Blog

  • ಸ್ಮಗ್ಲಿಂಗ್ ಗ್ಯಾಂಗ್ ನ ಹೆಡೆಮುರಿ ಕಟ್ಟಿದ ದೊಡ್ಡಬಳ್ಳಾಪುರ ಪೊಲೀಸ್ : ಬಂಧಿತರಿಂದ ವಶಪಡಿಸಿಕೊಂಡ ಚಿನ್ನಾಭರಣವನ್ನು ದೂರುದಾರರಿಗೆ ಮರಳಿಸಿದ ಪೊಲೀಸ್

    ದೊಡ್ಡಬಳ್ಳಾಪುರ : ನಿಜಗಲ್ ಲೇಔಟ್ ಸ್ಮಗ್ಲಿಂಗ್ ಗ್ಯಾಂಗ್ ನ ಹೆಡೆಮುರಿ ಕಟ್ಟಿ, ಬಂಧಿತರಿಂದ ಕದ್ದ ಮಾಲನ್ನು ವಶಕ್ಕೆ ಪಡೆದು ಗ್ರಾಮಾಂತರ ಪೊಲೀಸ್ ಠಾಣೆ ನೀರಿಕ್ಷಕರಾದ ಸಾಧಿಕ್ ಪಾಷಾ ದೂರುದಾರರಿಗೆ ವಸ್ತುಗಳನ್ನು ಮರಳಿಸಿದರು.

     

     

    ಸೆ.16ರ ಮಧ್ಯರಾತ್ರಿ ತಾಲೂಕಿನ ನಿಜಗಲ್ ಲೇಔಟ್, ನಂದಿನಿ ಲೇಔಟ್, ಟಿ.ಬಿ ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಮನೆಗಳಲ್ಲಿ ಕಳ್ಳತನಕ್ಕೆ ಇಳಿದಿದ್ದ ಈ ಖದೀಮರು, ಟಿ.ಬಿ ನಾರಾಯಣಪ್ಪ ಬಡಾವಣೆಯಲ್ಲಿರುವ ಬಾಡಿಗೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಪತ್ತೆ ಹಚ್ಚಿ, ಆ ಮನೆಗೆ ಕಬೋರ್ಡ್ ಬೀಗವನ್ನು ಮುರಿದು ಒಳಗೆ ಇದ್ದ 32 ಗ್ರಾಂನ ನೆಕ್ಲೇಸ್, 15 ಗ್ರಾಂನ ಬ್ರಾಸ್ಲೈಟ್, 20 ಗ್ರಾಂನ 2 ಜೊತೆ ಜುಮುಕಿ, 1 ಗ್ರಾಂನ ತಾಳಿ, 11 ಗ್ರಾಂನ ಉಂಗುರ, 20 ಗ್ರಾಂನ ಫ್ಯಾನ್ಸಿ ಚೈನು, 10 ಗ್ರಾಂನ ಕತ್ತಿನ ಚೈನು, 4 ಗ್ರಾಂನ ಮಹಿಳೆಯ ಬ್ರಾಸ್ಲೈಟ್, ಬೆಳ್ಳಿಯ ಕಾಲು ಚೈನು ಒಂದು ಜೊತೆ, ಆಪಲ್ ಏರ್‌ಪಾಡ್ಸ್‌ (AirPods ವೈರ್‌ಲೆಸ್ ಬ್ಲೂಟೂತ್ ಇಯರ್‌ಬಡ್‌ಗಳು) ಸೇರಿದಂತೆ ಒಟ್ಟು 115 ಗ್ರಾಂ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು.

     

    ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು, ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಚಂದ್ರಕಲಾ ಹಾಗೂ ಸಿಬ್ಬಂದಿಯವರಾದ ಸುನಿಲ್ ಬಾಸಗಿ, ಫೈರೋಜ್ ಕೆ, ಪ್ರವೀಣ್, ಸಚಿನ್ ಉಪ್ಪಾರ್, ಹರೀಶ್ ತಂಡವು, ಸೆ.21ರ ಭಾನುವಾರದಂದು ದೊಡ್ಡಬಳ್ಳಾಪುರ ತಾಲೂಕಿನ ರೈಲ್ವೆ ನಿಲ್ದಾಣ ಸಮೀಪದ ಸ್ಕೌಟ್ ಕ್ಯಾಂಪ್ ಬಳಿ ಕಳ್ಳರ ಜಾಡನ್ನು ಪತ್ತೆ ಮಾಡಿ ಪುರುಷೋತ್ತಮ, ಚಂದ್ರು, ದರ್ಶನ್, ಸೌಭಾಗ್ಯ ಎಂಬ ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದರು.

     

    ಕಳ್ಳರನ್ನು ಬಂಧನ ಮಾಡಿದ ಕೂಡಲೇ ಸಾರ್ವಜನಿಕರು ತುಸು ನಿಟ್ಟುಸಿರು ಬಿಟ್ಟಿದ್ದರು. ಹಾಗೂ ಪೊಲೀಸರ ಕಾರ್ಯವೈಖರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು.

  • ವೀರಾಪುರ ಮನೆ ನೆಲಸಮ ಪ್ರಕರಣ : ನಾವು ಮನೆ ದ್ವಂಸ ಮಾಡಿಲ್ಲ, ತಾವೇ ತಮ್ಮ ಮನೆ ಧ್ವಂಸ ಮಾಡಿಕೊಂಡು ನಮ್ಮ ಮೇಲೆ ಆರೋಪ ಮಾಡಿದ್ದಾರೆ – ಮಧು ಕುಮಾರ್

    ದೊಡ್ಡಬಳ್ಳಾಪುರ : ರಾತೋ ರಾತ್ರಿ ಮನೆಯನ್ನು ಯಾವುದೇ ಮಾಹಿತಿ ನೀಡದೆ ಏಕಾಏಕಿ ಜೆಸಿಪಿಯಿಂದ ಧ್ವಂಸಗೊಳಿಸಿದ್ದಾರೆ ಎಂದು ವಿಶ್ವನಾಥ್ ಸುಳ್ಳು ಆರೋಪ ಮಾಡಿದ್ದಾರೆ ಎಂದು ವೀರಪುರ ಗ್ರಾಮದ ಸರ್ವೇ ನಂಬರ್ 115 ರ ಜಮೀನು ಮಾಲೀಕರಾದ ಮಧು ಕುಮಾರ್ ತಿಳಿಸಿದ್ದಾರೆ.

    ತಾಲ್ಲೂಕಿನ ಹೊರವಲಯದ ವೀರಪುರದಲ್ಲಿ ಈ ಹಿಂದೆ ವಿಶ್ವನಾಥ್ ಎಂಬುವರು ನಮ್ಮ ಮನೆಯನ್ನು ಜೆಸಿಪಿಯಿಂದ ನೆಲಸಮ ಮಾಡಲಾಗಿದೆ. ಮನೆಯ ಒಳಗಿದ್ದ ವಸ್ತುಗಳು ಸಂಪೂರ್ಣ ಹಾಳಾಗಿದ್ದು , ಕೋಳಿ ಹಾಗೂ ಮೇಕೆ ಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದರು ಈ ಕುರಿತಂತೆ ಜಮೀನು ಮಾಲಿಕ ಮಧುಕುಮಾರ್ ಮಾತನಾಡಿ ಈಗಾಗಲೇ ಹಲವಾರು ಬಾರಿ ಸರ್ವೆ ಮಾಡಿಸಿದ್ದೇವೆ . ವಿಶ್ವನಾಥ್ ರವರೇ ಖುದ್ದು ಸಹಿ ಹಾಕಿ ಸರ್ವೇಯನ್ನು ಒಪ್ಪಿಕೊಂಡಿದ್ದಾರೆ ಆದರೆ ಪದೇ ಪದೇ ನಮ್ಮ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸಮಸ್ಯೆ ಕೊಡುತ್ತಿದ್ದಾರೆ ಎಂದರು.

    ವೀರಪುರ ಗ್ರಾಮದ ಸರ್ವೇ ನಂಬರ್ 115ಕ್ಕೆ ಸಂಬಂಧಿಸಿದಂತೆ 32 ಗುಂಟೆ ಜಮೀನಿಗೆ ಮಧು ಕುಮಾರ್, ರವಿ, ಚಂದ್ರಪ್ಪ,ನಾರಾಯಣಪ್ಪ ಎಂಬ ನಾವು ಜಂಟಿ ಮಾಲೀಕರಾಗಿದ್ದು. ನಮ್ಮ ಪಕ್ಕದ 19 ಗುಂಟೆ ಜಮೀನು ವಿಶ್ವನಾಥ್ ಅವರಿಗೆ ಸೇರಿರುತ್ತದೆ ಆದರೆ ನಮ್ಮ ಜಮೀನು ನಮಗೆ ಬಿಟ್ಟುಕೊಡದೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಈಗಾಗಲೇ ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆದಿದೆ ಆದರೂ ಯಾವುದೇ ಪ್ರಯೋಜನವಾಗಿಲ್ಲ , ತಾವೇ ಮನೆ ನೆಲಸಮ ಮಾಡಿಕೊಂಡು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ . ಮನೆಯನ್ನು ಬಿಳಿಸುವ ಉದ್ದೇಶ ನಮ್ಮದಾಗಿದ್ದರೆ ಕೋರ್ಟ್ ಆದೇಶ ಪಡೆದು ಸಂಪೂರ್ಣ ಮನೆಯನ್ನು ದ್ವಂಸಗೊಳಿಸುತ್ತಿದ್ದೆವು ಆದರೆ ನಾವು ಆ ಕೆಲಸ ಮಾಡಿಲ್ಲ ಮನೆ ಖಾಲಿ ಮಾಡಿಕೊಡುವಂತೆ ಮನವಿ ಮಾಡಿದ್ದೆವು ಅದಕ್ಕೆ ವಿಶ್ವನಾಥ್ ಕೂಡ ಒಪ್ಪಿದ್ದರು. ಈಗ ಏಕಏಕಿ ಬಂದು ನಾವು ಅವರ ಮನೆ ಧ್ವಂಸಗೊಳಿಸಿದ್ದೇವೆ ಹಾನಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ನಮ್ಮ ಬಳಿ ಸೂಕ್ತ ದಾಖಲಾತಿ ಇದೆ. ಜಮೀನು ನಮ್ಮದು ನಮ್ಮ ಜಾಗವನ್ನು ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿದರು.

    ಮನೆಯಲ್ಲಿದ್ದ ವಸ್ತುಗಳು, ಅಡುಗೆ ಪಾತ್ರೆಗಳು ಸಂಪೂರ್ಣ ಹಾಳಾಗಿದ್ದು , ತಾವು ಸಾಕಿದ್ದ ಕೋಳಿಗಳು ಗೋಡೆ ಕೆಳಗೆ ಸಿಲುಕಿ ಸಾವನಪ್ಪಿವೆ ಗೋಡೆ ಬಿದ್ದ ಪರಿಣಾಮ ಮೇಕೆ ಮರಿಯ ಕಾಲು ಮುರಿದಿದೆ ಎಂದು ವಿಶ್ವನಾಥ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ ಇದು ಎಲ್ಲವೂ ಸುಳ್ಳು ಸತ್ಯಕ್ಕೆ ದೂರವಾದ ಮಾತು ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

     

  • ದೇಶದ ಸರ್ವೋಚ್ಛ ನ್ಯಾಯಪೀಠಕ್ಕಾದ ಇಂತಹ ಅಪಮಾನ – ಅರುಣ್ ಕುಮಾರ್

    ದೊಡ್ಡಬಳ್ಳಾಪುರ : ಸಿಜೆಐ ಬಿ.ಆರ್.ಗವಾಯಿರವರ ಮೇಲೆ ಶೂ ಎಸೆತ ಯತ್ನ ಪ್ರಕರಣವನ್ನ ತೀರ್ವವಾಗಿ ಖಂಡಿಸಿರುವ ಅಂಬೇಡ್ಕರ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಮನುವಾದಿಗಳ ಅಟ್ಟಹಾಸಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.

    ಆಕ್ಟೋಬರ್ 6 ರಂದು ಭಾರತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿರವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯುವ ಯತ್ನ ನಡೆಸಿದರು, ಕೃತ್ಯ ಖಂಡಿಸಿ ಭಾರತದಾದ್ಯಂತ ಅಕ್ರೋಶ ವ್ಯಕ್ತವಾಗಿದೆ, ದೇಶದೆಲ್ಲಡೆ ಕೃತ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ.

    ಸಿಜೆಐರವರ ಮೇಲಿನ ಶೂ ಎಸೆತ ಯತ್ನವನ್ನು ಖಂಡಿಸಿದ ದಲಿತ ಯುವ ಮುಖಂಡರಾದ ಅರುಣ್ ಕುಮಾರ್, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ಶೂ ಎಸೆಯಲು ಯತ್ನಿಸಿರುವ ಘಟನೆ ನಿಜಕ್ಕೂ ಖಂಡನೀಯ.

    ಈ ನೆಲದ ಕಾನೂನು ಹಾಗೂ ಸಂವಿಧಾನಿಕ ಸ್ಥಾನಗಳನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ದೇಶದ ಸರ್ವೋಚ್ಛ ನ್ಯಾಯಪೀಠಕ್ಕಾದ ಇಂತಹ ಅಪಮಾನ , ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ಘಟನೆಯಾಗಿದ್ದು , ನ್ಯಾಯಾಂಗಕ್ಕೆ ಹಾಗು ಸಂವಿಧಾನಕ್ಕೆ ಮಾಡಿದ ಅವಮಾನ ಇದನ್ನು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಖಂಡಿಸುತ್ತೇವೆ ಎಂದಿದ್ದಾರೆ.

  • ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಸಂಭ್ರಮ :ಖ್ಯಾತ ವಕೀಲರಾದ ರವಿ ಮಾವಿನಕುಂಟೆಯವರಿಗೆ ಶುಭಕೋರಿದ ಗಣ್ಯರು

    ದೊಡ್ಡಬಳ್ಳಾಪುರ : ಇಂದಿನ ವಿಶೇಷ ದಿನವನ್ನು ನಿರಾಶ್ರಿತ ಕಡುಬಡವರು ಹಾಗೂ ಪುಟಾಣಿ ಮಕ್ಕಳೊಂದಿಗೆ ಆಚರಿಸಿರುವುದು ಸಂತಸ ತಂದಿದೆ ಎಂದು ಖ್ಯಾತ ವಕೀಲರು ಹಾಗೂ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ಸಂಸ್ಥಾಪಕರಾದ ರವಿ ಮಾವಿನಕುಂಟೆ ತಿಳಿಸಿದರು .

    ತಾಲ್ಲೂಕಿನ ದರ್ಗಾಜೋಗಿಹಳ್ಳಿ ನಡೆದ 2026ನೇ ದಿನದ ಅನ್ನದಾಸೋಹ ಕಾರ್ಯಕ್ರಮದಲ್ಲಿ ರವಿ ಮಾವಿನಕುಂಟೆಯವರ 46 ನೇ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳ ವತಿಯಿಂದ ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು .ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಹಸಿದವರಿಗೆ 2ಹೊತ್ತಿನ ಊಟವನ್ನು ನೀಡು ಮೂಲಕ ನೂರಾರು ಕುಟುಂಬಗಳಿಗೆ ಆಸರೆಯಾಗಿದೆ . ಹಲವಾರು ದಾನಿಗಳ ನೆರವಿನಿಂದ ಸ್ಥಳವು ಸುಕ್ಷೇತ್ರವಾಗಿದೆ ಎಂದರು.

    ಪ್ರತಿನಿತ್ಯ ಹಸಿವು ನೀಗಿಸುವ ಕಾರ್ಯ ಸುದೀರ್ಘವಾಗಿ ನೆಡೆಯಲಿ ,ಮುಂದಿನ ದಿನಗಳಲ್ಲಿ ಸಮಿತಿ ಟ್ರಸ್ಟ್ ಆಗಿ ಮತ್ತಷ್ಟು ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವಂತಾಗಲಿ , ಮಲ್ಲೇಶ್ ಮತ್ತು ತಂಡದ ಉತ್ತಮ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು .

    ನಿರಂತರ ಅನ್ನದಾಸೋಹ ಸಮಿತಿಯ ಮುಖ್ಯಸ್ಥ ಅನ್ನದಾಸೋಹಿ ಮಲ್ಲೇಶ್ ವಕೀಲರಾದ ರವಿ ಮಾವಿನಕುಂಟೆ ಅವರನ್ನು ಸನ್ಮಾನಿಸಿ ಗೌರವಿಸಿದರು

    ಮುಖಂಡರಾದ ಹನುಮಂತರಾಯಪ್ಪ ಮಾತನಾಡಿ ಸರಳ ಸಜ್ಜನಿಕೆಯ ನಮ್ಮ ನೆಚ್ಚಿನ ನಾಯಕರು ಹಾಗು ಖ್ಯಾತ ವಕೀಲರಾದ ರವಿ ಮಾವಿನಕುಂಟೆ ಅವರ ವಿಶೇಷ ದಿನವನ್ನು ಅತ್ಯಂತ ಸರಳ ಹಾಗೂ ವಿಶೇಷವಾಗಿ ವಯೋವೃದ್ಧರಿಗೆ ಹೊದಿಕೆ ,ಶಾಲಾಮಕ್ಕಳಿಗೆ ಹಾಲು ಮತ್ತು ನೋಟ್ ಬುಕ್ ವಿತರಣೆ ,ಮಹಿಳೆಯರಿಗೆ ವಸ್ತ್ರ ವಿತರಣೆ ಜೊತೆಗೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಿದ್ದೇವೆ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ ಮಲ್ಲೇಶ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು .

    ಮುಖಂಡರಾದ ಗಿರೀಶ್ ಮಾತನಾಡಿ ವಿಶೇಷ ದಿನವನ್ನು ಇತರರಿಗೆ ಸಹಾಯ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರವಿ ಮಾವಿನಕುಂಟೆಯವರಿಗೆ ಶುಭವಾಗಲಿ ,ನಿರಂತರ ದಾಸೋಹಕ್ಕೆ ದಾನಿಗಳ ಅವಶ್ಯಕತೆ ಇದೆ ಹಾಗಾಗಿ ದಾನಮಾಡಲು ಇಚ್ಛಿಸುವ ದಾನಿಗಳು ಮಲ್ಲೇಶ್ ಅವರನ್ನು ಸಂಪರ್ಕಿಸುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸಿ ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಮುಖಂಡರಾದ ಜಿ.ರಂಗಸ್ವಾಮಿ ,ಸೆಲ್ವಂ ,ಹನುಮಂತರಾಯಪ್ಪ , ಫರ್ದಿನ್ ಖಾನ್ ,ಕುರುಬರಹಳ್ಳಿ ಗಿರೀಶ್ ಸೇರಿದಂತೆ ಹಲವರು ಹಾಜರಿದ್ದರು .

  • ರಾತ್ರೋರಾತ್ರಿ ಮನೆ ನೆಲಸಮ : ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಕಣ್ಣೀರಿಟ್ಟ ಮನೆಮಾಲೀಕ

    ದೊಡ್ಡಬಳ್ಳಾಪುರ : ವಾಸವಿದ್ದ ಮನೆಯನ್ನು ಯಾವುದೇ ಮಾಹಿತಿ ನೀಡದೆ ಏಕಾಏಕಿ ಜೆಸಿಪಿಯಿಂದ ಧ್ವಂಸಗೊಳಿಸಿರುವ ಘಟನೆ ತಾಲ್ಲೂಕಿನ ಹೊರವಲಯ ವೀರಪುರದಲ್ಲಿ ನೆಡೆದಿದೆ.

     

    ವೀರಪುರ ಗ್ರಾಮದ ಸರ್ವೇ ನಂಬರ್ 115 ರಲ್ಲಿ ವಿಶ್ವನಾಥ್ ಎಂಬುವರ ಮನೆಯನ್ನು ಜೆಸಿಬಿ ಯಿಂದ ನೆಲಸಮ ಮಾಡಲಾಗಿದೆ.

     

    ಮನೆಯಲ್ಲಿದ್ದ ವಸ್ತುಗಳು, ಅಡುಗೆ ಪಾತ್ರೆಗಳು ಸಂಪೂರ್ಣ ಹಾಳಾಗಿದ್ದು , ತಾವು ಸಾಕಿದ್ದ ಕೋಳಿಗಳು ಗೋಡೆ ಕೆಳಗೆ ಸಿಲುಕಿ ಸಾವನಪ್ಪಿವೆ ಗೋಡೆ ಬಿದ್ದ ಪರಿಣಾಮ ಮೇಕೆ ಮರಿಯ ಕಾಲು ಮುರಿದಿದೆ ಎಂದು ವಿಶ್ವನಾಥ್ ಕಣ್ಣೀರು ಹಾಕಿದ್ದಾರೆ.

     

    ನೆನ್ನೆ ತಡ ರಾತ್ರಿ ಒತ್ತುವರಿ ಮಾಡಲಾಗಿದೆ ಎಂದು ಕೆಲ ಕಿಡಿಗೇಡಿಗಳು ಮನೆಯಲ್ಲಿ ಇದ್ದ ವಯಸ್ಸಾದ ನನ್ನ ತಾಯಿಯನ್ನು ಹೊರದಬ್ಬಿ ಈ ಕೃತ್ಯ ನೆಡೆಸಿದ್ದಾರೆ .ಈ ಜಾಗದ ವಿಚಾರವಾಗಿ ಹಲವಾರು ಬಾರಿ ಮನವಿ ಮಾಡಿದ್ದೇವೆ , ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಂಟಿ ಸರ್ವೇ ಮಾಡಿರುವ ಸಲಹೆ ನೀಡಿದ್ದೆವು ಆದರೆ ಅವರು ಒಪ್ಪುತ್ತಿಲ್ಲ ,ನೆನ್ನೆ ರಾತ್ರಿ ಮನೆಗೆ ನುಗ್ಗಿ ವಾಸವಿದ್ದ ಮನೆಯನ್ನು ಸಂಪೂರ್ಣ ನೆಲಸಮ ಮಾಡಿದ್ದಾರೆ ಎಂದರು .

     

    ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

  • ವೃತ್ತಿಯಲ್ಲಿ ವಕೀಲರಾದರು ಕನ್ನಡ ನಾಡು, ನುಡಿ ಹಾಗೂ ಜಲ ವಿಚಾರವಾಗಿ ರವಿ ಮಾವಿನಕುಂಟೆ ಸದಾ ಮುಂದು – ಕರವೇ ಪುರುಷೋತ್ತಮ್

    ದೊಡ್ಡಬಳ್ಳಾಪುರ : 46ನೇ ವಸಂತಕ್ಕೆ ಕಾಲಿಡುತ್ತಿರುವ ತಾಲೂಕಿನ ಸಮಾಜಸೇವಕರು,ಖ್ಯಾತ ವಕೀಲರು ಹಾಗೂ ಕನ್ನಡ ಪರ ಹೋರಾಟಗಾರರಾದ ರವಿ ಮಾವಿನಕುಂಟೆಯವರಿಗೆ ಕನ್ನಡಪರ ಹೋರಾಟಗಾರ ಕರವೇ ಪುರುಷೋತ್ತಮ್ ಗೌಡ ಶುಭಕೋರಿದ್ದಾರೆ .

     

    ಈ ಕುರಿತು ವಿಜಯ ಮಿತ್ರ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು ವೃತ್ತಿಯಲ್ಲಿ ವಕೀಲರಾದರು ಕನ್ನಡ ನಾಡು, ನುಡಿ ಹಾಗೂ ಜಲ ವಿಚಾರವಾಗಿ ಸದಾ ವಿಭಿನ್ನ ಶೈಲಿಯಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ತಮ್ಮ ನೇರ ನುಡಿ , ಕನ್ನಡ ಭಾಷಾಭಿಮಾನ ಸದಾ ಆಕರ್ಷಣೀಯ ಅವರಿಗೆ ತಾಯಿ ಭುವನೇಶ್ವರಿ ಮತ್ತಷ್ಟು ಶಕ್ತಿ ತುಂಬುವ ಮೂಲಕ ನಾಡು ನುಡಿಯ ಸೇವೆ ಮಾಡಲು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

     

    ನಾರಾಯಣಗೌಡರ ವೇದಿಕೆಯ ಕರವೇ ಸದಾ ಕನ್ನಡ ಭಾಷೆಯ ಉಳಿಯುವುದಾಗಿ ಹೋರಾಡುವ ಯಾವುದೇ ಹೋರಾಟಗಾರರನ್ನು ನಮ್ಮವರೇಂದು ಭಾವಿಸುತ್ತದೆ ಅಂತೆಯೇ ಖ್ಯಾತ ವಕೀಲದ ರವಿ ಮಾವಿನಕುಂಟೆಯವರಿಗೆ ನಮ್ಮ ಕರವೇ ತಂಡದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ ಅವರಿಗೆ ಶುಭವಾಗಲಿ ಎಂದು ತಿಳಿಸಿದ್ದಾರೆ.

  • ದುಶ್ಚಟ ಮುಕ್ತ ಸಮಾಜಕ್ಕಾಗಿ ನಾಳೆ ಜನ ಜಾಗೃತಿ ಜಾಥಾ

    ದೊಡ್ಡಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಗಾಂಧಿ ಜಯಂತಿ ಅಂಗವಾಗಿ ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜದ ನಿರ್ಮಾ ಣಕ್ಕಾಗಿ ಬೃಹತ್ ಜನ ಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭ ಅ. 11(ನಾಳೆ )ರಂದು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕ ಉಮರಬ್ಬ ತಿಳಿಸಿದ್ದಾರೆ.

     

    ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜವನ್ನು ದುಶ್ಚಟಮುಕ್ತವಾಗಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ಮದ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದ ಗಣ್ಯರ ಸಹಭಾಗತ್ವದಲ್ಲಿ ರಾಜ್ಯಮಟ್ಟದ ಜನ ಜಾಗೃತಿ ವೇದಿಕೆ ಸ್ಥಾಪಿಸಿ `ಗಣ್ಯರ ಸಹಭಾಗಿತ್ವದಲ್ಲಿ ದಶ್ಚಟಗಳ ಅನಾಹುತಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

     

    ಅ.2 ಗಾಂಧಿ ಜಯಂತಿ ಅಂಗವಾಗಿ ಮದ್ಯ ವಿರೋಧಿ ಜಾಥಾ, ಜನಜಾಗೃತಿ ಸಮಾವೇಶ ಏರ್ಪಡಿಸಲಾಗುತ್ತಿದೆ. ಇದುವರೆಗೆ ಯೋಜನೆಯ ವತಿಯಿಂದ 1985ಕ್ಕೂ ಹೆಚ್ಚು ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಲಾಗಿದೆ ಇದರಲ್ಲಿ 1.3 ಲಕ್ಷ ಶಿಬಿರಾರ್ಥಿಗಳು ಮದ್ಯ ವರ್ಜಿಸಿದ್ದಾರೆ ಎಂದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈವರೆಗೆ 36 ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಿ 2082 ಶಿಬಿರಾರ್ಥಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ 719 ಸ್ವಾಸ್ತ್ರ ಸಂಕಲ್ಪ ಕಾರ್ಯಕ್ರಮ ಹಾಗೂ ದುಶ್ಚಟ ವಿವಿಧ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ರಾಜ್ಯದಲ್ಲಿ 50 ಗ್ರಾಮಗಳನ್ನು ಪಾನಮುಕ್ತ ಗ್ರಾಮವನ್ನಾಗಿ ಮಾಡಿದ್ದು, ಮದ್ಯಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಕ್ರಮ ವಹಿಸಬೇಕು. ಶಾಲಾ ಕಾಲೇಜುಗಳ ಬಳಿ ಕಡ್ಡಾಯವಾಗಿ ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದು ಒತ್ತಾಯಿಸಲಾಗುತ್ತಿದೆ ಎಂದರು.

     

    ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ನಾಗೇಶ್ ಮಾತನಾಡಿ, ಅ.11 ರಂದು ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಬೃಹತ್ ಜನ ಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭ ನಡೆಯಲಿದೆ.ಅ 11ರ ಬೆಳಗ್ಗೆ 9 ಗಂಟೆಗೆ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಜಾಗೃತಿ ಜಾಥಾ ನಡೆಯಲಿದೆ. ಎಂದರು.

     

    ಕಾರ್ಯಕ್ರಮದಲ್ಲಿ ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಶಾಸಕ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಗಣ್ಯರಾದ ಕೆ.ಎಂ.ಹನುಮಂತರಾಯಪ್ಪ ಡಿವೈ ಎಸ್‌ಪಿ ರವಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

     

    ಸುದ್ದಿಗೋಷ್ಠಿಯಲ್ಲಿ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೆಂಪಣ್ಣ ಮುಖಂಡರಾದ ಟಿ.ಜಿ.ಮಂಜುನಾಥ್, ರವಿ, ತಾಲೂಕು ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕ ಲೋಹಿತ್ ಹಾಜರಿದ್ದರು.

  • 2023-25 ನೇ ಸಾಲಿನ ಪದವಿ ಪ್ರದಾನ ಕಾರ್ಯಕ್ರಮ : ಅತಿಹೆಚ್ಚು ಅಂಕಗಳನ್ನು ಗಳಿಸಿ ಬಂಗಾರದ ಪದಕ ಪಡೆದ ವರ್ಷಿಣಿGraduation Ceremony 2023-25: Anniversary of receiving the gold medal with the highest marks

    ದೊಡ್ಡಬಳ್ಳಾಪುರ : ಎಂ ಎಸ್ ರಾಮಯ್ಯ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ 2023-25 ನೇ ಸಾಲಿನ ಪದವಿ ಪ್ರದಾನ ಕಾರ್ಯಕ್ರಮ ನೆರವೇರಿದ್ದು ತಾಲ್ಲೂಕಿನ ವರ್ಷಿಣಿ ಎಸ್ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ತಂತ್ರಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಬಂಗಾರದ ಪದಕ ಪಡೆದಿದ್ದಾರೆ .

     

     

    ನಗರದ ಪಾಲನಾಜೋಗಿಹಳ್ಳಿ ಯಾ ನಿವಾಸಿಯಾಗಿರುವ ಎಸ್ .ವರ್ಷಿಣಿ ಈ ಸಾಧನೆ ಮಾಡಿರುವುದು ಕೇವಲ ಕುಟುಂಬಕ್ಕಷ್ಟೇ ಅಲ್ಲದೆ ತಾಲ್ಲೂಕು ಹಾಗೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಂದೆ ಶ್ರೀಧರ್ ವಿ ಹಾಗೂ ತಾಯಿ ಲಾವಣ್ಯ ಕೆ ಹರ್ಷವ್ಯಕ್ತಪಡಿಸಿದ್ದಾರೆ .

     

    ಈ ಕುರಿತು ವಿದ್ಯಾರ್ಥಿ ವರ್ಷಿಣಿ ಮಾತನಾಡಿ ನಾನು ಉತ್ತಮ ಅಂಕಗಳನ್ನು ಗಳಿಸಲು ನಮ್ಮ ಕಾಲೇಜಿನ ಉಪನ್ಯಾಸಕರ ಶ್ರಮ ಸಾಕಷ್ಟಿದೆ ಅಲ್ಲದೆ ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣವಿದ್ದು ನನ್ನ ತಂದೆ ತಾಯಿಯ ಸಹಕಾರದಿಂದಾಗಿ ಇಂದು ಈ ಪುರಸ್ಕಾರ ಲಭಿಸಿದೆ . ನಿರಂತರ ಅಭ್ಯಾಸ ಹಾಗೂ ಉತ್ತಮ ಬೋಧನೆ ಇಂದಿನ ಈ ಗೌರವಕ್ಕೆ ಕಾರಣ ಎಂದರು .

    ಈ ಸಂದರ್ಭದಲ್ಲ್ಲಿ HAJ ಚಿಕನ್ ಸೆಂಟರ್ ಮಾಲಿಕರಾದ ಅಂಬರೀಶ್.ಕೆ ಅವರು ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದ ಚಿನ್ನದ ಪದಕ ವಿಜೇತೆ ವರ್ಷಿಣಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

     

     

    ಈ ಸಂದರ್ಭದಲ್ಲಿ ಎಚ್ ಎ ಜೆ ಚಿಕನ್ ಸೆಂಟರ್ ಮಾಲಿಕರಾದ ಅಂಬರೀಶ್ ಮಾತನಾಡಿ ವರ್ಷಿಣಿ ಕಠಿಣ ಪರಿಶ್ರಮ ಹಾಗೂ ಸಾಧನೆಯಿಂದಾಗಿ ಚಿನ್ನದ ಪದಕ ಪಡೆಯುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಮ್ಮೆ ಹೆಚ್ಚಿಸಿದ್ದಾರೆ. ಬೋಧಕ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಮುಂದೆ ಪಿ ಎಚ್ ಡಿ ಮಾಡುವ ಉದ್ದೇಶ ಹೊಂದಿದ್ದಾರೆ ಮುಂದೆ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯದ ಹಿರಿಮೆ ಹೆಚ್ಚಿಸುವಂತಗಲಿ ಎಂದು ಶುಭ ಹಾರೈಸಿದ್ದಾರೆ.

  • ದೀಪಾವಳಿ ಹಬ್ಬ: ಪಟಾಕಿ ಮಾರಾಟಕ್ಕೆ ಅನುಮತಿ ಕಡ್ಡಾಯ

    ದೀಪಾವಳಿ ಹಬ್ಬದ ಸಂಭ್ರಮ ಸಮೀಪಿಸಿದ್ದು, ಜಿಲ್ಲೆಯಲ್ಲಿ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ಕಲ್ಪಿಸಲಾಗಿದ್ದು ಸುರಕ್ಷಿತ ಕ್ರಮಗಳೊಂದಿಗೆ ಪಟಾಕಿ ಮಾರಾಟ ಮಾಡಲು ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಟಾಕಿ ಮಾರಾಟ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಜಿಲ್ಲೆಯಾದ್ಯಂತ ಯಾವುದೇ ಭಾಗದಲ್ಲಿ ಪಟಾಕಿ ದುರಂತಗಳು ಸಂಭವಿಸದಂತೆ ಪಟಾಕಿ ಮಾರಾಟಗಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಸೂಚಿಸಿದರು.

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಹಸಿರು ಪಟಾಕಿಯನ್ನು ಬಳಸಿ, ವಾಯುಮಾಲಿನ್ಯ ತಡೆಯಬೇಕು ಎಂದು ಸಲಹೆ ನೀಡಿದರು.

    ಜಿಲ್ಲೆಯಲ್ಲಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ಮಾಡುತ್ತಿದ್ದಲ್ಲಿ, ಕೂಡಲೇ ಅದನ್ನು ಪರಿಶೀಲಿಸುವ ಜತೆಗೆ ಅಲ್ಲಿ ಹಸಿರು ಪಟಾಕಿಯಲ್ಲದೆ, ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮು ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರುಗಿಸಲಾಗುವುದು . ಜಿಲ್ಲೆಯಲ್ಲಿ ಪಟಾಕಿ ಮಾರಾಟ ಮಳಿಗೆಗಳಲ್ಲಿ ಅನಧಿಕೃತವಾಗಿ ಪಟಾಕಿ ಸಂಗ್ರಹಣೆ ಮಾಡಿಕೊಂಡರೆ, ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಪೊಲೀಸರು ಪರಿಶೀಲನೆ ನಡೆಸಬೇಕು ಎಂದರು.

    ಹಬ್ಬದ ಸಂದರ್ಭದಲ್ಲಿ ರಾತ್ರಿ 08 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದು ಸಂಪೂರ್ಣ ನಿಷೇಧಿಸಿದೆ. ಹಸಿರು ಪಟಾಕಿಗಳನ್ನು ಬಿಟ್ಟು ಯಾವುದೇ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಧಿಸಿದೆ ಎಂದು ಹೇಳಿದರು.

    ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶಾಧಿಕಾರಿ ರಮೇಶ್, ಡಿವೈಎಸ್ಪಿ ರವಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ:ಅ. 18 ರವರೆಗೆ ಅವಧಿ ವಿಸ್ತರಣೆ :ಜಿಲ್ಲೆಯಲ್ಲಿ ಶೇ.79% ಸಮೀಕ್ಷೆ ಕಾರ್ಯ ಪೂರ್ಣ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

    ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಲಾಗಿದ್ದು ಪ್ರಸ್ತುತ ಜಿಲ್ಲೆಯಲ್ಲಿ ಶೇಕಡ 79.19% ರಷ್ಟು ಕುಟುಂಬಗಳ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ತಿಳಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ಹಾಗೂ ಯಾರೊಬ್ಬರೂ ಕೂಡ ಸಮೀಕ್ಷೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸಮೀಕ್ಷೆ ಅವಧಿ ವಿಸ್ತರಿಸಲಾಗಿದೆ. ನಿಗದಿತ ಅವಧಿಯೊಳಗೆ ಜಿಲ್ಲೆಯಲ್ಲಿ ಶೇಕಡ 100ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

    ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಅಂದಾಜಿಸಿದಂತೆ ಅಂಕಿಅಂಶಗಳ ವರದಿ ಪ್ರಕಾರ ಜಿಲ್ಲೆಯಲ್ಲಿ 3,85,237 ಕಟುಂಬಗಳಿದ್ದು 12,26,357 ಜನಸಂಖ್ಯೆ ಇದೆ. ಇದುವರೆಗೆ 2,65,119 ಕುಟುಂಬಗಳ 9,03,742 ಜನರ ಸಮೀಕ್ಷೆ ನಡೆಸಲಾಗಿದ್ದು ಶೇಕಡ 79.19% ರಷ್ಟು ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

    ನಿರ್ಭೀತಿಯಿಂದ ಸಮೀಕ್ಷೆಗೆ ಸಹಕರಿಸಿ:-ದತ್ತಾಂಶ ಸಂಗ್ರಹಣೆಯು ರಾಜ್ಯದ ಅಭಿವೃದ್ಧಿಗೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶವಾಗಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ಸಮೀಕ್ಷೆಯ ದತ್ತಾಂಶ ಗೌಪ್ಯತೆ ಕಾಪಾಡಲಿದೆ. ಜೊತೆಗೆ ದತ್ತಾಂಶವು ಸೋರಿಕೆ ಆಗುವುದಿಲ್ಲ. ಸಾರ್ವಜನಿಕರು ನಿರ್ಭಿತಿಯಿಂದ ಸಮೀಕ್ಷೆಗೆ ಸಹಕರಿಸಿ ಗಣತೀದಾರರಿಗೆ ಮಾಹಿತಿ ನೀಡಿ ಎಂದರು.

    ಸಮೀಕ್ಷೆ ಕುರಿತಂತೆ 6000 ಸ್ವಸಹಾಯ ಗುಂಪುಗಳ ಮಹಿಳೆಯರಿಂದ ಗ್ರಾಮಗಳಲ್ಲಿ ಅರಿವು ಮೂಡಿಸಲಾಗಿದೆ, ನಗರಸಭೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಚತಾ ವಾಹಿನಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ಬಾಕಿ ಉಳಿದಿರುವ ಸಾರ್ವಜನಿಕರು ಸಮೀಕ್ಷೆಯಲ್ಲಿ ಭಾಗವಹಿಸಿ ಸಮೀಕ್ಷೆ ಯಶಸ್ಸಿಗೆ ಸಹಕರಿಸಿ ಎಂದರು.

    ಸಹಾಯವಾಣಿ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರಲಿದ್ದಾರೆ ಗಣತಿದಾರರು:-ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಸಮೀಕ್ಷೆಯಲ್ಲಿ ಬಿಟ್ಟು ಹೋದ ಕುಟುಂಬಗಳು, ಭಾಗವಹಿಸದೇ ಇರುವವರು ಸಹಾಯವಾಣಿ ಸಂಪರ್ಕಿಸಿದರೆ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬಂದು ಸಮೀಕ್ಷೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ 05 (Help Line) ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಜಿಲ್ಲಾ ಹಿಂದುಳಿದ ವರ್ಗಗಳ ಕಛೇರಿ ದೂರವಾಣಿ ಸಂಖ್ಯೆ 080-22449999, ದೇವನಹಳ್ಳಿ-9036858653, ದೊಡ್ಡಬಳ್ಳಾಪುರ-8884579990, ಹೊಸಕೋಟೆ-080-27931104, ನೆಲಮಂಗಲ-9740100884. ಈ ಸಹಾಯವಾಣಿಯನ್ನು ಬೆಳಿಗ್ಗೆ 7.00 ರಿಂದ ಸಂಜೆ 7.00 ರವರೆಗೆ ಸಂಪರ್ಕಿಸಿ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಶ್ರೀ ಹೆಂಡೇಗಾರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಲಕ್ಷ್ಮಿಕಾಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಇತರರು ಉಪಸ್ಥಿತರಿದ್ದರು.