Blog

  • *ದೊಡ್ಡಬಳ್ಳಾಪುರ :ತೂಬಗೆರೆಯಲ್ಲಿ ಸಂಭ್ರಮದ ಭೂತ ನೆರಿಗೆ*

    ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಭೂತನೆರಿಗೆ ಹಬ್ಬವನ್ನು ಆಚರಿಸಲಾಯ್ತು. 600 ವರ್ಷಗಳ ಇತಿಹಾಸವಿರುವ ಭೂತನೆರಿಗೆ ಆಚರಣೆಯಲ್ಲಿ ಪ್ರಮುಖ ಆಕರ್ಷಣೆ ಕೆಂಚಣ್ಣ ಮತ್ತು ಕರಿಯಣ್ಣ. ಕೈಯಲ್ಲಿ ಖಡ್ಗ, ಗುರಾಣಿ ಹಿಡಿದಿರುವ ಇವರು ಹಸಿವಿನಿಂದ ಆಕ್ರೋಶಗೊಂಡಿರುತ್ತಾರೆ. ಇವರ ಹಸಿವು ತಣಿಸಲು ಹಲಸು ಮತ್ತು ಬಾಳೇ ಹಣ್ಣಿನ ರಸಾಯನ ಕೊಡಲಾಗುತ್ತದೆ. ಕೋಳಿಗಳನ್ನು ಸಹ ನೀಡಲಾಗುತ್ತೆ.ಭೂತ ನೆರಿಗೆ ಹಬ್ಬಇವರಿಬ್ಬರ ಮೇಲೆ ಭೂತಗಳ ಅಹ್ವಾಹನೆಯಾಗಿ, ಜನರನ್ನು ಅಟ್ಟಾಡಿಸಿಕೊಂಡು ಹೋಗುತ್ತವೆ. ಯುವಕರು ರೇಗಿಸಿ ಮನರಂಜನೆ ಪಡೆಯುತ್ತಾರೆ, ಮಹಿಳೆಯರು ದೂರದಲ್ಲಿಯೇ ನಿಂತು ಭೂತಗಳ ಆರ್ಭಟ ನೋಡುತ್ತಾರೆ.

    ಭೂತನೆರಿಗೆ ಆಚರಣೆಗಿದೆ 600 ವರ್ಷಗಳ ಇತಿಹಾಸ:

     

    ತೂಬಗೆರೆಯ ಗ್ರಾಮದ ಪಾಳ್ಯ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಭೂತಗಳ ಆರ್ಭಟ ಊರಿನ ವಿವಿಧೆಡೆ ಸಂಚರಿಸಿ ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತದೆ, ಕರಿಯಣ್ಣ ವೇಷಧಾರಿಯಾಗಿ ಶೇಖರ್, ಕೆಂಚಣ್ಣ ವೇಷಧಾರಿಯಾಗಿ ಮತ್ತು ತೇರಿನ ಬೀದಿಯ ಮುನಿ ಕೃಷ್ಣಪ್ಪ, ಪ್ರಮುಖ ಆಕರ್ಷಣೆಯಾಗಿರುತ್ತಾರೆ.

    ಆಂಜನೇಯ ದೇವಸ್ಥಾನದಲ್ಲಿ ಮಂತ್ರವಾದಿ ಆನಂದ್ ಸ್ವಾಮಿ, ಕರಿಯಣ್ಣ – ಕೆಂಚಣ್ಣರ ಮೇಲೆ ಮಂತ್ರಪಠಣ ಮಾಡಿ ಅವರಿಬ್ಬರ ಮೇಲೆ ಭೂತಗಳ ಆವಾಹನೆ ಮಾಡುತ್ತಾರೆ. ಭೂತಗಳ ಆವಾಹನೆ ನಂತರ ಆಕ್ರೋಶಗೊಳ್ಳುವ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಭೂತಗಳ ಆರ್ಭಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತೂಬಗೆರೆಗೆ ಬರುತ್ತಾರೆ.ಹಿನ್ನೆಲೆ:ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ – ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.

    ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ.

    ಈ ವಿಶಿಷ್ಟವಾದ ಆಚರಣೆ ಬಂತೆಂದರೆ ನಮಗೆ ಅದೇನೋ ಸಂಭ್ರಮ ಚಿಕ್ಕಂದಿನಿಂದಲೂ ಈ ಹಬ್ಬವನ್ನು ನೋಡುತ್ತಾ ಬೆಳೆದಿರುವ ನಮಗೆ ಇದೊಂದು ರೀತಿಯ ಸಂಭ್ರಮ ಸಡಗರದ ಈ ನೋಡುತ್ತಾ. ನಮ್ಮೂರಿನಲ್ಲಿ ಮಾತ್ರ ನೋಡ ಸಿಗುವ ಹಬ್ಬ ಎಂಬುವ ಜಂಬ . ಒಟ್ಟಾರೆ ಈಗ ಮತ್ತೊಮ್ಮೆ ಹಬ್ಬ ಬಂದಿದೆ.

     

  • *ದೊಡ್ಡಬಳ್ಳಾಪುರ l ತಾಲ್ಲೂಕು ಕಛೇರಿ ಮುಂಭಾಗ ರೈತರ ಪ್ರತಿಭಟನೆ l ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ KRS ಪಕ್ಷ*

    ದೊಡ್ಡಬಳ್ಳಾಪುರ : ಎಲ್ಲೆಡೆ ಭ್ರಷ್ಟಾಚಾರ ತುಂಬಿ ಹೋಗಿದ್ದು, ಅಧಿಕಾರಿಗಳ ನಿರ್ಲಕ್ಷವೇ ರೈತರ ಸಮಸ್ಯೆಗಳಿಗೆ ಕಾರಣವಾಗಿದೆ, ರೈತರು ತಮ್ಮ ಹೊಲ ಗದ್ದೆಗಳಿಗೆ ತಲುಪುವ ಮಾರ್ಗಗಳನ್ನು ಕೆಲ ಪ್ರಭಾವಿ ವ್ಯಕ್ತಿಗಳು ಬೇಲಿ ಹಾಕುವ ಮುಖಾಂತರ ರೈತರಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೆ ಆರ್ ಎಸ್ ಘಟಕದ ಅಧ್ಯಕ್ಷ ಶಿವಶಂಕರ್ ಆರೋಪಿಸಿದರು.

    ಗುರುವಾರ ನಗರದ ತಾಲೂಕು ಕಚೇರಿ ಮುಂಭಾಗ ತೂಬಗೆರೆ ಹೋಬಳಿಯ ಮೇಲಿನ ನಾಯಕರಾಂಡಹಳ್ಳಿ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೆಲ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಪ್ರತಿನಿತ್ಯ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದಲ್ಲಿ ಸಮಸ್ಯೆಗಳು ಶೀಘ್ರಗತಿಯಲ್ಲಿ ಪರಿಹಾರ ಗೊಳ್ಳುತ್ತವೆ. ರೈತರ ಬೆಂಬಲಕ್ಕೆ ಕೆಆರ್‌ಎಸ್ ಪಕ್ಷವು ಸದಾ ಸಿದ್ಧವಿರುತ್ತದೆ. ಇದು ಕೇವಲ ಸಾಂಕೇತಿಕ ಹೋರಾಟ ಮಾತ್ರ ರೈತರ ಸಮಸ್ಯೆ ಬಗೆಯದೇ ಇದ್ದ ಪಕ್ಷದಲ್ಲಿ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಆಡಳಿತಾತ್ಮಕವಾಗಿ ಪ್ರತಿಯೊಂದು ಕಾರ್ಯಕ್ಕೂ ದೊಡ್ಡಬಳ್ಳಾಪುರ ತಾಲೂಕಿಗೆ ಸೇರುವ ನಮ್ಮ ತೂಬಗೆರೆ ಹೋಬಳಿಗೆ ಶಾಸಕರು ಮಾತ್ರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದವರು ಹಾಗಾಗಿ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕೆಂಬುದೇ ಅರ್ಥವಾಗುವುದಿಲ್ಲ ಎಂದು ರೈತರು ತಮ್ಮ ನೋವನ್ನು ಹೇಳಿಕೊಂಡರು.

    ರೈತ ಶ್ರೀನಿವಾಸಯ್ಯ ಮಾತನಾಡಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ತೂಬಗೆರೆ ಹೋಬಳಿಯ ಮೇಲಿನ ನಾಯಕರಾಂಡಹಳ್ಳಿ ಗ್ರಾಮದಲ್ಲಿ ಸುಮಾರು 100 ಎಕರೆ ಗೋಮಾಳ ಪ್ರದೇಶವನ್ನು ರೈತರಿಗೆ ಹಂಚಿಕೆ ಮಾಡಿದ್ದು ರೈತರು ತಮ್ಮ ಜಾಗಗಳಿಗೆ ತೆರಳಲು ಕಾಲುದಾರಿಯಾಗಲಿ ಬಂಡಿ ದಾರಿಯಾಗಲಿ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲ ಈ ಕುರಿತು ಹಲವು ಬಾರಿ ಮನವಿ ಮಾಡಿದ್ದೇವೆ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

     

    ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ದನ ಕರುಗಳ ಸಮೇತ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ತೂಬಗೆರೆ ಹೋಬಳಿಯ ರೈತ ಮುಖಂಡರು, ಕೆಆರ್‌ಎಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

  • *ಬಗೆಹರಿಯದ ನೀರಿನ ಸಮಸ್ಯೆ l ಶಾಸಕರ ಮುಖವಾಡ ಧರಿಸಿ ಪ್ರತಿಭಟನೆ l ರೈತರೊಂದಿಗೆ ಹೋರಾಟಕ್ಕಿಳಿದ ಕನ್ನಡ ಪಕ್ಷ*

    ಜಿಲ್ಲೆಯಲ್ಲಿ ಶಾಶ್ವತವಾಗಿ ನೀರಿನ ಬವಣೆಯನ್ನು ನಿಗಿಸುವಂತೆ ಅಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಶ್ರಯದಲ್ಲಿ ಕನ್ನಡ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನೆಡೆಸಿದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ಶಾಸಕರ ಮುಖವಾಡ ಧರಿಸಿ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಲಾಯಿತು.

    ಜುಲೈ 18 ರ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಅಂಜನ್ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅತ್ಯಧಿಕವಾಗಿದ್ದು ಸಮಸ್ಯೆ ಪರಿಹರಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಬೇಕಿದೆ. ಕಾರ್ಖಾನೆ ಹೊರಸೂಸುವ ತ್ಯಾಜ್ಯಗಳ ನೀರು ಅಂತರ್ಜಲ ಸೇರುವ ಮೂಲಕ ಜಲ ಮೂಲಗಳು ಸಂಪೂರ್ಣ ಹಾಳಾಗುತ್ತಿವೆ ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಜನತೆಯ ಜೀವ ಕಾಪಾಡಬೇಕಿದೆ ಎಂದರು.

     

    ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಅಧಿಕಾರಿಗಳು ಸಮಸ್ಯೆಯ ತೀವ್ರತೆ ಅರಿತು ಪರಿಸರ ಹಾಗೂ ಜನರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ನಮ್ಮ ಹೋರಾಟ ಶುದ್ಧ ನೀರಿಗಾಗಿ ಮನುಷ್ಯರಿಗೆ ನೀರು ಅತ್ಯವಶ್ಯಕವಾಗಿದ್ದು. ಜಿಲ್ಲೆಯಲ್ಲಿ ಸರ್ವರಿಗೂ ನೀರು ಸಮರ್ಪಕವಾಗಿ ದೊರೆಯುವಂತೆ ಯೋಜನೆ ರೂಪಿಸಬೇಕಿದೆ ಎಂದರು.

     

    ಕನ್ನಡ ಪಕ್ಷದ ತಾಲೂಕುಘಟಕದ ಅಧ್ಯಕ್ಷ ಡಿ. ವೆಂಕಟೇಶ್ ಮಾತನಾಡಿ ಜಿಲ್ಲೆಯಲ್ಲಿ ನೀರಿಗೆ ಸಂಬಂಧಿಸಿದಂತೆ ನಿರಂತರ ಹೋರಾಟಗಳು ನಡೆಯುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ನಮ್ ಕಾ ವಾಸ್ತೆ ಅಧಿಕಾರಿಗಳು ಭೇಟಿಕೊಟ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವುದು ನಾವು ಕಾಣುತ್ತೆವೆ. ಅಧಿಕಾರಿಗಳು ಸಮಸ್ಯೆಯ ಸೂಕ್ಷ್ಮತೆ ಅರಿತು ಸೂಕ್ತ ಕ್ರಮ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಬೇಕಿದೆ ಎಂದರು.

     

    ತಾಲೂಕು ರೈತ ಸಂಘದ ಮುಖಂಡರಾದ ತಿಮ್ಮೇಗೌಡ, ಶ್ರೀನಿವಾಸ್,ಮುತ್ತೇ ಗೌಡ್ರು,ಜಿಲ್ಲಾ ಅಧ್ಯಕ್ಷರಾದ ಮುನಿ ಪಾಪಯ್ಯ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

  • *ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 18 (ವಿಜಯಮಿತ್ರ):- ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಸಹಯೋಗದಲ್ಲಿ ಬಾಶೆಟ್ಟಿಹಳ್ಳಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳು, ಬಾಲ ನ್ಯಾಯ ಕಾಯ್ದೆ ಹಾಗೂ ಮಹಿಳೆಯರಿಗಿರುವ ಯೋಜನೆಗಳು, ಕಾಯ್ದೆ-ಕಾನೂನುಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹಾಗೂ ನಿರೂಪಣಾಧಿಕಾರಿ ಅನಿತಾಲಕ್ಷ್ಮಿ. ಎಸ್, ಕಾಲೇಜು ಕಾರ್ಯದರ್ಶಿ ಬಿನ್ನೋ ವರ್ಗಿಸ್, ಶಾಲಾ ಮುಖ್ಯೋಪಾಧ್ಯಾಯರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
    ಶ್ರೀಧರ್ ಯಾದವ್, ಮಕ್ಕಳ ಸಹಾಯವಾಣಿಯ ಶ್ರೀನಿವಾಸ್, ರಾಜಶೇಖರ.ಎನ್,, ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • *ಡೆಂಗ್ಯೂ ಹಾಗೂ ಚಿಕುನ್ ಗುನ್ಯ ರೋಗದಿಂದ ಜಾಗೃತರಾಗಿರಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಸಲಹೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18 (ವಿಜಯಮಿತ್ರ):- ರಾಜ್ಯದಲ್ಲಿ ಕಳೆದ ಒಂದುವರೆ ತಿಂಗಳಿಂದ ಡೆಂಗ್ಯೂ ಹಾಗೂ ಚಿಕುನ್ ಗುನ್ಯ ರೋಗದ ಪ್ರಕರಣಗಳು ಪತ್ತೆಯಾಗುತ್ತಿದ್ದು ಈ ರೋಗಗಳನ್ನು ನಿಯಂತ್ರಿಸಲು ಸಾರ್ವಜನಿಕರು ಜಾಗೃತರಾಗಿ ಹಲವು ಕ್ರಮಗಳ ಮೂಲಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡೆಂಗ್ಯೂ/ಚಿಕುನ್‌ ಗುನ್ಯ ರೋಗಗಳ ಪ್ರಕರಣವನ್ನು ನಿಯಂತ್ರಣದಲ್ಲಿ ಇಡಲು ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳು:-
    1. ಎಲ್ಲಾ ನೀರಿನ ಟ್ಯಾಂಕ್‌ಗಳು ಮತ್ತು ನೀರಿನ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು.
    2. ನಿರುಪಯುಕ್ತ ಪರಿಕರಗಳು, ಟೈರುಗಳು, ತೆಂಗಿನ ಚಿಪ್ಪುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಅಥವಾ ನಾಶಪಡಿಸುವುದು.
    3. ವಾರಕ್ಕೊಮ್ಮೆ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ ಮತ್ತು ಒಣಗಿಸಿ ನೀರನ್ನು ತುಂಬಿ ಭದ್ರವಾಗಿ ಮುಚ್ಚುವುದು.
    4. ಮನೆಯಲ್ಲಿರುವ ಮತ್ತು ಹೋಟೆಲ್‌ಗಳಲ್ಲಿರುವ ನೀರಿನ ಟ್ಯಾಂಕ್‌ಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡುವುದು
    5. ವಾರಕ್ಕೊಮ್ಮೆ ಒಂದು ದಿನ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ, ನೀರನ್ನು ತುಂಬದೇ ಒಣಗಿಸುವುದು (Dry-Day) ಉದಾಹರಣೆ- ಸಿಮೆಂಟ್ ತೊಟ್ಟಿ ಮತ್ತು ಡ್ರಂಗಳು.
    6. ಹಗಲಿನ ವೇಳೆಯಲ್ಲಿ ಮನೆಗಳಲ್ಲಿ ಮಲಗಿದ್ದಾಗ ಸೊಳ್ಳೆ ಪರದೆಗಳನ್ನು ಬಳಸುವುದು.
    7. ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಹಗಲು ವೇಳೆಯಲ್ಲಿ ತುಂಬುತೋಳಿನ ಬಟ್ಟೆ ಧರಿಸುವುದು ಅಥವಾ ಸೊಳ್ಳೆ ನಿರೋಧಕಗಳನ್ನು ಬಳಸುವುದು.
    8. ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು. ಉದಾಹರಣೆಗೆ ಪ್ರಿಡ್ಜ್, ಕೂಲರ್ಸ್, ಬಕೆಟ್ಸ್, ಬ್ಯಾರಲ್ಸ್, ಹೂವಿನಕುಂಡಗಳು ಮತ್ತು ತೆಂಗಿನ ಚಿಪ್ಪುಗಳು.
    9. ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಅಂದರೆ ಎಲ್ಲೆಂದರಲ್ಲಿ ಒಡೆದ ಮಡಿಕೆಗಳು, ಉಪಯೋಗಿಸದೇ ಇರುವ ಬಾಟಲ್‌ಗಳು, ಡಬ್ಬಗಳು, ಹಳೆಯ ಟೈರುಗಳು ಇತ್ಯಾದಿ ವಸ್ತುಗಳನ್ನು ಬಿಸಾಡಬಾರದು.

    *ಮಾಡಬಾರದಾದ ಕ್ರಮಗಳು:-*
    1. ಮನೆಗಳಲ್ಲಿ ತೆರೆದ ಪರಿಕರಗಳಲ್ಲಿ ನೀರನ್ನು ಸಂಗ್ರಹಿಸುವುದು ಹಾಗೂ ಅವುಗಳನ್ನು ಸ್ವಚ್ಚಗೊಳಿಸದೇ ಇರುವುದು.
    2. ಘನತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು.
    3. ಜ್ವರ ಬಂದಂತಹ ಸಂದರ್ಭಗಳಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು.
    4. ವೈದ್ಯರ ಸಲಹೆ, ಸೂಚನೆಗಳಿಲ್ಲದೇ ನೋವು ನಿವಾರಕ ಮಾತ್ರೆಗಳನ್ನು ಉಪಯೋಗಿಸುವುದು.
    5. ಹಿರಿಯ ನಾಗರಿಕರು ಮತ್ತು ಮಕ್ಕಳು ಹಗಲಿನ ವೇಳೆಯಲ್ಲಿ ಸೊಳ್ಳೆಪರದೆಗಳನ್ನು ಉಪಯೋಗಿಸದೆ ಮಲಗುವುದು.
    6. ದೇಹಕ್ಕೆ ಶ್ರಮವಾಗುವ ಕೆಲಸಗಳನ್ನು ಮಾಡುವುದು.
    ಸಾರ್ವಜನಿಕರು ಡೆಂಗ್ಯೂ, ಚಿಕನ್ ಗುನ್ಯ ರೋಗಗಳಿಂದ ದೂರವೀರಲು ಈ ರೀತಿಯ ಮುಂಜಾಗ್ರತಾ ಕ್ರಮವನ್ನು ವಹಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18 (ವಿಜಯಮಿತ್ರ):- 2024-25ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ ಗೌರವಧನದ ಆಧಾರದ ಮೇಲೆ ಪಡೆಯಲು ಉದ್ದೇಶಿಸಿರುವುದರಿಂದ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರಗಳಿರುವ (Biodata, Resume) ಮನವಿಗಳನ್ನು ಅವಶ್ಯ ದಾಖಲೆಗಳೊಂದಿಗೆ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಇಲ್ಲಿಗೆ ಸಲ್ಲಿಸುವುದು.

     

    1. ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾ|| (6 ರಿಂದ 10ನೇ ತರಗತಿ ಸಿ.ಬಿ.ಎಸ್.ಇ) ವಿಷಯ-ಗಣಿತ ಶಿಕ್ಷಕರು ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ ಹುದ್ದೆ-01, (11ನೇ ತರಗತಿ – ರಾಜ್ಯ ಪಠ್ಯಕ್ರಮ)(ಪಿ.ಸಿ.ಎಂ.ಬಿ) ವಿಷಯ-ರಸಾಯನಿಕ ಶಾಸ್ತ್ರ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎಸ್.ಸಿ/ಬಿ.ಇಡಿ ಹುದ್ದೆ-01, ಜೀವಶಾಸ್ತ್ರ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎಸ್.ಸಿ/ಬಿ.ಇಡಿ ಹುದ್ದೆ-01

     

    2. ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ, ದೇವನಹಳ್ಳಿ ತಾ|| (11 ನೇ ತರಗತಿ – ರಾಜ್ಯ ಪಠ್ಯಕ್ರಮ) (ಪಿ.ಸಿ.ಎಂ.ಬಿ) ವಿಷಯ- ಕನ್ನಡ ಭಾಷಾ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎ/ಬಿ.ಇಡಿ ಹುದ್ದೆ-01, ಇಂಗ್ಲೀಷ್ ಭಾಷಾ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎ/ಬಿ.ಇಡಿ ಹುದ್ದೆ-01, ರಸಾಯನಿಕ ಶಾಸ್ತ್ರ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎಸ್.ಸಿ/ಬಿ.ಇಡಿ ಹುದ್ದೆ-01

     

    3. ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾ|| ಆಂಗ್ಲ ಭಾಷಾ ಶಿಕ್ಷಕರು ಬಿ.ಎ/ಬಿ.ಇಡಿ 01

     

    4. ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ, ನೆಲಮಂಗಲ ತಾ|| ಕನ್ನಡ ಶಿಕ್ಷಕರು ವಿದ್ಯಾರ್ಹತೆ- ಬಿ.ಎ/ಬಿ.ಇಡಿ ಹುದ್ದೆ-01, ಹಿಂದಿ ಶಿಕ್ಷಕರು ವಿದ್ಯಾರ್ಹತೆ-ಬಿ.ಎ/ಬಿ.ಇಡಿ ಹುದ್ದೆ-01, ಗಣಿತ ಶಿಕ್ಷಕರು ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ ಹುದ್ದೆ-01, ಸಾಮಾನ್ಯ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ- ಬಿ.ಎಸ್.ಸಿ/ಬಿ.ಇಡಿ ಹುದ್ದೆ-01, ಸಮಾಜ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ-ಬಿ.ಎ/ಬಿ.ಇಡಿ ಹುದ್ದೆ-01

     

    5. ಮೌಲಾನಾ ಆಜಾದ್ ಮಾದರಿ ಶಾಲೆ, ವಿಜಯಪುರ ದೇವನಹಳ್ಳಿ ತಾ|| ಸಾಮಾನ್ಯ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ ಹುದ್ದೆ-01

     

    ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದೆ.

     

    ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ:216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋ||, ದೇವನಹಳ್ಳಿ ತಾ||-562110, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂ.ಸಂ-080-29787455, ಪ್ರಾಂಶುಪಾಲರು, ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾ|| ದೂ.ಸಂ-8660971267, ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ, ದೇವನಹಳ್ಳಿ ತಾ||. ದೂ.ಸಂ-7338227541, ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ ಗ್ರಾಮ, ನೆಲಮಂಗಲ ತಾಲ್ಲೂಕು ದೂ.ಸಂ-9731017483, ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾಲ್ಲೂಕು ದೂ.ಸಂ-9743239145, ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ವಿಜಯಪುರ, ದೇವನಹಳ್ಳಿ ತಾಲ್ಲೂಕು ದೂ.ಸಂ-9066296080 ಈ ಸಂಖ್ಯೆಗೆ ಸಂಪರ್ಕಿಸಬಹುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ದ್ವಿಚಕ್ರ ವಾಹನ(ಬೈಕ್) ರಿಪೇರಿ ಮತ್ತು ಸೇವೆ ಉಚಿತ ತರಬೇತಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18 (ವಿಜಯಮಿತ್ರ):- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್‌ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್‌ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯನ್ನು ಆಗಸ್ಟ್‌ 21 ರಿಂದ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್‌ ಕಾರ್ಡ್‌ ಅಥವಾ ಜಾಬ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ನ್ನು ಕಡ್ಡಾಯವಾಗಿ ಹೊಂದಿರಬೇಕು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

     

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

     

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್‌ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್‌ ಸಂಖ್ಯೆ: 9740982585, 9380162042 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್‌ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಅಲ್ಪಸಂಖ್ಯಾತ ಕಾನೂನು ಪದವೀಧರರಿಂದ ಕಾನೂನು ತರಬೇತಿಗಾಗಿ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18 (ವಿಜಯಮಿತ್ರ):- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2024-25ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಕಾನೂನು ಪದವೀಧರರಿಂದ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ಅವಧಿಗೆ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     

    ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ನಿಗದಿತ ಅವಧಿಯೊಳಗೆ ಕಛೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಲಾದ ಅರ್ಜಿಗಳನ್ನು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216, 2ನೇ ಮಹಡಿ, ಜಿಲ್ಲಾಢಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇಲ್ಲಿಗೆ ಜುಲೈ 30 ರೊಳಗೆ ಸಲ್ಲಿಸುವುದು.

     

    ಕಾನೂನು ತರಬೇತಿ ಪಡೆಯುವ ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಗಳಲ್ಲಿ ಯಾವುದಾದರೊಂದು ಸಮುದಾಯಕ್ಕೆ ಸೇರಿದ್ದು ರಾಜ್ಯದ ನಿವಾಸಿಯಾಗಿರಬೇಕು.

     

    ಅಭ್ಯರ್ಥಿಯ ಕುಂಟುಬದ ವಾರ್ಷಿಕ ಆದಾಯವು ರೂ. 3.50,000/-ಕ್ಕೆ ಮೀರಿರಬಾರದು. ಅಭ್ಯರ್ಥಿಗಳು ಬಾರ್ ಕೌನ್ಸಿಲ್ನಲ್ಲಿ ಹೆಸರನ್ನು ನೊಂದಾಯಿಸಿರಬೇಕು. ಅಭ್ಯರ್ಥಿಯು ಕಾನೂನು ಪದವೀಧರರಾಗಿದ್ದು, ಈ ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷದೊಳಗೆ ಇರಬೇಕು ಮತ್ತು ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕಕ್ಕೆ ಅಭ್ಯರ್ಥಿಯು 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗರಬೇಕು.

     

    ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ.5000/-ಗಳ ತರಬೇತಿ ಭತ್ಯೆಯನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಯು ಇಲಾಖೆಯ ನಿಬಂಧನೆಗಳು ಹಾಗೂ ಸರ್ಕಾರದ ಆದೇಶಗಳಿಗೆ ಬದ್ದನಾಗಿರುತ್ತೇನೆಂದು ಮುಚ್ಚಳಿಕೆಯನ್ನು ಬರೆದುಕೊಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷಗಳ ತರಬೇತಿ ಅವಧಿ ಇದ್ದು, ಮಧ್ಯದಲ್ಲಿ ತರಬೇತಿಯನ್ನು ಬಿಡಲು ಅವಕಾಶವಿರುವುದಿಲ್ಲ. ಈ ಬಗ್ಗೆ ಮುಚ್ಚಳಿಕೆ ಪತ್ರ ನೀಡಬೇಕು. ಒಂದು ವೇಳೆ ಸರ್ಕಾರಿ ಉದ್ಯೋಗ ದೊರಕಿದಲ್ಲಿ ಅಥವಾ ನ್ಯಾಯಾಧಿಕಾರಿಯಾಗಿ ನೇಮಕಾತಿ ಹೊಂದಿದಲ್ಲಿ ಜಿಲ್ಲಾ ಸಮಿತಿಯ ಗಮನಕ್ಕೆ ತಂದು ತರಬೇತಿ ಬಿಡಬಹುದು. ವಿಶೇಷ ಸಂದರ್ಭದಲ್ಲಿ ತರಬೇತಿ ಬಿಡಬೇಕಾದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಜಿಲ್ಲಾ ಸಮಿತಿಯು ಪಬ್ಲಿಕ್ ಪ್ರಾಸಿಕ್ಯೂಟರ್/ಸರ್ಕಾರಿ ವಕೀಲರು ಅಥವಾ 20 (ಇಪ್ಪತ್ತು) ವರ್ಷಗಳಿಗಿಂತ ಹೆಚ್ಚಿನ ವರ್ಷಗಳು ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರಲ್ಲಿ ಕಾನೂನು ತರಬೇತಿ ಪಡೆಯುವ ಸಲುವಾಗಿ ತರಬೇತಿಗೆ ಕಳುಹಿಸಿ ಕೊಡಲಾಗುವುದು. ಆಯ್ಕೆಯಾದ ಅಭ್ಯರ್ಥಿಯು ಸುಳ್ಳು ಮಾಹಿತಿ/ದಾಖಲೆಗಳನ್ನು ನೀಡಿದ್ದಲ್ಲಿ ಅಥವಾ ತರಬೇತಿ ಅವಧಿಯ ಮಧ್ಯದಲ್ಲಿ ತರಬೇತಿಯಿಂದ ಬಿಟ್ಟುಹೋದಲ್ಲಿ ಸರ್ಕಾರ ಅವರಿಗಾಗಿ ಖರ್ಚು ಮಾಡಿದ ಹಣವನ್ನು ವರ್ಷಕ್ಕೆ ಶೇ.10ರ ಬಡ್ಡಿಯೊಂದಿಗೆ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲು ಸಂದರ್ಶನದ ದಿನಾಂಕ ಹಾಗೂ ಸ್ಧಳವನ್ನು ತಿಳಿಸಲಾಗುವುದು. ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. ಅಭ್ಯರ್ಥಿಗಳು ಭರ್ತಿ ಮಾಡಲಾದ ಅರ್ಜಿಯೊಂದಿಗೆ ಅವಶ್ಯಕ ಮಾಹಿತಿಗಳಾದ ಕಾನೂನು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳ ದೃಢೀಕರಣ ಪ್ರತಿ ಹಾಗೂ ಜನ್ಮ ದಿನಾಂಕದ ಆಧಾರಕ್ಕಾಗಿ ಎಸ್.ಎಸ್.ಎಲ್.ಸಿ.ಅಂಕಪಟ್ಟಿ ಅಥವಾ ಟಿ.ಸಿ.ದೃಢೀಕೃತ ಪ್ರತಿ ಹಾಗೂ ಆಹಾರ ಪಡಿತರ ಚೀಟಿ ಅಥವಾ ತಹಶೀಲ್ದಾರ್ರವರಿಂದ ಪಡೆದ ವಾಸಸ್ಧಳದ ದೃಢೀಕೃತ ಪತ್ರ ಸಲ್ಲಿಸಬೇಕು. ಅಪೂರ್ಣ ಮಾಹಿತಿಗಳಿಂದ ಕೂಡಿದ ಅರ್ಜಿಗಳನ್ನು ಹಾಗೂ ನಿಗದಿತ ದಿನಾಂಕ, ವೇಳೆ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

     

    ಅರ್ಜಿಯನ್ನು ಸ್ವೀಕರಿಸುವುದಕ್ಕೆ ಜುಲೈ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216,2ನೇ ಮಹಡಿ, ಜಿಲ್ಲಾಢಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇವರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು ಎಂದು ಸದಸ್ಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ದಶಕಗಳ ಹುಣಸೆ ಮರಗಳಿಗೆ ಕೊಡಲಿ ಪೆಟ್ಟು: ಲೇಔಟ್ ಅಂದ ಹೆಚ್ಚಿಸಲು ಹುಣಸೆ ಮರಗಳ ರೆಂಬೆ-ಕೊಂಬೆಗಳ ಕಟಾವ್ – ಚಿದಾನಂದ್ ಮೂರ್ತಿ*

    ದೊಡ್ಡಬಳ್ಳಾಪುರ : ನೂರಾರು ವರ್ಷಗಳಿಂದ ಇದ್ದ ಹುಣಸೆ ಮರಗಳ ರಂಬೆ ಕೊಂಬೆಗಳನ್ನು ಕಡಿಯಲಾಗಿದೆ ಶಾಸಕರಿಗೆ     ಸೇರಿದೆ ಎನ್ನಲಾದ ಲೇಔಟ್ ನಲ್ಲಿ ಈ ಘಟನೆ ಸಂಭವಿಸಿದ್ದು ಪರಿಸರ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಮರಗಳ ಈ ಸ್ಥಿತಿಕಂಡು ಪರಿಸರ ಪ್ರೇಮಿಗಳು ಆಕ್ರೋಶಗೊಂಡಿದ್ದಾರೆ.

    ನಗರದ ಬಸವ ಭವನದ ಸಮೀಪ ಹಾದು ಹೋಗಿರುವ ದಾಬಸ್ ಪೇಟೆ ಹಾಗೂ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಬೃಹದಾಕಾರವಾದ ಹುಣಸೆ ಮರಗಳು ಇದ್ದು.ಲಾವಣ್ಯ ಶಾಲೆ ಸಮೀಪ ಶಾಸಕರಿಗೆ ಸಂಬಂಧಿಸಿದೆ ಎನ್ನಲಾದ ಲೇಔಟ್ ಮುಂದೆ ಇದ್ದ ಹುಣಸೆ ಮರಗಳ ರೆಂಬೆ ಕೊಂಬೆಗಳ ಕಡಿದು ಮರಗಳ ಅಂದ ಚೆಂದ ಕೆಡಿಸಿದಲ್ಲದೇ ನಗರದ ಸೌಂದರ್ಯವನ್ನು ಹಾಳು ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

     

    ಈ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹುಣಸೆ ಮರಗಳ ಇರುವದರಿಂದ ಹೆದ್ದಾರಿಗೆ ಒಂದು ರೀತಿಯ ಸೌಂದರ್ಯ ಎದ್ದು ಕಾಣುತ್ತಿತ್ತು. ಬಹಳ ವರ್ಷಗಳಿಂದ ಈ ಮರಗಳು ಯಾರಿಗೂ ಎನೂ ತೊಂದರೆ ಮಾಡಿಲ್ಲ. ಈಗ ತೊಂದರೆ ಮಾಡುತ್ತವೆ ಎಂದು ರೆಂಬೆ ಕೊಂಬೆಗಳಿಗೆ ಕೊಡಲಿ ಹಾಕಿದ್ದಾರೆ ಎಂದು ಪರಿಸರ ಪ್ರೇಮಿ ಚಿದಾನಂದ್ ಮೂರ್ತಿ ಆರೋಪಿಸಿದ್ದಾರೆ.

    ಒಳನೋಟಕ್ಕೆ ಲೇಔಟ್ ಗೆ ಈ ಹುಣಸೆ ಮರಗಳು ತೊಂದರೆ ಕೊಡುತ್ತವೆ.‌ ಮರಗಳಿಂದ ಲೇಔಟ್ ನ ಅಂದ ಚೆಂದ ಹಾಳಾಗುತ್ತೆ, ಈ ಮರಗಳು ಅಡ್ಡಿ ಇರುವುದರಿಂದ ಲೇಔಟ್ ಯಾರಿಗೂ ಕಾಣುವುದಿಲ್ಲ ಎಂದು ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ .

     

    ಮೇಲ್ನೋಟಕ್ಕೆ ವಿದ್ಯುತ್ ಲೈನ್ ಗೆ ರೆಂಬೆ ಕೊಂಬೆಗಳು ತಾಕುತ್ತವೆ. ಇದರಿಂದ ಅವಘಡ ಸಂಭವಿಸುತ್ತದೆ ಎಂದು ಹೇಳಿ ಅರ್ಧ ಮರವನ್ನೆ ಕತ್ತರಿಸಲಾಗಿದೆ.

     

    ಅರಣ್ಯ ಇಲಾಖೆಯಿಂದ ಲೇಔಟ್ ಮುಂದಿರುವ ನಾಲ್ಕು ಮರಗಳ ಹತ್ತು ಕೊಂಬೆಗಳನ್ನು ಕಡಿಯಲು ಹಾಗೂ ಎರಡು ಮರಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಅನುಮತಿ ಪಡೆದಿದ್ದಾರೆ. ಇದಕ್ಕೂ ಅರಣ್ಯ ಇಲಾಖೆ ಅನುಮತಿ ನೀಡಬಾರದಿತ್ತು. ಅನುಮತಿ ನೀಡಿದ್ದಾರೆಂದರೆ ಅದು ರಾಜಕೀಯ ಪ್ರಭಾವ ಎಂದೇ ಭಾವಿಸಬೇಕಾಗಿದೆ. ತಮ್ಮ ಅಧಿಕಾರ ಬಳಸಿ ಅವೈಜ್ಞಾನಿಕವಾದ ಕೆಲಸವನ್ನು ಕಾನೂನಾತ್ಮಕವಾಗಿ ಮಾಡಲು ಶಾಸಕರು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.

  • *ಯುವ ಸಂಚಲನ ಹೊಸ ಹೆಜ್ಜೆ : ಸರಹು ಅಭಿಯಾನದ ಉದ್ಘಾಟನಾ ಕಾರ್ಯಕ್ರಮ*

    ದೊಡ್ಡಬಳ್ಳಾಪುರ : ಸರಹು ಅಭಿಯಾನದ ಮೂಲಕ ವಿನೂತನ ಕಾರ್ಯಕ್ರಮಕ್ಕೆ ಮುಂದಾದ ಯುವ ಸಂಚಲನ ಯುವಕರ ಪಡೆ, ಸಾಕ್ಷ್ಯಚಿತ್ರಗಳ ಪ್ರದರ್ಶನ ಮಾಡುವ ಮೂಲಕ ಕೆರೆ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ.

     

    ಯುವ ಸಂಚಲನ (ರಿ.) ದೊಡ್ಡಬಳ್ಳಾಪುರ, ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ.ಸರಹು ಅಭಿಯಾನದ ಮೂಲಕ ಅರ್ಕಾವತಿ ನದಿ ಜಲ ಮೂಲಗಳ ಸಂರಕ್ಷಣೆಗಾಗಿ ಸಾಕ್ಷ್ಯಚಿತ್ರಗಳ ಪ್ರದರ್ಶನ ವನ್ನು ತಾಲ್ಲೂಕಿನ ಕಾಲೇಜುಗಳಲ್ಲಿ ಮಾಡಲಾಗುವುದು ಎಂದು ಯುವಸಂಚಲನ ಅಧ್ಯಕ್ಷ ಚಿದಾನಂದ್ ಮೂರ್ತಿ ತಿಳಿಸಿದರು.

     

    ನಗರದ ರೈಲ್ವೆ ಸ್ಟೇಷನ್ ಸಮೀಪದ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 18 ರಂದು ಮಧ್ಯಾಹ್ನ 2:30 ಕ್ಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆ‌ರ್.ಆಂಜನೇಯ ರೆಡ್ಡಿ, ರಾಷ್ಟ್ರೀಯ ಹಾಗೂ ರಾಜ್ಯದ ಅತ್ಯುತ್ತಮ ಬಾಲ ನಟ ಪ್ರಶಸ್ತಿ ವಿಜೇತ ಕೆ.ಮನೋಹರ, ಶ್ರೀ ಸೂರ್ಯ ಎಜುಕೇಷನ್‌ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಡಾ:ಹೆಚ್ ಜಿ ವಿಜಯಕುಮಾರ್, ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ ಸಿ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.