Blog

  • *ಕನ್ನಡಿಗರ ಮೀಸಲಾತಿಗೆ ಸರ್ಕಾರ ಹಸ್ತು : ಇದು ಟಿ.ಎ.ನಾರಾಯಣಗೌಡರ ನಿರಂತರ ಹೋರಾಟದ ಪ್ರತಿಫಲ – ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ರಾಜ್ಯದ ಕಂಪನಿಗಳು ಕೈಗಾರಿಕಾಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರ ನೇಮಕಾತಿ ಕಡ್ಡಾಯ ಗೊಳಿಸ ಬೇಕೆಂಬ ಕರವೇ ಹೋರಾಟಕ್ಕೆ ಜಯ ಸಿಕ್ಕಿದೆ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕುರಿತು ಸಚಿವ ಸಂಪುಟ ದಲ್ಲಿ ಅನುಮತಿ ನೀಡಿದ್ದು ಸ್ವಾಗತಾರ್ಹ ವಿಷಯವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ .

     

     

    ಜುಲೈ 1 ರಂದು ಕರವೇ ಟಿ ಎ ನಾರಾಯಣ ಗೌಡರ ನೇತೃತ್ವದ ಹೋರಾಟದ ಪ್ರತಿಫಲವೇ ಸರ್ಕಾರದ ಇಂದಿನ ನಿರ್ಧಾರಕ್ಕೆ ಕಾರಣ ಎಂದರು.

     

    ಸರ್ಕಾರದ ಈ ನಿರ್ಧಾರವು ಕನ್ನಡಿಗರ ಹಿತ ಕಾಪಾಡಿದಂತಾಗಿದೆ. ನಮ್ಮ ರಾಜ್ಯದ ಜನರು ಉದ್ಯೋಗಕ್ಕೆ ಬೇರೆ ರಾಜ್ಯಕ್ಕೆ ವಲಸೆ ಹೊಗುವ ಪರಿಸ್ಥಿತಿ ಎದುರಾಗಿದ್ದು, ಕನ್ನಡಿಗರಿಗೆ ಇದೊಂದು ಮಹತ್ವದ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ.

  • *ರಾಜೀವ್ ಗಾಂಧಿ ಬಡಾವಣೆ (ಒಂದನೇ ಹಂತ) ಜಾತ್ರಾ ಮಹೋತ್ಸವ ಕಾರ್ಯಕ್ರಮ : ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಭಾಗಿ*

    ದೊಡ್ಡಬಳ್ಳಾಪುರ : ಪಕ್ಷಬೇಧವಿಲ್ಲದೆ, ಜಾತಿ ಭೇದವಿಲ್ಲದೆ ಭಕ್ತಿ ಭಾವದಿಂದ ಎಲ್ಲರನ್ನು ಒಟ್ಟಾಗಿ ಸೇರಿಸುವ ಜಾತ್ರಾ ಮಹೋತ್ಸವಗಳು ನಮ್ಮಲ್ಲಿ ನೋಡಬಹುದಾಗಿದೆ. ಕಾರ್ಯಕ್ರಮದ ಆಯೋಜಕರಿಗೆ ಹಾಗೂ ಬಡಾವಣೆಯ ನಿವಾಸಿಗಳಿಗೆ ಶುಭವಾಗಲಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹಾರೈಸಿದರು

    ನಗರದ ಒಂದನೇ ವಾರ್ಡ್ ಮೊದಲನೇ ಹಂತ ರಾಜೀವ್ ಗಾಂಧಿ ಬಡಾವಣೆ ಯ 15 ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಂಚ ದೇವತೆಯರಾದ ಶ್ರೀ ಮುತ್ಯಾಲಮ್ಮ ದೇವಿ, ಶ್ರೀ ಅಣ್ಣಮ್ಮ ದೇವಿ,ಶ್ರೀ ಸಾವಿರಕಣ್ಣಮ್ಮದೇವಿ, ಶ್ರೀ ಸತ್ಯಮ್ಮದೇವಿ, ಶ್ರೀ ದೊಡ್ಡಮ್ಮದೇವಿ ಸೇರಿದಂತೆ ಎಲ್ಲಾ ದೇವತೆಯರ ಆಶೀರ್ವಾದ ಬಡಾವಣೆಯ ಎಲ್ಲಾ ನಿವಾಸಿಗಳಿಗೆ ಲಭಿಸಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದ್ದು ಬಡಾವಣೆಯ ಪ್ರತಿ ಮನೆಯಲ್ಲೂ ಸಂಭ್ರಮಾ ಸಡಗರ ಮನೆ ಮಾಡಿದೆ. ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವೇ ಸಾರ್ವಜನಿಕರಲ್ಲಿ ಒಗ್ಗಟ್ಟು ಮೂಡಿಸುವುದು. ಸ್ಥಳೀಯ ನಿವಾಸಿಗಳ ಒಗ್ಗಟ್ಟು ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಹೆಚ್ಚಿದೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

    ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮವಾಗಿ ಶ್ರೀ ರಾಮ್ ಮೆಲೋಡೀಸ್ ತಂಡದವರಿಂದ ವಾದ್ಯ ಗೋಷ್ಠಿ ಆಯೋಜನೆ ಮಾಡಲಾಗಿತ್ತು.

     

    ಸ್ಥಳೀಯ ಜೆಡಿಎಸ್ ಮುಖಂಡ ಪ್ರವೀಣ್ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ಮೂಡಿಸಿದೆ. ಸ್ಥಳೀಯವಾಗಿ ಅನೇಕ ಸಮಸ್ಯೆಗಳಿದ್ದು ಮುಂದಿನ ದಿನಗಳಲ್ಲಿ ಸ್ಥಳೀಯರ( ವಾರ್ಡ್ ಜನಗಳ ) ನಡುವೆ ಬೆರೆಯುವ ಮೂಲಕ ಜನ ಸೇವೆಯಲ್ಲಿ ಸದಾ ಸಕ್ರಿಯವಾಗಿರುತ್ತೇನೆ. ಜಾತ್ರಾ ಮಹೋತ್ಸವವನ್ನು ಸ್ಥಳೀಯ ವಾರ್ಡ್ ನ ಜನತೆ ಅತ್ಯಂತ ಸಂತಸ ಸಡಗರದಿಂದ ಆಚರಿಸುತ್ತಿದ್ದು ದೇವಿಯರ ಆಶೀರ್ವಾದ ಸರ್ವರಿಗೂ ಲಭಿಸಲಿ ಎಂದರು.

     

    ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಪ್ರಭಾಕರ್, ಗೌರೀಶ್, ಮಹೇಶ್, ಮುರಳಿ,ಕೇಶವ್ ಮೂರ್ತಿ, ಉಪಸ್ಥಿತರಿದ್ದರು .

  • *ತೂಬಗೆರೆ l ಐತಿಹಾಸಿಕ ಭೂತ ನೆರಿಗೆ ಕಾರ್ಯಕ್ರಮಕ್ಕೆ ಅದ್ದೂರಿ ಸಿದ್ಧತೆ*

    ದೊಡ್ಡಬಳ್ಳಾಪುರ(ತೂಬಗೆರೆ): ತಾಲೂಕಿನ ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪಾರಂಪರಿಕ ಜನಪದ ಆಚರಣೆ ಭೂತ ನೆರಿಗೆ ಇದೇ ತಿಂಗಳ ಗುರುವಾರ ದಿನಾಂಕ 18 ರ ಮಧ್ಯಾಹ್ನ 3 ಗಂಟೆಗೆ ನಡೆಸಲು ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯಲ್ಲಿ ಭೂತ ನೆರಿಗೆ ಆಚರಣಾ ಸಮಿತಿ ಸಭೆ ನೆಡೆಸಿ ತೀರ್ಮಾನಿಸಲಾಯಿತು.

    ಪ್ರತಿವರ್ಷದಂತೆ ಈ ವರ್ಷವೂ ಸಹ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಭೂತ ನೆರಿಗೆ ಹಬ್ಬವನ್ನು ಆಚರಿಸಲು ಸಜ್ಜಾಗಿದ್ದಾರೆ.
    ಕರಿಯಣ್ಣ – ಕೆಂಚಣ್ಣರ ವೇಷಧಾರಿಯಾದವರ ಮೇಲೆ ಭೂತ ಆಹ್ವಾನಿಸಿ, ಆರ್ಭಟಿಸುತ್ತವೆ.

    ಈ ವೇಳೆ, ಇವರ ಹಸಿವು ತಣಿಸುವ ಕೆಲಸ ಆಗುತ್ತದೆ. ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.

    ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಭೂತ ನೆರಿಗೆ ಆಚರಣಾ ಸಮಿತಿಯ ಚಿದಾನಂದ ಗುರೂಜಿ, ವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಸುಮಾರು ಐದು ನೂರು ವರ್ಷಗಳ ಇತಿಹಾಸವಿರುವ ಈ ಭೂತನೆರಿಗೆ ಹಬ್ಬ ಇಂದಿಗೂ ಸಹ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮದಲ್ಲಿ ನಡೆದುಕೊಂಡು ಬರುತ್ತಿದೆ.

    ಭೂತನೆರಿಗೆ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಒಂದು ಕೈಯಲ್ಲಿ ಭೂತದ ಮುಖ ಹೋಲುವ ವರ್ತುಲಾಕಾರದ ನೆರಿಗೆ ಹಿಡಿದಿರುತ್ತಾರೆ. ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದಿರುತ್ತಾರೆ. ಲಕ್ಷ್ಮಿನರಸಿಂಹಸ್ವಾಮಿ ಭಕ್ತರು ಕೆಂಚಣ್ಣ-ಕರಿಯಣ್ಣರ ಮುಂದೆ ವಿಷ್ಣುವಿನ ನಾಮಸ್ಮರಣೆ ಮತ್ತು ಗುಣಗಾನ ಮಾಡುತ್ತಾ ಇವರನ್ನು ಕೆಣಕುತ್ತಾರೆ. ವಿಷ್ಣುವಿನ ನಾಮಸ್ಮರಣೆ ಸಹಿಸದ ಈ ಕರಿಯಣ್ಣ ಮತ್ತು ಕೆಂಚಣ್ಣ ಭಕ್ತರ ಮೇಲೆ ಕೋಪಗೊಂಡು ಅವರೆಡೆಗೆ ನುಗ್ಗುತ್ತಾರೆ. ಕೋಪಗೊಂಡ ಕರಿಯಣ್ಣ ಕೆಂಚಣ್ಣರನ್ನು ಸಮಾಧಾನ ಮಾಡಲು ಇತರರು ಅವರ ಬಾಯಿಗೆ ಬಾಳೆ ಹಣ್ಣಿನ, ಹಲಸಿನ ಹಣ್ಣಿನಿಂದ ತಯಾರಿಸಿದ ರಸಾಯನವನ್ನು ತಿನ್ನಿಸುತ್ತಾರೆ. ಆವೇಶಕ್ಕೆ ಒಳಗಾದ ಈ ಭೂತಗಳು ಆ ಸಂದರ್ಭದಲ್ಲಿ ಏನು ಕೊಟ್ಟರೂ ತಿನ್ನುತ್ತಾರೆ ಎಂಬುದು ಜಾನಪದರ ನಂಬಿಕೆ. ಕೆಲವು ಗ್ರಾಮಗಳಲ್ಲಿ ನಡೆಯುವ ಈ ಹಬ್ಬದಲ್ಲಿ ಕರಿಯಣ್ಣ ಮತ್ತು ಕೆಂಚಣ್ಣರ ಬಾಯಿಗೆ ಕುರಿ-ಕೋಳಿಗಳನ್ನು ನೀಡುತ್ತಾರೆ. ಇವುಗಳ ರಕ್ತ ಹೀರುವುದರೊಂದಿಗೆ ಕರಿಯಣ್ಣ-ಕೆಂಚಣ್ಣ ಶಾಂತರಾಗುತಾರೆ ಎನ್ನುವುದು ಈ ಭಾಗದ ಭಕ್ತರ ನಂಬಿಕೆ ಆದ್ದರಿಂದ ತೂಬಗೆರೆ ಸುತ್ತ ಮುತ್ತಲಿನ ಸಕಲ ಆಸ್ತಿಕರು ಈ ಆಚರಣೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.

    ಮಂತ್ರವಾದಿ ಆನಂದ ಸ್ವಾಮಿ, ದಾಸಯ್ಯ ಕುಟುಂಬದ ಶ್ರೀನಿವಾಸ, ಆನಂದ, ಮುಖಂಡರಾದ ಪುಟ್ಟಣ್ಣ, ವೆಂಕಟೇಶಪ್ಪ, ಹಾಗೂ ಯುವ ಮುಖಂಡ ಉದಯ ಆರಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • *ಪ್ರವಾಸಿ ಹೋಟೆಲ್ ಗಳು ಹಾಗೂ ಟ್ರಾವೆಲ್ಸ್ ಗಳು ನೋಂದಾಯಿಸಿಕೊಳ್ಳಿ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ. 16(ವಿಜಯಮಿತ್ರ):- ಕರ್ನಾಟಕ ಪ್ರವಾಸೋದ್ಯಮ (ವ್ಯಾಪಾರ ಸೌಲಭ್ಯ ಮತ್ತು ನಿಯಂತ್ರಣ) ಕೆ.ಟಿ.ಟಿ.ಎಫ್ ಕಾಯ್ದೆ, 2015 ರ ಪ್ರಕಾರ ಪ್ರವಾಸೋದ್ಯಮ ವ್ಯಾಪಾರ/ಚಟುವಟಿಕೆಗಳಾದ ಹೋಟೆಲ್ ಮತ್ತು ರೆಸಾರ್ಟ್, ರೆಸ್ಟೋರೆಂಟ್, ಟ್ರಾವೆಲ್ ಏಜೆಂಟ್ಸ್/ಟೂರ್ ಆಪರೇಟರ್, ಟೂರಿಸ್ಟ್ ಟ್ರಾನ್ಸಪೋರ್ಟ್ ಆಪರೇಟರ್, ಅಮ್ಯೂಸಮೆಂಟ್ ಪಾರ್ಕ್, ಕ್ಯಾರವನ್ ಟೂರಿಸಂ, ನಡೆಸುತ್ತಿರುವವರ ಮಾಲೀಕರು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕಾಗಿರುತ್ತದೆ.

     

    ಜಿಲ್ಲೆಯ ಪ್ರವಾಸೋದ್ಯಮ ವ್ಯಾಪಾರ/ಚಟುವಟಿಕೆಗಳಾದ ಹೋಟೆಲ್ ಮತ್ತು ರೆಸಾರ್ಟ್, ರೆಸ್ಟೋರೆಂಟ್, ಟ್ರಾವೆಲ್ ಏಜೆಂಟ್ಸ್/ಟೂರ್ ಆಪರೇಟರ್, ಟೂರಿಸ್ಟ್ ಟ್ರಾನ್ಸಪೋರ್ಟ್ ಆಪರೇಟರ್, ಅಮ್ಯೂಸಮೆಂಟ್ ಪಾರ್ಕ್, ಕ್ಯಾರವನ್ ಟೂರಿಸಂ, ನಡೆಸುತ್ತಿರುವ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ವೆಬ್ಸೈಟ್ kttf.karnatakatourism.org ಪೋರ್ಟಲ್ ನಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕು.

     

    ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ನಂ. 09, ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110, ದೂರವಾಣಿ ಸಂಖ್ಯೆ: 080- 22040633 ಗೆ ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

  • *ರಕ್ಷಣೆ ನೀಡುವಂತೆ ಕೋರಿ ರಘುನಾಥಪುರ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ*

    ದೊಡ್ಡಬಳ್ಳಾಪುರ : ಸ್ಥಳೀಯ ಇಂಡೇನ ಕಾರ್ಖಾನೆ ಸಂಬಂಧಿಸಿದಂತೆ ಗ್ರಾಮಸ್ಥರ ಹೇಳಿಕೆಯನ್ನು ವಿರೋಧಿಸಿ ಕೆಲವರು ರಘುನಾಥಪುರ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಅವಹೇಳನವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಇದು ಊರಿನಲ್ಲಿ ಹಲವು ಊಹಾಪೋಹಗಳು ಹಬ್ಬಲು ಕಾರಣವಾಗುತ್ತಿದೆ . ಆದ್ದರಿಂದ ಗ್ರಾಮದಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗುತ್ತಿದೆ ಆದ್ದರಿಂದ ತಾವುಗಳು ನಮಗೆ ರಕ್ಷಣೆ ನೀಡಬೇಕೆಂದು ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಮನವಿ ಸಲ್ಲಿಸಿದರು.

    ಈ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕು, ರಘುನಾಥಪುರ ಗ್ರಾಮದಲ್ಲಿರುವ ಇಂಡೇನಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿ ವಿಷಕಾರಿ ಅನಿಲ ಬಿಡುಗಡೆ ಹಾಗೂ ಹಳೆಯ ದೇವಸ್ಥಾನಗಳು ನಕಾಶೆಯಲ್ಲಿ ತೋರಿಸಿರುವ ರಸ್ತೆ, ಹಾಗೂ ಹಳೆಯ ಸಹಿನೀರಿನ ಬಾವಿಗಳ ಕಣ್ಮರೆಯಾಗಿರುವ ಬಗ್ಗೆ ಗ್ರಾಮಸ್ಥರೆಲ್ಲರೂ ಸೇರಿ ಎಲ್ಲಾ ಮೇಲಾಧಿಕಾರಿಗಳಿಗೆ ಅರ್ಜಿಯನ್ನು ನೀಡಿದ್ದೇವು , ಈ ವಿಚಾರವಾಗಿ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರತಿನಿತ್ಯ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ಈಗಾಗಲೇ ಹಂಚಿಕೊಂಡಿದ್ದು. ಇದಕ್ಕೆ ಸಂಬಂಧಪಟ್ಟಿ ಅಧಿಕಾರಿಗಳು ಕಾನೂನು ರೀತಿಯಲ್ಲಿ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ,ಆದರೆ ಗ್ರಾಮದ ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮಸ್ಥರು ನಿಲುವನ್ನು ಕುರಿತು ಅವಹೇಳನವಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.

     

    ಏನಿದು ಘಟನೆ….???

    ತಾಲೂಕಿನ ರಘುನಾಥಪುರದ ಇಂಡೇನ ಕಾರ್ಖಾನೆ ವಿರುದ್ಧ ಹಲವು ಆರೋಪಗಳನ್ನು ಮಾಡಿ ಸ್ಥಳೀಯ ಗ್ರಾಮಸ್ಥರು ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆ ಗ್ರಾಮಕ್ಕೆ ಅಧಿಕಾರಿಗಳ ತಂಡ ಭೇಟಿಕೊಟ್ಟು ಗ್ರಾಮದ ಪರಿಸ್ಥಿತಿಯನ್ನು ಪರೀಕ್ಷಿಸಲು ಮುಂದಾಗಿದ್ದು. ಗ್ರಾಮದ ಸಮಸ್ಯೆ ಕುರಿತಂತೆ ಸ್ಥಳೀಯ ಗ್ರಾಮಸ್ಥರು ಪತ್ರಿಕಾ ಹೇಳಿಕೆ ನೀಡಿದ್ದರು.

     

    ಗ್ರಾಮದ ಆರ್.ಎಂ.ಮಹದೇವ್, ಆರ್.ಎಂ.ಲಕ್ಷ್ಮೀಪತಿ, ಆರ್.ಹೆಚ್.ಚನ್ನಪ್ಪ, ಸಂಗೀತಾ, ಅನಿತ, ನರಸಿಂಹಮೂರ್ತಿ, ಮುನಿರಾಜಪ್ಪ, ಆರ್.ಎಲ್.ಗಾಯಿತ್ರಿ, ಗಂಗಮ್ಮ, ಆರ್.ಎಂ.ಜಗದೀಶ, ಇನ್ಫೋಸಿಟಿ ಲಕ್ಷ್ಮೀ.ಎನ್ ಸೇರಿದಂತೆ ಹಲವರು ರಕ್ಷಣೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

  • *ಮಾಲಿನ್ಯ ನಿಯಂತ್ರಣ ಮಂಡಳಿ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಿ – ಆರ್ಕಾವತಿ ನದಿ ಹೋರಾಟ ಸಮಿತಿ*

    ದೊಡ್ಡಬಳ್ಳಾಪುರ : ಅನೇಕ ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿಯು ದೊಡ್ಡಬಳ್ಳಾಪುರಕ್ಕೆ ಬರಬೇಕೆಂದು ತಾಲೂಕು ದಂಡಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿಯವರೆಗೂ ಮೌಖಿಕವಾಗಿಯೂ, ಬರವಣಿಗೆ ಮುಖಾಂತರ ಕೂಡ ಕೇಳಿಕೊಂಡರು ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಹೋರಾಟಗಾರ ವಸಂತ್ ಕುಮಾರ್ ತಿಳಿಸಿದರು

    ಸೋಮವಾರ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಆರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ನೆಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂರಾರು ಕಾರ್ಖಾನೆಗಳಿದ್ದು ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ ಅತಿ ಹೆಚ್ಚು ಕಲುಷಿತಗೊಂಡಿರುವ ನದಿಗಳ ಸಾಲಿನಲ್ಲಿ ನಮ್ಮ ಅರ್ಕಾವತಿ ನದಿ ರಾಜ್ಯದಲ್ಲಿ ಕಲುಷಿತಗೊಂಡಿರುವ ನದಿಗಳ ಪಟ್ಟಿಯಲ್ಲಿ ಪ್ರಥಮವಾಗಿದೆ. ಇದಕ್ಕೆಲ್ಲ ಮುಖ್ಯ ಕಾರಣ ಕಾರ್ಖಾನೆಗಳು, ಸ್ಥಳೀಯ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಾಗಿದೆ ಎಂದು ಆರೋಪಿಸಿದರು.

     

    ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸ್ಥಳೀಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅವಶ್ಯಕತೆ ಇದೆ ಎಂದರು.

    ಮಜರಾ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಕಾರ್ಖಾನೆಯು ಚಿಕ್ಕ ತುಮಕೂರು ಕೆರೆಗೆ ಸಂಬಂಧಪಟ್ಟಂತ ಬಫರ್ ಜೊನ್ ನಲ್ಲಿ ಮಣ್ಣು ಸುರಿಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದು ಸದರಿ ದೂರಿನ ಅನ್ವಯ ಅಧಿಕಾರಿಗಳು ಸಂಬಂಧಪಟ್ಟ ಕಾರ್ಖಾನೆಗೆ ನೋಟಿಸ್ ಸಹ ನೀಡುತ್ತಾರೆ ಆದರೂ ಮಣ್ಣು ತೆಗೆಯುವ ಕಾರ್ಯಕ್ಕೆ ಕಾರ್ಖಾನೆ ಸಿಬ್ಬಂದಿ ಇನ್ನು ಮುಂದಾಗಿಲ್ಲ ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.

     

    ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಮತ್ತು ಮಜರಾ ಹೊಸಹಳ್ಳಿ ಪಂಚಾಯಿತಿಗೆ ಜಕ್ಕಲ ಮಡಗು ನೀರು ನೀಡಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿ ಸಚಿವರು ಆದೇಶ ಮಾಡಿದ್ದರು ಗ್ರಾಮಗಳಿಗೆ ಸರಿಯಾಗಿ ನೀರಿನ ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದರು.

    ಮುಂದಿನ ಏಳು ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ಜುಲೈ 22ನೇ ಸೋಮವಾರದಿಂದ ಜಿಲ್ಲಾ ಕಚೇರಿ ಎದುರು ರೈತರು ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದ್ದರು.

     

    ಸುದ್ದಿಗೋಷ್ಠಿಯಲ್ಲಿ ರಮೇಶ್, ಕಾಳೇಗೌಡ,ಮುನಿಕೃಷ್ಣಪ್ಪ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿರಿದ್ದರು.

  • *ವಿದ್ಯಾರ್ಥಿಗಳು ನಮ್ಮ ನಾಡು ನುಡಿಯ ಹಿರಿಮೆಯನ್ನು ಅರಿಯಬೇಕು – ಬಿ. ಏನ್. ಕೃಷ್ಣಪ್ಪ*

    ದೊಡ್ಡಬಳ್ಳಾಪುರ : ಜಗತ್ತಿನ ಬದಲಾವಣೆಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣವು ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಜೀವನದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ತಿಳಿಸಿದರು.

    ಅವರು ದೊಡ್ಡಬಳ್ಳಾಪುರ ನಗರದ ವಿದ್ಯಾನಿಧಿ ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪದವಿ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು‌ ವಿಪುಲವಾದ ಅವಕಾಶಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಪ್ರಾರಂಭವಾಗುತ್ತಿವೆ. ಇವುಗಳ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು. ವೃತ್ತಿ ಜೀವನದಲ್ಲಿ ಸಹ ಉತ್ಸಾಹ ಲವಲವಿಕೆ ಹೊಂದಿರಬೇಕು ಎಂದರು.

     

    ವಿದ್ಯಾರ್ಥಿಗಳು ನಮ್ಮ ನಾಡು ನುಡಿಯ ಹಿರಿಮೆಯನ್ನು ಅರಿಯಬೇಕು. ಕನ್ನಡ ನಾಡು ನುಡಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡ ಪ್ರಜ್ಞೆ ಮತ್ತು ಕರ್ನಾಟಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ದಿನಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ನಿರಂತರವಾಗಿ ಇರಬೇಕು. ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ಅರಿಯುವುದರೊಂದಿಗೆ ನಮ್ಮ ಜೊತೆಯವರಿಗೂ ಅರಿವು ಮೂಡಿಸಬೇಕು. ಕನ್ನಡಿಗರು ಎಷ್ಡೇ ಭಾಷೆ ಕಲಿತರೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದರು.

     

    ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಕಲಿತ ವಿದ್ಯೆಗೆ ಮತ್ತು ಹುದ್ದೆಗೆ ಗೌರವ ಬರುತ್ತದೆ. ಸ್ಪರ್ಧಾತ್ಮಕ ಕಾಲದಲ್ಲಿ ಪ್ರತಿಭೆಗೆ ಮನ್ಬಣೆ ದೊರೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ವಿದ್ಯೆ ಮತ್ತು ಕೌಶಲ್ಯವನ್ನು ಪಡೆಯಬೇಕು. ಬಸವಣ್ಣ ಮತ್ತು ಶರಣರು ಕಾಯಕ ಪ್ರಜ್ಞೆಯ ಮಹತ್ವವನ್ನು ಸಾರಿದರು. ಬಸವಣ್ಣನವರ ಆರ್ಥಿಕ ಮತ್ತು ಸಾಮಾಜಿಕ ಚಿಂತನೆ ಸಮಾಜ ಬದಲಾವಣೆಗೆ ಸಹಕಾರಿ‌ ಆಯಿತು ಎಂದರು.‌

    ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ದಿನೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ರಂಗನಾಥ, ಉಪನ್ಯಾಸಕರುಗಳಾದ ಜಯರಾಮ್, ಚೇತನ್, ತೇಜಸ್ವಿನಿ, ಶಿವಾನಂದ್, ಶ್ರೀಧರ್, ಶಮಬೇಗಂ ಮುಂತಾದವರು ಭಾಗವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

  • *ಟಿ. ಹೊಸಹಳ್ಳಿ l ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವ :ಕಾರ್ಯಕ್ರಮದಲ್ಲಿ ಸಂಸದ ಕೆ. ಸುಧಾಕರ್ ಭಾಗಿ*

    ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ಟಿ. ಹೊಸಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಆಚರಣಾ ಸಮಿತಿ ವತಿಯಿಂದ 515 ನೇ ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

    ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಸಂಸದ ಡಾ. ಕೆ ಸುಧಾಕರ್ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು ಭಾರತ ದೇಶದ ಸಾವಿರಾರು ಸಾಮಂತ ರಾಜರ ಪೈಕಿ ಕೆಂಪೇಗೌಡರು ಮಾತ್ರ ಅಜರಾಮರವಾಗಿದ್ದಾರೆ, ನಾಡಿನ ಒಳಿತಿಗಾಗಿ ತನ್ನ ಜೀವನವನ್ನು ಪಣವಿಟ್ಟು ಕೆಲಸ ಮಾಡಿದ ಧೀಮಂತ ನಾಯಕ. ಕೆಂಪೇಗೌಡರು ದಕ್ಷ ಮತ್ತು ದೂರದೃಷ್ಟಿಯಳ್ಳ ಆಡಳಿತಗಾರನಾಗಿದ್ದರು. ಇದರ ಫಲವಾಗಿ ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಪ್ಪಯ್ಯಣ್ಣನವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ. ಅವರ ಅನನ್ಯ ಸಾಧನೆಯ ಫಲವಾಗಿ ಇಂದು ಸಾವಿರಾರು ಜನ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು.

    ಇದಕ್ಕೂ ಮೊದಲು ಟಿ.ಹೊಸಹಳ್ಳಿ ಗ್ರಾಮಕ್ಕೆ ಪ್ರಪ್ರಥಮವಾಗಿ ಆಗಮಿಸಿದ ಸಂಸದ ಡಾ ಕೆ ಸುಧಾಕರ್ ರವರಿಗೆ ಊರಿನ ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭದೊಂದಿಗೆ ಭರ್ಜರಿ ಸ್ವಾಗತ ಕೋರಿದರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಸದರೊಡನೆ ಫೋಟೋ ಕ್ಲಿಕ್ಕಿಸಿಕೊಂಡು ಆನಂದ ಪಟ್ಟರು.

     

    ತೂಬಗೆರೆ ಪಂಚಾಯಿತಿ ಸದಸ್ಯ ಗಂಗಾಧರ್ (RGPN) ಮಾತನಾಡಿ ಟಿ. ಹೊಸಹಳ್ಳಿ ಗ್ರಾಮದಲ್ಲಿ ಇಂದು ನಾಡಪ್ರಭು ಕೆಂಪೇಗೌಡರ ಜಯಂತೋತ್ಸವವನ್ನು ಅದ್ದೂರಿಯಾಗಿ ಸ್ಥಳೀಯ ಮುಖಂಡರ ಹಾಗೂ ಯುವಕರ ಸಹಕಾರದಿಂದ ಆಚರಿಸಲಾಗಿದೆ. ಹಲವಾರು ದಿನಗಳ ಕನಸು ಇಂದು ನನಸಾಗಿದೆ. ನಮ್ಮಗ್ರಾಮಕ್ಕೆ ಚಿಕ್ಕಬಳ್ಳಾಪುರ ಲೋಕಸಭೆಯ ನೂತನ ಸಂಸದರಾದ ಡಾ. ಕೆ ಸುಧಾಕರ್ ರವರು ಆಗಮಿಸಿ ಶುಭಕೋರಿ ನಮ್ಮ ಕಾರ್ಯಕ್ರಮದ ಸೊಬಗನ್ನು ಮತ್ತಷ್ಟು ಹೆಚ್ಚಿಸಿದೆ. 3ನೇ ವರ್ಷದ ಕೆಂಪೇಗೌಡ ಜಯಂತೋತ್ಸವವನ್ನು ಅತ್ಯಂತ ಸಂತೋಷ ಮತ್ತು ಸಡಗರದಿಂದ ಆಚರಿಸಿದ್ದು ಮುಂದೆ ಈ ಕಾರ್ಯಕ್ರಮವು ಇನ್ನಷ್ಟು ಅದ್ದೂರಿಯಾಗಿ ನೆಡೆಯಲಿದೆ ಎಂದರು.

    ಈ ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು ಒಟ್ಟಾಗಿ ಜಾತಿ ಭೇದ ಮರೆತು ಭಾಗಿಯಾಗಿ ಶ್ರಮಿಸಿರುವುದು ಶ್ಲಾಘನಿಯ ಎಂದರು.

     

    ಖ್ಯಾತ ವಕೀಲರು ಹಾಗೂ ಬಿಜೆಪಿ ಪಕ್ಷದ ಯುವ ಮುಖಂಡ ಆರ್. ಪ್ರತಾಪ್ ಮಾತನಾಡಿ ಗ್ರಾಮದ ಯುವಕರು ಒಟ್ಟಾಗಿ ಸೇರಿ ಇಂದು ನಾಡಪ್ರಭು ಕೆಂಪೇಗೌಡರ 515ನೇ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಕೆ. ಸುಧಾಕರ್ ರವರ ಪಾಲ್ಗೊಳ್ಳುವಿಕೆ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಯುವಕರ ಹುಮ್ಮಸ್ಸು ಸದಾ ಹೀಗೆ ಇದ್ದು ಗ್ರಾಮದ ಅಭಿವೃದ್ಧಿ ಹೆಚ್ಚಿಸುವ ನಿಟ್ಟಿನಲ್ಲಿ ಸಾಗಲಿ ಎಂದು ಹಾರೈಸಿದರು.

    ಕಾರ್ಯಕ್ರಮದಲ್ಲಿ ರಾಜ್ಯ ತೆಂಗು ನಾರಿನ ಮಹಾಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುರುವಿಗೆರೆ ನರಸಿಂಹಯ್ಯ, ಬಮೂಲ್ ನಿರ್ದೇಶಕ ಆನಂದ್, ವಕೀಲ ಪ್ರತಾಪ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಪುರುಷೋತ್ತಮ್, ಯುವ ಮುಖಂಡ ಉದಯ ಆರಾಧ್ಯ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ರೈತ ಮುಖಂಡ ವಾಸು, ಮುರುಳಿ, ಕೆಂಪೇಗೌಡ ಆಚರಣೆ ಸಮಿತಿಯ ಪದಾಧಿಕಾರಿಗಳಾದ ಆರ್.ಜಿ.ಪಿ.ಎನ್ ಗಂಗಾಧರ್, ಚನ್ನೇಗೌಡ, ಕುಮಾರ್, ಚಂದ್ರಪ್ಪ, ಚನ್ನಕೇಶವ, ಚಂದ್ರು, ಗೌಡ ಮುಂತಾದವರು ಭಾಗವಹಿಸಿದ್ದರು.

  • *ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ*

    ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಕ್ಯಾನ್ಸರ್ ಕಾಯಿಲೆಯಿಂದಾಗಿ ತಮ್ಮ 51ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ.

    ಕರ್ನಾಟಕದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಅಪರ್ಣಾ ಅವರು 1500 ಕ್ಕೂ ಅಧಿಕ ಟಿವಿ ಶೋಗಳಲ್ಲಿ ಭಾಗವಹಿಸಿದ್ದಾರೆ . ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಅವರು ತಮ್ಮ ಸ್ಪಷ್ಟ ಕನ್ನಡ ಭಾಷೆಯಿಂದಲೇ ಹೆಸರುವಾಸಿಯಾಗಿದ್ದರು . ತಮ್ಮ ನಿರೂಪಣೆಯಿಂದ ಸಾಕಷ್ಟು ಹೆಸರು ಮಾಡಿದ್ದರು. ಅಷ್ಟೇ ಅಲ್ಲದೆ ನಮ್ಮ ಮೆಟ್ರೋಗೆ ದ್ವನಿಯಾಗಿದ್ದ ಅಪರ್ಣಾರವರು ಈಗ ಕೇವಲ ನೆನಪು ಮಾತ್ರ.

    ಕ್ಯಾನ್ಸರ್ ಕಾಯಿಲೆಯಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಬನಶಂಕರಿ ನಿವಾಸದಲ್ಲಿ ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • *ದೊಡ್ಡಬಳ್ಳಾಪುರ l ಇಂಡೇನ ಕಾರ್ಖಾನೆ ವಿರುದ್ಧ ಸ್ಥಳೀಯ ಗ್ರಾಮಸ್ಥರ ಆಕ್ರೋಶ : ಕಾರ್ಖಾನೆ ವರ್ಗಾಯಿಸಿ ಆರೋಗ್ಯ ಕಾಪಾಡುವಂತೆ ಮನವಿ*

    ದೊಡ್ಡಬಳ್ಳಾಪುರ l ತಾಲ್ಲೂಕಿನ ಇಂಡೇನ ಕಾರ್ಖಾನೆ ವಿರುದ್ಧ ರಘುನಾಥಪುರ ಗ್ರಾಮಸ್ಥರು ಹಲವು ಆರೋಪಗಳನ್ನು ಮಾಡುವ ಮೂಲಕ ಕಾರ್ಖಾನೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

    ಹೌದು ಹಲವಾರು ವರ್ಷಗಳಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ರಘುನಾಥಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡೇನ ಕಾರ್ಖಾನೆ ವಿರುದ್ಧ ಗ್ರಾಮಸ್ಥರು ತಿರುಗಿಬಿದ್ದಿದ್ದಾರೆ. ಕಾರ್ಖಾನೆಯಿಂದ ವಿಷಪೂರಿತ ರಾಸಾಯನಿಕ ನೀರು ಅಂತರ್ಜಲ ಸೇರುತ್ತಿದ್ದು. ಕಾರ್ಖಾನೆ ಹೊರ ಸೂಸುವ ದುರ್ವಾಸನೆಯಿಂದ ಗ್ರಾಮದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಸಂಪೂರ್ಣ ಹಾಳಾಗುತ್ತಿದ್ದು. ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

     

    ಇಂಡೇನ ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾತರಿಸುವಂತೆ ಮನವಿ ಮಾಡುತ್ತಿದ್ದಾರೆ.

    ಈ ಕುರಿತು ಸ್ಥಳೀಯರಾದ ಮುನಿರಾಜಪ್ಪ ಮಾತನಾಡಿ ಕಾರ್ಖಾನೆಯು ರಾಸಾಯನಿಕ ವಸ್ತುಗಳನ್ನು ಬಳಸಿ ಕರ್ತವ್ಯ ನಿರ್ವಹಿಸುವ ಕಾರಣ ವಿಷಪೂರಿತತ್ಯಾಜ್ಯ ವಾಸನೆ ಮುಖಾಂತರ ಹೊರಬರುತ್ತದೆ. ಕಾರ್ಖಾನೆ ಸೂಸುವ ದುರ್ವಾಸನೆಯಿಂದ ಗ್ರಾಮಸ್ಥರು ಜೀವಿಸುವುದು ಕಷ್ಟಕರವಾಗಿದೆ. ಸ್ಥಳೀಯ ಕೆಲ ಪ್ರಭಾವಿ ವ್ಯಕ್ತಿಗಳ ಸಹಕಾರದಿಂದ ಕಾರ್ಖಾನೆ ಕರ್ತವ್ಯ ನಿರ್ಮಿಸುತ್ತಿದ್ದು. ಸ್ಥಳೀಯ ಗ್ರಾಮಸ್ಥರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕಾರ್ಖಾನೆ ಬೇರೆಡೆ ಸ್ಥಳಾಂತರವಾಗುವ ಮೂಲಕ ರಘುನಾಥಪುರದ ಗ್ರಾಮಸ್ಥರ ಜೀವ ಉಳಿಸಬೇಕಿದೆ. ಗ್ರಾಮಸ್ಥರ ಆರೋಗ್ಯ ಕಾಪಾಡುವಲ್ಲಿ ಸ್ಥಳೀಯ ಸಂಸ್ಥೆಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

     

    ರಘುನಾಥಪುರದ ನಿವಾಸಿ ಅನಿತಾ ಮಾತನಾಡಿ ಕಾರ್ಖಾನೆ ಹೊರ ಸೂಸುವ ದುರ್ವಾಸನೆಯಿಂದ ಮನೆಗಳಲ್ಲಿ ವಾಸಿಸುವುದು ಕಷ್ಟಕರವಾಗಿದೆ. ಮಕ್ಕಳು ಪ್ರತಿನಿತ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಪರಿಸ್ಥಿತಿಗೆ ಗಂಭೀರತೆ ಗ್ರಾಮದ ಮುಖಂಡರಿಗೆ ಅರ್ಥವಾಗುತ್ತಿಲ್ಲ. ನೀರು ಸಂಪೂರ್ಣ ಜಿಡ್ಡುಮಯವಾಗಿದ್ದು ಕುಡಿಯಲು ಯೋಗ್ಯವಲ್ಲದ ನೀರಾಗಿ ಪರಿವರ್ತನೆಗೊಂಡಿದೆ. ಇನ್ನಾದರೂ ಈ ಕುರಿತು ಸ್ಥಳಿಯ ಮುಖಂಡರು, ಅಧಿಕಾರಿಗಳು ಗಮನಹರಿಸಿ ಕಾರ್ಖಾನೆಯನ್ನು ವರ್ಗಾವಣೆ ಮಾಡಬೇಕಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಸ್ಥಳೀಯ ಮುಖಂಡರಾದ ಆರ್.ಎಂ.ಮಹದೇವ್ ಮಾತನಾಡಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಈ ಸಮಸ್ಯೆಯನ್ನು ಗ್ರಾಮದ ಜನತೆ ಎದುರಿಸುತ್ತಿದ್ದು. ಈ ಕುರಿತು ಸಾಕಷ್ಟು ಬಾರಿ ದೂರು ಸಲ್ಲಿಸಿದರು ಕಾರ್ಖಾನೆ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆಲ ಸ್ಥಳೀಯ ಪ್ರಭಾವಿಗಳ ಬೆಂಬಲದಿಂದ ಕಾರ್ಖಾನೆ ಚಾಲನೆಯಲ್ಲಿದ್ದು. 1500ಕ್ಕೂ ಅಧಿಕ ಜಲಸಂದ್ರತೆ ಹೊಂದಿರುವ ರಘುನಾಥಪುರದ ಗ್ರಾಮಸ್ಥರ ಜೀವದ ಜೊತೆ ಕಾರ್ಖಾನೆ ಚೆಲ್ಲಾಟವಾಡುತ್ತಿದೆ. ಕಾರ್ಖಾನೆ ಮುಚ್ಚುವುದು ನಮ್ಮ ಉದ್ದೇಶವಲ್ಲ. ಕಾರ್ಖಾನೆ ವರ್ಗಾವಣೆ ಮಾಡುವ ಮುಖಾಂತರ ಸ್ಥಳೀಯ ಗ್ರಾಮಸ್ಥರ ಜೀವ ಉಳಿಯಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

     

    ಮಾಹಿತಿ ನೀಡದೆ ಸಹಿ ಪಡೆದ್ರ ಮಹಾನುಭಾವರು…!!!?

     

    ಗ್ರಾಮಸ್ಥರ ಆರೋಪದ ಹಿನ್ನೆಲೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಕಾರ್ಮಿಕರು ರಘುನಾಥಪುರ ಗ್ರಾಮದ ಗ್ರಾಮಸ್ಥರ ಮನೆಗಳಿಗೆ ಭೇಟಿಕೊಟ್ಟು ಖಾಲಿ ಪೇಪರ್ ಮೇಲೆ ಸಹಿ ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಸ್ಥಳೀಯ ನಿವಾಸಿ ಅನಿತಾ ಮಾತನಾಡಿ ಕಾರ್ಖಾನೆಯಿಂದ ಕೆಲ ಕಾರ್ಮಿಕರು ಮನೆಗೆ ಭೇಟಿಕೊಟ್ಟು ಸಹಿ ಮಾಡುವಂತೆ ತಿಳಿಸಿದರು. ಖಾಲಿ ಪತ್ರದೊಂದಿಗೆ ಮನೆಗೆ ಭೇಟಿ ಕೊಟ್ಟ ಕಾರ್ಮಿಕರು ಪರಿಚಯಸ್ಥರಾದ ಕಾರಣ ಸಹಿ ಮಾಡಿಕೊಟ್ಟಿದ್ದೇವೆ. ಏತಕ್ಕಾಗಿ ಸಹಿ ಮಾಡಬೇಕು ಎಂಬ ಮಾಹಿತಿ ನೀಡದೆ ಸಹಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.