Blog

  • “ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬದ ಆಚರಣೆ”

    ದೊಡ್ಡಬಳ್ಳಾಪುರ : ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು ವಿವಿಧ ವೇಷಭೂಷಣ ತೊಟ್ಟು ನೃತ್ಯ ಪ್ರದರ್ಶನ ಮಾಡಿದರು.

    ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಟಿಎಪಿಸಿಎಂಎಸ್ ನಿರ್ದೇಶಕರಾದ ವಿಶ್ವಾಸ್ ಹನುಮಂತೇಗೌಡ ರವರು ಮಾತನಾಡಿ ದೇಶದ ಮೂಲೆ ಮೂಲೆಯಲ್ಲೂ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರುಗಳಿಂದ ಆಚರಣೆ ಮಾಡಲಾಗುತ್ತದೆ. ನಮ್ಮ ರಾಜ್ಯದ ರೈತರು ಈ ಹಬ್ಬವನ್ನು ಸುಗ್ಗಿ ಹಬ್ಬವೆಂದು ಸಂತೋಷ ಸಡಗರದಿಂದ ಆಚರಣೆ ಮಾಡುತ್ತಾರೆ.

    Ad

    ಸಂಕ್ರಾಂತಿ ಹಬ್ಬವು ವರ್ಷದ ಮೊದಲನೆ ಹಬ್ಬವಾಗಿದೆ ಈ ಹಬ್ಬದ ವಿಶೇಷವೆಂದರೆ ಕಬ್ಬು ಅವರೆ ಕಾಯಿ ಗೆಣಸು ಮೊದಲಾದ ವಸ್ತುಗಳನ್ನು ರಾಗಿರಾಶಿಯ ಮುಂದೆ ಇಟ್ಟು ಪೂಜೆ ಮಾಡುತ್ತಾರೆ ಜೊತೆಗೆ “ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡು”ಎಂಬ ನಾಣ್ಣುಡಿ ಯಂತೆ ಎಲ್ಲರೂ ಒಳ್ಳೇಯ ಅಭ್ಯಾಸವನ್ನು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.

    ಈ ಸಂಕ್ರಾಂತಿ ಹಬ್ಬವನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಯಶೋಧಮ್ಮ ಹನುಮಂತೇ ಗೌಡ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು

     

    ಕಾರ್ಯಕ್ರಮದಲ್ಲಿ ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ ಸಿ ಮಂಜುನಾಥ್ ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ ಕೃಷ್ಣಮೂರ್ತಿ ಉಪನ್ಯಾಸಕರಾದ ಮಹಾದೇವ ಎನ್ ರಶ್ಮಿ, ಅನುಷಾ, ಹರ್ಷಿತಾ, ಗಂಗಮೂರ್ತಿ, ರಾಕೇಶ್, ಅನು,ಮೀನಾ,ಮುಖ್ಯ ಶಿಕ್ಷಕ ಅರುಣ್ ಕುಮಾರ್ ,ದೈಹಿಕ ಶಿಕ್ಷಕ ಅರುಣ್ ಸೇರಿದಂತೆ ಎಲ್ಲಾ ವಿಭಾಗಗಳ ಶಿಕ್ಷಕರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಹಣಬೆ ಕೆರೆಗೆ ನೀರು ತುಂಬಿಸಿ ಇಲ್ಲಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ – ಕೆ ಎಸ್ ರವಿ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಬೆ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಇಂದು(ಜ. 13) ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಹಣಬೆ VSSN ಅಧ್ಯಕ್ಷರಾದ ಕೆ ಎಸ್ ರವಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ ಮುನಿರಾಜು, ಹೆಚ್ ಸಿ ಹರೀಶ್, ಹಣಬೆ ವಿ ಎಸ್ ಎಸ್ ಎನ್ ಕಾರ್ಯದರ್ಶಿ ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

    ಈ ವೇಳೆ ಕೆ ಎಸ್ ರವಿ ಮಾತನಾಡಿ  ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ, ಸ್ಥಳೀಯ ಶಾಸಕರಾದ ಧೀರಜ್ ಮುನಿರಾಜು, ನಿಕಟ ಪೂರ್ವ ಶಾಸಕರಾದ ಟಿ ವೆಂಕಟರಮಣಯ್ಯ ಮತ್ತು ಆರ್ ಡಿ ಪಿ ಆರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿರುವಂತೆ ತಾಲ್ಲೂಕಿನ 05 ಕೆರೆಗಳನ್ನು ಗುರುತಿಸಲಾಗಿದೆ. ಈ ಆಯ್ಕೆ 5 ಕೆರೆಗಳಿಂದ ಕುಡಿಯುವ ನೀರನ್ನು ಕಲ್ಪಿಸುವ ವರದಿ (Feasibality Report )ತಯಾರಿಕೆಯ ಹಂತದಲ್ಲಿದ್ದು. ಸದರಿ 05 ಕರೆಗಳಲ್ಲಿ ಹಣಬೆ ಕೆರೆಯೂ ಸೇರಿದೆ, ಹಣಬೆ ಕೆರೆಗೆ ನೀರು ತುಂಬಿಸಿ ಇಲ್ಲಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು


    ಈ ವೇಳೆ ಹಣಬೆ ಗ್ರಾಮದ ಮುಖಂಡರಾದ ಮಲ್ಲ ರಾಜು,ಮುನಿರಾಜು, ರಾಮಕೃಷ್ಣಪ್ಪ, ಜಗದೀಶ್ ಸ್ಥಳೀಯ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.

    Ad

  • ಪಿ ಎಸ್ ಎನ್ (PSN ) ವತಿಯಿಂದ ಚಾಲಕರಿಗೆ ಸುರಕ್ಷತಾ ತರಬೇತಿ ಹಾಗೂ ವಾಹನ ತಾಂತ್ರಿಕ ವಿಷಯಗಳ ಬಗ್ಗೆ ಅರಿವು ಕಾರ್ಯಾಗಾರ 

    ದೊಡ್ಡಬಳ್ಳಾಪುರ : ತಾಲ್ಲೂಕಿನ ಹೆಸರಾಂತ ಇಚರ್(EICHER) ಟ್ರಕ್ ಮಾರಾಟ ಸಂಸ್ಥೆಯಾದ ಪಿ ಎಸ್ ಎನ್ (PSN ) ವತಿಯಿಂದ ಚಾಲಕರಿಗೆ ಸುರಕ್ಷತಾ ತರಬೇತಿ ಹಾಗೂ ಇಚರ್ 6048 ಎಕ್ಸ್ ಪಿ 16 ಚಕ್ರದ ವಾಹನ ಹಾಗೂ ಇತರೆ ವಾಹನಗಳ ತಾಂತ್ರಿಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಲ್ಲಿನ ಬಿರ್ಲಾ ಸೂಪರ್ ಮತ್ತು ಅಲ್ಟ್ರಾಟೆಕ್ ಲಿಮಿಟೆಡ್ ನಲ್ಲಿ ಆಯೋಜನೆ ಮಾಡಲಾಗಿತ್ತು.

    ಕಾರ್ಯಕ್ರಮದಲ್ಲಿ ಪಿ ಎಸ್ ಎನ್ (PSN) ದೊಡ್ಡಬಳ್ಳಾಪುರ ಘಟಕದ ವ್ಯವಸ್ಥಾಪಕರಾದ ಯುವರಾಜ್ ಭಾಗವಹಿಸಿ ಮಾತನಾಡಿದರು ಚಾಲಕರಿಗೆ ಕೇವಲ ಚಾಲನೆ ಬಗ್ಗೆ ತಿಳುವಳಿಕೆ ಇದ್ದರೆ ಸಾಲದು ಜೊತೆಗೆ ವಾಹನದ ಬಗ್ಗೆ, ವಾಹನದ ತಾಂತ್ರಿಕ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದಾಗಲೇ ಉತ್ತಮ ವಾಹನ ಚಾಲಕರಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

    ಚಾಲಕರ ಸುರಕ್ಷತೆ ಅತ್ಯಂತ ಅವಶ್ಯಕ ವಾಹನ ಚಲಾಯಿಸುವಾಗ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ , ಮಧ್ಯಪಾನ ಸೇವಿಸಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು , ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಬಾರದು. ಸೀಟ್ ಬೆಲ್ಟ್ ಧರಿಸಿ ಚಾಲನೆ ಮಾಡುವಾಗ ನಿಯಮಿತ ವೇಗವನ್ನು ಕಾಪಾಡಿಕೊಳ್ಳುವ ಮೂಲಕ ಚಾಲಕರು ಸುರಕ್ಷತೆಯಿಂದ ಕರ್ತವ್ಯ ನಿರ್ವಹಿಸುವುದನ್ನು ರೂಡಿಸಿಕೊಳ್ಳಬೇಕು. ನಿಮಗಾಗಿ ನಿಮ್ಮ ಕುಟುಂಬ ಮನೆಯಲ್ಲಿ ಕಾಯುತ್ತಿದೆ ಎಂಬುದು ಎಂದಿಗೂ ಮರೆಯಬಾರದು ಎಂದರು.

    ಈ ವೇಳೆ ಇಚರ್ 16-ಚಕ್ರದ ಟ್ರಕ್‌(Eicher 16-wheeler trucks) ವಾಹನದ ಕಾರ್ಯ ವೈಖರಿ ಹಾಗೂ ಸಾಮರ್ಥ್ಯದ ಬಗ್ಗೆ ನೆರೆದಿದ್ದ ಚಾಲಕರಿಗೆ ಮಾಹಿತಿ ನೀಡಲಾಯಿತು.ಈ ಕುರಿತು ಮಾತನಾಡಿದ ಅವರು ಪ್ರಮುಖವಾಗಿ Eicher Pro 6048 ನಂತಹ ಮಾದರಿಗಳು 48-ಟನ್ ಸಾಮರ್ಥ್ಯ, BS-VI ಇಂಜಿನ್, 300hp ಶಕ್ತಿ ಮತ್ತು 1200 Nm ಟಾರ್ಕ್ ಹೊಂದಿದ್ದು, ದೀರ್ಘ-ಪ್ರಯಾಣದ ಸಾರಿಗೆಗೆ ಸೂಕ್ತವಾಗಿವೆ. ಇವುಗಳು ಇಂಧನ-ಸಮರ್ಥ VEDX8 ಇಂಜಿನ್‌ನೊಂದಿಗೆ ಬಲವಾದ ಕಾರ್ಯಕ್ಷಮತೆ ನೀಡುತ್ತವೆ ಮತ್ತು ವಿವಿಧ ಟಿಪ್ಪರ್, ಹೌಲೇಜ್ ಮಾದರಿಗಳಲ್ಲಿ ಲಭ್ಯವಿದೆ ಎಂದರು.

    ಈ ಸಂದರ್ಭದಲ್ಲಿ ಪಿ ಎಸ್ ಎನ್ ಸಂಸ್ಥೆಯ ಮಾರಾಟ ವಿಭಾಗದ ವ್ಯವಸ್ಥಾಪಕರಾದ ಅಭಿಜಿತ್, ಸಿಬ್ಬಂದಿಗಳಾದ ಜೈರಾಜ್ ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು .

     

     

     

  • ಜ. 09 ರಿಂದ ಕರಾಮುವಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿ ಪ್ರಾರಂಭ

     

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ರ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ.

     

    ಸ್ನಾತಕ ಕೋರ್ಸುಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಎಸ್ಸಿ, ಬಿ.ಲಿಬ್.ಐ.ಎಸ್ಪಿ ಮತ್ತು ಸ್ನಾತಕೋತ್ತರ ಕೋರ್ಸುಗಳಾದ ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ, ಎಂ.ಎಸ್ಸಿ, ಎಂ.ಲಿಬ್.ಐ.ಎಸ್ಸಿ ಹಾಗೂ ಯುಜಿ/ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳಿಗಾಗಿ ಜ. 09 ರಿಂದ ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಬಾಪೂಜಿನಗರ ಇಲ್ಲಿ ಆನ್ ಲೈನ್ ಮೂಲಕ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದ್ದು, ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ www.ksoumysuru.ac.in ದಲ್ಲಿ ಪ್ರವೇಶಾತಿಗೆ ಲಾಗಿನ್ ಮಾಡಬಹುದು.

    Ad

    ಅಸಕ್ತ ಅರ್ಹ ವಿದ್ಯಾರ್ಥಿಗಳು online ನಲ್ಲಿ ಅರ್ಜಿ ಸಲ್ಲಿಸಿ ನಂತರ ಅಗತ್ಯ ದಾಖಲಾತಿಗಳೊಂದಿಗೆ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ, ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಚೇರಿ ದೂ. 080-26603664 ಅಥವಾ 9880526439/ 9019526439 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

    ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ‌ ಶಾಲೆ ದೇವನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು, (ರಾಜ್ಯ ಪಠ್ಯಕ್ರಮ) ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ) ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾಲ್ಲೂಕು ಇಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     

    ಅರ್ಜಿಗಳನ್ನು https://sevasindhuservices.karnataka.gov.in ಲಿಂಕ್ ಮೂಲಕ 10-02-2026 ರೊಳಗಾಗಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

    Ad

    ಈ ಶಾಲೆಗಳಲ್ಲಿ ಶೇ.75ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧಿಕ, ಸಿಖ್, ಪಾರ್ಸಿ) ಹಾಗೂ ಶೇ. 25ರಷ್ಟು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಅನುಗುಣವಾಗಿ ಹಾಗೂ ರೋಸ್ಟರ್ ನಿಯಮದಂತೆ ಪ್ರವೇಶ ನೀಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ (ರಾಜ್ಯ ಪಠ್ಯಕ್ರಮ), ದೇವನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು, ಮೊಬೈಲ್ ಸಂಖ್ಯೆ- 9632249214/ 9538384846, ಪ್ರಾಂಶುಪಾಲರು, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ (ಸಿ.ಬಿ.ಎಸ್.ಸಿ) ಗಿಡ್ಡಪ್ಪನಹಳ್ಳಿ ಹೊಸಕೋಟೆ ತಾಲ್ಲೂಕು, ದೂರವಾಣಿ ಸಂಖ್ಯೆ- 8660971267/ 8317403213,

    ತಾಲ್ಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಛೇರಿ, ಹೊಸಕೋಟೆ ಮತ್ತು ತಾಲ್ಲೂಕು ಮಾಹಿತಿ ಕೇಂದ್ರ, ವಿಜಯಪುರ ದೇವನಹಳ್ಳಿ ತಾ. ದೂರವಾಣಿ ಸಂಖ್ಯೆ-8861926851, 7676905779, 8310103980, 9845622337, 9986874875, 8904491033, ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಛೇರಿ ನಂ. 216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ-562110. ದೂರವಾಣಿ ಸಂಖ್ಯೆ- 080-29787455 ಸಂಪರ್ಕಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ‌ಅಧಿಕಾರಿಗಳು ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

  • ಯುವ ಶಕ್ತಿ ದೇಶದ ಪ್ರಗತಿಗೆ ಪೂರಕವಾಗಿರಬೇಕು – ವಿಶ್ವಾಸ್ ಹನುಮಂತೇಗೌಡ

    ದೊಡ್ಡಬಳ್ಳಾಪುರ : ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು ಪದವಿ ಕಾಲೇಜು ಬಿಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು

     

    ಕಾರ್ಯಕ್ರಮದಲ್ಲಿ  ಲಾವಣ್ಯ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಟಿಎಪಿಸಿಎಂಎಸ್ ನಿರ್ದೇಶಕರಾದ ವಿಶ್ವಾಸ್ ಹನುಮಂತೇಗೌಡ ಭಾಗವಹಿಸಿ ಮಾತನಾಡಿದರು ಯುವ ಶಕ್ತಿ ದೇಶದ ಪ್ರಗತಿಗೆ ಪೂರಕವಾಗಿರಬೇಕು ಇಂದಿನ ಯುವ ಜನ ಸ್ವಾಮಿ ವಿವೇಕಾನಂದರ ಆಶಯಗಳನ್ನು ಅನುಷ್ಟಾನಕ್ಕೆ ತರುವ ಜವಾಬ್ದಾರಿ ಹೊರಬೇಕು ಎಂದು ಹೇಳಿದರು.

     

    ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ ಸ್ವಾಮಿ ವಿವೇಕಾನಂದರು ತತ್ವಜ್ಞಾನಿಗಳಾಗಿದ್ದರು “ವೇದದ ತತ್ವಗಳನ್ನು ಯೋಗ ಶಾಸ್ತ್ರವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.ಯುವಕರು ದೇಶದ ಆಸ್ಥಿ ಆದರೆ ಇಂದಿನ ಯುವ ಜನಾಂಗದಲ್ಲಿ ಶ್ರದ್ದೆ ಸಹನೆ ಶಾಂತಿ ಕಡಿಮೆಯಾಗಿದೆ ಎಂದು ಹೇಳಿದರು

     

    ಈ ವೇಳೆ ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ ಜಿ ಕೃಷ್ಣಮೂರ್ತಿ, ಉಪನ್ಯಾಸಕರಾದ ಕಾರ್ತಿಕ್ ಮಹಾದೇವ್,  ಎನ್ ರಶ್ಮಿ, ಅನುಷಾ, ಹರ್ಷಿತಾ, ಆಶಾ, ಗುರುಪ್ರಸಾದ್ ,ಗಂಗಮೂರ್ತಿ, ರಾಕೇಶ್ ,ಪರಿಮಳ, ಅನು, ಮೀನಾ, ಚಂದನ ,ಪ್ರಕಾಶ್, ಲತಾ  ಹಾಗೂ ಪದವಿ ಪದವಿ ಪೂರ್ವ ಹಾಗೂ ಬಿಎಡ್ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

  • ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ

    ದೊಡ್ಡಬಳ್ಳಾಪುರ:ದೇಶದ ಭವಿಷ್ಯವನ್ನು ಸದೃಢವಾಗಿಸುವ ಹೊಣೆಗಾರಿಕೆ ಹೊತ್ತ ಯುವಜನರು ಮಾದಕ ವ್ಯಸನದ ದಾಸ್ಯಕ್ಕೆ ಒಳಗಾಗಿ ತಮ್ಮ ಬದುಕನ್ನು ದುಸ್ತರವಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀಶೈಲ್‌ ಭೀಮಸೇನ್‌ ಬಾಗಡಿ ಹೇಳಿದರು.

    ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ನೇತೃತ್ವದಲ್ಲಿ ಬೆಂ.ಗ್ರಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಆರ್.ಎಲ್.ಜಾಲಪ್ಪ ಪಾಲಿಟೆಕ್ನಿಕ್‌ ಸಹಯೋಗದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ರಾಷ್ಟ್ರೀಯ ಯುವ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಸ್ವಾಮಿ ವಿವೇಕಾನಂದರು ತಮ್ಮ ಪ್ರಖರ ಚಿಂತನೆಗಳಿಂದ ಈ ದೇಶದ ಯುವಜನರನ್ನು ಪ್ರಭಾವಿಸಿದ್ದಾರೆ. ಇಂದು ದೇಶದಲ್ಲಿ ಶೇ.70ರಷ್ಟು ಜನಸಂಖ್ಯೆಯ ಯುವಜನರಿದ್ದಾರೆ. ಇದರಿಂದಾಗಿ ದೇಶ ಅತ್ಯಂತ ಸದೃಢವಾಗಿ ಮುನ್ನಡೆಯಲಿದೆ ಎಂಬ ಆಶಾಭಾವನೆ ಇದೆ. ಉತ್ಸಾಹ, ಸಾಧನೆಯ ಹಂಬಲ, ಸಮರ್ಪಣಾ ಮನೋಭಾವಗಳಿಂದ ನಾವು ಸಾಧನೆಯ ಹಾದಿಯಲ್ಲಿ ನಡೆಯುವ ಮಾರ್ಗಸೂಚಿ ನಮ್ಮ ಕಣ್ಣಮುಂದೆ ಇದೆ. ತಮ್ಮನ್ನು ತಾವು ಅರಿತುಕೊಳ್ಳುವ ಮೂಲಕ ಜಗತ್ತಿನ ಪರಮೋಚ್ಛ ಜ್ಞಾನವನ್ನು ತಮ್ಮದಾಗಿಸಿಕೊಳ್ಳಬಹುದು ಎಂಬ ಸಂದೇಶವನ್ನು ವಿವೇಕಾನಂದರು ಸಾರಿದರು ಎಂದು ತಿಳಿಸಿದರು.

    ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಜೆಎಂಎಫ್‌ಸಿ ಕ್ರಾಂತಿ ಕಿರಣ್‌ ಮಾತನಾಡಿ, ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಕಾನೂನು ಕಟ್ಟಲೆಗಳ ಮಿತಿಯಲ್ಲೇ ತನ್ನ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಹುಟ್ಟಿನ ಮುನ್ನವೇ ಕಾನೂನುಗಳು ವ್ಯಕ್ತಿಯನ್ನು ಆವರಿಸಲಿದ್ದು, ಮರಣಾನಂತರವೂ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹೀಗಾಗಿ ಸರಳ, ಸಹಜ ಕಾನೂನುಗಳ ಬಗ್ಗೆ ಅರಿವು ಅತ್ಯಗತ್ಯ. ವಿವಿಧ ಹಂತಗಳಲ್ಲಿ ಸುರಕ್ಷತೆ, ಜೀವನ ಭದ್ರತೆ ಹಾಗೂ ಭರವಸೆಯನ್ನು ನೀಡುವ ಕಾನೂನು ಜ್ಞಾನದ ಬಗ್ಗೆ ಯುವಜನತೆ ಅಗತ್ಯ ಅರಿವು ಹೊಂದಬೇಕು. ವಿವೇಕಾನಂದರ ಚಿಂತನೆ ಹಾಗೂ ಆಶಯಗಳನ್ನು ಸಾಕಾರಗೊಳಿಸಬೇಕು ಎಂದರು.

    ಶ್ರೀ ದೇವರಾಜ ಅರಸ್‌ ಎಜುಕೇಶನಲ್‌ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಸ್ವಾಮಿ ವಿವೇಕಾನಂದರ ಉದಾತ್ತ ಆಶಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಜನರು ಸನ್ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು. ದಾರಿ ತಪ್ಪುತ್ತಿರುವ ಯುವಜನರ ರೀತಿನೀತಿಗಳು ಬದಲಾಗಬೇಕು. ಅದಕ್ಕೆ ಸ್ವಾಮಿ ವಿವೇಕಾನಂದರ ತತ್ವಗಳು ಪೂರಕ ಎಂದು ಹೇಳಿದರು.

    ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, ಹಿರಿಯ ವಕೀಲ ಮಧುಸೂದನ್‌, ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂಸೇವಕ ಕೃಷ್ಣಪ್ರಸಾದ್, ಲಯನ್ಸ್‌ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್, ಪ್ರಾಂತೀಯ ಅಧ್ಯಕ್ಷ ಎಲ್.ಎನ್.ಪ್ರದೀಪ್‌ಕುಮಾರ್, ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಬಾಬು ಸಾಬಿ ಮತ್ತಿತರರು ಹಾಜರಿದ್ದರು.

  • ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಮಾಜಕ್ಕೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ – ನರಸಿಂಹಮೂರ್ತಿ

    ದೊಡ್ಡಬಳ್ಳಾಪುರ : ಮಹಾನ್ ಸನ್ಯಾಸಿ ವಿಶ್ವಗುರು ಸ್ವಾಮಿ ವಿವೇಕಾನಂದರ 164 ನೇ ಜಯಂತೋತ್ಸವದ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿಶೇಷವಾಗಿ ಪೂಜೆ ಸಲ್ಲಿಸಿ, ಅನ್ನದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

    ನಗರದ ಚಿಕ್ಕಪೇಟೆಯಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು. ಈ ವೇಳೆ ನೆರೆದಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ನಡೆಸಲಾಯಿತು.


    ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಂಕ್ ವಿತರಣೆ, ವಯೋವೃದ್ದರಿಗೆ ಹೊದಿಕೆ ( ಬೆಡ್ ಶೀಟ್) ವಿತರಣೆ, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ, ನಗರದ ನಿರ್ಗತಿಕರಿಗೆ ಗೀತಾ ಮಂದಿರದಲ್ಲಿ ಹಾಗೂ ಪಾಲನಜೋಗಹಳ್ಳಿ ಅನಾಥಾಶ್ರಮದಲ್ಲಿ ಮಕ್ಕಳಿಗೆ ಹಣ್ಣು ವಿತರಣೆ , ಕಡು ಬಡವರಿಗೆ ಹಾಗೂ ನಿರ್ಗತಿಕರಿಗೆ ಅನ್ನದಾಸೋಹ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಸ್ವಾಮಿ ವಿವೇಕಾನಂದರ ಜಯಂತೋತ್ಸವವನ್ನು ಆಚರಣೆ ಮಾಡಲಾಗುತ್ತದೆ ಅಂತೆಯೇ ಈ ಬಾರಿ ಶಾಲಾ ಮಕ್ಕಳ ವಿಶೇಷ ಜಾಥದೊಂದಿಗೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಖಂಡರೊಂದಿಗೆ ಪೂಜೆ ಸಲ್ಲಿಸಿ ಅನ್ನದಾಸೋಹ ನೆಡೆಸುವ ಮೂಲಕ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು

    ಈ ಕುರಿತು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ ಇಂದು ಸಾಂಕೇತಿಕವಾಗಿ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸ್ಥಳೀಯ ಭೀಮಯ್ಯ ಶಾಲೆ ಹಾಗೂ ಶ್ರೀ ಜಿ.ಕೆ ಪ್ರೌಢಶಾಲೆಯ ಮಕ್ಕಳೊಂದಿಗೆ ಇಂದಿನ ಜಯಂತಿಯನ್ನು ವಿಶೇಷವಾಗಿ ಆಚರಿಸಿದ್ದೇವೆ ಮುಂದೆ ಟ್ರಸ್ಟ್ ನ ಮೂಲಕ ತಾಲ್ಲೂಕಿನಲ್ಲಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಲಿದ್ದೇವೆ ಸ್ವಾಮಿ ವಿವೇಕಾನಂದರ ಆಶಯಗಳನ್ನು ಸಮಾಜಕ್ಕೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ , ಯುವ ಸಮುದಾಯ ಕುರಿತು ಸ್ವಾಮಿ ವಿವೇಕಾನಂದರು ಕಂಡ ಕನಸು ಇನ್ನೂ ಕನಸಾಗಿಯೇ ಉಳಿದಿದೆ ಯುವ ಭಾರತ ನಿರ್ಮಾಣಕ್ಕೆ ನಮ್ಮ ಟ್ರಸ್ಟ್ ಶ್ರಮಿಸುತ್ತದೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

    ಸ್ಥಳೀಯ ಪ್ರಮುಖರಾದ ಗುರುದೇವ್ ಮಾತನಾಡಿ ಯುವಕರನ್ನು ಬಡಿದಿಬ್ಬಿಸುವ ಸದೃಢ ಯುವ ದೇಶವನ್ನು ಕಟ್ಟುವ ಕಾಯಕವನ್ನು ಸ್ವಾಮಿ ವಿವೇಕಾನಂದರ ನಿರಂತರವಾಗಿ ಮಾಡಿದ್ದರು. ಭಾರತ್ ಮಾತಾ ಕೀ ಜೈ ಘೋಷಣೆ ಅವರಿಗೆ ಅತ್ಯಂತ ಪ್ರಿಯವಾದದ್ದು. ಇಂದಿನ ಯುವ ಸಮೂಹ ವಿವೇಕಾನಂದರ ಅಂತಹ ಹುಮ್ಮಸ್ಸು ಆಶೆಗಳನ್ನು ಹೊತ್ತು ಸ್ವಾಮಿ ವಿವೇಕಾನಂದರ ಕನಸು ನನಸು ಮಾಡಬೇಕಾಗಿದೆ ಎಂದರು.

    ಭೀಮಯ್ಯ ಶಾಲೆಯ ಮುಖ್ಯಸ್ಥೆ ಪ್ರಿಯಾಂಕಾ ಮಾತನಾಡಿ ದೇಶಾಭಿಮಾನ, ಪ್ರಬುದ್ಧತೆ, ಅರಿವು ಇದಕ್ಕೆ ಮತ್ತೊಂದು ಹೆಸರೇ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು, ಅವರ ಜೀವಿತಾವಧಿಯಲ್ಲಿ ದೇಶದ ಯುವಕರನ್ನು ವಿದ್ಯಾರ್ಥಿಗಳನ್ನು ತಮ್ಮ ಮಾತುಗಳ ಮೂಲಕ ಎಚ್ಚರಿಸಿ ಅರಿವು ಮೂಡುವಂತೆ ಮಾಡುತ್ತಿದ್ದರು, ಅವರ ಪ್ರತಿಯೊಂದು ಮಾತು ಇಂದಿಗೂ ಅಷ್ಟೇ ಸ್ಪೂರ್ತಿದಾಯಕ ಸ್ವಾಮಿ ವಿವೇಕಾನಂದರು ಎಂದಿಗೂ ಅಳಿಯದ ಚೇತನರು, ಅವರ ಜೀವನವೇ ಎಲ್ಲರಿಗೂ ಆದರ್ಶ ಎಂದರು.


    ಈ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಮತ್ತು ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

  • 5ಲಕ್ಷದ ಒಣ ಗಾಂಜಾ ಜಪ್ತಿ :ದೇವನಹಳ್ಳಿಯಲ್ಲಿ ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ  

     

    ದೇವನಹಳ್ಳಿ : ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಅಂದಾಜು 5ಲಕ್ಷದ ಮೌಲ್ಯದ ಒಟ್ಟು 6.288 ಕಿ.ಗ್ರಾಂ ಒಣ ಗಾಂಜಾ ಜಪ್ತುಪಡಿಸಿ ದೇವನಹಳ್ಳಿ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

     

     

    ತಾಲ್ಲೂಕಿನ ಟಿಪ್ಪು ಸರ್ಕಲ್ ಬಳಿ ಗಸ್ತು ನಡೆಸುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಹೊಸಕೋಟೆ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಕೆ ಎನ್ ಚಂದ್ರ ಮೋಹನ್ ರವರ ಮಾರ್ಗ ದರ್ಶನದಲ್ಲಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಎನ್ ಎಂ ಹನುಮಂತರಾಜು ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಅಂದಾಜು 6.288 ಕಿ.ಗ್ರಾಂ ಒಣ ಗಾಂಜಾ ಜಪ್ತು ಪಡಿಸಿದ್ದಾರೆ.

     

    ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮೂರ್ತಿ.ಜಿ,ಸಂತೋಷ್,ಗಂಗಯ್ಯ ಪಾಲ್ಗೊಂಡಿದ್ದರು.

  • ಮುಂದಿನ ದಿನಗಳಲ್ಲಿ ಶಾಸಕ ಧೀರಜ್ ಮುನಿರಾಜು ಅಹಿಂದಾ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ –  ಟಿ ಹನುಮಂತಯ್ಯ 

    ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅವರ ಜನ್ಮದಿನ ಹಿನ್ನೆಲೆ ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಹುಟ್ಟುಹಬ್ಬದ ಶುಭಾಶಯ ತಿಳಿಸಿ ಶುಭಕೋರಿದರು.

     

    ಅದರಂತೆ ಹಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಸೇರಿದಂತೆ ಇತರರು ಶಾಸಕ ಧೀರಜ್ ಮುನಿರಾಜ್ ಅವರ ಜನ್ಮದಿನದ ಶುಭಾಷಯ ಕೋರಿದರು.

     

    ಈ ವೇಳೆ ಹಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ. ಹನುಮಂತಯ್ಯ  ಮಾತನಾಡಿ ಶಾಸಕ ಧೀರಜ್ ಮುನಿರಾಜ್ ಅವರು ನವ ದೊಡ್ಡಬಳ್ಳಾಪುರ ಕನಸು ಕಂಡು ಅದನ್ನು ನನಸಾಗಿಸಲು ಸತತ ಪ್ರಯತ್ನಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಅಹಿಂದಾ ನಾಯಕರಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ದಲಿತಪರ, ರೈತಪರ, ಕಾರ್ಮಿಕರ ಪರ, ನೇಕಾರರ ಪರ ಹಾಗೂ ಯಾವುದೇ ಜಾತಿ ಭೇದ ಮಾಡದೇ ಎಲ್ಲರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

     

    ಇಂತಹ ಜನನಾಯಕನನ್ನ ಪಡೆದುಕೊಂಡಿರುವುದೇ ನಮ್ಮ ಪುಣ್ಯ, ಭ್ರಷ್ಟಮುಕ್ತ ಆಡಳಿತ ಸೇವೆ ಮಾಡಬೇಕು, ಸದನದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಸಾಕಷ್ಟು ಸರ್ಕಾರ ಬಳಿ ಮನವಿ ಮಾಡುತ್ತಿದ್ದಾರೆ ಎಂದು ಹೇಳಿದರು.

     

    ಈ ವೇಳೆ ಹಳೇಕೋಟೆ ಬಿಜೆಪಿ ಮುಖಂಡರಾದ ಟಿ ಡಿ ಮುನಿಯಪ್ಪ, ಮುನಿಶ್ಯಾಮಯ್ಯ, ಸಿದ್ಧರಾಜು, ಚಲುವರಾಜು, ಕೆಂಪರಾಜು, ಕಾರ್ಯಕರ್ತರು, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು…