Blog

  • ಸದೃಢ ಆರ್ಥಿಕತೆಯ ನಿರ್ಮಾತೃ ಡಾ.ಮನಮೋಹನ್ ಸಿಂಗ್ : ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮಾಜಿ ಪ್ರಧಾನಿಗೆ ಗೌರವ ನುಡಿನಮನ

    ದೊಡ್ಡಬಳ್ಳಾಪುರ: ಗುರುವಾರ ರಾತ್ರಿ‌ ನಿಧನರಾದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನುಡಿನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಶುಕ್ರವಾರ ನಡೆಯಿತು. ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪನಮನ‌ ಸಲ್ಲಿಸಿ, ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.

     

    ಶ್ರೀ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ‌.ರಾಜೇಂದ್ರ ಮಾತನಾಡಿ, ದೇಶದ ಆರ್ಥಿಕತೆಗೆ ಚೇತರಿಕೆಯ ಚೈತನ್ಯವನ್ನು ನೀಡಿ ಪ್ರಗತಿಗೆ ಮುನ್ನುಡಿ ಬರೆದ ಮನಮೋಹನ್ ಸಿಂಗ್ ಅವರು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪರಿಕಲ್ಪನೆಗಳನ್ನು ದೇಶದ ಅಭಿವೃದ್ಧಿಗೆ ಪೂರಕವಾಗಿ ಅನುಷ್ಠಾನಗೊಳಿಸಿದ್ದರು. ಅವರೊಬ್ಬ ದೂರದರ್ಶಿತ್ವವುಳ್ಳ ಚಿಂತಕರಾಗಿದ್ದರು. ಮರಣೋತ್ತರವಾಗಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದರು.

     

    ಎಸ್.ಡಿ.ಯು.ಐ.ಎಂನ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಮನಮೋಹನ್ ಸಿಂಗ್ ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಅವರ ದೂರಗಾಮಿ‌ ಆರ್ಥಿಕ‌ ನೀತಿಗಳು ದೇಶದ ಭವಿಷ್ಯವನ್ನು ಭದ್ರಗೊಳಿಸಿವೆ. ಸಂಕಷ್ಟದ ಸಂದರ್ಭದಲ್ಲಿ ಅವರು ಈ ದೇಶಕ್ಕೆ ಕೊಟ್ಟ ಮಹತ್ವದ ಹಣಕಾಸು ನೀತಿಗಳು ಇಂದು ದೇಶವನ್ನು ಜಾಗತಿಕ ಶಕ್ತಿಯಾಗಿ ರೂಪಿಸುವಲ್ಲಿ‌ ನಿರ್ಣಾಯಕ ಪಾತ್ರ ವಹಿಸಿವೆ ಎಂದರು. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಜಾರಿಗೆ ತಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮೀಣ ಭಾರತದಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಯಿತು. ಮಾಹಿತಿ ಹಕ್ಕು ಕಾಯಿದೆ ಜಾರಿಗೊಳಿಸಿದರು. ಅಮೆರಿಕಾದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಒಪ್ಪಂದ, ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸಿತ್ತು. ನಿರಂತರ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸಿತು. ಆಧಾರ್ ಯೋಜನೆ ಜಾರಿಗೆ ಬಂದಿದ್ದೂ ಮನಮೋಹನ್ ಸಿಂಗ್ ಅವರ ಅವಧಿಯಲ್ಲೇ ಎಂಬುದು ಗಮನಾರ್ಹ ಎಂದರು.

     

     

    ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ನಿರ್ದೇಶಕ ಪ್ರೊ.ಬಾಬುರೆಡ್ಡಿ, ಅಕಾಡೆಮಿಕ್ ಡೀನ್ ಡಾ.ಶ್ರೀನಿವಾಸರೆಡ್ಡಿ, ಎಸ್.ಡಿ.ಯು.ಐ.ಎಂ ಆಡಳಿತಾಧಿಕಾರಿ ಐ.ಎಂ.ರಮೇಶ್ ಕುಮಾರ್, ಪ್ರಾಂಶುಪಾಲ ಡಾ.ಆರ್.ನಾಗರಾಜ್, ಆರ್.ಎಲ್.ಜೆ.ಐ.ಟಿ‌ ಪ್ರಾಧ್ಯಾಪಕ ಶಂಕರ್ ನುಗ್ಗೇಹಳ್ಳಿ, ಅಶೋಕ್, ವ್ಯವಸ್ಥಾಪಕ ಎಸ್.ಯತಿನ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ಪ್ರಕಾಶ್, ಗೋವಿಂದರಾಜು, ರಘು ಮತ್ತಿತರರು ಉಪಸ್ಥಿತರಿದ್ದರು.

  • ಮೊಬೈಲ್ ರಿಪೇರಿ & ಸೇವೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಮೊಬೈಲ್ ರಿಪೇರಿ & ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಜನವರಿ 03 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

     

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ.

     

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

     

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜನವರಿ ಮಾಹೆಯಿಂದ ಇದುವರೆಗೂ 48 ದೌರ್ಜನ್ಯ ಪ್ರಕರಣಗಳು ದಾಖಲು : ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ತ್ವರಿತ ವಿಲೇವಾರಿಗೆ ಕ್ರಮ: ಅಪರ ಜಿಲ್ಲಾಧಿಕಾರಿ ಅಮರೇಶ್. ಹೆಚ್

    ಬೆಂ.ಗ್ರಾ.ಜಿಲ್ಲೆ, ಡಿ. 26 : ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ತೋರದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ 2024ನೇ ಕ್ಯಾಲೆಂಡರ್ ವರ್ಷದ 4ನೇ ತ್ರೈಮಾಸಿಕ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣಗಳು ದಾಖಲಾದ ಕೂಡಲೇ ಪ್ರಥಮ ವರ್ತಮಾನ ವರದಿ ಆಧಾರದ ಮೇಲೆ ಪರಿಹಾರ ಧರವನ್ನು ಮಂಜೂರು ಮಾಡಬೇಕಾಗಿರುವುದರಿಂದ ಪ್ರಥಮ ವರ್ತಮಾನ ವರದಿ ಹಾಗೂ ಇತರ ದಾಖಲಾತಿಗಳನ್ನು ಜಿಲ್ಲಾ ಹಾಗೂ ತಾಲೂಕು ಕಚೇರಿಗಳಿಗೆ ಇ-ಮೇಲ್ ಮೂಲಕ ಕಳುಹಿಸಲು ತಿಳಿಸಿದರು

     

    ದೌರ್ಜನ್ಯ ಪ್ರಕರಣಗಳ ದಾಖಲು, ಪರಿಹಾರ ಧನದ ಮಂಜೂರಾತಿ ವಿವರಗಳ ಪರಿಶೀಲನೆ ನಡೆಸಿದ ಅವರು 2024ರ ಅಕ್ಟೋಬರ್. 1 ರಿಂದ 2024ರ ಡಿಸೆಂಬರ್. 18 ವರೆಗೆ ಒಟ್ಟು 28 ಜನ ಸಂತ್ರಸ್ತರಿಗೆ ಒಟ್ಟು 8,75,000 ರೂ ಗಳ ಪರಿಹಾರ ಧನವನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

     

    ಜಿಲ್ಲೆಯಲ್ಲಿ ಜನವರಿ ಮಾಹೆಯಿಂದ ಇಲ್ಲಿಯವರೆಗೆ 48 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ, ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸುವ ಚಾರ್ಜ್ ಶೀಟ್ ಅನ್ನು ಕಾಲಾವಧಿಯಲ್ಲೇ ಸಲ್ಲಿಸುವ ಜತೆಗೆ ಯಾವುದೇ ಚಾರ್ಜ್ ಶೀಟ್ ಬಾಕಿ ಉಳಿಸಿಕೊಳ್ಳದಂತೆ ಪೋಲಿಸ್ ಅಧಿಕಾರಿಗಳು ಕ್ರಮ ವಹಿಸಿ ಎಂದು ಹೇಳಿದರು.

     

    ದೌರ್ಜನ್ಯ ಪ್ರಕರಣಗಳು ಹಾಗೂ ಗಲಭೆ/ಗುಂಪು ಗಲಭೆಗಳು ಹೆಚ್ಚಾಗಿ ಕಂಡುಬಂದ ಗ್ರಾಮ/ ಹಳ್ಳಿಗಳನ್ನು ಗುರುತಿಸಿ ಸಂಬಂಧಪಟ್ಟ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಶಾಂತಿಸಭೆ ನಡೆಸಲು ನಿರ್ದೇಶನ ನೀಡಿದರು.

     

    ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರೇಮಾ ಟಿ.ಎಲ್.ಎಸ್, ಡಿವೈಎಸ್ಪಿ ರವಿ, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಬಾಲಕೃಷ್ಣ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಸಬ್ ರಿಜಿಸ್ಟರ್ ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ದಿಡೀರ್ ಭೇಟಿ : ಇಲ್ಲಿದೆ ಸಂಪೂರ್ಣ ಮಾಹಿತಿಗಾಗಿ

    ದೊಡ್ಡಬಳ್ಳಾಪುರ : ಸಬ್ ರಿಜಿಸ್ಟರ್ ಕಛೇರಿಗೆ ಡಿ. 26 ರಂದು ದಿಡೀರ್ ಭೇಟಿ ಕೊಟ್ಟ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

     

    ತಾಲೂಕಿನ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಸಾಕಷ್ಟು ಸಾರ್ವಜನಿಕರಿಂದ ದೂರುಗಳನ್ನು ಬರುತ್ತಿರುವ ಹಿನ್ನಲೆ ಇಂದು ಬೆಳಗ್ಗೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡರು ಕಛೇರಿಗೆ ಭೇಟಿ ನೀಡಿದರು, ಕಛೇರಿ ಪ್ರಾರಂಭದ ಸಮಯ ಬೆಳಗ್ಗೆ 10 ಗಂಟೆಗೆ ಬಂದಿದ್ದರು, ಆದರೆ ಕಚೇರಿಯಲ್ಲಿ ಒಬ್ಬರು ಇಬ್ಬರು ಬಿಟ್ಟರೆ ಬೇರೆ ಯಾವ ಸಿಬ್ಬಂದಿಯೂ ಇರಲಿಲ್ಲ, ಮುಖ್ಯವಾಗಿ ಕಛೇರಿಯ ಮುಖ್ಯ ಅಧಿಕಾರಿಯಾದ ಸಬ್ ರಿಜಿಸ್ಟರ್ ಬಂದಿರಲಿಲ್ಲ,

     

     

    ಸಚಿವರು ಬಂದ ಸುದ್ಧಿ ತಿಳಿದ ತಕ್ಷಣವೇ ಉಪವಿಭಾಗಧಿಕಾರಿ ದುರ್ಗಶ್ರೀ, ವಿಭಾವಿದ್ಯಾ ರಾಥೋಡ್ ಮತ್ತು ಜಿಲ್ಲಾಧಿಕಾರಿಗಳಾದ ಶಿವಶಂಕರ್ ಸ್ಥಳಕ್ಕೆ ಆಗಮಿಸಿದರು, ಸಾರ್ವಜನಿಕರ ಎದುರೇ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ ಖಾಲಿ ಕುರ್ಚಿ ಕಂಡು ಕೋಪಗೊಂಡ ಸಚಿವರು ತಾಲ್ಲೂಕು ದಂಡಧಿಕಾರಿ ಹಾಗೂ ಉಪವಿಭಾಗಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

     

    ಅಧಿಕಾರಿಗಳು ಬೆಳ್ಳಿಗೆ 10:30 ಆದರೂ ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ, ಯಾವಾಗ ಕೆಲಸಕ್ಕೆ ಬರೋದು, ಜನ ಬಂದ್ಮೇಲೆ ನೀವು ಬರೋದಾ, ನಾನು ಎಲ್ಲೊ ಕುಳಿತು ಕೇಳುತ್ತಿಲ್ಲ, ನಿಮ್ಮ ಆಫೀಸ್ ನಲ್ಲಿ ಕುಳಿತು ಕೇಳ್ತಾ ಇದ್ದೀನಿ, ಎಲ್ಲಿ ನಿಮ್ಮ ಸಬ್ ರಿಜಿಸ್ಟರ್, ಜನರು ಬಂದು ಕಾಯ್ತಾ ಇರಬೇಕು ಆಗ ನಿಮ್ಮ ಪ್ರವೇಶ, ಅಲ್ವಾ, ನೀವು ಪಾಳೇಗಾರರು, ರಾಜರು ಜನರು ಬಂದ ಕಾದ ನಂತರ ನೀವು ಬರೋದು ಎಂದು ತರಾಟೆಗೆ ತೆಗೆದುಕೊಂಡರು

     

     

    ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭೇಟಿ ನೀಡಿದ ವೇಳೆ ಶೇಕಡಾ 90 ರಷ್ಟು ಅಧಿಕಾರಿಗಳು ಕೆಲಸಕ್ಕೆ ಬಂದಿಲ್ಲ, 11 ಗಂಟೆಯಾದರು ಕೆಲವು ಆಫೀಸ್ ಗಳು ಓಪನ್ ಆಗಿಲ್ಲ, ವ್ಯವಸ್ಥೆ ಅವ್ಯವಸ್ಥೆಯಾಗಿ ಕಾಣುತ್ತಿದೆ ಇದನ್ನ ಮುಚ್ಚಿಡುವುದರಿಂದ ನಮಗೆ ಶೋಭೆ ತರುವುದಿಲ್ಲ, ಆಡಳಿತ ವ್ಯವಸ್ಥೆಯಲ್ಲಿ ಬೇಜಾವಬ್ದಾರಿತನ ಎದ್ದು ಕಾಣುತ್ತಿದೆ, ನಾನು ಬೆಂಗಳೂರಿನಿಂದ ಬಂದಿದ್ದೇನೆ, ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿಗಳು ಡಿಸಿ ಆಫೀಸ್ ನಿಂದ ಬಂದಿದ್ದಾರೆ ಆದರೆ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬಂದಿಲ್ಲ, ನಾನು ಬಂದ ಮೇಲು ಕೆಲವರು ಹಾಜರಾತಿ ರಿಜಿಸ್ಟರ್ ಗೆ ಸಹಿ ಹಾಕುತ್ತಿದ್ದರು, ಇದು ವಾಸ್ತವ ಚಿತ್ರಣ ನಾನು ಮುಚ್ಚಿಟ್ಟು ಮಾತಾಡ ಬಹುದು ಆದರೆ ನನಗೆ ಆತ್ಮವಂಚನೆ ಆಗಲಿದೆ ಎಂದರು

     

    ಸರ್ಕಾರಿ ವ್ಯವಸ್ಥೆಯಲ್ಲಿ ಜನರ ಕೆಲಸಗಳಿಗೆ ಆದ್ಯತೆ ನೀಡ ಬೇಕು ಆದರೆ ಇಲ್ಲಿ ಅದು ಕಾಣುತ್ತಿಲ್ಲ, ಕೆಲವು ಪ್ರಮಾಣಿಕ ಅಧಿಕಾರಿಗಳಿದ್ದಾರೆ, ಆದರೆ ಕೆಲವು ಅಧಿಕಾರಿಗಳು ನಮಗಾಗಿ ಜನರಿದ್ದಾರೆಂದು ಭಾವಿಸಿದ್ದಾರೆ, ವ್ಯವಸ್ಥೆ ಸರಿ ಇಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇನೆ ಸರಿ ಮಾಡುವ ಜವಬ್ಧಾರಿ ಜಿಲ್ಲಾಧಿಕಾರಿಗಳಿದೆ, ಆಡಳಿತ ವ್ಯವಸ್ಥೆಯೇ ಈಗಿರುವಾಗ ಜಿಲ್ಲಾಧಿಕಾರಿ ಒಬ್ಬರಿಂದ ಇದು ಸಾಧ್ಯವಿಲ್ಲ, ಹಾಗಾಂತ ನಾವು ನಿಸಹಾಯಕರಾಗಿರುವುದಕ್ಕೆ ಸಾಧ್ಯವಿಲ್ಲ.ಜಿಲ್ಲಾಧಿಕಾರಿಗಳು ಆಗಾಗ ತಾಲೂಕು ಕಛೇರಿಗಳಿಗೆ ಭೇಟಿ ಕೊಟ್ಟು ಅವ್ಯವಸ್ಥೆಯನ್ನ ಸರಿಪಡಿಸ ಬೇಕೆಂದು ಸೂಚನೆ ಕೊಟ್ಟಿದ್ದೇನೆ ಎಂದರು

     

    ಸರ್ಕಾರಿ ಕಛೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹೊಸ ಯೋಜನೆ 

     

    ಭೇಟಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಛೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಬ್ ರಿಜಿಸ್ಟರ್ ಆಫೀಸ್, ತಹಶೀಲ್ದಾರ್ ಕಛೇರಿ, ರೆಕಾರ್ಡ್ ರೂಮ್ ಸೇರಿದಂತೆ ಎಲ್ಲ ಕಡೆಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ, ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಜನರೇ ನೇರವಾಗಿ ಕೆಲಸಗಳನ್ನ ಮಾಡಿಸಿಕೊಳ್ಳುವ ವ್ಯವಸ್ಥೆ ತರಲು ನಾವು ಮುಂದಾಗಿದ್ದೇವೆ ಎಂದರು.

     

     

    ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳು ಅಧಿಕಾರಿಗಳ ಹೆಸರಲ್ಲಿ ಸಾರ್ವಜನಿಕರ ಸೂಲಿಗೆ ಮಾಡುತ್ತಿದ್ದಾರೆ , ನಕಲಿ ದಾಖಲೆಗಳನ್ನ ಸೃಷ್ಠಿಸಿ, ನೋಂದಣಿ ಮಾಡಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ , ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಿದೆ. ಭೂ ದಾಖಲಾತಿಗಳನ್ನು ರೆಕಾರ್ಡ್ ರೂಮ್ ನಿಂದ ಹಣ ಕೊಡದೆ ಪಡೆಯಲು ಸಾಧ್ಯವಿಲ್ಲ, ಹಣ ನೀಡದೆ ಯಾವುದೇ ದಾಖಲೆಗಳನ್ನು ಕೊಡುವುದಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ, ಆ ಕಾರಣದಿಂದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆ ದಾಖಲೆಗಳನ್ನು ಆನ್ ಲೈನ್ ಗೆ ಬೀಡ್ತಾ ಇದ್ದೇವೆ, ಲ್ಯಾಂಡ್ ಗ್ರ್ಯಾಂಡ್, ಒಎಂ, ಸಾಗುವಳಿ ಚೀಟಿ ಇಂತಹ ದಾಖಲೆಗಳನ್ನ ಆನ್ ಲೈನ್ ನಲ್ಲಿ ಹಾಕುವುದರಿಂದ ಸ್ವತಃ ಜನರೇ ನೋಡಿಕೊಳ್ಳಬಹುದಾಗಿದೆ ಜೊತೆಗೆ ದಾಖಲಾತಿಗಳು ತಿದ್ದುವ ಅಥವಾ ಮರು ಸೃಷ್ಟಿ ಮಾಡುವ ಪ್ರಮಯಗಳು ಕಡಿಮೆಯಾಗುತ್ತದೆ ಎಂದರು

     

    ಭೂರಕ್ಷ ಯೋಜನೆಯಡಿ ಜನವರಿ ಮೊದಲ ವಾರದಿಂದಲೇ ಈ ಕೆಲಸ ಮಾಡಲು ಮುಂದಾಗಿದ್ದು, ರಾಜ್ಯದ 220 ಸಬ್ ರಿಜಿಸ್ಟರ್ ಕಛೇರಿಗಳಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ ಮಾಡಲಾಗುತ್ತಿದೆ ಎಂದರು. ಈ ಕೆಲಸದಿಂದ ದಾಖಲೆಗಳನ್ನು ತಿದ್ದುವ ಕೆಲಸ ಆಗುವುದಿಲ್ಲ ಎಂದರು, ಇಲ್ಲಿಯವರೆಗೂ ಸಾಕಷ್ಟು ದಾಖಲೆಳನ್ನ ತಿದ್ದಿದ್ದಾರೆ , ಇನ್ಮೇಲೆಯಾದರು ದಾಖಲೆಗಳನ್ನ ತಿದ್ದುವ ಕೆಲಸ ಆಗಬಾರದು, ಹಾಗೆಯೇ ದಾಖಲೆಗಳ ಕಳವು ಸಹ ಆಗುವುದಿಲ್ಲ ದಾಖಲೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

     

     

     

  • ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮಗೊಳಿಸಲು 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದೆ – ಪದ್ಮಾವತಿ

    ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಮತ್ತು ಜೀವನದಲ್ಲಿ ಯಶಸ್ಸಿಗೆ ಶಿಕ್ಷಣ ಬಹಳ ಮುಖ್ಯ ಪಾತ್ರ ವಹಿಸುತ್ತದೆ  ಎಂದು  ವೈದ್ಯೆ ಡಾ. ಕೆ.ಎಂ.ವೇದಾಮಣಿ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ನಗರದ ಮಾಂಗಲ್ಯ ಕಲ್ಯಾಣ ಮಂಟಪದಲ್ಲಿ ಸಹ್ಯಾದ್ರಿ ಮತ್ತು ಜ್ಞಾನಗಂಗಾ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.  ಶಿಕ್ಷಣದ ಮಹತ್ವವನ್ನು ಅರಿತವರು ವಿದ್ಯಾರ್ಥಿಗಳಿಗೆ   ಶಿಸ್ತು ಅವರಲ್ಲಿ  ಸಕಾರಾತ್ಮಕ  ಬೆಳವಣಿಗೆ ಸಹಕಾರಿ ಆಗುತ್ತದೆ.  ಮಕ್ಕಳನ್ನು  ಸುಶಿಕ್ಷಿತಗೊಳಿಸುವಲ್ಲಿ  ಪೋಷಕರ ಪಾತ್ರ ಮಹತ್ವದಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ವಿನಯವು ಬಹುಮುಖ್ಯವಾಗಿರುತ್ತದೆ.   ಮಾನವೀಯ ಮೌಲ್ಯಗಳೊಂದಿಗೆ  ಆರೋಗ್ಯಕರ ಜೀವನಶೈಲಿದಿಂದ  ಸುಶಿಕ್ಷಿತ   ಸಮಾಜ ನಿರ್ಮಾಣವಾಗುತ್ತದೆ ಎಂದರು.

     

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ  ಶಾಲಾ  ಶಿಕ್ಷಣ ಇಲಾಖೆಯ  ಕನ್ನಡ ಭಾಷಾ ವಿಷಯ ಪರೀಕ್ಷಕರಾದ  ಪದ್ಮಾವತಿ ಮಾತನಾಡಿ,  ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಉತ್ತಮಗೊಳಿಸಲು 20 ಅಂಶಗಳ ಕಾರ್ಯಕ್ರಮವನ್ನು ರೂಪಿಸಿದೆ.   ಉತ್ತಮ ಫಲಿತಾಂಶ  ಮತ್ತು ಗುಣಮಟ್ಟದ ಶಿಕ್ಷಣ ಶಿಕ್ಷಕರ ಗುರಿಯಾಗಿದೆ.‌  ವಿದ್ಯಾರ್ಥಿಗಳು  ಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯ ಭಾಗವಹಿಸಬೇಕು. ಪ್ರತಿ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು  ಪ್ರತಿಭೆ ಇದ್ದೆ ಇರುತ್ತದೆ. ಪ್ರತಿಭೆಯು  ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ವಿಕಸನಗೊಳಿಸುತ್ತದೆ ಎಂದರು.

     

     

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು,  ಪತ್ರಕರ್ತ ಡಿ.ಶ್ರೀಕಾಂತ್,  ನಿವೃತ್ತ ಮುಖ್ಯಶಿಕ್ಷಕ ಹನುಮೇಗೌಡ, ಜ್ಞಾನಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆರ್.ವಿಜಯಕುಮಾರ್ ಮತ್ತು  ವಿದ್ಯಾಸಂಸ್ಥೆಯ ಪದಾಧಿಕಾರಿಗಳು, ಮುಖ್ಯಶಿಕ್ಷಕರುಗಳಾದ ರವಿಕುಮಾರ್, ಜಗದೀಶ್ ಮತ್ತು ಶಿಕ್ಷಕರು,   ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಾದ ಎನ್.ಅಭಿಷೇಕ್, ಎಚ್.ಎಸ್.ಅಮೂಲ್ಯ, ಟಿ.ಎಚ್.ಸೃಜನ್ ಮುಂತಾದವರು ಭಾಗವಹಿಸಿದ್ದರು.  ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

  • ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ತ್ರೈಮಾಸಿಕ ಕೆಪಿಡಿ ಸಭೆಯಲ್ಲಿ ಕಾಣದ ಸರ್ಕಾರಿ ಅಧಿಕಾರಿಗಳು: ಇಲಾಖೆ ಅಧಿಕಾರಿಗಳ ಕುರ್ಚಿ ಖಾಲಿ ಖಾಲಿ

    ದೊಡ್ಡಬಳ್ಳಾಪುರ : ಕೆಪಿಡಿ ಸಭೆಗೆ ಬಾರದೆ ಕೈಕೊಟ್ಟ ಅಧಿಕಾರಿಗಳು, ಹಲವು ಇಲಾಖೆಗಳ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ, ಸಭೆಯಲ್ಲಿ ಅಧಿಕಾರಿಗಳ ಕುರ್ಚಿ, ಖಾಲಿ ಖಾಲಿ ಗ್ರಾಮದ ಕೆಪಿಡಿ ಸಭೆ ಎಂದರೆ ಇಲಾಖೆಯ ಅಧಿಕಾರಿಗಳಿಗೆ ಗೌರವ ಇಲ್ಲವೇ ಎಂದು ಪ್ರಶ್ನಿಸುತ್ತಿರುವ ಗ್ರಾಮ ಪಂಚಾಯತಿ ಸದಸ್ಯರು

     

    ಹೌದು ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024 25 ನೇ ಸಾಲಿನ ಮೂರನೇ ತ್ರೈಮಾಸಿಕ ಕೆಪಿಡಿ ಸಭೆಯನ್ನು ಆಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ಅಧಿಕಾರಿಗಳೇ ಕಾಣುತ್ತಿಲ್ಲ, ಸುಮಾರು 25ಕ್ಕೂ ಅಧಿಕ ಇಲಾಖೆಗಳಿಗೆ ಈಗಾಗಲೇ ಕೆಪಿಡಿ ಸಭೆ ಕುರಿತು ಮಾಹಿತಿ ರವಾನಿಸಿದ್ದು , ಇಂದು ನಡೆಯುತ್ತಿರುವ ಸಭೆಯಲ್ಲಿ ಅಧಿಕಾರಿಗಳೇ ಗೈರಾಗಿರುವುದು ವಿಪರ್ಯಾಸ, ಸಭೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧಿಕಾರಿಗಳೇ ಸಭೆಯಲ್ಲಿ ಇಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

    ಸಭೆ ಈಗಾಗಲೇ ಪ್ರಾರಂಭವಾಗಿದ್ದು, ಸಭೆಯಲ್ಲಿ ಕೇವಲ ಆರೋಗ್ಯ ಇಲಾಖೆ ಕೃಷಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಮಾತ್ರ ಹಾಜರಿದ್ದು, ಉಳಿದೆಲ್ಲ ಇಲಾಖೆಯ ಅಧಿಕಾರಿಗಳು ಗೈರಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ

  • ಫಾಕ್ಸ್ ಕಾನ್ ಕಂಪನಿಯ ವಾಹನದಿಂದ ಅಪಘಾತ : ಬೈಕ್ ಸವಾರರ ಸ್ಥಿತಿ ಚಿಂತಾಜನಕ : ಗಾಯಾಳುಗಳು ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ :ಫಾಕ್ಸ್ ಕಾನ್ (ಆಪಲ್ ಕಂಪನಿ) ಯ ಕರುನಾಡು ಬಸ್, ಇನೋವಾ ಕಾರು ಮತ್ತು ಬೈಕ್ ಗೆ ಡಿಕ್ಕಿ ಹೊಡೆದಿರುವ ಘಟನೆ ರಘುನಾಥಪುರ ಮುಖ್ಯ ರಸ್ತೆ ಜೆ ಕೆ ಪೈಂಟ್ಸ್ ಕಾರ್ಖಾನೆಯ ಸಮೀಪ ನಡೆದಿದೆ.

    ಫಾಕ್ಸ್ ಕಾನ್ (ಆಪಲ್ ಕಂಪನಿ) ಯ ಕರುನಾಡು ಬಸ್ ನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

     

    ಈ ಕುರಿತಂತೆ ಪ್ರತ್ಯಕ್ಷದರ್ಶಿ, ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಡಿ ಕ್ರಾಸ್ ಕಡೆಯಿಂದ ಪೋಕ್ಸಾನ್ ಕಂಪನಿಗೆ ಬರುತ್ತಿದ್ದ ಬಸ್ ಅತಿಯಾದ ವೇಗವಿದ್ದ ಕಾರಣ ಇನೋವಾ ಕಾರು ಮತ್ತು ಬೈಕ್ ಗೆ ಅಪ್ಪಳಿಸಿತು. ಕೂದಲೆಳೆ ಅಂತರದಲ್ಲಿ ಇನೋವಾ ಕಾರಿನಲ್ಲಿದ್ದ ಕುಟುಂಬವು ಪಾರಾಗಿದ್ದು, ಬೈಕ್ ಸವಾರರಿಗೆ ಗಂಭೀರ ಪೆಟ್ಟಾಗಿದೆ, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು , ಓರ್ವ ವ್ಯಕ್ತಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದ್ದು ಮತ್ತೋರ್ವ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿಸಿದ್ದಾರೆ.

     

    ಈ ಅಪಘಾತಕ್ಕೆ ಮುಖ್ಯ ಕಾರಣ ಪೋಕ್ಸ್ಕಾನ್ ಕಂಪನಿಯು ವಾಹನ ಚಾಲಕರಿಗೆ ಸಮಯಕ್ಕೆ ಸರಿಯಾಗಿ ಬರುವಂತೆ ಒತ್ತಡ ಹೇರುತ್ತದೆ, ನಗರ ಪ್ರದೇಶದಲ್ಲಿ ಹೆಚ್ಚಾಗಿ ಟ್ರಾಫಿಕ್ ಇರುವ ಕಾರಣ ಚಾಲಕರು ಸಮಯಕ್ಕೆ ಸರಿಯಾಗಿ ಹೋಗಬೇಕೆಂಬ ಆತುರದಿಂದ ವಾಹನ ಚಲಾಯಿಸುತ್ತಾರೆ , ಚಾಲಕರ ಮೇಲೆ ಕಂಪನಿಯು ಹೇರುವ ಒತ್ತಡದಿಂದಲೇ ಇಂತಹ ಅಪಘಾತಗಳು ಸಂಭವಿಸುತ್ತದೆ, ಕಂಪನಿಗಳು ವಾಹನ ಚಾಲಕರಿಗೆ ಒತ್ತಡ ಮುಕ್ತ ವಾತಾವರಣ ಕಲ್ಪಿಸಬೇಕು , ಈ ಮೂಲಕ ಅಪಘಾತಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.

     

    ಪ್ರಕಾರಣವು ದೊಡ್ಡಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಫಾಕ್ಸ್ ಕಾನ್ ಕಂಪನಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

  • ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥವಾಗಿ 1000ಕ್ಕೂ ಅಧಿಕ ಶಾಲಾ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ

    ದೊಡ್ಡಬಳ್ಳಾಪುರ : ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ಹಾಗೂ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪಾಯಿ ಅವರ ಸ್ಮರಣಾರ್ಥವಾಗಿ ಎಸ್ ಎಸ್ ಎಲ್ ಸಿ ಅಥವಾ ಪಿ ಯು ಸಿ ಯಲ್ಲಿ ಶೇಕಡಾ 80ಕ್ಕಿಂತಲೂ ಅಧಿಕ ಅಂಕಗಳನ್ನು ಗಳಿಸಿದ 1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ವಿತರಣೆ ಮಾಡಲಾಯಿತು.

    ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳ ಭಾಗವಹಿಸಿದ್ದರು, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವಂತೆ ವಾಗ್ಮಿಗಳಾದ ಮಂಜುನಾಥ್ ರವರ ನೇತೃತ್ವದಲ್ಲಿ ಸ್ಪೂರ್ತಿದಾಯಕ ಭಾಷಣವನ್ನು ಆಯೋಜನೆ ಮಾಡಲಾಗಿತ್ತು.

    ಗಣ್ಯರು ದೀಪ ಬೆಳಗುವ ಮೂಲಕ ಹಾಗೂ ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

    ಕಾರ್ಯಕ್ರಮವನ್ನು ಕುರಿತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೋತ್ಸಾಹಧನವನ್ನು ವಿವಿಧ ದಿನಾಂಕಗಳಲ್ಲಿ ವಿತರಣೆ ಮಾಡಲಾಗುತ್ತಿತ್ತು ಆದರೆ ಈ ವರ್ಷದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪಾಯಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 25 ರಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ನಿರ್ಧಾರಿಸಿದ್ದೇವೆ ಎಂದರು.

    ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಶೇಕಡಾ 80ಕ್ಕಿಂತ ಅಧಿಕ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಕೊರೋನಾ ಸಂದರ್ಭದಲ್ಲಿ ಪ್ರಾರಂಭವಾದ ಈ ಪ್ರಕ್ರಿಯೆಯು ಇಂದು ಐದು ವರ್ಷಕ್ಕೆ ಕಾಲಿಟ್ಟಿದೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶುಲ್ಕ ಕಟ್ಟಲು ಆಗದ ವಿದ್ಯಾರ್ಥಿಗಳಿಗೆ ಈ ಪ್ರೋತ್ಸಾಹ ಧನವು ಅತ್ಯಂತ ಸಹಕಾರಿಯಾಗಿದೆ ಎಂದರು.


    ಪ್ರಸ್ತುತ ಕಾಲದಲ್ಲಿ ಪ್ರಜ್ಞಾವಂತರಿಗೆ, ಬುದ್ದಿವಂತರಿಗೆ ತುಂಬಾ ಪ್ರಮುಖ್ಯತೆ ಇದೆ,ಆಮೇಜಾನ್, ಸ್ವಿಗ್ಗಿ, ಫ್ಲಿಪ್ ಕರ್ಟ್ ನಂತಹ ಎಷ್ಟೋ ಕಂಪನಿಗಳನ್ನು ಕಟ್ಟಿ ಬೆಳೆಸಿದ ಉದಾಹರಣೆಗಳು ನಮ್ಮ ಮುಂದಿವೆ, ಉತ್ತಮವಿದ್ಯೆ ಉಳ್ಳವರು ಇದು ಜಗತ್ತನ್ನು ಮೊನ್ನೆಡೆಸುತ್ತಿದ್ದಾರೆ. ಇದನ್ನು ಅರಿತು ವಿದ್ಯಾರ್ಥಿಗಳು ಸಾಧಕರ ಸಾಧನೆಯನ್ನು ಸ್ಫೂರ್ತಿಯಾಗಿ ಪಡೆದು ಮುಂದೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ದೇಶಕ್ಕೆ ಉತ್ತಮ ಸೇವೆ ಒದಗಿಸುವಂತಾಗಲಿ ಎಂದರು.

     

    ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಹನುಮಂತರಾಯಪ್ಪ ಮಾತನಾಡಿ ತಾಲೂಕಿನ ವಿದ್ಯಾರ್ಥಿಗಳಿಗೆ ಸದಾ ಬೆಂಬಲವಾಗಿ ನಿಂತಿರುವ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಮುನಿರಾಜು ಹಾಗೂ ಶಾಸಕ ಧೀರಜ್ ಮುನಿರಾಜು ರವರ ಕಾರ್ಯ ಶ್ಲಾಘನೀಯ, ವಿಶೇಷವಾಗಿ ದೇಶ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎರಡು ಬಾರಿ ನನ್ನ ಚುನಾವಣಾ ಪ್ರಚಾರಕ್ಕೆಂದು ದೊಡ್ಡಬಳ್ಳಾಪುರ ತಾಲೂಕಿಗೆ ಭೇಟಿ ನೀಡಿದ್ದರು,ನನ್ನ ಮತ್ತು ಅವರ ಒಡನಾಟ ತುಂಬಾ ಹತ್ತಿರವಾದದ್ದು, ಬಿಜೆಪಿ ಪಕ್ಷದಿಂದ ಇಂತಹ ಉತ್ತಮ ಕಾರ್ಯಗಳು ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಸಂಗತಿ, ಶಾಸಕ ಧೀರಜ್ ಮುನಿರಾಜುರವರ ನೇತೃತ್ವದಲ್ಲಿ ಇಂತಹ ಮತ್ತಷ್ಟು ಉತ್ತಮ ಕಾರ್ಯಗಳು ನಡೆಯಲಿ ಎಂದರು.


    ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಹನುಮಂತರಾಯಪ್ಪ,ಮಹಿಳಾ ಮುಖಂಡರಾದ ಪುಷ್ಪ ಶಿವಶಂಕರ್, ನಗರ ಮಂಡಲ ಅಧ್ಯಕ್ಷ ಮುದ್ದಣ್ಣ, ನಗರ ಮಂಡಲ ಅಧ್ಯಕ್ಷ ನಾಗೇಶ್, ನಗರ ಸಭೆ ಅಧ್ಯಕ್ಷರಾದ ಸುಮಿತ್ರಾ ಆನಂದ್,ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀನಾರಾಯಣ್, ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ ಸಿ ನಾರಾಯಣ್ ಸ್ವಾಮಿ, ಬಮುಲ್ ನಿರ್ದೇಶಕರಾದ ಬಿ ಸಿ ಆನಂದ್, ಮುಖಂಡರಾದ ಟಿ. ರಂಗರಾಜು, ನಗರಸಭಾ ಸದಸ್ಯರಾದ ಬಂತಿ ವೆಂಕಟೇಶ್ ,ನಾಗರತ್ನಮ್ಮ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ , ವಾಣಿ ನಂದಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • www.Doddaballapura.com ವೆಬ್ ಸೈಟ್ ನ ಒಂದೇ ಕ್ಲಿಕ್ ನಲ್ಲಿ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಲಭ್ಯ – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ತಾಲೂಕಿನಲ್ಲಿ ಸಾರ್ವಜನಿಕರು ತಮ್ಮ ಗ್ರಾಮಗಳ/ ವಾರ್ಡ್ ಗಳ ಸಮಸ್ಯೆ ಕುರಿತಂತೆ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳಿಗೆ ದೂರು ನೀಡುವ ಸಲುವಾಗಿ ಕಚೇರಿಗಳಿಗೆ ಅಲೆದಾಡುವ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಸಕ ಧೀರಜ್ ಮುನಿರಾಜು ನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ .

    ಹೌದು www.nammadoddaballapura. com / www.doddaballapura.com ಎಂಬ ವೆಬ್ ಸೈಟ್ ಗಳ ಮೂಲಕ ತಾಲೂಕಿನ ಹಲವು ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಧೀರಜ್ ಮುನಿರಾಜು ನಿರ್ಧರಿಸಿದ್ದು, ಈ ವೆಬ್ ಸೈಟ್ ಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆ ಅಧಿಕಾರಿಗಳ ಮಾಹಿತಿ ದೊರೆಯಲಿದೆ .

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥವಾಗಿ ಪ್ರತಿಭಾ ಪುರಸ್ಕಾರದಲ್ಲಿ ಶಾಸಕ ಧೀರಾಜ್ ಗಮುನಿರಾಜು ಮಾತನಾಡುತ್ತಾ ತಾಲೂಕಿನ ಗ್ರಾಮ/ವಾರ್ಡ್ ಗಳಲ್ಲಿ ಹಲವು ಸಮಸ್ಯೆಗಳಿದ್ದು , ಸಮಸ್ಯೆಗಳನ್ನು ಕುರಿತು ದೂರು ಸಲ್ಲಿಸಲು ಅಥವಾ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅಧಿಕಾರಿಗಳ ಮಾಹಿತಿ ಕೊರತೆ ಇದೆ, ಈ ಕೊರತೆಯನ್ನು ನೀಗಿಸಲು ಸಾರ್ವಜನಿಕರ ಸಮಸ್ಯೆಗಳಿಗೆ ವಿನೂತನವಾಗಿ ಸ್ಪಂದಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದು, ತಾಲ್ಲೂಕಿನ ಪ್ರತಿ ಗ್ರಾಮ ಹಾಗೂ ನಗರ ಮಟ್ಟದ ಅಧಿಕಾರಿಗಳ ಮಾಹಿತಿ www.doddaballapura.com/ WWW.NAMMADODDABALLAPURA.COM ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ. ಈ ವೆಬ್ ಸೈಟ್ ಗಳಲ್ಲಿ ಪ್ರತಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪಡೆಯುವುದಷ್ಟೇ ಅಲ್ಲದೇ ನಿಮ್ಮ ಸಮಸ್ಯೆ ಕುರಿತ ದೂರುಗಳನ್ನು ನೇರವಾಗಿ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಜೊತೆಗೆ ವಾಟ್ಸ್ ಆಪ್ ಮೂಲಕ ಅವರನ್ನು ಸಂಪರ್ಕಿಸುವ ಸೌಲಭ್ಯವು ಕೂಡ ಇದೆ, ಹಾಗಾಗಿ ಸಾರ್ವಜನಿಕರು ಮನೆಯಲ್ಲೇ ಕುಳಿತು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ಸುಲಭ ಮಾರ್ಗದಲ್ಲಿ ತರಬಹುದಾಗಿದೆ ಎಂದರು .

    ತಾಲೂಕಿನ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

     

  • ಫಾಕ್ಸ್ ಕಾನ್ ಕಂಪನಿ ಬಸ್ ಮತ್ತು ಬೈಕ್ ನಡುವೆ ಅಪಘಾತ : ಇಬ್ಬರ ಸ್ಥಿತಿ ಚಿಂತಾಜನಕ

    ದೊಡ್ಡಬಳ್ಳಾಪುರ :ಫಾಕ್ಸ್ ಕಾನ್ (ಆಪಲ್ ಕಂಪನಿ) ಯ ಕರುನಾಡು ಬಸ್ ಹಾಗೂ ಬೈಕ್ ಸವಾರರ ಸ್ಥಿತಿ ಚಿಂತಾಜನಕವಾಗಿದೆ.

     

     

     

    ಫಾಕ್ಸ್ ಕಾನ್ (ಆಪಲ್ ಕಂಪನಿ) ಯ ಕರುನಾಡು ಬಸ್ ಹಾಗೂ ಬೈಕ್ ನಡುವೆ ರಘುನಾಥಪುರ ರಸ್ತೆಯಲ್ಲಿ ಜೆಕೆ ಪೇಂಟ್ಸ್ ಪಕ್ಕದಲ್ಲಿ ಅಪಘಾತ ಸಂಭವಿಸಿದೆ. ಇಬ್ಬರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

     

    ಪ್ರಕಾರಣವು ದೊಡ್ಡಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಬಸ್ ಅಪಘಾತಕ್ಕಿಡಾದ ಬೈಕ್ ಅನ್ನು 150 ಅಡಿ ದೂರ ಎಳೆದುಕೊಂಡು ಬಂದಿದ್ದು,ಬಸ್ ಚಾಲಕ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.