Blog

  • ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ ಸಮಾರಂಭ 

    ದೊಡ್ಡಬಳ್ಳಾಪುರ : ಪ್ರಸ್ತುತ ಸಾಲಿನ ಪರೀಕ್ಷೆಗಳು ಇನ್ನೇನು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತಾ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜಿನಪ್ಪ ತಿಳಿಸಿದರು.

    ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು, ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವು ನಮ್ಮ ಜಿಲ್ಲೆಯಲ್ಲಿಯೇ ಇರುವ ಕಾರಣ ಹೊರದೇಶಗಳಿಂದ ಬರುವ ಮಾದಕ ವಸ್ತುಗಳು ಶಾಲಾ ಕಾಲೇಜುಗಳ ಮಕ್ಕಳ ಕೈಗೆಸಿಗುವಂಥಾಗಿದೆ. ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ರಚಿಸಲಾಗಿದೆ ಅಧಿಕಾರಿಗಳು ಬಿ ಆರ್ ಪಿ ಮತ್ತು ಸಿ ಆರ್ ಪಿ ಗಳಿಗೆ ಮಾದಕ ವಸ್ತುಗಳಿಂದ ಮಕ್ಕಳನ್ನು ರಕ್ಷಿಸುವ ಕುರಿತು ತರಬೇತಿ ನೀಡಿದ್ದು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುತ್ತದೆ. ಈ ಸಮಿತಿ ವತಿಯಿಂದ ಪ್ರತಿ ಶಾಲೆ ಶಿಕ್ಷಕರ ಮೂಲಕ ಮಕ್ಕಳಿಗೆ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ ಎಂದರು.

    ಗಣ್ಯರು ದೀಪ ಬೆಳಗಿಸುವ ಮೂಲಕ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು

    ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರು ಹಾಗೂ ಗುರುಕುಲ ವಿದ್ಯಾಸಂಸ್ಥೆಯ ಖಜಾಂಚಿ ಗಂಗಾಮರೇಗೌಡ ಮಾತನಾಡಿ ಇಂದು ಮಕ್ಕಳ ಹಬ್ಬ , ಮಕ್ಕಳ ಶೈಕ್ಷಣಿಕ ಸಾಧನೆ ಜೊತೆಗೆ ಕ್ರೀಡೆ ಹಾಗೂ ಸಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯವಾಗಿರುತ್ತದೆ .ಈ ನಿಟ್ಟಿನಲ್ಲಿ ಪ್ರತಿ ವರ್ಷ ನಡೆಸುವ ವಾರ್ಷಿಕೋತ್ಸವ ಸಮಾರಂಭವು ವಿಶೇಷವಾಗಿರುತ್ತದೆ. ಈ ಬಾರಿಯ ಶಾಲಾ ವಾರ್ಷಿಕೋತ್ಸವದಲ್ಲಿ 70 ಜನ ಮಕ್ಕಳು ನಿರೂಪಣೆ ಮಾಡುತ್ತಿರುವುದು ವಿಶೇಷವಾಗಿದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ಶ್ರಮಿಸುತ್ತದೆ ಎಂದರು.

    ಶಾಲಾ ಅಧ್ಯಕ್ಷ ಎಸ್ .ಆರ್. ರಮೇಶ್ ಮಾತನಾಡಿ ನಮ್ಮ ಶಾಲೆಯಲ್ಲಿ ಪ್ರತಿ ಮಗುವಿಗೂ ವಿಶೇಷ ಗಮನ ಕೊಡುವ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಹೊರ ತೆಗೆಯಲಾಗುತ್ತದೆ. ಉತ್ತಮ ಶೈಕ್ಷಣಿಕ ಬೆಳವಣಿಗೆ ಜೊತೆಜೊತೆಗೆ ಕಲೆ, ಸಂಸ್ಕೃತಿ, ಕ್ರೀಡೆ, ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಶಿಕ್ಷಕರ ತಂಡ ಶ್ರಮಿಸುತ್ತಿದೆ. ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಹೊಂದಿಕೊಳ್ಳುವ ಮೂಲಕ ಉತ್ತಮ ಜೀವನ ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.

    ಈ ವೇಳೆ ಜ್ಞಾನೋದಯ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಕೆ ಜಿ ಎಸ್, ಕಾರ್ಯದರ್ಶಿ ಎ. ಎನ್.ಲೋಕೇಶ್ ಕುಮಾರ್, ಜಂಟಿ ಕಾರ್ಯದರ್ಶಿ ಹೃತಿಕ್ ನರೇಂದ್ರ, ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಕೆ ಎಸ್ ಲೋಕೇಶ್, ಉಪ ಪ್ರಾಂಶುಪಾಲರು ಬಿ ವೈ ಶರಣಪ್ಪ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

  • ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ದೊಡ್ಡಬೆಳವಂಗಲ ಬಾಯ್ಸ್ 

     

    ದೊಡ್ಡಬಳ್ಳಾಪುರ : ಮಂಗಳೂರಿನ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿರುವ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ದೊಡ್ಡಬೆಳವಂಗಲ ಯುವಕರ ತಂಡ ಜನವರಿ 2,3ಮತ್ತು 4ರಂದು ನೆಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ತಂಡದ ಮಾಲೀಕರಾದ ಮಹೇಶ್ ತಿಳಿಸಿದರು.

     

    ಈ ಕುರಿತು ಮಾತನಾಡಿದ ಅವರು ದಲಿತ ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕತೆ ಸಮಾನತೆಗಾಗಿ ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಲಿದೆ . ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ವಿಧಾನಸಭಾ ಸಭಾಪತಿಗಳಾದ ಯು ಟಿ ಖಾದರ್ ರವರು ಕಲ್ಪಿಸಿರುವ ಅವಕಾಶಕ್ಕೆ ನಾವು ಅಭಾರಿಯಾಗಿದ್ದೇವೆ ಎಂದರು.

     

    ಹಲವಾರು ಶೋಷಣೆಗಳನ್ನು ಎದುರಿಸಿ ನಿರಂತರ ಹೋರಾಟಗಳ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾಗಿ ನಿಲ್ಲುವ ಹಂತಕ್ಕೆ ದಲಿತರು ತಲುಪಿದ್ದೇವೆ.ಆದರೂ ಇಂದಿಗೂ ನಮ್ಮ ಮೇಲೆ ದೌರ್ಜನ್ಯಗಳು ನಿಂತಿಲ್ಲ ಇಂತಹ ಸಂದರ್ಭದಲ್ಲಿ ದಲಿತ ಯುವಕರಲ್ಲಿ ಕ್ರೀಡಾಮನೋಭಾವ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಆಯೋಜನೆ ಮಾಡಬೇಕಾಗಿದೆ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ಮೂಲಕ ಕಳೆದ ಹಲವು ವರ್ಷಗಳಿಂದ ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಗದೀಶ್ ಗಂಗೊಳ್ಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

    ಸಮುದಾಯಗಳ ಅಭಿವೃದ್ಧಿಯಾಗಬೇಕಾದರೆ ಬಹುಮುಖ್ಯವಾಗಿ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ತಲುಪುವ ಕಾರ್ಯವಾಗಬೇಕು . ಪ್ರತಿ ಹಿಂದುಳಿದ ಸಮುದಾಯಗಳು ಸರ್ಕಾರದ ಯೋಜನೆಗಳ ಸದ್ಭಾಳಕೆಯಿಂದಾಗಿ ತನ್ನ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಹೊಂದಬಹುದಾಗಿದೆ ಎಂದರು.

     

    ತಂಡದ ಪರಿಚಯ :-

    ಕ್ರಿಕೆಟ್ ತಂಡ ಮಾಲೀಕ ಮಹೇಶ್, ತಂಡದ ನಾಯಕ ಮಹಾದೇವ, ಆಟಗಾರರಾದ ಉದಯ್, ರಾಜ, ರಮೇಶ್, ನವೀನ್, ಅರ್ಜುನ್, ನರಸಿಂಹ, ರವಿ, ಕಿರಣ್, ಸುಂದರ್, ರಾಜು, ಯಶು, ಕೃಪಾಕರ್, ಮಧು ಭಾಗವಹಿಸಲಿದ್ದಾರೆ.

     

     

    ದೊಡ್ಡಬೆಳವಂಗಲ ಪಂಚಾಯತಿ ಸದಸ್ಯರಾದ ಗಂಗಾಧರಯ್ಯ ಮಾತನಾಡಿ ಇಂದಿನ ಯುವಪೀಳಿಗೆ ಸದಾ ವಿವಿಧರೀತಿಯ ಅಮಲಿನಲ್ಲಿ ಬದುಕುತ್ತಿದೆ. ಕ್ರೀಡೆ ಯುವಕರನ್ನು ದುಶ್ಚಟಗಳಿಂದ ದೂರವಿಡುತ್ತದೆ ಅಲ್ಲದೇ ಮಾನಸಿಕ ಹಾಗೂ ದೈಹಿಕ ಅರೋಗ್ಯವನ್ನು ಕಾಪಾಡುತ್ತದೆ. ಕ್ರಿಕೆಟ್ ಎಂಬ ಕ್ರೀಡೆ ಯುವ ಸಮುದಾಯವನ್ನು ಅತೀ ವೇಗವಾಗಿ ಆಕರ್ಷಸುತ್ತದೆ ಜೊತೆಗೆ ಕ್ರಿಯಾತ್ಮಕ ಯೋಚನೆಗೆ ಸಹಕಾರಿಯಾಗುತ್ತದೆ ಎಂದರು.

    ಸ್ಥಳೀಯ ದಲಿತ ಮುಖಂಡರಾದ ಮಹೇಶ್ ತಮ್ಮ ಸ್ವಇಚ್ಛೆಯಿಂದ ಯುವಕರ ಪಡೆಯನ್ನು ಸಿದ್ದಪಡಿಸಿ ನಮ್ಮ ಜಿಲ್ಲೆಯ ಶಕ್ತಿಯನ್ನು ಮಂಗಳೂರಿನ ಉಳ್ಳಾಲದಲ್ಲಿ ಪ್ರದರ್ಶಿಸಲು ಮುಂದಾಗುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ದರಾಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಸಮುದಾಯದ ಪರವಾಗಿ ಶುಭ ಹಾರೈಸುತ್ತೇವೆ ಎಂದು ತಿಳಿಸಿದರು.

     

    ಈ ವೇಳೆ ಸ್ಥಳೀಯ ದಲಿತ ಮುಖಂಡರು, ಕ್ರೀಡಾಸಕ್ತರು, ಹಿತೈಷಿಗಳು ಹಾಜರಿದ್ದರು.

  • ಕಾಂಗ್ರೆಸ್ ಇಲ್ಲ ಗ್ಯಾರಂಟಿನೂ ಇಲ್ಲ. ಗ್ಯಾರಂಟಿಗೆ ವಾರೆಂಟಿ ಮುಗಿದಿದೆ – ಶಾಸಕ ಧೀರಜ್ ಮುನಿರಾಜು 

     

    ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 19 ಸ್ಥಾನಗಳಿಗೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 1 ವಾರ್ಡ್ ಗೆ ಸಂಬಂಧಿಸಿದಂತೆ ಡಿ. 21ರಂದು ನಡೆದ ಚುನಾವಣೆಯ ಫಲಿತಾಂಶ ಇಂದು (ಡಿ. 24 ) ರಂದು ಪ್ರಕಟವಾಗಿದ್ದು. ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.

     

    ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳೊಂದಿಗೆ ಶಾಸಕ ಧೀರಜ್ ಮುನಿರಾಜು ಮಾತನಾಡಿ ಬಿಜೆಪಿ ಭದ್ರಕೋಟೆ ಬರೀ ಮಂಗಳೂರು, ಉತ್ತರ‌ ಕನ್ನಡ ಅಲ್ಲ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಕೂಡ ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ. ಪ್ರಸ್ತುತ ಚುನಾವಣೆಯ ಫಲಿತಾಂಶ ಇದಕ್ಕೆ ಉದಾಹರಣೆ ಎಂದರು.

     

    ಬಿಜೆಪಿ ಅಭ್ಯರ್ಥಿಗಳ ಪರವಾಗಿ 10 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಒಂದು ದಿನ ಮಾತ್ರ ಭಾಗವಹಿಸಿದ್ದೇನೆ ಇನ್ನುಳಿದ ಎಲ್ಲಾ ದಿನಗಳಲ್ಲೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಸಲುವಾಗಿ ನಾನು ಪ್ರತಿ ಮತದಾರನ ಮನೆಗೆ ಹೋಗಿ ಮತಯಾಚನೆ ಮಾಡಿದ್ದೇನೆ. ಮತ ಕೇಳೋದು ನನ್ನ ಕರ್ತವ್ಯ. ನಮ್ಮ ಶ್ರಮಕ್ಕೆ, ನಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಮತದಾರ ಕೈಹಿಡಿದ್ದಾನೆ. ಇಲ್ಲಿ ಕಾಂಗ್ರೆಸ್ಸು ಇಲ್ಲ ಗ್ಯಾರಂಟಿನೂ ಇಲ್ಲ ಗ್ಯಾರಂಟಿಗೆ ವಾರೆಂಟಿ ಮುಗಿದಿದೆ. ಗ್ಯಾರಂಟಿನ ಜನ ಮನೆಕಡೆ ಕಳುಹಿಸುತ್ತಾರೆ ಎಂದರು.

     

     

    ನಗರಸಭೆಯ ಹೇಮಾವತಿ ಪೇಟೆ ಉಪಚುನಾವಣೆಯಲ್ಲಿಯೂ ಬಿಜೆಪಿ ಸಾಧಿಸಿದೆ ಅದು ಬಿಜೆಪಿ ಭದ್ರಕೋಟೆ, ನನ್ನ ಚುನಾವಣೆಯಲ್ಲೂ ಅತಿ ಹೆಚ್ಚು ಲೀಡ್ ಕೊಟ್ಟಿತು ಎಂದರು.

     

    ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ನಾವು ಇನ್ನೂ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾಗಿತ್ತು. ಕಾರಣಾಂತರಗಳಿಂದ ಅದು ಆಗಿಲ್ಲ. ಅರೆಹಳ್ಳಿ ಗುಡ್ಡದಹಳ್ಳಿ ಕ್ಷೇತ್ರದ ಗುಂಡಣ್ಣ ಹೃದಾಯಾಘಾತದಿಂದ ಮರಣಹೊಂದಿದ ಕಾರಣ ಅಲ್ಲಿ ಸೋತಿದ್ದೇವೆ. ಪ್ರಾಮಾಣಿಕ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವು, ಸಂಘಟನೆ, ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದೇವೆ ಎಂದರು.

     

    ನನ್ನ ಎರಡೂವರೆ ವರ್ಷಗಳ ಕೆಲಸದಲ್ಲಿ ಬಾಶೆಟ್ಟಿಹಳ್ಳಿ ಆರನೇ ಹಂತದಲ್ಲಿ ಕಾವೇರಿ ನೀರನ್ನು ಹರಿಸಲು ಶ್ರಮಿಸಿದ್ದೇನೆ. 41 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಜಲಜೀವನ್ ಮಿಷನ್ ಯೋಜನೆ ತಂದಿದ್ದೇನೆ. ಉಚಿತವಾಗಿ ಐದೂವರೆ ಎಕರೆ ಜಾಗ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿಸಲಾಗಿದೆ. 20 ಕಸ ವಾಹನಗಳನ್ನು ಕೊಟ್ಟಿದ್ದೇನೆ. ಮೂರವರೆ ಕೋಟಿ ಇದ್ದಂತಹ ಆದಾಯವನ್ನು 12ಕೋಟಿಗೆ ಏರಿಸಲಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಖಾತೆಗಳನ್ನು ಮಾಡಿಸಿದ್ದೇವೆ. ಹೀಗೆ ಪ್ರಾಮಾಣಿಕತೆ, ಪಕ್ಷ ನಿಷ್ಠೆಯಿಂದ ಬಿಜೆಪಿ ಗೆದ್ದಿದೆ ಎಂದು ಹೇಳಿದರು….

     

     

  • ಬಾಶೆಟ್ಟಿಹಳ್ಳಿ ಪ. ಪಂ. ಚುನಾವಣಾ ಫಲಿತಾಂಶ ಪ್ರಕಟ : ಮೇಲುಗೈ ಸಾಧಿಸಿದ ಬಿಜೆಪಿ  

    ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು. 19 ವಾರ್ಡುಗಳ ಪೈಕಿ 14 ವಾರ್ಡ್ಗಳಲ್ಲಿ BJP (ಭಾರತೀಯ ಜನತಾ ಪಾರ್ಟಿ) ಜಯಗಳಿಸುವ ಮೂಲಕ ಜಯಭೇರಿಬಾರಿಸಿದೆ.

    ಮತದಾನ ಡಿ.21ರಂದು ನಡೆದಿದ್ದ ಚುನಾವಣೆಯ ಮತಎಣಿಕೆ ಕಾರ್ಯ ಇಂದು (ಡಿ.24)ರಂದು ನಗರದ ಶ್ರೀ ಕೊಂಗಡಿಯಪ್ಪ ಪ್ರೌಢಶಾಲೆಯಲ್ಲಿ ನಡೆಯಿತು. 19 ಸ್ಥಾನಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 3, ಜೆಡಿಎಸ್ 1, ಪಕ್ಷೇತರ 1 ಸ್ಥಾನಗಳಲ್ಲಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

     

    ವಿಜೇತರು ಮೆರವಣಿಗೆ ಮೂಲಕ ತಮಗೆ ಮತದಾನ ನೀಡಿದ ಪ್ರತಿಯೊಬ್ಬ ಮತದಾರರಿಗೂ ಅಭಿನಂದನೆ ಸಲ್ಲಿಸಲು ಮುಂದಾಗಿದ್ದು, ಅಭ್ಯರ್ಥಿಗಳ ಬೆಂಬಲಿಗರು ಸಿಹಿಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

     

  • ಡಿ.19 ರಿಂದ 25 ವರೆಗೆ ಉತ್ತಮ ಆಡಳಿತ ಸಪ್ತಾಹ-25 ಅಭಿಯಾನ

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಉತ್ತಮ ಆಡಳಿತ ಸಪ್ತಾಹ-2025 ಅಂಗವಾಗಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು.

     

    ನಂತರ ಮಾತನಾಡಿದ ಅವರು ಭಾರತ ಸರ್ಕಾರದ ಸಿಬ್ಬಂದಿ, ಸಾರ್ವಜನಿಕ ಅಹವಾಲುಗಳು ಮತ್ತು ಪಿಂಚಣಿ ಸಚಿವಾಲಯದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಅಹವಾಲುಗಳ ಇಲಾಖೆ (DARPG) ವತಿಯಿಂದ 2025 ರ ಡಿಸೆಂಬರ್ 19 ರಿಂದ 25 ರವರೆಗೆ “ಸುಶಾಸನ ಸಪ್ತಾಹ – ಪ್ರಷಾಸನ್ ಗಾಂವ್ ಕಿ ಓರೆ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

     

    ಈ ಅಭಿಯಾನದ ಉದ್ದೇಶ ಸಾರ್ವಜನಿಕ ಸೇವೆಗಳ ಪೂರೈಕೆ, ಸಾರ್ವಜನಿಕ ಅಹವಾಲುಗಳ ಪರಿಹಾರ ಮತ್ತು ಸುಶಾಸನ ಅಭ್ಯಾಸಗಳನ್ನು ಗ್ರಾಮ ಮಟ್ಟದವರೆಗೂ ಬಲಪಡಿಸುವುದು.

     

    ಸಾರ್ವಜನಿಕರಿಗೆ ಸರ್ಕಾರದ ಸೇವೆಗಳ ಲಭ್ಯತೆ. ಪಾರದರ್ಶಕತೆ ಮತ್ತು ಅರಿವು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಾಗಿದ್ದು ಸಾರ್ವಜನಿಕ ಕುಂದು ಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ. ಜೊತೆಗೆ ಈ ಅಭಿಯಾನ ಸಂದರ್ಭದಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಚೇರಿಗಳಲ್ಲಿ ಇದ್ದು ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವ ಮೂಲಕ ಉತ್ತಮ ಆಡಳಿತ ಒದಗಿಸಿ ಎಂದರು.

     

    ಸರ್ಕಾರಿ ಸೇವೆಗಳು ಮತ್ತು ಸಾರ್ವಜನಿಕ ಅಹವಾಲು ನಿವಾರಣೆ ಕುರಿತು ಜಾಗೃತಿ ಕಾರ್ಯಕ್ರಮ. ಡಿಜಿಟಲ್ ಸೇವಾ ವಿತರಣೆಗೆ ಸಂಬಂಧಿಸಿದ ಮಾಹಿತಿಯ ಜನಜಾಗೃತಿ. ಅಭಿಯಾನದ ಅವಧಿಯಲ್ಲಿ ವಿಶೇಷ ಶಿಬಿರಗಳ ಆಯೋಜನೆ. 2025ರ ಡಿಸೆಂಬರ್ 23ರಂದು ಸುಶಾಸನ ಅಭ್ಯಾಸಗಳ ಕುರಿತು ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ ತ್ವರಿತ ಪರಿಹಾರ ಕ್ರಮಗಳು ಕೈಗೊಳ್ಳಿ ಎಂದರು.

     

    ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ವಿಶೇಷ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಿ : ಕಮಲ್ ಲೋಚನ್ ಸಾಹು

    ದೊಡ್ಡಬಳ್ಳಾಪುರ :: ಕಮಲ್ ಲೋಚನ್ ಸಾಹು ರವರ ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕ ಕಡುಬಡವರಿಗೆ, ವೃದ್ಧರಿಗೆ ಹಾಗೂ ಶಾಲಾ ಮಕ್ಕಳಿಗೆ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಅನ್ನದಾಸೋಹದ ಜೊತೆಗೆ ಹಣ್ಣು, ಸಿಹಿ ವಿತರಣೆ ಮಾಡಲಾಯಿತು

    ತಾಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರಂತರ ಅನ್ನದಾಸೋಹ ಸಮಿತಿಯೋಟ್ಟಿಗೆ ಕಮಲ್ ಲೋಚನ್ ಸಾಹು ಕುಟುಂಬ ತಮ್ಮ ವಿಶೇಷ ದಿನವನ್ನು ಆಚರಿಸಿ ಕೊಂಡರು.

    ಮಲ್ಲೇಶ್ ಮತ್ತು ತಂಡ ನಡೆಸಿಕೊಂಡು ಬರುತ್ತಿರುವ ನಿರಂತರ ಅನ್ನದಾಸೋಹದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಅಲ್ಲದೇ ನಮ್ಮ ವಿಶೇಷ ದಿನವನ್ನು ನೂರಾರು ಜನರ ಹಸಿವನ್ನು ನೀಗಿಸಲು ಆಹಾರ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂಬ ಸಂತೃಪ್ತಿ ಭಾವನೆ ಮೂಡಿದೆ ಮುಂದೆ ನಮ್ಮ ಕುಟುಂಬದ ಎಲ್ಲಾ ವಿಶೇಷ ಹಾಗೂ ಶುಭ ದಿನಗಳನ್ನು ನಿರಂತರ ಅನ್ನದಾಸಹ ಸಮಿತಿಯೋಟ್ಟಿಗೆ ಆಚರಿಸುತ್ತೇವೆ ಎಂದು ದಾನಿಗಳಾದ ಸುಚಿಸ್ಮಿತ ಸಾಹು ಮತ್ತು ಕಮಲ್ ಲೋಚನ್ ಸಾಹು ತಿಳಿಸಿದರು.

     

  • ಸರ್ಕಾರಿ ಗೋಮಾಳ ಜಾಗದ ಒತ್ತುವರಿ ತೆರವುಗೊಳಿಸಿ ಅಂಬೇಡ್ಕರ್ ಭವನ ನಿರ್ಮಿಸಿ – ಮಂಜುನಾಥ್ ರಾವಣ್ 

    ದೊಡ್ಡಬಳ್ಳಾಪುರ : ತಾಲೂಕಿನ ತೂಬಗೆರೆ ಹೋಬಳಿಯ ಹಾಡೊನಹಳ್ಳಿ ಗ್ರಾಮದ ಸರ್ವೆ ನಂಬರ್ 89ರಲ್ಲಿ 31 ಗುಂಟೆ ಸರ್ಕಾರಿ ಗೋಮಾಳ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟುತ್ತಿರುವ ಕಟ್ಟಡವನ್ನು ತೆರವುಗೊಳಿಸಿ, ಸದರಿ ಜಾಗದಲ್ಲಿ ಅಂಬೇಡ್ಕ‌ರ್ ಭವನ ನಿರ್ಮಣಕ್ಕೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂರಕ್ಷಣಾ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ. ಮಂಜುನಾಥ್ ಅಗ್ರಹಿಸಿದರು.

    ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮದ ಸರ್ವೇ ನಂಬರ್ 89ರಲ್ಲಿ 31 ಗುಂಟೆ, ಗೋಮಾಳ ಜಾಗವಿದ್ದು ಆ ಜಾಗವನ್ನು ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಯಾವುದೇ ದಾಖಲಾತಿಗಳು ಇಲ್ಲದೆ ಅಕ್ರಮವಾಗಿ ಅರ್ಕಾವತಿ ರೈತ ಉತ್ಪಾದಕರ ಕಂಪನಿ ಲಿಮಿಟೆಡ ಖಾಸಗಿ ಕಂಪನಿಯವರು ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ ಎಂದು ಆರೋಪಿಸಿದರು.

    ಈ ಕೂಡಲೇ ಅಧಿಕಾರಿಗಳು ಸಂಬಂಧಪಟ್ಟ ಸ್ಥಳದ ದಾಖಲಾತಿಗಳನ್ನು ಪರಿಶೀಲಿಸಿ ಒತ್ತುವರಿ ತೆರುವುಗೊಳಿಸಿ ಸದರಿ 31 ಕುಂಟೆ ಸರ್ಕಾರಿ ಗೋಮಾಳ ಜಾಗದಲ್ಲಿ ಹಾಡೊನಹಳ್ಳಿನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ದಲಿತ ಸಂಘಟನೆಗಳ ಒತ್ತಾಯದ ಮೇರೆಗೆ ಸದರಿ ಜಾಗವನ್ನು 10 ದಿನಗಳ ಒಳಗಾಗಿ ಅಂಬೇಡ್ಕ‌ರ್ ಭವನಕ್ಕೆ ಮೀಸಲಿಡಬೇಕೆಂದು ಮನವಿ ಮಾಡಿದರು.

    ಸ್ಥಳೀಯವಾಗಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದರಿಂದ ಹಾಡೋನಹಳ್ಳಿ ಅಷ್ಟೇ ಅಲ್ಲದೆ ತೂಬಗೆರೆ ಹೋಬಳಿಯ ಎಲ್ಲಾ ಗ್ರಾಮಗಳ ಬಡ ಸಮುದಾಯಗಳ ಶುಭ ಸಮಾರಂಭಗಳಿಗೆ ಅನುಕೂಲವಾಗಲಿದೆ. ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಒತ್ತುವರಿ ಜಾಗವನ್ನು ತೆರವುಗೊಳಿಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

    ಈ ವೇಳೆ ಕರ್ನಾಟಕ ದಲಿತ ಸಂರಕ್ಷಣಾ ಸೇನೆ ರಾಜ್ಯ ಉಪಾಧ್ಯಕ್ಷ ಕೆ. ಗುರುಪ್ರಸಾದ್,ರಾಜ್ಯ ಮುಖ್ಯ ಕಾರ್ಯದರ್ಶಿ ಮಾರಪ್ಪ,ರಾಜಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುರುಳಿ, ರಾಜ್ಯ ಕಾರ್ಯದರ್ಶಿ ವೆಂಕಟರಾಜು,ರಾಜ್ಯ ಕಾರ್ಯಧ್ಯಕ್ಷ ಸಿದ್ದರಾಜು , ರಾಜ ಕಾರ್ಯದರ್ಶಿ ಮದ್ದೂರಪ್ಪ, ರಾಜ್ಯ ಖಜಾಂಚಿ ಟಿ ಎನ್ ನಾಗರಾಜು, ರಾಜ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್,ಗಂಗರಾಜು,ಕೃಷ್ಣಚಾರ್ಯ ಬೆಂಗಳೂರು ಗ್ರಾಮಾಂತರ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಲಕ್ಷ್ಮಮ್ಮ, ಜನಪರ ಒಕ್ಕೂಟದ ರಾಜ್ಯಾಧ್ಯಕ್ಷರು ನಂಜುಂಡಪ್ಪ,ಮುಖಂಡರಾದ ಸುಗ್ರೀವಪ್ಪ ,ವಸಂತಪ್ಪ ಸೇರಿದಂತೆ ಸ್ಥಳೀಯ ದಲಿತ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

  • ಜಾಲಪ್ಪ 4ನೇ ಪುಣ್ಯಸ್ಮರಣೆ: ಸರಳ ಆಚರಣೆ

    ದೊಡ್ಡಬಳ್ಳಾಪುರ : ಮಾಜಿ ಕೇಂದ್ರ ಸಚಿವ, ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಆರ್.ಎಲ್.ಜಾಲಪ್ಪ ಅವರ 4ನೇ ವರ್ಷದ ಪುಣ್ಯಸ್ಮರಣೆಯನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.

    ಇಲ್ಲಿನ ಆರ್‌ಎಲ್‌ಜೆಐಟಿ ಕ್ಯಾಂಪಸ್‌ನಲ್ಲಿರುವ ಆರ್.ಎಲ್.ಜಾಲಪ್ಪ ಸ್ಮೃತಿವನದಲ್ಲಿ ಜಾಲಪ್ಪ ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿದರು.

    ಈ ವೇಳೆ ಮಾತನಾಡಿದ ಎಸ್‌ಡಿಯುಇಟಿ ಉಪಾಧ್ಯಕ್ಷ ಜೆ.ರಾಜೇಂದ್ರ, ನಾಡಿನ ರಾಜಕಾರಣ, ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಜಾಲಪ್ಪ ಅವರು ದೂರದೃಷ್ಟಿ ಹೊಂದಿರುವ ನಾಯಕರಾಗಿದ್ದರು. ಅವರ ಚಿಂತನೆಗಳು ಮತ್ತು ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಆಶಯಗಳಿಗೆ ಪೂರಕವಾಗಿ ಶ್ರೀ ದೇವರಾಜ ಅರಸ್‌ ಶಿಕ್ಷಣ ಸಂಸ್ಥೆ ವಿನೂತನ ಕಾರ್ಯಯೋಜನೆಗಳನ್ನು ಸಾಕಾರಗೊಳಿಸುತ್ತಿದೆ ಎಂದರು.

    ಸಂಸ್ಥೆಯ ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಜಾಲಪ್ಪ ಅವರ ಕುಟುಂಬಸ್ಥರು, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

  • ಡಿ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ

    ದೊಡ್ಡಬಳ್ಳಾಪುರ : ಸುಮಾರು 20 ಹಕ್ಕೊತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ.21ರ ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ ನೆಡೆಯಲಿದೆ ಎಂದು ಸಿಪಿಐ (ಎಂ) ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಸಿ ನರಸಿಂಹಮೂರ್ತಿ ತಿಳಿಸಿದರು.

    ನಗರದ ಸಿಪಿಐ(ಎಂ) ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ರಾಜ್ಯದ್ಯಂತ ಸಹಿ ಸಂಗ್ರಹ ಮಾಡಲಾಗಿದೆ ಸುಮಾರು 20ಕ್ಕೂ ಹೆಚ್ಚು ಹಾಕ್ಕೋತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವರ್ಗಕ್ಕೆ ಹಾಗೂ ಸಾಮಾನ್ಯ ಜನತೆಗೆ ಕಲ್ಪಿಸಬೇಕಿರುವ ಸವಲತ್ತುಗಳನ್ನು ಹೋರಾಟ ಮಾಡಿ ಪಡೆಯುವ ಪರಿಸ್ಥಿತಿ ಎದುರಾಗಿದೆ. ಈ ಸಭೆಯಲ್ಲಿ ಭಾಗವಹಿಸಲು ನಮ್ಮ ಜಿಲ್ಲೆಯಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ ಎಂದರು .

    ಜಿಲ್ಲಾ ಸಮಿತಿ ಸದಸ್ಯ ಚಂದ್ರು ತೇಜಸ್ವಿ ಮಾತನಾಡಿ ರಾಜ್ಯದ ಎಲ್ಲಾ ಬೆಳೆಗಳಿಗೆ ಒಟ್ಟಾರೆ ಉತ್ಪಾದನಾ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಕಾಯ್ದೆ ಜಾರಿ ಮಾಡಬೇಕು. ರೈತಾಧಾರಿತ ಕೃಷಿ ರಕ್ಷಿಸಬೇಕು. ಕಾರ್ಪೊರೇಟ್ ಲಾಭದ ಕೃಷಿ ಕೈಬಿಡಬೇಕು ಬಲವಂತದ ಅನಗತ್ಯವಾದ ಭೂಸ್ವಾಧೀನ ನಿಲ್ಲಿಸಬೇಕು. ಬಿಜೆಪಿ ಸರ್ಕಾರದ ಕಾಲದಲ್ಲಿ ಜಾರಿಗೊಳಿಸಿದ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಭೂಮಿಯನ್ನು ರಕ್ಷಿಸಬೇಕು. ಬಡವರಿಗೆ ದಲಿತರಿಗೆ ಭೂಮಿಗಳನ್ನು ನೀಡಬೇಕು. ಬಗೈರ್ ಹುಕುಂ ಮತ್ತು ಅರಣ್ಯ ಸಾಗುವಳಿ ಭೂಮಿಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು. ಬೆಂಗಳೂರಿನ ಸುತ್ತಮುತ್ತ ವಿವಿಧ ಉದ್ದೇಶಗಳಿಗೆ ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರ ಒಪ್ಪಿಗೆ ಇಲ್ಲದೆ ನಡೆಯುತ್ತಿರುವ ಬಲವಂತದ ಭೂಸ್ವಾಧೀನ ಕೂಡಲೇ ನಿಲ್ಲಬೇಕು ಎಂದು ಅಗ್ರಹಿದರು.

    ಜಿಲ್ಲಾ ಸಮಿತಿ ಸದಸ್ಯ ಪಿ ಎ ವೆಂಕಟೇಶ್ ಮಾತನಾಡಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣ ಪೂರ್ಣಗೊಂಡು ನಾಲ್ಕು ವರ್ಷಗಳಿಂದ ಉದ್ಘಾಟನೆಯಾಗದಿರುವ ESI ಆಸ್ಪತ್ರೆ ಕೂಡಲೇ ಉದ್ಘಾಟನೆಯಾಗಬೇಕು ಅಲ್ಲದೇ ಗೃಹ ಕೈಗಾರಿಕೆಯಾದ ನೇಯ್ದೆ ಉದ್ದಿಮೆ ಉಳಿಸಲು ಸರ್ಕಾರ ಮಧ್ಯ ಪ್ರವೇಶ ಮಾಡಬೇಕು, ಜಿಲ್ಲೆಯಲ್ಲಿ ಮತ್ತು ದೊಡ್ಡಬಳ್ಳಾಪುರದಲ್ಲಿ ಈ ಉದ್ದಿಮೆಯನ್ನೇ ನಂಬಿ ಲಕ್ಷಾಂತರ ಜನರು ಬದುಕುತ್ತಿದ್ದಾರೆ ಇವರು ಉತ್ಪಾದಿಸಿದ ಬಟ್ಟೆಗೆ ಬೆಲೆ ಮತ್ತು ಬೇಡಿಕೆ ಇಲ್ಲದೆ ತುಂಬಾ ಸಂಕಷ್ಟದಲ್ಲಿದ್ದಾರೆ. ಹೊರರಾಜ್ಯದ ಸೀರೆಗಳು ಮಾರುಕಟ್ಟೆಯನ್ನು ಆಕ್ರಮಿಸಿ ಕೊಂಡಿವೆ ಇದರಿಂದ ಉದ್ಭವಿಸಿದ ಬಿಕ್ಕಟ್ಟಿನ ಪರಿಹಾರಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ತಕ್ಷಣ ಮುಂದಾಗಬೇಕು. ನೇಕಾರ ಕಾರ್ಮಿಕರೆಲ್ಲರಿಗೂ ಸಮಾನ ಕೆಲಸದ ಸಮಯ ಮತ್ತು ಕೂಲಿ ನಿಗದಿಯಾಗಬೇಕು ಎಂದರು.

    ಪ್ರಭ ಬೆಳವಂಗಲ ಮಾತನಾಡಿ ವಿದ್ಯುತ್, ಸಾರಿಗೆ, ನೀರು, ರಸ್ತೆ, ಮುಂತಾದ ಸೇವೆಗಳ ಖಾಸಗೀಕರಣವನ್ನು ಮಾಡಲಾಗುತ್ತಿದೆ. ಎಲ್ಲಾ ಸೇವೆಗಳಿಗೂ ಜನರೇ ಪೂರ್ಣವಾಗಿ ಹಣ ಪಾವತಿಸಿಬೇಕೆಂಬ ಕಾರ್ಪೊರೇಟ್ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಇವುಗಳನ್ನು ತಡೆಯದಿದ್ದರೆ ಮುಂದೆ ಸಾಮಾನ್ಯರಿಗೆ ಯಾವುದೂ ಸಿಗುವುದಿಲ್ಲ. ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕಾಗಿ ರೂಪಿಸಲಾಗಿರುವ ಕಾಯ್ದೆಗಳು ರದ್ದಾಗಲಿ ಎಂದರು.

    ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಕೃಷ್ಣಾ ನೀರಿನಲ್ಲಿ ಈ ಭಾಗಕ್ಕೆ ನೀರನ್ನು ಒದಗಿಸಬೇಕು. ಕೆ.ಸಿ.ವಾಲಿ ಮತ್ತು ವೃಷಭಾವತಿ ಯೋಜನೆಗಳಿಂದ ಬೆಂಗಳೂರು ನಗರದ ಕೊಳಚೆ ನೀರನ್ನು ಜಿಲ್ಲೆಯ ಕೆರೆಗಳನ್ನು ತುಂಬಿಸುವುದನ್ನು ಕೈಬಿಡಬೇಕು ಎಂದರು.

    ಈ ವೇಳೆ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಚ್ ಎನ್ ಮೋಹನ್ ಬಾಬು, ಎಸ್ ರುದ್ರಾರಾಧ್ಯ, ಹೆಚ್. ಹರೀಂದ್ರ, ಕೆ ವೆಂಕಟರಾಜು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ನಿಧನ ವಾರ್ತೆ : ಕಛೇರಿ ಪಾಳ್ಯ ವಾರ್ಡ್ ನ ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್ ವಿ ಹನುಮಪ್ಪ ರವರ ಧರ್ಮಪತ್ನಿ ನಾಗರತ್ನಮ್ಮ ಇನ್ನಿಲ್ಲ

    ದೊಡ್ಡಬಳ್ಳಾಪುರ : ನಗರದ ಕಛೇರಿ ಪಾಳ್ಯ ವಾರ್ಡ್ ನ ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್ ವಿ ಹನುಮಪ್ಪ ರವರ ಧರ್ಮಪತ್ನಿ ನಾಗರತ್ನಮ್ಮ(65ವರ್ಷ) ರವರು ಇಂದು(ಡಿ.16) ಸಂಜೆ ನಿಧನರಾಗಿದ್ದಾರೆ.

    ನಾಗರತ್ನಮ್ಮನವರು ತಮ್ಮ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಮೃತರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಹೆಚ್. ರಾಘವೇಂದ್ರ, ಜಿಲ್ಲಾಧ್ಯಕ್ಷರಾದ ಎಚ್ ಶಿವಕುಮಾರ್ , ಎಚ್ ಮಂಜುನಾಥ್,ಹೆಚ್ ರಾಜು ಸೇರಿದಂತೆ ಒಟ್ಟು 11 ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

     

    ನಾಳೆ (ಡಿ.17) ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆ.ಆರ್.ಪುರಂನ ಸಾಗರ ಮಂಗಲದ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

     

    ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯ ಸಮಿತಿ,ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿ ಸೇರಿದಂತೆ ಹಲವು ದಲಿತ ಪ್ರಮುಖರು, ಹೋರಾಟಗಾರರು, ನಿರಂತರ ಅನ್ನದಾಸೋಹ ಸಮಿತಿ ಪ್ರಮುಖರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.