Blog

  • *ನಿರುದ್ಯೋಗಿಗಳಿಗೆ ವೃತ್ತಿಪರ ತರಬೇತಿ ಸಿಗಲಿ: ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ.20 (ವಿಜಯಮಿತ್ರ):- ನಿರುದ್ಯೋಗ ಯುವಕ-ಯುವತಿಯರಿಗೆ ವೃತ್ತಿಪರ ತರಬೇತಿ ಹಾಗೂ ಉದ್ಯಮಶೀಲತೆ ಚಟುವಟಿಕೆಗಳ ತರಬೇತಿಯನ್ನು ವಿವಿಧ ತರಬೇತಿ ಸಂಸ್ಥೆಗಳ ಮೂಲಕ ಉಚಿತವಾಗಿ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು.

     

    ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

     

    ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜುಲೈ ಮಾಹೇ ವರೆಗೆ 2179 ನಿರುದ್ಯೋಗಿಗಳು ನೋಂದಣಿ ಮಾಡಿಕೊಂಡಿದ್ದಾರೆ.

     

    ಜಿಲ್ಲೆಯಲ್ಲಿ 1506 ನಿರುದ್ಯೋಗಿಗಳು ವಿವಿಧ ತರಬೇತಿ ಸಂಸ್ಥೆಯಲ್ಲಿ ಸ್ವಯಂ ಉದ್ಯೋಗ ತರಬೇತಿಯನ್ನು ಪಡೆದುಕೊಂಡಿದ್ದಾರೆ.

     

    ಜಿಲ್ಲೆಯಲ್ಲಿರುವ ವಿವಿಧ ಖಾಸಗಿ ಕೈಗಾರಿಕಾ ವಲಯಗಳಲ್ಲಿ ಆಪರೇಟರ್, ಟೈಲರ್, ಕಂಪ್ಯೂಟರ್ ಆಪರೇಟರ್, ಹೆಲ್ಪರ್, ಟ್ರೈನಿ, ಟೆಕ್ನಿಶನ್, ಇಂಜನೀಯರ್ಸ್, ಸೆಕ್ಯುರಿಟಿ ಗಾರ್ಡ್ ಸೇರಿ 3400 ಉದ್ಯೋಗಿಗಳಿಗೆ ಹೆಚ್ಚಿನ ಬೇಡಿಕೆಗಳಿದ್ದು, ಅರ್ಹ ನಿರುದ್ಯೋಗಿಗಳಿಗೆ ತರಬೇತಿ ಮೂಲಕ ಉದ್ಯೋಗ ಸಿಗುವಂತಾಗಬೇಕು.

     

    ಪಿ.ಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯಲ್ಲಿ 105 ಅಭ್ಯರ್ಥಿಗಳು ಸ್ವಯಂ ಉದ್ಯಮ ತರಬೇತಿಯನ್ನು ಪಡೆದುಕೊಂಡಿದ್ದಾರೆ.

     

    ಡೇ-ನಲ್ಮ್ ಯೋಜನೆಯ ಎಲ್ಲ ಉಪಘಟಕಗಳ ಪ್ರಗತಿ ಪರಿಶೀಲನೆ, ಪಿ.ಎಂ. ಸ್ವ-ನಿಧಿ, ಪಿ.ಎಂ ವಿಶ್ವಕರ್ಮ ಯೋಜನೆಯಡಿ ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ಪಡೆದು ಸಾಲ ಮಂಜೂರಾತಿ ಹಾಗೂ ವಿತರಣೆಗೆ ಆದ್ಯತಾನುಸಾರ ಕ್ರಮವಹಿಸಿ, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

     

    ಸಭೆಯಲ್ಲಿ ಜಿ.ಪಂ ಯೋಜನಾ ನಿರ್ದೇಶಕ ವಿಠ್ಠಲ ಕಾವ್ಳೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾದ ನರೇಂದ್ರ ಬಾಬು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗನ್ನಾಥ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಟಿ.ಎಲ್.ಎಸ್ ಪ್ರೇಮಾ, ಸಿಬ್ಬಂದಿ ಉಪಸ್ಥಿತರಿದ್ದರು.

  • *ಸಾರ್ವಜನಿಕರ ಸಮಸ್ಯೆ ಶೀಘ್ರ ಬಗೆಹರಿಸಲು ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 20(ವಿಜಯಮಿತ್ರ ):- ಸಾರ್ವಜನಿಕರು ಜನಸ್ಪಂದನ ಸಭೆಗಳಲ್ಲಿ ಸಲ್ಲಿಸುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಶೀಘ್ರ ಬಗೆಹರಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು.

    ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪ್ರಜೆಗಳ ಸೇವೆ ಮಾಡುವ ದೃಷ್ಟಿಯಿಂದ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಪ್ರತಿನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಜನರ ಬಳಿಗೆ ಸರ್ಕಾರವನ್ನು ಕಳುಹಿಸಿ ಪ್ರಜೆಗಳ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸ್ಥಳದಲ್ಲಿಯೇ ಪರಿಹರಿಸುವ ಸಲುವಾಗಿ ನಿಟ್ಟಿನಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ಸಹಕಾರಿಯಾಗಲಿದೆ. ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಳಂಬ ಮಾಡದೆ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಪೋಡಿ ಕಾರ್ಯ, ಒತ್ತುವರಿ ತೆರವು, ಸ್ಮಶಾನ ಭೂಮಿ ಅಭಿವೃದ್ಧಿ, ಹಕ್ಕು ಪತ್ರ ವಿತರಣೆ ,ಸಾಗುವಳಿ ಚೀಟಿ ವಿತರಣೆ, ಜಮೀನು ಸರ್ವೇಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಮಯ ನಿಗದಿ ಪಡಿಸಿ ಸಮಸ್ಯೆ ಬಗೆಹರಿಸಲಾಗುವುದು. ನಿವೇಶನ ರಹಿತ, ವಸತಿ ರಹಿತರಿಗೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.

     

    *77 ಅರ್ಜಿ ಸ್ವೀಕಾರ*

     

    ಸರ್ಕಾರಿ ಜಾಗ ಒತ್ತುವರಿ, ಪೋಡಿ ಪ್ರಕರಣ, ಜಮೀನು ತಕರಾರು, ಜಮೀನು ಸರ್ವೆ ಕಾರ್ಯ, ಸ್ಮಶಾನ ಜಾಗ ಹಾಗೂ ರಸ್ತೆ ವ್ಯವಸ್ಥೆ, ಗೋಮಾಳ ಒತ್ತುವರಿ, ಹಕ್ಕು ಪತ್ರ ಹಂಚಿಕೆ, ಕೊಳವೆ ಬಾವಿ ಹಂಚಿಕೆ, ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ ಮುಂತಾದ ಇತರೆ ಮೂಲಭೂತ ಸಮಸ್ಯೆಗಳು, ಸೇರಿದಂತೆ ಒಟ್ಟು 77 ಅಹವಾಲುಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಯಿತು.

    ಸಭೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ(ಬಯಪ) ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜಣ್ಣ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ ಎನ್, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಜಿಲ್ಲಾ & ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

  • *ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ,ಜುಲೈ 20(ವಿಜಯಮಿತ್ರ):- ಮೀನುಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನಿಂದ ಕೇಂದ್ರ ಪುರಸ್ಕೃತ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

    2020-21, 2021-22, 2022-23 ಮತ್ತು 2023-24 ನೇ ಸಾಲಿನಲ್ಲಿ ಉಳಿಕೆಯಾಗಿರುವ ಗುರಿಗಳಿಗೆ 2024-25ನೇ ಸಾಲಿನ ಯೋಜನೆಯಡಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಾದ ಮೀನು ಕೃಷಿ ಕೊಳಗಳ ನಿರ್ಮಾಣ, ಮಧ್ಯಮ ಗಾತ್ರದ ಆರ್.ಎ.ಎಸ್, 0.1 ಹೆಕ್ಟರ್ ಬಯೋಫ್ಲಾಕ್ ಘಟಕಗಳಿಗೆ, ಶೈತ್ಯಾಗಾರ/ ಮಂಜುಗಡ್ಡೆ, ಸ್ಥಾವರ ನಿರ್ಮಾಣ, ಐಸ್ ಪೆಟ್ಟಿಗೆಯೊಂದಿಗೆ ಮೋಟರ್ ಸೈಕಲ್, ಮೀನು/ ಅಕ್ವೇರಿಯಂ ಕಿಯೋಸ್ಕಗಳ ಸ್ಥಾಪನೆ ಮತ್ತು ಇತರೆ ಯೋಜನೆಗಳನ್ನು ಅನುಷ್ಠಾನಗೂಳಿಸಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 40 ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇಕಡ 60 ರಷ್ಟು ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಆಗಸ್ಟ್ 05 ಕೊನೆಯ ದಿನವಾಗಿದೆ.

    2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯ ಕೇಂದ್ರ ವಲಯ/ರಾಜ್ಯ ವಲಯ / ಜಿಲ್ಲಾ ವಲಯದ ವಿವಿಧ ಯೋಜನೆಗಳಲ್ಲಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಖರೀದಿ, ಮೀನು ಮರಿ ಖರೀದಿಗೆ ಹಾಗು ಇತ್ಯಾದಿ ಯೋಜನೆಗಳಿಗೆ ಸಹಾಯಧನ ಪಡೆಯಲು ಅಸಕ್ತ ಒಳನಾಡು ಮೀನುಗಾರರು/ ಮೀನು ಕೃಷಿಕರು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಿ, ಅರ್ಜಿಗಳನ್ನು ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಜಿಲ್ಲಾ ಕಛೇರಿ ಹಾಗೂ ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರುಗಳನ್ನು ಸಂಪರ್ಕಿಸುವುದು.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೀನುಗಾರಿಕೆ ಉಪನಿರ್ದೇಶಕರು ದೂ.ಸಂ-080-23362555/ 9972189781, ದೇವನಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-9448500385, ದೊಡ್ಡಬಳ್ಳಾಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-9945189390, ಹೊಸಕೋಟೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-9845180161, ನೆಲಮಂಗಲ ಮೀನುಗಾರಿಕೆ ಸಹಾಯಕ ನಿರ್ದೇಶಕರು ದೂ.ಸಂ-8747012127 ಇವರನ್ನು ಸಂಪರ್ಕಿಸಬಹುದೆಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • *ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಚಾರಕರಾಗಿ ಕಾರ್ಯ ನಿರ್ವಹಿಸಿದ ನರೇಂದ್ರ ಬಾಬು ರವರಿಗೆ ಹಳೇ ವಿದ್ಯಾರ್ಥಿಗಳ ಸಂಘದಿಂದ ಬೀಳ್ಕೊಡುಗೆ*

    ದೊಡ್ಡಬಳ್ಳಾಪುರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ನರೇಂದ್ರ ಬಾಬು. ಜಿ ರವರು ಇಂದು ಹೆಸರಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡ ಹಿನ್ನಲೆ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ವಿ. ಸಂಘದ ಪರವಾಗಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಕೊಟ್ಟರು.

     

     

    ಪ್ರಾಮಾಣಿಕರಾಗಿ ನಿರಂತರ ಸೇವೆಸಲ್ಲಿಸಿ ಇಂದು ನಮ್ಮ ಕಾಲೇಜಿನಿಂದ ಹೆಸರಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಯಾಗುತ್ತಿರುವ ನರೇಂದ್ರ ಬಾಬು ಸರ್ ರವರಿಗೆ ಶುಭವಾಗಲಿ ಅವರ ಸೇವೆ ಮತ್ತಷ್ಟು ವಿದ್ಯಾರ್ಥಿಗಳಿಗೆ ಲಭಿಸಲಿ ಎಂದು ಪ್ರವೀಣ್ ಕುಮಾರ್ ಹಾರೈಸಿದರು.

     

     

    ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ! ಸದಾಶಿವ ರಾಮಚಂದ್ರ ಗೌಡ ರವರು.ಸಂಘದ ಕಾರ್ಯದರ್ಶಿ ಮಂಜುನಾಥ ರವರು.ನಿರ್ದೇಶಕರಾದ ರಾಜೇಂದ್ರ ರವರು ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು….

  • *1,576ನೇ ದಿನದ ನಿರಂತರ ಅನ್ನದ ಸಹ ಕಾರ್ಯಕ್ರಮ : ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕ ಪೆನ್ ವಿತರಣೆ*

    ದೊಡ್ಡಬಳ್ಳಾಪುರ ದರ್ಗಾಜೋಗಿಹಳ್ಳಿ : ಬ್ಯಾಂಕ್ ಆಫ್ ಬರೋಡ ಸಂಸ್ಥೆಯ 117ನೇ ಸ್ಥಾಪನಾ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್ ಪುಸ್ತಕ ಹಾಗೂ ಪೆನ್ನು ಗಳ ವಿತರಣೆ ಮಾಡಿದ್ದೇವೆ ಎಂದು ದೊಡ್ಡಬಳ್ಳಾಪುರ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ವಿನೋದ್ ಕುಮಾರ್ ತಿಳಿಸಿದರು.

    1,576 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಅನ್ನದಾಸೋಹಿ ಮಲ್ಲೇಶ್ ಸತತವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿದ್ದು ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಶ್ಯಕತೆ ಇರುವ ಸಾಮಗ್ರಿಗಳನ್ನು ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಬ್ಯಾಂಕ್ ಆಫ್ ಬರೋಡದ ಸಂಸ್ಥಾಪನಾ ದಿನವಾದ ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಅವಶ್ಯಕತೆ ಇರುವ ಶಾಲಾ ಬ್ಯಾಗ್, ಪುಸ್ತಕ, ಹಾಗೂ ಪೆನ್ನು ಗಳ ವಿತರಣೆ ಮಾಡಲಾಗಿದೆ ಎಂದರು.

    ಮುಂದೆ ನಮ್ಮ ಬ್ಯಾಂಕ್ ವತಿಯಿಂದ ಮತ್ತಷ್ಟು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.

     

    ಬ್ಯಾಂಕ್ ಸಿಬ್ಬಂದಿ ಮುನೇಗೌಡ ಮಾತನಾಡಿ ಹಲವು ಬಾರಿ ನಮ್ಮ ವಯಕ್ತಿಕ ವಿಶೇಷದಿನಗಳನ್ನು ಅನ್ನದಾಸೋಹ ಸಮಿತಿಯೋಟ್ಟಿಗೆ ಆಚರಿಸಿದ್ದೇವೆ. ಇಂದು ಸುದಿನ ನಮ್ಮ ಬ್ಯಾಂಕ್ ಸ್ಥಾಪನೆಯಾಗಿ 117 ವರ್ಷಗಳನ್ನು ಪೂರ್ಣಗೋಳಿಸಿರುವ ಹಿನ್ನಲೆಯಲ್ಲಿ ಶಾಲಾಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಗಿದೆ ವಿಶೇಷ ದಿನವನ್ನು ವಿಶೇಷವಾಗಿ ಅನ್ನದಾಸೋಹಿ ಮಲ್ಲೇಶ್ ನೇತೃತ್ವದಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.

    ಅನ್ನದಾಸೋಹ ಕಾರ್ಯಕ್ರಮಕ್ಕೆ ವಿಶೇಷ ದಾನಿಗಳಾಗಿ ದೊಡ್ಡಬಳ್ಳಾಪುರ ನಗರಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ರವರು ಸಹಾಯಹಸ್ತ ನೀಡಿದ್ದು ಅವರಿಗೆ ವಿಶೇಷವಾಗಿ ಅನ್ನದಾಸೋಹಿ ಮಲ್ಲೇಶ್ ಮತ್ತು ತಂಡ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.

    ಕಾರ್ಯಕ್ರಮದ ಆಯೋಜಕ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಇಂದಿನ ಅನ್ನದಾಸೋಹ ಕಾರ್ಯಕ್ರಮಕ್ಕೆ ಗ್ರಾಮದ ಮುಖಂಡರಾದ ಡಿ ಕೆ ಭಾಸ್ಕರ್ ರಾವ್ ಸಹಾಯಹಸ್ತ ನೀಡಿದ್ದು. ಸ್ಥಳೀಯರಾದ ಶಿವಲೀಲಾ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಮಕ್ಕಳಿಗೆ

    ಸಿಹಿ ವಿತರಣೆ ಮಾಡಿದ್ದಾರೆ.ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಾದ ವಿನೋದ್ ಕುಮಾರ್ ರವರು ಇಂದಿನ ಕಾರ್ಯಕ್ರಮದಲ್ಲಿ ವಿಶೇಷವಾಗಿ ಭಾಗವಹಿಸಿ ತಮ್ಮ ಬ್ಯಾಂಕ್ ಸ್ಥಾಪನೆಯಾದ ದಿನವನ್ನು ಅನ್ನದಾಸೋಹ ಸಮಿತಿಯ ಜೊತೆ ಶಾಲಾ ಮಕ್ಕಳ ವಿಧ್ಯಾರ್ಜನೆಗೆ ಅವಶ್ಯಕವಿರುವ ಸಾಮಗ್ರಿಗಳನ್ನು ಮಕ್ಕಳಿಗೆ ನೀಡುವ ಮೂಲಕ ಆಚರಣೆ ಮಾಡಿರುವುದು ಶ್ಲಾಘನಿಯ ಅವರ ಸಮಾಜ ಸೇವೆ ಮತ್ತಷ್ಟು ಮುಂದುವರೆಯಲಿ ಎಂದು ಹಾರೈಸಿದರು.ತಮ್ಮ ಯಾವುದೇ ವಿಶೇಷ ದಿನಗಳನ್ನು ಸಂಭ್ರಮಾಚರಣೆಯನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವಂತೆ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಅನ್ನದಾಸೋಹ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

  • *ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ನೆರವು*

    ದೊಡ್ಡಬಳ್ಳಾಪುರ : ರೋಟರಿ ಕ್ಲಬ್ ಆಫ್ ಬೆಂಗಳೂರು ವತಿಯಿಂದ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿರುವ 90 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರೋಟರಿ ಕ್ಲಬ್ ಆಫ್ ಬೆಂಗಳೂರು ಸೌರಶಕ್ತಿಯ ನೆರವನ್ನು ನೀಡುತ್ತಿದೆ.

     

    1934 ರಲ್ಲಿ ಸ್ಥಾಪನೆಯಾದ ರೋಟರಿ ಕ್ಲಬ್ ಆಫ್ ಬೆಂಗಳೂರು ತನ್ನ 90 ನೇ ವರ್ಷದಲ್ಲಿದ್ದು, 334 ಸದಸ್ಯರನ್ನು ಹೊಂದಿರುವುದಲ್ಲದೇ ಭಾರತದ ಅತ್ಯಂತ ದೊಡ್ಡ ರೋಟರಿ ಕ್ಲಬ್‌ಗಳಲ್ಲಿ ಒಂದಾಗಿದೆ ಎಂದು ರೋಟೇರಿಯನ್ ನೂತನ ಅಧ್ಯಕ್ಷೆ ಗೌರಿ ಓಝಾ ತಿಳಿಸಿದರು.

     

    ರೋಟೇರಿಯನ್ ಕ್ಲಬ್ ನ 90 ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು “ಸಮುದಾಯಕ್ಕೆ ನಮ್ಮ 90 ವರ್ಷಗಳ ಸೇವೆಯ ಸಂಸ್ಮರಣೆಗಾಗಿ, 2024-25ರ ಸಾಲಿನಲ್ಲಿ ನಾವು ಕರ್ನಾಟಕದ 90 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌರಶಕ್ತಿಯ ನೆರವು ನೀಡಲು ನಿರ್ಧರಿಸಿದ್ದೇವೆ. ಈ ಯೋಜನೆಯ ಒಟ್ಟು ವೆಚ್ಚ 2.7 ಕೋಟಿ ರೂ. ಗಳಾಗಿರುತ್ತದೆ, ನಾವು ಹೆರಿಗೆ ಕೋಣೆ, ಲಸಿಕೆ ಫ್ರೀಜರ್‌ಗಳು, ಪ್ರಯೋಗಾಲಯಗಳು ಮುಂತಾದವುಗಳ ಕಡೆಗೆ ಗಮನ ಕೇಂದ್ರೀಕರಿಸುತ್ತೇವೆ. ಇತರೆ ನಿಗದಿತ ಯೋಜನೆಗಳು ಸಾಮಾನ್ಯ ರೀತಿಯಲ್ಲಿ ನಡೆಯಲಿವೆ” ಎಂದರು.

    ರೋಟೇರಿಯನ್‌ಗಳು, ಕುಟುಂಬಗಳು ಮತ್ತು ಹಿತೈಷಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಗೌರಿ ಓಝಾ ಅವರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುವ ಮಾರ್ಗಗಳ ಕಡೆಗೆ ಆರ್‌ಸಿಬಿ ದೃಷ್ಟಿ ಹರಿಸಲಿದೆ ಎಂದರು.

     

    ಈ ಸಂದರ್ಭದಲ್ಲಿ ರೋಟೇರಿಯನ್‌ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • *ಮರುಬಳಕೆ ಇಂಧನ ಉತ್ಪಾದನೆಗೆ ಆದ್ಯತೆ: ಎಂ‌ ಬಿ ಪಾಟೀಲ*

    ಬೆಂಗಳೂರು: ಕರ್ನಾಟಕವು ಮರುಬಳಕೆ ಮಾಡಬಹುದಾದ ಇಂಧನ ಉತ್ಪಾದನೆಗೆ ಒತ್ತು ಕೊಟ್ಟಿದ್ದು, ಸುಸ್ಥಿರ ಅಭಿವೃದ್ಧಿ ಸಾಧಿಸಲು ಇದೊಂದು ಪ್ರಮುಖ ಗುರಿಯಾಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಹೇಳಿದ್ದಾರೆ.

    ದೊಡ್ಡಬಳ್ಳಾಪುರದ ಸಮೀಪ ಅಮೆರಿಕಾ ಮೂಲದ ಓಮಿಯಮ್ ಕಂಪನಿಯು ಸ್ಥಾಪಿಸಿರುವ ದೇಶದ ಪ್ರಪ್ರಥಮ ಗ್ರೀನ್ ಹೈಡ್ರೋಜನ್ ಎಲೆಕ್ಟ್ರೋಲೈಜರ್ ಗಿಗಾ ಫ್ಯಾಕ್ಟರಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರದ ನವೀಕರಿಸಬಹುದಾದ ಇಂಧನ ಇಲಾಖೆ ಸಚಿವ ಪ್ರಹ್ಲಾದ ಜೋಷಿ ಅವರು ಘಟಕಕ್ಕೆ ಚಾಲನೆ ನೀಡಿದರು.

     

    ಓಮಿಯಂ ಕಂಪನಿಯು 2,000 ಕೋಟಿ ರೂಪಾಯಿ ಹೂಡಿಕೆ ಮಾಡಿ, ಈ ಕಂಪನಿಯನ್ನು ಪ್ರಾರಂಭಿಸಿರುವುದು ಸ್ವಾಗತಾರ್ಹವಾಗಿದೆ. ಇಲ್ಲಿ ಸದ್ಯಕ್ಕೆ ವರ್ಷಕ್ಕೆ 500 ಮೆಗಾವ್ಯಾಟ್ ಗ್ರೀನ್ ಹೈಡ್ರೋಜನ್ ಉತ್ಪಾದನೆ ಅಗಲಿದ್ದು, ಹಂತಹಂತವಾಗಿ 2,000 ಮೆಗಾವ್ಯಾಟ್ ಮಟ್ಟಕ್ಕೆ ಏರಿಸಲಾಗುವುದು. ಕಂಪನಿಯ ಉತ್ಪಾದನಾ ಚಟುವಟಿಕೆಯಿಂದ ಉದ್ಯೋಗಾವಕಾಶಗಳು ಕೂಡ ಸೃಷ್ಟಿಯಾಗಲಿವೆ ಎಂದರು.

     

    ನೀರಿನಿಂದ ತಯಾರಾಗುವ ಗ್ರೀನ್-ಹೈಡ್ರೋಜನ್ ಅನ್ನು ಕಿಲೋಗ್ರಾಂ ಲೆಕ್ಕದಲ್ಲಿ ಅಳತೆ ಮಾಡಲಾಗುವುದು. ಇದರ ಸಂಗ್ರಹಣೆ ಮತ್ತು ಸಾಗಣೆ ಕೂಡ ಸುಲಭವಾಗಿದೆ. ಇದನ್ನು ರಸಗೊಬ್ಬರ ಮತ್ತು ಉಕ್ಕು ಉತ್ಪಾದನೆ, ವಾಹನಗಳಲ್ಲಿ ಎಥನಾಲ್ ಜತೆ ಮಿಶ್ರಣವಾಗಿ, ಸಂಸ್ಕರಣೆ ಪ್ರಕ್ರಿಯೆಗಳಲ್ಲಿ ಧಾರಾಳವಾಗಿ ಉಪಯೋಗಿಸಬಹುದು ಎಂದು ಅವರು ವಿವರಿಸಿದರು.

     

    ರಾಜ್ಯವು ಕೈಗಾರಿಕಾ ಸ್ನೇಹಿಯಾಗಿದ್ದು, ಜಗತ್ತಿನ ಅತ್ಯುತ್ತಮ ಸಂಶೋಧನಾ ಸಂಸ್ಥೆಗಳು ಇಲ್ಲಿ ನೆಲೆಯೂರಿವೆ. ದೇಶದ ಆರ್ಥಿಕತೆಯನ್ನು 2030ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಮಟ್ಟಕ್ಕೆ ಕೊಂಡೊಯ್ಯುವ ಗುರಿಯಲ್ಲಿ ರಾಜ್ಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದರು.

     

    ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಪರಿಸರಸ್ನೇಹಿ ಹಾಗೂ ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆ ಭರದಿಂದ ನಡೆಯುತ್ತಿದೆ. ಇದನ್ನು ನಾವು ಪ್ರಮುಖ ವಲಯವಾಗಿ ಗುರುತಿಸಿದ್ದೇವೆ ಎಂದು ಅವರು ನುಡಿದರು.

     

    ರಚನಾತ್ಮಕ ಉಪಕ್ರಮಗಳ ಫಲವಾಗಿ ರಾಜ್ಯವು 2016ರಿಂದಲೂ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.

    ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಗ್ರೀನ್ ಹೈಡ್ರೋಜನ್ ಉತ್ಪಾದನೆಗೆ ಭಾರತವು ಆದ್ಯತೆ ನೀಡಿದ್ದು, ಈ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದೆ. ಟಾಟಾ ಸಮೂಹ ಮತ್ತು ಎನ್ಟಿಪಿಸಿ ಕೂಡ ಇದರ ಲಾಭವನ್ನು ಮನಗಂಡಿವೆ ಎಂದರು.

     

    ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಶಾಸಕರೂ ಆದ ಕ್ರೆಡೆಲ್ ಅಧ್ಯಕ್ಷ ರಾಜೇಗೌಡ, ಕಂಪನಿಯ ಉನ್ನತ ಅಧಿಕಾರಿಗಳಾದ ಅಮಿ ಬಾಲಟೈನ್, ಅಶ್ವಿನ್ ವರ್ಮಾ ಮುಂತಾದವರು ಉಪಸ್ಥಿತರಿದ್ದರು.

  • *ರಾಜಘಟ್ಟ ಯುವಕರ ಹೋರಾಟ ಎರಡು ಎಕರೆ ಗುಂಡುತೋಪು ಜಾಗದಲ್ಲಿ ಉದ್ಯಾನವನ ನಿರ್ಮಾಣ*

    ದೊಡ್ಡಬಳ್ಳಾಪುರ : ಗ್ರಾಮದ ಎರಡು ಎಕರೆ ಗುಂಡುತೋಪು ಜಾಗ ಖಾಸಗಿ ವ್ಯಕ್ತಿಯ ಪಾಲಾಗಿತ್ತು, ಸರ್ಕಾರಿ ಜಾಗದ ಒತ್ತುವರಿ ತೆರವು ಮಾಡುವಂತೆ ಕಳೆದ 6 ತಿಂಗಳಿಂದ ರಾಜಘಟ್ಟ ಯುವಕರು ಹೋರಾಟ ನಡೆಸಿದರು, ಹೋರಾಟಕ್ಕೆ ಜಯ ಸಿಕ್ಕಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಗುಂಡುತೋಪು ಜಾಗವನ್ನ ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದರು.

     

    ದೊಡ್ಡಬಳ್ಳಾಪುರ ತಾಲೂಕು ರಾಜಘಟ್ಟ ಗ್ರಾಮದ ಸರ್ವೆ ನಂಬರ್ 212ರ 1.39 ಎಕರೆ ಸರ್ಕಾರಿ ಗುಂಡುತೋಪು ಜಾಗ ಗ್ರಾಮದ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದರು, ಈಗಾಗಲೇ ಗ್ರಾಮದಲ್ಲಿನ ಸರ್ಕಾರಿ ಜಾಗಗಳು ಬಲಾಢ್ಯರ ಪಾಲಾಗಿದವು, ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಿ ಜಾಗವೇ ಇಲ್ಲದಂತಾಗಿತು, ಇದನ್ನ ಮನಗಂಡ ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆ ಸರ್ಕಾರಿ ಜಾಗಗಳ ಉಳಿವಿಗಾಗಿ ಹೋರಾಟವನ್ನ ಆರಂಭಿತ್ತು. ಇಂದು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಚಾರಣೆ ನಡೆಸಿಲಾಗಿತು, ಒತ್ತುವರಿ ಜಾಗವನ್ನ ತೆರವು ಮಾಡಿಸಿ, ಸರ್ಕಾರಿ ಗುಂಡುತೋಪು ಜಾಗವನ್ನ ಜೆಸಿಬಿ ಮೂಲಕ ಟ್ರಂಚ್ ಹೊಡಿಸಿ ಗುರುತಿಸಲಾಗಿದೆ.

     

    ರಾಜಘಟ್ಟ ಗ್ರಾಮಾಭಿವೃದ್ಧಿ ಯುವಕರ ಸೇನೆ ಮುಖಂಡರಾದ ಗಣೇಶ್ ರಾಜಘಟ್ಟ ಮಾತನಾಡಿ, ನಮ್ಮ ಸಂಘಟನೆ ಮುಖ್ಯ ಉದ್ದೇಶ ಗ್ರಾಮದಲ್ಲಿನ ಸರ್ಕಾರಿ ಅಸ್ತಿಗಳನ್ನ ಉಳಿಸುವುದು, 6 ತಿಂಗಳ ಹೋರಾಟಕ್ಕೆ ಜಯ ಸಿಕ್ಕಿದೆ, ಇದಕ್ಕೆ ಕಾರಣರಾದ ಎಲ್ಲರಿಗೂ ನಾವು ಕೃತಜ್ಞನೆ ಸಲ್ಲಿಸುತ್ತೇವೆ, ಬೇರೆಯವರ ಪಾಲಾಗಿದ್ದ ಜಾಗ ಇವತ್ತು ಗ್ರಾಮಸ್ಥರ ಪಾಲಾಗಿದೆ. ಸರ್ಕಾರಿ ಗುಂಡು ತೋಪು ಜಾಗದಲ್ಲಿ ಸಿಎಸ್ ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದರು.

    ಈ ಸಂದರ್ಭದಲ್ಲಿ ರಾಜಘಟ್ಟ ಗ್ರಾಮದ ಯುವಕರು ಉಪಸ್ಥಿರಿದ್ದರು.

  • *ಉದ್ಯೋಗ ಮೀಸಲಾತಿ ವಿಚಾರದಲ್ಲಿ ಕನ್ನಡಿಗರಿಗೆ ಅವಮಾನ ಸಲ್ಲದು : ಸರ್ಕಾರವು ಸೂಕ್ತ ಮೀಸಲಾತಿ ಕಲ್ಪಿಸದೆ ಇದ್ದಲ್ಲಿ ಉಗ್ರ ಹೋರಾಟ ಖಂಡಿತಾ – ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ (ವಿಜಯಮಿತ್ರ): ರಾಜ್ಯದ ಖಾಸಗಿ ಕೈಗಾರಿಕೆಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡುವ ಸಂಬಂಧ ವಿಧೇಯಕ ತಡೆ ಹಿಡಿದಿರುವ ರಾಜ್ಯ ಸರಕಾರದ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಖಂಡಿಸುತ್ತದೆ. ಈ ಕುರಿತು ರಾಜ್ಯ ಸರ್ಕಾರವು ಕನ್ನಡಿಗರ ಪರ ನ್ಯಾಯ ಸಮ್ಮತವಾದ ನಿರ್ಧಾರ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಉಗ್ರ ಹೋರಾಟ ಕೈಗೊಳ್ಳುವ ಮೂಲಕ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.

     

    ಈ ಸಂಬಂಧ 15 ದಿನಗಳ ಒಳಗೆ ಸಚಿವ ಸಂಪುಟದ ಸಭೆ ನಡೆಸಿ, ಕನ್ನಡಿಗರ ಹಿತಕಾಯುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಕನ್ನಡಿಗರ ಪರವಾಗಿ ಗಡುವು ನೀಡಿದ್ದಾರೆ. ಉತ್ತಮ ನಿರ್ಧಾರ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಕರ್ನಾಟಕ ರಕ್ಷಣಾ ವೇದಿಕೆ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

     

    ಕೆಲ ಕಾರ್ಪೊರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು ಸರಕಾರವು ವಿಧೇಯಕವನ್ನು ತಡೆಹಿಡಿಯುವ ನಿರ್ಧಾರ ಮಾಡಿದೆ. ಇದನ್ನು ಈ ಕೂಡಲೇ ಪಡೆದು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ” ಎಂದು ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಆಗ್ರಹಿಸಿದ್ದಾರೆ.

  • ಸರಹು ಅಭಿಯಾನವೂ ನಮ್ಮ ಕೆರೆ ನದಿಗಳನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯೊಂದಿಗೆ ತಾಲೂಕಿನ ಎಲ್ಲಾ ಕಾಲೇಜುಗಳನ್ನು ತಲುಪಲಿದೆ

    ದೊಡ್ಡಬಳ್ಳಾಪುರ ( ವಿಜಯಮಿತ್ರ ): ಯುವ ಸಂಚಲನ (ರಿ.) ದೊಡ್ಡಬಳ್ಳಾಪುರ, ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿ ಹಾಗೂ ಸಂವಿಧಾನ ಸಾಥಿ ಇವರ ಸಂಯುಕ್ತ ಆಶ್ರಯದಲ್ಲಿ ಸರಹು ಅಭಿಯಾನ (ಅರ್ಕಾವತಿ ನದಿ ಜಲ ಮೂಲಗಳ ಸಂರಕ್ಷಣೆಗಾಗಿ ಸಾಕ್ಷ್ಯಚಿತ್ರ ಪ್ರದರ್ಶನ) ದ ಉದ್ಘಾಟನಾ ಕಾರ್ಯಕ್ರಮಕ್ಕೆ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಸಸಿಗೆ ನೀರರೆಯುವ ಮೂಲಕ ಚಾಲನೆ ನೀಡಲಾಯಿತು.

    ನದಿ, ಕೆರೆಗಳು ತುಂಬುವುದಿಲ್ಲ ಅನ್ನುವ ಆಶಯವನ್ನು ಹಿಂದಿನ ಎರಡು ವರ್ಷದ ಮಳೆಯೂ ಸುಳ್ಳಾಗಿಸಿದೆ ಅರ್ಕಾವತಿ ನದಿ ಮತ್ತೆ ಹರಿಯುವ ಭರವಸೆಯನ್ನು ಮೂಡಿಸಿದೆ. ಯುವಜನೆತೆಯೂ ಕೆರೆ,ನದಿ ಗಳ ಸಂರಕ್ಷಣೆಯ ಅರಿವನ್ನು ಹೊಂದಿರಬೇಕಿರುವುದು ಇಂದಿಗೆ ಅತೀ ಅವಶ್ಯಕ ಹಾಗಾಗಿ ಈ ಅಭಿಯಾನವೂ ನಮ್ಮ ಕೆರೆ ನದಿಗಳನ್ನು ಸುಸ್ಥಿರವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿಯೊಂದಿಗೆ ತಾಲೂಕಿನ ಎಲ್ಲಾ ಕಾಲೇಜುಗಳನ್ನು ತಲುಪಲಿದೆ ಎಂದು ಯುವ ಸಂಚಲನದ ಅಧ್ಯಕ್ಷರಾದ ಚಿದಾನಂದ್ ರವರು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.

     

    ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯ ರೆಡ್ಡಿಯವರು ಮಾತನಾಡಿ ನದಿಗಳಿಗೆ ತಾಯಿಯ ಸ್ಥಾನ ಕೊಟ್ಟಿರುವ ಹಾಗೂ ಪೂಜಿಸಬೇಕಾದ ಜನ ಇಂದು ಆ ನೀರನ್ನು ಕಲುಷಿತಗೊಳಿಸಿ ಹಾಳುಮಾಡುತ್ತಿದ್ದಾರೆ ಹಾಗೂ ಅಧಿಕಾರದ ಆಸೆಗೆ ಮುಂದಿನ ಪೀಳಿಗೆಗೆ ಜೋಪಾನ ಮಾಡಬೇಕಿದ್ದ ಪರಿಸರವನ್ನು ಹಣ ಮತ್ತು ಅಧಿಕಾರದ ಆಸೆಗೆ ಬಲಿಕೊಡಲಾಗುತ್ತಿದೆ. ಸಾಮಾಜಿಕ ಜವಾಬ್ದಾರಿಯನ್ನು ಮರೆತದ್ದರಿಂದ ಪರಿಸರ ಹಾಗೂ ಮಾನವನ ಮದ್ಯೆ ಏರ್ಪಟ್ಟಿರುವ ಕಂದಕವನ್ನು ವಿವರಿಸಿದರು. ಸರಹು ಅಭಿಯಾನವು ಇಂದು ಬಿತ್ತುತ್ತಿರುವ ಬೀಜವಾಗಿದ್ದು ಇದರ ಪ್ರತಿಫಲ ಮುಂದಿನ ದಿನಗಳಲ್ಲಿ ದೊರೆಯಲಿದೆ ಹಾಗೂ ಈ ಅಭಿಯಾನವನ್ನು ಬೇರೆ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿ ಅರಿವನ್ನು ಮೂಡಿಸುವಅಗತ್ಯವಿದೆ ಎಂದು ತಿಳಿಸಿದರು.

    ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯಪ್ರಶಸ್ತಿ ವಿಜೇತ ಕೆ.ಮನೋಹರ್ ಮಾತನಾಡಿ ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಭಾಗವಹಿಸುವುದೇ ಸಂತಸ ಹಾಗೂ

    ಎಲ್ಲಾ ನಾಗರಿಕತೆಗಳ ಉಗಮ ಸ್ಥಾನ ನದಿ ಮೂಲಗಳು ಆ ನದಿ ಮೂಲಗಳು ಸಂರಕ್ಷಣೆಯ ಜವಬ್ದಾರಿ ಪ್ರತಿಯೊಬ್ಬರದು ಆಗಿರಬೇಕು ಹಾಗೂ ಮುಂದಿನ ದಿನಗಳಲ್ಲಿ ಅರ್ಕಾವತಿ ನದಿ ಕುರಿತಂತೆ ಒಂದು ಸಾಕ್ಷ್ಯಚಿತ್ರ ತಯಾರಿಸಿ ಕೊಡುವ ಭರವಸೆ ನೀಡಿದರು.

     

    ನೀರಿನ ಮಹತ್ವ ಹಾಗೂ ಮಿತ ಬಳಕೆ ತುಂಬಾ ಮುಖ್ಯ ಹಾಗೂ ನಾವು ಪರಿಸರಕ್ಕೆ ನಾವೇನು ಕೊಡುತ್ತಿದ್ದೇವೆ ಎಂಬ ಅರಿವಿರಬೇಕು ಮತ್ತು ಮಳೆ ನೀರಿನ ಸಂಗ್ರಹಣೆಯ ಮಹತ್ವದ ಅರಿವನ್ನು ಎಲ್ಲರೂ ಹೊಂದಿರಬೇಕು ಎಂದು ಡಾ.ಇಂದಿರಾ ರವರು ತಿಳಿಸಿದರು.

     

    ಭೂಮಿಯ ಮೇಲೆ ಬಳಸಲು ಯೋಗ್ಯವಿರುವ ಅತಿ ಕಡಿಮೆ ಪ್ರಮಾಣದ ನೀರಿನ್ನು ಈಗಾಗಲೇ ಸಾಕಷ್ಟು ಕಲುಷಿತಗೊಳಿಸಿದ್ದೇವೆ. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಯುವಜನತೆ ಅಂತರ್ಜಲದ ಅರಿವು ಹಾಗೂ ಪರಿಸರ ಕಾಳಜಿಯನ್ನು ಹೊಂದುವುದು ತೀರಾ ಅಗತ್ಯ ಎಂದು ಶ್ರೀ ಸೂರ್ಯ ಎಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಹೆಚ್.ಜಿ ವಿಜಯಕುಮಾರ್ ರವರು ತಿಳಿಸಿದರು.

     

    ಕಾರ್ಯಕ್ರಮದಲ್ಲಿ ಶ್ರೀ ಸೂರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಸಿ ಮಂಜುನಾಥ್, ರಾಜಣ್ಣ ಏಕಾಶಿಪುರ, ವೆಂಕಟೇಶ್ ನಾಗದಳ, ಯುವ ಸಂಚಲನ ತಂಡದ ಸದಸ್ಯರಾದ ನವೀನ್, ಗಿರೀಶ್, ದಿವಾಕರ್, ಸರಸ್ವತಿ ಉಪಸ್ಥಿತರಿದ್ದರು.