೇಕಿದ್ದ ಆರ್.ಟಿ.ಓ ಕಛೇರಿ,ಜಿಲ್ಲಾ ಪ್ರದಾನ ಅಂಚೆ ಕಛೇರಿ, ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಇನ್ನಿತರ ಕಛೇರಿಗಳು ಪಕ್ಕದ ತಾಲ್ಲೂಕುಗಳ ಪಾಲಾಗಿದೆ,ಸಾರ್ವಜನಿಕ ಹಿತಾಸಕ್ತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಮಹಿಳಾ ಪೋಲಿಸ್ ಠಾಣೆ ಸ್ಥಳಾಂತರಗೊಳಿಸುವ ನಡೆ ಸರಿಯಲ್ಲ ಎಂದರು. ಮಹಿಳಾ ಠಾಣೆಗೆ ಸ್ವಂತ ಕಟ್ಟಡಕ್ಕೆ ಅಗತ್ಯವಿರುವ ಸರ್ಕಾರಿ ಜಮೀನುಗಳು ನಗರದ ಹಲವಾರು ಕಡೆ ಲಭ್ಯವಿದ್ದು ಇಲಾಖೆಯ ಮುಖ್ಯಸ್ಥರು ಸೂಕ್ತ ಸ್ಥಳವನ್ನು ಗುರುತಿಸಿ ಸ್ವಂತ ಕಟ್ಟಡವನ್ನು ನಿರ್ಮಿಸಿ ಮಹಿಳಾ ಠಾಣೆಯನ್ನು ಶಾಸ್ವತವಾಗಿ ದೊಡ್ಡಬಳ್ಳಾಪುರ ದಲ್ಲೇ ಉಳಿಸುವಂತೆ ಒತ್ತಾಯಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಡಿ.ವೈ.ಎಸ್. ಪಿ.ರವಿ ರವರು ಮಹಿಳಾ ಪೋಲೀಸ್ ಠಾಣೆ ಸ್ಥಳಾಂತರ ವಿಚಾರವು ಮೌಖಿಕವಾಗಿ ತಿಳಿಸಿದ್ದು.ಮನವಿಯನ್ನು ಮೇಲಧಿಕಾರಿಗಳಿಗೆ ರವಾಣೆ ಮಾಡಿ ಠಾಣೆ ಉಳಿಸಲು ಸಹಕರಿಸುವ ಭರವಸೆ ನೀಡಿದರು.

     

    ಈ ವೇಳೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೊತ್ತೂರಪ್ಪ,ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ (ನೆಲ್ಲುಗುದಿಗೆ) ಪ್ರದೀಪ್, ಮಂಜನಾಥ್, ಮನುಕುಮಾರ್, ಗಂಗರಾಜು,ರಮೇಶ್ ಬಾಬು, ಶಿವರಾಜ‌ ನೇಸರ ಉಪಸ್ಥಿತರಿದ್ದರು.

  • ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ 9ನೇ ವರ್ಷದ ವಾರ್ಷಿಕೋತ್ಸವ : ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮೂಲಕ ಸಮಿತಿ ಸಂಭ್ರಮಾಚಾರಣೆ

    ದೊಡ್ಡಬಳ್ಳಾಪುರ : ಕೇವಲ ಕನ್ನಡ ನಾಡು ನುಡಿ ಜಲದ ಹೋರಾಟಗಳಿಗೆ ಸೀಮಿತವಾಗದೆ ನಿಸ್ವಾರ್ಥ ಸೇವಾ ಮನೋಭಾವದಿಂದ ನಿರಂತರ ವಿಶೇಷ ಕಾರ್ಯಕ್ರಮಗಳ ರೂಪಿಸುವ ಮೂಲಕ ಸಾರ್ವಜನಿಕರಿಗೆ ಕೈಲಾದ ಸೇವೆಯನ್ನು ನಮ್ಮ ಸಮಿತಿ ಮಾಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕರು, ಖ್ಯಾತ ವಕೀಲರು ಆದ ರವಿ ಮಾವಿನಕುಂಟೆ ತಿಳಿಸಿದರು.

    ನಿರಂತರ ಅನ್ನದಾಸೋಹ ಸಮಿತಿಯ ಸಹಾಯದೊಂದಿಗೆ ತಾಲೂಕಿನ ದರ್ಗಾ ಜೋಗಹಳ್ಳಿಯಲ್ಲಿ ಆಯೋಜನೆ ಮಾಡಲಾಗಿದ್ದ 76ನೇ ಗಣರಾಜ್ಯೋತ್ಸವ ಹಾಗೂ ಸಮಿತಿಯ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಚಿಗುರು ಆಸ್ಪತ್ರೆಯ ಸಹಾಯದೊಂದಿಗೆ ಇಂದು ನಮ್ಮ ಸಂಘಟನೆಯ ವಾರ್ಷಿಕೋತ್ಸವ ಕಾರ್ಯಕ್ರಮವು ವಿಶೇಷವಾಗಿ ಮೂಡಿಬಂದಿದೆ ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿದ್ದು , 500ಕ್ಕೂ ಅಧಿಕ ಜನರಿಗೆ ತಪಾಸಣೆಯ ಜೊತೆಗೆ ಔಷಧಿಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಕೂಡ ಮಾಡಿರುವುದು ಸಂತಸದ ವಿಷಯವಾಗಿದೆ .

    ಇಂದಿನ ಕಾರ್ಯಕ್ರಮವನ್ನು ವಿಶೇಷವಾಗಿ ಪೌರಕಾರ್ಮಿಕರನ್ನು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಗಿದೆ . ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ.ಸದಾ ವಿಶೇಷ ಸೇವೆಗಳನ್ನು ಸಲ್ಲಿಸುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸಮಿತಿಯ ಎಲ್ಲ ಸದಸ್ಯರಿಗೂ, ಹಾಗೂ ನಮ್ಮ ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೂ ಸದಾ ಬೆಂಬಲವಾಗಿ ಶ್ರಮಿಸುವ ಮಲ್ಲೇಶ್ ಅವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು .

    ದರ್ಗಾ ಜೋಗಹಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಶೇಷವಾಗಿ ಸಾರ್ವಜನಿಕರಿಗೆ ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡುವ ಮೂಲಕ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುವುದು ತಂದಿದೆ, ಇಂತಹ ಉನ್ನತ ಮಟ್ಟದ ಕಾರ್ಯಕ್ರಮವನ್ನು ರೂಪಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುತ್ತಿರುವ ಮಲ್ಲೇಶ್ವರ ತಂಡಕ್ಕೆ ಶುಭವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಆಶಾ ಕಾರ್ಯಕರ್ತೆಯರಾದ ರೇಣುಕಾ ಮತ್ತು ರತ್ನಮ್ಮ ಮಾತನಾಡಿ ಇಂತಹ ಕಾರ್ಯಕ್ರಮಗಳು ನಮ್ಮನ್ನು ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲು ಪ್ರೋತ್ಸಹಿಸುತ್ತವೆ, ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಹಾಗೂ ಅನ್ನದಾಸೋಹ ಸಮಿತಿ ವತಿಯಿಂದ ನಡೆಯುವ ಇಂತಹ ಉತ್ತಮ ಕಾರ್ಯಗಳು ನಿತ್ಯ ನಿರಂತರ ಸಾಗಲಿ ಎಂದರು.

     

     

    ಕಾರ್ಯಕ್ರಮದಲ್ಲಿ ಚಿಗುರು ಆಸ್ಪತ್ರೆಯ ಮಾಲೀಕರಾದ ನಾಗರಾಜ್,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್,ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸುಬ್ರಮಣಿ, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ,ತಾಲ್ಲೂಕು ಅಧ್ಯಕ್ಷ ಶ್ರೀರಾಮ್, ಗ್ರಾಮ ಪಂಚಾಯತಿ ಸದಸ್ಯರಾದ ರಂಗಸ್ವಾಮಿ, ಜೆ.ವೈ.ಮಲ್ಲಪ್ಪ, .ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ಎ ಸಿ ಅಶೋಕ್, ಮುಖಂಡರಾದ ಅನಿಲ್,ರಂಗಸ್ವಾಮಿ,ರುದ್ರೇಶ್.ಕೆ.ಸಿ,ಸವಿತಾ,ಯೋಗ ಗುರೂಜಿ ಕೃಷ್ಣಪ್ಪ ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

  • ಗ್ರಾಮೀಣ ಗಾನ ಪ್ರತಿಭೆ ಹನುಮಂತುಗೆ ಬಿಗ್ ಬಾಸ್ 11ರ ವಿಜಯ ಪಟ್ಟ : ಟ್ರೋಫಿಯೊಟ್ಟಿಗೆ ಗೆಲುವಿನ ನಗೆ ಬೀರಿದ ಸಿಂಪಲ್ ಸಿಂಗರ್

    ಬೆಂಗಳೂರು : ಕಲರ್ಸ್ ಕನ್ನಡ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ 11 ಕಾರ್ಯಕ್ರಮವು (ಫಿನಾಲೆ ವಾರ) ಮುಕ್ತಾಯದ ಹಂತ ತಲುಪಿದ್ದು ಈ ಬಾರಿ ಬಿಗ್ ಬಾಸ್ ಕಿರೀಟ ಹೊತ್ತುಕೊಳ್ಳುವಲ್ಲಿ ಉತ್ತರ ಕರ್ನಾಟಕದ ಗಾನ ಪ್ರತಿಭೆ ಹನುಮಂತ ಯಶಸ್ವಿಯಾಗಿದ್ದಾರೆ .

     

    ಸಂಗೀತದ ಮೂಲಕ ಜನರ ಮನಸ್ಸು ಗೆದ್ದಿರುವ ಗಾಯಕ ಹನುಮಂತ ಈ ಬಾರಿ ಬಿಗ್ ಬಾಸ್ ಪಟ್ಟ ( BBK11 WINNER )ಗೆದ್ದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ ತನ್ನ ಮುಗ್ಧತೆ ಹಾಗೂ ಚಾಣಾಕ್ಷತನದಿಂದ ಬಿಗ್ ಬಾಸ್ ಅಭಿಮಾನಿಗಳ (ಜನರ )ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

     

    ಸದ್ಯ ಬಿಗ್ ಬಾಸ್ 11 ರಲ್ಲಿ ಹನುಮಂತ ಮೊದಲನೇ ಸ್ಥಾನ ಪಡೆದುಕೊಂಡಿದ್ದು ಎರಡನೇ( 1st RUNNER UP) ಸ್ಥಾನವನ್ನು ತ್ರಿವಿಕ್ರಮ ಪಡೆದುಕೊಂಡಿದ್ದಾರೆ. ಇನ್ನೂ ( 2nd RUNNERUP ) ಮೂರನೇ ಸ್ಥಾನಕ್ಕೆ ರಜತ್‌ ತೃಪ್ತಿ ಪಟ್ಟುಕೊಂಡಿದ್ದಾರೆ.

  • ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರೊಟ್ಟಿಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ನೆಡೆ ಕುರಿತು ಅಭಿನಂದನೆ ಸಲ್ಲಿಸಿದ ಕರವೇ ಕುಟುಂಬ

    ಬೆಂಗಳೂರು ಗ್ರಾಮಾಂತರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194ನೇ ಪುಣ್ಯಸ್ಮರಣೆ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಕ್ಷಣಾ ವೇದಿಕೆ ಟಿ ಏ ನಾರಾಯಣಗೌಡರನ್ನು ಜೊತೆಗೂಡಿಸಿಕೊಂಡು ಮಾಲಾರ್ಪಣೆ ಮಾಡಿರುವುದು ಕನ್ನಡ ಪರ ಹೋರಾಟಗಾರರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಕರವೇ ಘಟಕದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

     

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194ನೇ ಪುಣ್ಯಸ್ಮರಣೆ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ಮಾನ್ಯ ಮುಖ್ಯಮಂತ್ರಿಗಳು ಮಾಲರ್ಪಣೆ ಮಾಡಿದ್ದು ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡರನ್ನು ಅತ್ಯಂತ ಗೌರವಪೂರ್ವಕವಾಗಿ ನಡೆಸಿಕೊಂಡಿರುವುದು , ಸದಾ ಕನ್ನಡಪರ ಧ್ವನಿ ಎತ್ತುವ ಲಕ್ಷಾಂತರ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ , ಕನ್ನಡ ಭಾಷೆ ನೆಲ ಜಲ ವಿಚಾರವಾಗಿ ಹಲವು ವರ್ಷಗಳ ಸುದೀರ್ಘ ಹೋರಾಟ ನಡೆಸಿರುವ ಟಿ ಏ ನಾರಾಯಣಗೌಡರನ್ನು ರಾಜ್ಯದ ಮುಖ್ಯಮಂತ್ರಿಗಳು ಅತ್ಯಂತ ಆತ್ಮೀಯತೆ ನಡೆಸಿಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ, ಈ ವಿಚಾರಕ್ಕೆ ಕರವೇ ಕುಟುಂಬ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

    ಕೇಂದ್ರವೂ ಕೂಡ ರಾಜ್ಯ ಸರ್ಕಾರಗಳಂತೆ ನಾಡು ನುಡಿ ಭಾಷೆಗಾಗಿ ಸದಾ ಹೊರಟ ನಡೆಸುವ ಹೋರಾಟಗಾರರನ್ನು ಪರಿಗಣಿಸಿ ಗೌರವಯುತವಾಗಿ ವೇದಿಕೆಗಳಲ್ಲಿ ನಡೆಸಿಕೊಳ್ಳುವ ಆಚರಣೆಗೆ ಮುಂದಾಗಬೇಕಿದೆ, ಆಗ ಸ್ಥಳೀಯ ಭಾಷೆಯ ವಿಶೇಷತೆ, ಶಕ್ತಿ ದೇಶಾದ್ಯಂತ ಅರಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.

     

     

  • ಜಿಲ್ಲಾಡಳಿತ ಭವನದಲ್ಲಿ‌ 76ನೇ ಗಣರಾಜ್ಯೋತ್ಸವ ದಿನಾಚರಣೆ : ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರಿಂದ ಧ್ವಜಾರೋಹಣ

    ಬೆಂ.ಗ್ರಾ.ಜಿಲ್ಲೆ, ಜ26 : ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿಂದು ಜಿಲ್ಲಾಡಳಿತ ವತಿಯಿಂದ “76ನೇ ಗಣರಾಜ್ಯೋತ್ಸವ” ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.

    ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ “ರಾಷ್ಟ್ರ ಧ್ವಜಾರೋಹಣ” ನೆರವೇರಿಸಿ, ತ್ರಿವರ್ಣ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

     

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ‌.ಕೆ.ಎನ್.ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ದೇಶಾಭಿಮಾನ ಕೇವಲ ಈ ದಿನಕ್ಕೆ ಸೀಮಿತವಾಗದಿರಲಿ – ಬಿ. ಶಿವಶಂಕರ್

    ದೊಡ್ಡಬಳ್ಳಾಪುರ : ಮುಂದಿನ ಪೀಳಿಗೆಗೆ ಉತ್ತಮ ದೇಶವನ್ನು ಕಟ್ಟಿ ಕೊಡುವ ಜವಾಬ್ದಾರಿ ನಮ್ಮದಾಗಿದೆ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಎಲ್ಲರೂ ಒಗ್ಗೂಡಬೇಕಿದೆ ಎಂದು ಕೆ ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ ತಿಳಿಸಿದರು.

     

    ನಗರದ ಕೆಆರ್‌ಎಸ್‌ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ನಮ್ಮ ದೇಶದ ಪ್ರತಿ ಪ್ರಜೆಯು   ಸಂವಿಧಾನವನ್ನು ಗೌರವಿಸಬೇಕು.  ಸಂವಿಧಾನದ ಆಶಯಗಳನ್ನು   ಸಾಕಾರಗೊಳಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಸಮಾಜದಲ್ಲಿ ಸರ್ವರಿಗೂ ಮೂಲಭೂತ ಹಕ್ಕು,ಸಮಾನತೆ ಸೇರಿದಂತೆ ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವಲ್ಲಿ ನಮ್ಮ ಶ್ರಮ ಅತ್ಯಗತ್ಯವಾಗಿದೆ ಎಂದರು .

     

    ಜನವರಿ 26   ಗಣರಾಜ್ಯೋತ್ಸವ  ದಿನಾಚರಣೆ  ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮಹತ್ವದ ದಿನವಾಗಿದೆ, ಈ ಸಂಭ್ರಮಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯೋತ್ಸವವಾಗಲಿ, ದೇಶದ ಅಭಿವೃದ್ಧಿ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣ ಮಾಡಲು ಸರ್ವರೂ ಪಣ ತೊಡಬೇಕಿದೆ ಎಂದರು

     

    ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್. ಎನ್.ವೇಣು, ಜಿಲ್ಲಾ ಪದಾಧಿಕಾರಿಗಳಾದ ಶ್ರೀ ಲೀಲಾ ರಾಮ್, ಮಾರುತಿ, ತಾಲೂಕು ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷರಾದ ಶ್ರೀನಿವಾಸ್, ಕಾರ್ಯದರ್ಶಿ ಮುರಾರಿ, ಮಹಿಳಾ ಘಟಕದ ಅಧ್ಯಕ್ಷರಾದ ರಂಜಿತಾ, ಲಲಿತಾಮ್ಮ , ಮಂಜುಳಾ, ದೊಡ್ಡಬಳ್ಳಾಪುರ ಕಾರ್ಮಿಕ ಘಟಕದ ಅಧ್ಯಕ್ಷರಾದ ಫರುಕ್, ಮೌಲ, ವಿಜಯ್, ಹೇಮಂತ್ ಕುಮಾರ್, ತಾಜ್ ಮಂಜುನಾಥ್, ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಕೆ ಎಸ್ ಪಕ್ಷದ ಸೇನಾನಿಗಳು ಉಪಸ್ಥಿತರಿದ್ದರು.

  • ಸಂವಿಧಾನದ ಆಶಯಗಳನ್ನು ನೆಲೆಗೊಳಿಸಲು ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ದೇಶದ ಗಮನ ಸೆಳೆದಿವೆ – ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

    ಕರ್ನಾಟಕ ಸರ್ಕಾರವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ, ಒಕ್ಕೂಟ ಸಿದ್ಧಾಂತಗಳ ರೀತಿ ರಿವಾಜುಗಳಿಗೆ ಬದ್ಧವಾಗಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂವಿಧಾನದ ಮಹತ್ವದ ಆಶಯವಾದ ಸಾಮಾಜಿಕ, ಆರ್ಥಿಕ ನ್ಯಾಯ ನೆಲೆಗೊಳಿಸಲು ಶಕ್ತಿ ಮೀರಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಐದು ಗ್ಯಾರಂಟಿ ಕಲ್ಯಾಣ ಯೋಜನೆಗಳು ಯಶಸ್ವಿಯಾಗಿ ಜಾರಿಗೊಂಡು ದೇಶದ ಗಮನ ಸೆಳೆದಿವೆ ಎಂದು ರಾಜ್ಯಪಾಲರದ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

     

    76 ನೇ ಗಣರಾಜ್ಯೋತ್ಸವ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್‌ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

     

    76 ವರ್ಷಗಳ ಹಿಂದೆ ಇದೇ ದಿನದಂದು ಭಾರತೀಯರಾದ ನಾವು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಮೂಲಕ ಈ ದೇಶದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಆಡಳಿತಕ್ಕೆ ಇತಿಶ್ರೀ ಹಾಡಿ ಜನಾಡಳಿತದ ಹೊಸ ಪರ್ವ ಪ್ರಾರಂಭಿಸಿದೆವು. ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚಿಸಿದ ಎಲ್ಲ ಮಹನೀಯರನ್ನು ಸ್ಮರಿಸೋಣ ಎಂದರು.

     

    *ವಿವಿಧ ಗ್ಯಾರೆಂಟಿ ಯೋಜನೆಯಡಿ ಆರ್ಥಿಕ ನೆರವು* :

    ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2 ಸಾವಿರ ರೂ.ಗಳಂತೆ 2023 ರ ಆಗಸ್ಟ್‌ನಿಂದ ಇಲ್ಲಿಯವರೆಗೆ ಒಟ್ಟು 35,180.20 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ.

    ಗೃಹಜ್ಯೋತಿ ಯೋಜನೆಯಡಿ 1.62 ಗ್ರಾಹಕರು ಪ್ರಯೋಜನ ಪಡೆಯುತ್ತಿದ್ದು ವಿದ್ಯುತ್ ಸರಬರಾಜು ಕಂಪನಿಗಳಿಗೆ 13,409 ಕೋಟಿ ರೂ.ಸಬ್ಸಿಡಿ ಮೊತ್ತ ನೀಡಲಾಗಿದೆ.

     

    ಶಕ್ತಿ ಯೋಜನೆಯಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ 9,051 ಕೋಟಿ ರೂ. ವಿನಿಯೋಗಿಸಲಾಗಿದೆ.

    ಯುವನಿಧಿ ಯೋಜನೆಯಡಿ 2,18,214 ಜನ ನೋಂದಣಿ ಮಾಡಿಕೊಂಡಿದ್ದು ಈವರೆಗೆ 1,24,176 ಅರ್ಹರಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.

    ಯುವನಿಧಿ ಪ್ಲಸ್ ಉಪಕ್ರಮದಡಿ ಯುವಜನರ ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು ಎಂದರು.

     

    ಜನರ ಹಸಿವನ್ನು ನೀಗಿಸುವ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ ಪ್ರತಿ ಸದಸ್ಯರಿಗೆ 170 ರೂ.ಗಳಂತೆ 4,48,12,382 ಫಲಾನುಭವಿಗಳಿಗೆ 9,775 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.

     

    ರಾಜ್ಯದ ಹಣಕಾಸು ವ್ಯವಸ್ಥೆ ಉತ್ತಮವಾಗಿ ನಿರ್ವಹಿಸಿರುವ ಆದಾಯ ಸಂಗ್ರಹದಲ್ಲಿ ಶೇ.13 ರಷ್ಟು ಪ್ರಗತಿ ಸಾಧಿಸಿದೆ‌. ರಾಜ್ಯಗಳು ಸಂಗ್ರಹಿಸುವ ಜಿಎಸ್‌ಟಿ ಆದಾಯದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಬಲಪಡಿಸಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 13 ಸಾವಿರಕ್ಕೂ ಅಧಿಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹಾಸನದಲ್ಲಿ 142 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಕಲಬುರ್ಗಿಯಲ್ಲಿ 54 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್ ಆಸ್ಪತ್ರೆ, ಕೆಕೆಆರ್‌ಡಿ‌ಬಿಯ 304 ಕೋಟಿ ರೂ.ವೆಚ್ಚದಲ್ಲಿ ಜಯದೇವ ಹೃದ್ರೋಗ ಹಾಗೂ ಸಂಶೋಧನಾ ಸಂಸ್ಥೆ ನಿರ್ಮಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ಕಾಪಾಡಿಕೊಳ್ಳಲು ರಾಜ್ಯದಲ್ಲಿ 79 ಪ್ರಯೋಗಾಲಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

     

    ರಾಜ್ಯದ ಸಮತೋಲಿತ ,ಸಮಗ್ರ ಅಭಿವೃದ್ಧಿಗಾಗಿ ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನ ಮಾಡಲಾಗಿದೆ. ಉದ್ದೇಶಿತ ಗುರಿಗಳ ಸಾಧನೆ ಮಾಡಲಾಗಿದೆಯೆ ಎಂಬುದನ್ನು ಅರಿಯಲು ಪ್ರೊ.ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂವಿಧಾನದ 371(ಜೆ) ಅನುಚ್ಛೇದ ಜಾರಿಗೊಳಿಸಲಾಗಿದೆ.

     

     

    ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್,ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್,ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

     

     

  • ಸಂವಿಧಾನದ ಆಶಯಗಳನ್ನು   ಸಾಕಾರಗೊಳಿಸುವುದು  ನಮ್ಮೆಲ್ಲರ ಕರ್ತವ್ಯವಾಗಿದೆ – ಕೆ.ವಿ.ವೆಂಕಟೇಶರೆಡ್ಡಿ

    ದೊಡ್ಡಬಳ್ಳಾಪುರ : ಭಾರತದಲ್ಲಿ ಸಂವಿಧಾನವೇ ಸರ್ವೋಚ್ಚವಾದುದು. ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ನಮ್ಮ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಯಿತು ಎಂದು ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ  ಗಣರಾಜ್ಯೋತ್ಸವ  ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.   ನಮ್ಮ ದೇಶದ  ಪ್ರತಿಯೊಬ್ಬರೂ  ಸಂವಿಧಾನವನ್ನು ಗೌರವಿಸಬೇಕು.  ಸಂವಿಧಾನದ ಆಶಯಗಳನ್ನು   ಸಾಕಾರಗೊಳಿಸುವುದು  ನಮ್ಮೆಲ್ಲರ ಕರ್ತವ್ಯವಾಗಿದೆ. ಸಂವಿಧಾನ ಜಾರಿಗೆ ಬಂದ ದಿನವಾದ  ಗಣರಾಜ್ಯೋತ್ಸವ  ದಿನಾಚರಣೆ  ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮಹತ್ವದ ದಿನವಾಗಿದೆ ಎಂದರು. .

     

    ನಮ್ಮ ಸಂವಿಧಾನವು ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಮಾಡಿದೆ.    ಸಂವಿಧಾನ ಜಾರಿಗೆ ಬಂದ ಕಾರಣದಿಂದಲೇ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ   ಮೂಲಭೂತ ಹಕ್ಕುಗಳು, ಶಿಕ್ಷಣ ಹಕ್ಕುಗಳು, ಧಾರ್ಮಿಕ ಹಕ್ಕುಗಳು ದೊರಕಿವೆ.  ಭಾರತದ ಸಂವಿಧಾನ ರಚನೆಯಲ್ಲಿ‌  ಡಾ.ಬಿ.ಆರ್.ಅಂಬೇಡ್ಕರ್ ಮಹತ್ವದ ಪಾತ್ರ ವಹಿಸಿದ್ದಾರೆ.  ಡಾ.ಬಿ‌.ಆರ್.ಅಂಬೇಡ್ಕರ್  ಅವರು ವಿಶ್ವದ ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತಕ್ಕೆ ಅಗತ್ಯವಾದ  ಅಂಶಗಳನ್ನು  ಭಾರತದ ಸಂವಿಧಾನದಲ್ಲಿ  ಸೇರ್ಪಡೆಗೊಳಿಸಿದ್ದಾರೆ ಎಂದರು.

     

     

    ಕಾರ್ಯಕ್ರಮದಲ್ಲಿ ಭಾರತ  ಸ್ಕೌಟ್ ಮತ್ತು ಗೈಡ್  ಜಿಲ್ಲಾ ಸಹಾಯಕ ಆಯುಕ್ತ   ವೆಂಕಟರಾಜು, ಕಾರ್ಯನಿತರ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಂಗರಾಜ ಶಿರವಾರ,  ಕನ್ನಡ ಜಾಗೃತ ವೇದಿಕೆ  ಅಧ್ಯಕ್ಷ. ನಾಗರಾಜು,   ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು  ಗೌರವ ಕಾರ್ಯದರ್ಶಿ  ಪ್ರೊ.ಕೆ.ಆರ್.ರವಿಕಿರಣ್,  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು,  ಮಾಜಿ ಅಧ್ಯಕ್ಷ  ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್,  ಕೋಶಾಧ್ಯಕ್ಷ  ಸಾ.ಲ.ಕಮಲನಾಥ್,  ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು,  ಕಸಬಾ ಹೋಬಳಿ ಘಟಕ  ಅಧ್ಯಕ್ಷ ದಾದಾಪೀರ್,   ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ನಾಗರತ್ನಮ್ಮ,  ಮುನಿರಾಜು,   ಷಪೀರ್,  ಕೋದಂಡರಾಮ್, ದರ್ಗಾಜೋಗಿಹಳ್ಳಿ ಮಲ್ಲೇಶ್, ದರ್ಶನ್  ಮೊದಲಾದವರು ಭಾಗವಹಿಸಿದ್ದರು.

  • ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವುದರಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ : ಆರ್ ವಿ ಮಹೇಶ್

    ದೊಡ್ಡಬಳ್ಳಾಪುರ : ಬಹುತೇಕ ಎಲ್ಲಾ ಇಲಾಖೆಗಳಲ್ಲಿಯೂ ಸಹ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು , ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ, ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಹೆಣ್ಣಿನ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ , ಹೆಣ್ಣನ್ನು ಗೌರವಿಸುವ ಸಮಾಜದಿಂದ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ, ಹೆಣ್ಣು ಮಕ್ಕಳನ್ನು ಸಮಾನರಂತೆ ಕಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿಯಾಗುವುದು ಎಂದು ಘಾಟಿ ಸುಬ್ರ‌‌ಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಆರ್.ವಿ.ಮಹೇಶ್ ಕುಮಾರ್ ಹೇಳಿದರು

    ನಗರದ ರೋಜಿಪುರ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಜನವರಿ 24 ರಂದು ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನ ಆಚರಣೆ ಮಾಡಲಾಗುತ್ತಿದೆ, ಉಜ್ವಲವಾದ ನಾಳೆಗಾಗಿ ಹೆಣ್ಣು ಮಕ್ಕಳ ಸಬಲೀಕರಣ ಎಂಬ ವಿಷಯದ ಮೇಲೆ 2008ರಿಂದ ಹೆಣ್ಣು ಮಕ್ಕಳ ದಿನವನ್ನ ಆಚರಣೆ ಮಾಡಲಾಗುತ್ತಿದೆ, ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ, ಲಿಂಗ ಅಸಮಾನತೆಯನ್ನ ಹೋಗಲಾಡಿಸುವುದು, ಹೆಣ್ಣು ಮಕ್ಕಳ ಸುರಕ್ಷತೆ, ಹೆಣ್ಣು ಮಕ್ಕಳನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವುದರಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ ಎಂದು ಹೇಳಿದರು.

     

    ಶಿಶು ಅಭಿವೃದ್ದಿ ಯೋಜನಾಧಿಕಾರಿ ರವಿಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ಜೀವಿಸುವ, ರಕ್ಷಣೆ ಪಡೆಯುವ, ಅವರ ಹಕ್ಕುಗಳಿಗಾಗಿ ಹೋರಾಡುವ ಅವಕಾಶವನ್ನು ಭಾರತ ಸಂವಿಧಾನವೇ ನೀಡಿದೆ, ಇವತ್ತು ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ, ಗಂಡು ಮತ್ತು ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡದೆ ನಾವು ಎಲ್ಲರಿಗೂ ಮುಕ್ತ ಅವಕಾಶ ನೀಡ ಬೇಕು, ಹೆಣ್ಣು ಮಕ್ಕಳ ಮೇಲಾಗುವ ಶೋಷಣೆಗಳ ವಿರುದ್ಧ ಸಮಾಜ ಧ್ವನಿ ಎತ್ತ ಬೇಕು, ಮುಖ್ಯವಾಗಿ ಅವರನ್ನು ಗೌರವದಿಂದ ನೋಡುವ ಸಮಾಜ ನಿರ್ಮಾಣವಾಗ ಬೇಕು ಎಂದು ಹೇಳಿದರು.

     

    ಕಾರ್ಯಕ್ರಮದ ಆಯೋಜಕರಾದ ಶೈಲಜಾ ಗೌಡ ಮಾತನಾಡಿ ಹೆಣ್ಣು ಮಕ್ಕಳಿಗಾಗಿ ಮೀಸಲಿರುವ ವಿಶೇಷ ದಿನದ ಆಚರಣೆಯನ್ನು ಇಂದು ನಮ್ಮ ಅಂಗನವಾಡಿ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದೇವೆ. ಈ ರೀತಿಯ ಕಾರ್ಯಕ್ರಮಗಳ ಆಚರಣೆ ಒಂದು ಉತ್ತಮ ಬೆಳವಣಿಗೆ, ಸಮಾಜದಲ್ಲಿ ಹೆಣ್ಣಿನ ಮಹತ್ವ ಸಾರುವ ಇಂತಹ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಹೆಚ್ಚಾಗಲಿ , ನಿರಂತರ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿ, ಮಹಿಳಾ ಸಬಲೀಕರಣಕ್ಕೆ ನಾಂದಿಯಾಗಲಿ ಎಂದರು

     

     

     

    ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್,ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಶ್ರೀ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಡ್ಡರಹಳ್ಳಿ ರವಿ, ಹಿರಿಯ ಮೇಲ್ವಿಚಾರಕರಾದ ನಿರ್ಮಲ, ಅಂಗನವಾಡಿ ಕಾರ್ಯಕರ್ತೆ ಶೈಲಜಾಗೌಡ ಮತ್ತು ಸಹಾಯಕರು, ಆಶಾ ಕಾರ್ಯಕರ್ತೆಯರು,ಶ್ರೀ ಪುಷ್ಪಾಂಜಲಿ ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳು, ಪೋಷಕರು. ಭಾಗವಹಿಸಿದ್ದರು.