Blog

  • * ಕೆರೆಯಲ್ಲಿ ತೆಪ್ಪದ ಮೇಲೆ ಕುಳಿತು ಪ್ರತಿಭಟನೆ : ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಉಪವಾಸಕ್ಕೆ ಮುಂದಾದ ಗ್ರಾಮಸ್ಥರು*

    ದೊಡ್ಡಬಳ್ಳಾಪುರ ಅ 02( ವಿಜಯಮಿತ್ರ): ದೇಶದಾದ್ಯಂತ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ ಆದರೆ ದೊಡ್ಡ ತುಮಕೂರು ಗ್ರಾಮಸ್ಥರು ಶುದ್ಧ ನೀರಿಗಾಗಿ ಮಹಾತ್ಮ ಗಾಂಧೀಜಿಯವರ ಹೋರಾಟದ ಮಾರ್ಗವನ್ನು ಅನುಸರಿಸಿದ್ದಾರೆ. ಹೌದು ಗ್ರಾಮಸ್ಥರು ಕೆರೆಯಲ್ಲಿ ತೆಪ್ಪದ ಮೇಲೆ ಕೂತು ಉಪವಾಸ ಸತ್ಯಾಗ್ರಹ ನಡೆಸಿದರು,

     

    ದೊಡ್ಡ ತುಮಕೂರು ಕೆರೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆನೀರು ಕ್ಲೊಯು ಹಾಗೂ ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ಸಂಪೂರ್ಣ ವಿಷವಾಗಿವೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಮತ್ತು ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ಕೆರೆಯ ಒಡಲು ಸೇರಿ ಕುಲುಷಿತಗೊಂಡಿದೆ, ಕೆರೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂತರ್ಜಲ ವಿಷವಾಗಿ ಮಾರ್ಪಟ್ಟಿದ್ದು, ಶುದ್ಧ ನೀರಿಗಾಗಿ ಗ್ರಾಮಸ್ಥರು ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರು ಅಧಿಕಾರಿಗಳಿಗೆ ಈ ಕುರಿತು ಯಾವುದೇ ರೀತಿಯ ಕಾಳಜಿ ಇಲ್ಲ. ಕೊಡುವ ಭರವಸೆ ಕೇವಲ ಪತ್ರಗಳಿಗೆ ಸೀಮಿತವಾಗಿದೆ , ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ , ಗ್ರಾಮಸ್ಥರ ಬೇಡಿಕೆಗಳು ಈಡೆರದ ಹಿನ್ನಲೆ ಗಾಂಧಿ ಜಯಂತಿ ದಿನವಾದ ಇಂದು ಗಾಂಧಿಜೀಯವರ ಹಾದಿಯಲ್ಲಿ ಸಂಕೇತಿಕ ಉಪವಾಸ ಸತ್ಯಾಗ್ರಹ ಮಾಡುವ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ರೈತ ಮುಖಂಡ ವಸಂತ್ ಕುಮಾರ್ ತಿಳಿಸಿದರು .

    ಕಳೆದ ಮೂರು ವರ್ಷಗಳಿಂದ ಗಾಂಧಿ ತತ್ವದ ಮೇಲೆ ಸಂವಿಧಾನ ಬದ್ಧವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ. ಅರ್ಕಾವತಿ ನದಿಯ ಜಲಮೂಲ ಸಂಪೂರ್ಣ ಕಲುಷಿತವಾಗಿದ್ದು ಸುಮಾರು ಒಂದು ಕೋಟಿಗೂ ಹೆಚ್ಚು ಜನರಿಗೆ ತೊಂದರೆಯಾಗುತ್ತಿದೆ, ಇದರ ಗಂಭೀರತೆ ಅಧಿಕಾರಿಗಳಿಗಿಲ್ಲ ಎಂದರು.

     

    ಎರಡನೇ ಹಂತದ ಶುದ್ಧೀಕರಣ ಘಟಕ ಸ್ಫಾಪಿಸುವುದ್ದಾಗಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೂ STP ಘಟಕ ಕಾರ್ಯರೂಪಕ್ಕೆ ಬಂದಿಲ್ಲ, ಎರಡು ಗ್ರಾಮ ಪಂಚಾಯಿತಿಗಳ ಪ್ರತಿ ಮನೆಗೂ ಮಳೆನೀರು ಕ್ಲೊಯು ಪದ್ಧತಿ ಅಳವಡಿಸುವುದ್ದಾಗಿ ಹೇಳಿದರು, ಅನುದಾನವಿಲ್ಲ ಎಂದು ಮಳೆನೀರು ಕ್ಲೊಯು ಕೈ ಬಿಟ್ಟಿದ್ದಾರೆ, ನಮ್ಮ ಬೇಡಿಕೆ ಈಡೆರುವರೆಗೂ ನಾವು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

     

    ದೊಡ್ಡತುಮಕೂರು ಕೆರೆಯ ಬಳಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟಗಾರರು ಉಪವಾಸ ಸತ್ಯಾಗ್ರಹವನ್ನ ನಡೆಸಿದರು, ಕೆರೆಯಲ್ಲಿ ತೆಪ್ಪಗಳ ಮೇಲೆ ಕುಳಿತ ಹೋರಾಟಗಾರರು ಕೆರೆಯ ಜಲಮೂಲ ಉಳಿಸುವಂತೆ ಆಗ್ರಹಿಸಿ ಘೋಷಣೆಗಳನ್ನ ಕೂಗುವ ಮೂಲಕ ಸತ್ಯಾಗ್ರಹವನ್ನ ನಡೆಸಿದರು.

     

     

    ಹೋರಾಟಗಾರ ಗಿರೀಶ್ ಮಾತನಾಡಿ, ಶುದ್ಧೀಕರಣ ಘಟಕ ಸ್ಫಾಪಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಕೆಲಸಗಳು ನಡೆದಿಲ್ಲ, ಬಾಶೆಟ್ಟಿಹಳ್ಳಿಯಲ್ಲಿ ಕೈಗಾರಿಕೆಗಳು ಸ್ಫಾಪನೆಯಾಗಿ 40 ವರ್ಷಗಳಾದರು ಮಾಲಿನ್ಯ ನಿಯಂತ್ರಣ ಕಛೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರವಾಗಿಲ್ಲ, ಇಲ್ಲಿನ ಕೈಗಾರಿಕೆಗಳ ಬಗ್ಗೆ ದೂರು ನೀಡಿದ್ದಾರೆ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

     

    ಅರ್ಕಾವತಿ ನದಿ ಹೋರಾಟ ಸಮಿತಿಯ ಮುಖಂಡರಾದ ಸತೀಶ್ ಮಾತನಾಡಿ, ಕಳೆದ 10 ವರ್ಷಗಳಿಂದ ಶುದ್ಧ ನೀರಿಗಾಗಿ ಹೋರಾಟ ಮಾಡುತ್ತಿದ್ದರು ಅಧಿಕಾರಿಗಳಿಂದ ಸೂಕ್ತ ಪ್ರತಿಫಲ ನಮಗೆ ಸಿಕ್ಕಿಲ್ಲ , ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ನಮ್ಮ ಕೆರೆಗಳು ಕಲುಷಿತವಾಗಿವೆ, ವಿಷಕಾರಿ ನೀರಿನ ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುವಂತಾಗಿದೆ ಎಂದರು.

    ಉಪವಾಸ ಸತ್ಯಾಗ್ರಹದಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.

  • ದಸರಾ ಸಿಎಂ ಕಪ್ ಯೋಗ ಸ್ಪರ್ಧೆ 2024 ಕ್ಕೆ ದೊಡ್ಡಬಳ್ಳಾಪುರದ ಯೋಗಪಟುಗಳು ಆಯ್ಕೆ

    ಮೈಸೂರು ವಿಶ್ವವಿದ್ಯಾನಿಲಯದ ಪೆವಿಲಿಯನ್ ಯೋಗ ಸಂಭಾಗಣದಲ್ಲಿ  ಅಕ್ಟೋಬರ್ 3 ರಿಂದ 6 ತನಕ ನಡೆಯಲಿರುವ ದಸರಾ ಸಿಎಂ ಕಪ್ ಯೋಗ ಸ್ಪರ್ಧೆ 2024 ಪಂದ್ಯಾವಳಿಗೆ ದೊಡ್ಡಬಳ್ಳಾಪುರ ನವ್ಯಶ್ರೀ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ‌

     

     

    ತಾಲ್ಲೂಕಿನ ಯೋಗ ವಿದ್ಯಾರ್ಥಿಗಳಾದ  ಎಸ್.ಅದ್ವೈತ್,   ಆರ್.ನಿರೂಪಗೌಡ ,  ಬಿ.ಎಂ.ಕೀರ್ತನ, ಎಸ್.ಪಾವನಿ, ಆರ್. ವರ್ಷ ಮತ್ತು  ತೃಪ್ತಿ ಎನ್ ಶರತ್   ಶಿವಮೊಗ್ಗದಲ್ಲಿ ನಡೆದ ವಿಭಾಗೀಯ ಮಟ್ಟದ  ದಸರಾ ಯೋಗ ಸ್ಪರ್ಧೆಯಲ್ಲಿ ವಿಜೇರಾಗುವ ಮೂಲಕ  ಮೈಸೂರಿನಲ್ಲಿ ನಡೆಯುವ ದಸರಾ ಸಿಎಂ ಕಪ್ ಯೋಗ 2024 ಕ್ಕೆ ಆಯ್ಕೆಯಾಗಿದ್ದಾರೆ.

     

    ದಸರಾ ವಿಭಾಗೀಯ ಮಟ್ಟದ ಬಾಲಕರ ವಿಭಾಗದಲ್ಲಿ ಅದ್ವೈತ್ . ಎಸ್ ಮತ್ತು ನಿರೂಪ ಗೌಡ . ಆರ್ (ಆರ್ಟಿಸ್ಟಿಕ್ ಪೇರ್ ಯೋಗ ಪ್ರಥಮ ಸ್ಥಾನ ) ,  ಕೀರ್ತನ ಬಿ.ಎಂ ಮತ್ತು ಪಾವನಿ .ಎಸ್ (ಬಾಲಕಿಯರ ರಿದಮಿಕ್ ಪೇರ್ ಯೋಗ ದ್ವಿತೀಯ ಸ್ಥಾನ) , ವರ್ಷ .ಆರ್ ಮತ್ತು ತೃಪ್ತಿ ಎನ್ ಶರತ್ (ಬಾಲಕಿಯರ ಆರ್ಟಿಸ್ಟಿಕ್ ಪೇರ್ ಯೋಗ ತೃತೀಯ ಸ್ಥಾನ) ಪಡೆದುಕೊಂಡಿದ್ದಾರೆ ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಕಾಡೆಮಿಯ ತರಬೇತಿದಾರರಾದ ನವ್ಯಶ್ರೀರವರು ಅಭಿನಂದಿಸಿದ್ದಾರೆ.

  • ಸಾರ್ವಜನಿಕರ ಮನೋರಂಜನೆಗಾಗಿ ಸಿದ್ಧವಾಗಿದೆ ಫಾರಿನ್ ಸೆಲ್ಫಿ ಎಕ್ಸಿಬಿಷನ್( ದಸರಾ ಉತ್ಸವ ಮೇಳ )

    ದೊಡ್ಡಬಳ್ಳಾಪುರ : ತಾಲೂಕಿನ ಜನತೆಯ ಮನೋರಂಜನೆಗಾಗಿ ಎಸ್ಎಂಎಂಎಸ್ ಗ್ರೂಪ್ ವತಿಯಿಂದ ಫಾರಿನ್ ಸೆಲ್ಫಿ ಸ್ಪಾಟ್ ಜೊತೆಗೆ ಅಮೂಜ್ಮೆಂಟ್ ಪಾರ್ಕ್ ( ಬೃಹತ್ ಎಕ್ಸಿಬಿಷನ್ )ಆಯೋಜನೆ ಮಾಡಲಾಗಿದೆ.

    ನಗರದ ಹಾಲಿನ ಡೈರಿ ಮುಂಭಾಗ ಸಮೃದ್ಧಿ ಹೋಟೆಲ್ ಹಿಂಭಾಗ ಸಂಪೂರ್ಣ ಕುಟುಂಬದ ಮನೋರಂಜನೆಗಾಗಿ ಫಾರಿನ್ ಸೆಲ್ಫಿ ಎಕ್ಸಿಬಿಷನ್ ನಲ್ಲಿ ರಿಯಲ್ ಫಿಶ್ ಜೊತೆಗೆ ದಸರಾ ಉತ್ಸವ ಮೇಳವನ್ನು ಆಯೋಜನೆ ಮಾಡಲಾಗಿದ್ದು.

    ವಿನೋದಮಯ ಆಟಗಳನ್ನು ಒಳಗೊಂಡಂತೆ ನೂರಾರು ವಿಶೇಷ ತಿನಿಸುಗಳ ಮಳಿಗೆಗಳನ್ನು ಆಯೋಜನೆ ಮಾಡಲಾಗಿದೆ. ಸಂಪೂರ್ಣ ಕುಟುಂಬಕ್ಕೆ ಭರ್ಜರಿ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಅನ್ನು ಎಸ್ಎಂಎಸ್ ಗ್ರೂಪ್ ನೀಡುತ್ತಿದ್ದು ತಾವು ಭೇಟಿ ನೀಡುವ ಮೂಲಕ ಮನೋರಂಜನೆಯ ಮಹಾಪೂರವನ್ನು ಸವಿಯಬಹುದಾಗಿದೆ.

     

    ಈಗಾಗಲೇ ಪ್ರಾರಂಭಗೊಂಡಿರುವ ಎಕ್ಸಿಬಿಷನ್ ಬಿಗ್ಗೆಸ್ಟ್ ಶಾಪಿಂಗ್ ನೊಂದಿಗೆ ಮೈ ರೋಮಾಂಚನಗೊಳಿಸುವ ಅದ್ಭುತ ಮನೋರಂಜನೆಯ ಕ್ರೀಡೆಗಳ ಜೊತೆಗೆ ನೂರಾರು ಮಳಿಗೆಗಳಲ್ಲಿ ವಿಶೇಷ ತಿಂಡಿ ತಿನಿಸುಗಳು, ಶಾಪಿಂಗ್ ಸೇರಿದಂತೆ ವಿಶೇಷ ಮೆನುವಿನೊಂದಿಗೆ ವಿಶೇಷ ಆಟಿಕೆಗಳಾದ ಕೊಲಂಬಸ್, ಡ್ಯಾನ್ಸಿಂಗ್ ಚೇರ್,ಬ್ರೇಕ್ ಡಾನ್ಸ್, ಡ್ರ್ಯಾಗನ್ ಟ್ರೈನ್ , ಬಿಗ್ಗೆಸ್ಟ್ ಜಾಯಿಂಟ್ ವೀಲ್, ಪವರಿಂಗ್ ಸೆಲ್ಫಿ ಷೋ ಸೇರಿದಂತೆ 15ಕ್ಕೂ ಹೆಚ್ಚು ಜಾಲಿ ರೈಡ್ ಗಳನ್ನು ಸಾರ್ವಜನಿಕರಿಗಾಗಿ ಸಿದ್ದಪಡಿಸಲಾಗಿದೆ.ಪ್ರತಿದಿನ ಸಂಜೆ 5 ರಿಂದ 10 ರ ವರೆಗೆ ಈ ಮನೋರಂಜನೆಯನ್ನು ಸಾರ್ವಜನಿಕರು ಸವಿಯಬಹುದಾಗಿದೆ.

     

     

  • ಮಹಾಲಯ ಅಮಾವಾಸ್ಯೆಗೆ ಬಿಗ್ ಶಾಕ್ : ನಾಳೆ ಮದ್ಯ, ಮಾಂಸ ಮಾರಾಟಕ್ಕಿಲ್ಲ ಅವಕಾಶ : ಕಟ್ಟುನಿಟ್ಟಾಗಿ ಆದೇಶ ಪಾಲಿಸಲು ಜಿಲ್ಲಾಧಿಕಾರಿಗಳ ಸೂಚನೆ

    ದೊಡ್ಡಬಳ್ಳಾಪುರ ಅ 01 : ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಜಿಲ್ಲೆಯಾದ್ಯಂತ ಮಾಂಸ ಹಾಗೂ ಮದ್ಯ ಮಾರಾಟವನ್ನು ನಿಷೇದಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

     

    ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಶಾಂತಿ ಮತ್ತು ಅಹಿಂಸಾ ತತ್ವಗಳನ್ನು ಪಾಲಿಸುವ ಸುಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮಾಂಸ ಹಾಗೂ ಮದ್ಯ ಮಾರಾಟವನ್ನು 01.10.2024 ರ ರಾತ್ರಿ 11-00 ಗಂಟೆಯಿಂದ 02.10.20240 ರಾತ್ರಿ 12-00 ಗಂಟೆಯವರೆಗೆ ನಿಷೇಧಿಸಿ ಆದೇಶಿಸಿದೆ ಹಾಗೂ ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಲು ಸೂಚಿಸಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

     

    ಅಕ್ಟೋಬರ್ 2 ರಂದು ಮಹಾಲಯ ಅಮಾವಾಸ್ಯೆ ಇರುವ ಕಾರಣ ಮಾಂಸ ಮಾರಾಟಗಾರರು ಹಾಗೂ ಕೆಲ ಸಮುದಾಯದ ಮುಖಂಡರು ಮಾಂಸ ಮಾರಾಟಕ್ಕೆ ಅನುಮತಿ ಕೊಡುವಂತೆ ಕೋರಿ ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಆದರೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಈ ಆದೇಶ ಹೊರಡಿಸಿದ್ದು , ಮಾಂಸ ಪ್ರಿಯರಿಗೆ ಹಾಗೂ ಮಾಂಸ ಮಾರಾಟಗಾರರಿಗೆ ಬಿಗ್ ಶಾಕ್ ಎಂದರೆ ತಪ್ಪಾಗಲಾರದು.

  • ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆಗೆ ಮುಂದಾಗಿ – ಡಾ. ಸುನಿಲ್ ಕುಮಾರ್

    ದೊಡ್ಡಬಳ್ಳಾಪುರ ಅ.1 ( ವಿಜಯಮಿತ್ರ ): ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ, ಕೊಡಿಗೇಹಳ್ಳಿಯಲ್ಲಿ ಹಮ್ಮಿಕೊಳ್ಳಲಾಯಿತು.

    ಮುಖ್ಯ ಅತಿಥಿಗಳು ದೀಪ ಬೆಳಗುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಡ್ಯಾಪ್ಕೂ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ. ನಾಗೇಶ್ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯ ಆಚರಣೆಯನ್ನು ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.

     

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸುನೀಲ್ ಕುಮಾರ್ ಮಾತನಾಡಿ ರಕ್ತದಾನದ ಮಹತ್ವವನ್ನು ಸಾರ್ವಜನಿಕರು ಅರಿಯಬೇಕಿದೆ, ರಕ್ತದಾನದ ಮಾಡುವ ಮೂಲಕ ಮತ್ತೊಬ್ಬರ ಜೀವ ರಕ್ಷಣೆ ಮಾಡಬಹುದಾಗಿದೆ. ಆರೋಗ್ಯವಂತರು ಯಾವುದೇ ಅಂಜಿಕೆ ಇಲ್ಲದೆ ರಕ್ತದಾನ ಮಾಡಬಹುದಾಗಿದೆ . ನಿಮ್ಮ ದಾನವು ವ್ಯರ್ಥವಾಗದೆ ಮತ್ತೊಬ್ಬರ ಜೀವ ಉಳಿಸಲು ಸಹಾಯಕಾರಿಯಾಗುತ್ತದೆ . ಈಗಿನ ಯುವ ಪೀಳಿಗೆ ಸ್ವಯಂ ಪ್ರೇರಿತ ರಕ್ತದಾನ ಮಾಡಲು ಮುಂದಾಗ ಬೇಕಿದೆ ಎಂದರು.

     

    ಡಾ. ಶಾರದ ನಾಗನಾಥ್ ಮತ್ತು ಡಾ. ನಿರಂಜನ್ ಇವರು ಸಹ ರಕ್ತದಾನ ದಿನಾಚರಣೆ ಮತ್ತು ಅದರ ಮಹತ್ವದ ಬಗ್ಗೆ ಮಾತನಾಡಿದರು. ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರಘುನಾಥ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ವೈದ್ಯರು ಸಾರ್ವಜನಿಕರಿಗೆ ರಕ್ತದಾನ ಕುರಿತು ಅರಿವು ಮೂಡಿಸುವ ಅಗತ್ಯತೆಯಿದೆ. ರಕ್ತದಾನ ಎಂದರೆ ಹೆದರುವ ನೂರಾರು ಜನರಿಗೆ ವೈದ್ಯರ ಸೂಕ್ತ ಸಲಹೆ ದೈರ್ಯ ತುಂಬುತ್ತದೆ . ತುರ್ತು ಸಂದರ್ಭಗಳಲ್ಲಿ ರೋಗಿಯ ಜೀವ ಉಳಿಸಲು ರಕ್ತದಾನದ ಮೂಲಕ ಶೇಖರಿಸಲ್ಪಟ್ಟ ರಕ್ತ ಸಹಕಾರಿಯಾಗಿದೆ. ಈ ದಿನದ ವಿಶೇಷತೆಯನ್ನು ಪ್ರತಿ ಯುವಕ ಯುವತಿಯೂ ಅರಿತು ರಕ್ತದಾನಕ್ಕೆ ಮುಂದಾಗುವ ಮೂಲಕ ಮತ್ತೊಬ್ಬರ ಜೀವ ರಕ್ಷಿಸಲು ಸಹಕರಿಸಬೇಕಿದೆ ಎಂದರು.

     

    ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀಮತಿ ಇಂದಿರಾ, ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕನಸವಾಡಿ , ಶ್ರೀ ಜಯ್ ಶಂಕರ್, ಶ್ರೀ ಕಿರಣ್ ರನ್ನು ವೇದಿಕೆ ಮೇಲಿನ ಗಣ್ಯವ್ಯಕ್ತಿಗಳು ಸನ್ಮಾನಿಸಿದರು.

     

    ಕಾರ್ಯಕ್ರಮದ ಅಂಗವಾಗಿ ದಿನಾಂಕ 27-09-2024ರಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಡಿ.ಬಿ. ಪುರ ಇಲ್ಲಿ ರಕ್ತದಾನದ ಮಹತ್ವದ ಬಗ್ಗೆ ಆಯೋಜಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನ ಪಡೆದ ಅಭ್ಯರ್ಥಿಗಳಿಗೆ ನಗದು ಬಹುಮಾನ, ಪದಕ, ಪಾರಿತೋಷಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

     

    ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು 45 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.ಈ ಕಾರ್ಯಕ್ರಮದಲ್ಲಿ ಕೆ.ಸಿ. ಜನರಲ್ ಸರ್ಕಾರಿ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

    ಕಾರ್ಯಕ್ರಮದಲ್ಲಿ ಡಾ. ಸುನೀಲ್ ಕುಮಾರ್ ಎಂ.ಸಿ. ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಾ. ನಾಗೇಶ್ ಎಸ್, ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳು, ಡ್ಯಾಪ್ಕೂ ಘಟಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಾ. ಶಾರದ ನಾಗನಾಥ್, ತಾಲ್ಲೂಕು ಆರೋಗ್ಯ ಅಧಿಕಾರಿಗಳು, ದೊಡ್ಡಬಳ್ಳಾಪುರ ತಾಲ್ಲೂಕು, ಡಾ. ನಿರಂಜನ್, ಫಿಜೀಶಿಯನ್, ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ, ಡಾ. ರಘುನಾಥ್, ಪ್ರಾಂಶುಪಾಲರು, ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಡಾ. ಲಾಡ್, ಮುಖ್ಯಸ್ಥರು, ಆತ್ರೇಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಶ್ರೀ, ರಾಜೇಂದ್ರ, ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿ, ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ, ಶ್ರೀ ರವಿಕುಮಾರ್ ಎಂ ಮತ್ತು ಇ ಸಹಾಯಕರು, ಡ್ಯಾಪ್ಕೂ ಘಟಕ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಕಾಲೇಜಿನ ಅಧಿಕಾರಿ ಮತ್ತು ಡ್ಯಾಪ್ಕೂ ಸಿಬ್ಬಂದಿಗಳು ಭಾಗವಹಿಸಿದ್ದರು.

     

  • ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. – ಕೆ ಮಂಜುನಾಥ್ ದೇವ್

    ದೊಡ್ಡಬಳ್ಳಾಪುರ ( ವಿಜಯಮಿತ್ರ ): ಯುವಕರು ಪರಭಾಷೆಗಳ ವ್ಯಾಮೋಹ ಹೆಚ್ಚಾಗುತ್ತಿದೆ.. ಯುವಕರು ಮುಖ್ಯವಾಗಿ ಕನ್ನಡ ನಾಡು ನುಡಿ ನಮ್ಮ ಸಂಸ್ಕೃತಿಗೆ ಭಾಷೆ ವಿಷಯಗಳಿಗೆ ಗೌರವ ನೀಡಬೇಕು.ಕರ್ನಾಟಕದಲ್ಲಿ ಕನ್ನಡಿಗನಿಗೆ ಉದ್ಯೋಗ ಮೀಸಲಾತಿಯ ವಿಷಯವಾಗಿ ನಮ್ಮ ಹಕ್ಕು ನಮ್ಮ ಉದ್ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಅಕ್ಟೋಬರ್ 19 ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟವನ್ನು ರೂಪಿಸಲಾಗಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ ತಿಳಿಸಿದರು.

     

     

    ಕನ್ನಡ ಜಾಗೃತಿ ವೇದಿಕೆಯ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಮತ್ತು ತಾಲೂಕು ಘಟಕದ ಕಾರ್ಯಕರ್ತರ ಸಭೆಯನ್ನು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿತ್ತು

    ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ನಮ್ಮ ಸಂಘಟನೆ ಸರಿ ಸುಮಾರು 30 ವರ್ಷಗಳಿಂದ ಸತತವಾಗಿ ಕನ್ನಡ ನಾಡು ನುಡಿ ಜಲ ಭಾಷೆ ವಿಷಯವಾಗಿ ಹೋರಾಟವನ್ನು ಮಾಡುತ್ತಿದ್ದು, ಯಾವುದೇ ಅಪಕ್ಷೇ ಇಲ್ಲದೆ ನಾಡು ನುಡಿ ಬಗ್ಗೆ ದುಡಿಯುವ ಹೆಮ್ಮೆಯ ಸಂಘಟನೆ ನಮ್ಮದು ಎಂದರು.

    Ad

     

    ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ನಾಗರಾಜ್ ಮಾತನಾಡಿ ಕನ್ನಡಿಗರಿಗೆ ಉದ್ಯೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಕನ್ನಡಿಗರ ಕೆಲಸಗಳನ್ನು ಬೇರೆ ರಾಜ್ಯದವರು ಕಸಿಯುತ್ತಿದ್ದಾರೆ.ಈಗಿನ ಖಾಸಗಿ ಕಂಪನಿಗಳಲ್ಲಿ ಕೆಳ ದರ್ಜೆಯ ಉದ್ಯೋಗಗಳಿಗೆ ಮಾತ್ರ ಕನ್ನಡಿಗರನ್ನು ನೇಮಿಸಲಾಗುತ್ತಿದೆ. ಈ ವ್ಯವಸ್ಥೆ ಬದಲಾಗಬೇಕೆಂಬ ಉದ್ದೇಶದಿಂದ ಅಕ್ಟೋಬರ್ 19ರಂದು ನಡೆಯಲಿರುವ ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಹೋರಾಟವನ್ನು ಪ್ರತಿಯೊಬ್ಬ ಕನ್ನಡಿಗನು ಬೆಂಬಲಿಸಬೇಕೆಂದು ಮನವಿ ಮಾಡಿದರು.

     

     

    ಈ ಕಾರ್ಯಕ್ರಮದಲ್ಲಿ ಕನ್ನಡ ಜಾಗೃತಿ ವೇದಿಕೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವಕರು ಸಂಘಟನೆಗೆ ಸೇರ್ಪಡೆಯಾದರು..

     

    ಈ ಸಂದರ್ಭದಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಪೇಟೆ ಮಠ, ಸುಮಂಗಲಿ ರಾಮಾಚಾರಿ, ಆನೇಕಲ್ ಯುವ ಘಟಕದ ಅಧ್ಯಕ್ಷ ಮಧುಸೂಧನ್ , ಯುವ ಘಟಕದ ಸತೀಶ್, ಜಿಲ್ಲಾ ಮುಖಂಡರಾದ ಅಗ್ನಿ ವೆಂಕಟೇಶ,ತಾಲೂಕ ಅಧ್ಯಕ್ಷ ಶಶಿಧರ್ ಸಿ, ಉಪಾಧ್ಯಕ್ಷ ಗಿರೀಶ್, ಗೌರವಾಧ್ಯಕ್ಷ ಅನಿಲ್ ದೇಶಪಾಂಡೆ, ಕಾರ್ಮಿಕ ಘಟಕದ ಅಧ್ಯಕ್ಷ ಗುರುಪ್ರಸಾದ್, ಯುವ ಘಟಕದ ತರುಣ್ ಸರ್ಜಾ, ಚೇತನ್ ಚಂದನ್,ಬಾಲಾಜಿ,ಕಾರ್ಯದರ್ಶಿ ಪ್ರಕಾಶ್ ಬಿ, ತಾಲೂಕ್ ಸಂಚಾಲಕರದ ಮನು ಕುಮಾರ್, ಶಿವಕುಮಾರ್, ವಿಶ್ವನಾಥ್, ಕಾರ್ಯದರ್ಶಿಗಳಾದ ರಾಜಶೇಖರ್, ಅನಿಲ್, ರಜತ್, ಮಹಿಳಾ ಮುಖಂಡರುಗಳಾದ ಮುನಿರತ್ನಮ್ಮ, ಗೌರಮ್ಮ ಲಕ್ಷ್ಮಮ್ಮ, ಸುಜಾತಾ, ಗೌರಿ, ಶಾಂತಲಾ ಸೇರಿದಂತೆ ಕನ್ನಡಪರ ಕಾರ್ಯಕರ್ತರು ಭಾಗವಹಿಸಿದ್ದರು..

    .

  • ಸುಳ್ಳು ಆರೋಪದ ವಿರುದ್ಧ ನ್ಯಾಯಕೋರಿ ಪೋಲೀಸ್ ಉಪಾಧೀಕ್ಷಕರಿಗೆ ಮನವಿ ಸಲ್ಲಿಕೆ

    ದೊಡ್ಡಬಳ್ಳಾಪುರ ಸೆ. 30(ವಿಜಯಮಿತ್ರ): ಅಸತ್ಯವಾದ ಆರೋಪಮಾಡಿ ದೂರು ದಾಖಲಿಸಿರುವ ಬಗ್ಗೆ ದೊಡ್ಡಬಳ್ಳಾಪುರ ಉಪವಿಭಾಗ ಪೋಲೀಸ್ ಉಪಾಧೀಕ್ಷಕರಿಗೆ ಕೆಆರ್ ಎಸ್ ಪಕ್ಷದ ವತಿಯಿಂದ ಬಿ.ಶಿವಶಂಕರ್ ಹಾಗೂ ಸಂಗಡಿಗರು ಮನವಿ ಸಲ್ಲಿಸಿದರು.

    ನಂತರ ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ ಸೆಪ್ಟೆಂಬರ್ 24ರಂದು ನನ್ನ ಸ್ನೇಹಿತರು ನನಗೆ ಕರೆಮಾಡಿ ಈ ದಿನ ಮದ್ಯಾಹ್ನ 3-00 ಗಂಟೆಗೆ ತಾಲ್ಲೂಕು ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ತಿಳಿಸಿದರು ಇದಕ್ಕೆ ಸಂಬಂಧಪಟ್ಟಂತೆ ನಾನು ತಹಸೀಲ್ದಾರ್ ರವರ ಕಛೇರಿಗೆ ಭೇಟಿ ಮಾಡಿ ವಿಚಾರಿಸಲಾಗಿ ಸೆಪ್ಟೆಂಬರ್ 21 ಮೇಲಿನನಾಯ್ಕರಾಂಡ ಹಳ್ಳಿಯಲ್ಲಿ ಒಂದೇ ಸಮುದಾಯದ ಒಂದೇ ಕುಟುಂಬಕ್ಕೆ ಸಂಬಂಧಪಟ್ಟ ಕೆಲವರು ಪಿತ್ರಾರ್ಜಿತ ಆಸ್ತಿಗಾಗಿ ಆಗಿಂದಾಗ್ಗೆ ಗಲಾಟೆ ಮಾಡಿಕೊಂಡಿರುತ್ತಾರೆ ಎಂದು ನನ್ನನ್ನು ಸೇರಿಸಿ, ಒಂಭತ್ತು ಜನರ ಮೇಲೆ ಆರೋಪ ಹೊರಿಸಿ  ಮೊಕದ್ದಮೆ ದಾಖಲಾಗಿದೆ ಎಂದು ತಿಳಿದು ಬಂದಿದ್ದು.ಈ ಮೊಕದ್ದಮೆಗೆ ಸಂಬಂಧಪಟ್ಟಂತೆ ಕಾನೂನಿಗೆ ತಲೆಬಾಗಿ ನನ್ನ ತಪ್ಪಿಲ್ಲದೆ ಇದ್ದರೂ ನಾನು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ಹಾಜರಾಗಿ ಮುಚ್ಚಳಿಕೆ ಬರೆದುಕೊಟ್ಟು ಬಂದಿರುತ್ತೇನೆ.

     

    ಆದರೆ ಸತ್ಯಂಶವೇನೆಂದರೆ ನನಗೂ ಈ ಮೊಕದ್ದಮೆಗೂ ಯಾವುದೇ ಸಂಬಂಧವಿಲ್ಲದಿದ್ದರೂ  ನನ್ನ ಹೆಸರನ್ನು ಸೇರಿಸಲಾಗಿದೆ.ಈ ಮೊಕದ್ದಮ್ಮೆಯಲ್ಲಿ ನಮೂದಿಸಿರುವ ಹೆಸರುಗಳಲ್ಲಿ ಯಾರು ಸಹ ಒಂದೇ ಕುಟುಂಬದವರಾಗಲೀ ಅಥವಾ ಪಿತ್ರಾರ್ಜಿತ ಆಸ್ತಿಗಾಗಿ ಗಲಾಟೆ ಮಾಡಿಕೊಂಡಿರುವುದಿಲ್ಲ. ಹೀಗಿದ್ದರೂ ಒಂದೇ ಸಮುದಾಯದ ನಮ್ಮಲ್ಲಿ ಉದ್ದೇಶ ಪೂರ್ವಕವಾಗಿ ದ್ವೇಶ ಬೆಳೆಸಿಕೊಳ್ಳಲು ಈ ರೀತಿ ಷಡ್ಯಂತರ ಮಾಡಿದ್ದಾರೆ ಎಂದು ಆರೋಪಿಸಿದರು.

     

    ಈ ಮೊಕದ್ದಮೆ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

     

    ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

     

  • ಉಪನಿರ್ದೇಶಕರಿಗೆ ಅದ್ದೂರಿ ಬೀಳ್ಕೊಡುಗೆ : ವೇದಿಕೆಯ ಮೇಲೆ ಭಾವುಕರಾದ ಶಿಕ್ಷಕರು

    ದೊಡ್ಡಬಳ್ಳಾಪುರ (ವಿಜಯಮಿತ್ರ ): ಶಾಲಾ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿ (ಆಡಳಿತ ) ಸೇವೆ ಸಲ್ಲಿಸಿ ಸೇವೆಯಿಂದ ವಯೋವೃದ್ದಿ ಗೊಂಡು ನಿವೃತ್ತಿ ಪಡೆದ ಕೃಷ್ಣಮೂರ್ತಿ ರವರಿಗೆ ಬೆಂಗಳೂರು ಗ್ರಾಮಾಂತರ ಶಿಕ್ಷಕರ ವೃಂದ ಹಾಗೂ ಸಹ ಸಿಬ್ಬಂದಿಗಳ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ತಾಲ್ಲೂಕಿನ ಬೆಸೆಂಟ್ ಪಾರ್ಕಿನ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

    ಶಿಕ್ಷಕ ನಾರಾಯಣ ಸ್ವಾಮಿ ಮಾತನಾಡಿ ಸರ್ಕಾರಿ ಸೇವೆಯಲ್ಲಿ ಎಲ್ಲರಿಗೂ ನಿವೃತ್ತಿ ಎನ್ನುವುದು ಸರ್ವೇ ಸಾಮಾನ್ಯ ಆದರೆ ಕೃಷ್ಣಮೂರ್ತಿ ಸರ್ ನಿವೃತ್ತಿ ಹೊಂದುತ್ತಿರುವುದು ಒಬ್ಬ ದಕ್ಷ, ಸಹೃದಯಿ ಅಧಿಕಾರಿಯನ್ನು ಕಳೆದು ಕೊಳ್ಳುತ್ತಿರುವ ಭಾವನೆ ಉಂಟುಮಾಡುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ ಎಸ್ ಎಲ್ ಸಿ ಪರೀಕ್ಷೆ ಉತ್ತಮ ಫಲಿತಂಶಕ್ಕೆ ಶ್ರಮಿಸಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಅವರ ವೃತ್ತಿ ನಿಷ್ಠೆ, ಪ್ರಾಮಾಣಿಕತೆ ನಮ್ಮೆಲ್ಲರಿಗೂ ಮಾದರಿ ಎಂದರು.

     

    ವಯೋವೃದ್ಧಗೊಂಡು ತಮ್ಮ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ನಮ್ಮ ನೆಚ್ಚಿನ ಗುರುಗಳು, ಅಧಿಕಾರಿಗಳು ಆದ ಕೃಷ್ಣಮೂರ್ತಿ ಅವರು ತಮ್ಮ ಉತ್ತಮ ನಡವಳಿಕೆಯಿಂದ ಕೇವಲ ವೃತ್ತಿ ಜೀವನದಲ್ಲಿ ಅಷ್ಟೇ ಅಲ್ಲದೇ ನಮ್ಮ ನಿತ್ಯ ಜೀವನದಲ್ಲೂ ಸ್ಫೂರ್ತಿ ತುಂಬಿದ್ದಾರೆ ಅವರ ನಿವೃತ್ತಿ ಜೀವನ ಸದಾ ಸುಖಮಯವಾಗಿರಲಿ ಎಂದು ಹಾರೈಸಿದರು.

     

    ಹಲವು ಸಿಬ್ಬಂದಿಗಳು ತಮ್ಮ ವೃತ್ತಿ ಅನುಭವಗಳನ್ನು ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ಭಾವುಕರಾದರು.

     

    ಶಿಕ್ಷಕ ರೋಷನ್ ಬೇಗ್ ಮಾತನಾಡಿ ಇಂದು ಈ ಕಾರ್ಯಕ್ರಮಕ್ಕೆ ಪ್ರತಿ ತಾಲ್ಲೂಕಿನ ಶಿಕ್ಷಕರು, ಅಧಿಕಾರಿಗಳು ಭಾಗವಹಿಸಲು ಮುಖ್ಯ ಕಾರಣ ಕೃಷ್ಣಮೂರ್ತಿ ಅವರ ಕಾರ್ಯ ವೈಖರಿ, ವ್ಯಕ್ತಿತ್ವ, ಅವರು ತಮ್ಮ ಉತ್ತಮ ಕಾರ್ಯಗಳಿಂದಲೇ ನಮ್ಮನ್ನು ಅವರತ್ತಾ ಆಕರ್ಷಣೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆ ನೆಡೆಸಿದ ವಿಧಾನ ಅವರ ಕಾರ್ಯವೈಖರಿಗೆ ಉತ್ತಮ ಉದಾಹರಣೆಯಾಗಿದೆ,ಚಿತ್ರಕಲೆ ಕುರಿತು ವಿಶೇಷ ಅಭಿರುಚಿ ಹೊಂದಿದ್ದು ರಾಜ್ಯ ಮಟ್ಟದಲ್ಲಿ ತಾಲ್ಲೂಕಿನ ಪ್ರತಿಭೆಗಳನ್ನು ಗುರುತಿಸಲು ಇವರ ಅವಧಿಯಲ್ಲಿ ಸಾಧ್ಯವಾಯಿತು ಎಂದರು.

     

    ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ ಸಹ ಆಡಳಿತ ವೃಂದ ಹಾಗೂ ಜಿಲ್ಲೆಯ ಶಿಕ್ಷಕರ ಸಹಕಾರದಿಂದ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಯಿತು . ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿ ತಾಲ್ಲೂಕಿನ ಶಿಕ್ಷಕರು ನನ್ನ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳು ನನಗೆ ಸಿಕ್ಕ ಬಹುಮಾನ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರಋಣಿ ಎಂದರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅಸೀನಾ, ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ , ದೇವನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ , ಹೊಸಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ , ಹನುಮ ನಾಯಕ್, ರೇಖಾ, ಕೆಂಪಯ್ಯ, ಶ್ರೀನಿವಾಸ್, ಪದ್ಮಾವತಿ, ಶ್ರೀಕಂಠಯ್ಯ, ಅಂಜಿನಪ್ಪ, ಮಲ್ಲಿಕಾರ್ಜುನ,ಬಿ ಎಸ್ ಸಿದ್ದಗಂಗಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

     

     

     

     

     

  • R. L. ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ: 20ನೇ ವರ್ಷದ ಪದವಿ ಪ್ರಧಾನ ಸಮಾರಂಭ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ R. L. ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ 20ನೇ ವರ್ಷದ ಪದವೀಧರರಿಗೆ ಪದವಿ ಪ್ರಧಾನ( graduation ceremony) ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

    ಗಣ್ಯರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪದವೀಧರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

     

    ನಂತರ ಕಾಲೇಜಿನ ಉಪಾಧ್ಯಕ್ಷ ಜೆ ರಾಜೇಂದ್ರ ಮಾತನಾಡಿ ನಮ್ಮ ವಿದ್ಯಾಸಂಸ್ಥೆಯು 2001ರಲ್ಲಿ ಆರಂಭವಾಗಿದ್ದು ನಿರಂತರ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಹಕಾರಿಯಾಗಿರುವುದು ಶ್ಲಾಘನೀಯ. ಈಗಾಗಲೇ ನಮ್ಮ ವಿದ್ಯಾಸಂಸ್ಥೆಯಿಂದ 7000ಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಉದ್ಯಮಿಗಳಾಗಿ ಸಾವಿರಾರು ಕಾರ್ಮಿಕರಿಗೆ ಆಧಾರವಾಗಿ ಶ್ರಮಿಸುತ್ತಿರುವುದು ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಆರ್ ಎಲ್ ಜಲಪ್ಪನವರ ಆಶಯದಂತೆ ಇಂದಿಗೂ ನಮ್ಮ ಸಂಸ್ಥೆ ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳ ಏಳಿಗೆಗೆ ಶ್ರಮಿಸುತ್ತಿದ್ದು. ಇಂದು 20ನೇ ವರ್ಷದ ಪದವಿ ಪ್ರಧಾನ ಕಾರ್ಯಕ್ರಮವನ್ನು ಹೆಮ್ಮೆಯಿಂದ ಆಚರಿಸಲಾಗುತ್ತಿದೆ ಎಂದರು.

    ನಮ್ಮ R. L. ಜಾಲಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು AICTE, ನವದೆಹಲಿಯಿಂದ ಗುರುತಿಸಲ್ಪಟ್ಟಿದೆ, “A” ಗ್ರೇಡ್‌ನೊಂದಿಗೆ NAAC ನಿಂದ ಮಾನ್ಯತೆ ಪಡೆದಿದ್ದು ಉತ್ತಮ ವಿದ್ಯಾಭ್ಯಾಸ ಕೊಡುವಲ್ಲಿ ಮುಂಚೂಣಿಯಲಿದೆ. ಈ ಬಾರಿ ಪದವೀಧರರಾಗಿರುವ ವಿದ್ಯಾರ್ಥಿಗಳು ಸಮಾಜಕ್ಕೆ ಮತ್ತಷ್ಟು ಕೊಡುಗೆ ಕೊಡುವಂತಾಗಲಿ ಎಂದು ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

    20ನೇ ಪದವಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ನಿರ್ದೇಶಕ ದಿನೇಶ್ ಕುಮಾರ್ ಶರ್ಮಾ,ಪಾತ್‌ಫೈಂಡರ್ ಕನ್ಸಲ್ಟಿಂಗ್ ಸರ್ವಿಸಸ್ ಸಂಸ್ಥಾಪಕರಾದ ಸಾಕ್ಷಿ ಶರ್ಮಾ ಕಾಲೇಜಿನ ಅಧ್ಯಕ್ಷ ಜಿ.ಎಚ್. ನಾಗರಾಜ, ಕಾರ್ಯದರ್ಶಿ ಕೆ.ಜಿ. ಹನುಮಂತ ರಾಜು,ಮಾನವ ಸಂಪನ್ಮೂಲ ಅಧಿಕಾರಿ ಬಾಬುರೆಡ್ಡಿ, ಡಾ ಶ್ರೀನಿವಾಸ್ ರೆಡ್ಡಿ,ರೀ ಸರ್ಚ್ ಕ್ವಾಲಿಟಿ ನಿರ್ದೇಶಕರು ಹಾಗೂ ಉಪ ಪ್ರಾಂಶುಪಾಲರು ಡಾ. ಶಿವಪ್ರಸಾದ್, ಡಾ. ಸುನಿಲ್ ಕುಮಾರ್ ಆರ್ ಎಂ ಮುಖ್ಯಸ್ಥರು ಕಂಪ್ಯೂಟರ್ ವಿಭಾಗ, ಟ್ರಸ್ಟಿಗಳು, ನಿರ್ದೇಶಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ l ನಗರಸಭೆ ಚುನಾವಣೆ : ನೂತನ ಅಧ್ಯಕ್ಷರಾಗಿ ಸುಮಿತ್ರ ಆನಂದ್: ಉಪಾಧ್ಯಕ್ಷರಾಗಿ ಮಲ್ಲೇಶ್ ಆಯ್ಕೆ

    ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಬಿಜೆಪಿ – ಜೆಡಿಎಸ್ ಮೈತ್ರಿಗೆ ನಗರಸಭೆ ಚುಕ್ಕಾಣಿ ಹಿಡಿದಿದೆ.

    ಸೆ. 23 ರಂದು ನಗರದ ನಗರಸಭೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಪಾಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಕಮಲ-ದಳ ಮೈತ್ರಿಯಿಂದ ಸ್ಪರ್ಧಿಸಿದ್ದ ಸುಮಿತ್ರ ಆನಂದ್ (ಬಿಜೆಪಿ) ಅವರಿಗೆ ಸಂಸದ ಮತ್ತು ಶಾಸಕ ಇಬ್ಬರ ಮತ ಸೇರಿ 23 ಮತಗಳು ದೊರೆತಿದ್ದು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೂಪಿಣಿ ಮಂಜುನಾಥ್ ರವರಿಗೆ 10 ಮತಗಳು ದೊರೆತಿದ್ದು, 23 ಮತಗಳನ್ನು ಪಡೆದ ಸುಮಿತ್ರ ಆನಂದ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ .ಉಪಾಧ್ಯಕ್ಷ ಸ್ಥಾನಕ್ಕೆ ಕಮಲ-ದಳ ಮೈತ್ರಿ ಅಭ್ಯರ್ಥಿಮಲ್ಲೇಶ್ (ಜೆಡಿಎಸ್) ಅವರಿಗೆ ಸಂಸದ ಮತ್ತು ಶಾಸಕ ಇಬ್ಬರ ಮತ ಸೇರಿ 23 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ಅವರಿಗೆ 10 ಮತಗಳು ದೊರೆತಿದ್ದು, 23ಮತಗಳನ್ನು ಪಡೆದ ಮಲ್ಲೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ .

     

    ಕೇಂದ್ರ ಸಂಸದರಾದ ಡಾಕ್ಟರ್ ಕೆ ಸುಧಾಕರ್ ಮಾತನಾಡಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಕೂಟಕ್ಕೆ ಜಯ ದೊರೆತಿದ್ದು. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುಮಿತ್ರಾ ಆನಂದ್ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಲ್ಲೇಶ್ ಅವರಿಗೆ ಶುಭವಾಗಲಿ, ದೊಡ್ಡಬಳ್ಳಾಪುರ ನಗರವು ಬೆಂಗಳೂರಿಗೆ ಹೊಂದಿಕೊಂಡಿದ್ದು , ಸಾಕಷ್ಟು ಅಭಿವೃದ್ಧಿಯ ಅವಶ್ಯಕತೆ ಇದೆ. ಹೆಚ್ಚಿನ ಅನುದಾನಗಳನ್ನು ತರುವ ಮೂಲಕ ಸ್ಥಳೀಯವಾಗಿ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಹೆಚ್ಚಿಸಲಿ ಎಂದರು.

     

    ಈ ಹಿಂದೆಯಂತೆ ಈ ಬಾರಿಯೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಡಳಿತ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಮುಂದುವರೆಯಲಿದೆ, ಸ್ಥಳೀಯ ಶಾಸಕರೊಂದಿಗೆ ಈ ಚುನಾವಣೆಯಲ್ಲಿ ಮತದಾನ ಮಾಡಿರುವುದು ಸಂತಸ ತಂದಿದೆ. ಉತ್ತಮ ಸೇವೆ ಸಲ್ಲಿಸುವ ಮೂಲಕ ನೂತನ ಆಡಳಿತ ವರ್ಗ ನಗರಸಭೆಯ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸಿದರು.

     

    ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಮಾತನಾಡಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ದೊರೆಯುವ ಮೂಲಕ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅಂತಯೇ ಈ ಬಾರಿಯೂ ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಸದಸ್ಯರು ಬೆಂಬಲ ಸೂಚಿಸಿದ್ದಾರೆ. 23 ಮತಗಳನ್ನು ಪಡೆಯುವ ಮೂಲಕ ಸುಮಿತ್ರ ಆನಂದ್ ದೊಡ್ಡಬಳ್ಳಾಪುರ ನಗರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, 23 ಮತದ ಪಡೆಯುವ ಮೂಲಕ ಮಲ್ಲೇಶ್ ನಗರಸಭೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ನೂತನ ಆಡಳಿತ ವರ್ಗಕ್ಕೆ ಶುಭವಾಗಲಿ ಎಂದರು.

    ಸಾರ್ವಜನಿಕರಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಹಾಗೂ ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನೂತನ ಆಡಳಿತ ವರ್ಗ ಶ್ರಮಿಸಲಿದೆ ಎಂದರು.

     

    ನೂತನ ಅಧ್ಯಕ್ಷರಾದ ಸುಮಿತ್ರ ಆನಂದ್ ಮಾತನಾಡಿ ಸಂಸದರು, ಶಾಸಕರು, ಹಾಗೂ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟು ಮತವನ್ನು ನೀಡುವ ಮೂಲಕ ನೂತನ ಜವಾಬ್ದಾರಿಯನ್ನು ವಹಿಸಿದ್ದಾರೆ. ಹಿರಿಯರ ಮಾರ್ಗದರ್ಶನದೊಂದಿಗೆ ಸದಸ್ಯರ ಸಲಹೆ ಪಡೆಯುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುವುದು. ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವಲ್ಲಿ ಶ್ರಮಿಸಲಾಗುವುದು ಎಂದರು.

    ನೂತನ ಉಪಾಧ್ಯಕ್ಷ ಮಲ್ಲೇಶ್ ಮಾತನಾಡಿ ನನಗೆ ನೀಡಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ನಗರದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುವುದು. ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಸರ್ವರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

    ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಸದರಾದ ಡಾ.ಕೆ ಸುಧಾಕರ್ ಶಾಸಕ ಧೀರಜ್ ಮುನಿರಾಜು ಜೆಡಿಎಸ್ ಜಿಲ್ಲಾಧ್ಯಕ್ಷ ಮುನೇಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ‘ವೆಂಕಟೇಶ್( ಬಂತಿ ) ಅಭಿನಂದಿಸಿದರು.