Blog

  • ಭದ್ರಾವತಿ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ : ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ

    ಮಂಡ್ಯ: ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸುಮಾರು ₹15,000 ಕೋಟಿ ವೆಚ್ಚದಲ್ಲಿ ಪುನಚ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

     

    ಇಲ್ಲಿ ಸಮರೋಪವಾದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡಿದ ಕೇಂದ್ರ ಸಚಿವರು; ರಾಜ್ಯದಲ್ಲಿ ನಿರುದ್ಯೋಗ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ. ಕೈಗಾರಿಕಾಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಆ ನಿಟ್ಟಿನಲ್ಲಿಯೇ ಭದ್ರಾವತಿ ಕಾರ್ಖಾನೆಗೆ ಮರುಜೀವ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.

     

    ಮೈಸೂರು ಮಹಾ ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆ ಆಗಿತ್ತು. ಸಾವಿರಾರು ಜನರಿಗೆ ಅಲ್ಲಿ ಉದ್ಯೋಗ ಅವಕಾಶ ಸಿಕ್ಕಿತ್ತು. ಲಕ್ಷಾಂತರ ಜನರು ಪರೋಕ್ಷವಾಗಿ ಬದುಕು ಕಟ್ಟಿಕೊಂಡಿದ್ದರು. ಅಂತಹ ವೈಭವದ ದಿನಗಳು ಮರುಕಳಿಸುವ ದಿನಗಳು ದೂರವಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

     

    ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕಿನಂತಹ ಎರಡು ಮಹತ್ವದ ಖಾತೆಗಳನ್ನು ನೀಡಿದ್ದಾರೆ. ಎರಡೂ ಜವಾಬ್ದಾರಿಗಳನ್ನು ನಾನು ರಾಜ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಣೆ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿಯವರು ಹೇಳಿದರು.

     

  • ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ: ಸಿಎಂ ಸಿದ್ದರಾಮಯ್ಯ

    ಕಲಬುರಗಿ ಡಿ22: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ ಇದೆ. ಉತ್ತರ ಕರ್ನಾಟಕ ವಿಮೋಚನಾ ದಿನದಂದೇ ಈ ಬಗ್ಗೆ ಹೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುನರುಚ್ಚರಿಸಿದರು.

     

    ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು‌.

     

    ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದೆ. ಪ್ರತ್ಯೇಕ ಸಚಿವಾಲಯ ಮಾಡುವ ಉದ್ದೇಶ ನಮಗೆ ಇದೆ ಎಂದರು.

     

    ತೊಗರಿ ಪ್ಯಾಕೇಜ್

    ತೊಗರಿ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ ಎನ್ನುವ ಬೇಡಿಕೆ ರೈತರಿಂದ ಇದೆ. ತೊಗರಿ ಬೆಳೆ ಸ್ಥಿತಿ ಗತಿ ಕುರಿತ ವರದಿ ಕೇಳಿದ್ದೇವೆ. ಈ ವರದಿ ಬಂದ ಬಳಿಕ ಆ ಬಗ್ಗೆ ಸೂಕ್ತ. ನಿರ್ಧಾರ ಕೈಗೊಳ್ಳಲಾಗುವುದು ಎಂದರು.

     

    ಜಯದೇವ ಮಹತ್ವದ ಹೆಜ್ಜೆ

     

    ಕಲ್ಯಾಣ ಕರ್ನಾಟಕದ ಆರೋಗ್ಯ ವ್ಯವಸ್ಥೆಯಲ್ಲಿ ಇಂದು ಉದ್ಘಾಟನೆಗೊಳ್ಳಲಿರುವ ಜಯದೇವ ಆಸ್ಪತ್ರೆ ಮಹತ್ವದ್ದು. ರಾಜ್ಯ ಸಭೆ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟದ ಫಲವಾಗಿ 371J ಜಾರಿಯಾಗಿದೆ. ಇಲ್ಲಿ 371 ಬೆಡ್ ಗಳ ಆಸ್ಪತ್ರೆಯನ್ನು ಇಂದು ಉದ್ಘಾಟಿಸುತ್ತಿದ್ದೇವೆ ಎಂದರು.

     

  • ದೊಡ್ಡಬಳ್ಳಾಪುರ ನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಶಂಕುಸ್ಥಾಪನೆ: ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಭಾಗಿ

    ದೊಡ್ಡಬಳ್ಳಾಪುರ : ತಾಲ್ಲೂಕು ಪಂಚಾಯಿತಿ ಆವರಣದಲ್ಲಿಂದು ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ 108.50 ಲಕ್ಷ ರೂಗಳ ರಸ್ತೆ, ಚರಂಡಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದರು.

     

    ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಮಾತನಾಡಿ ಒಳಚರಂಡಿ ವ್ಯವಸ್ಥೆ ಕಲ್ಪಿಸಿಕೊಡಲು, ನಗರೋತ್ಥಾನ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿಕೊಡಲು, ರಸ್ತೆ ಅಭಿವೃದ್ಧಿಗೆ ಹಾಗೂ ರಸ್ತೆ ಅಗಲೀಕರಣಕ್ಕೆ ಅನುದಾನ ಕಲ್ಪಿಸಿಕೊಡಲು ಮನವಿ ಮಾಡಿದರು. ಸಚಿವರು ಮನವಿಗೆ ಸ್ಪಂದಿಸಿ ನಗರೋತ್ಥಾನ ಕಾಮಗಾರಿಗಳು ಒಂದು ತಿಂಗಳ ಒಳಗಾಗಿ ಶುರು ಆಗಬೇಕು. ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಟೌನ್ ಶಿಪ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

     

    ಕಾರ್ಯಕ್ರಮದಲ್ಲಿ , ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಚುಂಚೇಗೌಡ, ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಮಲ್ಲೇಶ್ , ಜಿಪಂ ಸಿಇಒ ಡಾ. ಕೆ ಎನ್ ಅನುರಾಧ, ತಹಶೀಲ್ದಾರ ವಿಭಾ ವಿದ್ಯಾ ರಾಥೋಡ್ , ಪೌರಾಯುಕ್ತ ಕಾರ್ತಿಕ್ ಈಶ್ವರ್ , ತಾಪಂ ಇಒ ಮುನಿರಾಜು, ನಗರಸಭಾ ಸದಸ್ಯರು, ನಗರಸಭೆ ನಾಮನಿರ್ದೇಶಿತ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

  • ಸ್ವಚ್ಛ ಶನಿವಾರ: ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿಯ ವಿಶೇಷ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

    ದೊಡ್ಡಬಳ್ಳಾಪುರ : ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಜಿಂಕೆ ಬಚ್ಚಹಳ್ಳಿಯ ದೊಡ್ಡಕುಂಟೆ ಸ್ಥಳವನ್ನು ಸ್ವಚ್ಛ ಮಾಡುವುದರ ಮೂಲಕ ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

     

    ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವತಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೀಲಮ್ಮ ಪಿಳ್ಳೇಗೌಡ ಹಾಗೂ ಉಪಾಧ್ಯಕ್ಷರಾದ ಮಾರಪ್ಪ ಭಾಗವಹಿಸಿ ಶುಭ ಹಾರೈಸಿದರು.

     

    ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರೇವತಿ ಮಾತನಾಡಿ ಸ್ವಚ್ಚ ಶನಿವಾರವೆಂದರೆ ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮಪಂಚಾಯಿತಿ ವ್ಯಾಪ್ತಿಯ ಒಂದೊಂದು ಗ್ರಾಮದ ಸ್ವಚ್ಛತೆ ಮಾಡುವ ಮೂಲಕ ಪ್ರತಿ ಗ್ರಾಮಗಳಲ್ಲೂ ಸ್ಚಚ್ಚತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು. ಹಾಗೂ ಈ ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯ ಗ್ರಾಮಸ್ಥರ ಸಹಕಾರ ಕೂಡ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

     

    ಪಂಚಾಯಿತಿ ಅಧ್ಯಕ್ಷರಾದ ಲೀಲಮ್ಮ ಪಿಳ್ಳೇಗೌಡ ಮತ್ತು ಮಾರಪ್ಪನವರು ಮಾತನಾಡಿ ಗ್ರಾಮಗಳ ಸ್ವಚ್ಛತೆ ಮಾಡುವ ಉತ್ತಮ ಕಾರ್ಯಕ್ಕೆ ಇಂದು ಅಡಿಗಲ್ಲು ಹಾಕಿದ್ದೇವೆ, ಈ ಕಾರ್ಯಕ್ರಮದ ಯಶಸ್ಸಿನ ಮೂಲಕ ಗ್ರಾಮಗಳ ನೈರ್ಮಲ್ಯ ಕಾಪಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಯೋಜನೆಗಳನ್ನು ರೂಪಿಸುವ ಚಿಂತನೆ ನಡೆದಿದೆ , ಇಂತಹ ಉತ್ತಮ ಕಾರ್ಯಗಳಿಗೆ ಗ್ರಾಮಸ್ಥರ ಸಹಕಾರದ ಅವಶ್ಯಕತೆ ಇದೆ ಎಂದರು

     

    ಸ್ಚಚ್ಚತಾ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧಿಕಾರಿಗಳು,ಗ್ರಾಮಪಂಚಾಯಿತಿ ಸದಸ್ಯರಾದ ಸಂದೇಶ್ ,ತಿಪ್ಪಾಪುರ ಮಾರಪ್ಪ,ಚಿಕ್ಕತುಮಕೂರು ಮುನಿಕೃಷ್ಣ.ಜಿಂಕೆಬಚ್ಚಹಳ್ಳಿ ಮುನಿರಾಜು, ಬೈರೇಗೌಡ ಹೊಸಹುಡ್ಯ,ಆನಂದ ತಿಪ್ಪಾಪುರಮಂಜುನಾಥ್, ವೀರಾಪುರ ವಿಜಯಕುಮಾರ್, ಪಂಚಾಯಿತಿಯ ಪೌರಕಾರ್ಮಿಕರು ಸೇರಿದಂತೆ ಹಲವು ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.

  • ಪ್ರಶಾಸನ್ ಗಾಂವ್ ಕೀ ಓರ್ ವಿಶೇಷ ಆಂದೋಲನ: ಫಲಾನುಭವಿಗಳಿಗೆ ಸವಲತ್ತು ವಿತರಿಸಿದ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್

    ಬೆಂ.ಗ್ರಾ. ಜಿಲ್ಲೆ, ಡಿ.20 : ಉತ್ತಮ ಆಡಳಿತ ಸಪ್ತಾಹ-2024′ ರ ಶಿಬಿರದ ಭಾಗವಾಗಿ ಪ್ರಶಾಸನ್ ಗಾಂವ್ ಕೀ ಓರ್ ವಿಶೇಷ ಅಭಿಯಾನವನ್ನು ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಮ್ಮಿಕೊಳ್ಳಲಾಗಿದೆ.

     

    ದೇವನಹಳ್ಳಿ ತಾಲೂಕು ಕಛೇರಿಯಲ್ಲಿ ಪ್ರಶಾಸನ್ ಗಾಂವ್ ಕೀ ಓರ್ ಅಭಿಯಾನದ ಭಾಗವಾಗಿ ಇಂದು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಅಪರ ಜಿಲ್ಲಾಧಿಕಾರಿ ಅಮರೇಶ್ ಹೆಚ್ ಅವರು ಪ್ರಮಾಣ ಪತ್ರ ವಿತರಿಸಿದರು.

    ಉತ್ತಮ ಆಡಳಿತ ಸಪ್ತಾಹ-2024 ಶಿಬಿರವು ಡಿಸೆಂಬರ್ 19 ರಿಂದ 24 ರವರೆಗೆ ನಡೆಯಲಿದೆ. “ಪ್ರಶಾಸನ್ ಗಾಂವ್ ಕಿ ಓರ್(ಗ್ರಾಮದ ಕಡೆಗೆ ಆಡಳಿತ)” ಎಂಬ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಸಾರ್ವಜನಿಕ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ.

    ಈ ಸಂದರ್ಭದಲ್ಲಿ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಉಪ ತಹಶೀಲ್ದಾರ್ ಉಷಾ ಇತರರು ಉಪಸ್ಥಿತರಿದ್ದರು.

  • ಉಚಿತ ಜಾನುವಾರು ಮೇವು ವಿತರಣೆ: ರೈತರಿಗೆ ಅನುಕೂಲಕರ

    ದೊಡ್ಡಬಳ್ಳಾಪುರ, (ಡಿ 21): ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಭಾಗವಾಗಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಆಯೋಜಿಸಿರುವ ಉಚಿತ ಜಾನುವಾರು ಮೇವು ವಿತರಣಾ ಕಾರ್ಯಕ್ರಮವನ್ನು  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಉದ್ಘಾಟಿಸಿ ಮಾತನಾಡಿ, ದನಗಳ ಜಾತ್ರೆಗೆ ಸರ್ಕಾರದ ವತಿಯಿಂದ ಉಚಿತ ನೀರು ಮತ್ತು ಆಹಾರ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಗೆ ಸ್ಥಳೀಯ ಸಂಘಟನೆ ನವ ಕರ್ನಾಟಕ ಯುವಶಕ್ತಿ ವೇದಿಕೆಯವರು ಉಚಿತ ಜಾನುವಾರು ಮೇವು ನೀಡುತ್ತಿರುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಜಾತ್ರೆಯ ರೈತರು ಕಾರ್ಯಕ್ರಮದ  ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

    ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ   ಮಾತನಾಡಿ ಕೆಲವೆಡೆ ಅತಿವೃಷ್ಟಿ ಮತ್ತು  ಕೆಲವೆಡೆ ಅನಾವೃಷ್ಟಿಯಿಂದ  ಈ ವರ್ಷ ರೈತರು ತೀವ್ರ ನಷ್ಟದಲ್ಲಿದ್ದಾರೆ ಹಾಗೂ ಮೇವಿನ ಕೊರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ಈ ಕಾರ್ಯಕ್ರಮ ಕೇವಲ ದಾನ ಕಾರ್ಯವಲ್ಲದೆ ರೈತ ಸಮುದಾಯವನ್ನು ಬೆಂಬಲಿಸುವ ಗುರಿ ಹೊಂದಿರುವುದು ನಿಜವಾಗಿಯೂ ಶ್ಲಾಘನೀಯ ಎಂದರು.

    ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ ಇಂದು ಉದ್ಘಾಟನೆಯಾಗಿರುವ ಮೇವು ಮತ್ತು ನೀರು ವಿತರಣಾ ಕಾರ್ಯಕ್ರಮ ಇನ್ನೂ ಮೂರು – ನಾಲ್ಕು ದಿನ ಮುಂದುವರಿಯುತ್ತದೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೈತರಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ ಎಂದು  ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಅಪ್ಪಯ್ಯಣ್ಣನವರಿಗೆ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

     

    ವೇದಿಕೆ ಸಹಯೋಗದೊಂದಿಗೆ ನಂದಿ ವಿ ಕೇರ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹ ಆಯೋಜಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಘಾಟಿ ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ ನಾರಾಯಣಸ್ವಾಮಿ,   ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ಅಶೋಕ್, ಅರ್ಕಾವತಿ ರೈತ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್, ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳಾದ ಮುಬಾರಕ್ ಷರೀಫ್, ನಾಗರಾಜು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ  ತಾಲೂಕು ಅಧ್ಯಕ್ಷ ಹನುಮಂತೇಗೌಡ, ಮುಖಂಡರಾದ ನಲ್ಲಪ್ಪ,ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ರೈತರು ಭಾಗವಹಿಸಿದ್ದರು.

  • ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ಹೊರಹಾಕಿದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ

    ದೊಡ್ಡಬಳ್ಳಾಪುರ : ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡಗಳು, ಒಬಿಸಿ ಇತರೆ ಹಿಂದುಳಿದ ವರ್ಗಗಳಿಗೆ ಘಾಸಿ ಉಂಟುಮಾಡಿದೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಹೋರಾಟಗಾರ ಸಂಜೀವ್ ನಾಯಕ್ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

    ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡಿಸಿ ಪ್ರತಿಭಟನೆ ನೆಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಭಾರತದ ಚರಿತ್ರೆಯಲ್ಲಿ ಜಾತಿ ವ್ಯವಸ್ಥೆಯಿಂದ ತುಳಿತಕ್ಕೆ ಒಳಗಾದವರ, ನೊಂದವರ ಹಾಗೂ ಶೋಷಿತರ ಧ್ವನಿಯಾಗಿ ಸರ್ವರು ಸಮಾನರು ಎಂದು ಪ್ರತಿಪಾದಿಸಿದ ಭಾರತ ರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರು ಇಡೀ ಪ್ರಪಂಚವೇ ಮೆಚ್ಚುವ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಬಹುಜನ ಹಿತಾಯ ಬಹುಜನ ಸುಖಾಯ ಎಂಬ ಆಶಯದ ಸಂವಿಧಾನವನ್ನು ರಚಿಸಿ ಕೊಟ್ಟವರು. ಬಾಬಾ ಸಾಹೇಬರು ಬರೆದ ಸಂವಿಧಾನದಿಂದ ಈ ದೇಶದ ಮಹಿಳೆಯರು ಹಾಗೂ ಶೋಷಿತ ಸಮುದಾಯಗಳಿಗೆ ಅಕ್ಷರ, ಅಧಿಕಾರ ದೊರೆತು, ಸಮಾಜದಲ್ಲಿ ತಲೆ ಎತ್ತಿ ನಿಲ್ಲವಂತಾಯಿತು. ಆದರೆ, ಈ ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಅವರನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದ ಸಂಘಪರಿವಾರ ಮತ್ತು ಬಿಜೆಪಿ ಪರಿಷ್ಕರಣೆ ಎಂಬ ಹೆಸರಿನಲ್ಲಿ ಸಂವಿಧಾನ ಬದಲಾವಣೆಯ ಮಾತುಗಳನ್ನೂ ಅಡಿತ್ತು ಎಂಬುದನ್ನು ಗಮನಿಸಬೇಕಾದ ವಿಚಾರವಾಗಿದೆ ಎಂದರು.

     

    ಪ್ರತಿಭಟನಾಕಾರರು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

    ದಲಿತ ಮುಖಂಡರಾದ ರಾಮಮೂರ್ತಿ (ರಾಮು ) ನೇರಳೆಘಟ್ಟ ಮಾತನಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನದಲ್ಲಿ ಮಾತನಾಡುತ್ತಾ ಅಂಬೇಡ್ಕರ್ ಎಂದು ಹೇಳುವುದು ಇಂದು ಫ್ಯಾಷನ್ ಆಗಿದೆ. “ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ಹೆಸರು ಹೇಳಿದ್ದರೆ ಏಳೇಳೂ ಜನ್ಮಕ್ಕೂ ಸ್ವರ್ಗಕ್ಕೆ ಹೋಗುತ್ತಿದ್ದೀರಿ” ಎಂದು ಹೇಳಿಕೆ ನೀಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರನ್ನು ಅವಹೇಳನ ಮಾಡಿದ್ದಾರೆ.ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ಸೂಕ್ತ ಕಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.

    ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಶಿವಶಂಕರ್, ಪತ್ರಕರ್ತ ಹಾಗೂ ಹೋರಾಟಗಾರ ರಾಜು ಸಣ್ಣಕ್ಕಿ, ಗುಳ್ಯ ಹನುಮಣ್ಣ, ಮೈಲಾರಪ್ಪ, ಸತೀಶ್, ರತ್ನಮ್ಮ, ನಾಗರತ್ನಮ್ಮ, ರುದ್ರರಾಧ್ಯ, ನಟರಾಜು,ತಳಗವಾರ ಮುನಿಯಪ್ಪ, ಪುನೀತ್, ಅಶೋಕ, ರಾಜಶೇಖರ್, ವಿ.ವೆಂಕಟೇಶ್, ನಾಗಮ್ಮಜ್ಜಿ, ಮಾರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ನಾಳೆ (ಡಿ. 22)ರಂದು ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡ ಹಬ್ಬಕ್ಕೆ ಅದ್ದೂರಿ ವೇದಿಕೆ ಸಜ್ಜು

    ದೊಡ್ಡಬಳ್ಳಾಪುರ : ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಾಳೆ ನಗರದ ಡಿ ಕ್ರಾಸ್ ಬಳಿಯ ಕೇಂದ್ರ ಕಛೇರಿ ಸಮೀಪ ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ೫೧ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ ಕಾರ್ಯಕ್ರಮವನ್ನು “ಹೆಸರಾಯಿತು ಕರ್ನಾಟಕ, ಉಸಿರಾಗಿಲಿ ಕನ್ನಡ” ಘೋಷ ವಾಕ್ಯದ ಅಡಿಯಲ್ಲಿ ಆಚರಿಸಲಾಗುತ್ತಿದೆ.

     

    ಈ ಕುರಿತು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಮಾತನಾಡಿ ನವೆಂಬರ್ ೧ ರಂದು ಮತ್ತು ನವೆಂಬರ್ ತಿಂಗಳ ಪರ್ಯಂತ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತದೆ. ಆರೂರು ವೆಂಕಟರಾಯರು, ವಿ.ಕೃ. ಗೋಕಾಕ್, ತು.ಸು. ಶ್ಯಾಮರಾಯರು, ಮಾ. ರಾಮಮೂರ್ತಿ ಇನ್ನು ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ರಚನೆಯಾದ ಅಖಂಡ ಕರ್ನಾಟಕ ನಾಮಕರಣವಾಗಿ  ಇಂದಿಗೆ ೫೧ ವರ್ಷ ಸಂದಿದೆ. ಈ ಸುಸಂದರ್ಭದಲ್ಲಿ ಕನ್ನಡಕ್ಕಾಗಿ ಅವಿರತ ಹೋರಾಟಗಳಿಗೆ, ಹೋರಾಟಗಾರರಿಗೆ ಗೌರವ ಸಮರ್ಪಣೆಯನ್ನು ಈ ರಾಜ್ಯೋತ್ಸವದ ಮುಖೇನ ಸಲ್ಲಿಸಲಾಗುತ್ತಿದೆ ಎಂದರು.

     

    ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ರಾ.ವಿ.ಕರವೇ ದೊಡ್ಡಬಳ್ಳಾಪುರ ತಾಲ್ಲೂಕು ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ದಿನಾಂಕ ೨೨-೧೨-೨೦೨೪ನೇ ಭಾನುವಾರ ಹಮ್ಮಿಕೊಂಡಿದ್ದು, ಕನ್ನಡ ಹಬ್ಬಕ್ಕೆ ತಾಲ್ಲೂಕಿನ ಕನ್ನಡ ಮನಸ್ಸುಗಳು, ತಾಲ್ಲೂಕಿನ ಎಲ್ಲಾ ನಾಗರೀಕ ಬಾಂಧವರು, ಕನ್ನಡ ಪರ, ರೈತ ಪರ, ವಿದ್ಯಾರ್ಥಿ ಬುತ್ರರು, ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

     

     

  • ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ 1,15,000 ರೂ ಮೌಲ್ಯದ ಮನೆ ನಿರ್ಮಾಣಕ್ಕೆಚಾಲನೆ

    ದೊಡ್ಡಬಳ್ಳಾಪುರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆ ಅಡಿಯಲ್ಲಿ 1,15,000 ರೂ ಮೌಲ್ಯದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಆರೋಡಿ ವಲಯದ ಮಾಚೇನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಯಿತು.

    ತಾಲ್ಲೂಕಿನ ಆರೋಡಿ ವ್ಯಾಪ್ತಿಯ ಮಾಚೇನಹಳ್ಳಿ ಗ್ರಾಮ ನಿವಾಸಿ ಕಾಮಕ್ಕ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಈ ಹಿಂದೆ ಪ್ರತಿ ತಿಂಗಳ ಮಾಸಾಶನ ( ಪಿಂಚಣಿ) ಬರುವಂತ ವ್ಯವಸ್ಥೆ ಮಾಡಲಾಗಿದ್ದು.ಪ್ರಸ್ತುತ ಅವರಿಗೆ ವಾಸಿಸಲು ಮನೆ ಇಲ್ಲದ ಕಾರಣ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಮನೆ ಕಟ್ಟಿಕೊಡಲು 1,15,000 ರೂ ಮೊತ್ತದ ಅನುದಾನ ಮಂಜೂರಾಗಿದ್ದು, ಮನೆಯ ನಿರ್ಮಾಣಕ್ಕೆ ಇಂದು (ಡಿ.21)ಗುದ್ದಲಿ ಪೂಜೆಯ ಕಾರ್ಯಕ್ರಮವನ್ನು ಯೋಜನಾಧಿಕಾರಿಯವರಾದ ಸುಧಾ ಭಾಸ್ಕರ್ ನೆರವೇರಿಸುವ ಮೂಲಕ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದರು.

    Ad

     

    ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್ , ರಂಗಣ್ಣ, ವಲಯದ ಮೇಲ್ವಿಚಾರಕರಾದ ಸುಪ್ರೀತ್ , ತಾಲ್ಲೂಕು ಸಮನ್ವಯ ಅಧಿಕಾರಿ ಛಾಯ, ಹಾಗೂ ಸೇವಾಪ್ರತಿನಿಧಿಗಳಾದ ಪುಟ್ಟತಾಯಮ್ಮ, ಆನಂದ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • ಬೆಂ.ಗ್ರಾ ಜಿಲ್ಲೆಯಲ್ಲಿ ಸಮ್ಮೇಳನ‌ ನಡೆಸಲು ದೊಡ್ಡಬಳ್ಳಾಪುರದ ಸಾಹಿತ್ಯಾಸಕ್ತರಿಂದ ಹಕ್ಕೊತ್ತಾಯ

    ಮಂಡ್ಯದಲ್ಲಿ ನಡೆಯುತ್ತಿರುವ  87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ದೊಡ್ಡಬಳ್ಳಾಪುರದವರಾದ ಸ್ವಾತಂತ್ರ್ಯ ಸೇನಾನಿ ಟಿ.ಸಿದ್ದಲಿಂಗಯ್ಯ ಮತ್ತು ಖ್ಯಾತ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರನ್ನು ಉಲ್ಲೇಖ ಮಾಡಿದರು.

     

    ಸ್ವಾತಂತ್ರ್ಯ ಹೋರಾಟದಲ್ಲಿ ಮಂಡ್ಯ ಜಿಲ್ಲೆಯ ಶಿವಪುರ ಧ್ವಜ ಸತ್ಯಾಗ್ರಹ ಘಟನೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಸ್ವಾತಂತ್ರ್ಯ ಹೋರಾಟಗಾರ ಟಿ.ಸಿದ್ದಲಿಂಗಯ್ಯ ಅವರ ನೇತೃತ್ವದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಖ್ಯಾತ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರ ವಿಚಾರಧಾರೆಗಳನ್ನು ಸಹ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.

     

     

    ಸಮ್ಮೇಳನಕ್ಕೆ ಒತ್ತಾಯ :-

     

    ಮುಂದಿನ 88 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಸಬೇಕೆಂದು ಒತ್ತಾಯಿಸಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳು‌ ಒತ್ತಾಯಿಸಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂದಿನ ಅಖಿಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿ ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಿದರು

     

    ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರ ‌ತಾಲ್ಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಘಟಕದ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ನಿವೃತ್ತ ಅಧ್ಯಾಪಕ. ವಿ.ಎಸ್.ಹೆಗಡೆ, ಶಿಕ್ಷಕರುಗಳಾದ ಎಚ್.ಎನ್.ಪ್ರಕಾಶ್, ಕೋದಂಡರಾಮ್, ಸಿ.ಅಣ್ಣಯ್ಯ ಮುಂತಾದವರು ಭಾಗವಹಿಸಿದ್ದರು.