Blog

  • ಅಪಘಾತ: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಸ್ಥಳದಲ್ಲಿ ಬೈಕ್ ಸವಾರ ಸಾವು,

    ದೊಡ್ಡಬಳ್ಳಾಪುರ : ಬೆಳ್ಳಂಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ನಗರದ ಹೊರವಲಯದ ಕಂಟನಕುಂಟೆ – ಪಾಲನಜೋಗಿಹಳ್ಳಿ ನಡುವಿನ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಂಭವಿಸಿದೆ.

     

    ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ನಾಯಕರಂಡಹಳ್ಳಿ ಗ್ರಾಮದ ವ್ಯಕ್ತಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.

     

    ಘಟನೆಯಲ್ಲಿ ಮಗು ಹಾಗೂ ಗೃಹಿಣಿಯೋರ್ವರಿಗೆ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

     

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

  • ಪಾಲನಜೋಗಿಹಳ್ಳಿಯಲ್ಲಿ ಅಪಘಾತ : ಗಾಯಾಳು ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ : ಚಾಲಕನ ನಿಯಂತ್ರಣ ತಪ್ಪಿದ ಮಹೀಂದ್ರ ಕಂಪನಿಯಾ ಥಾರ್ ಜೀಪ್ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಹಿಂದೂಪುರ- ಯಲಹಂಕ ನಡುವಿನ ರಾಜ್ಯ ಹೆದ್ದಾರಿ ಪಾಲನಜೋಗಿಹಳ್ಳಿ ಮುಖ್ಯ ರಸ್ತೆಯಲ್ಲಿ ಸಂಭವಿಸಿದೆ.

     

    ಕಂಟನಕುಂಟೆ ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ವೇಳೆ ಪಾಲನಜೋಗಿಹಳ್ಳಿ ಬಳಿಯ ಪ್ರೆಂಡ್ಸ್ ಹಾಲ್ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸಿಮೆಂಟ್ ಲಾರಿಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ.

    ಘಟನೆಯಲ್ಲಿ ಕಂಟನಕುಂಟೆ ನಿವಾಸಿ ಜೀಪ್ ಚಾಲಕನಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

     

    ಘಟನೆಯಲ್ಲಿ ಮಹಿಂದ್ರಾ ಥಾರ್ ವಾಹನ ನುಜ್ಜುಗುಜ್ಜಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

  • ಪ್ರಧಾನಿಯವರೊಂದಿಗೆ ಸಾರ್ವಜನಿಕವಾಗಿ ಚರ್ಚೆಗೆ ನಾನು ಸಿದ್ದನಿದ್ದೇನೆ – ಮುಖ್ಯಮಂತ್ರಿ ಸಿದ್ದರಾಮಯ್ಯ

    ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಕನ್ನಡಿಗರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪ ಮಾಡುತ್ತಾ ಕರ್ನಾಟಕ ಮತ್ತು ಕನ್ನಡಿಗರಿಗೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳನ್ನು ಹೇಳುತ್ತಲೇ ಬಂದಿದ್ದೇನೆ. ಇದಕ್ಕೆ ಉತ್ತರ ನೀಡಬೇಕಾಗಿರುವವರು ಪ್ರಧಾನಿ ನರೇಂದ್ರ ಮೋದಿಯವರೇ ಹೊರತು ಬಿಜೆಪಿಯ ಐಟಿ ಸೆಲ್ ಅಲ್ಲ. ಸನ್ಮಾನ್ಯ ಪ್ರಧಾನಿಯವರು ಒಪ್ಪಿ ದಿನ ಮತ್ತು ಸ್ಥಳವನ್ನು ನಿಗದಿಪಡಿಸಿದರೆ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ

    ಆರೋಪಗಳು :
    1.ನಾಡಿಗೆ ಬರಗಾಲ ಬಿದ್ದು ಆರು ತಿಂಗಳುಗಳಾಗಿವೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ.. ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ.

    2.ಯುಪಿಎ ಸರ್ಕಾರದ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಿಗದಿಪಡಿಸಿದ್ದ ಶೇ.4.72 ತೆರಿಗೆ ಪಾಲನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ 15ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಕೆ ಮಾಡಿ ವಂಚಿಸಲಾಗಿದೆ. ಇದರಿಂದ ಕನ್ನಡಿಗರು ಕಳೆದ 4 ವರ್ಷಗಳಲ್ಲಿ ಸುಮಾರು 45,000 ಕೋಟಿ ರೂಪಾಯಿಯಷ್ಟು ಬೆವರಗಳಿಕೆಯಿಂದ ಕಟ್ಟಿದ ತೆರಿಗೆ ಹಣವನ್ನು ಕಳೆದುಕೊಂಡಿದ್ದಾರೆ.

    3.ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ನೀಡುತ್ತಿರುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸಲಾಗುತ್ತಿದೆ. 2021-22ರ ಅವಧಿಯಲ್ಲಿ 20 ಸಾವಿರ ಕೋಟಿ ರೂಪಾಯಿ ಇದ್ದ ಅನುದಾನ, 2022-23ರಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.

    4.ಕರ್ನಾಟಕಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಈ ಶಿಫಾರಸ್ಸನ್ನು ತಿರಸ್ಕರಿಸಿದ್ದಾರೆ. ಆರ್ಥಿಕ ವರ್ಷ ಆರಂಭವಾಗಿ 6 ತಿಂಗಳು ಕಳೆದರೂ ಕೇಂದ್ರ ಸರ್ಕಾರದ ಸಹಯೋಗದ 61 ಯೋಜನೆಗಳಿಗೆ ಸಂಬಂಧಿಸಿದಂತೆ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಕೃಷ್ಣಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ.

    5.ಏಮ್ಸ್ ಸಂಸ್ಥೆ ಬೇಕೆಂಬ ಕನ್ನಡಿಗರ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಕನ್ನಡಿಗರು ಶ್ರಮದಿಂದ ಕಟ್ಟಿದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ಬೇರೆ ರಾಜ್ಯಗಳ ನಷ್ಟದಲ್ಲಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕನ್ನಡಿಗರಿಗೆ ದ್ರೋಹ ಬಗೆಯಲಾಯಿತು.

    6.ನಮ್ಮ ಹಿರೀಕರು ಕಷ್ಟಪಟ್ಟು ನಿರ್ಮಾಣ ಮಾಡಿದ್ದ ವಿಮಾನ ನಿಲ್ದಾಣವನ್ನು ಖಾಸಗಿಯವರಿಗೆ ಮಾರಲಾಯಿತು. ಹದಿನೆಂಟು ಸಾವಿರ ಕೋಟಿ ರೂಪಾಯಿ ಬೆಂಗಳೂರು ಸಬ್‌ ಅರ್ಬನ್‌ ರೈಲು ಯೋಜನೆಗೆ ಅನುದಾನ ಇಲ್ಲದೆ ಸೊರಗಿ ಹೋಗಿದೆ. ಇನ್ನು ರಾಜ್ಯದ ಇತರೆ ರೈಲ್ವೇ ಯೋಜನೆಗಳನ್ನು ಮೂಲೆಗೆ ತಳ‍್ಳಲಾಗಿದೆ. ಎಂದು ತಮ್ಮ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ

  • ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜನವರಿ 18ರಂದು ವಿದ್ಯುತ್ ವ್ಯತ್ಯಯವಾಗಲಿದೆ – ಬೆಸ್ಕಾಂ

    ದೊಡ್ಡಬಳ್ಳಾಪುರ ನಗರದಲ್ಲಿ ದಿನಾಂಕ 18.01.2024 ರಂದು 66/11ಕೆವಿ ಡಿ.ಕ್ರಾಸ್ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಸದರಿ ಉಪ ಕೇಂದ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 10:00 ಗಂಟೆ ಯಿಂದ ಸಂಜೆ 6:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕು ಎಂದು ಬೆಸ್ಕಾಂ ನ ನಗರ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

     

    ದೊಡ್ಡಬಳ್ಳಾಪುರ ನಗರದ, ಡಿಕ್ರಾಸ್, ಮುತ್ಸಂದ್ರ, ಟಿ.ಬಿ.ಬಡಾವಣೆ, ಪ್ರಿಯರ್ದಶಿನಿ ಬಡಾವಣೆ, ರೋಜಿಪುರ, ಗಂಗಾಧರಪುರ, ವಿನಾಯಕನಗರ, ಸೋಮೇಶ್ವರ ಬಡಾವಣೆ, ಬಸವೇಶ್ವರನಗರ, ಮಾರುತಿನಗರ, ಕುಂಭಾರಪೇಟೆ, ದರ್ಜಿಪೇಟೆ, ಗಾಣಿಗರಪೇಟೆ, ವಡ್ಡರಪೇಟೆ, ದೇಶದಪೇಟೆ, ಸಿನಿಮಾ ರಸ್ತೆ, ಹಳೇಬಸ್ ನಿಲ್ದಾಣ, ಕಛೇರಿಪಾಳ್ಯ, ಇಸ್ಲಾಂಪುರ, ಕಲ್ಲುಪೇಟೆ, ತ್ಯಾಗರಜನಗರ, ದೇವರಾಜನಗರ, ಶಾಂತಿನಗರ.

     

    ಗ್ರಾಮಾಂತರ ವ್ಯಾಪ್ತಿಯ ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ ಮಾದಗೊಂಡನಹಳ್ಳಿ, ಹಸನ್‌ಘಟ್ಟ, ಕೋಳುರು, ಕಂಟನಕುಂಟೆ, ಅಳ್ಳಾಲಸಂದ್ರ ಅಂತರಹಳ್ಳಿ ಗೊಲ್ಲಹಳ್ಳಿ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹೀರೆಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟ, ಕಂಚಿಗನಾಳ, ದಾಸಗೊಂಡನಹಳ್ಳಿ, ಗಂಡರಾಜಪುರ, ಅಂಚರಹಳ್ಳಿ, ಬೀಡಿಕೆರೆ, ಹಮಾಮ್, ಶಿವಪುರ, ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿ, ಕಮಲೂರು, ನೆಲ್ಲುಕುಂಟೆ, ನಾಗಶೆಟ್ಟಿಹಳ್ಳಿ, ಮಜರಾಹೊಸಹಳ್ಳಿ, ಶಿರವಾರ, ಮೆಣಸಿ, ಅಣಗಲಪುರ, ನೇರಳೆಘಟ್ಟ ಹೊನ್ನಾಘಟ್ಟ, ಕೆಸ್ತೂರು, ಹಣಬೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿಪ್ಪೂರು ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ದಿನಾಂಕ 18-01-2024 ರ ಗುರುವಾರ ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 6-00 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

  • ದೊಡ್ಡಬಳ್ಳಾಪುರ ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 25ಹಾಗೂ 26ಕ್ಕೆ ಮುಂದೂಡಿಕೆ

    ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ ದೊಡ್ಡಬಳ್ಳಾಪುರ: ಜನವರಿ ತಿಂಗಳ 21/22 ರಂದು ನಡೆಯಬೇಕಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ.

     

    ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ : 25.02024 ಭಾನುವಾರ ಮತ್ತು 26.02.2024 ರಂದು ಸೋಮವಾರ ನಡೆಯಲಿದೆ.

     

    ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜನವರಿ 21 ಮತ್ತು 22 ರಂದು ನಡೆಯಬೇಕಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಧಾನಪರಿಷತ್ತು ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

     

    ಈಗಾಗಲೇ ದೊಡ್ಡಬಳ್ಳಾಪುರ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರುಗಳಿಗೆ ಆಹ್ವಾನ ಪತ್ರಿಕೆಯನ್ನು ಅಂಚೆಯ ಮೂಲಕ ಕಳುಹಿಸಲಾಗಿತ್ತು. ಬದಲಾಗಿರುವ ಸಮ್ಮೇಳನ ದಿನಾಂಕದಂದು ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ಕನ್ನಡಾಭಿಮಾನಿಗಳು ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಭಾಗವಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು ವಿನಂತಿಸಿಕೊಂಡಿದ್ದಾರೆ.

     

    ಫೆಬ್ರವರಿ ತಿಂಗಳ 25 ಮತ್ತು 26 ರಂದು ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಜೆ ಕರ್ನಾಟಕ ಸರ್ಕಾರದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಜನಪ್ರಿಯ ವೈದ್ಯರಾದ ದೊಡ್ಡತುಮಕೂರು ಗ್ರಾಮದವರಾದ ಡಾ.ಟಿ.ಎಚ್.ಆಂಜನಪ್ಪ ಅವರು ಸಮ್ಮೇಳನ ಅಧ್ಯಕ್ಷರಾಗಿದ್ದಾರೆ.

     

    ಫೆಬ್ರವರಿ 25 ಮತ್ತು 26 ರಂದು, ಎರಡು ದಿನಗಳ ಕಾಲ ನಡೆಯುವ. ದೊಡ್ಡಬಳ್ಳಾಪುರ ತಾಲ್ಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಫೆ.25 ಭಾನುವಾರ ಸಮ್ಮೇಳನದ ಮೊದಲ ದಿನ ಧ್ವಜಾರೋಹಣ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಸಮ್ಮೇಳನ ಉದ್ಘಾಟನೆ, ವಿಚಾರಗೋಷ್ಠಿ, ಯುವಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.26 ರಂದು ಮಕ್ಕಳ ಗೋಷ್ಠಿ, ಮಹಿಳಾಗೋಷ್ಠಿ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.

     

    ಸಮ್ಮೇಳನ ಅಧ್ಯಕ್ಷರ ಪರಿಚಯ :

    ಡಾ.ಟಿ.ಎಚ್.ಆಂಜನಪ್ಪ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದ ಹನುಮಂತರಾಯಪ್ಪ ಮತ್ತು ಲಕ್ಷ್ಮಿದೇವಮ್ಮ ದಂಪತಿಗಳಾದ ಮಗನಾದ ಡಾ.ಟಿ.ಎಚ್.ಆಂಜನಪ್ಪ ಪ್ರಾಥಮಿಕ ಶಿಕ್ಷಣವನ್ನು ದೊಡ್ಡತುಮಕೂರು ಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ದೊಡ್ಡಬಳ್ಳಾಪುರದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನಲ್ಲಿ, ವೈದ್ಯಕೀಯ ಶಿಕ್ಷಣವನ್ನು ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ಮಾಡಿದರು. ಹಲವಾರು ಪ್ರತಿಷ್ಠಿತ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಾ , ಜನಸಾಮಾನ್ಯರಿಗೆ ಆರೋಗ್ಯ ಜಾಗೃತಿಯನ್ನು ಕನ್ನಡ ಭಾಷೆಯಲ್ಲಿ ಮೂಡಿಸಿದರು. ತಮ್ಮ ಹಾಸ್ಯಭರಿತ ಕನ್ನಡ ಭಾಷಣದ ಮೂಲಕ ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ನೀಡಿದ್ದಾರೆ. ಕನ್ನಡ ವೈದ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಜೊತೆಗೆ ಹಲವಾರು ವೈದ್ಯಕೀಯ ಲೇಖನಗಳನ್ನು ಕನ್ನಡ ಭಾಷೆಯಲ್ಲಿ ಬರೆದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಲಂಡನ್ ಪತ್ರಿಕಾ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ.ಬಿ.ಸಿ.ರಾಯ್ ಪ್ರಶಸ್ತಿ ಸೇರಿದಂತೆ 50 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಪ್ರಶಸ್ತಿ ಮತ್ತು ಪುರಸ್ಕಾರ ಮಾಡಿವೆ. ದೂರದರ್ಶನ ವಾಹಿನಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಭಾಷೆಯಲ್ಲಿ ಆರೋಗ್ಯ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

  • ಮೋದಿಯವರನ್ನು ಪ್ರಶ್ನಿಸಲು ಸಿದ್ದರಾಮಯ್ಯನವರಿಗೆ ಯಾವ ನೈತಿಕ ಹಕ್ಕಿದೆ – ಸಿ.ಟಿ.ರವಿ

    ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ ಶೂರನೂ ಅಲ್ಲ”ಎಂದರು ಶ್ರೀ ಅಲ್ಲಮ ಪ್ರಭು ದೇವರು. “ಕೈಲಾಗದವ ಮೈಪರಚಿಕೊಂಡ” ಎಂಬ ಗಾದೆಯಂತೆ, ಆಡಳಿತ ನಡೆಸಲಾಗದೆ ರಾಜ್ಯದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯನ್ನು ಹಾಳುಗೆಡವುತ್ತಿರುವ ವ್ಯಕ್ತಿಯೊಬ್ಬರು ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀಯವರ ಕುರಿತಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಕನ್ನಡಿಗರ ದುರಂತ ಎಂದು ಸಿ ಟಿ ರವಿ ಗುಡುಗಿದ್ದಾರೆ.

     

    ಪ್ರಧಾನಿಮಂತ್ರಿ ನರೇಂದ್ರ ಮೋದಿ ಕುರಿತಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಕ್ಸ್ ಪೋಸ್ಟ್ ಕುರಿತಂತೆ ಸಿ.ಟಿ. ರವಿಯವರು ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯ ಕುರಿತಾಗಿ ಕಿಂಚಿತ್ ಯೋಚನೆ ಮಾಡದ ರಾಜ್ಯದ ಮುಖ್ಯಮಂತ್ರಿಗಳು, ದೇಶದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ “ಕರ್ಮಯೋಗಿ” ಪ್ರಧಾನಿ ಶ್ರೀ ನರೇಂದ್ರಮೋದಿ ಯವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡಿರುವ ಪೋಸ್ಟ್ ಅವರ ಕೀಳು ಮತ್ತು ಹೀನ ಮನಸ್ಥಿತಿಯನ್ನು ತೋರಿಸುತ್ತದೆಯೇ ಹೊರತಾಗಿ ಬೇರೇನೂ ಅಲ್ಲ.

    ನಮ್ಮ ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿದೆ, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಆಡಳಿತ ವ್ಯವಸ್ಥೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ, ಕಾಂಗ್ರೆಸ್‌ನ ನೀಡಿದ ಅರೆಬೆಂದ ಗ್ಯಾರೆಂಟಿಗಳು ರಾಜ್ಯವನ್ನು ದಿವಾಳಿತನದತ್ತ ಕೊಂಡೊಯ್ಯುತ್ತಿವೆ. ಇಷ್ಟಾದರೂ “ರೋಮ್ ಹತ್ತಿ ಉರಿಯುತಿದ್ದರೂ ನೀರೋ ಪಿಟೀಲು ಬಾರಿಸುತ್ತಿದ್ದ” ಎನ್ನುವಂತೆ ಇವರು ತಮ್ಮ ತಪ್ಪನ್ನು ಮುಚ್ಚಿಡಲು ಇನ್ನೊಬ್ಬರ ಕಡೆಗೆ ಬೆರಳು ತೋರಿಸುವುದನ್ನು ಬಿಟ್ಟು ಬೇರೇನೂ ಮಾಡುತ್ತಿಲ್ಲ.

     

    ಚುನಾವಣೆ ವೇಳೆ ವಾರೆಂಟಿ ಇಲ್ಲದ ಗ್ಯಾರೆಂಟಿ ಸ್ಕೀಮ್ ನಂತೆ ರಾಜ್ಯದ ಜನರಿಗೆ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಭರವಸೆ ನೀಡಿದ ಇವರು 7 ತಿಂಗಳಿಂದ ಅಧಿಕಾರದಲ್ಲಿದ್ದರೂ ರಾಜ್ಯದ ಜನತೆಗೆ ಕೇವಲ ಒಂದು ಕೆಜಿ ಅಕ್ಕಿ ಕೂಡ ಕೊಡಲು ಸಾಧ್ಯವಾಗಿಲ್ಲ. ಇನ್ನು ನರೇಂದ್ರ ಮೋದಿಯವರ ಸರಕಾರ ಕೊಡುತ್ತಿರುವ ತಿಂಗಳಿಗೆ 05 ಕೆಜಿ ಅಕ್ಕಿಯನ್ನು ತಾನು ಕೊಟ್ಟಿದ್ದು ಎಂಬ ಸುಳ್ಳನ್ನು ಘಂಟಾಘೋಷವಾಗಿ ಹೇಳುವ ಕಲೆ ಇವರಿಗೆ ಕರತಲಾಮಲಕ.

     

    ರಾಜ್ಯ ಸರಕಾರದ ಎಲ್ಲಾ ವೈಫಲ್ಯಗಳಿಗೆ ಮತ್ತು ಅಸಮರ್ಥತೆಗೆ ಪ್ರಧಾನಿ ಮೋದಿಯವರನ್ನು ದೂಷಿಸಿ, ಬಚಾವಾಗಬಹುದು ಎಂದುಕೊಂಡಿದ್ದಾರೆ.ನಮ್ಮ ಹೆಮ್ಮೆಯ ಪ್ರಧಾನಿ ಮೋದಿಯವರು ಕಳೆದ 23 ವರ್ಷಗಳಿಂದ ಗುಜರಾತ್‌ನ ಮುಖ್ಯಮಂತ್ರಿಯಾಗಿ ಮತ್ತು ಭಾರತದ ಪ್ರಧಾನಿಯಾಗಿ ನಿತ್ಯ 16 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ.

     

    ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಕೆಲಸ ಮಾಡುವುದಕ್ಕಿಂತ ಹೆಚ್ಚು ನಿದ್ರಾಸನದಲ್ಲಿಯೇ ಇರುತ್ತಾರೆ. ಇನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರೇನು ಮಾಡುತ್ತಾರೆ ಎಂಬುದು ನಾನೇನು ವಿಶೇಷವಾಗಿ ಹೇಳಬೇಕಾಗಿಲ್ಲ, ಇಡೀ ಜಗತ್ತಿಗೆ ಗೊತ್ತು.

     

    ರಾಜ್ಯದ ಜನತೆಗೆ ಕಾಂಗ್ರೆಸ್ ಸರಕಾರಕ್ಕಿಂತ ಹೆಚ್ಚಿನ ಕೊಡುಗೆ ನೀಡಿದ ಹಾಗು ಭಾರತವನ್ನು ವಿಶ್ವಗುರುವನ್ನಾಗಿಸಲು ಅಹೋರಾತ್ರಿ ಕೆಲಸ ಮಾಡುವ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲು ಸಿದ್ದರಾಮಯ್ಯ ಅವರಿಗೆ ಯಾವ ನೈತಿಕ ಹಕ್ಕಿದೆ?

     

    ಹೆಚ್ಚುವರಿ ಆದಾಯ ಇದ್ದ ಕರ್ನಾಟಕ ರಾಜ್ಯವನ್ನು ದಿವಾಳಿ ರಾಜ್ಯವನ್ನಾಗಿಸುವ ಕೆಲಸ ಬಿಟ್ಟರೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಮತ್ತವರ ಸರಕಾರದ ಸಾಧನೆಗಳೇನು? ತನ್ನ ವೈಫಲ್ಯಕ್ಕೆ ಸದಾ ಇನ್ನೊಬರನ್ನು ದೂರುತ್ತಿರುವ ಇವರು ಕರ್ನಾಟಕದ ಮುಖ್ಯಮಂತ್ರಿಯೇ ಅಥವಾ ಅಳುಮುಂಜಿ ಮಂತ್ರಿಯೇ?

     

    ಸನ್ಮಾನ್ಯ ಸಿದ್ದರಾಮಯ್ಯನವರೇ, ನೀವು ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತು ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವುದು ಯಾವಾಗ? ಎಂದು ತಮ್ಮ ಎಕ್ಸ್ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

  • ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತೋತ್ಸವ : ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

    ಸಾರ್ವತ್ರಿಕ ಮೂಲ ಆದಾಯದ ತತ್ವದ ಆಧಾರದ ಮೇಲೆ ಎಲ್ಲರಿಗೂ ಕೊಳ್ಳುವ ಶಕ್ತಿ ಬರಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸರ್ಕಾರ ಎಲ್ಲಾ ಸಮಾಜದಲ್ಲಿನ ಬಡವರನ್ನು ಮುಖ್ಯ ವಾಹಿನಿಗೆ ತಂದು, ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಬೇಕು ಎಂದು ಪ್ರಯತ್ನ ಮಾಡುತ್ತಿದೆ. ಅನುಭವ ಮಂಟಪದಲ್ಲಿ ಸಮಸಮಾಜ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳಾಗುತ್ತಿತ್ತು. ಅಂಥ ಸಮಾಜವನ್ನು ಬಸವಾದಿ ಶರಣರು, ಸಿದ್ದರಾಮೇಶ್ವರರು ಬಯಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

     

    ನೊಳಂಬ ಲಿಂಗಾಯತ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಶ್ರೀ ಗುರು ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಿವಯೋಗಿ ಸಿದ್ದರಾಮೇಶ್ವರರು ಬಸವಣ್ಣನವರ ಸಮಕಾಲೀನರು. ವಚನ ಸಾಹಿತ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 12ನೇ ಶತಮಾನದಲ್ಲಿ ಶರಣರು ವಚನಗಳನ್ನು ರಚಿಸಿ ಜೀವನದ ಮೌಲ್ಯಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಜೀವನ ಮೌಲ್ಯಗಳನ್ನು ನಾವು ಅರಿಯಬೇಕು. ಹುಟ್ಟು ಆಕಸ್ಮಿಕ, ಸಾವು ಖಚಿತವಾದರೂ ಹುಟ್ಟು ಸಾವುಗಳ ಮಧ್ಯೆ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ನಮ್ಮ ಬದುಕಿನ ಅವಧಿಯಲ್ಲಿ ನಮ್ಮ ಬದುಕನ್ನು ನಾವು ಸಾರ್ಥಕಗೊಳಿಸಿಕೊಂಡಿದ್ದೇವೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಾದಿ ಶರಣರು ಮನುಷ್ಯರಾಗಿ ಬದುಕಬೇಕೆಂದು ಹೇಳಿದ್ದಾರೆ. ಜೀವನದ ಸಾರವನ್ನು ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.

    ವಚನ ಸಾಹಿತ್ಯ ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಿಶ್ವ ಸಾಹಿತ್ಯಕ್ಕೂ ದೊಡ್ಡ ಕೊಡುಗೆ ನೀಡಿದೆ. ಧರ್ಮಾಚರಣೆ, ಆಧ್ಯಾತ್ಮ ಜನರ ಭಾಷೆಯಲ್ಲಿ ಲಭ್ಯವಿರಲಿಲ್ಲ. ಸಾಮಾನ್ಯ ಜನರಿಗೆ ಓದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಜನರ ಭಾಷೆಯಲ್ಲಿ ಇದನ್ನು ತಿಳಿಸಿದ್ದು ಜಗಜ್ಯೋತಿ ಬಸವಣ್ಣನವರು.

     

    ಶರಣ ಸಾಹಿತ್ಯದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ ಅಲ್ಲಮಪ್ರಭು, ಸಿದ್ದರಾಮೇಶ್ವರರು ಪ್ರಮುಖರು. ಬಸವಾದಿ ಶರಣರು ಮುಖ್ಯವಾಗಿ ನೀಡಿದ ಮೌಲ್ಯ ಕಾಯಕ ಮತ್ತು ದಾಸೋಹ. ಸತ್ಯವೇ ಸ್ವರ್ಗ, ಮಿತ್ಯವೆ ನರಕ ಎಂದ ಶರಣರು, ಮೌಢ್ಯಗಳನ್ನು ತಿರಸ್ಕರಿಸಿದ್ದರು. ಬಸವಾದಿ ಶರಣರು ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ. ಕಂದಾಚಾರ, ಮೂಢನಂಬಿಕೆ, ಮೌಢ್ಯಗಳನ್ನು ತಿರಸ್ಕಾರ ಮಾಡಿದ್ದಾರೆ.

     

    ಮನುಷ್ಯರು ಚಾತುರ್ವಣ ವ್ಯವಸ್ಥೆಯನ್ನು ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾರೆ. ಯಾವ ದೇವಸ್ಥಾನದೊಳಗೆ ಪ್ರವೇಶವಿಲ್ಲದ ದೇವಸ್ಥಾನದೊಳಗೆ ಪ್ರವೇಶಿಸಬೇಡಿ, ನೀವೇ ದೇಗುಲ ನಿರ್ಮಿಸಿ ಪೂಜಿಸಿ ಎಂದು ನಾರಾಯಣ ಗುರುಗಳು ಕರೆ ನೀಡಿದ್ದರು. ಮನುಷ್ಯ ಮನುಷ್ಯ ನನ್ನು ಪ್ರೀತಿಸಬೇಕು. ಮನುಷ್ಯರಾಗಿರಬೇಕು ಎಂದು ಹೇಳಿದರೆ ಕೆಲವರಿಗೆ ಕೋಪ ಬರುತ್ತದೆ. ಸಿದ್ದರಾಮೇಶ್ವರನ ಜಯಂತಿ ಆಚರಿಸಿದಾಗ ಅವರ ಬೋಧನೆಯನ್ನು ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ಗೌರವ.

    ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಸನದಲ್ಲಿ ಸುಮಾರು 40,000 ಶಾಖೆಗಳಿದ್ದು, ಅನುದಾನ ಕೋರಿರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದುಎಂದು ತಿಳಿಸಿದರು

  • ಖಾಲಿ ಇರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು – ಮುಖ್ಯಮಂತ್ರಿ ಸಿದ್ದರಾಮಯ್ಯ

    ಕರ್ನಾಟಕ ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲಾಗುವುದು. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು

    ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು.

    ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರೆ ಗಸ್ತು ವ್ಯವಸ್ಥೆ, ಹೋಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವಿಫಲರಾಗಿದ್ದಾರೆ ಎಂದೇ ಅರ್ಥ. ಇದೇ ಸ್ಥಿತಿ ಮುಂದುವರೆದರೆ DCP ಗಳನ್ನು ಕರ್ತವ್ಯಲೋಪಕ್ಕೆ ಹೊಣೆ ಮಾಡಲಾಗುವುದು.

    ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು.

    ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಸಾಧ್ಯವಿದೆ. ಇದನ್ನು ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಮಾಡಬೇಕು. ಎಂದು ತಿಳಿಸಿದರು

     

    ಈ ಸಲದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

  • ಕರ್ನಾಟಕಕ್ಕೆ ಮೊದಲ ಬಾರಿ ಬಿಹಾರ್ ಟ್ರೋಫಿ : 890 ರನ್ ಗಳಿಸಿದ ಕರ್ನಾಟಕ ತಂಡ

    79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್‌ ಬಿಹಾರ್‌ ಟ್ರೋಫಿ ಗೆದ್ದಿರುವ ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್‌ ತಂಡ.

     

    ಆರಂಭಿಕ ಬ್ಯಾಟರ್‌ ಪ್ರಖರ್‌ ಚತುರ್ವೇದಿ ಅಜೇಯ 404 ರನ್‌ ಗಳಿಸಿ ದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

    ಕರ್ನಾಟಕ ತಂಡವು 890 ರನ್‌ಗಳ ದಾಖಲೆಯ ಮೊತ್ತವನ್ನು ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಕನ್ನಡಿಗರಿಗೆ ಹೆಮ್ಮೆಯ ವಿಷಯವಲ್ಲವೇ…..

  • ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಓರ್ವ ಬಲಿ : ಘಾಟಿ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವದಲ್ಲಿ ಘಟನೆ

    ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವದ ಹಿನ್ನಲೆ ದೇವಾಲಯಕ್ಕೆ ಅಪಾರ ಪ್ರಮಾಣದ ಭಕ್ತಗಣ ಹರಿದುಬರುತ್ತಿದೆ.

     

    ಬಸ್ ಚಾಲನೆಯಲ್ಲಿ ಇದ್ದಾಗಲೇ ತಾರಾತುರಿಯಲ್ಲಿ ಬಸ್ ಯಿಂದ ಇಳಿಯಲು ಮುಂದಾದ ವ್ಯಕ್ತಿ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಾಪಟ್ಟಿರುವ ಘಟನೆ ಘಾಟಿಸುಬ್ರಮಣ್ಯ ಕ್ಷೇತ್ರದ ಬಳಿಯ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ ಸಮೀಪದಲ್ಲಿ ಸಂಭವಿಸಿದೆ.

     

     

    ಹೌದು ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಭಕ್ತನ ಮೇಲೆ ಹರಿದ ಪರಿಣಾಮ ಕಾಲಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಯಿತು ಆದರೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ಪಾಲಿಕಾರಿಯಾಗದೆ ಸಾವನಪ್ಪಿದ್ದಾನೆ ಎಂದು ಮೂಲಗಳು ತಿಳಿಸುವೆ

     

    ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆ ಆಗಿಲ್ಲ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಪೊಲೀಸ್ ಮುಂದಾಗಿದ್ದಾರೆ.