Blog

  • * ಗೌರಿ -ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಒಂದಿಷ್ಟು ರೂಲ್ಸ್ …!! ಈ ಸುದ್ದಿ ನಿಮಗಾಗಿ ಸಂಪೂರ್ಣ ಮಾಹಿತಿಯೊಂದಿಗೆ ….*

    ದೊಡ್ಡಬಳ್ಳಾಪುರ ( ವಿಜಯಮಿತ್ರ ) : ಗೌರಿ ಗಣೇಶ ಹಬ್ಬದ ಹಿನ್ನೆಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣ ಇನ್ಸ್ಪೆಕ್ಟರ್ ಅಮರೇಶ್ ಗೌಡ ಸಾರ್ವಜನಿಕರಿಗೆ ಒಂದಿಷ್ಟು ಮಾಹಿತಿ ನೀಡಿದ್ದು, ಶಾಂತಿಯುತವಾಗಿ ಹಬ್ಬದ ಆಚರಣೆ ಮಾಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.

     

    ಈ ಕುರಿತು ಮಾತನಾಡಿದ ಅವರು ಪೊಲೀಸ್ ಇಲಾಖೆ, ನಗರಸಭೆ,ಬೆಸ್ಕಾಂ, ಹಾಗೂ ಅಗ್ನಿಶಾಮಕದಳದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಏಕಗವಾಕ್ಷಿ (singlewindow) ವ್ಯವಸ್ಥೆ ಮಾಡಲಾಗಿದ್ದು. ಎಲ್ಲ ಇಲಾಖೆಗಳ ಅನುಮತಿಯನ್ನು ಸಾರ್ವಜನಿಕರು ಒಂದೆಡೆಯೇ ಪಡೆಯುವಂತೆ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಪ್ರತಿ ಇಲಾಖೆಗೂ ಪ್ರತ್ಯೇಕವಾಗಿ ಅಫಿಡವಿಟ್ ಹಾಗೂ ದಾಖಲೆಗಳನ್ನು ಸಾರ್ವಜನಿಕರು ಸಲ್ಲಿಸಬೇಕಿತ್ತು ಆದರೆ ಪೋಲಿಸ್ ಅಧಿಕ್ಷಕರು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸಾರ್ವಜನಿಕರ ಉಪಯೋಗಕ್ಕಾಗಿ ಸಿಂಗಲ್ ವಿಂಡೋ ಪದ್ಧತಿಯನ್ನು ಆಯೋಜನೆ ಮಾಡಲಾಗಿದೆ ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

     

    ಕ್ಯೂಆರ್ ಸ್ಕ್ಯಾನ್ ಮಾಡುವ ಮೂಲಕ ಅನುಮತಿ ಪಡೆಯಲು ಸಲ್ಲಿಸಬೇಕಾಗಿರುವ ಅಗತ್ಯ ದಾಖಲಾತಿಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ನಿಗದಿತ ಶುಲ್ಕ ಪಾವತಿ ಮಾಡಿ ತ್ವರಿತ ಗತಿಯಲ್ಲಿ ಅನುಮತಿ ಪಡೆಯಬಹುದಾಗಿದೆ ಎಂದರು.

     

    ಗಣೇಶ ಪ್ರತಿಷ್ಠಾಪನೆಗೆ ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳು

     

    *ಕಾರ್ಯಕ್ರಮ ಆಯೋಜನೆ ಮಾಡುವ ಸ್ಥಳ ಯಾವುದು ವಿವಾದಕ್ಕೆ ಒಳಗಾಗಿರಬಾರದು.

     

    * ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಯೋಜನೆ ಮಾಡುವುದಾದರೆ ಸಾರ್ವಜನಿಕರ ಸಂಚಾರಕ್ಕೆ ಹಾಗೂ ಶಾಲಾ ಕಾಲೇಜುಗಳಿಗೆ ತೊಂದರೆಯಾಗದಂತಿರಬೇಕು

    * ಖಾಸಗಿ ಸ್ಥಳದಲ್ಲಿ ಕಾರ್ಯಕ್ರಮ ಯೋಜನೆ ಮಾಡುವುದಾದರೆ ಸದರಿ ಸ್ಥಳದ ಮಾಲೀಕರಿಂದ ಅನುಮತಿ ಪತ್ರ ಪಡೆಯಬೇಕು ಹಾಗೂ ಮಾಲೀಕರ ದಾಖಲಾತಿಗಳನ್ನು ಸಲ್ಲಿಸಬೇಕು.

    * ಗಣೇಶ ಪ್ರತಿಷ್ಠಾಪನ ಸ್ಥಳದಲ್ಲಿ ಹಗಲು ಮತ್ತು ರಾತ್ರಿ ಪಾಳಿಯದಲ್ಲಿ ಸ್ವಯಂ ಸೇವಕರು ಕಾವಲು ಇರುವ ಮೂಲಕ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು.

    * ಕಾರ್ಯಕ್ರಮದ ಸ್ಥಳದಲ್ಲಿ ವಿವಾದಿತ ಬ್ಯಾನರ್ ಗಳು, ಅಶ್ಲೀಲ ನೃತ್ಯ, ಅಶ್ಲೀಲ ಹಾಡುಗಳನ್ನು ಹಾಕುವುದು ನಿರ್ಬಂಧಿಸಿದೆ.

    * ಬೆಳಿಗ್ಗೆ 6:00ಯಿಂದ ರಾತ್ರಿ 10:00 ವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ 10:00 ನಂತರ ಯಾವುದೇ ಕಾರಣಕ್ಕೂ ಧ್ವನಿವರ್ಧಕ ಬಳಸುವಂತಿಲ್ಲ

    * ಸರ್ಕಾರದ ಆದೇಶದಂತೆ ಡಿಜೆ ಬಳಸುವಂತಿಲ್ಲ, ಈ ಕುರಿತು ನಿರ್ಬಂಧ ಹೇರಲಾಗಿದೆ

    * ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವಂತಿಲ್ಲ, ಸಾರ್ವಜನಿಕರಿಗೆ ತೊಂದರೆಯಾಗದ ಸ್ಥಳಗಳಲ್ಲಿ, ಹಸಿರು ಪಟಾಕಿ ಬಳಸಲು ಅವಕಾಶ ಕಲ್ಪಿಸಲಾಗಿದೆ.

    * ಗಣೇಶ ಮೂರ್ತಿ ವಿಸರ್ಜನೆಯನ್ನು ರಾತ್ರಿ 10 ಗಂಟೆ ಒಳಗೆ ನಿಗದಿತ ಪ್ರದೇಶದಲ್ಲಿ ನೆರವೇರಿಸುವಂತೆ ಸೂಚಿಸಲಾಗಿದೆ

    * ಕಾರ್ಯಕ್ರಮವನ್ನು ಅನ್ಯಧಾರ್ಮಿಯರಿಗೆ ತೊಂದರೆಯಾಗದಂತೆ,ನೆರವೇರಿಸುವ ಮೂಲಕ ಸಹಕರಿಸಲು ಕೋರಿದ್ದಾರೆ.

  • *ಸಾಸಲು ಕ್ಲಸ್ಟರ್ ಹಂತದ ಪ್ರತಿಭಾಕಾರಂಜಿ ಸ್ಪರ್ಧೆ : ಬಹುಮಾನ ಗೆದ್ದು ಸಂತಸ ವ್ಯಕ್ತಪಡಿಸಿದ ವಿದ್ಯಾರ್ಥಿಗಳು*

    ದೊಡ್ಡಬಳ್ಳಾಪುರ : ತಾಲ್ಲೂಕಿನ ಸಾಸಲು ಹೋಬಳಿಯ ಪುಟ್ಟಲಿಂಗಯ್ಯನ ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಸಲು ಕ್ಲಸ್ಟರ್ ಹಂತದ ಪ್ರತಿಭಾಕಾರಂಜಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

    ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಿದಾ ಅನೀಸ್ ದೀಪಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡುವ ವೇದಿಕೆಯಾಗಿದ್ದು, ಸಾಸಲು ಹೋಬಳಿಯ ಪುಟ್ಟಲಿಂಗಯ್ಯನ ಪಾಳ್ಯದಲ್ಲಿ ನೆಡೆಯುತ್ತಿರುವುದು ಸಂತಸ ತಂದಿದೆ. ಮಕ್ಕಳಲ್ಲಿ ಕ್ರೀಡೆ, ಕಲೆ, ಸಾಹಿತ್ಯ ಗಳಲ್ಲಿ ಅಭಿವೃದ್ದಿ ಹೊಂದಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

     

    ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಗಾಯನ, ನೃತ್ಯ , ಏಕಪಾತ್ರಾಭಿನಯ, ನಾಟಕ, ಚರ್ಚಾ ಸ್ಪರ್ಧೆ, ಜಾನಪದ ನೃತ್ಯ, ಭಾವಗೀತೆ, ,ಪ್ರಬಂಧ ಸ್ಪರ್ಧೆ, ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಗಳ ಪ್ರದರ್ಶನ ಮಾಡಿದರು.

    ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಣೆ ಮಾಡಿದರು.

    ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ ರವಿಕುಮಾರ್, ಪ್ರತಿಭಾಕಾರಂಜಿಯ ಅಧ್ಯಕ್ಷರಾದ ರಾಮಚಂದ್ರಯ್ಯ ವಿ,ಇಸಿಒಗಳಾದ ಭೀಮರಾಜ್ ಮತ್ತು ಜಯಶ್ರೀ ಕೆ.ಜೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದೇವರಾಜ್ , ದೊಡ್ಡಬಳ್ಳಾಪುರ ಶಿಕ್ಷಕರ ಸಂಘದ ಪದಾಧಿಕಾರಿಗಳು, ಮತ್ತು ಪುಟ್ಟಲಿಂಗಯ್ಯನಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು,ಸಾಸಲು ಕ್ಲಸ್ಟರ್ ಹಂತದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • *ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಸೆ. 03 ( ವಿಜಯ ಮಿತ್ರ ):- ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ದಿನಾಚರಣೆ-2024ರ ಪ್ರಯುಕ್ತ ಅರ್ಹ ಬಾಲಕರಿಗೆ “ಹೊಯ್ಸಳ” ಮತ್ತು ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ’ ಶೌರ್ಯ ಪ್ರಶಸ್ತಿಯನ್ನು ಪ್ರಧಾನ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

     

    ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಙೆಯಿಂದ ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷದೊಳಗಿನ ಬಾಲಕರಿಗೆ “ಹೊಯ್ಸಳ” ಮತ್ತು ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ’ ಶೌರ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ, ಪ್ರಕರಣವು 2023ರ ಆಗಸ್ಟ್ 01 ರಿಂದ 2024ರ ಜುಲೈ 31 ರೊಳಗೆ ನಡೆದಿರಬೇಕು. 2006ರ ಆಗಸ್ಟ್ 01 ರಂದು ಹಾಗೂ ನಂತರ ಜನಿಸಿದ ಮಕ್ಕಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ.10,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

     

     

    ಇದೇ ಸಂದರ್ಭದಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕನಿಷ್ಠ 05 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ.25,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ.1,00,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

     

    Ad

    ಮಕ್ಕಳ ದಿನಾಚರಣೆ-2024 ಸಾಲಿನ ಪ್ರಶಸ್ತಿಗಾಗಿ ನಿಗದಿ ಪಡಿಸಿರುವ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಂದ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸೆಪ್ಟೆಂಬರ್ 27 ರೊಳಗೆ ಸಲ್ಲಿಸತಕ್ಕದ್ದು, ಅರ್ಜಿಗಳು ಕನ್ನಡ ಭಾಷೆಯಲ್ಲಿಯೇ ಸಲ್ಲಿತಕ್ಕದ್ದು.

     

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮಕ್ಕಳು ಅರ್ಜಿಯನ್ನು ಪಡೆಯಲು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಛೇರಿ, ಕೊಠಡಿ ಸಂಖ್ಯೆ:206, 2 ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾ||, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂ ಸಂ: 080-29787445, ದೇವನಹಳ್ಳಿ-080-27682268, ದೊಡ್ಡಬಳ್ಳಾಪುರ-08027625228, ಹೊಸಕೋಟೆ-080-27931493, ನೆಲಮಂಗಲ-080-2772217 ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ತೂಬಗೆರೆ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ : ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸ್ ಮುಜಾವರ ಸೇರಿದಂತೆ ಹಲವು ಗಣ್ಯರು ಭಾಗಿ*

    ದೊಡ್ಡಬಳ್ಳಾಪುರ ಸೆ. 03( ವಿಜಯಮಿತ್ರ ) : ಸ್ವ ಪ್ರಯತ್ನದಿಂದ ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಹಾಗೂ ಯಾವುದೇ ಕ್ರೀಡೆ ಕ್ರೀಡೆಯಾಗಿಯೇ ಇರಬೇಕು ಮತ್ತು ಕ್ರೀಡೆಗಳು ವಿದ್ಯಾರ್ಥಿಗಳ ಬುದ್ದಿ ಮತ್ತು ಮನಸ್ಸಿನ ಅಭಿವೃದ್ಧಿಯ ಪ್ರತೀಕವಾಗಬೇಕು ಎಂದು ದೊಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸ್ ಮುಜಾವರ ಹೇಳಿದರು,

     

    ಮಂಗಳವಾರ ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಡಕ್ಕೆ ಚಾಲನೆ ನೀಡಿ ಮಾತನಾಡಿದರು ಕ್ರೀಡೆಗಳಿಗೆ ಯಾರು ಹೆಚ್ಚು ಒಲವನ್ನು ತೋರಿಸುತ್ತಾರೋ ಅವರ ಕೌಶಲವನ್ನು ಅವರ ಕ್ರೀಡಾ ಶಕ್ತಿಯನ್ನು ಬೆಳಸಿ ಅವರ ವೈಯಕ್ತಿಕ ಸಾಮಥ್ಯ ಹೆಚ್ಚಿಸುವುದೇ ಕ್ರೀಡಾಕೂಟಗಳ ಮುಖ್ಯ ಉದ್ದೇಶ ಮತ್ತು ಯಾವುದೇ ಉತ್ತಮ ಕೆಲಸವನ್ನು ಆತ್ಮವಿಶ್ವಾಸ ಹಾಗೂ ಶ್ರದ್ದೆಯಿಂದ ಕೈಗೊಂಡರೂ ಅದು ಒಂದು ಶ್ರೇಷ್ಠ ಕಾಯಕವಾಗುತ್ತದೆ, ಉತ್ತಮ ಕಾಯಕದಲ್ಲಿ ಮೇಲು ಕೀಳಂಬ ಸ್ಥಾನವಿರುವುದಿಲ್ಲ, ವಿದ್ಯಾರ್ಥಿ ಜೀವನದಲ್ಲಿ ನಿಷ್ಠೆ ಪ್ರಾಮಾನಿಕತೆ,ಸತ್ಯ ಪರಿಪಾಲನೆಯನ್ನು ಮೈಗೊಡಿಸಿಕೊಂಡು ಸಮಯದ ಸದ್ಬಳಕೆ ಮಾಡಿಕೊಂಡರೆ ತಮ್ಮ ಕನಸುಗಳನ್ನು ಮತ್ತು ಗುರಿಯನ್ನು ಸಾಧಿಸಬಹುದು ಎಂದು ಹೇಳಿದರು,

     

     

    ಇನ್ನು ಹಳೆ ವಿಧ್ಯಾರ್ಥಿಗಳಾದ ಗಂಗಧಾರ್,ರಘು, ಸಾಲಿ ಸೇರಿ 20 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪ್ರೌಢಶಾಲೆಯಲ್ಲಿ 2 ವರ್ಷಗಳಿಂದ ದೈಹಿಕ ಶಿಕ್ಷಕರಿಲ್ಲದೇ ಮಕ್ಕಳಿಗೆ ಕ್ರೀಡಾ ಸ್ಪರ್ದೆಗಳನ್ನು ಅಭ್ಯಾಸ ಮಾಡಲು ಅಗುತ್ತಿಲ್ಲ ಎಂದು ಕಾರ್ಯಕ್ರಮಕ್ಕೆ ಬೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸ್ ಮುಜಾವರ ಅವರಿಗೆ ಮನವಿ ಮಾಡಿದರು ,ಇದ್ದಕ್ಕೆ ಸ್ಪಂದಿಸಿದ ಶಿಕ್ಷಣಾಧಿಕಾರಿ ಯಾರನ್ನಾದರೂ ವ್ಯವಸ್ಥೆ ಮಾಡುತ್ತೆನೆ ಎಂಬ ಭರವಸೆ ನೀಡಿದರು.

    Ad

    ಕ್ರೀಡಾ ಕೂಟದಲ್ಲಿ ಒಟ್ಟು 25 ಶಾಲೆಯ 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು,

     

    ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ರವಿಸಿದ್ದಪ್ಪ, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯ್ತಿ ಪ್ರಭಾರಿ ಅಧ್ಯಕ್ಷ ಮುನಿಕೃಷ್ಣಪ್ಪ,ತೂಬಗೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್, ಕ್ರೀಡಾ ಪ್ರಧಾನ ಸಂಚಾಲಕ ವಸಂತ್‌ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ಬಸವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎ.ವಿ.ಚಂದ್ರಪ್ಪ, ಖಜಾಂಚಿ ಕೆ.ಆರ್.ನರಸಿಂಹಮೂರ್ತಿ, ನಿರ್ದೇಶಕ ಮಂಜುನಾಥ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಲ್.ನಾಗರಾಜು, ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಗಿರೀಶ್, ಮೊಹಸಿನ್ ತಾಜ್, ಹಾಗು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಹಾಜರಿದ್ದರು,

  • *ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನಿಂದ ಅಂಗಾಂಗ ದಾನ, ನೇತ್ರದಾನದ ಕುರಿತು ಜಾಗೃತಿ: 3 ಕಿ.ಮೀ ವಾಕಥಾನ್ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ*

    ದೊಡ್ಡಬಳ್ಳಾಪುರ ಸೆ. 01( ವಿಜಯಮಿತ್ರ) : ಲಯನ್ಸ್‌ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌, ಅಕ್ಷಯ ಲಿಯೋ ಕ್ಲಬ್ ಹಾಗೂ ಶ್ರೀ ದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂಗಾಂಗ ದಾನ ಹಾಗೂ ನೇತ್ರದಾನದ ಕುರಿತು ಅರಿವು ಮೂಡಿಸುವ ಸಲುವಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು 3 ಕಿಲೋ ಮೀಟರ್‌ ವಾಕಥಾನ್‌ ನಡೆಸಿದರು.

    ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ನೆಲದಾಂಜನೇಯಸ್ವಾಮಿ ದೇವಾಲಯದ ಮುಂಭಾಗ ವಾಕಥಾನ್‌ಗೆ ಲಯನ್ಸ್‌ ಜಿಲ್ಲಾ ದೃಷ್ಟಿ ವಿಭಾಗದ ಸಂಯೋಜಕ ವಿಜಯಕುಮಾರ್ ಹಾಗೂ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಚಾಲನೆ ನೀಡಿದರು.

     

    ಟಿ.ಸಿದ್ದಲಿಂಗಯ್ಯ ವೃತ್ತ, ಕೊಂಗಾಡಿಯಪ್ಪ ಬಸ್‌ ನಿಲ್ದಾಣ, ಸೌಂದರ್ಯಮಹಲ್ ವೃತ್ತ, ಚೌಕ, ಮುಕ್ತಾಂಬಿಕಾ ರಸ್ತೆ, ಎಚ್.ಮುಗುವಾಳಪ್ಪ ವೃತ್ತ, ಶಾಂತಿನಗರ ಮೂಲಕ ಆರ್.ಎಲ್.ಜಾಲಪ್ಪ ವಿದ್ಯಾ ಸಂಸ್ಥೆ ಕ್ಯಾಂಪಸ್‌ಗೆ ವಾಕಥಾನ್‌ ನಡೆಸಲಾಯಿತು.

    Ad

    ವಿದ್ಯಾರ್ಥಿಗಳು ಅಂಗಾಂಗ ದಾನ, ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಸಂದೇಶಗಳನ್ನು ಹೊತ್ತ ಬಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳ ಮೂಲಕ ಸಾರ್ವಜನಿಕರಿಗೆ ಸಂದೇಶ ರವಾನಿಸಿದರು.

     

    *ನೇತ್ರದಾನದ ಬಗ್ಗೆ ತಪ್ಪುಗ್ರಹಿಕೆ ಬೇಡ:*

     

    ಇಲ್ಲಿನ ಶ್ರೀದೇವರಾಜ ಅರಸ್‌ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜಿನ ನೇತ್ರತಜ್ಞ ಡಾ.ನರೇಂದ್ರ ಮಾತನಾಡಿ, 18 ವರ್ಷ ಮೀರಿದ ಯಾವುದೇ ವ್ಯಕ್ತಿ ನೇತ್ರದಾನಕ್ಕೆ ನೊಂದಣಿ ಮಾಡಬಹುದು. ಡಾ.ರಾಜ್‌ಕುಮಾರ್, ಪುನಿತ್‌ರಾಜ್‌ಕುಮಾರ್‌, ಜಾಲಪ್ಪ ಸೇರಿದಂತೆ ಅನೇಕ ಮಹನೀಯರು ನೇತ್ರದಾನ ಮಾಡುವ ಮಾಡುವ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಗಣ್ಯರ ನಡೆ ಇತರರಿಗೂ ಮಾದರಿಯಾಗಿದ್ದು, ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದರು.

     

    ಕಣ್ಣಿನ ದಾನದ ಬಗ್ಗೆ ಹಲವು ಮೂಢನಂಬಿಕೆಗಳು ಜನರಲ್ಲಿದ್ದು, ಅವುಗಳಿಂದ ಮುಕ್ತವಾಗುವುದು ಅಗತ್ಯ. ತಪ್ಪುಗ್ರಹಿಕೆಯನ್ನು ದೂರಮಾಡಿ, ವೈಜ್ಞಾನಿಕ ಸತ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಒಬ್ಬ ವ್ಯಕ್ತಿಯ ಕಣ್ಣುಗಳು ನಾಲ್ವರಿಗೆ ದೃಷ್ಟಿ ನೀಡಲು ನೆರವಾಗುತ್ತವೆ ಎಂದು ತಿಳಿಸಿದರು.

     

    ಲಯನ್ಸ್‌ ಜಿಲ್ಲೆ 317ಎಫ್‌ನ ದೃಷ್ಟಿ ವಿಭಾಗದ ಸಂಯೋಜಕ ವಿಜಯಕುಮಾರ್ ಮಾತನಾಡಿ, ಮಾನವೀಯ ನೆಲೆಗಟ್ಟಿನ ಉದ್ದೇಶವೊಂದರ ಸಾಫಲ್ಯಕ್ಕೆ ನೂರಾರು ಜನರು ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದರು.

    ಎಸ್‌ಡಿಯುಇಟಿ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ನೇತ್ರದಾನದಲ್ಲಿ ದೊಡ್ಡಬಳ್ಳಾಪುರ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈವರೆಗೆ ಸುಮಾರು ಎರಡೂವರೆ ಸಾವಿರ ಕಣ್ಣುಗಳನ್ನು ದಾನ ಮಾಡಿರುವ ಅನನ್ಯ ಕಾರ್ಯವನ್ನು ಈ ತಾಲೂಕು ಮಾಡಿದ್ದು, ಈ ಬಗ್ಗೆ ಮತ್ತಷ್ಟು ಜಾಗೃತಿ ಉಂಟಾಗಬೇಕು ಎಂದರು.

    ಲಯನ್ಸ್‌ ಕ್ಲಬ್‌ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಜೆ.ಆರ್.ರಾಕೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌, ಜಿಲ್ಲಾ ಗ್ರಾಮೀಣ ಡಯಾಬಿಟಿಕ್‌ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು ಭಾಗವಹಿಸಿದ್ದರು.

  • *ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 5.56 ಕೋಟಿ ರೂಗಳ ಆರೋಗ್ಯ ಇಲಾಖೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ*

    ದೊಡ್ಡಬಳ್ಳಾಪುರ ಸೆ. 01 (ವಿಜಯಮಿತ್ರ):- ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣ ಮತ್ತು ವಾರ್ಷಿಕ ನಿರ್ವಹಣೆಗಾಗಿ 2.10 ಕೋಟಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 2.24 ಕೋಟಿ ಹಾಗೂ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯ ಒದಗಿಸಲು 5.56 ಕೋಟಿ ರೂಗಳ ಆರೋಗ್ಯ ಇಲಾಖೆಯ ಕಾಮಗಾರಿಗಳಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ದೊಡ್ಡಬಳ್ಳಾಪುರ ಟೌನ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು.

     

    ನಂತರ ಮಾತನಾಡಿ ಅಧಿಕಾರಿಗಳ ಶ್ರಮ, ಕಾಯಕನಿಷ್ಠೆ ‌ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ದೊಡ್ಡಬಳ್ಳಾಪುರದ ತಾಲ್ಲೂಕು ಆಸ್ಪತ್ರೆಗೆ ರಾಷ್ಟ್ರ ಮಟ್ಟದ ಗರಿ ಲಭಿಸಿದೆ. ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು .ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಪರಿಪಾಲನೆ ಮಾಡಬೇಕು ಎಂದರು.

     

    ದೊಡ್ಡಬಳ್ಳಾಪುರದ‌ ಸರ್ಕಾರಿ ಆಸ್ಪತ್ರೆ ಜನರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ, ಈ ಸೇವೆ ಇದೇ ರೀತಿ ಮುಂದಿನ ದಿನಗಳಲ್ಲೂ ಮುಂದುವರೆಯಲಿ ಎಂದು ವೈದ್ಯಾಧಿಕಾರಿಗಳಿಗೆ ಅಭಿನಂದಿಸಿದರು.

     

    ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ಶಿಲಾನ್ಯಾಸ ರೂಪುಗೊಂಡಿದ್ದು, ಶೀಘ್ರವೇ ಮಂಜೂರಾತಿಗಾಗಿ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ದೊಡ್ಡಬಳ್ಳಾಪುರ ನಗರ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಅಪಘಾತಗಳ ಸಂಭವ ಹೆಚ್ಚಾಗಿ ಕಂಡುಬರುತ್ತಿದೆ‌. ಇದರಿಂದಾಗಿ ಕೇಂದ್ರ ಸರಕಾರ ವತಿಯಿಂದ ಕ್ರಿಟಿಕಲ್ ಕೇರ್ ಯುನಿಟ್ ಸಹ ಸ್ಥಾಪಿತವಾಗಲಿದ್ದು, ಜನರಿಗೆ ಇದು ಉಪಯೋಗವಾಗಲಿದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಸಾರ್ವಜನಿಕರಿಗೆ ಲಕ್ಷಾಂತರ ರೂಗಳ ಖರ್ಚು ತಪ್ಪಲಿದೆ ಎಂದು ಸಚಿವರು ಹೇಳಿದರು.

     

    ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕ ಧೀರಜ್ ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆ ಅತ್ಯುತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಇಲ್ಲಿನ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೆ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ವತಿಯಿಂದ ತಾಲ್ಲೂಕು ಮಟ್ಟದ ಅತಿ ಉತ್ತಮ ಆಸ್ಪತ್ರೆ ಎಂದು ಬಿರುದು ಪಡೆದುಕೊಂಡಿದೆ. ನಮ್ಮ ಸುತ್ತ ಮುತ್ತಲು ಇರುವ ಮೂರು ಜಿಲ್ಲೆಗಳಿಗಿಂತ ಅತಿ ಹೆಚ್ಚು ಮಕ್ಕಳ ಜನನ ಆಗುತ್ತಿರುವ ಆಸ್ಪತ್ರೆ ಇದಾಗಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪಾತ್ರವಾಗಿದೆ. ದೊಡ್ಡಬಳ್ಳಾಪುರ ನಗರದ ಸಿದ್ದೇನಾಯಕನಹಳ್ಳಿಯಲ್ಲಿ

    195 ಕೋಟಿ ರೂ ಗಳ ವೆಚ್ಚದ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೆ ಒಪ್ಪಿಗೆ ನೀಡಿದೆ. ಇದಲ್ಲದೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅಭಿಮ್ ಯೋಜನೆಯಡಿಯಲ್ಲಿ 50 ಹಾಸಿಗೆಯುಳ್ಳ ಕ್ರಿಟಿಕಲ್ ಕೇರ್ ಯುನಿಟ್(CCU) ಆಸ್ಪತ್ರೆ ದೊಡ್ಡಬಳ್ಳಾಪುರದಲ್ಲಿ ಮುಂಬರುವ ದಿನಗಳಲ್ಲಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು.

     

    *ಆರೋಗ್ಯ ಇಲಾಖೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಮೊತ್ತ ಹಾಗೂ ವಿವರ*

     

    ಜಿಲ್ಲೆಯ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣ ಮತ್ತು ವಾರ್ಷಿಕ ನಿರ್ವಹಣೆಗಾಗಿ 2,10,60,000 ರೂಗಳು ಹಾಗೂ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕನಸವಾಡಿಗೆ ಮೂಲಭೂತ ಸೌಕರ್ಯಗಳ ಉನ್ನತೀಕರಣಕ್ಕಾಗಿ ಒಟ್ಟು 60,28,900 ಲಕ್ಷ ರೂ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಡಬಳ್ಳಾಪುರಕ್ಕೆ ಮೂಲಸೌಕರ್ಯಗಳ ಉನ್ನತೀಕರಣಕ್ಕಾಗಿ ಒಟ್ಟು 61,10,000 ರೂ ಮತ್ತು

    ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 2,24,82,000 ಕೋಟಿ ರೂ ವೆಚ್ಚ ಸೇರಿ ಜಿಲ್ಲೆಗೆ ಮಂಜೂರಾಗಿರುವ ಒಟ್ಟು ಮೊತ್ತ ರೂ 5,56,80,900 ಕೋಟಿ ರೂ ಗಳಾಗಿರುತ್ತದೆ.

     

     

    ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನಾ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಬಿ.ರಾಜಣ್ಣ, ದೊಡ್ಡಬಳ್ಳಾಪುರ ಉಪ‌ವಿಭಾಗಾಧಿಕಾರಿ ದುರ್ಗಾಶ್ರೀ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್,‌ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನಿಲ್ ಕುಮಾರ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಬಾಲಕೃಷ್ಣ, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ನಗರಸಭೆ ಆಯುಕ್ತರಾದ ಕಾರ್ತಿಕ್ ಈಶ್ವರ್ ಸೇರಿದಂತೆ ನಗರಸಭಾ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

  • *ಶ್ರೀ ಕ್ಷೇತ್ರ ಘಾಟಿ ಮಾರ್ಗದಲ್ಲಿ ರಸ್ತೆ ಸಮಸ್ಯೆ : ಮೇಲ್ಸೇತುವೆ ನಿರ್ಮಿಸಲು ಕೋರಿ ಸಂಸದರಿಗೆ ಮನವಿ ಸಲ್ಲಿಸಿದ ಸ್ಥಳೀಯ ಮುಖಂಡ*

    ದೊಡ್ಡಬಳ್ಳಾಪುರ ಆಗಸ್ಟ್ 31(ವಿಜಯಮಿತ್ರ): ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದ ಮಾರ್ಗದಲ್ಲಿ ತಿರುಮಗೊಂಡನ ಹಳ್ಳಿ ಬಳಿ ರೈಲ್ವೆ ಗೇಟ್ ಇದ್ದು, ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಮುದ್ದೇನಹಳ್ಳಿ ಮುಖಂಡ ಹಳ್ಳಿರೈತ ಅಂಬರೀಷ್ ಲೋಕಸಭಾ ಸದಸ್ಯರು,ಸಂಸದರು ಆದ ಡಾ. ಕೆ ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.

    ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು, ಯಾತ್ರಿಕರು, ಭಕ್ತದಿಗಳು, ರೈತರು ಸಂಚರಿಸುತ್ತಿದ್ದು ಟ್ರಾಫಿಕ್ ಹೆಚ್ಚಾಗಿ ಇರುತ್ತದೆ.ಅತಿಯಾದ ಟ್ರಾಫಿಕ್ನಿಂದಾಗಿ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಂಚಾರಿಸಲು ಸಮಸ್ಯೆ ಉಂಟಾಗುತ್ತಿದ್ದು. ಸದರಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಬೇಕೆಂದು ಕೋರಿ ಮನವಿ ಸಲ್ಲಿಸಲಾಯಿತು ಎಂದು ಅಂಬರೀಷ್ ತಿಳಿಸಿದ್ದಾರೆ.

  • *ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಗೆ ನೂತನ ಪದಾಧಿಕಾರಿಗಳ ನೇಮಕ : ನೂತನ ಪದಾಧಿಕಾರಿಗಳಿಗೆ ಶುಭ ಕೋರಿದ ರಾಜ್ಯಾಧ್ಯಕ್ಷ ಎ. ನಂಜಪ್ಪ*

    ದೊಡ್ಡಬಳ್ಳಾಪುರ ಆಗಸ್ಟ್ 31(ವಿಜಯಮಿತ್ರ): ನಾಡು ನುಡಿ ಭಾಷೆಗಾಗಿ ನಿಷ್ಠೆಯಿಂದ ಶ್ರಮಿಸುವ ಮನಸ್ಸುಗಳ ವೇದಿಕೆ ನಮ್ಮ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಕ್ಕಾಗಿ ದುಡಿಯುವ ಅವಕಾಶ ಕಲ್ಪಿಸಲಾಗಿದೆ ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದ್ವಿನಿಯೋಗ ಪಡಿಸಿಕೊಳ್ಳಬೇಕಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಎ. ನಂಜಪ್ಪ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,ಕನ್ನಡ ಭಾಷೆ, ಕನ್ನಡ ನಾಡಿನ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕಿದೆ. ತಾಯಿ ಭುವನೇಶ್ವರಿ ಆಶೀರ್ವಾದ ನಮಗೆ ಒಂದು ವೇದಿಕೆ ಇದ್ದು ಕನ್ನಡ ಪರ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯ ನಮ್ಮಿಂದಾಗಿದೆ. ಮುಂದೆ ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ನಮ್ಮ ಸಂಘಟನೆ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಲಿದ್ದು ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ. ಕನ್ನಡ ನಮ್ಮದು, ನಮ್ಮ ಮಾತೃಭಾಷೆಯನ್ನು ಬಳಸಿ ಬೆಳಸುವ ನಿಟ್ಟಿನಲ್ಲಿ ಮುಂದಾಗೋಣ ಎಂದರು.

     

    ಕನ್ನಡಕ್ಕೆ ದಕ್ಕೆಯಾದ ಸಂದರ್ಭದಲ್ಲಿ ನಾವು ಗಟ್ಟಿ ಧ್ವನಿಯಾಗಿ ನಿಲ್ಲುವ ಮೂಲಕ ಕನ್ನಡ ಭಾಷೆಯ ಶಕ್ತಿ ಪ್ರದರ್ಶನ ತೋರಬೇಕಿದೆ ಎಂದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿದರು.

     

    ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೊತ್ತೂರಪ್ಪ ಮಾತನಾಡಿ ಕನ್ನಡ ಎಂದರೆ ಬರಿ ಭಾಷೆಯಲ್ಲ ಒಂದು ಕನ್ನಡ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ, ನಮ್ಮನಾಳುವ ಸರ್ಕಾರಗಳು ಕನ್ನಡದ ಬಗ್ಗೆ ಭರವಸೆಗಳನ್ನು ಮಾತ್ರವೇ ನೀಡುತ್ತಾ ಬಂದಿವೆ,

    ಆದರೆ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ವಿಫಲವಾಗಿವೆ, ಇಂದಿಗೂ ಸಹ ಕನ್ನಡ ನಾಡು ನುಡಿಯ ವಿಚಾರವಾಗಿ ಹಲವಾರು ಕನ್ನಡ ಪರಸಂಘ ಸಂಸ್ಥೆಗಳು ಹೋರಾಟಗಳನ್ನ ನಡೆಸುತ್ತಲೇ ಇವೆ.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ನೆಲ, ಜಲ, ನಾಡು,ನುಡಿ ಹಾಗೂ ನಮ್ಮ ಅಸ್ತಿತ್ವದ ಬಗ್ಗೆ ಕಳಕಳಿಯನ್ನು ತೋರುವ ಮೂಲಕ ಯಶಸ್ವಿಯಾಗಿ ಸಂಘಟನೆಯ ಹೆಸರು ಉಳಿಯುವಂತೆ ಶ್ರಮಿಸಿ ಎಂದರು.

    ನಂತರ ಕನ್ನಡ ಪರಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತರಿದಾಳ್ ಶ್ರೀನಿವಾಸ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಏನಾದರೂ ಸಾಧಿಸಲು ಸಾಧ್ಯ, ಆದ್ದರಿಂದ ಎಲ್ಲರೂ ಒಗ್ಗೂಡಿ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎನ್ನುವ ಮೂಲಕ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

    ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ ಈ ಸುದಿನ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಶುಭ ಹಾರೈಸುತ್ತೇನೆ, ಸಂಘಟನೆಯಲ್ಲಿ ಹುದ್ದೆ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ, ನಿಮಗೆ ಸಿಕ್ಕ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವ ಮೂಲಕ ಸಂಘಟನೆಗೆ ಉತ್ತಮ ಸ್ಥಾನ ಮನ ಕಲ್ಪಿಸಲು ಪದಾಧಿಕಾರಿಗಳು ಶ್ರಮಿಸಲಿ ಎಂದು ಹಾರೈಸಿದರು.

    ರಾಜ್ಯ ಸಮಿತಿ ಪದಾಧಿಕಾರಿಗಳುಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಎ. ನಂಜಪ್ಪ,ರಾಮು.ಎಂ, ನಯಾಜ್ ಖಾನ್, ಸೋಮರಾಜು , ಗಂಗರಾಜು, ರಾಜ್ಯ ಯುವ ಘಟಕ ರಾಜ್ಯ ಸಮಿತಿಯ ಅಜಯ್, ಪೀರ್ ಪಾಷ

    ಬೆಂಗಳೂರು ಗ್ರಾಮಾಂತರ ಜಿಲ್ಲೆಘಟಕದ ಪದಾಧಿಕಾರಿಗಳ ಪಟ್ಟಿ* ಬೆ.ಗ್ರಾ ಅಧ್ಯಕ್ಷರಾಗಿ, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶಾಂತಿನಗರ , ಮಹಿಳಾ ಜಿಲ್ಲಾ ಅಧ್ಯಕ್ಷೇಯಾಗಿ ಶಶಿಕಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಖಾನಂ, ಬೆಂ.ಗ್ರಾ.ಜಿಲ್ಲಾ ಯುವ ಘಟಕದ ಜಿಲ್ಲಾ.ಫಣೀಶ್ ಪ್ರ.ಕಾ.ನವೀನ್ ಕುಮಾರ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ಹರಿ ಕುಮಾರ್, ಪ್ರಧಾನ ಕಾರ್ಯದರ್ಶಿ .ಏನ್. ಚಂದ್ರಶೇಖರಯ್ಯಾ,ಮಹಿಳಾ ತಾಲ್ಲೂಕು ಅಧ್ಯಕ್ಷೆ ಕಾವ್ಯ

    ದೊಡ್ಡಬಳ್ಳಾಪುರ ನಗರ ಅಧ್ಯಕ್ಷ ಚರಣ್ ಕುಮಾರ್ ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ದರ್ಶನ್ ಸೇರಿದಂತೆ ಹಲವು ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧಿಕಾರ ಸ್ವೀಕರಿಸಿದರು.

    ಕಾರ್ಯಕ್ರಮದಲ್ಲಿ ಸಂಘಟನೆಯ ಹಲವು ಮುಖಂಡರು ಸದಸ್ಯರು ಉಪಸ್ಥಿತರಿದ್ದರು.

  • *ಭ್ರಷ್ಟಾಚಾರ, ಸರ್ವಾಧಿಕಾರ ಧೋರಣೆ ನನ್ನಂದಲ್ಲ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ – ರಮೇಶ್*

    ದೊಡ್ಡಬಳ್ಳಾಪುರ : ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲ ಸದಸ್ಯರು ಬೇಕಂತಲೇ ನನ್ನ (ಅಧ್ಯಕ್ಷರ) ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ , ಅವರು ಮಾಡುತ್ತಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ಕೆಸ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ರಮೇಶ್ ತಿಳಿಸಿದರು.

     

    ತಮ್ಮ ಮೇಲೆ ಸದಸ್ಯರು ಮಾಡುತ್ತಿರುವ ಆರೋಪಗಳನ್ನು ಕುರಿತು ಪಂಚಾಯಿತಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು,ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜೀನಾಮೆ ಕೊಡದೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದ್ದಾರೆ, ಆದರೆ ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡುವುದು ನನ್ನ ವೈಯಕ್ತಿಕ ವಿಚಾರ, ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆಗೆ ಒಳಪಡಿಸಲಿ ನಾನು ಸಿದ್ಧರಿದ್ದೇನೆ ಎಂದರು.

     

    ಕಳೆದ ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆಯಾಗಲಿ, ಗ್ರಾಮಸಭೆಯಾಗಲಿ ಅಥವಾ ವಾರ್ಡ್ ಸಭೆಗಳಾಗಲಿ ನಡೆದಿಲ್ಲ,ರಸ್ತೆ,ನೀರು ಮತ್ತು ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಏಕಪಕ್ಷಿಯವಾಗಿ ನಿರ್ಧಾರಕೈಗೊಳ್ಳುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು ಕೆಸ್ತೂರು ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಸ್ಥಳೀಯ ಗ್ರಾಮಸ್ಥರಿಂದ ಯಾವುದೇ ರೀತಿ ದೂರು ದಾಖಲಾಗಿಲ್ಲ ಸದಸ್ಯರು ಬೇಕಂತಲೇ ಈ ರೀತಿಯ ಆರೋಪವನ್ನು ಮಾಡುತ್ತಿದ್ದಾರೆ ಅವರ ಹೇಳಿಕೆಯಲ್ಲಿ ಸತ್ಯವಿಲ್ಲ ಎಂದರು.

     

    ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಮಂಜುನಾಥ್ ನನ್ನ ಮೇಲೆ ಸಾಕಷ್ಟು ಆರೋಪವನ್ನು ಮಾಡಿದ್ದಾರೆ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಅವರು ಆರೋಪಿಸಿದ್ದಾರೆ ಈ ಕುರಿತು ಸೂಕ್ತ ತನಿಖೆಯಾಗಲಿ, ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆ ಎಂದರು.

     

    ಇ ಖಾತೆ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ 1 ಲಕ್ಷ ಹಣವನ್ನ ಕಳೆದ 8 ತಿಂಗಳಿಂದ ಅವರೇ ಇಟ್ಟು ಭ್ರಷ್ಟಚಾರ ನಡೆಸಿದ್ದಾರೆಂದು ಸದಸ್ಯರಾದ ಕೃಷ್ಣಪ್ಪ ಆರೋಪಿಸಿದ್ದಾರೆ. ಸ್ಥಳೀಯ ನಿವಾಸಿ ಚಿಕ್ಕಮಸ್ತಿಯಪ್ಪ ಅವರು ಇ ಖಾತೆ ವಿಚಾರವಾಗಿ 1 ಲಕ್ಷ ಹಣ ನೀಡಿದ್ದರು ಅವರ ಸ್ವತ್ತಿನ ಕಂದಾಯ ಬಾಕಿ ಇದ್ದ ಕಾರಣ ನೀಡಿದ 1ಲಕ್ಷ ಹಣವನ್ನು ಅವರ ಮನವಿಯ ಮೇರೆಗೆ ನನ್ನ ಬಳಿ ಇರಿಸಿ ಕೊಂಡಿದ್ದೇನೆ ಬಾಕಿ ಪಾವತಿ ಮಾಡಿ ಎಂದು ಅವರಿಗೆ ಈಗಾಗಲೇ ತಿಳಿಸಲಾಗಿದೆ. ಅವರು ಹಣ ನೀಡಿದ ವಿಚಾರವನ್ನು ನಾನೆ ಸಭೆಯಲ್ಲಿ ಸರ್ವ ಸದಸ್ಯರಿಗೂ ಬಹಿರಂಗ ಪಡಿಸಿದ್ದೇನೆ ಮೋಸ ಮಾಡುವ ಉದ್ದೇಶವಿದ್ದರೆ ನಾನೇಕೆ ಬಹಿರಂಗ ಪಡಿಸುತ್ತಿದ್ದೆ..? ಎಂದರು.

     

    ಈ ಕುರಿತು ಹಣ ಸಂದಾಯ ಮಾಡಿದ್ದ ಸ್ಥಳೀಯ ಚಿಕ್ಕ ಮಾಸ್ತಿಯಪ್ಪ ಮಾತನಾಡಿ ಹೌದು ನಾನು ಇ ಖಾತೆಗಾಗಿ 1ಲಕ್ಷ ಹಣ ನೀಡಿದ್ದು,ನನ್ನ ಕಂದಾಯ ಬಾಕಿ ಇದ್ದ ಕಾರಣ ಸಂಪೂರ್ಣ ಒಟ್ಟಿಗೆ ಕಟ್ಟುವ ನಿಟ್ಟಿನಲ್ಲಿ 1ಲಕ್ಷ ಹಣವನ್ನು ಅಧ್ಯಕ್ಷರ ಬಳಿ ಇಟ್ಟುಕೊಳ್ಳಲು ಸೂಚಿಸಿದ್ದೆ,ಬಿಟ್ಟರೆ ನನಗೆ ಯಾವುದೇ ಮೋಸ ಆಗಿಲ್ಲ ಎಂದರು.

    ಇದೇ ವೇಳೆ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಜರಿದ್ದರು

  • *ವಿದ್ಯುತ್ ಖಾಸಗೀಕರಣ, ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ : ಸೆ.೪ರಂದು ರೈತರ ಬೃಹತ್ ಪ್ರತಿಭಟನೆ*

    ದೊಡ್ಡಬಳ್ಳಾಪುರ ( ವಿಜಯಮಿತ್ರ ) : ವಿದ್ಯುತ್ ಲೈನ್‌ಗಳಿಗೆ, ಕೈಗಾರಿಕೆಗಳಿಗೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಂಡು ಕೃಷಿಗೆ ಸಂಚಕಾರ ತರುವ ಸರ್ಕಾರದ ನೀತಿಗಳನ್ನು ವಿರೋದಿಸಿ, ಸೆ.೪ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾಕಾರಿಗಳ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಮುಖಂಡರು ತಿಳಿಸಿದರು.

    ರೈತರ ಕೃಷಿ ಪಂಪ್‌ಸೆಟ್ ಮೀಟರ್‌ಗಳಿಗೆ ಆಧಾರ್ ಜೋಡಣೆ ಮಾಡುವ ಮೂಲಕ ವಿದ್ಯುತ್ ಖಾಸಗೀಕರಣದ ಹುನ್ನಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ.ಈ ಮುಂಚೆ ಇದ್ದ ಕರ್ನಾಟಕ ವಿದ್ಯುತ್ ಮಂಡಲಿ (ಕೆಇಬಿ)ಯನ್ನು ಐದು ವಿದ್ಯುತ್ ಸರಬರಾಜು ಕಂಪನಿಗಳನ್ನಾಗಿ ಮಾಡಿ, ಕಂಪನಿಗಳನ್ನು ಖಾಸಗೀಕರಣಕ್ಕೆ ವಹಿಸಲಾಗಿದೆ. ಈ ಕಂಪನಿಗಳು ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಭಾಗ್ಯ ಜ್ಯೋತಿ ಮೊದಲಾದ ಯೋಜನೆಗಳನ್ನು ಜಾರಿಗೆ ತರಲು ಹಿಂದೇಟು ಹಾಕಿ ಸರ್ಕಾರವನ್ನು ಪರೋಕ್ಷವಾಗಿ ಒತ್ತಾಯಿಸುವ ಫಲವಾಗಿ ಇಂದು ಕ್ರಮೇಣ, ಸರ್ಕಾರ ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡುವ ಹೆಜ್ಜೆ ಇರಿಸಿದೆ. ಡಿಜಿಟಲ್ ಮೀಟರ್, ಸಿಮ್ ಕಾರ್ಡ್ ಗಳ ಅಳವಡಿಕೆ ಮಾಡುವ ಮೂಲಕ ದುಬಾರಿ ವೆಚ್ಚ ಹೇರುತ್ತಿವೆ. ಹಾಗಾಗಿ ವಿದ್ಯುತ್ ಖಾಸಗೀಕರಣಕ್ಕೆ ನಮ್ಮ ಪ್ರಬಲ ವಿರೋಧವಿದೆ ಎಂದರು.

     

    ಸರ್ಕಾರ ಈಗ ಉಪ ನಗರದ ಯೋಜನೆಯಡಿ ಹೆಸರು ಬದಲಾವಣೆ ಮಾಡಿ, ರೈತರ ಶೇ.65ರಿಂದ 70 ಭಾಗ ನೀರಾವರಿ ಭೂಮಿಯನ್ನು ಪಡೆಯಲಾಗುತ್ತಿದೆ. ಭೂಮಿ ವಶ ಪಡಿಸಿಕೊಳ್ಳುವದರಲ್ಲಿ ಶೇ. ೩೫ ಭಾಗ ಜಮೀನು ರಸ್ತೆ, ವಿದ್ಯುತ್ ಗೆ ಕಳೆದುಹೋಗುತ್ತಿದೆ. ಇದರ ಬಗ್ಗೆ ನಮ್ಮ ವಿರೋಧವಿದೆ ಎಂದರು.

     

    ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸನ್ನ ಮಾತನಾಡಿ, ವಿದ್ಯುತ್ ಖಾಸಗೀಕರಣದ ಪ್ರಕ್ರಿಯೆಗಳು ರೈತರಿಗೆ ಮಾರಕವಾಗಿದೆ. ಪವರ್ ಗ್ರಿಡ್‌ನಿಂದ ರೈತರ ಜಮೀನುಗಳಲ್ಲಿ ಹಾದು ಹೋಗುವ ಬೃಹತ್ ವಿದ್ಯುತ್ ಕಂಬಗಳು ರೈತರ ಕೃಷಿಗೆ ಸಂಚಕಾರ ತಂದಿವೆ. ಇದರಿಂದ ರೈತರ ಜಮೀನಿಗೆ ಬೆಲೆಯೂ ಸಿಗುವುದಿಲ್ಲ . ಸರ್ಕಾರ 1:4 ದರದಲ್ಲಿ ಭೂಮಿ ಖರೀದಿ ಮಾಡಿ, ಆನಂತರ ವಿದ್ಯುತ್ ಲೈನ್‌ಗಳನ್ನು ಎಳೆಯಲಿ. ಇಲ್ಲವೇ ಅಂಡರ್ ಗ್ರೌಂಡ್ ಕೇಬಲ್‌ಗಳನ್ನು ಅಳವಡಿಸಲಿ. ಅದು ಬಿಟ್ಟು ರೈತರ ಜಮೀನುಗಳ ಮೇಲೆ ಅತಿಕ್ರಮಣ ಮಾಡುವುದು ಎಷ್ಟು ಸರಿ. ಕೈಗಾರಿಕೆಗಳಿಂದ ಜನಸಾಂದ್ರತೆ ಹೆಚ್ಚಾಗಿ ಜನರ ಜೀವನ ಕಷ್ಟವಾಗುತ್ತದೆ ಎಂದರು.

     

     

    ಜಿಲ್ಲಾ ಕರ‍್ಯದರ್ಶಿ ಜಿಂಕೆಬಚ್ಚಹಳ್ಳಿ ಸತೀಶ್ ಮಾತನಾಡಿ, ಬಾಶೆಟ್ಟಿಹಳ್ಳಿಯಲ್ಲಿ ಅಪೇರೆಲ್ ಪಾರ್ಕ್ ಮೂರನೇ ಹಂತಕ್ಕೆ ವಶಪಡಿಸಿಕೊಂಡ ಜಮೀನಿನಲ್ಲಿ ಬಹಳಷ್ಟು ಇನ್ನೂ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ಆದರೆ ಸರ್ಕಾರ ಇದೀಗ ದೊಡ್ಡಬಳ್ಳಾಪುರದ ಸುತ್ತಮುತ್ತ ಕೈಗಾರಿಕೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುತ್ತಿದೆ. ದೊಡ್ಡಬಳ್ಳಾಪುರ ದಾಬಸ್ ಪೇಟೆ ನಡುವೆ ಸ್ಥಾಪನೆಯಾಗಲಿರುವ ಕೆ.ಎಚ್.ಐ.ಆರ್ ಸಿಟಿಗೆ 2 ಸಾವಿರ ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಆದರೆ ಸ್ಥಳೀಯರಿಗೆ ಕೆಲಸ ಮಾತ್ರ ಸಿಗುವುದಿಲ್ಲ. ಕೈಗಾರಿಕೆಗಳಿಂದ ಕೊಳಗೇರಿ ಆರಂಭವಾಗಿ, ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಅಂತರ್ಜಲ ಕಲುಷಿತ ಗೊಳ್ಳಲಿದೆ. ಕೃಷಿ ಬದುಕನ್ನು ಅಸ್ಥಿರಗೊಳಿಸುವ ಇಂತಹ ಯೋಜನೆಗಳನ್ನು ನಾವು ವಿರೋಧಿಸಿ ಸೆ.೪ ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

     

     

    ಈ ವೇಳೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ, ಕರ‍್ಯದರ್ಶಿ ಆರ್.ಎಸ್.ಸತೀಶ್, ಮುಖಂಡರಾದ ಶಿರವಾರ ರವಿ, ದೇವನಹಳ್ಳಿ ತಾ.ಕರ‍್ಯದರ್ಶಿ ರಮೇಶ್, ದೇವನಹಳ್ಳಿ ನಾರಾಯಣಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.