Blog

  • *ರೈಲಿಗೆ ಸಿಲುಕಿ 45 ವರ್ಷದ ಅಪರಿಚಿತ ವ್ಯಕ್ತಿ ಸಾವು : ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು*

    *ದೊಡ್ಡಬಳ್ಳಾಪುರ ಏಪ್ರಿಲ್.10 ( ವಿಜಯ ಮಿತ್ರ )* :ದೊಡ್ಡಬಳ್ಳಾಪುರ ರಾಜಾನುಕುಂಟೆ ರೈಲು ನಿಲ್ದಾಣಗಳ ಮಧ್ಯೆ ಸುರಧೇನುಪುರದ ಹತ್ತಿರ ಅಪರಿಚಿತ ಗಂಡಸು ಸುಮಾರು 45 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

     

    ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 73/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲಾಗಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾ

     

     

    *ಮೃತ ವ್ಯಕ್ತಿಯ ಚಹರೆ* – 5’4 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು, ದುಂಡನೆಯ ಮುಖ ಇದ್ದು ಸಾಧಾರಣವಾದ ಮೈಕಟ್ಟು,ಹೊಂದಿರುತ್ತಾರೆ.ಕುರುಚಲು ಗಡ್ಡ ಮೀಸೆ ಹೊಂದಿದ್ದು ತಲೆಯಲ್ಲಿ 1 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ ಎಂದು ತಿಳಿದು ಬಂದಿದೆ.

     

    *ಬಟ್ಟೆಗಳು* – ಬಿಳಿ,ನೀಲಿ ಕೇಸರಿ ಮಿಶ್ರಿತ ಬಣ್ಣದ ಡಿಸೈನ್ ಶರ್ಟ, ಸಿಮೆಂಟ್ ಕಲರ್ ನೈಟ್ ಪ್ಯಾಂಟ್ ಧರಿಸುತ್ತಾನೆ.ಕಾಪಿ ಬಣ್ಣದ ಅಂಡರ್ ವೇರ್ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.

  • *ದ್ವಿತೀಯ ಪಿಯು ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟ: ಈ ಬಾರಿ ಶೇ.81.15 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ*

    ಕರ್ನಾಟಕ ಏಪ್ರಿಲ್ 10 ( ವಿಜಯಮಿತ್ರ) : ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೊಂಡಿದೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ .

    ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಮಾತನಾಡಿ 2024ರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು 6 ಲಕ್ಷ 98 ಸಾವಿರ 378 ವಿದ್ಯಾರ್ಥಿ ಅರ್ಹರಾಗಿದ್ದರು. ಅದರಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 6,81,079. ಒಟ್ಟು 17 ಸಾವಿರ ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲಿ ಗೈರು ಆಗಿದ್ದಾರೆ.

     

    ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5 ಲಕ್ಷ 52 ಸಾವಿರದ 690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗಾಗಿ ಉತ್ತೀರ್ಣದ ಪ್ರಮಾಣ ಶೇ.81. 15ರಷ್ಟಿದೆ. 2023ರಲ್ಲಿ 74.67ರಷ್ಟಿತ್ತು. ಈ ಬಾರಿ ಏರಿಕೆ ಕಂಡಿದೆ ಎಂದರು

     

    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಗದಗ ಕೊನೇ ಸ್ಥಾನ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾಲಕ್ಷ್ಮಿ 598 ಅಂಕ ಟಾಪರ್​ ಆಗಿ ಕಾಣಿಸಿಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ರಾಜ್ಯಕ್ಕೆ ಮೊದಲ ರ್ಯಂಕ್ ಬಂದಿದ್ದಾರೆ. ಮೇಧಾ NMKRV ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು 596 ಅಂಕ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

     

    ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ವಿಭಾಗದ ನಿರ್ದೇಶಕ ಗೋಪಾಲಕೃಷ್ಣ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

  • *ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಗೆ ರಕ್ಷಾ ರಾಮಯ್ಯ ಭೇಟಿ : ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು*

    ದೊಡ್ಡಬಳ್ಳಾಪುರ ಏಪ್ರಿಲ್ 09 ( ವಿಜಯಮಿತ್ರ) : ಚಿಕ್ಕಬಳ್ಳಾಪುರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಕ್ಷಾ ರಾಮಯ್ಯ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

     

    ಯುಗಾದಿ ಹಬ್ಬದ ಹಿನ್ನಲೆ ತಾಲ್ಲೂಕಿನ ಪ್ರಸಿದ್ಧ ದೇವಾಲಯ ಘಾಟಿ ಸುಬ್ರಮಣ್ಯಕ್ಕೆ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.ಈ ಯುಗಾದಿ ಹಬ್ಬವು ಎಲ್ಲರ ಜೀವನದಲ್ಲಿ ಹೊಸ ಚೈತನ್ಯ ತುಂಬಲಿ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

    ಸ್ಥಳೀಯ ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಂಗಪ್ಪ , ಪ್ರಚಾರ ಸಮಿತಿ ಅಧ್ಯಕ್ಷರು ಮೆಳೇಕೋಟೆ ಅಂಜಿನಪ್ಪ ಮತ್ತು ತೂಬಗೆರೆ ಕಾಂಗ್ರೆಸ್ ಯುವ ಮುಖಂಡ ನವೀನ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.

  • *ಅಪರಿಚಿತ ವ್ಯಕ್ತಿ ರೈಲಿಗೆ ಸುಲುಕಿ ಸಾವು : ರಾಜನಕುಂಟೆ ಸಮೀಪ ಸುರಧೇನುಪುರ ದಲ್ಲಿ ಘಟನೆ*

    ದೊಡ್ಡಬಳ್ಳಾಪುರ ಏಪ್ರಿಲ್ 09 ( ವಿಜಯಮಿತ್ರ) : 35 ವರ್ಷದ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸುರಧೇನುಪುರದ ಹತ್ತಿರ ಸಂಭವಿಸಿದೆ.

     

    ತಾಲ್ಲೂಕಿನ ರಾಜಾನುಕುಂಟೆ ರೈಲು ನಿಲ್ದಾಣದ ಮಧ್ಯೆ ಸುರಧೇನುಪುರ ಮಾರ್ಗದಲ್ಲಿ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ (ಗಂಡಸು) ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 72/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲಾಗಿದ್ದು. ಮೃತನ ಮಾಹಿತಿ ಕಲೆಹಾಕುವಲ್ಲಿ ಸಿಬ್ಬಂದಿ ಮುಂದಾಗಿದ್ದಾರೆ.

     

    *ವ್ಯಕ್ತಿಯ ಚಹರೆ-*

    5’5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಕಪ್ಪು ಕೂದಲು, ಇದ್ದು ಧೃಡ ಮೈಕಟ್ಟು,ಹೊಂದಿರುತ್ತಾರೆ ಎಂದು ತಿಳಿಸಲಾಗಿದೆ.

     

    *ಬಟ್ಟೆಗಳು-*

    ಕಪ್ಪು ಬಣ್ಣದ ಹರಿದ ಟೀ ಶರ್ಟ, ಬ್ಲೂ ಕಲರ್ ನೈಟ್ ಪ್ಯಾಂಟ್ ಧರಿಸುತ್ತಾನೆ.ಕಾಪಿ ಬಣ್ಣದ ಅಂಡರ್ ವೇರ್ ಧರಿಸಿದ್ದಾರೆ ಎಂದು ತಿಳಿಸಲಾಗಿದೆ.

     

    ವಾರಸುದಾರರು ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.

  • *ಕಾಂಗ್ರೆಸ್‌ ಬಂದಾಗೆಲ್ಲ ಬರಗಾಲ, ರೈತರಿಗೆ ಪರಿಹಾರ ಕೊಟ್ಟಿಲ್ಲ*

    ದೊಡ್ಡಬಳ್ಳಾಪುರ ಏಪ್ರಿಲ್ 08 ( ವಿಜಯ ಮಿತ್ರ ) : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಗಳಿಂದ ಮೋಸ ಮಾಡಿ ಗೆದ್ದಿದೆ. ಈ ಲೋಕಸಭೆ ಚುನಾವಣೆಯಲ್ಲಿ ಮೋಸಕ್ಕೆ ಅವಕಾಶ ಮಾಡಿಕೊಡದೆ ನರೇಂದ್ರ ಮೋದಿಯವರನ್ನು ಗೆಲ್ಲಿಸಬೇಕು ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

    ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆಯಲ್ಲಿ ನಡೆದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಅವರು ಮಾತನಾಡಿದರು.

     

    ಲೋಕಸಭಾ ಚುನಾವಣೆಯು ದೇಶದ ಪ್ರಧಾನಮಂತ್ರಿಯನ್ನು ಆರಿಸುವ ಚುನಾವಣೆ. ಈ ಬಾರಿಯೂ ನರೇಂದ್ರ ಮೋದಿಯವರನ್ನೇ ಹ್ಯಾಟ್ರಿಕ್‌ ಆಗಿ ಗೆಲ್ಲಿಸಬೇಕೆಂದು ಜನರು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣ್ಣಿನ ಮಗ ಎಚ್‌.ಡಿ.ದೇವೇಗೌಡರ ಸಮಾಗಮವಾಗಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಕಂಡುಬಂದಿದೆ. ರಾಜ್ಯದ ಆರೂವರೆ ಕೋಟಿ ಜನರ ಏಳಿಗೆಗಾಗಿ ಈ ಸಮಾಗಮ ನಡೆದಿದೆ ಎಂದರು.

     

    ಬಡಜನರ ಕಣ್ಮಣಿ ಎಂದು ಎಚ್‌.ಡಿ.ಕುಮಾರಸ್ವಾಮಿ ಹೆಸರಾಗಿದ್ದಾರೆ. ಅವರ ಕಾಲದಲ್ಲಿ ಹಾಗೂ ಬಿಜೆಪಿ ಸರ್ಕಾರದ ಕಾಲದಲ್ಲಿ ನೀಡಿದ ಯೋಜನೆಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರ ಕಿತ್ತುಕೊಂಡಿದೆ. ವಿದ್ಯುತ್‌ ಉಚಿತ ನೀಡುತ್ತೇವೆಂದು ವಿದ್ಯುತ್‌ ಇಲ್ಲದಂತೆ ಮಾಡಿದ್ದಾರೆ. ರೈತರು ಒಂದು ಟ್ರಾನ್ಸ್‌ಫಾರ್ಮರ್‌ ಹಾಕಿಸಿಕೊಳ್ಳಬೇಕೆಂದರೆ *4-5 ಲಕ್ಷ ರೂ.* ನೀಡಬೇಕಿದೆ. ಬಿಜೆಪಿ ಕಾಲದಲ್ಲಿ ಕೇವಲ 25 ಸಾವಿರ ರೂ.ನಲ್ಲಿ ಈ ಕೆಲಸ ನಡೆಯುತ್ತಿತ್ತು. ದೇಶದಲ್ಲಿ 10 ಕೋಟಿ ರೈತರಿಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಸಾಲ ನೀಡಲಾಗಿದೆ ಎಂದರು.

     

    ನಿಮ್ಮ ಸಂಸದರು 400 ರಲ್ಲಿ ಇರಬೇಕಾ, ವಿರೋಧ ಪಕ್ಷದಲ್ಲಿ ಕೂರುವ 40 ರಲ್ಲಿ ಇರಬೇಕಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ, ಆರೋಗ್ಯ ಸಚಿವನಾಗಿ, ಕೋವಿಡ್‌ ಹೋರಾಟದ ಸೇನಾನಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ನೂರಕ್ಕೆ ನೂರು ತರುತ್ತೇನೆ. ದೊಡ್ಡಬಳ್ಳಾಪುರಕ್ಕೆ ಈಗಾಗಲೇ ಜಿಲ್ಲಾಸ್ಪತ್ರೆ ನೀಡಲಾಗಿದೆ. ಜಕ್ಕಲಮಡಗು ಜಲಾಶಯದಿಂದ ದೊಡ್ಡಬಳ್ಳಾಪುರದ ಜನರಿಗೆ ಕುಡಿಯುವ ನೀರು ನೀಡಲಾಗುತ್ತಿದೆ ಎಂದು ವಿವರಿಸಿದರು.

     

    *ಭಯೋತ್ಪಾದಕರಿಗೆ ಮೃದು ಧೋರಣೆ*

     

    ಹೊಸಕೋಟೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್‌, ಕಾಂಗ್ರೆಸ್‌ ಸರ್ಕಾರ ಭಯೋತ್ಪಾದಕರಿಗೆ ಮೃದು ಧೋರಣೆ ತೋರಿಸುತ್ತದೆ. ಈ ಸರ್ಕಾರ ಬಂದ ಬಳಿಕ ಬೆಂಗಳೂರಿನಲ್ಲಿ ಬಾಂಬ್‌ ಸ್ಪೋಟವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಆದರೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಹೋಗಿ ದಾಳಿ ಮಾಡುವ ಮಟ್ಟಿಗೆ ಎದೆಗಾರಿಕೆ ತೋರುತ್ತದೆ ಎಂದರು.

     

    ಕಾಂಗ್ರೆಸ್‌ ರಾಜ್ಯಕ್ಕೆ ಕಾಲಿಟ್ಟರೆ ಬರಗಾಲ ಬರುತ್ತದೆ, ರೈತರಿಗೆ ಬೆಳೆ ನಷ್ಟವಾದರೂ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದಿಂದ ಬೆಳೆ ನಷ್ಟವಾದಾಗ, 48 ಗಂಟೆಯಲ್ಲಿ ಅಂದಾಜು ತಿಳಿದು ಒಂದೇ ತಿಂಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಎರಡು ಪಟ್ಟು ಅಧಿಕ ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರವನ್ನು ಈ ಬಗ್ಗೆ ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಯುಪಿಎ ಇದ್ದಾಗ *1.50 ಲಕ್ಷ ಕೋಟಿ* ರೂ. ರಾಜ್ಯಕ್ಕೆ ಬಂದರೆ, ಪ್ರಧಾನಿ ಮೋದಿ ಸರ್ಕಾರದಿಂದ *4.52 ಲಕ್ಷ ಕೋಟಿ ರೂ.* ಬಂದಿದೆ. ಈಗಿನ ಸರ್ಕಾರ ನೀರನ್ನು ಕಾವೇರಿಗೆ ಕೊಟ್ಟಿದೆ. ಮೇಕೆದಾಟುವಿಗಾಗಿ ಪಾದಯಾತ್ರೆ ಮಾಡಿದ್ದು, ಈಗ *ಮೇಕೆಯ ಶಬ್ದವೂ ಕೇಳುತ್ತಿಲ್ಲ.* ಬಡವರು ಬಡವರಾಗಿಯೇ ಉಳಿಯಬೇಕೆನ್ನುವುದು ಕಾಂಗ್ರೆಸ್‌ನ ಧ್ಯೇಯ ಎಂದರು.

     

    ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್‌ ಗ್ಯಾರಂಟಿಗೆ ಬಳಸಿದೆ. ಆದರೆ ಪ್ರಧಾನಿ ಮೋದಿ ಮಹಿಳೆಯರು, ಯುವಜನರು, ಮಕ್ಕಳಿಗೆ ಉತ್ತಮ ಯೋಜನೆ ನೀಡಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಗ್ಯಾರಂಟಿಗೆ ಮತ ನೀಡಬೇಕೆಂದು ಜನರು ತೀರ್ಮಾನಿಸಿದ್ದಾರೆ ಎಂದರು.

     

    ಸರ್ಕಾರಿ ಜಮೀನನ್ನು ಗುರುತಿಸಿ ಜನರಿಗೆ ವಸತಿ ನಿರ್ಮಿಸಲಾಗಿದೆ. ನಾನು ಚಿಕ್ಕಬಳ್ಳಾಪುರದಲ್ಲಿ 22 ಸಾವಿರ ನಿವೇಶನಗಳನ್ನು ಬಡಜನರಿಗೆ ನೀಡಿದ್ದೆ. ಹೊಸಕೋಟೆಯಲ್ಲಿ 291 ಎಕರೆ ಜಾಗವನ್ನು ಗುರುತಿಸಿ ಅಲ್ಲಿ ಬಡಜನರಿಗೆ ನಿವೇಶನ ನೀಡಲು ನಿರ್ಧರಿಸಲಾಯಿತು. ಅದರಿಂದಾಗಿ *10,450 ಕುಟುಂಬಗಳಿಗೆ* ಉಚಿತ ನಿವೇಶನ ಸಿಕ್ಕಿದೆ. ಅಂತಹ ಪುಣ್ಯದ ಕೆಲಸವನ್ನು ಎಂಟಿಬಿ ನಾಗರಾಜ್‌ ಮಾಡಿದ್ದಾರೆ. ಆದರೆ ಈಗಿನ ಶಾಸಕರು ಹಳೆಯ ಯೋಜನೆಗಳನ್ನು ಈಗ ಉದ್ಘಾಟಿಸಿ ಹೆಸರು ಪಡೆಯುತ್ತಿದ್ದಾರೆ ಎಂದರು.

     

    ಚಿಕ್ಕಬಳ್ಳಾಪುರ ನಗರದಲ್ಲಿ 2 ಸಾವಿರ ನಿವೇಶನಗಳನ್ನು ಅಲ್ಪಸಂಖ್ಯಾತರಿಗೆ ನೀಡಿದ್ದೇನೆ. ಪ್ರಧಾನಿ ಮೋದಿಯವರು ಹೇಳುವಂತೆ ರೈತರು, ಮಹಿಳೆಯರು, ಯುವಜನರು ಹಾಗೂ ಕಾರ್ಮಿಕರ ಎಂಬ ನಾಲ್ಕು ವರ್ಗಗಳಿಗೆ ನಾವು ಹೆಚ್ಚು ಗಮನ ನೀಡುತ್ತೇವೆ ಎಂದರು.

    ಮಾಜಿ ಸಚಿವ ಎಂಟಿಬಿ ನಾಗರಾಜ್, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡ ನಿಸರ್ಗ ನಾರಾಯಣಸ್ವಾಮಿ, ಜಿ.ಕೆ.ಕೃಷ್ಣಾ ರೆಡ್ಡಿ, ಬಿ.ಮುನೇಗೌಡ, ಶರವಣ, ಕಾರ್ಯಕರ್ತರು ಉಪಸ್ಥಿತರಿದ್ದರು.

  • *ಶುದ್ಧ ಕುಡಿಯುವ ನೀರಿಗಾಗಿ ಹೋರಾಟ : ಲೋಕಸಭಾ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು*

    ದೊಡ್ಡಬಳ್ಳಾಪುರ ಏಪ್ರಿಲ್ 07 ( ವಿಜಯ ಮಿತ್ರ ) : ದೊಡ್ಡ ತುಮಕೂರು ಮತ್ತು ಮಜಾರಹೊಸಹಳ್ಳಿ ಗ್ರಾಮ ಪಂಚಾಯ್ತಿಯ ಎಲ್ಲಾ ಮುಖಂಡರು ಹಾಗೂ ಗ್ರಾಮಸ್ಥರ ಒಮ್ಮತದೊಂದಿಗೆ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ. ಎಚ್. ಆಂಜಿನಪ್ಪ ತಿಳಿಸಿದರು.

    ಮಜಾರಹೊಸಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ನಗರಸಭೆಯವರು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯವರು ಮತ್ತು ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ಮತ್ತು ರಾಸಾಯನಿಕ ನೀರನ್ನು ಶುದ್ದೀಕರಿಸದೆ ನೇರವಾಗಿ ಚಿಕ್ಕ ತುಮಕೂರು ಕೆರೆಗೆ ಬಿಡುತ್ತಿದ್ದಾರೆ.

     

    ಇದರಿಂದ ಚಿಕ್ಕ ತುಮಕೂರು ಕೆರೆ ಮತ್ತು ದೊಡ್ಡ ತುಮಕೂರು ಕೆರೆ ಸಂಪೂರ್ಣ ಕಲುಷಿತಗೊಂಡಿದ್ದು.ಕೇವಲ ಕೆರೆ ನೀರು ಅಷ್ಟೇ ಅಲ್ಲದೆ ಕೊಳವೆ ಬಾವಿ ನೀರು ಮತ್ತು ಶುದ್ದೀಕರಣದ ಘಟಕದ ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ.

     

    ಎರಡು ಪಂಚಾಯತಿಯ ಜನರು ಮೂರು ವರ್ಷಗಳಿಂದ ನಿರಂತರ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನೀರು ಶುದ್ದೀಕರಿಸುವ ಕಾರ್ಯ ಇನ್ನು ಕೈಗೊಂಡಿಲ್ಲ.

    ಈ ಹಿಂದೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ, ಎರಡನೇ ಹಂತದ ಶುದ್ದೀಕರಣ ಘಟಕ ಮಾಡಲಾಗುವುದು ಎಂದು ತಿಳಿಸಿದ್ದರು.ಅದು ಕೇವಲ ಭರವಸೆಯಾಗಿಯೇ ಉಳಿದಿದೆ ನಮಗೆ ಮೂರನೇ ಹಂತದ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು ಎಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

     

    ಬೆಂಗಳೂರಿನ ಕೊಳಚೆ ನೀರನ್ನು ಎರಡನೇ ಹಂತ ಶುದ್ದೀಕರಿಸಿ ಕೋಲಾರದ ಕಡೆಗೆ ಹರಿಸುತ್ತಿದ್ದಾರೆ. ಇದರಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದು ಅದಕ್ಕೆ ಉದಾಹರಣೆಯಾಗಿ ಆ ನೀರಿನಲ್ಲು ಸಹ ಸಾವಿರಾರು ಮೀನುಗಳು ಸತ್ತ ಉದಾಹರಣೆ ಕಣ್ಣು ಮುಂದೆ ಇದೆ.

     

    ಅಂತರ್ಜಲ ಸಹ ಕೆಟ್ಟಿರುವ ದಾಖಲಾತಿಗಳಿವೆ ಅಷ್ಟೇ ಏಕೆ ತರಕಾರಿಗಳಲ್ಲು ಸಹ ರಾಸಾಯನಿಕ ಅಂಶಗಳು ಇರುವುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಆದ್ದರಿಂದ ಎರಡನೇ ಹಂತದ ಶುದ್ದೀಕರಣ ಮಾಡುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಆದ್ದರಿಂದ ಎರಡನೇ ಹಂತದ ಶುದ್ದೀಕರಣ ಘಟಕವನ್ನು ಕೈ ಬಿಟ್ಟು ಮೂರನೇ ಹಂತದ ಶುದ್ದೀಕರಣ ಘಟಕ ಮಾಡಬೇಕೆಂದು ಅಗ್ರಹಿಸಿದರು. ಕುಡಿಯುವ ನೀರು ನಮ್ಮ ಹಕ್ಕು ನಮ್ಮ ಒತ್ತಾಯವನ್ನು ಈಡೇರಿಸದ ಪಕ್ಷದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು.

     

     

    *ಪ್ರಮುಖ ಒತ್ತಾಯಗಳೇನು..?*

     

    (1) ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರನ್ನು ಮೂರನೇ ಹಂತ ಶುದ್ದೀಕರಣ ಘಟಕವನ್ನು ಸ್ಥಾಪಿಸಬೇಕು.

     

    (2) ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಕೆ ಎಚ್ ಮುನಿಯಪ್ಪ ರವರು ಎರಡು ಪಂಚಾಯತಿಯ ಎಲ್ಲ ಹಳ್ಳಿಗಳಿಗೆ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಬೇಕೆಂದು ತಿಳಿಸಿದ್ದರು. ಆದರೆ ಅದು ಕೆಲವೇ ಹಳ್ಳಿಗಳಿಗೆ ಕೊಟ್ಟು ಉಳಿದ ಹಳ್ಳಿಗಳಿಗೆ ಕೊಡುತ್ತಿಲ್ಲ. ಎಲ್ಲ ಹಳ್ಳಿಗಳಿಗೂ ಕುಡಿಯಲು ಜಕ್ಕಲಮಡಗು ನೀರನ್ನು ವ್ಯವಸ್ಥೆಮಾಡಬೇಕು.

     

    (3) ಎರಡು ಪಂಚಾಯತಿಯ ಪ್ರತಿ ಮನೆಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಬೇಕು, ಸದರಿ ಕಾಮಗಾರಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಅಥವಾ ಕಾರ್ಖಾನೆಗಳ ಧನಸಹಾಯದಿಂದ ಪ್ರತಿ ಮನೆಗೂ ಕುಡಿಯುವ ನೀರಿಗಾಗಿ ಮಳೆ ಕೊಯ್ದು ಪದ್ಧತಿಯನ್ನು ಮಾಡಿಕೊಡಬೇಕು ಎಂಬುದಾಗಿದೆ.

     ಈ ಸಂದರ್ಭದಲ್ಲಿ   ಮುಖಂಡರಾದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಹೆಚ್.ಕೆಂಪಣ್ಣ,ವೈದ್ಯರಾದ ಡಾ ವಿಜಯ್ಬ ಕುಮಾರ್, ಬಮುಲ್  ನಿರ್ದೇಶಕರಾದ ಬಿ.ಸಿ.ಆನಂದ್, ಎಂ ಪಿ ಸಿ ಎಸ್ ಅಧ್ಯಕ್ಷರಾದ ಟಿ. ರಂಗರಾಜು, ಆದಿತ್ಯ ನಾಗೇಶ್, ಸಂದೇಶ್,ಹಾಲಿ ಸದಸ್ಯರಾದ ಚೈತ್ರ ಭಾಸ್ಕರ್, ಮಾಜಿ ಉಪಾಧ್ಯಕ್ಷರಾದ ಚೈತ್ರ ಶ್ರೀಧರ್, ಎಲ್ ಐ ಸಿ ಮಂಜುನಾಥ್  ರೈತ ಮುಖಂಡರಾದ ವಸಂತ್, ಸತೀಶ್, ರಮೇಶ್, ಸೇರಿದಂತೆ ನೂರಾರು ರೈತರು ಎರಡು ಪಂಚಾಯಿತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.

  • *ಎರಡು ಎಕ್ಕರೆ ಪರಂಗಿ ಗಿಡಗಳಿಗೆ ಬೆಂಕಿ : ಬೆಳೆಯ ಜೊತೆ ಡ್ರಿಪ್ ಪೈಪ್ ಗಳು ಸುಟ್ಟು ಭಸ್ಮ*

    ದೊಡ್ಡಬಳ್ಳಾಪುರ ( ವಿಜಯ ಮಿತ್ರ ): ಎರಡು ಎಕರೆಯ ಫಲ ತುಂಬಿದ ಎರಡು ಸಾವಿರ ಪರಂಗಿ ಗಿಡಗಳು, ದುಷ್ಕರ್ಮಿಗಳ ದುಶ್ಕೃತ್ಯದಿಂದ ಪರಂಗಿ ಫರಿತ ಗಿಡಗಳು ಬೆಂಕಿಗಾಹುತಿಯಾಗಿವೆ, ಪರಂಗಿ ಗಿಡಗಳ ಜೊತೆ ಡ್ರಿಪ್ ಪೈಪ್ ಗಳು ಸುಟ್ಟು ಬೂದಿಯಾಗಿದ್ದು , ಬೆಂಕಿ ಅವಘಡದಿಂದ 3 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ರೈತ ನಾಗರಾಜ್ ತಿಳಿಸಿದರು.

    ತಾಲ್ಲೂಕಿನ ಮುಕ್ಕಡಿಘಟ್ಟ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು , ನಾಗರಾಜ್ ಎಂಬುವರಿಗೆ ಸೇರಿದ 2000 ಕ್ಕೂ ಅಧಿಕ ಪರಂಗಿ ಗಿಡಗಳು ಸಂಪೂರ್ಣ ನಾಶವಾಗಿವೆ ,ರೈತರಾದ ನಾಗರಾಜ್ ಕಳೆದ ಎರಡು ವರ್ಷಗಳಿಂದ ಸಾಲದ ಸಂಕಷ್ಟದಲ್ಲೇ ಪರಂಗಿ ತೋಟ ಮಾಡುತ್ತಿದ್ದರು, ತೋಟದಿಂದ ಬರುತ್ತಿದ್ದ ಅಲ್ಪ ಆದಾಯದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದು. ಮಕ್ಕಳಿಗೆ ರಜೆ ಇದ್ದ ಕಾರಣ ನಾಗರಾಜ್ ಕುಟುಂಬ ಸಮೇತ ಸಂಬಂಧಿಕರ ಮನೆಗೆ ತೆರಳಿದ್ದರು , ತೋಟದ ಬಳಿ ಯಾರು ಇಲ್ಲದ್ದನ್ನು ಗಮನಿಸಿದ ದುಶ್ಕರ್ಮಿಗಳು ತೋಟಕ್ಕೆ ಬೆಂಕಿ ಇಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಎರಡು ಎಕರೆಯಲ್ಲಿದ್ದ ಪರಂಗಿ ತೋಟ ಸಂಪೂರ್ಣ ಸುಟ್ಟು ಬೂದಿಯಾಗಿದೆ.

     

    ಪರಂಗಿ ಗಿಡಗಳಿಗೆ ಡ್ರಿಪ್ ಮೂಲಕ ನೀರಾವರಿ ವ್ಯವಸ್ಥೆ ಮಾಡಲಾಗಿತ್ತು , ಸುಮಾರು 2 ಲಕ್ಷ ಮೌಲ್ಯದ ಡ್ರಿಪ್ ಪೈಪ್ ಗಳನ್ನ ಹಾಕಲಾಗಿದ್ದು, ಬೆಂಕಿ ಅವಘಡದಲ್ಲಿ ತೋಟದಲ್ಲಿದ್ದ ಪೈಪ್ ಗಳು ಸುಟ್ಟು ಕರಕಲಾಗಿವೆ, ಬೆಂಕಿ ಅವಘಡದಿಂದಾಗಿ ನಾಗರಾಜ್ ಒಟ್ಟಾರೆ 3 ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ .

    ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯ ಗಮನಕ್ಕೂ ತರಲಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆ ಕಾರಣರಾದ ದುಷ್ಕರ್ಮಿಗಳ ಬಂಧನವಾಗಬೇಕು ಮತ್ತು ಬೆಂಕಿ ಅವಘಡದಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರೈತ ನಾಗರಾಜ್ ಮನವಿ ಮಾಡಿದ್ದಾರೆ.

  • *ಜಿಲ್ಲಾಡಳಿತ ಭವನದಲ್ಲಿ ಡಾ.ಬಾಬು ಜಗಜೀವನ ರಾಂ ರವರ 117 ನೇ ಜಯಂತಿ ಸರಳ ಆಚರಣೆ*

    ಬೆಂಗಳೂರು ಗ್ರಾಮಾಂತರ ಜಿಲ್ಲೆ, ಏಪ್ರಿಲ್ 05 (ವಿಜಯ ಮಿತ್ರ ): ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನ ರಾಂ ರವರ 117 ನೇ ಜಯಂತಿ ಕಾರ್ಯಕ್ರಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿಂದು ಆಚರಿಸಲಾಯಿತು.

    ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಡಾ.ಬಾಬು ಜಗಜೀವನ ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲಿಕಾರ್ಜುನ್ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ಡಿವೈಎಸ್ಪಿ ರವಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ಎಲ್.ಎಸ್ ಪ್ರೇಮಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • *ನಗರಸಭಾ ಸದಸ್ಯ ಶಿವರಾಜ್ (ಶಿವು ) ಶಾಸಕ ಧೀರಜ್ ಮುನಿರಾಜು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ*

    ದೊಡ್ಡಬಳ್ಳಾಪುರಏಪ್ರಿಲ್ 03 ( ವಿಜಯ ಮಿತ್ರ ) : ರಾಷ್ಟ್ರದಲ್ಲಿ ಮೋದಿ ಜೀ ಅವರ ಆಡಳಿತ ವೈಖರಿ ಹಾಗೂ ಯುವ ಶಾಸಕ ಧೀರಜ್ ಮುನಿರಾಜು ರವರ ನಾಯಕತ್ವ ಮೆಚ್ಚಿ ಸಂಗಡಿಗರೊಂದಿಗೆ ಸ್ವಪಕ್ಷಕ್ಕೆ ಹಿಂದಿರುಗಿದ್ದೇವೆ ಎಂದು ನಗರಸಭಾ ಸದಸ್ಯ ಶಿವರಾಜ್(ಶಿವು )ತಿಳಿಸಿದರು.

    ಸ್ಥಳೀಯ ಶಾಸಕ ಧೀರಜ್ ಮುನಿರಾಜುರವರ ಸಮ್ಮುಖದಲ್ಲಿ ನಗರದ 12ನೇ ವಾರ್ಡಿನ ನಗರಸಭಾ ಸದಸ್ಯರಾದ ಶಿವರಾಜ್(ಶಿವು )ರವರು ತಮ್ಮ ಬೆಂಬಲಿಗರು ಹಾಗೂ ಸಂಗಡಿಗರೊಂದಿಗೆ ಮತ್ತೆ ಮಾತೃ ಪಕ್ಷ ಬಿಜೆಪಿ ಗೆ ಸೇರ್ಪಡೆಯಾದರು.

     

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೆಲ ಕಾರಣಾಂತರಗಳಿಂದ ಅನ್ಯ ಪಕ್ಷಕ್ಕೆ ಹೋಗಿದ್ದೆವು. ಸಂಗಡಿಗರು ಹಾಗೂ ಬೆಂಬಲಿಗರ ಒಮ್ಮತದಿಂದ ಭಾರತೀಯ ಜನತಾ ಪಕ್ಷಕ್ಕೆ ಹಿಂದಿರುಗಿದ್ದೇವೆ. ಶಾಸಕ ಧೀರಜ್ ಮುನಿರಾಜ್ ರವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಮೋದಿಜಿಯವರ ಕೈ ಬಲಪಡಿಸಲು ಶ್ರಮಿಸುತ್ತೇವೆ ಎಂದರು.

    ಶಾಸಕ ಧೀರಜ್ ಮುನಿರಾಜು ಮಾತನಾಡಿ ನಿಷ್ಠಾವಂತ ಕಾರ್ಯಕರ್ತರು ಸ್ವಪಕ್ಷಕ್ಕೆ ಹಿಂದಿರುಗಿರುವುದು. ಸಂತಸ ತಂದಿದೆ. ಸ್ಥಳೀಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ನೂರಾರು ಮುಖಂಡರು ಮೋದಿ ಜೀ ಯವರ ಕಾರ್ಯ ವೈಖರಿಯನ್ನು ಮೆಚ್ಚಿ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದ್ದೇವೆ ಎಂದರು

     

     

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರ ಬಿಜೆಪಿ ಅಧ್ಯಕ್ಷರಾದ ಮುದ್ದಪ್ಪನವರು, ತಾಲ್ಲೂಕು ಅಧ್ಯಕ್ಷರಾದ ನಾಗೇಶ್ ರವರು,ಜಿಲ್ಲಾ ಜಿಲ್ಲಾ ವಕ್ತಾರರಾದ ಶ್ರೀ ಪುಷ್ಪ ಶಿವಶಂಕರ್, ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋಪಿ ಅಣ್ಣ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಂತಿ ವೆಂಕಟೇಶ್ ರವರು,ರಾಜ್ಯ ಕಾರ್ಯ ಕಾರಣಿ ಸದಸ್ಯರು MG ಶ್ರೀನಿವಾಸ್ ರವರು ನಗರಸಭಾ ಅಧ್ಯಕ್ಷರು, ನಗರಸಭಾ ಸದಸ್ಯರುಗಳು ಮುಖಂಡರು ಉಪಸ್ಥಿತರಿದ್ದರು

  • *ದೇಶ ಕಟ್ಟಿದ ಪಕ್ಷ ನಮ್ಮದು – ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ*

    ದೊಡ್ಡಬಳ್ಳಾಪುರ ಏಪ್ರಿಲ್ 02 ( ವಿಜಯಮಿತ್ರ ) : ಪ್ರಣಾಳಿಕೆಯಲ್ಲಿ ಘೋಷಣೆಮಾಡಿದ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ಎರಡು ತಿಂಗಳಿನಲ್ಲಿ ಈಡೇರಿಸಿದೆ. ಬಡವರ ಅಭಿವೃದಿಗಾಗಿ ಶ್ರಮಿಸುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಮ್ಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತಯಾಚನೆ ಮಾಡಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ರಕ್ಷಾ ರಾಮಯ್ಯ ತಿಳಿಸಿದರು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶ ಕಟ್ಟಿದ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ. ಬಡವರ ಕಷ್ಟವನ್ನು ಅರಿತು ಉತ್ತಮ ಯೋಜನೆಗಳನ್ನು ರೂಪಿಸಿದ ಪಕ್ಷ ನಮ್ಮದಾಗಿದ್ದು.ಈ ಬಾರಿಯ ಲೋಕಸಭಾ ಚುನಾವಣೆ ಬಹಳ ಮಹಾತ್ವದಗಿದ್ದು ಭ್ರಷ್ಟರ ವಿರುದ್ಧ ನಮ್ಮ ಹೋರಾಟ ನೆಡೆಸಬೇಕಿದೆ . ಸಂವಿಧಾನವನ್ನು ಬದಲಿಸುವ ಯೋಚನೆ ಬಿಜೆಪಿನಾಯಕರದ್ದು ಆದರೆ ನೆನಪಿರಲಿ ನಮ್ಮ ಸಂವಿಧಾನ ನಮ್ಮ ಹಕ್ಕು. ಬಿಜೆಪಿ ಪಕ್ಷವು ಬಡವರ ವಿರೋಧಿ ಪಕ್ಷವಾಗಿದೆ. ಕೋವಿಡ್ ಸಮಯದಲ್ಲಿ ದೇಶ ನಿರ್ವಹಣೆ ಮಾಡುವಲ್ಲಿ ಸೋತಿರುವ ಬಿಜೆಪಿ ಸರ್ಕಾರಕ್ಕೆ ಮತ ನೀಡುವುದು ಸೂಕ್ತವಲ್ಲ ಎಂದರು.

     

    *ಚುನಾವಣೆಯ ಅಭ್ಯರ್ಥಿ ನನ್ನಲ್ಲ*

    ಚುನಾವಣೆಯ ಅಭ್ಯರ್ಥಿ ನನ್ನಲ್ಲ.. ಕ್ಷೇತ್ರದ ಅಭಿವೃದ್ಧಿ ಬಯಸುವ ಪ್ರತಿ ಮತದಾರರು ಅಭ್ಯರ್ಥಿಗಳೇ.. ಕಾಂಗ್ರೆಸ್ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದಿರುವ ಪ್ರತಿ ಫಲನುಭವಿಯು ಅಭ್ಯರ್ಥಿಯೇ ಆಗಿದ್ದರೆ ಎಂದರು.

     

    *ಸುಧಾಕರ್ ವಿರುದ್ಧ ಸ್ವಪಕ್ಷದ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಅಭಿಯಾನ*

    ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬರುತ್ತಿದ್ದು ಅವರ ವಿರುದ್ಧ ಸ್ವಪಕ್ಷದ ಬಿಜೆಪಿ ಕಾರ್ಯಕರ್ತರೆ “ಗೋ ಬ್ಯಾಕ್” ಅಭಿಯಾನ ನೆಡೆಸುತ್ತಿದ್ದಾರೆ.

     

    *ಸದಾ ಯುವಕರನ್ನು ಟಾರ್ಗೆಟ್ ಮಾಡೋ ನಾಯಕರು*

     

    ಚಿಕ್ಕಬಳ್ಳಾಪುರದ ಜನತೆ ಕಳೆದ 10 ತಿಂಗಳಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಮೊದಲೆಲ್ಲ ಯಾವುದೇ ತಪ್ಪು ಮಾಡದಿದ್ದರೂ ಪೊಲೀಸ್ ಕೇಸ್ ಹಾಕಿಸಿಕೊಳ್ಳುವ ಭಯದಿಂದ ಜೀವನ ಸಾಗಿಸುತ್ತಿದ್ದ ಸಾರ್ವಜನಿಕರು ಇಂದು ಯಾವುದೇ ಕೇಸ್ ಇಲ್ಲದೇ ನೆಮ್ಮದಿಯಾಗಿದ್ದಾರೆ ಇದು ನಮ್ಮ ಚಿಕ್ಕಬಳ್ಳಾಪುರದ ಸಾಧನೆ…

     

    ದೊಡ್ಡಬಳ್ಳಾಪುರ ಕ್ಕೆ ಮೆಟ್ರೋ ಪ್ರಾಜೆಕ್ಟ್…

     

    ತಾಲ್ಲೂಕಿನ ಅಭಿವೃದ್ಧಿಗೆ ಸದಾ ಶ್ರಮಿಸುವ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ತಾಲ್ಲೂಕಿಗೆ ಮೆಟ್ರೋ ಯೋಜನೆಕೊಡುವಂತೆ ಮನವಿ ಮಾಡಿದ್ದಾರೆ ಅವರ ಕಾಲದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ದಿ ಯೋಜನೆಗಳು, ಕಾಮಗಾರಿಗಳು ಚಾಲನೆಗೊಂಡಿದ್ದು. ಮುಂದೆ ಮತೊಮ್ಮೆ ದೊಡ್ಡಬಳ್ಳಾಪುರ ತಾಲ್ಲೂಕು ಕಾಂಗ್ರೆಸ್ ಭದ್ರಕೋಟೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

     

     

    ವಿಧಾನಪರಿಷತ್ ಸದಸ್ಯ ಎಸ್. ರವಿ ಮಾತನಾಡಿ ಕಳೆದ ಬಾರಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನೆಡೆದರು ಮತದಾರರು ಆಮಿಷಗಳಿಗೆ ಬಲಿಯಾಗಿ ಅನ್ಯ ಪಕ್ಷಕ್ಕೆ ಮತ ನೀಡುವ ಮೂಲಕ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣಕರ್ತರಾಗಿದ್ದಾರೆ. ಸ್ಥಳೀಯವಾಗಿ ಮಾಜಿ ಶಾಸಕರ ಕೈ ಬಲ ಪಡಿಸಲು, ತಾಲ್ಲೂಕಿನ ಸಮಗ್ರ ಅಭಿವೃದಿಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

     

     

    ಮಾಜಿ ಶಾಸಕ ವೆಂಕಟರಾಮಣಯ್ಯ ಮಾತನಾಡಿ ಕಳೆದ 10ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಕೊಡುಗೆ ಏನಿದೆ. ಕೇವಲ ಬಂಡವಾಳ ಶಾಹಿಗಳ ಜೇಬು ತುಂಬಿಸುವ ಸರ್ಕಾರ ಈ ಬಿಜೆಪಿ ಸರ್ಕಾರ. ಕಾಂಗ್ರೆಸ್ ಪಕ್ಷ ಕಟ್ಟಿದ್ದ ಸಾರ್ವಜನಿಕ ಅಸ್ತಿಗಳನ್ನು ಖಾಸಗಿಕಾರಣದ ಹೆಸರಿನಲ್ಲಿ ಮಾರಾಟ ಮಾಡಿದ ಸರ್ಕಾರ ಬಿಜೆಪಿ.ರೈತರ,ಕೂಲಿ ಕಾರ್ಮಿಕ ವರ್ಗಾವನ್ನು ಹಾಳು ಮಾಡಿದ ಸರ್ಕಾರ ಬಿಜೆಪಿ ಸರ್ಕಾರ ಎಂದು ಆರೋಪಿಸಿದರು . ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮಾಡಿದ ಸಣ್ಣ ತಪ್ಪಿನಿಂದಗಿ ಇಂದು ನಮ್ಮ ತಾಲ್ಲೂಕು ಅಭ್ಯಾವೃದ್ಧಿಯಲ್ಲಿ 25ವರ್ಷಗಳಸ್ಟು ಹಿಂದೆ ಹೋಗಿದೆ. ಈ ಬಾರಿ ಮತ್ತೆ ಆ ತಪ್ಪನ್ನು ಮಾಡದಿರಿ ಎಂದರು. ಕಳೆದ 2ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕಪ್ಪು ಹಣದ ಆರೋಪವನ್ನು ಅನ್ಯ ಪಕ್ಷಗಳ ಮೇರೆ ಹೇರುವ ಮೂಲಕ ಜನರನ್ನು ಮೋಸ ಮಾಡಿದ್ದಾರೆ.ಸುಳ್ಳು ಹೇಳುವ ಮೂಲಕ ಮತ ಪಡೆದು ವಂಚನೆ ಮಾಡುತ್ತಿದ್ದಾರೆ ಈ ಬಾರಿ ಜನತೆ ಪ್ರಜ್ಞಾವಂತರಾಗಿದ್ದು ಅವರನ್ನು ವಂಚಿಸಲು ಸಾಧ್ಯವಿಲ್ಲ ಎಂದರು

     

     

    ಆಹಾರ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ ನಮ್ಮ ಯೋಜನೆಗಳು ರಾಜ್ಯದ 4.5ಕೋಟಿ ಜನತೆಗೆ ಒಂದಲ ಒಂದುರೀತಿಯಲ್ಲಿ ತಲುಪಿದೆ. ಈ ಬಾರಿ ಪಕ್ಷದ ಪ್ರತಿ ಮುಖಂಡರು ಹಾಗೂ ಕಾರ್ಯಕರ್ತರು

    ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯಿಂದ ಮತ ಕೇಳಿ ಎಂದರು. ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ.ನಿಮ್ಮ ಬೆಂಬಲದ ಅವಶ್ಯಕತೆ ಇದೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಉತ್ತಮ ಆಡಳಿತ ಪಕ್ಷಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ನಮ್ಮ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಉತ್ತಮ ಸ್ವಭಾವದವರಾಗಿದ್ದು.ಜನಸೇವೆಗಾಗಿ ಆಸ್ಪತ್ರೆ, ವಿದ್ಯಾಮಂದಿರಗಳ ನಿರ್ಮಾತೃ , ಎಂ ಎಸ್ ರಾಮಯ್ಯ ರವರ ಕುಟುಂಬದ ಕುಡಿಯಾಗಿದ್ದಾರೆ. ಅವರ ಕುಟುಂಬ ಸತತ ವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು. ರಕ್ಷಾ ರಾಮಯ್ಯ ದೂರ ದೃಷ್ಟಿಯುಳ್ಳ ಉತ್ತಮ ಪ್ರತಿಭಾನ್ವಿತ ನಾಯಕ ಎಂದರು. ಕ್ಷೇತ್ರದ ಅಭಿವೃದ್ಧಿಗಾಗಿ ಮತ ನೀಡುವಂತೆ ಮನವಿ ಮಾಡಿದರು.

     

     

    *ಮಾಜಿ ಶಾಸಕ ವೆಂಕಟರಮಣಯ್ಯ ಬಗ್ಗೆ ಮಾತನಾಡಿದ ಕೆ ಎಚ್ ಮುನಿಯಪ್ಪ*

     

    ದೇಶ ಹಾಗೂ ರಾಜ್ಯದಲ್ಲಿ ಎಂದು ಕಾಣಲು ಸಾಧ್ಯವಿಲ್ಲದ ವ್ಯಕ್ತಿತ್ವ ವೆಂಕಟರಮಣಯ್ಯ ಅವರದ್ದು ಅವರ ಆಡಳಿತವಧಿಯಲ್ಲಿ ಸರ್ಕಾರಿ ಸೇವೆಗಳನ್ನು ತಾಲ್ಲೂಕಿನ ಪ್ರತಿ ಗ್ರಾಮಗಳಿಗೆ ಹಾಗೂ ಪ್ರತಿ ಮತದಾರರಿಗೆ ತಲುಪಿಸಿದ ಒಬ್ಬ ನಾಯಕ. ಇಂದು ತಾಲ್ಲೂಕಿನ ಜಿಲ್ಲಾಸ್ಪತ್ರೆ ಉಳಿಯಲು ಅವರೇ ಕಾರಣ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಸ್ಪತ್ರೆ ಉಳಿವಿಗಾಗಿ ಕಣ್ಣೀರಿಟ್ಟ ನಾಯಕ ವೆಂಕಟರಮಣಯ್ಯ ಎಂದರು.

    ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಜಿ. ಲಕ್ಷ್ಮೀಪತಿ, ಪಕ್ಷದ ಮುಖಂಡರಾದ ಚುಂಚೇ ಗೌಡ,ರಾಮಣ್ಣ, ರಾಮಕೃಷ್ಣಪ್ಪ, ಸತ್ಯನಾರಾಯಣ ಗೌಡ,ಬೈರೇಗೌಡ, ಕೃಷ್ಣಮೂರ್ತಿ, ವೆಂಕಟೇಶ್ (ಅಪ್ಪಿ ),ಆದಿತ್ಯನಾಗೇಶ್, ಅಂಜನ್ ಮೂರ್ತಿ, ರವಿ ಸಿದ್ದಪ್ಪ, ಡಾ. ಸೌಮ್ಯ, ಕೃಷ್ಣಮೂರ್ತಿ ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು ಉಪಸ್ಥಿತರಿದ್ದರು