Blog

  • ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಚುನಾವಣೆ : ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು ಆಯ್ಕೆ

    ದೊಡ್ಡಬಳ್ಳಾಪುರ ಸೆ. 23( ವಿಜಯ ಮಿತ್ರ ) : ತಾಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ನಿರಂತರ ಪೈಪೋಟಿ ನಡುವೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ 12 ಮತಗಳನ್ನು ಪಡೆದೆರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಶಿಕಲಾ ನಾಗರಾಜು 12 ಮತಗಳನ್ನು ಪಡೆದರು. ಎರಡು ಪಕ್ಷದ ಅಭ್ಯರ್ಥಿಗಳು ಸಮ ಮತಗಳನ್ನು ಪಡೆದ ಕಾರಣ ಲಾಟರಿ ಮೂಲಕ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಯಿತು.

    ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು ಜಯಭೇರಿ ಬಾರಿಸಿದ್ದಾರೆ.

     

    ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ನಾಗರಾಜು ರವರಿಗೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಗ್ರಾಮಸ್ಥರು ಪುಷ್ಪ ಮಾಲೆ ನೀಡಿ, ಜೈಕಾರ ಕೂಗುವ ಮೂಲಕ ಸಂಭ್ರಮಿಸಿದರು.

    ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಶಶಿಕಲಾ ನಾಗರಾಜು ಮಾತನಾಡಿ ಈ ಗೆಲುವಿಗಾಗಿ ಕಳೆದ 12 ವರ್ಷಗಳಿಂದ ಶ್ರಮಿಸಿದ್ದೇನೆ . ಇದು ನನ್ನ ಗೆಲುವಲ್ಲ ಸತ್ಯದ ಗೆಲುವಾಗಿದೆ. ನನ್ನ ಬೆಂಬಲವಾಗಿ ನಿರಂತರ ಶ್ರಮಿಸಿದ ಪಕ್ಷದ ಮುಖಂಡರು ಹಾಗೂ ಸ್ಥಳೀಯ ಸದಸ್ಯರಾದ ನಾಗೇಶ್ ಗೌಡ, ಜೆ ವೈ ಮಲ್ಲಣ್ಣ, ಸುರೇಶ್, ನಾಗರಾಜು ರವರಿಗೆ ಈ ಗೆಲುವು ಸಲ್ಲುತ್ತದೆ . ನನ್ನ ಪಕ್ಷದ ಎಲ್ಲಾ ಸಹ ಸದಸ್ಯರ ಬೆಂಬಲದಿಂದ ಇಂದಿನ ಈ ಗೆಲುವು ನನ್ನಗೆ ಲಭಿಸಿದೆ. ಸದಸ್ಯರ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಹೆಚ್ಚಿನ ಅನುದಾನ ತರುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಎಲ್ಲಾ ಸದಸ್ಯರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ವಿಜಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲ ಮುಖಂಡರಿಗೂ, ಹಿರಿಯರಿಗೂ, ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು .

    ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಗೌಡ ಮಾತನಾಡಿ ಕಾಂಗ್ರೆಸ್ ದುರಾಡಳಿತದ ವಿರುದ್ಧ ಇಂದು ನಮಗೆ ಜಯ ಸಿಕ್ಕಿದೆ, ಸದಸ್ಯರು ಸೂಕ್ತ ವ್ಯಕ್ತಿಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ . ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಶಶಿಕಲಾ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಪಂಚಾಯಿತಿ ಶೋಭಾ ಭಾಯಿ ಪ್ರಕಾಶ್ ರವರು ಆಯ್ಕೆಯಾಗಿದ್ದಾರೆ. ಹಿರಿಯರ ಮಾರ್ಗದರ್ಶನ ಹಾಗೂ ಸ್ಥಳೀಯ ಶಾಸಕರಿಂದ ಹೆಚ್ಚಿನ ಅನುದಾನಗಳನ್ನು ತರುವ ಮೂಲಕ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ದರ್ಗಾಜೋಗಿಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ನೂತನ ಅಧ್ಯಕ್ಷರ ಅವಧಿಯಲ್ಲಿ ಉತ್ತಮ ಸೇವೆಗಳನ್ನು ಸಲ್ಲಿಸುವ ಮೂಲಕ ಈ ಗೆಲುವನ್ನು ಸಂಭ್ರಮಿಸಲಾಗುವುದು ಎಂದರು.

    ಪಂಚಾಯತಿ ಸದಸ್ಯ ಹಾಗೂ ವಕೀಲರಾದ ಸುರೇಶ್ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವಿಕೆ ಮನಗಂಡ ಸದಸ್ಯರು ಇಂದು ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ಉತ್ತಮ ಅಭ್ಯರ್ಥಿಯನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಪಂಚಾಯಿತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ತಾಲೂಕಿಗೆ ಮಾದರಿ ಪಂಚಾಯಿತಿಯನ್ನಾಗಿ ರೂಪಿಸುವ ಉದ್ದೇಶ ಹೊಂದಿದ್ದೇವೆ, ಈ ನಿಟ್ಟಿನಲ್ಲಿ ಸರ್ವ ಸದಸ್ಯರು ಅಧ್ಯಕ್ಷರ ಬೆಂಬಲವಾಗಿ ಸ್ಪಂದಿಸಿ ಉತ್ತಮ ಕಾರ್ಯಗಳ ಸಾಧನೆಗೆ ಮುಂದಾಗುತ್ತೇವೆ ಎಂದರು.

     

    ಗ್ರಾಮ ಪಂಚಾಯತಿ ಸದಸ್ಯ ಜೆ ವೈ ಮಲ್ಲಣ್ಣ ಮಾತನಾಡಿ ಇಂದು ನಮ್ಮ ಪಂಚಾಯಿತಿಯಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವಾಗಿದ್ದು . ಸರಳ ಮತ್ತು ಸಜ್ಜನ ವ್ಯಕ್ತಿತ್ವದ ಸದಸ್ಯೆ ಶಶಿಕಲಾ ನಾಗರಾಜು ರವರು ನಮ್ಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಶೋಭಾಬಾಯಿ ಪ್ರಕಾಶ್ ಆಯ್ಕೆಯಾಗಿದ್ದಾರೆ ಅವರಿಗೆ ಶುಭವಾಗಲಿ ,ಉತ್ತಮ ಸೇವೆ ಸಲ್ಲಿಸಲು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ ಎಲ್ಲರೂ ಒಗ್ಗೂಡಿ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಸದಸ್ಯರ ಪ್ರತಿ ಮತಗಳಿಗೂ ಗೌರವ ಸಲ್ಲಿಸುತ್ತೇವೆ ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ, ಪಂಚಾಯಿತಿ ಸದಸ್ಯರಾದ ಶೋಭಾ ಭಾಯಿ ಪ್ರಕಾಶ್, ಜಯಶ್ರೀ ನಂದೀಶ್, ಪ್ರಕಾಶ್, ಸುರೇಶ್, ಆನಂದಮ್ಮ ಮುನಿರಾಜು,ಮಮತಾ ಮಾರುತಿ, ಅಂಜಿನಮ್ಮ ರಂಗಪ್ಪ, ನಾಗೇಶ್, ಮಲ್ಲಣ್ಣ , ಜನಾರ್ಧನ್, ಹಾಗೂ ಸ್ಥಳೀಯ ಮುಖಂಡರಾದ ನಾಗರಾಜು, ಮಂಜುನಾಥ್, ಚಂದ್ರು, ಪರಮೇಶ್ವರಯ್ಯ, ಮನೋಜ್, ಗುರು, ಸುನಿಲ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ : ತಾಲೂಕು ಅಧ್ಯಕ್ಷರಾಗಿ ಕೆ ವಿ ನಾಗರಾಜು ಅಧಿಕಾರ ಸ್ವೀಕಾರ

    ದೊಡ್ಡಬಳ್ಳಾಪುರ ಸೆ. 20( ವಿಜಯಮಿತ್ರ ) : ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣಕ್ಕಾಗಿ ನಮ್ಮನ್ನು ಬೆಂಬಲಿಸಿ ಸಾವಿರಾರು ನೂತನ ಸದಸ್ಯರು ಕೆ ಆರ್ ಎಸ್ ಪಕ್ಷ ಸೇರುತ್ತಿದ್ದಾರೆ. ಇದು ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆಡೆದಿದ್ದು, ನೂತನ ಪದಾಧಿಕಾರಿಗಳ ಬರುವಿಕೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್ ತಿಳಿಸಿದರು.

    ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕಿನ ಕೆ ಆರ್ ಎಸ್ ಕೇಂದ್ರ ಕಚೇರಿಯಲ್ಲಿ ನೆಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜಕಾರಣ ಎಂದರೆ ಕೇವಲ ಮೋಸ ಸುಳ್ಳು ವಂಚನೆ ಎಂಬುದೇ ಆಗಿದೆ. ಈ ದೃಷ್ಟಿಕೋನವನ್ನು ಬದಲಿಸಬೇಕೆಂಬ ಮುಖ್ಯ ಉದ್ದೇಶದಿಂದ ನಮ್ಮ ಕೆಆರ್‌ಎಸ್ ಪಕ್ಷ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ನಮ್ಮ ಪಕ್ಷದ ಶಕ್ತಿ ಏನೆಂಬುದು ರಾಜ್ಯದ ಉದ್ದಗಲಕ್ಕೂ ತಿಳಿದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸಲಹೆ ಮೇರೆಗೆ ದೊಡ್ಡಬಳ್ಳಾಪುರ ತಾಲೂಕು ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚನೆ ಮಾಡಲಾಗಿದೆ. ತಾಲೂಕು ಸಮಿತಿಯ ಕಾಲಾವದಿ ಮೂರು ವರ್ಷ ಅಥಾವ ಜಿಲ್ಲಾ ಕಾರ್ಯಕಾರಿ ಸಮೀತಿಯ ವಿಶ್ವಾಸ ಇರುವ ತನಕ ಆಗಿರುತ್ತದೆ.ನಮ್ಮ ಕನಸು ಬ್ರಷ್ಟಾಚಾರ ರಹಿತ ಸಮಾಜ ಈ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಮ್ಮ ನೂತನ ಪದಾಧಿಕಾರಿಗಳು ಶ್ರಮಿಸಲಿ ಎಂಬುದೇ ನನ್ನ ಆಶಯ ಎಂದರು.

    ನೂತನ ತಾಲೂಕ್ ಅಧ್ಯಕ್ಷ ಕೆ ವಿ ನಾಗರಾಜು ಮಾತನಾಡಿ ಪಕ್ಷವು ನನಗೆ ನೂತನ ಜವಾಬ್ದಾರಿ ವಹಿಸಿದ್ದು, ನನ್ನ ಹುದ್ದೆಯ ಹಾಗೂ ಪಕ್ಷಕ್ಕೆ ಮತ್ತಷ್ಟು ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ತಾಲೂಕಿನ ಪ್ರತಿ ಹಳ್ಳಿ ಹಾಗೂ ಹೋಬಳಿ ಮಟ್ಟದಲ್ಲಿ ಪಕ್ಷದ ನೂತನ ಘಟಕಗಳನ್ನು ಬೆಳೆಸುವ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಾಗುವುದು ಎಂದರು.

     

     

    ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ :-

    ತಾಲ್ಲೂಕು ಅಧ್ಯಕ್ಷ-ಕೆ.ವಿ. ನಾಗರಾಜು ಕಿಲಾರನ ಹಳ್ಳಿ,ಉಪಾಧ್ಯಕ್ಷರು ಶ್ರೀನಿವಾಸ್.ಡಿ.ಎಂ,ಪ್ರ. ಕಾರ್ಯದರ್ಶಿ ಮುರಹರಿ ಡಿ.ಪಿ,ಕಾರ್ಯದರ್ಶಿ,ಮಂಜುನಾಥ್, ಪಾಪಣ್ಣ,ಜಂಟಿ ಕಾರ್ಯದರ್ಶಿ ಗೌತಮ್ ಗಂಗಪ್ಪ, ಸಂಘಟನಾ ಕಾರ್ಯದರ್ಶಿಬಾಲಕೃಷ್ಣ, ನೂತನವಾಗಿ ಆಯ್ಕೆಯಾಗಿ ಪದಗ್ರಹಣ ಸ್ವೀಕರಿಸಿದರು.

    ತಾಲೂಕು ಸಮಿತಿಯು ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ತಾಲೂಕಿನಾದ್ಯಂತ ಪಕ್ಷವನ್ನು ಸಧೃಡವಾಗಿ ಸಂಘಟಿಸಿ ಜನಪರ ಹೋರಾಟಗಳನ್ನು ಕೈಗೊಳ್ಳಬೇಕೆಂದು ಗಣ್ಯರು ಹಾರೈಸಿದರು.

     

    ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ,ಮಹಿಳಾ ಮುಖಂಡರಾದ ಲಲಿತ, ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕೋಡಿಹಳ್ಳಿ ಸೇರಿದಂತೆ ತಾಲ್ಲೂಕು ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

  • ಹಾಲು ಉತ್ಪಾದಕರ ಅಭಿವೃದ್ಧಿಯೇ ನಮ್ಮ ಮುಖ್ಯ ಉದ್ದೇಶ – ಬಿ. ಸಿ. ಆನಂದ್

    ದೊಡ್ಡಬಳ್ಳಾಪುರ ಸೆ 20 ( ವಿಜಯಮಿತ್ರ ) : ತಾಲೂಕಿನ ಹಾಲು ಉತ್ಪಾದಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿವರ್ಷ 25 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದು. ಅನಾರೋಗ್ಯಕ್ಕೆ ತುತ್ತಾದರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಬಮುಲ್ ನಿರ್ದೇಶಕ ಬಿ ಸಿ ಆನಂದ್ ತಿಳಿಸಿದರು.

    ಶುಕ್ರವಾರ ಲಿಂಗನಹಳ್ಳಿಯಲ್ಲಿ ನೆಡೆದ ಹಾಲು ಉತ್ಪದಕರಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ಹಾಲು ಉತ್ಪಾದಕ ರೈತರಿಗೆ ಉತ್ತಮ ಸೇವೆ ಸಲ್ಲಿಸಲು ನಮ್ಮ ಸಹಕಾರ ಸಂಘ ಸದಾ ಸಿದ್ಧವಿರುತ್ತದೆ. ರೈತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು. ರೈತರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

     

    ಸ್ಥಳೀಯವಾಗಿ ಹಾಲು ಉತ್ಪಾದಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಈ ಸರ್ವ ಸದಸ್ಯರ ಸಭೆ ಅನುಕೂಲಕರವಾಗಿದೆ. ಹಾಲು ಉತ್ಪಾದನೆಯಲ್ಲಿ ಉತ್ತಮ ಸಾಧನೆಗೆ ನಿಮ್ಮೆಲ್ಲರ ಸಹಭಾಗಿತ್ವದ ಅವಶ್ಯಕತೆ ಇದೆ ಎಂದರು.

    ಮುಖಂಡರಾದ ನಾಗೇಶ್ ಮಾತನಾಡಿ ಸ್ಥಳೀಯ ಹಾಲು ಉತ್ಪಾದಕರಿಗೆ ಬ್ಯಾಂಕಿನಿಂದ ಹಣ ಪಡೆಯುವ ವಿಚಾರದ ಸಮಸ್ಯೆ ಇದೆ , ಈ ಕುರಿತಾಗಿ ಕೊನಘಟ್ಟ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕೆನರಾ ಬ್ಯಾಂಕ್ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಬೇಕಿದೆ , ಈ ಕುರಿತು ರೈತರ ಸಲಹೆ ಅತ್ಯಗತ್ಯವಾಗಿದೆ ಎಂದರು.

     

    ಹಾಲು ಉತ್ಪದಕರಿಗೆ ಆರ್ಥಿಕ ನರವಿನ ಅವಶ್ಯಕತೆ ಇದ್ದು ಈ ಕುರಿತು ಸಹಕಾರ ಸಂಘದಲ್ಲಿ ಚರ್ಚೆ ನಡೆಸಿ ಅರ್ಹ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಯೋಜನೆ ರೂಪಿಸಬೇಕಿದೆ ಎಂದರು.

    ಸಭೆಯಲ್ಲಿ ಲಿಂಗನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ನಂಜೇಮರಿ, ಉಪಾಧ್ಯಕ್ಷ ಮುನಿರಾಜು, ನಿರ್ದೇಶಕರಾದ ಪುಟ್ಟಮೂರ್ತಿ, ಸಂಜೀವ್ ಮೂರ್ತಿ, ಶ್ರೀನಿವಾಸ್ ಮೂರ್ತಿ, ಅಂಬಿಕಾ, ಶ್ಯಾಮ್ ಸುಂದರ್, ಮುನಿರಾಜು, ಮುನೇಗೌಡ, ಬಿ. ಆನಂದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

  • *ಅಂಗನವಾಡಿ ಶಿಕ್ಷಕಿಯರಿಂದ ಪೋಷಣ್ ಮಾಸಚಾರಣೆ : ಪೌಷ್ಟಿಕ ಆಹಾರ ಕುರಿತು ಅಗತ್ಯ ಮಾಹಿತಿ ರವಾನೆ*

    ದೊಡ್ಡಬಳ್ಳಾಪುರ ಸೆ 20 ( ವಿಜಯಮಿತ್ರ ) : ಪೋಷಣ್ ಅಭಿಯಾನದ ಅಡಿಯಲ್ಲಿ ಪೋಷಣ್ ಮಾಸಚಾರಣೆ ಮಾಡುವ ಮೂಲಕ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಲಾಗುತ್ತದೆ,ತಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್, ವಿಟಮಿನ್ಸ್,ಪ್ರೋಟೀನ್ಸ್ ಖನಿಜಾಂಶ, ಲವಣಾಂಶ,ನೀರು ಒಳಗೊಂಡಂತ ಸಮತೋಲನ ಆಹಾರವನ್ನು ಸೇವಿಸುವ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮ ಇದಾಗಿದ್ದು. ಈ ಸಾರ್ವಜನಿಕರು ಪೌಷ್ಟಿಕ ಆಹಾರದ ಉಪಯೋಗವನ್ನು ಅರಿಯುವ ಮೂಲಕ ಉತ್ತಮ ಪೋಷಕಾಂಶವುಳ್ಳ ಆಹಾರ ಸೇವಿಸುವಂಥಾಗಲಿ ಎಂಬುದೇ ನಮ್ಮ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವಿಕುಮಾರ್ ತಿಳಿಸಿದರು.

    ನಗರದ ರೋಜಿಪುರ ವಾರ್ಡ್ ನ ಅಂಗನವಾಡಿ ಕೇಂದ್ರದಲ್ಲಿ ಯೋಜನೆ ಮಾಡಲಾಗಿದ್ದ ಪೋಷಣ್ ಮಾಸಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಈ ಕಾರ್ಯಕ್ರಮವು ವೃತ್ತ ಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದು. ಈ ಕಾರ್ಯಕ್ರಮವು ಅಪೌಷ್ಟಿಕತೆಯನ್ನು ಹೋಗಲಾಡಿಸಿ ಸದೃಢ ಸಮಾಜವನ್ನು ನಿರ್ಮಿಸುವ ಮಹತ್ವಕಾಂಕ್ಷೆಯನ್ನು ಹೊಂದಿದೆ. ವಾರ್ಷಿಕವಾಗಿ ಎರಡರಷ್ಟು ಅಪೌಷ್ಟಿಕತೆಯನ್ನು ಹೋಗಲಾಡಿಸುವ ಸಲುವಾಗಿ ಹಾಗೂ ರಕ್ತಹೀನತೆ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಪುರಸ್ಕೃತ ಯೋಜನೆ ಜಾರಿಗೆ ತಂದಿದ್ದು ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರತಿ ಫಲಾನುಭವಿಗಳಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡುವ ಸಲುವಾಗಿ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಪೋಷಣ್ ಅಭಿಯಾನದ ಅಡಿಯಲ್ಲಿ ಇಸಿಸಿ ಡೇ, ಆರೋಗ್ಯ ತಪಾಸಣಾ ಶಿಬಿರಗಳು ಸ್ರೀಮಂತ ಕಾರ್ಯಕ್ರಮ ಸೇರಿದಂತೆ ಹಲವು ಬಗೆಯ ಸಮುದಾಯ ಆಧಾರಿತ ಚಟುವಟಿಕೆಗಳನ್ನು ಸಹ ಕೈಗೊಳ್ಳಲಾಗುತ್ತಿದೆ ಎಂದರು.

     

    ಸ್ಥಳೀಯ ನಗರಸಭಾ ಸದಸ್ಯರಾದ ರಜನಿಸುಬ್ರಮಣ್ಯ ಮಾತನಾಡಿ ಅಪೌಷ್ಟಿಕತೆಯಿಂದ ಪೌಷ್ಟಿಕತೆಯ ಕಡೆಗೆ ಸಮಾಜವನ್ನು ಕೊಂಡೊಯ್ಯುವ ಉತ್ತಮ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಗತ್ಯವಾದ , ಆಹಾರಕ್ಕೆ ಕುರಿತ ವಿವಿಧ ರೀತಿಯ ಮಾಹಿತಿಗಳನ್ನು ನೀಡಲಾಗುತ್ತಿದೆ. ಉತ್ತಮ ಆಹಾರ ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಪೌಷ್ಟಿಕ ಆಹಾರ ಸೇವನೆಯಿಂದ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದರು.

    ಕಾರ್ಯಕ್ರಮದ ಆಯೋಜಕರಾದ ಶೈಲಜಾ ಮಾತನಾಡಿ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಪೋಷಣ್ ಮಾಸಚಾರಣೆ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳಿಗೆ ಹಾಗೂ ಪಲಾನುಭವಿಗಳಿಗೆ ಪೌಷ್ಟಿಕ ಆಹಾರ ಕುರಿತಂತೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಇಂದಿನ ಕಾರ್ಯಕ್ರಮವು ವೃತ್ತ ಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಅಗತ್ಯ ಮಾಹಿತಿ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ನುಗ್ಗೆ ಸೊಪ್ಪು,ಕರಿಬೇವು, ಮೊಳಕೆ ಕಟ್ಟಿದ ಕಾಳುಗಳು ಇತ್ಯಾದಿ ಸೇವಿಸುವ ಮೂಲಕ ಅಪೌಷ್ಟಿಕತೆಯನ್ನು ನಿವಾರಿಸಬಹುದಾಗಿದೆ. ಇಂತಹ ಅಗತ್ಯ ವಿಶೇಷ ಮಾಹಿತಿಗಳನ್ನು ಈ ಕಾರ್ಯಕ್ರಮದ ಮೂಲಕ ಸಮಾಜಕ್ಕೆ ರವಾನಿಸಲಾಗುತ್ತಿದೆ. ಮಕ್ಕಳಲ್ಲಿ ಕಾಣುವ ಅನಿಮಿಯಾ ಸಮಸ್ಯೆ ಹಾಗೂ ಕಿಶೋರಿಯರಿಗೆ ಆಹಾರ ಸೇವನೆ, ಸ್ವಚ್ಛತೆ ಕುರಿತಂತೆ ಪ್ರತಿ ತಿಂಗಳು ಸಭೆ ಮಡುವ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಅನಿತಾ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್, ಮೇಲ್ವಿಚಾರಕರಾದ ಪದ್ಮ, ಸ್ಥಳೀಯ ಮುಖಂಡರು ಹಾಗೂ ವಕೀಲರಾದ ಆರ್ ವಿ ಮಹೇಶ್, ಶಾಲಾ ಶಿಕ್ಷಕಿ ನಾಗರತ್ನಮ್ಮ, ಹರಗೆ ಇಲಾಖೆಯ ಹಿರಿಯ ಮೇಲ್ವಿಚಾರಕರಾದ ವೀಣಾ, ಕಿರಿಯ ಸಹಾಯಕರು ಹಾಗೂ ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.

  • *ದೊಡ್ಡಬಳ್ಳಾಪುರ : ನಗರಸಭಾ ಪೌರಯುಕ್ತರನ್ನು ಭೇಟಿ ಮಾಡಿದ ರಾಜ್ಯವಿ-ಕರವೇ : ನಗರದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಕೋರಿ ಮನವಿ ಸಲ್ಲಿಕೆ*

    ದೊಡ್ಡಬಳ್ಳಾಪುರ : ನಗರದ ವಾರ್ಡ್‌ಲ್ಲೂ (ಇ)ಖಾತೆ ಆಂದೋಲನ ಮತ್ತು ಸ್ವಚ್ಛತೆ, ನೈರ್ಮಲ್ಯ ಕಾಪಾಡುವಂತೆ ಹಾಗೂ ನಗರದ ವಾಣಿಜ್ಯ ಮಳಿಗೆಗಳ ಪರವಾನಿಗೆ ಕೊಡುವಾಗ ಕನ್ನಡ ನಾಮಫಲಕ ಕಡ್ಡಾಯ ಮಾಡುವಂತೆ ಕೋರಿ ನಗರಸಭಾ ಪೌರಯುಕ್ತರಿಗೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

    ಈ ಕುರಿತು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಎ. ನಂಜಪ್ಪ ಮಾತನಾಡಿ ನಗರದಲ್ಲಿ ಪ್ರತಿ ವಾಣಿಜ್ಯ ಮಳಿಗೆಗಳು ಹಾಗೂ ಅಂಗಡಿಗಳು ವ್ಯಾಪಾರ ಮಾಡಲು ದೃಢೀಕರಣ ಕೊಡುವ ನಗರಸಭೆ ಅದರಲ್ಲಿ ಶೇಕಡಾ 60%ರಷ್ಟು ಕನ್ನಡ ಅಕ್ಷರದಲ್ಲಿ ನಾಮಫಲಕ ಕಡ್ಡಾಯ ಇರಬೇಕೆಂದು ತಿಳಿಸಬೇಕಿದೆ ಹಾಗೂ ನಗರಸಭಾ ಕಸದ ಗಾಡಿಗಳ ಮತ್ತು ಅಧಿಕಾರಿಗಳ ಮುಖೇನ ವ್ಯಾಪಾರಸ್ಥರಿಗೆ ಮನವರಿಕೆ ಮಾಡಿವ ಕಾರ್ಯಕ್ಕೆ ನಗರಸಭಾ ಅಧಿಕಾರಿಗಳು ಮುಂದಾಗವಂತೆ ಮನವಿ ಮಾಡಿದ್ದೇವೆ.ಜೊತೆಗೆ ಚರಂಡಿಗಳನ್ನು ಶುಚಿ ಮಾಡುವಾಗ ಕನಿಷ್ಠ 10 ದಿನಕ್ಕೊಮ್ಮೆಯಾದರೂ ಒಮ್ಮೆ ಔಷಧಿ ಸಿಂಪಡಣೆಯನ್ನು ಮಾಡಬೇಕು ಕಾರಣ ಇತ್ತೀಚೆಗೆ ಹರಡುತ್ತಿರುವ ಡೆಂಗ್ಯೂ ಹಾಗೂ ವೈರಲ್ ಫೀವರ್ ತಡೆಯುವ ಪ್ರಯತ್ನ ನೆಡೆಸಬೇಕಿದೆ ಒಳಚರಂಡಿಗಳಲ್ಲಿ ನೀರು ನಿಂತಿರುವ ಕಾರಣಗಳಿಂದ ಸಣ್ಣ ಮಕ್ಕಳು ಹಾಗೂ ಹಿರಿಯರು ನಾಗರೀಕರಿಗೆ ತೊಂದರೆ ಆಗುತ್ತಿರುವುದರಿಂದ ನಮ್ಮ ನಗರ ಬೀದಿ ದೀಪಗಳ ಬಗ್ಗೆ ಗಮನಹರಿಸಬೇಕಿದೆ ಎಂದರು.

    ಈ ಕುರಿತು ನಗರಸಭಾ ಪೌರಯುಕ್ತರು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಇಲ್ಲವಾದಲ್ಲಿ ನಗರಸಭಾ ಕಛೇರಿ ಮುಂದೆಯೇ “ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ”ಯ ಎಲ್ಲಾ ಕನ್ನಡ ಬಂಧುಗಳು ಬಂದು ಸತ್ಯಾಗ್ರಹವನ್ನು ಹಮ್ಮಿಕೊಳ್ಳಬೇಕಾಗುವುದು ಎಂದು ಎಚ್ಚರಿಸಿದರು.

    ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿಯ ನಯಾಜ್ ಖಾನ್ ಬಿ, ಸೋಮರಾಜು ಗಂಗರಾಜು, ಅಜಯ್ ಕುಮಾರ್ ಜಿಲ್ಲಾಧ್ಯಕ್ಷರಾದ ಮಂಜುನಾಥ,ಯುವ ಜಿಲ್ಲಾಧ್ಯಕ್ಷರಾದ ಪಣೀಶ್,ಮಹಿಳಾ ಜಿಲ್ಲಾಧ್ಯಕ್ಷರಾದ ಶಶಿಕಲಾ. ಕಾರ್ಯದರ್ಶಿ ರೇಷ್ಮಾ ಖಾನಂ ತಾಲೂಕು ಅಧ್ಯಕ್ಷರಾದ ಹರಿ ಕುಮಾರ್. ಚಂದ್ರಶೇಖರಯ್ಯ. ನವೀನ್ ಕುಮಾರ್. ವಿದ್ಯಾಧರ. ನಗರ ಅಧ್ಯಕ್ಷ ಚರಣ್ ಕುಮಾರ್ ಇನ್ನು ಮುಂತಾದವರು ಭಾಗವಹಿಸಿದ್ದರು

  • *ವಿದ್ಯಾರ್ಥಿಗಳಿಗೆ ಸಂಸದೀಯ ಕಾರ್ಯವಿಧಾನದ ಬಗ್ಗೆ ಅರಿವು*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆ.18(ವಿಜಯ ಮಿತ್ರ ):- ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಲ್ಲಿ ಶಾಸನ ಸಭೆಯ ಕಲಾಪವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಯುವ ಸಂಸತ್‌ ಸ್ಪರ್ಧೆ ನಡೆಸಲಾಯಿತು.

    ಜಿಲ್ಲೆಯ ನಾಲ್ಕು ತಾಲೂಕುಗಳ 48 ಪ್ರೌಢಶಾಲಾ ವಿದ್ಯಾರ್ಥಿಗಳು ಯುವ ಸಂಸತ್‌ ಸ್ಪರ್ಧೆಯಲ್ಲಿ ಭಾವಹಿಸಿದ್ದರು. ಯುವ ಸಂಸತ್‌ನಲ್ಲಿ ಸಭಾಧ್ಯಕ್ಷರು, ಆಡಳಿತ ಪಕ್ಷ, ವಿರೋಧ ಪಕ್ಷಗಳಾಗಿ ವಿದ್ಯಾರ್ಥಿಗಳು ಜವಾಬ್ದಾರಿವಹಿಸಿ ಹಲವು ಮಹತ್ವದ ವಿಚಾರಗಳ ಕುರಿತು ಅಣಕು ಕಲಾಪದಲ್ಲಿ ಚರ್ಚೆಯನ್ನು ನಡೆಸಿದ್ದು, ಆಕರ್ಷಣೀಯವಾಗಿತ್ತು.

    ಯುವ ಸಂಸತ್‌ನಲ್ಲಿ ವಿದ್ಯಾರ್ಥಿಗಳು ಶೂನ್ಯ ವೇಳೆ, ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಹೀಗೆ ಹತ್ತು ಹಲವು ಶಾಸನ ಸಭೆಯ ನಿಯಮಗಳಂತೆ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.

    ಜನಪ್ರತಿನಿಧಿ ಸಂಸ್ಥೆಗಳ ಪಾತ್ರದ ಅರಿವು ಮೂಡಿಸುವುದು. ಪ್ರಜಾಪ್ರಭುತ್ವದ ಬುನಾದಿಯನ್ನು ಭದ್ರಪಡಿಸುವ ಹಾಗೂ ಅಭಿಪ್ರಾಯಗಳ ಬಗ್ಗೆ ತಾಳ್ಮೆ ಮತ್ತು ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವ ಕೌಶಲ್ಯ ಬೆಳೆಸುವುದು. ವಿದ್ಯಾರ್ಥಿಗಳಲ್ಲಿ ವಿಧಾನಸಭೆಯ ಕಾರ್ಯ ಕಲಾಪಗಳ ಬಗ್ಗೆ ತಿಳುವಳಿಕೆ ಮೂಡಿಸುವುದು. ವಿದ್ಯಾರ್ಥಿ ದೆಸೆಯಿಂದಲೇ ವಾಕ್ ಚಾತುರ್ಯ, ಸಮಯ ಪ್ರಜ್ಞೆ, ಸೂಕ್ಷ್ಮತೆ, ಧೈರ್ಯ ಮನೋಭಾವ, ಉತ್ತಮ ವಿಷಯ ಮಂಡನೆ ಸೇರಿ ನಾಯಕತ್ವ ಗುಣಗಳನ್ನು ಬೆಳೆಸುವುದು ಯುವ ಸಂಸತ್ ಸ್ಪರ್ಧೆಯ ಉದ್ದೇಶವಾಗಿದೆ.

    ಜಿಲ್ಲಾ ಮಟ್ಟದ ಯುವ ಸಂಸತ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ 6 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇವರಲ್ಲಿ ಇಬ್ಬರನ್ನು ರಾಜ್ಯ ಮಟ್ಟದಲ್ಲಿ ನಡೆಯುವ ಯುವ ಸಂಸತ್‌ ಸ್ಪರ್ಧೆಗೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವಿಕ್ಷಕರಾದ ಪದ್ಮಾವತಿ ಹೆಚ್ ಅವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯ ಅಧಿಕಾರಿಗಳಾದ ರೇಖಾ. ಕೆ, ಕೆಂಪಯ್ಯ, ಶಿಕ್ಷಣ ಸಂಯೋಜಕರಾದ ಕೋಮಲಾ. ಎಮ್, ಬಿ.ಆರ್.ಪಿ ಸಮೀರಾ, ಸಿ.ಆರ್.ಪಿ ನಾಗೇಶ್, ತೀರ್ಪುಗಾರರು ಹಾಗೂ ಜಿಲ್ಲೆಯ ನಾಲ್ಕು ತಾಲೂಕುಗಳ ಸಮಾಜ ವಿಜ್ಞಾನ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಇತರರು ಇದ್ದರು.

  • *ಆಟೋ ಚಾಲಕರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಿದ ಬೆಂಗಳೂರು ಆಟೋ ಸೇನೆ*

    ಯಲಹಂಕ :ರಾಜಾನುಕುಂಟೆ ಸೆ. 18( ವಿಜಯಮಿತ್ರ ) : ನಮ್ಮ ಸಂಘಟನೆ ವತಿಯಿಂದ ಚಾಲಕರಿಗಾಗಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಲಾಗುತ್ತಿದ್ದು. ವಾಹನ ಚಾಲಕರಿಗೆ ಸಮಸ್ಯೆ ಎದುರಾದಲ್ಲಿ ನಮ್ಮ ಬೆಂಗಳೂರು ಆಟೋ ಸೇನೆ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಬೆಂಗಳೂರು ಆಟೋ ಸೇನೆ ರಾಜ್ಯಾಧ್ಯಕ್ಷ ಎಂ.ಆರ್‌.ಚೇತನ್‌ ತಿಳಿಸಿದರು.

    ಆಟೋಚಾಲಕರಿಗೆ ಕಾನೂನು ಅರಿವು ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರು ಆಟೋ ಸೇನೆ ವತಿಯಿಂದ ಆಟೋ ಚಾಲಕರ ಜಾಗೃತಿ ಅಭಿಯಾನ & ಜನಸ್ಪಂದನ ಕಾರ್ಯಕ್ರಮವನ್ನು ರಾಜಾನುಕುಂಟೆಯ ಡಾ.ಬಿ.ಆ‌ರ್.ಅಂಬೇಡ್ಕ‌ರ್ ಸಮುದಾಯ ಭವನ ದಲ್ಲಿ ಆಯೋಜನೆ ಮಾಡಲಾಗಿತ್ತು. ಗಣ್ಯರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ಥಳೀಯವಾಗಿ ಚಾಲಕರಿಗೆ ಹಲವಾರು ಸಮಸ್ಯೆಗಳಿವೆ, ಈ ಕುರಿತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಯೋಜನೆ ಮಾಡಲಾಗಿದೆ ಹಾಗೂ ಚಾಲಕರಿಗೆ ಕಾನೂನು ಅರಿವು , ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ರಾಜಾನುಕುಂಟೆ ಆಟೋ ಘಟಕದ ಪದಾಧಿಕಾರಿಗಳ ಸಹಕಾರದೊಂದಿಗೆ ರೂಪಿಸಲಾಗಿದೆ ಎಂದರು.

     

    ಶ್ರೀನಿವಾಸ್ ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಮೋಟರ್ ವಾಹನ ನಿರೀಕ್ಷಕರು ,ಈರಮ್ಮ ಸಬ್ ಇನ್ಸ್ಪೆಕ್ಟರ್ ರಾಜಾನುಕುಂಟೆ ಪೊಲೀಸ್ ಠಾಣೆ,ರಮೇಶ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜಾನುಕುಂಟೆ,ಸಾಯಿ ನಾಗರಾಜ್ ಅಂಚೆ ಇಲಾಖೆ ರಾಜಾನುಕುಂಟೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಆಟೋ ಚಾಲಕರೊಂದಿಗೆ ಸಂವಾದ ನಡೆಸಿದರು.

     

    ಯಲಹಂಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಶ್ರೀನಿವಾಸ್ ಮಾತನಾಡಿ ಆಟೋ ಚಾಲಕರಿಂದ ಆಯೋಜನೆ ಮಾಡಲಾಗಿರುವ ಉತ್ತಮ ಕಾರ್ಯಕ್ರಮ ಇದಾಗಿದ್ದು.ಚಾಲಕರಿಗೆ ಅಗತ್ಯ ಮಾಹಿತಿ ನೀಡಲಾಗಿದೆ. ಚಾಲಕರು ಸುರಕ್ಷತೆಯಿಂದ ವಾಹನ ಚಲಾಯಿಸುವ ಮೂಲಕ ಸಾರ್ವಜನಿಕರಿಗೆ ಸಹಕಾರ ನೀಡಲಿ ಎಂಬುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾರಿಗೆ ಇಲಾಖೆ ಕುರಿತು ಚಾಲಕರಲ್ಲಿ ಇದ್ದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ ಎಂದರು.

    ಕಾರ್ಯಕ್ರಮವನ್ನು ಕಲಾವಿದರಾದ ಮಲ್ಲೇಶ್ ನಿರೂಪಣೆ ಮಾಡುವ ಮೂಲಕ ಸುಂದರವಾಗಿ ನೆಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

     

    ಕಾರ್ಯಕ್ರಮದ ಆಯೋಜಕ ಮುನಿರಾಜು ಎಸ್.ವಿ( ಎಸ್ ಎಲ್ ವಿ ) ಮಾತನಾಡಿ ಆಟೋ ಚಾಲಕರಿಗೆ ಕಾನೂನಿನ ಅರಿವಿನ ಅವಶ್ಯಕತೆ ಇದೆ ಹೀಗಾಗಿ ನಮ್ಮ ಬೆಂಗಳೂರು ಆಟೋ ಸೇನೆ ವತಿಯಿಂದ ಸ್ಥಳೀಯ ಚಾಲಕರಿಗೆ ಅನುಕೂಲವಾಗುವಂತೆ ಹಲವು ಇಲಾಖೆಗಳ ಅಧಿಕಾರಿಗಳಿಂದ ಜಾಗೃತಿ ಕಾರ್ಯಕ್ರಮ ಹಾಗೂ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಧಿಕಾರಿಗಳು ಪಾಲ್ಗೊಂಡು ಆಟೋ ಚಾಲಕರಿಗೆ ಹಲವಾರು ಉಪಯುಕ್ತ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನೂರಾರು ಆಟೋ ಚಾಲಕರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಬೆಂಗಳೂರು ಆಟೋಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚೇತನ್,ಶ್ರೀನಿವಾಸ್ ಪ್ರಾದೇಶಿಕ ಸಾರಿಗೆ ಇಲಾಖೆ ಹಿರಿಯ ಇನ್ಸ್ಪೆಕ್ಟರ್,ಈರಮ್ಮ ಸಬ್ ಇನ್ಸ್ಪೆಕ್ಟರ್ ರಾಜಾನುಕುಂಟೆ ಪೊಲೀಸ್ ಠಾಣೆ,ರಮೇಶ್ ಪ್ರಾಥಮಿಕ ಆರೋಗ್ಯ ಕೇಂದ್ರ ರಾಜಾನುಕುಂಟೆ,ಸಾಯಿ ನಾಗರಾಜ್ ಅಂಚೆ ಇಲಾಖೆ ರಾಜಾನುಕುಂಟೆ,ಆರ್ .ಚಂದ್ರಶೇಖರ್ ಅಧ್ಯಕ್ಷರು ರಾಜಾನುಕುಂಟೆ ಆಟೋ ಘಟಕ,ಕಾರ್ಯಕ್ರಮದ ಆಯೋಜಕರಾದ ಮುನಿರಾಜು ಎಸ್.ವಿ.(ಎಸ್.ಎಲ್.ವಿ),ಆನಂದ್ ಮಾರನೊರ್ ಸಮಾಜ ಸೇವಕರು,ರಾಜೇಶ್ ಸಮಾಜ ಸೇವಕರುಆರ್.ವಿ.ನಾಗೇಶ್ ಪ್ರಧಾನ ಕಾರ್ಯದರ್ಶಿ ರಾಜಾನುಕುಂಟೆ ಆಟೋಘಟಕ, ಸೇರಿದಂತೆ ಎಲ್ಲಾ ಘಟಕದ ಪದಾಧಿಕಾರಿಗಳು, ಚಾಲಕರು ಉಪಸ್ಥಿತರಿದ್ದರು.

  • *ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಮಾನವ ಸರಪಳಿ ನಿರ್ಮಿಸುವ ಮೂಲಕ ಒಗ್ಗಟ್ಟಿನ ಪ್ರದರ್ಶನ*

    ದೊಡ್ಡಬಳ್ಳಾಪುರ ವಿಜಯಮಿತ್ರ : ಅಂತಾರಾಷ್ಟ್ರೀಯ    ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಮಾನವ ಸರಪಣಿ‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ನಗರದ ಪ್ರವಾಸಿ ಮಂದಿರದ ಬಳಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕೆ ಎಚ್ ಮುನಿಯಪ್ಪ, ಉಪ ವಿಭಾಗಾಧಿಕಾರಿ ದುರ್ಗಾ ಶ್ರೀ, ತಾಲೂಕು ದಂಡಾಧಿಕಾರಿ ವಿದ್ಯಾ ವಿಭಾ ರಾಥೋಡ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮ ಯಶಸ್ವೀಗೊಳಿಸಿದರು.

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಿಂದ ಪ್ರಾರಂಭವಾಗಿ ಹೆಗ್ಗಡಿಹಳ್ಳಿ ಕ್ರಾಸ್ (ನಂದಿ ಬೆಟ್ಟದ ಹತ್ತಿರ)ವರಗೆ ಒಟ್ಟು 34.5 ಕಿಲೋಮೀಟರ್ ವರೆಗೆ ಮಾನವ ಸರಪಳಿಯೊಂದಿಗೆ ಸಂವಿಧಾನ ಪೀಠಿಕೆ ಭೋದನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು  ಮಾನವ ಸರಪಣಿಯನ್ನು ನಿರ್ಮಿಸಿದ್ದರು.

     

    ನಾಡಗೀತೆಯೊಂದಿಗೆ  ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಓದುವ ಮೂಲಕ ಪ್ರತಿಜ್ಞೆಯಾಗಿ ತೆಗೆದುಕೊಳ್ಳಲಾಯಿತು .    ಅಂರಾರಾಷ್ಟ್ರೀಯ ಉದ್ದೇಶವೇ ಮಾನವ ಹಕ್ಕುಗಳ ರಕ್ಷಣೆ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಸದೃಢಗೊಳಿಸುವುದಾಗಿದೆ. ಪ್ರಚಾರ ಒಳಗೊಂಡಿರುವ ಪ್ರಜಾಪ್ರಭುತ್ವದ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ ಎಂದು ಗಣ್ಯರು ಅಭಿಪ್ರಾಯವ್ಯಕ್ತಪಡಿಸಿದರು .

     

    ಕೊನೆಯಲ್ಲಿ ಜೈ ಹಿಂದ್ ಮತ್ತು ಜೈ ಕರ್ನಾಟಕ ಘೋಷಣೆಗಳನ್ನು‌  ಹೇಳುವ ಮೂಲಕ‌ ಕಾರ್ಯಕ್ರಮ ಮುಕ್ತಾಯವಾಯಿತು.

     

  • *ದೊಡ್ಡಬಳ್ಳಾಪುರ: ಬಿಜೆಪಿ ನಗರ ಮಂಡಲ ಪದಾಧಿಕಾರಿಗಳ ಆಯ್ಕೆ : ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾಗಿ ಶಂಕರ್ ನೇಮಕ*

    ದೊಡ್ಡಬಳ್ಳಾಪುರ (ವಿಜಯಮಿತ್ರ ): ಭಾರತೀಯ ಜನತಾ ಪಾರ್ಟಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ನಗರಮಂಡಲ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

     

     

    ದೊಡ್ಡಬಳ್ಳಾಪುರ ನಗರ ಮಂಡಲದ, ಎಸ್.ಸಿ ಮೋರ್ಚಾ ಉಪಾಧ್ಯಕ್ಷರನ್ನಾಗಿ ಶಂಕರ್ ರವರನ್ನು ಆಯ್ಕೆ ಮಾಡಲಾಯಿತು.

     

     

    ನಗರದ ಬಿಜೆಪಿ ಕಛೇರಿಯಲ್ಲಿ ನೆಡದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಮುದ್ದಪ್ಪ ಮಾತನಾಡಿ ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವ ಮೂಲಕ ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸಧೃಡಗೊಳಿಸುತ್ತಾ, ಮುಂಬರುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ನೂತನ ಪದಾಧಿಕಾರಿಗಳು ಶ್ರಮಿಸಬೇಕೆಂದು ತಿಳಿಸಿದರು.

     

    ಯುವ ಮುಖಂಡ ಶಂಕರ್ ಮಾತನಾಡಿ ಪಕ್ಷವು ನನ್ನನ್ನು ಗುರುತಿಸಿ ಉತ್ತಮ ಜವಾಬ್ದಾರಿಯನ್ನು ನೀಡಿದೆ. ಈ ಜವಾಬ್ದಾರಿಯನ್ನು ನೀಡಿದ ಹಿರಿಯ ಮುಖಂಡರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ನಿಷ್ಠೆಯಿಂದ ಪಕ್ಷದಲ್ಲಿ ದುಡಿದು ನಗರ ಹಾಗೂ ತಾಲೂಕಿನಾದ್ಯಂತ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಾಗುವುದು ಎಂದರು.

     

    ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳು, ನಗರ ಘಟಕದ ಪದಾಧಿಕಾರಿಗಳು, ಮುಖಂಡರು ಸದಸ್ಯರು ಉಪಸ್ಥಿತರಿದ್ದರು.

  • *ಕನ್ನಡಿಗರು ಇಂದು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ – ಸಂಜೀವ್ ನಾಯಕ್*

    ದೊಡ್ಡಬಳ್ಳಾಪುರ ಆಗಸ್ಟ್ 12 ( ವಿಜಯಮಿತ್ರ ): ನಗರ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ಹಿಂದಿ ಭಾಷೆ ಏರುತ್ತಿರುವ ಮತ್ತು ನನೆಗುದಿಗೆ ಬಿದ್ದಿರುವ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ, ಹಾಗೂ ರಾಜ್ಯದ ತೆರಿಗೆಯಲ್ಲಿ ಕರ್ನಾಟಕಕ್ಕೆ ಬರಬೇಕಾದ ವಿವಿಧ ಹಣಕಾಸು ಯೋಜನೆಗಳಲ್ಲಿ ವಂಚನೆ ಮಾಡುತ್ತಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಪ್ರತಿಭಟನೆ ನೆಡೆಸಲಾಯಿತು

    ನಗರದ ಭಗತ್ ಸಿಂಗ್ ಮೈದಾನದ ಬಳಿ ಇರುವ ಅಂಚೆ ಕಚೇರಿಯ ಆವರಣದಲ್ಲಿ ಕನ್ನಡ ಪಕ್ಷದ ವತಿಯಿಂದ ಕೇಂದ್ರ ಸರಕಾರದ ಧೋರಣೆ ವಿರುದ್ಧ ಆಯೋಜನೆ ಮಾಡಲಾದ ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಮುಖಂಡರಾದ ಸಂಜೀವ್ ನಾಯ್ಕ್ ಮಾತನಾಡಿ, .ಕೇಂದ್ರ ಸರಕಾರ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಒಪ್ಪಿಗೆ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿಯೂ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ರಾಜಕೀಯ ಮಾಡುತ್ತಿವೆ. ಇದನ್ನು ಕನ್ನಡಿಗರು ಪ್ರತಿಭಟಿಸಬೇಕು’ ಕನ್ನಡಿಗರು ಇಂದು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ನಮ್ಮ ಸಂಸದರು ಧ್ವನಿ ಎತ್ತಬೇಕು. ಸರಕಾರ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

     

    ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಾ ಬಂದಿದೆ. ಇದರಿಂದ ರಾಜ್ಯದ ಭಾಷೆ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯುಂಟಾಗಿತ್ತಿದೆ. ಕೇಂದ್ರ ಸರಕಾರಿದಿಂದ ಕನ್ನಡ ಭಾಷೆಯನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ನಡೆಯುತ್ತಿದೆ. ಕನ್ನಡಿಗರೇ ಸ್ಥಾಪಿಸಿ ಬೆಳೆಸಿದ ಬ್ಯಾಂಕ್ಗಳನ್ನು ವಿಲೀನಗೊಳಿಸಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಅನ್ಯಾಯ ಎಸೆಯಲಾಗಿದೆ. ಒಂದೇ ಭಾಷೆ ಒಂದೇ ದೇಶ ಎಂಬ ಕಲ್ಪನೆ ಅಡಿಯಲ್ಲಿ ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುತ್ತಾ ಬಂದಿದೆ ಈ ಬಗ್ಗೆ ನಾಗರಿಕರು ಎಚ್ಚೆತ್ತುಕೊಳ್ಳದಿರೇ ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

    ಈ ವೇಳೆ ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಪಿ ಆಂಜನೇಯ ಜಿಲ್ಲಾಧ್ಯಕ್ಷ ಮುನಿ ಪಾಪಯ್ಯ, ತಾ.ಗೌ. ಅಧ್ಯಕ್ಷ ರಂಗನಾಥ್ ತಾ. ಅಧ್ಯಕ್ಷ. ಡಿ.ವೆಂಕಟೇಶ್, ತಾ.ಪ್ರಧಾನ ಕಾರ್ಯದರ್ಶಿ ಬೋರೇಗೌಡ, ಕರವೇ ಪ್ರವೀಣ್ ಶೆಟ್ಟಿ ಬಳಗದ ವೆಂಕಟೇಶ್, ಕನ್ನಡ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಂಜಪ್ಪ. ಛಲವಾದಿ ಮಹಾಸಭಾದ ಗುರುರಾಜು ಪ್ರಜಾ ವಿಮೋಚನಾ ಚಳುವಳಿಯ ಗುಳ್ಯ ಹನುಮಣ್ಣ, ಶಿವರಾಜಕುಮಾರ್ ಸೇನಾ ಸಮಿತಿ ಅಧ್ಯಕ್ಷ ರಮೇಶ ತಾಲ್ಲೂಕಿನ ಕನ್ನಡ ರೈತ ದಲಿತ ಪರ ಸಂಘಗಳು ಹಾಜರಿದ್ದರು