Blog

  • ಕೆಳಗಿನ ಜೂಗಾನಹಳ್ಳಿ- ಗುಂಜೂರು ರಸ್ತೆ ಸಂಪರ್ಕ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

    ತೂಬಗೆರೆ : ಕೆಳಗಿನ ಜೂಗಾನಹಳ್ಳಿ ಹಾಗೂ ಗುಂಜೂರು ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ವರ್ಷದೊಳಗೆ ಪೂರ್ಣಗೊಂಡು ಗ್ರಾಮಸ್ಥರ ಓಡಾಟಕ್ಕೆ ಅನುಕೂಲವಾಗಲಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಕೆಳಗಿನ ಜೂಗಾನಹಳ್ಳಿ ಮತ್ತು ಗುಂಜೂರು ಗ್ರಾಮದ ಮಧ್ಯೆ ರಸ್ತೆ ಸಂಪರ್ಕಿಸಲು ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು. ಕೆಳಗಿನ ಜೂಗಾನಹಳ್ಳಿ-ಗುಂಜೂರು ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಈಡೇರುತ್ತಿದ್ದು, 5 ಕೋಟಿ ರೂ. ವೆಚ್ಚದಲ್ಲಿ 60 ಮೀಟರ್ ಉದ್ದದ ಸೇತುವೆ ನಿರ್ಮಾಣದಿಂದ ಜನರು 7 ಕಿ.ಮೀ ದೂರ ಕ್ರಮಿಸುವುದು ಕಡಿಮೆ ಮಾಡುತ್ತದೆ. ಜತೆಗೆ ಎರಡು ಗ್ರಾಮದ ರೈತರು ಹಾಗೂ ಜನರು ವ್ಯಾಪಾರ ವಹಿವಾಟುಗಳ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗುತ್ತದೆ ಎಂದರು.

     

    ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ಮಾತನಾಡಿ ಈ ಕಾಮಗಾರಿಯು ಸ್ಥಳೀಯ ರೈತರಿಗೆ ಅತ್ಯಂತ ಸಹಕಾರಿಯಾಗಲಿದೆ . ಈ ಮೊದಲು ಹೈವೇ ತಲುಪಬೇಕಾದರೆ ಮಾಕಳಿ ಮೂಲಕ ತಲುಪಬೇಕಿತ್ತು ಆದರೆ ಮೇಲ್ಸೇತುವೆ ನಿರ್ಮಾಣಗೊಂಡ ನಂತರ ಗ್ರಾಮಗಳ ರೈತರು ಶೀಘ್ರವಾಗಿ ಹೆದ್ದಾರಿಯನ್ನು ತಲುಪಬಹುದಾಗಿದೆ.

    ಈ ಸಂಪರ್ಕ ಸೇತುವೆಯು ಎಸ್ ಎಸ್ ಘಾಟಿ, ಕೆಳಗಿನಜೂಗನಹಳ್ಳಿ, ಮೇಲಿನಜೂಗನಹಳ್ಳಿ, ಬಂಡೆಹೊಸೂರು, ಲಘುಮೇನಹಳ್ಳಿ, ಪಲ್ಪಲ್ ದಿನ್ನೆ ,ಗೆದ್ದಲ ಪಾಳ್ಯ ತೂಬಗೆರೆ, ಗುಂಜೂರು ಗ್ರಾಮಗಳಿಗೆ ಹೆದ್ದಾರಿ ತಲುಪಲು ಸಹಕರಿಯಾಗಲಿದೆ ಎಂದರು.

     

     

    ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ರಾಜಣ್ಣ, ಘಾಟಿ ಪ್ರಾಧಿಕಾರದ ಅಧ್ಯಕ್ಷ ರಂಗಪ್ಪ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿ ಸಿದ್ದಪ್ಪ, ಘಾಟಿ ಗ್ರಾ.ಪಂ ಅಧ್ಯಕ್ಷರಾದ ಉಮಾಬಾಯಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ ಎನ್.ಎಸ್, ಸಹಾಯಕ ಅಭಿಯಂತರರಾದ ವಿಕಾಸ. ಎನ್ ಸೇರಿ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

     

  • ಜೀವನದಲ್ಲಿ ಗುರಿಯ ಜೊತೆಗೆ ಪರಿಶ್ರಮ ಸೇರಿದಾಗ ಯಶಸ್ಸು ಸಾಧ್ಯ: ಸಂಸದ ಡಾ.ಕೆ. ಸುಧಾಕರ್

    ದೇವನಹಳ್ಳಿ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕಲೆ, ಸಂಗೀತ, ನೃತ್ಯ ವಿವಿಧ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉನ್ನತ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ ಡಾ.ಕೆ. ಸುಧಾಕರ್ ಅವರು ತಿಳಿಸಿದರು.

    ಇಂದು ದೇವನಹಳ್ಳಿ ಟೌನ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2025-26 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಬೇಕು. ನಮ್ಮ ಜಿಲ್ಲೆಗೆ ಕೀರ್ತಿ ತರುವಂತರಾಗಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ. ಅವರಿಗೆ ಸೂಕ್ತ ವೇದಿಕೆ ದೊರೆತಾಗ ಅವರ ಪ್ರತಿಭೆ ಹೊರಹೊಮ್ಮುತ್ತದೆ ಎಂದು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯ ಮೆಟ್ಟಿಲೇರುವುದು ಮುಖ್ಯ. ಗೆದ್ದರೂ ಸೋತರು ಸಮಚಿತ್ತದಿಂದ ಸ್ವೀಕರಿಸಿ. ಸೋತಾಗ ಅನುಭವವು ಸಹ ಜೀವನದ ಪಾಠವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಪಿಕೊಳ್ಳಬೇಕು. ಜೀವನದಲ್ಲಿ ಗುರಿಯ ಜೊತೆಗೆ ಪರಿಶ್ರಮ ಸೇರಿದಾಗ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಬಿ. ರಾಜಣ್ಣ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯು ಹೊರಬರಬೇಂಬ ದೃಷ್ಟಿಯಿಂದ ಎಸ್.ಎಂ ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದಾಗ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಪ್ರಾರಂಭಿಸಿದರು. ಜೀವನದಲ್ಲಿ ಗುರಿ ಮುಖ್ಯ. ನಿಮಗೆ ಜಿಲ್ಲೆ, ರಾಜ್ಯ ಮಟ್ಟದ ಕಾರ್ಯಕ್ರಮ ದಲ್ಲಿ ಗೆಲ್ಲಬೇಕೆಂಬ ಗುರಿ ಇದೆ ಎಂದು ಹೇಳಿದರು.

     

    ವಿವಿಧ ಸಂಸ್ಥೆಗಳು ಸಿ.ಎಸ್.ಆರ್ ಹಣದಿಂದ ಶಾಲೆಗಳನ್ನು ಕಟ್ಟುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಸಂಖ್ಯೆ ಹೆಚ್ಚಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ(ಅಭಿವೃದ್ಧಿ) ಹನುಮಂತರಾಯ, ಇಒ ಶ್ರೀನಾಥ್ ಗೌಡ, ಉಪನಿರ್ದೇಶಕ ಕಛೇರಿಯ ಶಿಕ್ಷಣಾಧಿಕಾರಿ ಹನುಮಾನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಎಂ, ಸ್ಥಳೀಯ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು‌ ಉಪಸ್ಥಿತರಿದ್ದರು.

  • ಜನವರಿ 5ಕ್ಕೆ ದೊಡ್ಡಬಳ್ಳಾಪುರ ಬಂದ್ : ನೇಕಾರರರನ್ನು ಉಳಿಸುವ ನಿಟ್ಟಿನಲ್ಲಿ ಬಂದ್ ಬೆಂಬಲಿಸುವಂತೆ ಮುಖಂಡರ ಮನವಿ

    ದೊಡ್ಡಬಳ್ಳಾಪುರ : ಜನವರಿ 5ರ ಸೋಮವಾರದಂದು ಬೆಳಿಗ್ಗೆ 6 ಸಂಜೆ 6 ಗಂಟೆವರೆಗೆ ಸ್ವಯಂಪ್ರೇರಿತ ಬಂದ್‌ ಗೆ ಕರೆ ನೀಡಲಾಗಿದ್ದು ನೇಕಾರರರನ್ನು ಉಳಿಸುವ ನಿಟ್ಟಿನಲ್ಲಿ ನೇಕಾರರನ್ನು ಬೆಂಬಲಿಸಿ ಎಲ್ಲರು ಬಂದ್ ನಲ್ಲಿ ಭಾಗವಹಿಸಬೇಕೆಂದು ನೇಕಾರ ಹೋರಾಟ ಸಮಿತಿ ಮುಖಂಡ ಪಿ ಎ ವೆಂಕಟೇಶ್ ಮನವಿ ಮಾಡಿದರು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ (ರಿ.)ದೊಡ್ಡಬಳ್ಳಾಪುರ ಟೆಕ್ಸ್‌ಟೈಲ್ ವೀವರ್ಸ್ ಅಸೋಸಿಯೇಷನ್, ನೇಕರರ ಹೋರಾಟ ಸಮಿತಿ, ಕೂಲಿ ನೇಕಾರರ ಹಿತರಕ್ಷಣಾ ಸಮಿತಿ, ದೊಡ್ಡಬಳ್ಳಾಪುರ ಎಲ್ಲಾ ನೇಕಾರ ಸಂಘಟನೆಗಳು ಮತ್ತು ಸಹಕಾರಿ ಸಂಘಗಳ ಸಹಕಾರದೊಂದಿಗೆ ಜನವರಿ 5ರಂದು ಬಂದ್ ಕರೆ ನೀಡಲಾಗಿದೆ. ನೇಕಾರಿಕೆ ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆಯಾಗಿದ್ದು, ಇಂದು ನೇಕಾರರು ಅಳಿವಿನ ಅಂಚಿನಲ್ಲಿದ್ದೇವೆ ಲಾಳಿ ಸಹಿತ ವಿದ್ಯುತ್ ಮಗ್ಗಗಳ ಸೀರೆಗಳನ್ನು ಮಾರಾಟ ಮಾಡಲು ಹರಸಾಹಸ ಪಡುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಸೂರತ್ ನ ರಿಪೀಯರ್ ಮಗ್ಗದ ಸೀರೆಗಳು ಇದಕ್ಕೆ ಕಡಿವಾಣ ಹಾಕುವ ಹಾಗೂ ನೇಕಾರರ ಪರಿಸ್ಥಿತಿಯನ್ನು ಸರಕಾರಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಈ ಬಂದ್ ಕರೆಯಲಾಗಿದೆ ಎಂದರು.

     

    ಪ್ರಮುಖ ಒತ್ತಾಯಗಳೇನು….????

    * ದೊಡ್ಡಬಳ್ಳಾಪುರದ ಜೀವನಾಡಿ ಗುಡಿ ಕೈಗಾರಿಕೆ ನೇಯ್ದೆ ಉದ್ಯಮ ಉಳಿಸಲು

    *ಲಾಳಿ ಸಹಿತ ವಿದ್ಯುತ್ ಮಗ್ಗಗಳ ಮೀಸಲಾತಿ (ರಿಸರ್ವೇಶನ್) ಅಧಿನಿಯಮ ರೂಪಿಸಲು

    *ನೇಯ್ದೆ ಉದ್ಯಮವನ್ನು ನಂಬಿರುವ ಲಕ್ಷಾಂತರ ಜನರ ಬದುಕನ್ನು ಉಳಿಸಲು ಸರ್ಕಾರ ತಕ್ಕಣ ಸೀರೆ ಖರೀದಿಸಲು ಒತ್ತಾಯಿಸಿ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿದ ಸೂರತ್ ಮತ್ತು ಬೆಳಗಾವಿ ಸೀರೆಗಳನ್ನು ನಿಲ್ಲಿಸಿ, ನೇಯ್ದೆ ಉದ್ಯಮ ಉಳಿಸಲು

    *ಲಾಳಿರಹಿತ ರೇಪಿಯ‌ರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆ ರೂಪಿಸಬೇಕೆಂದು

    *ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ಮತ್ತು ನೇಕಾರ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಧಾವಿಸಿ ಬರಬೇಕೆಂದು ಒತ್ತಾಯಿಸಿ ನೇಕಾರರು ಬಂದ್ ಗೆ ಮುಂಗಾಗಿದ್ದಾರೆ.

     

    ನೇಯ್ದೆ ಉದ್ಯಮವನ್ನು ನಂಬಿ ಲಕ್ಷಾಂತರ ಜನರು ಬದುಕನ್ನು ಸಾಗಿಸುತ್ತಿದ್ದಾರೆ ಆದರೆ ಲಾಳಿ ರಹಿತ ಆಧುನಿಕ ಮಗ್ಗಗಳಲ್ಲಿ ಉತ್ಪಾದಿಸಿದ ಸೂರತ್ ಮತ್ತು ಬೆಳಗಾವಿ ಸೀರೆಗಳ ಹಾವಳಿಯಿಂದ ನಮ್ಮ ನೇಕಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನೇಕಾರಿಕೆ ಉದ್ಯಮ ಉಳಿಸಲು ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ ನೇಕಾರರರನ್ನು ಉಳಿಸಿಬೇಕು ಎಂದರು.

     

    ಲಾಳಿರಹಿತ ರೇಪಿಯರ್ ಮಗ್ಗಗಳಲ್ಲಿ ಸಾಂಪ್ರದಾಯಿಕ ಜರಿ ಮಿಶ್ರಿತ ಸೀರೆ ನೇಯುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಕಾಯ್ದೆ ರೂಪಿಸಿ ಅಳಿವಿನ ಅಂಚಿನಲ್ಲಿರುವ ನೇಕಾರರನ್ನು ಮತ್ತು ನೇಕಾರ ಕಾರ್ಮಿಕರನ್ನು ರಕ್ಷಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಧಾವಿಸಿ ಬರಬೇಕೆಂದು ಮನವಿ ಮಾಡಿದರು.

    ಮುಖಂಡರಾದ ನರಸಿಂಹಮೂರ್ತಿ ಮಾತನಾಡಿ ಈ ಸ್ವಯಂ ಪ್ರೇರಿತ ಬಂದ್ ಅನ್ನು ಬೆಂಬಲಿಸಲು ಊರಿನ ಎಲ್ಲಾ ಸಂಘ/ಸಂಸ್ಥೆಗಳು, ರಾಜಕೀಯ ಪಕ್ಷಗಳು, ರೈತ ಕಾರ್ಮಿಕ, ದಲಿತ, ಕನ್ನಡಪರ, ವಿದ್ಯಾರ್ಥಿ-ಯುವಜನ, ಮಹಿಳಾ ಸಂಘಗಳು, ಎಲ್ಲಾ ರೀತಿಯ ವ್ಯಾಪಾರ ಸಂಘಗಳು, ಎಲ್ಲಾ ನೇಕಾರ ಸಂಘಟನೆಗಳು, ಸಹಕಾರಿ ಸಂಘಗಳು ಭಾಗವಹಿಸಿ ಬೆಂಬಲಿಸಲಿವೆ. ಜನವರಿ 4 ರಂದು ನಗರದ ಬಯಲು ಬಸವಣ್ಣ ದೇವಸ್ಥಾನದ ಮುಂಭಾಗದಿಂದ ಸಂಜೆ 4ಗಂಟೆಗೆ ಬೈಕ್ ರಾಲಿ ಏರ್ಪಡಿಸಲಾಗಿದೆ ಹಾಗೂ ಜನವರಿ 5ರಂದು ಸಿದ್ದಲಿಂಗಯ್ಯ ವೃತ್ತ (ಬಸ್ ನಿಲ್ದಾಣ) ದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಈ ಬಂದ್ ಯಶಸ್ವೀಗೊಳಿಸಲು ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಬೆಂಬಲಿಸಬೇಕು ಎಂದರು.

     

    ಈ ವೇಳೆ ದೊಡ್ಡಬಳ್ಳಾಪುರ ಟೆಕ್ಸ್ ಟೈಲ್ ವೀವರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ದೊಡ್ಡಬಳ್ಳಾಪುರ ತಾಲೂಕು ಎಲ್ಲಾ ನೇಕಾರ ಸಂಘಟನೆಗಳು, ಮತ್ತು ನೇಕಾರ ಸಹಕಾರ ಸಂಘಗಳು, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೇಕಾರ ಸಂಘಟನೆಗಳ ಮುಖಂಡರು, ಸರ್ವ ಪಕ್ಷಗಳ ಮುಖಂಡರು, ಜವಳಿ ಉದ್ಯಮದ ತಜ್ಞರು, ಜನಪ್ರತಿನಿಧಿಗಳು ಹಾಜರಿದ್ದರು.

     

     

     

  • ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕೆ ಮುಂದಾದ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ 

    ದೊಡ್ಡಬಳ್ಳಾಪುರ : ಸರ್ಕಾರಿ ಜಾಗಗಳ ಉಳುವಿಕೆಗೆ ಹಾಗೂ ಅಭಿವೃದ್ಧಿಗಳಿಗೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಪಡುತ್ತಿರುವ ಪ್ರಯತ್ನಕ್ಕೆ ನೀರೆರೆಚುವಂತೆ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಒತ್ತುವರಿಯಾಗಿರುವ ಸರ್ಕಾರಿ ಜಾಗಗಳನ್ನು ಉಳಿಸುವಂತೆ ಹಲವು ಬಾರಿ ನಾವು ಮನವಿ ಸಲ್ಲಿಸಿದರು ಅಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ ಈ ನಿರ್ಲಕ್ಷದೋರಣೆ ಖಂಡಿಸಿ ಜನವರಿ 26ರಂದು ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದೇವೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ ಎಸ್ ಚಂದ್ರಶೇಖರ್ ತಿಳಿಸಿದರು.

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಸೋಮೇಶ್ವರ ಕುಂಟೆ, ಭಗತ್ ಸಿಂಗ್ ಕ್ರೀಡಾಂಗಣದ ಹಿಂಭಾಗದ ಸರ್ಕಾರಿ ಜಮೀನು ಒಳಗೊಂಡತೆ ಹಲವು ಪ್ರಕರಣಗಳು ಬಗೆಹರಿಯಬೇಕಿದೆ.ಅಲ್ಲದೇ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ತಾಲ್ಲೂಕಿನ ಅರೇಹಳ್ಳಿ ಗುಡ್ಡದಹಳ್ಳಿ ಬಳಿ ಜಮೀನು ಕಬಳಿಸಿದವರ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಇಂತಹ ಹಲವಾರು ಪ್ರಕರಣಗಳು ನಮ್ಮೇದುರಿದ್ದು ಅಧಿಕಾರಿಗಳು ಜನವರಿ 26ರ ಒಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ.

    ಸಂಘಟನೆ ವತಿಯಿಂದ ಈಗಾಗಲೇ ತಾಲ್ಲೂಕಿನ ಕಸಬಾ ಹೋಬಳಿ, ಗಂಗಾಧರಪುರ ಗ್ರಾಮದ ಸರ್ವೇ ನಂಬರ್ 17ರ ಸರ್ಕಾರಿ ಕುಂಟೆ 2-04 ಎ/ಗುಂ ಜಾಗವಿದ್ದು, ಸದರಿ ಜಾಗವನ್ನು ಕುಂಟೆಯಾಗಿಯೇ ಉಳಿಸಿ ಅಭಿವೃದ್ಧಿಪಡಿಸುವ ಬಗ್ಗೆ,ಅರೇಹಳ್ಳಿಗುಡ್ಡದಹಳ್ಳಿ ಗ್ರಾಮದ ಸರ್ವೇ ನಂಬರ್ 57ರ ಸರ್ಕಾರಿ ಗೋಮಾಳವಿದ್ದು, ಸದರಿ ಜಾಗದ ದಾಖಲೆಗಳನ್ನು ನಕಲು ಸೃಷ್ಟಿಸಿರುವ ಬಗ್ಗೆ, ನಗರದ ರೋಜಿಪುರ ಗ್ರಾಮದ ಸರ್ವೇ ನಂಬರ್ 93ರ 0-23 ಗುಂಟೆಯ ಆ ಖರಾಬು ಜಾಗವಿದ್ದು, ಆ ಜಾಗದಲ್ಲಿ ಖಾಸಗಿಯವರು ಕಾಮಗಾರಿಯನ್ನು ನಡೆಸುತ್ತಿದ್ದು ಅದನ್ನು ನಿಲ್ಲಿಸಲು ಕೋರಿ.ಗಂಗಾಧರಪುರ ಗ್ರಾಮದ ಸರ್ವೇ ನಂಬರ್ 124ರಲ್ಲಿನ ಸ್ಮಶಾನದ ಜಾಗದಲ್ಲಿ 25*70 ಅಡಿಗಳ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸುವ ಬಗ್ಗೆ,ದೊಡ್ಡಬಳ್ಳಾಪುರ ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣದ ಬಳಿ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಮೀಸಲಿಟ್ಟ ಜಾಗವನ್ನು ಅತಿಕ್ರಮಿಸಲು ನಾಮಫಲಕ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಪದೇ ಪದೇ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಲು ನಾಮಫಲಕ ನೆಡುತ್ತಿರುವ ಭೂಗಳ್ಳರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಮನವಿ ನೀಡಿದ್ದು. ನಿರಂತರವಾಗಿ ಅನುಸರಿಸಿದರೂ ಕೂಡ ಅಧಿಕಾರಿಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

     

    ಈ ಮಾದರಿಯನ್ನು ನೋಡಿದರೆ, ಸ್ವಾತಂತ್ರ್ಯ ಹಾಗೂ ಗಣರಾಜ್ಯದ ಹಕ್ಕುಗಳು ಕೇವಲ ಭೂಗಳ್ಳರಿಗೆ ಹಾಗೂ ಭೂಗಳ್ಳರಿಗೆ ಸಹಕರಿಸುವ ಅಧಿಕಾರಿಗಳಿಗಿದೆಯೇ ಹೊರತು ಜನಸಾಮನ್ಯರಿಗಲ್ಲ ಎಂದು ಭಾಸವಾಗುತ್ತಿದೆ. ಅತಿ ಜರೂರಾಗಿ ಮೇಲ್ಕಂಡ ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಆಶಿಸುತ್ತದೆ. ಇಲ್ಲವಾದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಧಿಕ್ಕರಿಸುತ್ತಾ,ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ಗೌರವಸಲ್ಲಿಸಿ, ನಂತರ ಅಧಿಕಾರಿಗಳ ಭಾಷಣವನ್ನು ಖಂಡಿಸಿ, ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡಬೇಕೆಂದು ತೀರ್ಮಾನಿಸಿದ್ದೇವೆ ಎಂದರು.

    ಈ ವೇಳೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಪ್ರದಾನ ಕಾರ್ಯದರ್ಶಿ ಆರ್ ರಮೇಶ್. ರಾಜ್ಯ ಮುಖಂಡ ಪಿ ವಾಸು. ಜಿಲ್ಲಾ ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ. ತಾಲೂಕು ಅಧ್ಯಕ್ಷ ವಿನಯ ಆರಾಧ್ಯ. ತಾಲೂಕು ಕಾರ್ಯದರ್ಶಿ ಪ್ರದೀಪ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • “ಮಕ್ಕಳ ಹಕ್ಕುಗಳ ಗ್ರಾಮಸಭೆ” : ಸಭೆಯಲ್ಲಿ ಮಕ್ಕಳ ಕಂಪ್ಲೇಂಟ್ಸ್ ಏನು….????

    ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ  ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ಹಾಗೂ ಸಿ.ಎಂ.ಸಿ.ಎ ಸಂಸ್ಥೆ  ಸಹಯೋಗದಲ್ಲಿ  “ಮಕ್ಕಳ ಹಕ್ಕುಗಳ ಗ್ರಾಮಸಭೆ” ಕಾರ್ಯಕ್ರಮವನ್ನು ನಡೆಸಲಾಯಿತು.

    ಸಭೆಯಲ್ಲಿ ಮಕ್ಕಳು ಮಾತನಾಡಿ ಕೆಲ ಕಿಡಿಗೇಡಿಗಳು ಶಾಲೆಯ ಒಳಗೆ ಧೂಮಪಾನ ಮತ್ತು ಮದ್ಯಪಾನ ಮಾಡಿ ಬಿಸಾಡುತ್ತಾರೆ ನಾವು ಶಾಲೆಗೆ ಬಂದಾಗ ಗ್ಲಾಸ್ ಚೂರುಗಳು ಕಾಲಿಗೆ ಚುಚ್ಚುತ್ತವೆ, ಶಾಲೆಯ ಸುತ್ತಾ ಮುತ್ತಾ ತಂಬಾಕು ಮಾರಾಟ ಮಾಡುತ್ತಾರೆ, ಶಾಲೆಯ ಹೊರಗೆ ಸ್ವಚ್ಛತೆ ಇಲ್ಲ ಕಸ‌ ಇರುತ್ತದೆ, ಶಾಲೆಯ ಕಿಟಕಿಗಳಿಗೆ ತರಗತಿ ನಡೆಯುವ ಸಂದರ್ಭದಲ್ಲಿ ಹೊರಗಿನಿಂದ ಕಲ್ಲು ತೂರಾಟ ನಡೆಸುತ್ತಾರೆ, ಸಮಾಜ ವಿಜ್ಞಾನ ಭಾಗ-02 ಪುಸ್ತಕ ನಮಗೆ ಸಿಕ್ಕಿಲ್ಲ, ಆಟದ ಮೈದಾನವಿಲ್ಲ, ಶಾಲೆಯ ಕಾಂಪೌಂಡ್ ಗೋಡೆಯಿಲ್ಲ, ಶಾಲೆಯ ಶೌಚಾಲಯದ ಸ್ವಚ್ಛತೆ ಕಷ್ಟ ಸಾಧ್ಯ, ಶಾಲೆಯ ಕೊಠಡಿ ಬಾಗಿಲು ಬಿದ್ದಿದೆ, ದೈಹಿಕ ಶಿಕ್ಷಣ ಮತ್ತು ಹಿಂದಿ ಭಾಷೆಗೆ ಶಿಕ್ಷಕರು ಇಲ್ಲ, ಬಸ್ ವ್ಯವಸ್ಥೆ ಇಲ್ಲ, ಕಸವನ್ನು ಸಂಗ್ರಹಿಸಲು ವಾಹನ ಬರುವುದಿಲ್ಲ, ಮನೆಯ ಬಳಿ ಚರಂಡಿ ನೀರು ರಸ್ತೆಗೆ ಬರುತ್ತಿದೆ, ಬೀದಿ ನಾಯಿಗಳ ಕಾಟ ಈ ರೀತಿಯ ಸಮಸ್ಯೆಗಳನ್ನು ಮಕ್ಕಳು ತಮ್ಮ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಯಲ್ಲಿ ಹೇಳಿಕೊಂಡರು ಇದರ ಜೊತೆಗೆ ಮಕ್ಕಳ ಧ್ವನಿ ಪೆಟ್ಟಿಗೆಗೆ ಚೀಟಿಯಲ್ಲಿ ಸಮಸ್ಯೆಗಳನ್ನು ಬರೆದು ಹಾಕಿದ್ದರು ಅದನ್ನು ವೇದಿಕೆಯ ಮೇಲೆ ಇದ್ದವರು ಚೀಟಿಗಳನ್ನು ತೆರೆದು ಎಲ್ಲರ ಮುಂದೆ ಓದಿದರು.

    ಮಕ್ಕಳು ಕೇಳಿದ ಸಮಸ್ಯೆಗಳಿಗೆ ಒಂದಾದ ನಂತರ ಒಂದರಂತೆ ಎಲ್ಲದಕ್ಕೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸದಸ್ಯರು ಉತ್ತರ ನೀಡಿದರು ಮತ್ತು ಪತ್ರ ವ್ಯವಹಾರ ನಡೆಸುವುದಾಗಿ ಪಂಚಾಯಿತ್ ಅಭಿವೃದ್ಧಿ ಅಧಿಕಾರಿಗಳಾದ ಸೌಮ್ಯ ರವರು ತಿಳಿಸಿ ” ಸಭೆಯು ಉತ್ತಮವಾಗಿದ್ದು, ಮಕ್ಕಳ ಜೊತೆ ನೇರ ಸಂವಾದವಾಗಿದ್ದು ಮಕ್ಕಳ ಸಮಸ್ಯೆ ತಿಳಿಯಲು ತುಂಬಾ ಸಹಕಾರಿಯಾಗಿದೆ.” ಎಂದು ಹೇಳಿದರು.

     

    ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾರಾಣಿ ರವರು “ಮಕ್ಕಳು ಹೇಳಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಗಮನವಹಿಸುತ್ತೇನೆ. ಇಂತಹ ಸಭೆಯಿಂದ ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಸಿಗುವುದು ಮತ್ತು ಅವರ ಸಮಸ್ಯೆಗಳಿಗೆ ನೇರವಾಗಿ ಉತ್ತರ ದೊರಕಲು ಅವಕಾಶ ದೊರೆಯುತ್ತದೆ.” ಎಂದು ಹೇಳಿದರು .

    ಕಾರ್ಯಕ್ರಮದ ಕುರಿತು ಮಾತನಾಡಿದ ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಚಿದಾನಂದ್ ಮೂರ್ತಿ ರವರು ” ಈ ಕಾರ್ಯಕ್ರಮದ ಉದ್ದೇಶ ನಿಮ್ಮ ಭಾಗವಹಿಸುವ ಹಕ್ಕನ್ನು ಖಾತರಿಪಡಿಸುವುದಾಗಿದೆ.ಈ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ತ್ವರಿತಗತಿಯಲ್ಲಿ ಪರಿಹಾರ ಒದಗಿಸುವುದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಿರುತ್ತದೆ. ನೀವು ಇಲ್ಲಿ ಕೇಳಿರುವ ಸಮಸ್ಯೆಗಳನ್ನು ನಾವುಗಳು ಅನುಸರಣೆ ಮಾಡುತ್ತೇವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಹಾಗೂ ಪಂಚಾಯಿತಿಯವರು ನಡೆಸುವ ಪತ್ರ ವ್ಯವಹಾರವನ್ನು ಸಹ ಅನುಸರಣೆ ಮಾಡುವುದು ನಮ್ಮ ಜವಾಬ್ದಾರಿ.” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸೌಭಾಗ್ಯಮ್ಮ, ಸದಸ್ಯರು ಹಾಗೂ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಮಕ್ಕಳ ಸಹಾಯವಾಣಿ ಮೇಲ್ವಿಚಾರಕರಾದ ಸೌಮ್ಯ , ಕೊಡಿಗೆಹಳ್ಳಿ ವ್ಯಾಪ್ತಿಯ ಸಿ.ಆರ್.ಪಿ ಮುತ್ತುರಾಜ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಚೇತನ ಆರ್, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು,  ಯುವ ಸಂಚಲನ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾದ ನವೀನ್ ಕುಮಾರ್  ಹಾಗೂ ಸ್ವಯಂ ಸೇವಕರಾದ ಲಾವಣ್ಯ  ಉಪಸ್ಥಿತರಿದ್ದರು.

  • ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ   

    ದೊಡ್ಡಬಳ್ಳಾಪುರ : ಹೊಸ ವರ್ಷ ಹಾಗೂ ಭೀಮಾ ಕೋರೆಗಾಂವ್ 208 ನೇ ವರ್ಷದ ವಿಜಯೋತ್ಸವದ ಪ್ರಯುಕ್ತ ಅಂಬೇಡ್ಕರ್ ಸೇವಾ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ.ಎಂ.ಸಂದೇಶ್ ರವರ ನೇತೃತ್ವದ್ದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್, ಪೆನ್ನು ಒಳಗೊಂಡತೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡಿದ್ದೇವೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

     

    ತಾಲ್ಲೂಕಿನ ಕೊಡಿಗೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಹೊಸ ವರ್ಷ ಹಾಗೂ ಭೀಮಾ ಕೋರೆಗಾಂವ್ 208 ನೇ ವರ್ಷದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ನಿತ್ಯ ನಿರಂತರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಸದಾ ಶೋಷಿತ ದಲಿತ ಹಾಗೂ ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಡಾ. ಕೆ ಎಂ ಸಂದೇಶ್ ನೇತೃತ್ವದಲ್ಲಿ ಶ್ರಮಿಸುತ್ತಿದೆ ಎಂದರು.

     

     

    ಈ ವೇಳೆ ಕೋಡಿಗೆಹಳ್ಳಿ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ,ಸಂಘಟನೆಯ ತಾಲೂಕು ಉಪಾಧ್ಯಕ್ಷ ನವೀನ್, ಕಾರ್ಯದರ್ಶಿ ಗಜೇಂದ್ರ, ಸದಸ್ಯರಾದ ಪಾಪಣ್ಣ, ಸ್ವಾಮಿ, ಮಂಜುನಾಥ್ ಮುಂತಾದವರು ಹಾಜರಿದ್ದರು.

     

     

     

     

     

  • ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಕ್ರಮಗಳು ಕನ್ನಡ ಉಳಿಸಿ ಬೆಳೆಸಲು ಸಹಕಾರಿ ಆಗಿವೆ – ಪಿ.ಎನ್.ಶೇಷಾದ್ರಿ

    ದೊಡ್ಡಬಳ್ಳಾಪುರ : ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳು ಕನ್ನಡ ಸಾಹಿತ್ಯ ಮತ್ತು ಬರಹಗಾರರನ್ನು ಸೇರಿದಂತೆ ವಿವಿಧ ಪ್ರತಿಭಾವಂತರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸಹಕಾರಿ ಆಗಿವೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪಿ.ಎನ್.ಶೇಷಾದ್ರಿ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಪಂಚಾಯಿತಿ ಸಮೀಪದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಎಂ.ಎ.ಖಲೀಲುಲ್ಲಾಖಾನ್ ದತ್ತಿ ಮತ್ತು ಡಿ.ವಿ.ಪದ್ಮಾವತಮ್ಮ ಶೈಕ್ಷಣಿಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ದಾನಿಗಳ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲ್ಲೂಕು, ಹೋಬಳಿ ಘಟಕಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಕುರಿತು ಪ್ರತಿ ವರ್ಷ ನಡೆಸುತ್ತಿರುವ ಹಲವಾರು ಕಾರ್ಯಕ್ರಮಗಳು ಕನ್ನಡ ಉಳಿಸಿ ಬೆಳೆಸಲು ಸಹಕಾರಿ ಆಗಿವೆ ಎಂದರು.

    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಕನ್ನಡ ಭಾಷೆಯನ್ನು ಎಲ್ಲೆಡೆ ಬಳಸಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಹಕಾರಿ ಆಗುತ್ತದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳಷ್ಟೇ ಸೀಮಿತ ಆಗಬಾರದು. ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವ ಕಡೆಗೂ ಆದ್ಯತೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಭಾ ಮಾತ್ರ ಮನ್ನಣೆ ದೊರೆಯುತ್ತದೆ. ಪ್ರತಿಭಾವಂತರನ್ನು ಪ್ರೋತ್ಸಾಹಿಸಿದಾಗ ಮಾತ್ರ ಅವರು ಉತ್ತಮ ಸಾಧಕರಾಗಲು ಸಾಧ್ಯವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಗಳು ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಸಹಕಾರಿ ಎಂದರು.

    ಪ್ರತಿಭಾವಂತ ವಿದ್ಯಾರ್ಥಿನಿ ಎಂ.ಲಾವಣ್ಯ ಅವರನ್ನು ಅಭಿನಂದಿಸಿದ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ಸಿ.ವೆಂಕಟರಾಜು, ದತ್ತಿ ದಾನಿ ಡಿ.ವಿ.ಪದ್ಮಾವತಮ್ಮ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಕೋದಂಡರಾಮ್, ನಂಜುಂಡರಾವ್, ವಿದ್ಯಾರ್ಥಿ ನಿಲಯ ಪಾಲಕರುಗಳಾದ ಸಿ.ಅಣ್ಣಯ್ಯ, ರೂಬಿಯಾ ಮುಂತಾದವರು ಭಾಗವಹಿಸಿದ್ದರು.

  • ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ 70 ಕನ್ನಡ ರಾಜ್ಯೋತ್ಸವ ಆಚರಣೆ 

    ದೊಡ್ಡಬಳ್ಳಾಪುರ : ಕ ನ್ನಡ ಭಾಷೆಯೂ ನಮ್ಮ ನಾಡಿನಲ್ಲಿ ಮನೆ ದೇವರಂತೆ ಆರಾಧಿಸಿ, ವರ್ಷವೀಡಿ ಸ್ಮರಿಸಬೇಕು. ಈ ಮೂಲಕ ಭಾಷೆಯ ಹೆಚ್ಚಿನ ಬಳಕೆ ಮತ್ತು ಉಳಿವಿಗೆ ಪ್ರತಿಯೊಬ್ಬ ಕನ್ನಡಿಗನು ಕಾರ್ಯೋನ್ಮುಖನಾಗಬೇಕು ಎಂದು ಹಿರಿಯ ಕನ್ನಡ ಪರ ಹೋರಾಟಗಾರ ರಾಜಘಟ್ಟ ರವಿ ಹೇಳಿದರು.

    ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ 70ನೇ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ ೩ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 1963 ರಲ್ಲಿ ಮಾ.ರಾಮಮೂರ್ತಿ ಸೇರಿದಂತೆ ಅನೇಕರು ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಕನ್ನಡಿಗರು, ಕನ್ನಡದ ಉಳಿವಿಗಾಗಿ ಬೃಹತ್ ಹೋರಾಟ ರೂಪಿಸಿದ್ದರು. ಅಂದು ಸರ್ಕಾರಕ್ಕೆ ನೀಡಿದ್ದ ಬೇಡಿಕೆಗಳಲ್ಲಿ ಒಂದಾದ ಕನ್ನಡ ರಾಜ್ಯೋತ್ಸವ ಆಚರಣೆ ಮಾತ್ರ ಜಾರಿಯಾಗಿದೆ. ಉಳಿದಂತೆ ಎಲ್ಲಾ ಅಂಶಗಳು ಇಂದಿಗೂ ಜಾರಿಯಾಗಿಲ್ಲ ಎಂದರು.

     

    ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವನಾಯಕ್ ಮಾತನಾಡಿ ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕತೆಯ ಅಸ್ಮಿತೆ ಇಂದಿಗೂ ಜೀವಂತವಾಗಿದೆ. ಅಲ್ಲಿನ ಸಂಸದರು ತಮ್ಮ ರಾಜ್ಯಕ್ಕೆ ಅಪಾಯ ಎದುರಾದರೆ ಒಂದಾಗಿ ಹೋರಾಟ ಮಾಡಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಾರೆ. ನಮ್ಮ ರಾಜ್ಯದಲ್ಲಿನ ಸಂಸದರು ಮೂಕವಿಸ್ಮಿತರಂತೆ ನೋಡುತ್ತಾರೆ. ಹೀಗಾಗಿ ಮುಂದಿನ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾದೇಶಿಕವಾಗಿ ನೆಲ, ಜಲ, ಭಾಷೆ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳಿಗೆ ಕನ್ನಡಿಗರು ಆದ್ಯತೆ ನೀಡಬೇಕು. ಹೋರಾಟದ ಮೂಲಕ ಎಂತಹ ದೊಡ್ಡ ಸಾಧನೆ ಬೇಕಾದರೂ ಮಾಡಬಹುದು. ನಗರದಲ್ಲಿ ಹೋರಾಟದ ಮೂಲಕವೇ 380 ಮನೆಗಳನ್ನ ಮಂಜೂರು ಮಾಡಿಸಲಾಗಿತ್ತು ಎಂದರು.

    ಅಲ್ಪಸಂಖ್ಯಾತ ಮುಖಂಡ ಬಿ.ಜೆಡ್ ಫೈರೋಜ್ ಖಾನ್ ಮಾತನಾಡಿ ತಮ್ಮ ಮನೆಗಳಲ್ಲಿ ಯಾವುದೇ ಭಾಷೆ ಮಾತನಾಡಿದರೂ ಸಾರ್ವಜನಿಕವಾಗಿ ಪ್ರತಿಯೊಬ್ಬರು ಕನ್ನಡವನ್ನೆ ಮಾತನಾಡಬೇಕು. ಕನ್ನಡ ಉಳಿಸಲು ನಾವೆಲ್ಲಾ ಒಂದಾಗಿ ದುಡಿಯೋಣ ಎಂದರು.

    ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಪರ ಹೋರಾಟಗರಾರದ ತ.ನ ಪ್ರಭುದೇವ, ಪ್ರಮಿಳಾ ಮಹದೇವ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ, ರಾಜ್ಯ ಸಮಿತಿಯ ಬಿ . ನಯಾಜ್ ಖಾನ, ಗಂಗರಾಜಪ್ಪ,ರಾಜ್ಯ ಯುವ ಘಟಕದ ಅಜಯ್, ಮಂಜುನಾಥ, ಪ್ರಮೋದ್, ಪೀರ್ ಪಾಷಾ, ಶಿವಕುಮಾರ್ ವೈರ್,ತಾಲೂಕು ಘಟಕದ ಅಧ್ಯಕ್ಷ ಸೋಮರಾಜು,ಕಾರ್ಯದರ್ಶಿ ಚಂದ್ರಶೇಖರಯ್ಯ, ವೆಂಕೋಬಾ, ವಿನಯ್ ಪ್ರಸಾದ್, ರಮೇಶ್,ಅಂಜಿನ ಮೂರ್ತಿ, ಅಬ್ದುಲ್ ಕಲೀಮ್, ರಾಧಾಕೃಷ್ಣ, ವೆಂಕಟೇಶ, ಮಹಿಳಾ ಘಟಕದ ಶಶಿಕಲಾ, ರೇಷ್ಮ,ಪದ್ಮಾವತಿ, ತಾಲೂಕ್ ಅಧ್ಯಕ್ಷೆ ನಾಗರತ್ನಮ್ಮ, ನವ್ಯ, ನಗರಾಧ್ಯಕ್ಷೆ ನಾಗವೇಣಿ, ರಾಗಿಣಿ ,ವಿಜಯಲಕ್ಷ್ಮಿ, ಸಂಕಲ್ಪ ಸೇರಿದಂತೆ ಹಲವರು ಇದ್ದರು.

  • ಹೊಸ ವರ್ಷಾಚರಣೆ: ಜನವರಿ 1ರಿಂದ ಹೆಲ್ಕೆಟ್ ಕಡ್ಡಾಯ : ಸಂಚಾರಿ ಸುರಕ್ಷತಾ ಜಾಗೃತಿ ಜಾಥಾದಲ್ಲಿ ಡಿವೈಎಸ್‌ಪಿ ಪಾಂಡುರಂಗ ಎಚ್ಚರಿಕೆ

    ದೊಡ್ಡಬಳ್ಳಾಪುರ: ಹೊಸ ವರ್ಷಾಚರಣೆ ಸಮಯದಲ್ಲಿ ರಾತ್ರಿ 12:30ರ ನಂತರ ಸಂಭ್ರಮಾಚರಣೆ ಅವಕಾಶವಿಲ್ಲ. ಪೊಲೀಸರ ಅನುಮತಿ ಇಲ್ಲದೆ ದೊಡ್ಡಮಟ್ಟದ ಸಂಭ್ರಮಚರಣೆ ಆಯೋಜಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್‌ಪಿ ಪಾಂಡುರಂಗ ಎಚ್ಚರಿಕೆ ನೀಡಿದ್ದಾರೆ.

    ಸಂಚಾರ ಸುರಕ್ಷತಾ ಸಪ್ತಾಹ ಪ್ರಯುಕ್ತ ಜಿಲ್ಲಾ ಪೊಲೀಸ್ ವತಿಯಿಂದ ನಗರದಲ್ಲಿ ನಡೆದ ಹೆಲೈಟ್ ಅರಿವು ಮತ್ತು ಉಚಿತ ಹೆಲೈಟ್ ಕಾರ್ಯಕ್ರಮದಲ್ಲಿ ವಿತರಣೆ ಮಾಡಿ ಮಾತನಾಡಿದರುಹೊಸ ವರ್ಷಾಚರಣೆ ವೇಳೆ ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಡಿ.31ರವರೆಗೆ ಬೈಕ್, ಕಾರು ಸೇರಿದಂತೆ ವಾಹನಗಳ ತಪಾಸಣೆ ಆರಂಭಿಸಲಾಗಿದೆ. ಕುಡಿದು ವಾಹನಗಳ ಚಾಲನೆ ಮಾಡುವವರಿಗೆ ದಂಡ ವಿಧಿಸುವುದು ಸೇರಿದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.

    ನಗರದಲ್ಲಿ ಹೆಲೈಟ್ ಧರಿಸದ ಕಾರಣದಿಂದಲೇ ಅಪಘಾತಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಸಂಚಾರ ನಿಯಮಪಾಲನೆ ಮಾಡದಿರುವುದರಿಂದ ಅಪಘಾತ ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆಯ ಹೊಸವರ್ಷಾಚರಣೆಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ನಡೆಯಲಿದೆ ಬೈಕ್‌ ಸೇರಿದಂತೆ ಇತರೆ ವಾಹನ ಚಾಲಕರು. ಅಗತ್ಯದಾಖಲೆ, ಚಾಲನ ಪರವಾನಗಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಡಿವೈಎಸ್‌ಪಿ ಪಾಂಡುರಂಗ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಉಪವಿಭಾಗದ ಎಲ್ಲಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗಳು ಸಿಬ್ಬಂದಿಗಳು ಹಾಜರಿದ್ದರು.

  • 2100ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನದಾಸೋಹ ಕಾರ್ಯಕ್ರಮ 

    ದೊಡ್ಡಬಳ್ಳಾಪುರ : ಸಮ ಸಮಾಜದ ನಿರ್ಮಾಣಕ್ಕಾಗಿ ದುಡಿಯುವ ಪ್ರತಿಯೊಬ್ಬರೂ ಮಾದರಿ. ಸಮಾಜದಿಂದ ನಾವೇನು ಪಡೆಯಬಹುದು ಎಂಬ ಯೋಚನೆಯೊಂದಿಗೆ ಮಾಡುವ ಸಮಾಜ ಸೇವಾಕಾರ್ಯಗಳೇ ಹೆಚ್ಚಾಗಿರುವ ಸಮಯದಲ್ಲಿ ಮಲ್ಲೇಶ್ ಮತ್ತು ತಂಡ ನಿಸ್ವಾರ್ಥ ಸೇವಕರಾಗಿ ಕಳೆದ 2100 ದಿನಗಳಿಂದ ನಿರ್ಗತಿಕರಿಗೆ,ವಯೋವೃದ್ದರಿಗೆ, ಹಸಿದವರಿಗೆ ನಿರಂತರ ಅನ್ನದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ ಅವರ ತಂಡಕ್ಕೆ ಶುಭವಾಗಲಿ ಎಂದು ಚಿತ್ರನಟ ಅಹಿಂಸಾ ಚೇತನ್ ತಿಳಿಸಿದರು.

    ನಗರದ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ನಿರಂತರ ಅನದಾಸೋಹ ಸಮಿತಿಯ 2100ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಮಾಜಕ್ಕೆ ಒಳಿತು ಮಾಡಲು ಪ್ರಮುಖವಾಗಿ ಜನಜಾಗೃತಿ, ಹೋರಾಟ ಮತ್ತು ಸೇವೆಗಳ ಮೂಲಕ ಶ್ರಮಿಸಬಹುದಾಗಿದೆ . ಸಂವಿಧಾನವು ನಮಗೆ ಸಮ ಸಮಾಜದ ಪರಿಕಲ್ಪನೆಯನ್ನು ನೀಡಿದೆ. ದೇಶದ ಸಮಗ್ರ ಅಭಿವೃದ್ಧಿ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ಸಮ ಸಮಾಜದ ಕನಸು ನನಸಾಗಬೇಕಿದೆ ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗುವ ಮೂಲಕ ಮುಂದಿನ ಪೀಳಿಗೆಗೆ ಸಮೃದ್ಧ ಸಮಗ್ರ ಸಮಾಜವನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

    ದೇಶದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಹೆಚ್ಚಿಸುವ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸುವ ಮೂಲಕ ದೇಶದ ಅಭಿವೃದ್ಧಿಪಥವನ್ನು ಸುಗಮಗೊಳಿಸಬಹುದಾಗಿದೆ.ಮೂಢನಂಬಿಕೆಗಳಿಂದ ಹೊರಬಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರಜ್ಞಾವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.

     

    ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಂತರ ಅನ್ನದಾಸೋಹ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಸದಾ ದಾನಿಗಳ ನೆರವಿನಿಂದ ನಡೆಯುವ ಈ ಕಾರ್ಯಕ್ರಮವು ನೂರಾರು ಕಡು ಬಡವರಿಗೆ, ವೃದ್ಧರಿಗೆ, ಹಸಿದ ಹೊಟ್ಟೆಗಳಿಗೆ ಅಕ್ಷಯ ಪಾತ್ರೆಯಾಗಿದೆಯೆಂದರೆ ತಪ್ಪಾಗಲಾರದು, 2100 ನೇ ದಿನದ ಈ ಅನ್ನದಾಸೋಹ ಕಾರ್ಯಕ್ರಮವು ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ. ದಿನದಿಂದ ದಿನಕ್ಕೆ ಆಹಾರ ಬಯಸಿ ಬರುವ ಜನರು ಹೆಚ್ಚಾಗುತ್ತಿದ್ದಾರೆ. ನಮಗೆ ದಾನಿಗಳ ಅವಶ್ಯಕತೆ ಹೆಚ್ಚಾಗಿದೆ ಅನ್ನದಾಸೋಹಕ್ಕೆ ಮುಂದಾಗುವ ದಾನಿಗಳು ತಮ್ಮ ವಿಶೇಷ ದಿನಗಳನ್ನು ನಮ್ಮ ನಿರಂತರ ಅನ್ನದಾಸಾಹ ಸಮಿತಿ ಇಟ್ಟಿಗೆ ಆಚರಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.

    ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು ನಿರಂತರವಾಗಿ ಸಾಗುತ್ತಿದೆ. ಪ್ರತಿನಿತ್ಯ ನೂರಾರು ಜನರು ಇಲ್ಲಿಗೆ ಆಹಾರ ಬಯಸಿ ಬರುತ್ತಾರೆ ಮಲ್ಲೇಶ್ ಮತ್ತು ತಂಡ ನಿತ್ಯ ನಿರಂತರ ದಾನಿಗಳ ನೆರವಿನಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಸೇವಾ ಕಾರ್ಯಕ್ರಮವು ಹೀಗೆ ನಿರಂತರ ಸಾಗಲಿ ನಮ್ಮ ಬೆಂಬಲ ಮಲ್ಲೇಶ್ ಮತ್ತು ತಂಡಕ್ಕೆ ಸದಾ ಇರುತ್ತದೆ ಎಂದರು.

    ಶ್ರೀರಾಮ್ ಸೇನೆಯ ರಾಜ್ಯ ಧರ್ಮ ಪ್ರಚಾರಕರಾದ ಶ್ರೀನಿವಾಸ್ ಗುರೂಜಿ ಮಾತನಾಡಿ ದಾನಗಳಲ್ಲಿ ಶ್ರೇಷ್ಠದಾನ ಅನ್ನದಾನವು ಸಹ ಆಗಿದೆ ಇಂತಹ ಸೇವಾಕಾರ್ಯವನ್ನು ನಿರಂತರವಾಗಿ 2,100 ದಿನಗಳಿಂದ ಮಾಡಿಕೊಂಡಿರುವ ಅನ್ನದಾಸೋಹ ಸಮಿತಿಕಾರ್ಯ ಶ್ಲಾಘನೀಯ ನಮ್ಮ ಶ್ರೀರಾಮ ಸೇನೆ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಸದಾ ಇರುತ್ತದೆ ಸಮಿತಿಯ ಎಲ್ಲರಿಗೂ ಶುಭವಾಗಲಿ ಎಂದರು.

    ಈ ವೇಳೆ ಮಾಜಿ ನಗರ ಸಭಾ ಅಧ್ಯಕ್ಷರಾದ ಪಿ ಸಿ ಲಕ್ಷ್ಮೀ ನಾರಾಯಣ್, ಸಮಾಜ ಸೇವಕರಾದ ಸಹದೇಶ್.ಟೀ.ಎಂ, ಸಮಾಜ ಸೇವಕ ಸೆಲ್ವಂ, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷ ಎಚ್. ರಾಘವೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಚ್ ಶಿವಕುಮಾರ್,ಚಿತ್ರನಟ ವೀಡಾ ಸುಧೀರ್,ಚಿತ್ರನಟಿ ಸುವರ್ಣ,ಚಿತ್ರನಟಿ ಲಕ್ಷ್ಮಿ ಮುಖಂಡರಾದ ಜಿ.ರಂಗಸ್ವಾಮಿ,ಪ್ರವೀಣ್,ರುದ್ರೇಶ್ ಕೆ.ಸಿ, ಅಂಗನವಾಡಿ ಕಾರ್ಯಕರ್ತೆ ಶೈಲಜಾ ಗೌಡ,ಮೇಘನಾ,ಎ.ಸಿ.ಅಶೋಕ್,ಜ್ಯೂನಿಯರ್ ರಾಜ್ ಕುಮಾರ್, ಡಿ.ಸಿ.ಚೌಡರಾಜ್, ಸುರೇಶ, ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.