Blog

  • Lokayuktha update news : ತಾಲ್ಲೂಕು ಕಚೇರಿಗೆ ಉಪ ಲೋಕಾಯುಕ್ತರಾದ ಕೆ ಏನ್ ಪಣೀಂದ್ರ ಭೇಟಿ : ರೈತರ ದೂರುಗಳು ಹಾಗೂ ಕುಂದುಕೊರತೆಗಳ ಬಗ್ಗೆ ಅಹವಾಲು ಸ್ವೀಕಾರ

    ದೊಡ್ಡಬಳ್ಳಾಪುರ : ಕರ್ನಾಟಕ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಗೆ ಖುದ್ದು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು.

    ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿ ಅಕ್ರಮಗಳ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ದಿಢೀರ್ ದಾಳಿ ನಡೆಸಿದರು. ಈ ವೇಳೆ ಲೋಕಾಯುಕ್ತ ತುಮಕೂರು ವಿಭಾಗದ ಎಸ್ಪಿ ವಲೀ ಬಾಷಾ ಹಾಗೂ ಅಧಿಕಾರಿಗಳ ಮುಂದೆ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಾಕಷ್ಟು ದೂರು ಹೇಳಿಕೊಂಡರು.

     

    ಅಧಿಕಾರಿಗಳ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಖುದ್ದು ಉಪ ಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ, ಹಾಗೂ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಆಗಮಿಸಿ ತಹಶೀಲ್ದಾರ್ ಕಚೇರಿಯಲ್ಲಿ ಖುದ್ದು ಅಹವಾಲು ಸ್ವೀಕರಿಸಿದರು

    ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಪಹಣಿ ಸಮಸ್ಯೆ, ಗೋಮಾಳ ಜಮೀನು ಒತ್ತುವರಿ ಸೇರಿದಂತೆ ಹಲವು ದೂರುಗಳು ಕೇಳಿಬಂದವು. ಸಮಸ್ಯೆ ಆಲಿಸಿದ ನ್ಯಾಯಮೂರ್ತಿಗಳು, ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಾಯುಕ್ತ ಸಂಸ್ಥೆಯ ಕುರಿತು ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದ್ದು ಲೋಕಾಯುಕ್ತ ಸಂಸ್ಥೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ತಲುಪಬೇಕಿದೆ ಪ್ರತಿ ಜಿಲ್ಲೆಯಲ್ಲಿ ಲೋಕಾಯುಕ್ತ ಕಛೇರಿ ಇದ್ದು ಸಾರ್ವಜನಿಕರು ಬೆಂಗಳೂರಿನ ಕಚೇರಿಗೆ ದೂರು ನೀಡಬೇಕು ಎಂದು ಯೋಚಿಸುವಂತಿಲ್ಲ ಜಿಲ್ಲಾಧಿಕಾರಿಗಳಿಗೆ ಪ್ರತಿ ತಿಂಗಳಿಗೊಮ್ಮೆ ವಿಶೇಷವಾಗಿ ಸಾರ್ವಜನಿಕರೊಂದಿಗೆ ಸಂಪರ್ಕ ಸಭೆ ಆಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಬೇಕಾಗಿ ತಿಳಿಸಲಾಗಿದೆ ಸಾರ್ವಜನಿಕರ ಸೇವೆಗೆ ಲೋಕಾಯುಕ್ತ ಸದಾ ಸಿದ್ಧವಿದೆ ಎಂದು ತಿಳಿಸಿದರು

    ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪಲೋಕಾಯುಕ್ತರು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಮಾಧ್ಯಮಗಳ ಹಾಗೂ ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದೆ ಅಂತಹ ಯಾವುದೇ ವ್ಯಕ್ತಿ ಅಥವಾ ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಹಾಗೂ ಸಂಬಂಧಪಟ್ಟ ಅಧಿಕಾರಿ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡುವ ಮೂಲಕ ಬ್ರಷ್ಟಾಚಾರ ನಿರ್ಮೂಲನೆಗೆ ಸಹಕರಿಸಬೇಕೆಂದು ಮನವಿ  ಮಾಡಿದರು ಹಾಗೂ ಸದರಿ ಪ್ರಕರಣ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು

  • ದೊಡ್ಡಬಳ್ಳಾಪುರ ತಾಲ್ಲೂಕು‌ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಶಿವಕುಮಾರ್ ನೇತೃತ್ವದಲ್ಲಿ ದಾಳಿ

    ದೊಡ್ಡಬಳ್ಳಾಪುರ: ತಾಲ್ಲೂಕು‌ ಕಚೇರಿ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿ ಶಿವಕುಮಾರ್ ನೇತೃತ್ವದಲ್ಲಿ ದಾಳಿ‌ ನಡೆಸಿ, ಕಡತಗಳ ಪರಿಶೀಲನೆ ಆರಂಭಿಸಲಾಗಿದೆ.

    ಯೋಜನೆಗಳ ಸವಲತ್ತು ವಿತರಣೆಗೆ ಅಧಿಕ ಹಣ ವಸೂಲಿ, ಗೋಮಾಳ ಜಮೀನು ಒತ್ತುವರಿಗೆ ಸಂಬಂಧಿಸಿ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ‌ ಎನ್ನಲಾಗಿದೆ.

     

    ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ ಸೇರಿದಂತೆ ಹಲವರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಂಡರು

  • ರಾಮಲಲ್ಲಾ ಮೂರ್ತಿಯ ಫೋಟೋ ವೈರಲ್ : ದೇವಾಲಯದ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ

    ಈಗಾಗಲೇ ರಾಮಲಲ್ಲಾನ ಮೂರ್ತಿ ದೇವಾಲಯದೊಳಗೆ ಇರಿಸಲಾಗಿದೆ.ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳು ಹಂತ ಹಂತವಾಗಿ ಸಾಗಿದ್ದು. ಜನವರಿ 22ರಂದು ನಡೆಯಲಿರುವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದೇಶದಾದ್ಯಂತ ಕೋಟಿ ಕೋಟಿ ರಾಮ ಭಕ್ತರು ಭಾಗವಹಿಸಲಿದ್ದಾರೆ ಜೊತೆಗೆ ರಾಮನ ದರ್ಶನವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.ಈ ನಡುವೆ ಗರ್ಭಗುಡಿಯಲ್ಲಿರುವ ಬಾಲರಾಮನ ಮೂರ್ತಿಯ ಫೋಟೋಗಳು ವೈರಲ್ ಆಗಿದ್ದು.ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಗುರುವಾರ ಮಧ್ಯಾಹ್ನ ರಾಮ ಲಲ್ಲಾನ ವಿಗ್ರಹವನ್ನು ಇರಿಸಲಾಗಿದೆ, ಜನವರಿ 22 ರಂದು ಪ್ರನಪ್ರತಿಷ್ಠಾಪನೆ ಸಮಾರಂಭಕ್ಕೆ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು ಬಾಲ ರಾಮನ ಮುಖವನ್ನು ಅರಿಶಿನ ಮಿಶ್ರಿತ ಬಟ್ಟೆಯಿಂದ ಮುಚ್ಚಲಾಗಿದೆ. ಈ ವಿಗ್ರಹದ ಮೊದಲ ಫೋಟೋ ಹಂಚಿಕೊಳ್ಳಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

     

    *ವಿಗ್ರಹ ಕುರಿತು ಒಂದಿಷ್ಟು ಮಾಹಿತಿ*

    51 ಇಂಚಿನ ಭಗವಾನ್ ರಾಮನ ವಿಗ್ರಹವನ್ನು ‘ಶ್ಯಾಮಲ’ (ಕಪ್ಪು) ಕಲ್ಲಿನಿಂದ ರಚಿಸಲಾಗಿದೆ, ಇದನ್ನು ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಅವರು ರಚಿಸಿದ್ದಾರೆ, ಇದು ದೇವರನ್ನು ಐದು ವರ್ಷದ ಮಗು ಕಮಲದ ಮೇಲೆ ನಿಂತಿರುವಂತೆ ಬಿಂಬಿಸುತ್ತಿದೆ. ಕಮಲ ಮತ್ತು ಪ್ರಭಾವಲಯದಿಂದಾಗಿ ವಿಗ್ರಹವು 150 ಕೆಜಿ ತೂಗುತ್ತದೆ, ನೆಲದಿಂದ ಅಳತೆ ಮಾಡಿದಾಗ ಒಟ್ಟು ಏಳು ಅಡಿ ಎತ್ತರವಿದೆ ಎಂಬುದು ಲಭ್ಯ ಮಾಹಿತಿ.

     

    ಆಚಾರ್ಯರಾದ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆಡೆಯುತ್ತಿದೆ. ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದ ಪೂರ್ವಭಾವಿಯಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದೆ. ರಾಮ ಮಂದಿರ ‘ಪ್ರಾಣ ಪ್ರತಿಷ್ಠಾ’ ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

     

    ಅಯೋಧ್ಯೆಯಲ್ಲಿ ರಾಮಮಂದಿರದ ವೈಶಿಷ್ಟ್ಯಗಳು:

    ಮಂದಿರವು 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ಮಂದಿರವು ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಮುಖ್ಯ ಗರ್ಭಗುಡಿಯಲ್ಲಿ, ಭಗವಾನ್ ಶ್ರೀರಾಮನ ಬಾಲ್ಯದ ರೂಪವಿದೆ (ಶ್ರೀರಾಮ ಲಲ್ಲಾನ ವಿಗ್ರಹ) ಮತ್ತು ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ. ಐದು ಮಂಟಪಗಳು (ಹಾಲ್) – ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪಗಳು. ದೇವತೆಗಳು, ದೇವರುಗಳು ಮತ್ತು ದೇವತೆಗಳ ಪ್ರತಿಮೆಗಳು ಕಂಬಗಳು ಮತ್ತು ಗೋಡೆಗಳನ್ನು ಅಲಂಕರಿಸಲಿವೆ. 732 ಮೀಟರ್ ಉದ್ದ ಮತ್ತು 14 ಅಡಿ ಅಗಲವಿರುವ ಪಾರ್ಕೋಟಾ (ಆಯತಾಕಾರದ ಕಾಂಪೌಂಡ್ ಗೋಡೆ) ಮಂದಿರವನ್ನು ಸುತ್ತುವರೆದಿದೆ. ಆವರಣದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಂದಿರಗಳಿವೆ – ಸೂರ್ಯ ದೇವ, ದೇವಿ ಭಗವತಿ, ಗಣೇಶ ಮತ್ತು ಭಗವಾನ್ ಶಿವನಿಗೆ ಸಮರ್ಪಿತವಾಗಿದೆ. ಉತ್ತರದಲ್ಲಿ ಮಾತೆ ಅನ್ನಪೂರ್ಣ ದೇವಿಯ ಮಂದಿರವಿದೆ ಮತ್ತು ದಕ್ಷಿಣದಲ್ಲಿ ರಾಮಭಕ್ತ ಹನುಮಾನ್ ಮಂದಿರವಿದೆ.ಶ್ರೀ ರಾಮ ಜನ್ಮಭೂಮಿ ಮಂದಿರದ ಸಂಕೀರ್ಣದಲ್ಲಿ, ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್ ರಾಜ್, ಮಾತಾ ಶಬರಿ ಮತ್ತು ದೇವಿ ಅಹಲ್ಯಾಳ ಪೂಜ್ಯ ಪತ್ನಿಗೆ ಸಮರ್ಪಿತವಾದ ಮಂದಿರಗಳಿವೆ ಎಂದು ತಿಳಿದು ಬಂದಿದೆ.

  • ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂಯುಕ್ತ ಹೋರಾಟ ವೇದಿಕೆಯ ಪದಾಧಿಕಾರಿಗಳು

    ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯೋಜನಾ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದ ಸಂಯುಕ್ತ ಹೋರಾಟ ವೇದಿಕೆಯ ಪದಾಧಿಕಾರಿಗಳು ಮತ್ತು ಮುಖಂಡರ ನಿಯೋಗದ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಿದರು.

    ಈ ಸಂದರ್ಭದಲ್ಲಿ ಭೂ ಸ್ವಾಧೀನ, ಗೋ ಹತ್ಯೆ ನಿಷೇಧ ಕಾಯ್ದೆ, ಬಗರ್ ಹುಕುಂ, ಕಾರ್ಮಿಕರಿಗೆ 12 ಗಂಟೆಗಳ ಕೆಲಸ ಕಡ್ಡಾಯ ಕಾಯ್ದೆ ನಿಷೇಧ, ಗ್ರಾಮೀಣ ಬ್ಯಾಂಕುಗಳಲ್ಲಿ ರೈತರ ಸಾಲಕ್ಕೆ ಒಟಿಎಸ್ ವ್ಯವಸ್ಥೆ, ಫ್ರೀಡಂ ಪಾರ್ಕನ್ನು ಹೋರಾಟಗಳಿಗೆ ಮೀಸಲಿಡುವುದು ಸೇರಿದಂತೆ ಹಲವು ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಸಂಘದ ಸದಸ್ಯರು ಮನವಿ ಮಾಡಿದರು.

     

    ಸಂಘದ ಸದಸ್ಯರ ಮನವಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ

    ಬಲವಂತವಾಗಿ ರೈತರ ಸಾಲ ವಸೂಲಾತಿಯನ್ನು ಮಾಡಬಾರದೆಂದು ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಸೂಚಿಸಲಾಗುವುದು. ಬಗರ್ ಹುಕುಂ, ಅಕ್ರಮ – ಸಕ್ರಮ, ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಉಪ ಮುಖ್ಯಮಂತ್ರಿಗಳು, ಕಂದಾಯ, ಅರಣ್ಯ, ಕೃಷಿ ಇಲಾಖೆ ಸಚಿವರು, ಅಧಿಕಾರಿಗಳೊಂದಿಗೆ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು.

    ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿಧಾನಪರಿಷತ್ ನಲ್ಲಿ ಅನುಮೋದನೆಯಾಗಿಲ್ಲ. ಜಂಟಿ ಸಮಿತಿಯಲ್ಲಿ ಇದಕ್ಕೆ ಅನುಮೋದನೆ ಪಡೆಯಲು ಕ್ರಮ ವಹಿಸಲಾಗುವುದು. ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ, 2023 ರಡಿ 12 ಗಂಟೆ ಕೆಲಸ ಮಾಡುವ ಕಾಯ್ದೆ ಕಡ್ಡಾಯವಾಗಿ ಆಗಬೇಕೆಂದು ಇಲ್ಲ. ಈ ಬಗ್ಗೆ ಪರಿಶೀಲಿಸಿ ಅದನ್ನು ವಾಪಸ್ಸು ಪಡೆದು ಮೊದಲಿನಂತೆ 8 ಗಂಟೆಗಳಿಗೆ ಇಳಿಸಲು ಕ್ರಮ ವಹಿಸಲಾಗುವುದು.ಭೂ ಸುಧಾರಣಾ ಕಾಯ್ದೆ 79 ಎ ಹಾಗೂ ಬಿ ಪರಿಚ್ಛೇಧಕ್ಕೆ ತಂದಿರುವ ತಿದ್ದುಪಡಿ ಸರಿಪಡಿಸಲಾಗುವುದು.ಸರ್ಕಾರ ಕಾನೂನಾತ್ಮಕವಾಗಿ ಮಾಡಬಹುದಾದ ಎಲ್ಲ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸೈನಿಕ ಶಾಲೆಗಳಲ್ಲಿ ಕನ್ನಡದವರಿಗೆ ಶೇಕಡಾ 65ರಷ್ಟು ಸೀಟುಗಳು ಹಂಚಿಕೆಯಾಗಬೇಕು – ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಳಗಾವಿ : ಬೈಲಹೊಂಗಲ ತಾಲ್ಲೂಕಿನಲ್ಲಿ ಸೈನಿಕ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ.

     

    ಕಾರ್ಯಕ್ರಮಕ್ಕೆ ತೆರಳುವ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಲು ಮುಂದಾಗಿರುವ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು ಎಂದು ಮುಖ್ಯಕಾರ್ಯದರ್ಶಿಗಳು ಈಗಾಗಲೇ ಮಹಾರಾಷ್ಟ್ರದವರಿಗೆ ಸೂಚಿಸಿದ್ದಾರೆ.

     

    ಸೈನಿಕ ಶಾಲೆಯಲ್ಲಿ ಕನ್ನಡದವರಿಗೆ ಸೀಟುಗಳನ್ನು ಶೇ.65 ರಷ್ಟು ಹಾಗೂ ಇತರರಿಗೆ ಶೇ.35 ರಷ್ಟು ಸೀಟುಗಳು ಹಂಚಿಕೆಯಾಗಬೇಕೆಂದು ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಲಾಗುವುದು. ಇಲ್ಲಿ ಕಲಿತವರು ಸೇನೆಗೆ ಸೇರ್ಪಡೆಯಾಗುವ ಅವಕಾಶವಿದೆ.

     

    ಸುಮಾರು 110 ಎಕರೆ ಜಮೀನನ್ನು ಸರ್ಕಾರದ ವತಿಯಿಂದ ರಾಕ್ ಗಾರ್ಡನ್ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕಾಗಿ ಅನುದಾನವನ್ನೂ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನೀಡಲಾಗಿತ್ತು. ಮುಖ್ಯಮಂತ್ರಿಯಾಗಿ ಶಂಕುಸ್ಥಾಪನೆ ಮಾಡಿ, ಉದ್ಘಾಟನೆಯನ್ನೂ ಮಾಡುತ್ತಿದ್ದೇನೆ. ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ರಾಯಣ್ಣ ಅವರ ಜ್ಞಾಪಕಾರ್ಥವಾಗಿ ಇಲ್ಲಿ ರಾಕ್ ಗಾರ್ಡನ್ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಿದೆ. ಎಂದು ತಿಳಿಸಿದರು.

  • ಸಂಸದರನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ಉಳಿಸಿಕೊಂಡಿಲ್ಲ : ಜಿ ಎನ್ ಪ್ರದೀಪ್

    ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನಿಗೆ ಮಾನ್ಯ ಸಂಸದರಾದ ಅನಂತ್ ಕುಮಾರ್ ಹೆಗ್ಡೆ ಯವರು ಅವಹೇಳನಕಾರಿಯಾಗಿ ಸಂಭೋಧಿಸಿದ್ದಾರೆ ಎಂಬುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರ , ಧರ್ಮ, ಸಂಸ್ಕೃತಿ ವಿಚಾರಕ್ಕೆ ಬಂದರೆ ಅವರ ಭಾಷೆಯಲ್ಲೇ ಉತ್ತರಿಸುವ ಸಂಸ್ಕೃತಿ ನಮ್ಮ ಅನಂತ್ ಕುಮಾರ್ ಹೆಗಡೆಯವರದು ಎಂದು ಕದಂಬ ಬ್ರಿಗೇಡ್ ಸಂಸ್ಥಾಪಕ ಜಿ.ಎನ್.ಪ್ರದೀಪ್ ತಿಳಿಸಿದರು

    ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು,
    ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಯಲ್ಲಿ ಯಾವುದೇ ಅಸಭ್ಯತನ ಇಲ್ಲ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಪ್ರಧಾನಿ ಮೋದಿ ವಿರುದ್ದ ಏಕವಚನ ಶಬ್ದಗಳ ಪ್ರಯೋಗ ಮಾಡಿದ್ದಾರೆ . ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿರುವ ಕಾಂಗ್ರೆಸ್ಸಿಗರಿಗೆ ಅನಂತ್ ಕುಮಾರ್ ಹೆಗಡೆ ಹೇಳಿಕೆಯನ್ನು ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ.
    ಸಂಸದ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಗೊಂದಲ ಮೂಡಿಸುತ್ತಿದ್ದಾರೆ.ರಾಜ್ಯ ಸರ್ಕಾರ ತನ್ನ ದೌರ್ಬಲ್ಯಗಳನ್ನು ರಾಜ್ಯದ ಜನತೆ ಮುಂದೆ ಮರೆಮಾಚಲು ನೆಡೆಸಿರುವ ಷಡ್ಯಂತ್ರವಾಗಿದೆ , ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಸಂಸದ ಅನಂತ್ ಕುಮಾರ್ ಹೆಗಡೆ ಅವರು ನೇರ ಮತ್ತು ನಿಷ್ಠೂರವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ . ಅವರು ಮಾತನಾಡುವ ಎಲ್ಲಾ ಹೇಳಿಕೆಗಳನ್ನು ವಿವಾದಾತ್ಮಕ ಹೇಳಿಕೆಗಳನ್ನಾಗಿ ಬಿಂಬಿಸುವ ಉತ್ತಮ ಪ್ರಯತ್ನ ಪ್ರಸ್ತುತ ಕಾಂಗ್ರೆಸ್ ಸರ್ಕಾರದ್ದಾಗಿದೆ. ಹಾಗಾಗಿ ಅವರ ಹೇಳಿಕೆಗಳನ್ನೇ ವಿವಾದವನ್ನಾಗಿಸುತ್ತಿದ್ದಾರೆ. ಕಾರಣ ಉತ್ತರ ಕನ್ನಡ ಮತ್ತು ಸುತ್ತಮುತ್ತಲಿನ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭಯ ಕಾಡುತ್ತಿದ್ದು ಅನಂತ್ ಕುಮಾರ್ ಹೆಗಡೆ ವಿರುದ್ಧ ಮಾತನಾಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ ಆದರೆ ಅದು ಎಂದಿಗೂ ಸಾಧ್ಯವಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿ ಜೀ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವ ಸಿದ್ದರಾಮಯ್ಯನವರೇ , ಹೆಗಡೆಯವರ ವಿರುದ್ಧ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಿರಿ. ಹೆಗಡೆಯವರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ಹೇಳುವ ಮಾತನಾಡುವ ಸಂಸ್ಕೃತಿ, ನೀವು ಹಾಗೂ ನಿಮ್ಮ ಕ್ಯಾಬಿನೆಟ್ ನ ಸದಸ್ಯರು ಗೌರವಾನ್ವಿತ ಪ್ರಧಾನ ಮಂತ್ರಿಗಳ ವಿರುದ್ಧ ಏಕವಚನ ಅಥವಾ ಅವಹೇಳನಕಾರಿ ಶಬ್ದಗಳನ್ನು ಮಾತನಾಡುವಾಗ ಎಲ್ಲಿ ಸತ್ತು ಮಲಗಿತ್ತು ಎಂದು ಪ್ರಶ್ನಿಸಿದರು . ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ನಡವಳಿಕೆ ಸಂಶಯಾಸ್ಪದವಾಗಿ ಕಾಣುತ್ತಿದೆ . ಸಂಸದರಿಗೂ ರಾಜ್ಯ ಬಿಜೆಪಿ ನಾಯಕರಿಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ನಡವಳಿಕೆ ಕಂಡಾಗ
    ಯತ್ನಾಳ್ ರವರ ಹೇಳಿಕೆಯಂತೆ ಬಿಜೆಪಿಯವರ ಮನಸ್ಥಿತಿ ಸಹ ಅನುಮಾನಕ್ಕೆ ಕಾರಣವಾಗಿದೆ. ಹಿಂದೂ ಧರ್ಮದ ಕುರಿತು ಪದೇ ಪದೇ ಅವಹೇಳನ ಮಾಡುತ್ತಿದ್ದರು ಸುಮ್ಮನಿದ್ದರೆ ಏನೆಂಬುದು ಅರ್ಥವಾಗುತ್ತಿಲ್ಲ.

    90ರ ದಶಕದಲ್ಲಿ ರಾಷ್ಟ್ರ ದ್ವಜ ಹಾರಿಸಬಾರದೆಂದು ಅಂದಿನ ಕಾಂಗ್ರೆಸ್ ಸರ್ಕಾರ 144 ಸೆಕ್ಷನ್ ಜಾರಿಗೊಳಿಸಿ ಕರ್ಫ್ಯೂ ಜಾರಿಗೊಳಿಸಿ ಆದೇಶ ನೀಡಿದ್ದರು ಸಹ ಯಾವುದೇ ಭಯವಿಲ್ಲದೆ ಅದಕ್ಕೆ ಸೆಡ್ಡು ಹೊಡೆದು ರಾಷ್ಟ್ರ ದ್ವಜ ಹಾರಿಸಿದವರು ಇದೆ ಅನಂತ್ ಕುಮಾರ್ ಹೆಗಡೆ ಎಂಬುದು ತಿಳಿದಿರಲಿ. ಭಾರತ ದೇಶದಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಬಾರದೆಂಬ ಆದೇಶ ಹೊರಡಿಸಿದ್ದ ಏಕೈಕ ಸಂವಿಧಾನ ವಿರೋಧಿ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ.

    ಸಂಸದರ ವಿರುದ್ಧ ಅಭಿವೃದ್ಧಿಯ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೀಪ್ ಅನಂತ್ ಕುಮಾರ್ ಹೆಗಡೆ ಅವರ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಯಾವುದೇ ಹಿನ್ನಡೆಯಾಗಿಲ್ಲ. ಆರು ಬಾರಿ ಸಂಸದರಾದರು ಇಲ್ಲಿಯವರೆಗೂ ಯಾವುದೇ ಹಗರಣ , ಭ್ರಷ್ಟಾಚಾರ ನಡೆಸದೆ ಪಾರದರ್ಶಕತೆಯ ಜೀವನ ಸಾಗಿಸುತ್ತಿರುವ ನಾಯಕ ಅನಂತ್ ಕುಮಾರ್ ಹೆಗ್ಡೆ ಅವರು ಯಾವುದೇ ರಾಜಕೀಯ ಬೆಂಬಲವಿಲ್ಲದೆ ಸಂಘರ್ಷದ ಹಾದಿಯಲ್ಲಿ ಬೆಳೆದು ಬಂದವರು. ಟಿಕೆಟ್ ಗಾಗಲಿ ಸಚಿವ ಸ್ಥಾನಕ್ಕಾಗಲಿ ಬೇರೆ ನಾಯಕರಂತೆ ಯಾವ ನಾಯಕರ ಮನೆ ಬಾಗಿಲಿಗೆ ಹೋದವರಲ್ಲ ಅಥವಾ ತಮ್ಮ ಹೇಳಿಕೆಗಳಿಂದ ಯಾವುದೇ ವಿವಾದಗಳು ಎದುರಾದಾಗ ರಾಜ್ಯ ಬಿಜೆಪಿ ಅವರನ್ನು ಸಮರ್ಥನೆ ಮಾಡಿಕೊಳ್ಳಲಿ ಎಂದು ಅನಂತಕುಮಾರ್ ಹೆಗಡೆ ಎಂದಿಗೂ ಬಯಸಿಲ್ಲ . ಅವರ ಬೆಂಬಲಕ್ಕೆ ಅಸಂಖ್ಯಾತ ಹಿಂದೂ ಕಾರ್ಯಕರ್ತರ ಪಡೆಯೇ ಇದೆ. ಅವರ ವಿರುದ್ಧ ಅವಹೇಳನ, ವಿಕೃತ ಮನೋಭಾವ ತೋರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು .

    ಸುದ್ದಿಗೋಷ್ಟಿಯಲ್ಲಿ ಕದಂಬ ಬ್ರಿಗೇಡ್ ಮುಖಂಡರಾದ ಸಿ.ಕೆ.ದಯಾನಂದ್, ಸುರೇಶ್ ಬಾಬು, ಕನಕರಾಜು, ಶಿವರಾಜ್, ಆಟೋ ರಮೇಶ್ ಮತ್ತಿತರರು ಉಪಸ್ಥಿತರಿದ್ದರು

  • ಹುಟ್ಟು ಹಬ್ಬಕ್ಕೆ ಬ್ಯಾನರ್ ,ಕೇಕ್ ಹಾಗೂ ಹಾರಗಳು ಬೇಡ : ನಿಮ್ಮ ಕೈಲಾದ ಅಕ್ಕಿ ,ಬೇಳೆ ,ಸಕ್ಕರೆ ನೀಡಿ – ನಟ ದರ್ಶನ್ ಮನವಿ

    ಫೆಬ್ರವರಿ 16ರಂದು ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್ ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ ಬೇಳೆ ಸಕ್ಕರೆ ಹಾಗೂ ಇನ್ನಿತರ ದವಸ ಧಾನ್ಯಗಳನ್ನು ದಾನ ನೀಡಿ ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ

    ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹುಟ್ಟು ಹಬ್ಬದ ಕುರಿತು ಪೋಸ್ಟ್ ಮಾಡಿರುವ ನಟ ದರ್ಶನ್ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಹಣವನ್ನು ವ್ಯರ್ಥ ಮಾಡದೆ ಅದೇ ಹಣದಲ್ಲಿ ಕೈಲಾದ ದವಸ ಧಾನ್ಯಗಳನ್ನು ತಲುಪಿಸಲು ಮನವಿ ಮಾಡಿದ್ದಾರೆ ಸಂಗ್ರಹವಾದ ಧಾನ್ಯಗಳನ್ನು ಒಗ್ಗೂಡಿಸಿ ಅನಾಥಾಶ್ರಮ ಅಥವಾ ವೃದ್ಧಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ

    ಹಾಗೂ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗುವುದು ಬೇಡ ಎಂದು ಹೇಳುತ್ತಾ ತಮ್ಮ ಪ್ರೀತಿಯ ಸೆಲೆಬ್ರಿಟಿಸ್ ಗೆ ನಿಬಂಧನೆಗಳನ್ನು ಹಾಕಿದ್ದಾರೆ ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು , ಹೂ ಕುಂಡಗಳನ್ನು ಬೀಳಿಸಿ ಹಾನಿಗೊಳಿಸುವುದು ಹಾಗೂ ಇತರೆ ಅನುಚಿತ ವರ್ತನೆಗಳು ನಡೆಯಬಾರದೆಂದು ಮನವಿ ಮಾಡಿದ್ದಾರೆ ಜೊತೆಗೆ ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಸಹಕರಿಸಬೇಕೆಂದು ವಿನಂತಿ ಮಾಡಿದ್ದಾರೆ

  • ಲೋಕಸಭೆ ಚುನಾವಣೆ ಅಖಾಡಕ್ಕೆ ಎಂಟಿಬಿ ನಾಗರಾಜ್ : ನೆಚ್ಚಿನ ನಾಯಕನಿಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ನೀಡುವಂತೆ ಅಭಿಮಾನಿಗಳ ಒತ್ತಾಯ

    ದೊಡ್ಡಬಳ್ಳಾಪುರ : ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕುರುಬ ಸಮದಾಯದ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡಬೇಕೆಂದು ಎಂಟಿಬಿ ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ನಗರದ ಜೆ ಸಿ ಎನ್ ಕನ್ವೆನ್ಷನ್ ಹಾಲ್ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಆಡಳಿತ ಸಭ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಘೋಷ ವಾಕ್ಯದಂತೆ ಹಿಂದುಳಿದ ವರ್ಗದ ಕುರುಬ ಸಮಾಜಕ್ಕೆ ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ನೀಡಬೇಕೆಂಬುದು ನಮ್ಮ ಸಮುದಾಯ ಒತ್ತಾಯಿಸುತ್ತದೆ .

    ಪ್ರಸ್ತುತ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಮಾರು 2.ಲಕ್ಷಕ್ಕೂ ಅಧಿಕ ಮತದಾರರನ್ನು ಹೊಂದಿದ್ದು, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿ ನಾಯಕರಾಗಿ ಹೆಚ್ಚು ಜನಮನ್ನಣೆಗಳಿಸಿರುವ ಎಂಟಿಬಿ ನಾಗರಾಜ್ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ನೀಡಿದರೆ ಬಿಜೆಪಿ ಗೆಲುವು ಬಹುತೇಕ ಖಚಿತವಾಗಲಿದೆ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯವಾಗಿ ಹೆಚ್ಚಿನ ಶ್ರಮದಾನ ಮಾಡುವ ಮೂಲಕ ನಮ್ಮ ನೆಚ್ಚಿನ ನಾಯಕ ಎಂಟಿಬಿ ನಾಗರಾಜ್ ಅವರನ್ನು ವಿಜಯಶಾಲಿಯನ್ನಾಗಿ ಮಾಡಲಾಗುವುದು ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಜೀ ಯವರ ಕೈಬಲಪಡಿಸಲು ಹೆಚ್ಚಿನ ಅವಕಾಶ ದೊರೆಯುತ್ತದೆ ಎಂದರು

    ಬಿಜೆಪಿ ಪಕ್ಷದ ಹಿಂದಿನ ಸರ್ಕಾರದಲ್ಲಿ ಪೌರಾಡಳಿತ ಮಂತ್ರಿಯಾಗಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿ ಸಾರ್ವಜನಿಕರವಿಶ್ವಾಸಕ್ಕೆ ಪಾತ್ರರಾಗಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿದರೆ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು

    ಈ ವೇಳೆ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಸಾಧ್ಯತೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖಂಡರು, ಎಂಟಿಬಿ ನಾಗರಾಜ್ ಅವರು ಸಿದ್ದರಾಮಯ್ಯರ ಆಪ್ತರು ಆದರೂ ಬಿಜೆಪಿ ಪಕ್ಷಕ್ಕೆ ನಿಷ್ಟವಂತರಾಗಿದ್ದರೆ, ಈಗಾಗಲೇ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾರಣ ಕಾಂಗ್ರೆಸ್ ನಿಂದ ಸ್ಪರ್ಧೆಯ ಮಾತಿಲ್ಲವೆಂದರು.

    ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಕೇಶವ ಮೂರ್ತಿ ಹೊಸಕೋಟೆ, ತಾಲೂಕು ಬಿಜೆಪಿ ಒಬಿಸಿ ಅಧ್ಯಕ್ಷ ಆಲಳ್ಳಿ ಚಂದ್ರಶೇಖರ್, ಕನಕ ಕೋ.. ಅಪರೇಟಿವ್ ಸೊಸೈಟಿ ಅಧ್ಯಕ್ಷ ಲೋಕೇಶ್, ಗ್ರಾಪಂ‌ ಸದಸ್ಯ ನಾಗರಾಜ್, ಮುಖಂಡರಾದ ಮಂಜುನಾಥ್, ಎಲ್ಲಪ್ಪ, ಚೌಡರಾಜ್, ಕೆಂಪರಾಜು, ಲಕ್ಷ್ಮೀಷ, ಬೀರೇಶ್, ಮುನಿ ಬೀರಣ್ಣ ಮತ್ತಿತರರಿದ್ದರು.

  • ಗಂಡರಗೂಳಿಪುರ ನೂತನ VSSN ಚುನಾವಣೆ : ಚುನಾವಣಾ ಪ್ರಕ್ರಿಯೆ ಸರಿಯಿಲ್ಲ ಚುನಾವಣೆ ಮುಂದೂಡಿ ಎಂದ ಸ್ಥಳೀಯ ರೈತರು

    ದೊಡ್ಡಬಳ್ಳಾಪುರ : ಮಧುರೆ ಹೋಬಳಿಯ ಹೊನ್ನಾವರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಚುನಾವಣಾ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಹಾಗೂ ನಿಗದಿಯಾಗಿರುವ ವಿಎಸ್ಎಸ್ಎನ್ ಚುನಾವಣೆ ಮುಂದೂಡಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಗ್ರಹಿಸಿದರು.

    ಗಂಡರಗೂಳಿಪುರ ಗ್ರಾಮದ ನೂತನ ವಿಎಸ್ಎಸ್ಎನ್ ಕಚೇರಿ ಬಳಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪಂಚಾಯ್ತಿ ವ್ಯಾಪ್ತಿಯ 17 ಗ್ರಾಮಗಳಲ್ಲಿ ಅರ್ಹ ಷೇರುದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಸಂಘವನ್ನು ನೋಂದಣಿ ಮಾಡಿಸಿದ ನಾಲ್ಕು ಮಂದಿ ಪ್ರವರ್ತಕರನ್ನೂ ಪಟ್ಟಿಯಿಂದ ಹೊರಗಿಡಲಾಗಿದೆ . ಪಹಣಿ ಹೊಂದಿಲ್ಲದ ರೈತರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಶೇರುದರಾರರಾದ ರೈತರನ್ನು ಕನಸವಾಡಿಯಿಂದ ಬಿಡುಗಡೆಗೊಳಿಸಿ ಗಂಡರಗುಳಿಪುರ VSSN ಗೆ ಸೇರಿಸಿ ನೂತನ ಸಂಘ ರಚಿಸಲು ಸೂಚಿಸಲಾಗಿದೆ , ಆದರೆ ವಾಸ್ತವವಾಗಿ ಅಧಿಕಾರಿಗಳ ನಿರ್ಲಕ್ಷದ ಕಾರಣ ಸ್ಥಳೀಯ ರೈತರಿಗೆ ಮೊಸವಾಗುತ್ತಿದ್ದೆ ಚುನಾವಣೆ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲದ ಕಾರಣ ಈಗಾಗಲೇ ಘೋಷಣೆಯಾಗಿರುವ ವಿಎಸ್ಎಸ್ಎನ್ ಚುನಾವಣೆ ಮುಂದೂಡಬೇಕು. ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

     

    ಕನಸವಾಡಿ, ಹೊನ್ನಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 800 ಷೇರುದಾರರು ಕನಸವಾಡಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ಯಶಸ್ಸಿಗೆ ಕಾರಣರಾಗಿದ್ದಾರೆ. ರೈತರ ಒತ್ತಾಯದ ಮೇರೆಗೆ ಕನಸವಾಡಿಯಿಂದ ಬೇರ್ಪಟ್ಟು ಗಂಡರಗೂಳಿಪುರ ವ್ಯವಸಾಯೋತ್ಪನ್ನ ಸೇವಾ ಸಹಕಾರ‌ ಸಂಘ ಅಸ್ತಿತ್ವಕ್ಕೆ ಬಂದಿದೆ. ಆದರೆ, ನೂತನ VSSN ಸೊಸೈಟಿಯಲ್ಲಿ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ನಾಯಕರು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

     

    ಗಂಡರಗೂಳಿಪುರ ವಿಎಸ್ಎಸ್ಎನ್ ಮುಖ್ಯ ಪ್ರವರ್ತಕ ಗಂಗಾಧರಯ್ಯ ಮಾತನಾಡಿ ಚುನಾವಣೆ ಘೋಷಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ನನ್ನ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾಗಿ ಮತದಾರ ಪಟ್ಟಿ ಸರಿಪಡಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

     

    ಹೊನ್ನಾವರ ಗ್ರಾ.ಪಂ. ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಸೊಸೈಟಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮಗೆ ಅನುಕೂಲವಾಗುವಂತೆ ಷೇರುಗಳನ್ನು ಹಾಕಿಸಿ ಅರ್ಹರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ . ಸೊಸೈಟಿಯಲ್ಲಿ ಕೆಲವು ಕಾಂಗ್ರೆಸ್‌ ಮುಖಂಡರು ತಮ್ಮ ಕುಟುಂಬದವರನ್ನೇ ಷೇರುದಾರರನ್ನಾಗಿ ಮಾಡಿಕೊಂಡು ಚುನಾವಣೆಗೆ ಮುಂದಾಗಿದ್ದಾರೆ . ಅಕ್ರಮ‌ ಚುನಾವಣೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

    ಗ್ರಾ.ಪಂ.ಮಾಜಿ ಸದಸ್ಯ ವಿಶ್ವನಾಥ್, ಮುಖಂಡರಾದ ರಘು ಇತರರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ : ಸಚಿವ ಅನಂತ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ಧಾಳಿ

    Doddaballapura : ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸದ ಬಿಜೆಪಿಯ ಸಂಸದ ಅನಂತ ಕುಮಾರ್ ಹೆಗಡೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಕುರಿತು ಬಾಯಿಗೆ ಬಂದಂತೆ ತಮ್ಮ ನಾಲಿಗೆಯನ್ನು ಹರಿಬಿಡುತ್ತೀದ್ದಾರೆ ಈ ಕೂಡಲೇ ಅವರು ರಾಜ್ಯದ ಜನತೆಯ ಸಮ್ಮುಖದಲ್ಲಿ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ
    ಆಕ್ರೋಶ ವ್ಯಕ್ತಪಡಿಸಿದರು.


    ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಂತ್ ಕುಮಾರ್ ಹೆಗಡೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ತಾಲ್ಲೂಕು ಕಛೇರಿವೃತ್ತದಲ್ಲಿ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿ ಸಚಿವ ಅನಂತ್ ಕುಮಾರ್ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಪ್ರತಿಕೃತಿ ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನ ಜನಪ್ರಿಯತೆಯನ್ನ ಸಹಿಸದ ಕೋಮುವಾದಿಗಳು ರಾಜ್ಯದಲ್ಲಿ ಗಲಭೆಗಳ ಸೃಷ್ಟಿಸಲು ಪ್ರಯತ್ನ ಮಾಡುವ ಹುನ್ನಾರ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳಿಂದಾಗಿ ಜನಪ್ರಿಯತೆಯನ್ನು ಪಡೆದವರು, ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಜನರಿಗೂ ಸ್ಪಂದಿಸಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಇಂತಹವರ ವಿರುದ್ದ ನಾಲಿಗೆ ಹರಿಬಿಟ್ಟು ತಮ್ಮ ಸಣ್ಣತನದ ಪ್ರದರ್ಶನ ಮಾಡುತ್ತೀರುವ ಅನಂತ್ ಕುಮಾರ್ ಹೆಗಡೆ ಹಿರಿಯರನ್ನು ಗೌರವಿಸುವ ಸಭ್ಯತೆ ಕಲಿಯಬೇಕಿದೆ ಇಂತಹ ಮನಸ್ಥಿತಿಯುಳ್ಳ ನಾಯಕರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ , ಇಂತಹ ಸಚಿವರನ್ನ ಕೇಂದ್ರ ಸರ್ಕಾರವು ತಮ್ಮ ಸಂಪುಟದಿಂದ ವಜಾಗೊಳಿಸಬೇಕು ಎಂದರು.

    ಸಿಎಂ ಸಿದ್ದರಾಮಯ್ಯರವರು ಜನಪರವಾದ ವಿಶೇಷ ಯೋಜನೆಗಳನ್ನು ರೂಪಿಸಿ ರಾಜ್ಯದ ಜನರಿಗೆ ನೀಡುವ ಮೂಲಕ ಕನ್ನಡಿಗರ ನೆಚ್ಚಿನ ನಾಯಕರಾಗಿದ್ದಾರೆ.
    ಹಿರಿಯರನ್ನು ಗೌರವದಿಂದ ಕಾಣದ ಒಬ್ಬ ಸಂಸದ ರಾಜ್ಯಕ್ಕೆ ಯಾವ ಕೊಡುಗೆ ಕೊಡಬಲ್ಲರು ,ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ಸೂಚಿಸಬೇಕೆಂಬ ಕನಿಷ್ಠ ಸಂಯಮ ಸಹ ಇಲ್ಲ, ಪ್ರಜ್ಞಾವಂತರಾದವರು ವಿಚಾರದ ಬಗ್ಗೆ ಅರಿತು ಮಾತನಾಡಬೇಕು ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ನೀಡುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ನೋಡಿ ಸಹಿಸಿಕೊಳ್ಳಲಾಗದ ಬಿಜೆಪಿ ಪಕ್ಷದ ಮುಖಂಡರು ಬಾಯಿಗೆ ಬಂದಂತೆ ಮಾತನಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ ನಮ್ಮದು ಅಭಿವೃದ್ಧಿಯ ಪಥ, ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಗೌರವ ನೀಡುವ ಕನಿಷ್ಠ ಸೌಜನ್ಯ ಇಲ್ಲದ ಬಿಜೆಪಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗಳಿಗೆ ಬಹಿರಂಗವಾಗಿ ರಾಜ್ಯದ ಜನರ ಮುಂದೆ ಕ್ಷಮೆಯಾಚನೆ ಮಾಡಬೇಕು, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ನ ಮುಖಂಡರಾದ ಕೃಷ್ಣಮೂರ್ತಿ , ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಕೆ ಪಿ ಜಗನ್ನಾಥ್, ಬೈರೇಗೌಡ ,ವೆಂಕಟೇಶ್ ( ಅಪ್ಪಿ) , ಕಾರ್ಯಾಧ್ಯಕ್ಷರಾದ ಅಂಜನ್ ಮೂರ್ತಿ , ನಗರಸಭಾ ಸದಸ್ಯರಾದ ನಾಗವೇಣಿ , ಕಸಬಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್, ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು , ರಾಜೇಶ್, ಮಹಿಳಾ ಜಿಲ್ಲಾ ಬ್ಲಾಕ್ ಅಧ್ಯಕ್ಷೆ ರೇವತಿ ಅನಂತ್ ರಾಮ್ ಹಾಗೂ ತಾಲ್ಲೂಕಿನ ವಿವಿಧ ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.