Blog

  • *ಹಿರಿಯ ನಟ ದ್ವಾರಕೀಶ್ ನಿಧನ : ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಂದ ಸಂತಾಪ*

    ಕರ್ನಾಟಕ ಏಪ್ರಿಲ್ 16 (ವಿಜಯಮಿತ್ರ ) : ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ( 81) ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ಎದ್ದು, ಕಾಫಿ ಕುಡಿದವರು ನಂತರ ಉಸಿರು ಚೆಲ್ಲಿದ್ದಾರೆ. ಅಗಲಿದ ಹಿರಿಯ ನಟನಿಗೆ ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

     

     

    ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.

    ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.

     

    ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ

    ಕಂಬನಿ ಮಿಡಿದಿದ್ದಾರೆ

     

    ಕನ್ನಡದ ಹಿರಿಯ ನಟರಾದ ಶ್ರೀ ದ್ವಾರಕೀಶ್ ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ. ಕಲಾವಿದರಾಗಿ ಅಷ್ಟೇ ಅಲ್ಲದೆ; ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಅನುಪಮ ಸೇವೆ ಆವಿಸ್ಮರಣೀಯ.ವರನಟ ಡಾ.ರಾಜ್‌ಕುಮಾರ್‌, ಡಾ.ವಿಷ್ಣುವರ್ಧನ್‌, ಶ್ರೀ ಅಂಬರೀಶ್‌ರಂಥ ದಿಗ್ಗಜರ ಜತೆ ನಟಿಸಿದ್ದ ಅವರು, ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಿನಿಮಾ ಅಸ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

     

     

    ಕನ್ನಡ ಚಿತ್ರರಂಗದ ಮೇರು ನಟ, ನಿರ್ದೇಶಕ ಹಾಗೂ ಹಿರಿಯ ನಿರ್ಮಾಪಕರಾದ ಶ್ರೀ ದ್ವಾರಕೀಶ್ ಅವರು ನಿಧನರಾಗಿರುವ ವಿಷಯ ತಿಳಿದು ತುಂಬಾ ದಃಖಿತನಾಗಿದ್ದೇನೆ‌. ಅವರ ಅಗಲಿಕೆಯಿಂದ ಕನ್ನಡ ಕಲಾಕ್ಷೇತ್ರ ಬಡವಾದಂತಾಗಿದೆ. ದ್ವಾರಕೀಶ್ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ‌ನು ಅವರ ಕುಟುಂಬಕ್ಕೆ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಂಬಿನಿ ಮಿಡಿದಿದ್ದಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ.

     

     

     

     

    ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ದ್ವಾರಕೀಶ್ ವಿಧಿವಶರಾದ ಸುದ್ದಿ ಅತ್ಯಂತ ಆಘಾತ ಉಂಟುಮಾಡಿದೆ. ನಾಡಿನ ದಿಗ್ಗಜ ಕಲಾವಿದರೊಂದಿಗೆ ನಟಿಸಿ, ಅವರ ಸಿನಿಮಾಗಳನ್ನು ನಿರ್ಮಿಸಿದ್ದ ದ್ವಾರಕೀಶ್ ಅವರ ನಿಧನದಿಂದ ಚಿತ್ರರಂಗ ಒಬ್ಬ ಸಾಧಕ ಕಲಾವಿದನನ್ನು ಕಳೆದುಕೊಂಡಿದೆ. ಅಗಲಿದ ಆ ಹಿರಿಯ ಕಲಾಚೇತನಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ, ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ದಯಪಾಲಿಸಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ.

  • *ಇನ್ನೂ 50 ವರ್ಷ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌*

    Doddaballapura ಏಪ್ರಿಲ್ 15 ( ವಿಜಯ ಮಿತ್ರ ) : ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಮಾಗಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ತ್ರಿಬಲ್‌ ಎಂಜಿನ್‌ನ ಗೆಲುವಿನ ಗಾಳಿ ಬೀಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

     

    ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಡಾ.ಕೆ.ಸುಧಾಕರ್‌ ಪ್ರಚಾರ ನಡೆಸಿದರು.

     

    ನಂತರ ಮಾತನಾಡಿದ ಡಾ.ಕೆ.ಸುಧಾಕರ್‌, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಇರುವವರೆಗೂ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯಗಳನ್ನು ಮಾಡಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆಗಳನ್ನು ಯಾರೂ ಕೊಟ್ಟಿಲ್ಲ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆಂದು *ಅಪಪ್ರಚಾರ ಮಾಡಲಾಗುತ್ತಿದೆ.* ಅದರೆ ಮಹಿಳೆಯರಿಗಾಗಿಯೇ ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್‌ಗೆ ಹೇಳಲು *ಸಾಧನೆಗಳ ಸರಕು ಇಲ್ಲದೆ* ಈ ರೀತಿಯ ತಂತ್ರ ಹೆಣೆಯುತ್ತಿದೆ ಎಂದರು.

     

    ಕಾಂಗ್ರೆಸ್‌ ಇಂಡಿ ಕೂಟ ಮಾಡಿಕೊಂಡು ಮಂಡಿಯಲ್ಲಿ ಭಾರತವನ್ನೇ ಮಾರಾಟ ಮಾಡಲು ಮುಂದಾಗಿದೆ. 40 ಸ್ಥಾನಕ್ಕಿಂತ ಹೆಚ್ಚು ಬರಲ್ಲ ಎನ್ನುವುದು ಗೊತ್ತಿರುವುದರಿಂದ ಹಾಗೂ ಮುಂದಿನ 50 ವರ್ಷ ಅಧಿಕಾರ ಸಿಗದಿರುವುದು ಖಚಿತವಾಗಿರುವುದರಿಂದ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ. 2,000 ರೂ. ಕೊಡುತ್ತಿರುವುದರಿಂದಲೇ *ರಾಜ್ಯದ ಸ್ಥಿತಿ ಅಧೋಗತಿಗೆ* ಸಾಗಿದೆ. ದೇಶದ ಬೊಕ್ಕಸದಿಂದ ಇದೇ ರೀತಿ ಹಣ ನೀಡಿದರೆ ಇಡೀ ದೇಶ ಹಾಳಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯಲಿದೆ ಎಂದರು.

     

    ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗೆ ಬಳಸಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡದೆ ದೆಹಲಿಗೆ ಕಳುಹಿಸಲಾಗಿದೆ. ದಲಿತರ ಬಗ್ಗೆ ಕಾಂಗ್ರೆಸ್‌ಗೆ ಗೌರವ ಇದ್ದರೆ *ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ* ಎಂದು ಘೋಷಿಸಬೇಕಿತ್ತು. ಡಾ.ಬಿ.ಆರ್‌.ಅಂಬೇಡ್ಕರ್‌ರ ಹೆಸರು ಹೇಳಲು ಕಾಂಗ್ರೆಸ್‌ ಯೋಗ್ಯತೆ ಮತ್ತು ನೈತಿಕತೆ ಇಲ್ಲ. ಬಾಬಾ ಸಾಹೇಬರನ್ನು ಎರಡು ಬಾರಿ ಸೋಲಿಸಿದ್ದೇ ಕಾಂಗ್ರೆಸ್‌ ಎಂದರು.

     

    *ಹಿಂದೂಗಳು ಮತ ನೀಡಬೇಕಾ?*

     

    ಕಾಂಗ್ರೆಸ್‌ನ ಅಭ್ಯರ್ಥಿ *ಕ್ಯಾಶ್‌ ಪಾರ್ಟಿ.* ಅವರ ಖಾತೆಯಲ್ಲಿನ ಹಣ ನೋಡಿ ಟಿಕೆಟ್‌ ನೀಡಿದ್ದಾರೆ. ನಾನು ಆರೋಗ್ಯ ಸಚಿವನಾಗಿ, ಶಾಸಕನಾಗಿ ಕೆಲಸ ಮಾಡಿದ್ದನ್ನು ನೋಡಿ ಟಿಕೆಟ್‌ ನೀಡಿದ್ದಾರೆ. ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ, ಆದರೆ ಜನರ ಪ್ರೀತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂಬುದನ್ನು ಅಭ್ಯರ್ಥಿಯ ತಂದೆ ತಿಳಿಯಬೇಕು. ಇಂತಹ ಅಹಂಕಾರದ ಮಾತನ್ನಾಡಬಾರದು. ಕಾಂಗ್ರೆಸ್‌ ಸರ್ಕಾರ ಆಳಲು ಬಂದು ರಾಜ್ಯವನ್ನು ಹಾಳು ಮಾಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರಿನಲ್ಲಿ ರಾಮ ಇದೆ, ಅವರಿಗೆ ಟಿಕೆಟ್ ಕೊಡಿಸಿದ್ವರಾ ಹೆಸರಿನಲ್ಲೂ ರಾಮ ಇದೆ, ಆದರೆ ಅವರು ರಾಮ ಮಂದಿರಕ್ಕೆ ಹೋಗುವುದಿಲ್ಲ ಅವರ ಹೃದಯದಲ್ಲಿ ರಾಮನ ಬಗ್ಗೆ ಭಕ್ತಿ ಇಲ್ಲ. ಇಂಥವರಿಗೆ ಹಿಂದೂಗಳು ಮತ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.

     

    ಪ್ರಧಾನಿ ಮೋದಿ ರಾಮ ಮಂದಿರದಲ್ಲಿ ಬಾಲರಾಮನನ್ನು ಪ್ರತಿಷ್ಠಾಪಿಸಿದ್ದಾರೆ. ಜೊತೆಗೆ ರಾಮರಾಜ್ಯವನ್ನು ಸ್ಥಾಪಿಸಿದ್ದಾರೆ. ಆದರೆ ಕಾಂಗ್ರೆಸ್‌ ಜನರ *ಭವಿಷ್ಯದ ಜೊತೆ ಜೂಜಾಡಲು* ಬಂದಿದೆ. ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದ್ದು, ರಾಜ್ಯದ ಜನತೆಯ ಹಿತರಕ್ಷಣೆಗಾಗಿ ಬಿಜೆಪಿಯು ಜೆಡಿಎಸ್ ಜೊತೆ ಕೈ ಜೋಡಿಸಿದೆ. ಈ ಲೋಕಸಭಾ ಚುನಾವಣೆ ಒಂದು ಧರ್ಮ ಯುದ್ಧವಾಗಿದ್ದು, ಧರ್ಮದ ಪರ, ಸಾಮಾನ್ಯ ಜನರ ಪರವಾಗಿರುವ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಹೊಣೆ ನಮ್ಮ ಮೇಲಿದೆ ಎಂದರು.

     

    *ಬಡತನ ನಿವಾರಣೆ ಇಲ್ಲ, ಪಿಕ್‌ ಪಾಕೆಟ್‌ ಸರ್ಕಾರ*

     

    *ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ* ಮಾತನಾಡಿ, ಹಿಂದೆ ಇಂದಿರಾಗಾಂಧಿ ಬಡತನ ನಿರ್ಮೂಲನೆ ಮಾಡುವ ಯೋಜನೆ ಜಾರಿ ಮಾಡಿದ್ದರೂ ಬಡತನ ನಿವಾರಿಸಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಗ್ಯಾರಂಟಿಗಳನ್ನು ತೋರಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಹಿಳೆಯರಿಗೆ ಹಣ ನೀಡಿ, ಪುರುಷರಿಂದ ಹಣ ಪಡೆಯಲಾಗುತ್ತಿದೆ. ಇದು ಪಿಕ್‌ ಪಾಕೆಟ್‌ ಸರ್ಕಾರ ಎಂದು ಟೀಕಿಸಿದರು.

  • *ರೈತರ ಬೆನ್ನೆಲುಬು ಡಾ. ಬಿ.ಆರ್ ಅಂಬೇಡ್ಕರ್ – ಹಳ್ಳಿರೈತ ಅಂಬರೀಷ್*

    ದೊಡ್ಡಬಳ್ಳಾಪುರ ( ವಿಜಯಮಿತ್ರ ) : ಅನ್ನದಾತ ರೈತನು ತನ್ನ ಹಕ್ಕನ್ನು ಪಡೆಯಲು ಡಾ. ಬಿ. ಆರ್.ಅಂಬೇಡ್ಕರ್ ರಚಿತಾ ಸಂವಿಧಾನವು ಸಹಕಾರಿಯಾಗಿದೆ. ಹಾಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೈತರ ಬೆನ್ನೆಲುಬು ಎಂದರೆ ತಪ್ಪಾಗಲಾರದು ಎಂದು ಹಳ್ಳಿ ರೈತ ಅಂಬರೀಶ್ ಅಭಿಪ್ರಾಯ ಪಟ್ಟರು

    ತೂಬಗೆರೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ 133 ನೇ ಡಾ. ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರೈತನು ಉಳಿಯಲು ಮುಖ್ಯ ಕಾರಣ ಸಂವಿಧಾನವೇ ಆಗಿದೆ. ಯಾವುದೇ ರೀತಿಯ ಅನ್ಯಾಯ ಅಕ್ರಮಗಳು ನಡೆದ ಸಂದರ್ಭದಲ್ಲಿ ರೈತನ ಧ್ವನಿಯಾಗಿ ಸಂವಿಧಾನ ನಿಲ್ಲುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಸರ್ವ ಸಮುದಾಯದ ನಾಯಕರು ಎಂದರು.

     

    ಹಸಿರು ಶಾಲನ್ನು ರೈತರು ತಮ್ಮ ಪ್ರತೀಕವಾಗಿ ಧರಿಸುತ್ತೇವೆ ಅಂತೆಯೇ ನೀಲಿ ಸಾಲನ್ನು ಕೂಡ ಧರಿಸಬೇಕಿದೆ. ಒಂದು ಅನ್ನದಾತನ ಸಂಕೇತವಾದರೆ ಮತ್ತೊಂದು ದೃಢತೆ, ಸಮಾನತೆ ಮತ್ತು ಹಕ್ಕು ಪ್ರತಿಪಾದನೆಯ ಸಂಕೇತವಾಗಿದೆ. ಸಮಾಜದಲ್ಲಿ ರೈತರಿಗೆ ಅನ್ಯಾಯವಾದಾಗ ನಮ್ಮ ಪರ ಬೆಂಬಲವಾಗಿ ನಿಲ್ಲುವುದು ಕೇವಲ ಸಂವಿಧಾನ ಮಾತ್ರ, ಪ್ರತಿ ರೈತನು ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ನೆನೆಯಬೇಕಿದೆ ಎಂದರು

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಉದಯರಾಧ್ಯ, ನಾಗರಾಜು,ಕಾಂತರಾಜು, ರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

  • *ಅಂಬೇಡ್ಕರ್ ಆಶಯದ ಹಾದಿಯಲ್ಲಿ ಪ್ರಧಾನಿ ಮೋದಿ ಆಡಳಿತ ಡಾ.ಕೆ.ಸುಧಾಕರ್*

    ಚಿಕ್ಕಬಳ್ಳಾಪುರ ಏಪ್ರಿಲ್ 14 ( ವಿಜಯ ಮಿತ್ರ ) : ಪ್ರಧಾನಿ ನರೇಂದ್ರ ಮೋದಿಯವರು ಬಾಬಾ ಸಾಹೇಬರ ಪರಂಪರೆಯನ್ನುಳಿಸಲು ಶ್ರಮಿಸಿದ್ದರೆ, ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಬಾಬಾ ಸಾಹೇಬರನ್ನು ಮೂಲೆಗೆ ಸರಿಸಲು ಸಾಕಷ್ಟು ಪ್ರಯತ್ನ ಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

     

    ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಸೂರ್ಯ ಕನ್ವೆನ್ಷನಲ್ ಹಾಲ್ ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     

    ಅಂಬೇಡ್ಕರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ದೇಶದಲ್ಲಿ ಸಾವಿರಾರು ಭಾಷೆ, ಬೇರೆ ಬೇರೆ ಜಾತಿ, ಧರ್ಮಗಳಿದ್ದರೂ ಎಲ್ಲರೂ ಅಂಬೇಡ್ಕರ್ ರಚಿತ ಸಂವಿಧಾನದಡಿ ಸಮನ್ವಯದಿಂದ ಜೀವನ ನಡೆಸುತ್ತಿದ್ದಾರೆ. ಸಮ ಸಮಾಜವನ್ನು ನಿರ್ಮಿಸಿದ ಅವರು ಶೋಷಿತರ ಕಣ್ಣೀರು ಒರೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದರು ಎಂದರು.

     

    ಪ್ರಧಾನಿ ನರೇಂದ್ರ ಮೋದಿಯವರು ಡಾ.ಬಿ.ಆರ್.ಅಂಬೇಡ್ಕರರ ಆಶಯದ ಹಾದಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅದರೆ ಕಾಂಗ್ರೆಸ್ ಸರ್ಕಾರ, ಜವಹರಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಅವರು ಅಂಬೇಡ್ಕರ್ ಗೆ ಅಪಮಾನ ಮಾಡಿದ್ದರು‌ ಎಂದರು.

     

     

    ಸ್ವಾತಂತ್ರ್ಯ ದೊರೆತ ಆರಂಭದಿಂದಲೇ, ಡಾ.ಅಂಬೇಡ್ಕರ್‌ ಅವರನ್ನು ಬದಿಗೆ ಸರಿಸಲು ಕಾಂಗ್ರೆಸ್‌ ಪಕ್ಷ ಪ್ರಯತ್ನಿಸಿತ್ತು. *1952 ರ ಲೋಕಸಭಾ ಚುನಾವಣೆ* ಮತ್ತು 1954 ರ ಉಪಚುನಾವಣೆಯಲ್ಲಿ, ಅಂಬೇಡ್ಕರ್ ವಿರುದ್ಧ ಜವಹರಲಾಲ್‌ ನೆಹರು ನೇತೃತ್ವದಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್, ದಾದರ್‌ನಲ್ಲಿ ಅವರನ್ನು ಸೋಲಿಸಿತು. ನಂತರ, ಭಾರತೀಯ ಜನಸಂಘ ಮತ್ತು ಇತರ ಪಕ್ಷಗಳು ಕೈಜೋಡಿಸಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಮತ್ತೆ ಸಂಸತ್ತಿಗೆ ಕಳುಹಿಸಿದವು ಎಂದು ವಿವರಿಸಿದರು‌.

     

    ಅಂಬೇಡ್ಕರ್‌ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ ಅವರ ಪುಸ್ತಕ ಮತ್ತು ಸಮಾಜ ಸುಧಾರಣಾ ಕಾರ್ಯಗಳನ್ನು ಕಾಂಗ್ರೆಸ್‌ ಎಂದಿಗೂ ಪ್ರಚಾರ ಮಾಡಲಿಲ್ಲ. ಏಕೆಂದರೆ ಕಾಂಗ್ರೆಸ್‌ ಪಕ್ಷ ಅಂಬೇಡ್ಕರ್ ಪರಂಪರೆಯನ್ನು ಅಳಿಸಿ ಹಾಕಲು ಬಹಳ ಶ್ರಮ ವಹಿಸಿತ್ತು. ಸ್ವಾತಂತ್ರ್ಯದ ನಂತರ 35 ವರ್ಷಗಳ ಕಾಲ ಅಂಬೇಡ್ಕರ್ ಅವರಿಗೆ *ಭಾರತರತ್ನ ನೀಡಲು ಕಾಂಗ್ರೆಸ್‌ ನಿರಾಕರಿಸಿತ್ತು.* ಆದರೆ ಅದೇ ಪ್ರಶಸ್ತಿಯನ್ನು ಜವಹರಲಾಲ್‌ ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ನೀಡಲಾಗಿತ್ತು. ನಂತರ 1990 ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ ನೀಡಿ ಗೌರವ ಸಲ್ಲಿಸಿತ್ತು ಎಂದು ಸ್ಮರಿಸಿದರು.

     

    ಅಂಬೇಡ್ಕರ್‌ ಅವರ ದೇಹಾಂತ್ಯವಾದಾಗ ಕೂಡ ಅವರ *ಅಂತ್ಯಸಂಸ್ಕಾರ ಮಾಡಲು* ಹಾಗೂ ಸ್ಮಾರಕ ಮಾಡಲು ಕಾಂಗ್ರೆಸ್‌ ಅವಕಾಶ ನೀಡಲಿಲ್ಲ. ಇದನ್ನು ಇತಿಹಾಸ ಎಂದಿಗೂ ಕ್ಷಮಿಸಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಂಬೇಡ್ಕರ್‌ ಪರಂಪರೆಗೆ ಹೊಸ ದಿಕ್ಕು ನೀಡಿದರು ಎಂದರು.

     

    ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1949 ರ ನವೆಂಬರ್‌ 26 ರಂದು ಅಳವಡಿಸಿಕೊಳ್ಳಲಾಯಿತು. ಪ್ರಧಾನಿ ಮೋದಿಯವರು ನವೆಂಬರ್ 26 ರಂದು *ಸಂವಿಧಾನ ದಿನ* ಎಂದು ಘೋಷಣೆ ಮಾಡಿದರು. ಪ್ರಧಾನಿ ಮೋದಿ 2016 ರಲ್ಲಿ ಪಂಚತೀರ್ಥ ಯೋಜನೆ ಜಾರಿ ಮಾಡಿದರು. ಅಂಬೇಡ್ಕರರ ಬದುಕಿನ ಪ್ರಮುಖ ಐದು ಸ್ಥಳಗಳ ಅಭಿವೃದ್ಧಿ ಮಾಡಿ ಇಲ್ಲಿಗೆ ಜನರು ಪ್ರವಾಸ ಮಾಡುವಂತೆ ಉತ್ತೇಜನ ನೀಡಿದರು‌ ಎಂದರು.

     

    *ದಲಿತರ ಮನೆಯಲ್ಲಿ ಉಪಾಹಾರ*

     

    ಅಭ್ಯರ್ಥಿ ಡಾ.ಕೆ.ಸುಧಾಕರ್ ಬಾಗೇಪಲ್ಲಿಯ ಗೂಳೂರು ಗ್ರಾಮದ ಬಿಜೆಪಿ ಪಕ್ಷದ ದಲಿತ ಕಾರ್ಯಕರ್ತ ನಾರಾಯಣಪ್ಪ ಅವರ ಮನೆ ಭೇಟಿ ನೀಡಿ ಬೆಳಗಿನ ಉಪಾಹಾರ ಸೇವಿಸಿದರು.

     

    ನಾರಾಯಣಪ್ಪನವರ ಕುಟುಂಬ ಸದಸ್ಯರು ಅತ್ಯಂತ ಆತ್ಮೀಯತೆಯಿಂದ ನೀಡಿದ ಆತಿಥ್ಯ, ಮನೆ ಮಂದಿಯೆಲ್ಲಾ ತೋರಿದ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ ಎಂದು ಅವರು ಕೃತಜ್ಞತೆ ಸಲ್ಲಿಸಿದರು.

     

    ಇದಕ್ಕೂ ಮುನ್ನ ಬಾಗೇಪಲ್ಲಿ ಪಟ್ಟಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು‌‌.

     

    ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು, ಸಂಸದ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಂಡಲ ಅಧ್ಯಕ್ಷ ಪ್ರತಾಪ್, ಗಂಗರೆಡ್ಡಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್ ಮುಖಂಡ ಹರಿನಾಥರೆಡ್ಡಿ, ತಾಲ್ಲೂಕು ದಲಿತಪರ ಸಂಘಟನೆಯ ಮುಖಂಡ ಆರ್.ವೆಂಕಟೇಶ್, ಚಿನ್ನಪುಜಪ್ಪ, ಕೆ.ಟಿ.ವೀರಾಂಜನೇಯ, ಜಯಂತ್, ಎಸ್.ಆರ್.ಲಕ್ಷ್ಮೀನಾರಾಯಣ , ರಾಮಪ್ಪ, ಪಿ.ಡಿ.ವೆಂಕಟರಮಣ, ವಿನಯ್ ಕುಮಾರ್, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

  • *706 ಮಂದಿ ಮನೆಯಿಂದಲೇ ಮತದಾನ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 14 (ವಿಜಯಮಿತ್ರ ): 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ 85 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರ ನೆರವಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 737 ಮತದಾರರ ಪೈಕಿ 706 ಮಂದಿ ಇದರ ಅವಕಾಶ ಪಡೆದುಕೊಂಡು ಮನೆಯಿಂದಲೇ ಮತದಾನ ಮಾಡಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್ ಶಿವಶಂಕರ ಅವರು ತಿಳಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 120 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 37 ವಿಕಲಚೇತನ ಮತದಾರರು ಸೇರಿ ಒಟ್ಟು 157 ಮತದಾರರ ಪೈಕಿ 147(ಶೇ.93.63%)ಮಂದಿ ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ.

    179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 85 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 24 ವಿಕಲಚೇತನ ಮತದಾರರು ಸೇರಿ ಒಟ್ಟು 109 ಮತದಾರರ ಪೈಕಿ 104(ಶೇ.95.41%)ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

    180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ 159 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 107 ವಿಕಲಚೇತನನರು ಸೇರಿ ಒಟ್ಟು 266 ಮತದಾರರಲ್ಲಿ 257(96.62%) ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

    181-ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿನ 148 ಮಂದಿ 85 ವರ್ಷ ತುಂಬಿದ ಹಿರಿಯರು ಹಾಗೂ 57 ವಿಕಲಚೇತನ ಮತದಾರರು ಸೇರಿ ಒಟ್ಟು 205 ಮತದಾರರ ಪೈಕಿ 198(96.59%) ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.

    ಒಟ್ಟಾರೆ ಜಿಲ್ಲೆಯಲ್ಲಿ 512 ಮಂದಿ 85 ವರ್ಷ ತುಂಬಿದ ಹಿರಿಯ ನಾಗರಿಕರು ಹಾಗೂ 225 ವಿಕಲಚೇತನರ ಮತದಾರರು ಸೇರಿ ಒಟ್ಟು 737 ಮಂದಿ ಮತದಾರರ ಪೈಕಿ 706(95.79%) ಮತದಾರರು ಮನೆಯಿಂದಲೇ ಮತದಾನ ಸೌಲಭ್ಯವನ್ನು ಪಡೆದುಕೊಂಡು ಮತದಾನ ಮಾಡಿದ್ದಾರೆ.

    737 ಮತದಾರರ ಪೈಕಿ 12 ಮಂದಿ ಮೃತಪಟ್ಟಿದ್ದು,12 ಮಂದಿ ಆಸ್ಪತ್ರೆಯಲ್ಲಿದ್ದು, 11 ಮಂದಿ ಮತದಾರರು ಅಲಭ್ಯವಿದ್ದರು. ಅಲಭ್ಯವಿದ್ದ ಮತದಾರರಿಗೆ ಉಳಿದ ದಿನ ಚುನಾವಣಾ ಅಧಿಕಾರಿಗಳು, ಸಿಬ್ಬಂದಿಗಳು ಪುನಃ ಅವರ ಮನೆಗಳಿಗೆ ತೆರಳಿ ಮತದಾನ ಮಾಡಿಸಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ತಿಳಿಸಿದ್ದಾರೆ.

  • *ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ: ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಉಭಯ ಪಕ್ಷಗಳ ಮುಖಂಡರು*

    ದೊಡ್ಡಬಳ್ಳಾಪುರ (ತೂಬಗೆರೆ) ಏಪ್ರಿಲ್ 14: ಗ್ರಾಮದ ದಲಿತ ಮುಖಂಡ ರಾಮಕೃಷ್ಣರವರ ಮನೆಯಲ್ಲಿ ಉಪಹಾರ ಸೇವಿಸುವುದರ ಮೂಲಕ ಹೋಬಳಿಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರು ಅರ್ಥಪೂರ್ಣ ಅಂಬೇಡ್ಕರ್ ಜಯಂತಿ ಆಚರಿಸಿದರು. ಉಪಹಾರದ ನಂತರ ಬಸ್ ನಿಲ್ದಾಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅನ್ನದಾನ ಮಾಡುವುದರ ಮೂಲಕ ಮಹನೀಯರ ಜಯಂತಿಯನ್ನು ಆಚರಿಸಿದರು.

     

    ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಅಪ್ಪಯಣ್ಣ ಮಾತನಾಡಿ, ಡಾ. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ. ಶೋಷಿತರ, ದಮನಿತರ ಪರವಾಗಿ, ಅವರ ಹಕ್ಕಿಗಾಗಿ ಮಾಡಿದ ಹೋರಾಟ ಈ ದೇಶಕ್ಕೆ ಅವರು ನೀಡಿರುವ ಅನುಪಮ ಸೇವೆಯನ್ನು ನಾವು ಸದಾ ಸ್ಮರಿಸಬೇಕಾಗಿದೆ ಎಂದರು.

     

     

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ರವರು ಮಾತನಾಡಿ ಅಂಬೇಡ್ಕರ್ ವಿಶ್ವದ ಮಹಾನ್ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಅಂಬೇಡ್ಕರ್‌ ಶೋಷಿತರ ಬದುಕನ್ನು ಕಟ್ಟಿಕೊಳ್ಳಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಕೇವಲ ದಲಿತ ವರ್ಗದವರಲ್ಲದೇ ಇಡೀ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ವರ್ಗದ ಜನರ ಧ್ವನಿಯಾಗಿ ಸಮಾನತೆ, ಸಹೋದರತೆಗಾಗಿ, ಮೇಲು-ಕೀಳು ಎಂಬ ಭೇದ-ಭಾವ ಇರಬಾರದೆಂದು ತಿಳಿಸಿದ್ದಾರೆ ಎಂದರು.

     

     

    ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯಣ್ಣ, ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹರೀಶ್ ಗೌಡ, ಹೋಬಳಿ ಬಿಜೆಪಿ ಅಧ್ಯಕ್ಷ ವಾಸುದೇವ್ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್, ದೊಡ್ಡಬಳ್ಳಾಪುರ ನಗರಸಭಾ ಮಾಜಿ ಸದಸ್ಯ ತಳವಾರ ನಾಗರಾಜ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ ದಲಿತ ಮುಖಂಡರಾದ ಕೊನಘಟ್ಟ ಆನಂದ್, ನಾಗರಾಜ್, ರಾಮಕೃಷ್ಣ, ಮುನಿರಾಜು, ಸುರೇಶ್ ,ಪ್ರಭು . ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಚ್ಚಹಳ್ಳಿ ನಾಗರಾಜ್ ಜೆಡಿಎಸ್ ಮುಖಂಡರಾದ ಉದಯ್ ಆರಾಧ್ಯ, ಮುರುಳಿ, ಮಂಜುನಾಥ್ ,ವಿವಿಧ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಬಾಬು, ದುರ್ಗೇನಹಳ್ಳಿ ನಾಗರಾಜ್, ತೂಬಗೆರೆ ಮುನಿಕೃಷ್ಣಪ್ಪ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರುಗಳು, ಭಾಗವಹಿಸಿದ್ದರು.

  • *ಜಿಲ್ಲಾಡಳಿತ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌‌ ಅಂಬೇಡ್ಕರ್ ರವರ 133 ನೇ ಜನ್ಮದಿನಾಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 14 (ವಿಜಯಮಿತ್ರ): ಸಂವಿಧಾನ ಶಿಲ್ಪಿ, ಭಾರತ ರತ್ನ ಹಾಗೂ ಮಹಾಮಾನವತಾವಾದಿ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇ ಜಯಂತಿ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.

    ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ‌ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *ಏಪ್ರಿಲ್ 13 ರಿಂದ 18 ವರೆಗೆ ಮನೆ ಮನೆ ಮತದಾನ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 11 (ವಿಜಯಮಿತ್ರ): ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮತದಾನಕ್ಕೆ ಆಯ್ಕೆ ಮಾಡಿಕೊಳ್ಳಲಾದ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಹಾಗೂ ವಿಕಲಚೇತನ ಮತದಾರರಿಂದ ಏಪ್ರಿಲ್ 13 ರಿಂದ 18 ರವರೆಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮನೆ ಮತದಾನ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು. ಮನೆ ಮತದಾನಕ್ಕೆ ಈಗಾಗಲೇ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿರುತ್ತದೆ. ಆದ್ದರಿಂದ ಮನೆ ಮತದಾನಕ್ಕೆ ಆಯ್ಕೆ ಮಾಡಿಕೊಳ್ಳಲಾದ ಮತದಾರರು ತಾವು ನೀಡಲಾದ ವಿಳಾಸದಲ್ಲಿ ಹಾಜರಿದ್ದು, ಮನೆ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ವಿಧಾನಸಭಾ ಕ್ಷೇತ್ರದ ಹೆಸರುಗಳು, 85 ವರ್ಷ ಮೇಲ್ಪಟ್ಟ ಮತದಾರರು ಹಾಗೂ ವಿಕಲಚೇತನ ಮತದಾರರ ಸಂಖ್ಯೆ. 178-ಹೊಸಕೋಟೆ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು 120 ಹಾಗೂ ವಿಕಲಚೇತನ 37 ಮತದಾರರು, 179-ದೇವನಹಳ್ಳಿ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು 85, ವಿಕಲಚೇತನ 24 ಮತದಾರರು, 180-ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು 159, ವಿಕಲಚೇತನ 107 ಮತದಾರರು, 181-ನೆಲಮಂಗಲ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು 148, ವಿಕಲಚೇತನ 57 ಮತದಾರರು ಇದ್ದಾರೆ.

  • *ಚುನಾವಣಾ ಅಕ್ರಮಗಳನ್ನು ತಡೆಯಲು ಹೆಚ್ಚಿನ ತಪಾಸಣೆ ಅಗತ್ಯ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಏಪ್ರಿಲ್ 11(ಪ್ರಜಾ ಸೇನೆ ): ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಸಲುವಾಗಿ ಚುನಾವಣೆ ಅಕ್ರಮಗಳನ್ನು ತಡೆಯಲು ಹೆಚ್ಚಿನ ತಪಾಸಣೆ ನಡೆಸಿ ಎಂದು ರಾಜ್ಯ ವಿಶೇಷ ಚುನಾವಣೆ ವೆಚ್ಚ ವೀಕ್ಷಕರಾದ ಮುರಳಿ ಕುಮಾರ್ ಅವರು ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದರು.

    ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ನ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಚುನಾವಣೆ ವೆಚ್ಚ ವೀಕ್ಷಣೆ ಸಂಬಂಧ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ದೃಷ್ಟಿಕೋನದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಅಕ್ರಮ ಮದ್ಯ, ನಗದು ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ 10 ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಅಥವಾ ವಸ್ತುಗಳು ಪತ್ತೆಯಾದಲ್ಲಿ ತಕ್ಷಣವೇ ವೆಚ್ಚ ವೀಕ್ಷಕರಿಗೆ ಮಾಹಿತಿ ನೀಡಿ ವರದಿ ಸಲ್ಲಿಸಿ ಎಂದು ಹೇಳಿದರು.

    ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನ ವಾದ ಕ್ಷೇತ್ರಗಳಲ್ಲಿ ಮತದಾನ ಕುರಿತು ವಿಶೇಷ ಜಾಗೃತಿ ಮೂಡಿಸಿ. ಅಬಕಾರಿ, ವಾಣಿಜ್ಯ ತೆರಿಗೆ, ಆದಾಯ ತೆರಿಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸ್ವಯಂ ಪ್ರೇರಿತ ದಾಳಿ, ತಪಾಸಣೆ ನಡೆಸಿ. ಸೂಕ್ತ ಮಾರ್ಗದಲ್ಲಿ ಅಧಿಕಾರಿಗಳ ಸಹಕಾರ, ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವೆಚ್ಚ ವೀಕ್ಷಕರಾದ ದೆಬಾಶಿಶ್ ಮಜುಮ್ ದಾರ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಸಹಾಯಕ ಚುನಾವಣಾಧಿಕಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್ ಅನುರಾಧ, ಚಿಕ್ಕಬಳ್ಳಾಪುರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಚುನಾವಣಾಧಿಕಾರಿಗಳು, ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.

  • *ಅಧಿಕಾರಿಗಳ ಮನವೊಲಿಕೆ ಯತ್ನ ವಿಫಲ : ಮುಂದುವರೆದ ಕುಡಿಯುವ ನೀರಿನ ಹೋರಾಟ*

    ದೊಡ್ಡಬಳ್ಳಾಪುರ ಏಪ್ರಿಲ್ 11 ( ವಿಜಯ ಮಿತ್ರ ) : ನಮ್ಮ ಪಂಚಾಯಿತಿಯಲ್ಲಿ ಯಾವ ಗ್ರಾಮಗಳಿಗೂ ಕುಡಿಯಲು ನೀರಿಲ್ಲ, ಮನವೊಲಿಸಲು ಬರುವ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಲ್ಲಿ ಕಾಳಜಿವಹಿಸಿ ಎಂದು ಅಧಿಕಾರಿಗಳ ವಿರುದ್ಧ ದೊಡ್ಡತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

     

    ಲೋಕಸಭೆ ಚುನಾವಣೆ ಬಹಿಷ್ಕಾರದ ಹಿನ್ನಲೆ ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ದಂಡಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎರಡು ಗ್ರಾಮಗಳ ಗ್ರಾಮಸ್ಥರನ್ನು ಮನವೊಲಿಸಲು ಮುಂದಾದರು.

     

    ಪಟ್ಟು ಬಿಡದ ಹೋರಾಟಗಾರರು ಕೂಡಲೇ 3ನೇ ಹಂತದ ಕುಡಿಯುವನೀರಿನ ಶುದ್ದಿಕಾರಣ ಪ್ರಾರಂಭಿಸುವಂತೆ ಒತ್ತಾಯಿಸಿದರು. ಹಾಗೂ ಗ್ರಾಮಗಳಿಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ಜಕ್ಕಲ ಮಡುಗು ಯೋಜನೆಯ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಅಗ್ರಹಿಸಿದರು.

     

    ಮೌಖಿಕ ಆದೇಶ ಒಪ್ಪದ ಹೋರಾಟಗಾರರು ಲಿಖಿತ ರೂಪದಲ್ಲಿ ಅದೇಶ ಹೊರಡಿಸುವಂತೆ ಪಟ್ಟು ಹಿಡಿದರು. ಹಾಗೂ ಎರಡು ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಮಳೆ ನೀರಿನ ಕೊಯ್ಲು ಯೋಜನೆ ರೂಪಿಸುವಂತೆ ಹಾಗೂ ಸದರಿ ಕಾಮಗಾರಿಗಳಿಗೆ ತಗುಲುವ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಒತ್ತಾಯಿಸಿದರು.

     

    ತಾಲೂಕುದಂಡಾಧಿಕಾರಿ ವಿದ್ಯಾ ವಿಭಾ ರಾಠೋಡ್ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಬಹಿಷ್ಕಾರ ಸರಿ ಅಲ್ಲ, ಸರ್ಕಾರ, ಅಧಿಕಾರಿಗಳು ನಿಮ್ಮೊಂದಿಗಿದ್ದೇವೆ. ನಮ್ಮೊಂದಿಗೆ ಸಹಕರಿಸಿ. ಕುಡಿಯುವ ನೀರಿನ ಯೋಜನೆ ತ್ವರಿತಗತಿಯಲ್ಲಿ ಸಾಗುವಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

     

    ಅಧಿಕಾರಿಗಳ ಪ್ರಯತ್ನ ವಿಫಲವಾಗಿದ್ದು. ಸೂಕ್ತ ಪರಿಹಾರ ನೀಡದೆ ಚುನಾವಣಾ ಬಹಿಷ್ಕಾರ ಹಿಂಪಡೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

     

    ಈ ಸಂದರ್ಭದಲ್ಲಿ ಕೆ ಎಚ್ ಕೆಂಪಣ್ಣ, ಆದಿತ್ಯ ನಾಗೇಶ್, ಟಿ. ರಂಗರಾಜು, ಸಂದೇಶ್,ರೈತ ಮುಖಂಡರಾದ ವಸಂತ್ ಕುಮಾರ್ , ಸತೀಶ್, ಸೇರಿದಂತೆ ನೂರಾರು ರೈತರು ಎರಡು ಪಂಚಾಯಿತಿಗಳ ಗ್ರಾಮಸ್ಥರು ಉಪಸ್ಥಿತರಿದ್ದರು.