Blog

  • *ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ: ಸುಪ್ರೀಂ ಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಲು ಅಗ್ರಹ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಆಗಸ್ಟ್ 12 : “ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನ ಗೊಳಿಸುವಂತೆ ಆಗ್ರಹಿಸಿ ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾ ಸಂಚಾಲಕ ರಾಮಮೂರ್ತಿ ( ರಾಮುನೇರಳಘಟ್ಟ) ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು “ಬೃಹತ್ ತಮಟೆ ಚಳುವಳಿ” ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಿದರು.

    ತಮಟೆ ಬಾರಿಸಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನೆಲಮಂಗಲ ಬಸವರಾಜು ಮಾತನಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ( ರಿ.ನಂ. 47/74-75,) ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನೆಡೆಸಲಾಗುತ್ತಿದ್ದು ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ದವಾದ ಅಧಿಕಾರವಿದೆ . ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಈ ಆದೇಶವನ್ನು ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ದಿನಾಂಕ:01.08.2024 ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು . ಕಳೆದ 30 ವರ್ಷಗಳಿಂದ ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಅಲ್ಲದೇ ಇದು ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಈ ಹಿಂದೆ ಈ ವಿಚಾರದಲ್ಲಿ ಪರಸ್ಪರ ವಿರುದ್ಧವಾದ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಈಗ ಸಿಜಿಐ ಡಿ. ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ವಿಚಾರದಲ್ಲಿದ್ದ ಗೊಂದಲವನ್ನು ಪರಿಹರಿಸಿದೆ. ಪರಿಶಿಷ್ಟಜಾತಿಗಳ ಒಳಗೆ ಇರುವ ಕೆಲವು ಉಪಜಾತಿಗಳಿಗೆ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇಂತಹ ಉಪಜಾತಿಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಹಿಂದುಳಿದಿರುವಿಕೆಯ ಆಧಾರದಲ್ಲಿ ಮೀಸಲಾತಿ ನೀಡಿದರೆ ಈ ತನಕ ಮೀಸಲಾತಿಯ ಲಾಭ ಪಡೆದುಕೊಳ್ಳಲು ಸಾಧ್ಯವಾಗದ ಸಮುದಾಯಗಳಿಗೆ ಕೂಡ ಪ್ರಯೋಜನ ದೊರೆಯಬಹುದಾಗಿದೆ. ಆದರೆ ಆದೇಶವನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಈ ಕುರಿತಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುತ್ತಿದೆ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಆದೇಶವನ್ನು ಜಾರಿಗೊಳಿಸಬೇಕೆಂದು ಮನವಿ ಮಾಡುತ್ತೇವೆ ಎಂದರು.

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ರಾಮಮೂರ್ತಿ (ರಾಮು ನೇರಳಘಟ್ಟ) ಮಾತನಾಡಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ನೀಡಿ ಒಂದು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಸದರಿ ಆದೇಶ ವನ್ನು ಅನುಷ್ಠಾನ ಗೊಳಿಸದೆ ಇರುವುದು ವಿಪರ್ಯಾಸ , ನಿದ್ದೆ ಹೊಡೆಯುತ್ತಿರುವ ಸರ್ಕಾರವನ್ನು ಬಡಿದೆಬ್ಬಿಸಬೇಕಾಗಿದೆ.ಈ ಹಿನ್ನೆಲೆಯಲ್ಲಿ ಪ್ರೊ.ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಸುಪ್ರೀಂ ಕೋರ್ಟ್ ತೀರ್ಪು ಅನ್ವಯ ರಾಜ್ಯ ಸರ್ಕಾರ ತಕ್ಷಣವೇ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳಮೀಸಲಾತಿ ಅನುಷ್ಠಾನಗೊಳಿಸಲು ಆಗ್ರಹಿಸಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, “ಬೃಹತ್ ತಮಟೆ ಚಳುವಳಿ” ಮಾಡುವುದರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು

     

    ಪ್ರಮುಖ ಹಕ್ಕೋತ್ತಾಯಗಳೇನು??

    1. ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಆಗಸ್ಟ್ 01-2024 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಮತ್ತು ಈ ತೀರ್ಪುನ್ನು ಅನುಷ್ಠಾನ ಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನ ಗೊಳಿಸಬೇಕು.

     

    2. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪ್ರೊ.ಬಿ. ಕೃಷ್ಣಪ್ಪನವರ ಜನ್ಮ ದಿನವಾದ ಜೂನ್ 09 ನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಮತ್ತು ಪ್ರೊ.ಬಿ.ಕೃಷ್ಣಪ್ಪ ನವರಿಗೆ “ಕರ್ನಾಟಕ ರತ್ನ ” ಪ್ರಶಸ್ತಿ ಯನ್ನು ರಾಜ್ಯ ಸರ್ಕಾರ ನೀಡ ಬೇಕು.

    3. ಬಾಕಿ ಉಳಿದಿರುವ “ಬ್ಯಾಕ್ ಲಾಗ್” ಹುದ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣವೇ ಭರ್ತಿ ಮಾಡಬೇಕು. ಒಳಮೀಸಲಾತಿ ಜಾರಿಯಾಗುವವರೆಗೂ ರಾಜ್ಯ ಸರ್ಕಾರದ ಎಲ್ಲಾ ಹೊಸ ನೇಮಕಾತಿ ಪ್ರಕ್ರಿಯೆಗಳನ್ನು ತಡೆ ಹಿಡಿಯಬೇಕು.

     

    4. ಬಗರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಬೇಕು. ಮತ್ತು ಕಳೆದ ಎರಡು ಮೂರು ತಲೆ ಮಾರುಗಳಿಂದ 3-4 ಎಕರೆ ಯಷ್ಟು ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಉಪ ಜೀವನ ಸಾಗಿಸುತ್ತಿರುವ ಕೃಷಿ ಕಾರ್ಮಿಕರನ್ನು ದೌರ್ಜನ್ಯ ದಿಂದ ಒಕ್ಕಲೆಬ್ಬಿಸದೆ ಪರ್ಯಾಯ ಭೂಮಿ ನೀಡಬೇಕು.

     

    5. ಸಮಾಜ ಕಲ್ಯಾಣ ಇಲಾಖೆ ಯ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲದಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಕಾಯಂ ಗೊಳಿಸಬೇಕು.

     

     

    ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನ ಸಂಚಾಲಕರು ಬಸವರಾಜು, ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನ ಸಂಚಾಲಕರು ಜಿ.ನರಸಿಂಹಮೂರ್ತಿ,ದೊಡ್ಡಬಳ್ಳಾಪುರ ತಾಲ್ಲೂಕು ಸಂಘಟನಾ ಸಂಚಾಲಕ ಬೈಲಾಂಜಿನಮೂರ್ತಿ, ಎನ್.ನರಸಿಂಹಮೂರ್ತಿ,ಮನೋಜ್.ವಿ, ನಾಗರತ್ನಮ್ಮ ಮಲ್ಲೋಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ, ಹನುಮಂತಯ್ಯ, ಹನುಮಯ್ಯ, ತಾಲ್ಲೂಕು ಸಂಘಟನಾ ಸಂಚಾಲಕರಾದ ನಂದಿಗುಂದ ಮೈಲಾರಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *Doddaballapura: ವಿಶ್ವಕರ್ಮ ಯೋಜನೆ ತರಬೇತಿ ಕುರಿತು ಆರೋಪ : ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡುವಂತೆ ಸಾರ್ವಜನಿಕರ ಅಗ್ರಹ*

    ದೊಡ್ಡಬಳ್ಳಾಪುರ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ತರಬೇತಿಯು ಅಧಿಕಾರಿಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಹಾದಿ ತಪ್ಪುತ್ತಿದೆ.

    ನಗರದ ಅರಳು ಮಲ್ಲಿಗೆ ಬಾಗಿಲು ಸಮೀಪವಿರುವ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವಿಶ್ವಕರ್ಮ ಯೋಜನೆಯ ತರಬೇತಿ ನೀಡಲಾಗುತ್ತಿದೆ. ದೀಪಕ್ ಎಂಬುವವರು ತರಬೇತಿ ಕಾರ್ಯಕ್ರಮದ ಗುತ್ತಿಗೆ ಪಡೆದಿದ್ದು, ಫಲಾನುಭವಿಗಳಿಗೆ ಯಾವುದೇ ಸಮರ್ಪಕ ತರಬೇತಿ ನೀಡುತ್ತಿಲ್ಲ ಎನ್ನಲಾಗುತ್ತಿದೆ.

    ಜನರನ್ನು ತರಬೇತಿ ಕೇಂದ್ರಕ್ಕೆ ಕರೆಸಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ದಿನಪೂರ್ತಿ ಅಲ್ಲೇ ಇರಿಸಿಕೊಂಡು ಯಾವ ತರಬೇತಿಯೂ ನೀಡದೇ ಮನೆಗೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಫಲಾನುಭವಿ ಮಹಿಳೆಯೊಬ್ಬರು ಆರೋಪಿಸಿದರು.

    ವಿಶ್ವಕರ್ಮ ಯೋಜನೆ ತರಬೇತಿ ಕುರಿತು ಕೇಳಿಬಂದ ಆರೋಪಗಳಿಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮಾಧ್ಯಮ ಪ್ರತಿನಿಧಿಗಳಿಗೂ ಎಲ್ಲವೂ ಸರಿಯಿಲ್ಲ ಎಂಬುದು ಅರಿವಿಗೆ ಬಂತು.

    ಬುಟ್ಟಿ ನೇಯ್ದೆ ತರಬೇತಿಯು ಕೇವಲ ಲಾಗಿನ್, ಲಾಗ್‌ಔಟ್ ಗೆ ಮಾತ್ರ ಸೀಮಿತವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೂರು ದಿನಗಳಿಂದ ಇಲ್ಲಿನ ತರಬೇತಿ ಕೇಂದ್ರದಲ್ಲಿ ಬುಟ್ಟಿ ನೇಯ್ಕೆ ತರಬೇತಿ ನಡೆಯುತ್ತಿದ್ದು ಯಾವುದೇ ರೀತಿಯ ತರಬೇತಿ ನೀಡದೇ ಬೆಳಿಗ್ಗೆ ಸಂಜೆ ಲಾಗಿನ್, ಲಾಗ್ ಔಟ್ ಮಾಡಿಸಿಕೊಂಡು ಮನೆಗೆ ಕಳುಹಿಸಲಾಗುತ್ತಿದೆ ಎಂದು ತರಬೇತಿ ಪಡೆಯುವವರು ತಿಳಿಸಿದರು.

    ಈ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಕೇಳಿದಾಗ, ತಾಂತ್ರಿಕ ದೋಷ ಇದೆ. ಆದ್ದರಿಂದ ಹೀಗೆ ಆಗುತ್ತಿದೆ ಎಂದು ಹಾರಿಕೆ ಉತ್ತರ ನೀಡಿದರು. ಕುಶಲಕರ್ಮಿಗಳಿಗೆ ಬೂಸ್ಟರ್ ಡೋಸ್ ಆಗಬೇಕಿದ್ದ ಈ ಯೋಜನೆ ಆರಂಭಗೊಂಡು ಬರೋಬ್ಬರಿ ಒಂದು ವರ್ಷ ಕಳೆದರೂ ಯೋಜನೆ ಸರಿಯಾಗಿ ಟೇಕಾಫ್ ಆಗದೇ ಹಳ್ಳ ಹಿಡಿದಿದೆ.

    ಯೋಜನೆಯಡಿ ಗುರುತಿಸಿರುವ 18 ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಪೈಕಿ ಕೇವಲ 2ಕ್ಕೆ ಮಾತ್ರ ತರಬೇತಿ ಸಿಗುತ್ತಿದೆ. ಬಹುತೇಕ ಕೌಶಲ್ಯ ತರಬೇತಿಗಳಿಗೆ ತರಬೇತುದಾರರೇ ಇಲ್ಲದಿರುವುದು ಹಿನ್ನಡೆಗೆ ಕಾರಣವಾಗಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ತರಬೇತಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಅಲ್ಲದೆ ತರಬೇತಿ ಕೇಂದ್ರಗಳ ಸಿಸಿ ಕ್ಯಾಮೆರಾಗಳ ದೃಶ್ಯವನ್ನು ವಶಕ್ಕೆ ಪಡೆದು, ನೀಡಲಾದ ತರಬೇತಿ ಏನು.? ಭಾಗಿಯಾದ ಫಲಾನುಭವಿಗಳು ಎಷ್ಟು..? ತರಬೇತುದಾರರು ಯಾರು..? ಎಂಬ ಕುರಿತು ತನಿಖೆ ನಡೆಸಿ, ತರಬೇತಿ ಹೆಸರಲ್ಲಿ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರಾದ ಮೃತ್ಯುಂಜಯ ಹೇಳಿದ್ದಾರೆ.

  • *ವೇತನ ಕೊಡದ ಖಾಸಗಿ ಕಾರ್ಖಾನೆ ವಿರುದ್ಧ ಕಾರ್ಮಿಕರ ಪ್ರತಿಭಟನೆ*

    ದೊಡ್ಡಬಳ್ಳಾಪುರ : ಕಾರ್ಮಿಕರಿಂದ ಪ್ರತಿ ತಿಂಗಳು ಕೆಲಸ ಮಾಡಿಸಿಕೊಂಡು ಸಂಬಳ ಕೊಡದೆ ಸತಾಯಿಸುತ್ತಿದ್ದ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಒಡೆತನದ ವಯಾ ಜೀನ್ಸ್ ಖಾಸಗಿ ಕಾರ್ಖಾನೆ ವಿರುದ್ಧ ಕೆ ಎಸ್ ಎಂಟರ್ಪ್ರೈಸಸ್ ನ – ಗುತ್ತಿಗೆದಾರ ಏನ್. ಸಿ ಸುರೇಶ್ ಕಾರ್ಖಾನೆ ಮುಂಭಾಗ ಸಂಬಳ ನೀಡುವಂತೆ ಆಗ್ರಹಿಸಿ – ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ)ಯ ಜಿಲ್ಲಾ ಘಟಕ ಅಧ್ಯಕ್ಷ ಪುರುಷೋತ್ತಮ್ ಗೌಡ ಹಾಗೂ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ನಾಯಕ ಪಾಲ್ಗೊಂಡು ಕಾರ್ಮಿಕರಿಗೆ ಸಂಬಳ ಕೊಡುವಂತೆ ಆಗ್ರಹಿಸಿದರು.

     

    ಕೆ.ಎಸ್ ಎಂಟರ್ಪ್ರೈಸಸ್ ನ ಗುತ್ತಿಗೆದಾರ ವಿನ್. ಸಿ. ಸುರೇಶ್ ಮಾತನಾಡಿ ಒಂದುವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಳೆದ 8 ತಿಂಗಳುಗಳಿಂದ ಸಂಬಳ ಕೊಡದೆ ಸತಾಯಿಸುತ್ತಿದ್ದಾರೆ. ಸಂಬಳ ಕೇಳಲು ಹೋದರೆ ನಾಳೆ ಕೊಡುತ್ತೇನೆ ನಾಡಿದ್ದು ಕೊಡುತ್ತೇನೆ ಎಂದು ಸಬೂಬು ಹೇಳುತ್ತಾರೆ. ಸಂಬಳ ಪಡೆಯದ ಕಾರ್ಮಿಕರು ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದು, ಸಂಬಳ ಕೊಡಿಸುವಂತೆ ಕೋರಿ ಕಾರ್ಮಿಕ ಇಲಾಖೆಗೂ ಮನವಿ ಮಾಡಿದ್ದೇನೆ ಆದರೆ ಯಾವುದೇ ರೀತಿ ಪ್ರಯೋಜನವಾಗಿಲ್ಲ, ಕಾರ್ಮಿಕರ ಹಿತ ಕಾಯದ ಕಾರ್ಖಾನೆ ಮಾಲೀಕ ವರ್ತನೆ ನಮಗೆ ಬೇಸರ ತಂದಿದೆ.

    ಈ ಕೂಡಲೇ ಬಾಕಿ ಇರುವ ವೇತನವನ್ನು ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಹಾಗೂ ಮಾಲೀಕರಿಗೆ ಆಗ್ರಹಿಸಿ ಈ ಕಾರ್ಮಿಕರ ಪರ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದರು.

    ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ, ಕನ್ನಡಿಗರ ನೆಲ ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕಾರ್ಖಾನೆಗಳು ಸ್ಥಳೀಯವಾಗಿರುವ ಕನ್ನಡ ಕಾರ್ಮಿಕರಿಗೆ ಸಂಬಳ ಕೊಡದೆ ವಂಚಿಸುತ್ತಿರುವುದು

    ಅಕ್ಷಮ್ಯ ಅಪರಾಧ ನಮ್ಮ ಕರವೇ ಕನ್ನಡಿಗರ ಪರ ಸದಾ ಧ್ವನಿಯಾಗಿರುತ್ತದೆ. ಕಾರ್ಖಾನೆಯ ಈ ಹುಚ್ಚಾಟದಿಂದ 40ಕ್ಕೂ ಅಧಿಕ ಕುಟುಂಬಗಳು ಬೀದಿ ಪಾಲಾಗಿವೆ. ಜೀವನೋಪಾಯಕ್ಕೆಂದು ಕೆಲಸಕ್ಕೆ ಬರುವ ಕಾರ್ಮಿಕರಿಗೆ ಈ ಕಾರ್ಖಾನೆಯು ವೇತನ ಕೊಡದೆ ಮೋಸ ಮಾಡಿದೆ, ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಮಾಲೀಕರು ಈ ಕೂಡಲೇ ಈ ಕುರಿತು ಸಕಾರಾತ್ಮಕ ಸ್ಪಂದಿಸಿ ಕಾರ್ಮಿಕರಿಗೆ ಬಾಕಿ ಇರುವ ವೇತನವನ್ನು ವಿತರಣೆ ಮಾಡಬೇಕಿದೆ ಇಲ್ಲವಾದಲ್ಲಿ ಇದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿದ್ದು, ಮುಂದೆ ಕಾರ್ಖಾನೆ ವಿರುದ್ಧ ಉಗ್ರ ರೂಪಿಸಲಾಗುವುದು ಎಂದರು.

    ಸಂದರ್ಭದಲ್ಲಿ ಕಾರ್ಮಿಕರು, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

  • *ಗೊಂಬೆಯಾಟ ಜನಪದ ರಂಗಭೂಮಿಯ ಒಂದು ಚಮತ್ಕಾರಿ ಮತ್ತು ಆಕರ್ಷಕ  ಕಲೆಯಾಗಿದೆ-ಸಿದ್ದು ಬಿರಾದಾರ*

    ದೊಡ್ಡಬಳ್ಳಾಪುರ (ವಿಜಯಮಿತ್ರ ) : ಗೊಂಬೆಯಾಟವು  ನಮ್ಮ ಸಾಹಿತ್ಯ, ಕಲೆ, ಸಂಗೀತ,‌ ಸಂಸ್ಕೃತಿ  ಪರಂಪರೆಯನ್ನು  ಸಮಾಜಕ್ಕೆ  ತಲುಪಿಸಲು ಸಹಕಾರಿ ಆಗುತ್ತದೆ. ಈ ಕಲೆ ಮನರಂಜನೆಗಷ್ಟೇ ಸೀಮಿತಗೊಳ್ಳದೆ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು  ಗೊಂಬೆಯಾಟ ಕಲಾವಿದ ಮತ್ತು ತರಬೇತುದಾರ ಸಿದ್ದು ಬಿರಾದಾರ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯ  ಸಿದ್ದಿಪ್ರಿಯ ವಿನಾಯಕ  15ನೇ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.  ಕನ್ನಡ ನಾಡಿನ ಅತ್ಯಂತ  ಪ್ರಾಚೀನ ಕಲೆಗಳಲ್ಲಿ ಗೊಂಬೆಯಾಟಯು ಒಂದಾಗಿದೆ.   ಶಾಸನ, ವಚನಗಳಲ್ಲಿ ಮತ್ತು ದಾಸರ ಹಾಡುಗಳಲ್ಲಿ ಗೊಂಬೆಯಾಟದ ಉಲ್ಲೇಖಗಳಿವೆ.   ಗೊಂಬೆಯಾಟ ಜನಪದ ರಂಗಭೂಮಿಯ ಒಂದು ಚಮತ್ಕಾರಿ ಮತ್ತು ಆಕರ್ಷಕ  ಕಲೆಯಾಗಿದೆ.  ಸೂತ್ರಧಾರ  ತೆರೆಯ ಮರೆಯಲ್ಲೆ ಇದ್ದು ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡುವ ವಿಶೇಷ ಕಲಾ ಪ್ರಕಾರವಾಗಿದೆ ಎಂದರು.

    ವಿಶೇಷ ಗೊಂಬೆಯಾಟ ಪ್ರದರ್ಶನ :  ಸೋಮೇಶ್ವರ ಬಡಾವಣೆಯ ಸಿದ್ದಿಪ್ರಿಯ ವಿನಾಯಕ 15 ನೇ ವಾರ್ಷಿಕೋತ್ಸವ ಅಂಗವಾಗಿ  ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಹೊಂಗಿರಣ ಗೊಂಬೆಯಾಟ ತಂಡದ ಕಲಾವಿದರು ನಡೆಸಿಕೊಟ್ಟ ಪ್ರದರ್ಶನ ಪ್ರೇಕ್ಷಕರಿಗೆ ಆಕರ್ಷಣೆಯಾಗಿತ್ತು.

    ರಾಮಾಯಣದ  ಸೀತಾಪಹರಣ ಪ್ರಸಂಗ,  ಮಹಾಭಾರತದ ಏಕಲವ್ಯ ಪ್ರಸಂಗ, ಐತಿಹಾಸಿಕವಾದ ಸಂಗೊಳ್ಳಿ ರಾಯಣ್ಣ ಪ್ರಸಂಗ, ಸಮಾಜಕ್ಕೆ ಶರಣರ ಕೊಡುಗೆ, ಮಕ್ಕಳ ಹಾಡುಗಳು ಸರಿದಂತೆ ಹಲವಾರು ಗೊಂಬೆಯಾಟದ ಪ್ರಸಂಗಗಳು ಮೆಚ್ಚುಗೆ ಪಡೆದವರು.  ಹೊಂಗಿರಣ ಗೊಂಬೆಯಾಟ ಕಲಾ ತಂಡದ ಸಿದ್ದು ಬಿರಾದಾರ, ಸೂರಜ್, ವಿಜಯ ಕುಮಾರ್, ಪ್ರಜ್ವಲ್, ಅಕ್ಷತ್, ಗಣಪತಿ, ನಾರಾಯಣ್, ಓಂಕಾರ್ ಕಲಾವಿದರು ಗೊಂಬೆಯಾಟ ಪ್ರದರ್ಶನ ನಡೆಸಿಕೊಟ್ಟರು.

    ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ    ವಡ್ಡರಹಳ್ಳಿ ರವಿಕುಮಾರ್, ನಗರಸಭಾ ಸದಸ್ಯ ಪದ್ಮನಾಭ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಹಾಲಿಂಗಯ್ಯ, ಸಿದ್ದಿಪ್ರಿಯ ವಿನಾಯಕ ಮಂಡಲಿಯ ವಿಶ್ವೇಶ್ವರಯ್ಯ, ಸೋಮಣ್ಣ, ಆನಂದ್, ಮನೋಹರ್, ಚೇತನ್, ವಿನೋದ್, ಚಂದನ್, ನವೀನ್, ಮಂಜುನಾಥ್, ಕಾರ್ತಿಕ್ ಮೊದಲಾದವರು ಭಾಗವಹಿಸಿದ್ದರು.

  • *ಸಂಘವು ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಘಕ್ಕಕೆ ಹಾಲಿನ ಪೂರೈಕೆ ಹೆಚ್ಚಾಗಬೇಕು – ಎಂ ಅನಿತಾ*

    ದೊಡ್ಡಬಳ್ಳಾಪುರ (ವಿಜಯಮಿತ್ರ ): ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಘಕ್ಕಕೆ ಹಾಲಿನ ಪೂರೈಕೆ ಹೆಚ್ಚಾಗಬೇಕು ಎಂದು ದೊಡ್ಡಬಳ್ಳಾಪುರದ ಶೀತಲ ಕೇಂದ್ರದ ವಿಸ್ತರಣಾಧಿಕಾರಿಗಳಾದ ಶ್ರೀಮತಿ ಎಂ. ಅನಿತಾ   ಹೇಳಿದರು.

    ದೊಡ್ಡಬಳ್ಳಾಪುರ ತಾಲ್ಲೂಕಿನ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2023 – 2024 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು.

    ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಶುದ್ಧವಾದ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಸಂಘವು  ಉಳಿಯುತ್ತದೆ ಮತ್ತು ಸರ್ಕಾರದ ಪ್ರೋತ್ಸಾಹ ಧನ ರೈತರಿಗೆ ಬರಲು ಅನುಕೂಲವಾಗುತ್ತದೆ,  ರೈತರು ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ  ಯಾವುದೇ ನಷ್ಟ ಇಲ್ಲ, ರಾಸುಗಳಿಗೆ ಯಾವಾಗಲೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು, ಹಾಲು ಹಿಂಡಲು ಮತ್ತು ಹಾಲನ್ನು ಸಂಘಕ್ಕೆ ತರಲು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನೇ ಬಳಸಿದರೆ ಬಹಳ ಒಳ್ಳೆಯದು, ಹಾಲು ಕರೆಯುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಕೆಚ್ಚಲನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಬೇಕು ಎಂದರು.

    ಸಂಘದ ಅಧ್ಯಕ್ಷರಾದ ಮನಿಅಂಜಿನಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದು ನಂದಿನಿ  ಹಾಲು ಮತ್ತು ಹಾಲಿನ ಉತ್ಪನ್ನಗಳು ಹೊರ ರಾಜ್ಯಗಳಿಗೆ ಅಲ್ಲದೆ ಪಾಶ್ಚಾತ್ಯ ದೇಶಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿರುವುದು ನಂದಿನಿ ಹಾಲಿನ ಉತ್ಕೃಷ್ಟತೆಗೆ ಸಾಕ್ಷಿ, ಆರೋಗ್ಯವಂತ ರಾಸುವಿನ ಶುದ್ಧ ಗುಣಮಟ್ಟದ ಹಾಲನ್ನು ಮಾತ್ರ ಸಂಘವು ತೆಗೆದುಕೊಳ್ಳುತ್ತದೆ, ಕೆಚ್ಚಲು ಬಾವು ಇರುವ ಹಾಲನ್ನು ಸಂಘಕ್ಕೆ ಸರಬರಾಜು ಮಾಡಬಾರದು,ಉತ್ತಮ ಗುಣಮಟ್ಟದ ಹಾಲಿಗೆ ಮಾತ್ರ 5 ರೂ. ಪ್ರೋತ್ಸಾಹ ಧನ ಬರುತ್ತದೆ, ಬಮೂಲ್ ನಿಂದ ರೈತರಿಗೆ ಜೋಳ, ರಾಸುಗಳಿಗೆ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳು, ಹಾಲು ಕರೆಯುವ ಯಂತ್ರಗಳು, ಸಂಘದ ಕಟ್ಟಡ ಕಟ್ಟಲು ಕೆ.ಎಂ.ಎಫ್ ನಿಂದ ಅನುದಾನಗಳು, ಬೆಂಗಳೂರು ಹಾಲು ಒಕ್ಕೂಟದಿಂದ ಅನುದಾನಗಳು, ರೈತರ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ,ನೂತನ ಕಟ್ಟಡಗಳಿಗೆ  ಪೀಠೋಪಕರಣಗಳು, ಪಶು ಆಹಾರ,   ಸಂಘದ ಒಳಿತಿಗಾಗಿ ಸಾಲ ಸೌಲಭ್ಯ ಮತ್ತಿತರ ಸೇವೆ, ಸೌಲಭ್ಯಗಳನ್ನು ರೈತರು ಮತ್ತು ಸಂಘಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಸಂಘದ ಮುಖ್ಯಕಾರ್ಯನಿರ್ವಾಹಕ ಡಾ.ಎಂ ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು..

    ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಹನುಮಂತ ಗೌಡ, ನಿರ್ದೇಶಕರಾದ ಎಂ.ರಾಮಪ್ಪ, ಎಂ.ಮಾರಪ್ಪ, ಕೃಷ್ಣಪ್ಪ, ಮುನಿಕೃಷ್ಣ, ಅಕ್ಕಯಮ್ಮ, ನಾರಾಯಣಪ್ಪ, ವೆಂಕಟಲಕ್ಷ್ಮಮ್ಮ, ಅಕ್ಕಯಮ್ಮ, ಭಾಗ್ಯಮ್ಮ, ಮತ್ತಿತರರು ಹಾಜರಿದ್ದರು.

  • *ಮೌನವಾಗಿ ಕೆಲಸ ಮಾಡಿ, ಫಲಿತಂಶದಿಂದಲೇ ಸದ್ದು ಮಾಡುವ ಗುಣ ನಿಜಕ್ಕೂ ಶ್ಲಾಘನೀಯ – ಹಮಾಮ್ ವೆಂಕಟೇಶ್*

    ಬಾಶೆಟ್ಟಿಹಳ್ಳಿ ಪ್ರೌಢಶಾಲೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರಿಂದ ಸೋಮವಾರ ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾರಾಯಣಸ್ವಾಮಿ ಸೇವೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿರುವ ಹಿನ್ನಲೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

     

     

    ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಮೇಶ್‌ ಮಾತನಾಡಿ ಸಮಾಜಕ್ಕೆ ಉತ್ತಮ ಶಿಕ್ಷಕರ ಅಗತ್ಯವಿದ್ದು, ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾರಾಯಣಸ್ವಾಮಿ ಸೇವೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ದೊಡ್ಡಬಳ್ಳಾಪುರದ ಹೆಮ್ಮೆಯ ವಿಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.

     

    ಬಾಶೆಟ್ಟಿಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಸ್ಥಾನಮಾನ ಸಿಗುವ ನಿಟ್ಟಿನಲ್ಲಿ ನಾರಾಯಣಸ್ವಾಮಿ ಅವರ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ ಎಂದರು.

     

    ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್ ಮಾತನಾಡಿ, ಶಿಕ್ಷಕ ವೃತ್ತಿಯೆನ್ನುವುದು ಸಮಾಜ ನಿರ್ಮಾಣದಲ್ಲಿ ಅತ್ಯಂತ ವಿಶೇಷ ಸ್ಥಾನ ಪಡೆದಿದೆ. ಈ ಹಂತದಲ್ಲಿ ನಾರಾಯಣಸ್ವಾಮಿ ಅವರ ಕೊಡುಗೆ ಎಲ್ಲರಿಗೂ ಮಾದರಿ. ಮೌನವಾಗಿ ಕೆಲಸ ಮಾಡಿ, ಫಲಿತಾಂಶದಿಂದಲೇ ಸದ್ದು ಮಾಡುವ ಗುಣ ನಿಜಕ್ಕೂ ಶ್ಲಾಘನೀಯ ಎಂದರು.

     

    ಕಾರ್ಯಕ್ರಮದಲ್ಲಿ ಕಾನೂನು ಸಲಹೆಗಾರ ಆನಂದ್,ಕಾರ್ಯದರ್ಶಿಗಳಾದ ಮಂಜುನಾಥ್, ಸಿರಾಜ್ ಪಾಷಾ, ಮುಕ್ಕೇನಳ್ಳಿ ರವಿ, ನಗರಾಧ್ಯಕ್ಷ ಶ್ರೀನಗರ ಬಶೀರ್, ನಗರ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ರಾಜಘಟ್ಟ ಮಹೇಶ್, ರವಿ, ಕೆಂಪೇಗೌಡ, ರಾಜಣ್ಣ, ಶ್ರೀನಿವಾಸ್, ಬಾಶೆಟ್ಟಿಹಳ್ಳಿ ಕೃಷ್ಣಪ್ಪ, ವಿಶ್ವಣ್ಣ, ರಾಜಣ್ಣ ಇದ್ದರು.

  • *ಕರ್ನಾಟಕದಲ್ಲಿ “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ “ಆಸ್ತಿತ್ವಕ್ಕೆ.*

    ಬೆಂಗಳೂರಿನ ಕಾನ್ಶಿರಾಮ್ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಕಾನ್ಶಿರಾಮ್ ಸಾಹೇಬರ ಅನುಯಾಯಿಗಳ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ ಬಹುಜನ ಸಮಾಜ ಪಾರ್ಟಿ ರಾಜಕೀಯ ಪಕ್ಷದ ಹೆಸರನ್ನು “ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ” ಎಂದು ಘೋಷಣೆ ಮಾಡಲಾಯಿತು.

    ಬಹುಜನ ಸಮಾಜ ಚಳುವಳಿಯ ಹಿರಿಯ ನಾಯಕ ಮಾರಸಂದ್ರ ಮುನಿಯಪ್ಪ ಅವರನ್ನು ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜೊತೆಗೆ ಬಹುಜನ ಚಳುವಳಿಯ ಹಿರಿಯ ನಾಯಕರಾದ ಎಂ. ಗೋಪಿನಾಥ್ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಮತ್ತು ಆರ್ ಮುನಿಯಪ್ಪ ಅವರನ್ನು ರಾಜ್ಯ ಸಂಯೋಜಕರನ್ನಾಗಿ ಆಯ್ಕೆ ಮಾಡಲಾಯಿತು.ಅಲ್ಲದೆ, 12 ಜನ ಹಿರಿಯ ನಾಯಕರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿಯೂ, 21 ಜನ ಮುಖಂಡರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ, 17 ಜನ ಮುಖಂಡರನ್ನು ರಾಜ್ಯ ಕಾರ್ಯದರ್ಶಿಗಳನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೆಯೇ 24 ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಯಿತು.

     

    ಕನಕಪುರದ ಆಕಾಶ್ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಮತ್ತು ಬಾಮ್ಸೆಫ್ ನ ಹಿರಿಯ ಮುಖಂಡರಾದ ಬಿಎಸ್ಎನ್ಎಲ್ ಚಂದ್ರಶೇಖರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಹಾಗೂ ಬೆಂಗಳೂರಿನ ಬಹುಜನ ಚಳುವಳಿಯ ನಾಯಕ ಎಮ್ ಸತೀಶ್ ಚಂದ್ರ ಅವರು ಸ್ವಾಗತ ಕೋರುವ ಮೂಲಕ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು .

     

    ಸಭೆಯನ್ನು ಉದ್ದೇಶಿಸಿ ಎಂ. ಗೋಪಿನಾಥ್,ಆರ್ ಮುನಿಯಪ್ಪ, ವೆಂಕಟಗಿರಿಯಯ್ಯ, ಲೋಕೇಶ್ ಚಂದ್ರ, ಮಣ್ಣೂರ್ ನಾಗರಾಜ್, ಪ್ರೊಫೆಸರ್ ಮೊಹಮ್ಮದ್ ಆಲಿ, ಕೆ.ಬಿ.ವಾಸು,ವೈ.ಸಿ. ಕಾಂಬಳೆ, ಗುರುಮೂರ್ತಿ ಮುಂತಾದವರು ಮಾತನಾಡಿದರು.

     

     

    ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾರಸಂದ್ರ ಮುನಿಯಪ್ಪ ಮಾತನಾಡಿ ಹೊಸ ಪಕ್ಷದ ಹುದ್ದೆಯನ್ನು ವಹಿಸಿಕೊಂಡು ಬಾಬಾಸಾಹೇಬರ ಮತ್ತು ಕಾನ್ಶಿರಾಮ್ ಜೀ ಅವರ ಕನಸು ನನಸು ಮಾಡಲು ಶ್ರಮಿಸುವುದಾಗಿ ಘೋಷಣೆ ಮಾಡಿದರು.

    ಕಾರ್ಯಕ್ರಮದಲ್ಲಿ ರಾಜ್ಯದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.

  • *ಟೋಲ್ ಸಂಗ್ರಹಿಸುವ ಪರವಾನಿಗೆ ರದ್ದು ಪಡಿಸುವಂತೆ ಅಗ್ರಹಿಸಿ ಶಾಸಕ ಧೀರಜ್ ಮುನಿರಾಜು ಪತ್ರ ರವಾನೆ*

    ದೊಡ್ಡಬಳ್ಳಾಪುರ: ಬೆಂಗಳೂರುನಿಂದ ಹಿಂದೂಪುರ ಸಂಪರ್ಕಿಸುವ ರಸ್ತೆಯ ಟೋಲ್ ಸಂಗ್ರಹಿಸುವ ಕಂಪನಿಯ ಪರವಾನಗಿಯನ್ನು ರದ್ದುಪಡಿಸುವಂತೆ ಕೋರಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಪತ್ರರವಾನಿಸಿದ್ದಾರೆ.

     

    ತಾಲ್ಲೂಕಿನ ಗಡಿ ಭಾಗದಲ್ಲಿ ಟೋಲ್ ಸಂಗ್ರಹಿಸುವ ಪರವಾನಿಗೆ ಪಡೆದ ರಾಮಲಿಂಗಮ್ ಕನ್ಸಕ್ಷನ್ ಕಂಪನಿ, ಲಿಮಿಟೆಡ್ ಈ ಕಂಪನಿಯು ಬೆಂಗಳೂರುನಿಂದ ಹಿಂದೂಪುರ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಟೋಲ್ ಸಂಗ್ರಹಿಸುತ್ತಿದ್ದು ಇವರು ಸಂಚಾರಿ ನಿರ್ವಹಣಾ ನಿಯಮ ಪಾಲಿಸದೆ ಉಲ್ಲಂಘಿಸಿರುವುದರಿಂದ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಅಪಘಾತವಾಗುತ್ತಿದ್ದು ಸಂಚಾರರಿಗೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರು ಇವರ ಬೇಜವಬ್ದಾರಿ ನಿರ್ವಹಣೆ ಬಗ್ಗೆ ಮನವಿ ಮಾಡಿದ್ದು.ಟೋಲ್ ಸಂಗ್ರಹಿಸುವ ರಾಮಲಿಂಗಮ್ ಕನ್ಸಕ್ಷನ್ ಕಂಪನಿ ಲಿಮಿಟೆಡ್ ಕಂಪನಿಯ ಪರವಾನಗಿಯನ್ನು ರದ್ದು ಪಡಿಸಲು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

  • *ಜಿಲ್ಲಾಡಳಿತ ಭವನದಲ್ಲಿ 58ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆಪ್ಟೆಂಬರ್ 08 (ವಿಜಯಮಿತ್ರ): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಲೋಕ ಶಿಕ್ಷಣ ವಿಭಾಗ), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಇಲಾಖೆ ಮತ್ತು ಡಯಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲ್ಲೂಕಿನ, ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದ ಆವರಣದಲ್ಲಿಂದು 58 ನೇ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

    ಜಿಲ್ಲಾ ಪಂಚಾಯತಿ ಯೋಜನ ನಿರ್ದೇಶಕರಾದ ವಿಠ್ಠಲ್ ಕಾವ್ಳೆ ಅವರು ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

     

    ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ‌ ನಿರ್ದೇಶಕರಾದ ಕೃಷ್ಣಮೂರ್ತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಶಶಿಕುಮಾರ್, ಶಿಕ್ಷಕವೃಂದ‌, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇಲಾಖಾ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

  • *ಶಿಕ್ಷಕರ ದಿನಾಚರಣೆ ವಿಶೇಷ : ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕಚೇರಿಯಲ್ಲಿ ಶಿಕ್ಷಕರಿಗೆ ಗೌರವ ಸಮರ್ಪಣೆ*

    ದೊಡ್ಡಬಳ್ಳಾಪುರ (ವಿಜಯಮಿತ್ರ) : ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಕಛೇರಿಯಲ್ಲಿ ಭಾರತರತ್ನ ಸರ್ವಪಲ್ಲಿ ಡಾ. ರಾಧಾಕೃಷ್ಣರವರ ಫೋಟೋ ಇಟ್ಟು ಪೂಜೆ ಸಲ್ಲಿಸುವ ಮುಖಾಂತರ ಶಿಕ್ಷಕರ ದಿನಾಚರಣೆಯನ್ನುಆಚರಣೆ ಮಾಡಲಾಯಿತು.

    ಪೋಷಕರ ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಸಂಸ್ಕಾರ ಕಲಿಸಿ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೂಯ್ಯಲುವ ಶಿಕ್ಷಕ ಮುಂದೆ ಸಮಾಜದ ದಾರಿ ದೀಪವಾಗಿ ಬೆಳಗಿಸುತ್ತಾರೆ ಮಕ್ಕಳು ತಪ್ಪು ಮಾಡಿದಾಗ ಗುರುಗಳು ಶಿಕ್ಷೆ ನೀಡಿದರು ತಪ್ಪು ಎಂದರೆ ಅವರಿಗೆ ಉತ್ತಮ ಮಾರ್ಗದರ್ಶನ ನೀಡುವುದು ಯಾರು ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ನಂಜಪ್ಪ ತಿಸಿದರು.

     

    ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ ಮಾತನಾಡಿ ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣ ರವರು ರಾಷ್ಟ್ರಪತಿಗಳಾಗಿ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಉತ್ತಮ ಶಿಕ್ಷಕರಾಗಿ ದೇಶ ಹಾಗು ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ಶ್ರೇಷ್ಠ ಶಿಕ್ಷಕರಾಗಿ ಮಕ್ಕಳಿಗೆ ತಿದ್ದಿ ಬುದ್ದಿ ಹೇಳಿ ವಿದ್ಯೆಯ ಜೊತೆಯಲ್ಲಿ ಒಳ್ಳೆಯ ಸಂಸ್ಕಾರ ನೀಡಿದ ನಂತರ ರಾಷ್ಟ್ರಪತಿಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಪ್ರತಿಯೋಬ್ಬರು ಗುರುವಿನ ಮಾರ್ಗದರ್ಶನ ಪಡೆಯುವ ಜೊತೆಗೆ ಅವರನ್ನು ಪ್ರೀತಿ ಗೌರವಿಸುವುದನ್ನು ಪಾಲಿಸಿದರೆ ಜೀವನ ಉಜ್ವಲವಾಗುತ್ತದೆ ಎಂದರು.

    ಈ ಸಂದರ್ಭದಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಮಂಜುನಾಥ. ಪಣೀಶ್ ಅಜಯ್. ನವೀನ್ ಕುಮಾರ್. ಗಂಗರಾಜ್ ಶಶಿಕಲಾ ರೇಷ್ಮಾ ಬಾನು ರಾಗಿಣಿ ಕಾವ್ಯ ಪದ್ಮಾವತಿ ತಾಲ್ಲೂಕು ಪದಾಧಿಕಾರಿಗಳು ಭಾಗವಹಿಸಿದ್ದರು.