Blog

  • ಶಾಸಕ ಧೀರಜ್ ಮುನಿರಾಜುರವರ ಹುಟ್ಟುಹಬ್ಬದ ಸಂಭ್ರಮ : ದರ್ಗಾಜೋಗಹಳ್ಳಿ ಪ್ರಮುಖರಿಂದ ಅನ್ನದಾಸೋಹ ಆಯೋಜನೆ : ವಿಶೇಷ ಕಾರ್ಯಕ್ರಮದ ಮೂಲಕ ನೆಚ್ಚಿನ ನಾಯಕರಿಗೆ ಶುಭ ಕೋರಿದ ಗಣ್ಯರು 

    ದೊಡ್ಡಬಳ್ಳಾಪುರ :ಶಾಸಕ ಧೀರಜ್ ಮುನಿರಾಜು ರವರ ಹುಟ್ಟುಹಬ್ಬದ ಅಂಗವಾಗಿ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಮುಖಂಡರಿಂದ ನಿರಂತರ ಅನ್ನದಾಸೋಹ ಸಮಿತಿ ಸಹಯೋಗದೊಂದಿಗೆ ನಿರಾಶ್ರಿತ ಕಡುಬಡವರಿಗೆ, ವಯೋವೃದ್ದರಿಗೆ ಅನ್ನದಾಸೋಹ, ಬಟ್ಟೆ ವಿತರಣೆ ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

    ಈ ವೇಳೆ ಗ್ರಾಮಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಸದಾ ಬಡವರ ಸೇವೆಯಲ್ಲಿ ನಿರತರಾಗಿ ತಾಲ್ಲೂಕಿನಲ್ಲಿ ಪ್ರತಿ ನಿತ್ಯ ಹೊಸ ಹೊಸ ಯೋಜನೆ, ಕಾಮಗಾರಿಗಳನ್ನು ರೂಪಿಸುವ ಮೂಲಕ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಭೇದ ಮಾಡದೆ ನಮ್ಮ ಶಾಸಕರು ಶ್ರಮಿಸುತ್ತಿದ್ದು ಅವರು ಮತ್ತಷ್ಟು ಉನ್ನತ ಹುದ್ದೆಗಳು ತಲುಪುವ ಮೂಲಕ ಅವರ ನವ ದೊಡ್ಡಬಳ್ಳಾಪುರ ಕನಸು ನನಸು ಮಾಡಲಿ ಎಂದು ಹಾರೈಸುತ್ತೇವೆ ಎಂದರು.

    ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ವಕೀಲರಾದ ಸುರೇಶ್ ಮಾತನಾಡಿ ಕಿರಿಯ ವಯಸ್ಸಿನಲ್ಲೇ ಶಾಸಕರಾಗಿ ಬಿಜೆಪಿ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಧೀರಜ್ ಮುನಿರಾಜುರವರು ನಮಗೆಲ್ಲರಿಗೂ ಆದರ್ಶ. ನಿಸ್ವಾರ್ಥ ಪ್ರಜಾ ಸೇವೆ ಅವರಲ್ಲಿ ಕಾಣುತ್ತಿದ್ದೇವೆ . ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡಿ ಸರ್ಕಾರದಿಂದ ವಿಶೇಷ ಅನುದಾನಗಳನ್ನು ತರುವ ಮೂಲಕ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅವರ ಜನಪರ ಸೇವೆಗಳು ಮತ್ತಷ್ಟು ಮುಂದುವರಿಯಲಿ. ನಮ್ಮೆಲ್ಲರ ಹಾರೈಕೆ ಬೆಂಬಲ ಅವರೊಂದಿಗೆ ಸದಾ ಇರುತ್ತದೆ ಎಂದರು.

     

    ಸ್ಥಳೀಯ ಬಿಜೆಪಿ ಮುಖಂಡರಾದ ಮಂಜುನಾಥ್ ಮಾತನಾಡಿ ನಮ್ಮ ಶಾಸಕರು ವಿರೋಧ ಪಕ್ಷದಲ್ಲಿದ್ದರೂ ಕೈ ಕಟ್ಟಿ ಕೂರದೆ ಸರ್ಕಾರದಿಂದ ಸದಾ ವಿಶೇಷ ಅನುದಾನಗಳನ್ನು ದೊಡ್ಡಬಳ್ಳಾಪುರಕ್ಕೆ ತರುವ ಮೂಲಕ ನಿತ್ಯ ನಿರಂತರ ಹೊಸ ಹೊಸ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಅವರ ಕಾರ್ಯ ವೈಖರಿಗೆ ಉತ್ತಮ ಉದಾಹರಣೆಯಾಗಿದೆ. ಈ ರೀತಿ ವಿಶೇಷ ಜನಪರ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಅವರ ಹುಟ್ಟು ಹಬ್ಬದ ಶುಭ ಹಾರೈಸುತ್ತಿರುವುದು ಸಂತಸ ತಂದಿದೆ ಎಂದರು.

    ಕಾರ್ಯಕ್ರಮ ದಲ್ಲಿ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಬಿಜೆಪಿ ಮುಖಂಡರು, ಧೀರಜ್ ಮುನಿರಾಜು ಅಭಿಮಾನಿಗಳು ಉಪಸ್ಥಿತರಿದ್ದರು.

  • ಮಕ್ಕಳ ಸಂತೆಯಲ್ಲಿ ಮಿಂಚಿದ ಅಂಗನವಾಡಿ ಪುಟಾಣಿಗಳು : ಮಕ್ಕಳ ವ್ಯಾಪಾರಕ್ಕೆ ಪೋಷಕರು ಫುಲ್ ಫಿದಾ 

    ದೊಡ್ಡಬಳ್ಳಾಪುರ : ನಗರದ ರಾಜೀವ್ ಗಾಂಧಿ ಬಡಾವಣೆಯ 1ಹಂತದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಸಂತೆಯನ್ನು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಮೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿನೋದ್ ರಾಜ್, ಜಗದೀಶ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್ ಹಾಗೂ ಇತರೆ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಮಾರಾಟ ಚಟುವಟಿಕೆಗಳನ್ನು ಪ್ರತಿನಿಧಿಸುವ ಮೂಲಕ ಮಕ್ಕಳು ಪೋಷಕರನ್ನು,ಅತಿಥಿಗಳನ್ನು ಆಕರ್ಷಸಿದರು.

     

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಮೇಶ್ ಮಾತನಾಡಿ ಮಕ್ಕಳಲ್ಲಿ ಇಂತಹ ಚಟುವಟಿಕೆಗಳು ಕಲಿಕಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತವೆ ಅಲ್ಲದೇ ಮಕ್ಕಳಿಗೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಚಟುವಟಿಕೆ ಮೂಲಕ ಪರಿಚಯಿಸಿದಂತಾಗುತ್ತದೆ. ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿನ ವಿಶೇಷ ಗುಣಗಳನ್ನು ಹೊರ ತರಲು ಈ ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದರು.

    ವಿವಿಧ ಮಾರಾಟಗಾರರ ವೇಷಭೂಷಣದಲ್ಲಿ ಗಮನ ಸೆಳೆದ ಪುಟಾಣಿ ಮಕ್ಕಳು 

    ನಗರದ ರಾಜೀವ್ ಗಾಂಧಿ ಬಡಾವಣೆಯ ಅಂಗನವಾಡಿಯಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಪುಟಾಣಿ ಮಕ್ಕಳು ದಿನಸಿ ವ್ಯಾಪಾರಿಯಾಗಿ, ಹೂ ವ್ಯಾಪಾರಿಯಾಗಿ, ಕುಂಬಾರರಾಗಿ, ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಾಗಿ, ಎಲೆ ಅಡಿಕೆ ವ್ಯಾಪಾರಿಯಾಗಿ, ಆಟಿಕೆ ಮಾರಾಟಗಾರರಾಗಿ, ಹೈನುಗಾರಿಕೆ ಪ್ರತಿನಿಧಿಸುವ ಮೇಕೆ ಕುರಿ ಸಾಕಾಣಿಕೆದಾರರಾಗಿ ಅಧಿಕಾರಿಗಳನ್ನು, ಪೋಷಕರನ್ನು ಗಮನ ಸೆಳೆದರು.

    ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ರಾಜ್ ಮಾತನಾಡಿ ಈ ಕಾರ್ಯಕ್ರಮದ ಯಶಸ್ಸಿನ ಹಿಂದೆ ಸ್ಥಳೀಯ ಅಂಗನವಾಡಿ ಶಿಕ್ಷಕರಾದ ನಂದಿನಿ ಹಾಗೂ ಸಹಾಯಕರ ಶ್ರಮ ಅಪಾರವಾದದ್ದು, ಪುಟಾಣಿ ಮಕ್ಕಳಯಿಂದ ಮಕ್ಕಳ ಸಂತೆಯಂತಹ ಕಾರ್ಯಕ್ರಮ ರೂಪಿಸಿ ಯಶಸ್ವೀಗೊಳಿಸುವುದು ಅಷ್ಟು ಸುಲಭವಲ್ಲ, ಇಂತಹ ಕಾರ್ಯಕ್ರಮಗಳಿಂದ ಅಂಗನವಾಡಿಗಳ ಬಗ್ಗೆ ಪೋಷಕರಿಗೆ ಉತ್ತಮ ಭಾವನೆ ಮೂಡುವುದಲ್ಲದೆ ಮಕ್ಕಳ ಕಲಿಕಾ ಮಟ್ಟವು ಉತ್ತಮಗೊಳ್ಳುತ್ತದೆ ಎಂದರು.

    ಈ ವೇಳೆ ಜಿಲ್ಲಾ ನಿರೂಪಣಾಧಿಕಾರಿಗಳು ರಮೇಶ್, ಮಹಿಳಾ ಕಲ್ಯಾಣ ಅಧಿಕಾರಿ ಜಗದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿನೋದ್ ರಾಜ್ , ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ್ ಕುಮಾರ್, ರೂಪ, ವೃತ್ತದ ಮೇಲ್ವಿಚಾರಕಿ ಚೇತನಾ. ಆರ್ ಹಾಗೂ ಹಿರಿಯ ಮೇಲ್ವಿಚಾರಕಿ ಲಕ್ಷ್ಮಿ, ನಿರ್ಮಲ, ಅಂಗನವಾಡಿ ಕಾರ್ಯಕರ್ತೆ ಶ ನಂದಿನಿ ಹಾಗೂ ಅಂಗನವಾಡಿ ಸಹಾಯಕಿ ಆಶಾ ಸೇರಿದಂತೆ ಪೋಷಕರು ಹಾಜರಿದ್ದರು.

  • ಜ.10ಕ್ಕೆ ಜೆಡಿಎಸ್ ಕಾರ್ಯಕರ್ತರ ಸಭೆ : ಪಕ್ಷದ ಕಾರ್ಯಕರ್ತರೊಂದಿಗೆ ರಾಜ್ಯ ನಾಯಕರು ನೇರ ಸಂವಾದ ನಡೆಸಲಿದ್ದಾರೆ – ಹರೀಶ್ ಗೌಡ 

    ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಕಾರ್ಯಕರ್ತರ ಸಭೆಯನ್ನು ಜನವರಿ 10ರ ಶನಿವಾರದಂದು ಬೆಳಗ್ಗೆ 10:30 ಗಂಟೆಗೆ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಜೆಡಿಎಸ್ ಪಕ್ಷದ ಬಲವರ್ಧನೆಗೆ ಬೆಂಬಲ ನೀಡಬೇಕೆಂದು ಜೆಡಿಎಸ್ ರಾಜ್ಯ ಮುಖಂಡ ಹರೀಶ್ ಗೌಡ ತಿಳಿಸಿದರು.

     

    ಜನವರಿ 10ರಂದು ನಡೆಯಲಿರುವ ಕಾರ್ಯಕರ್ತರ ಸಭೆ ಕುರಿತ ಕರಪತ್ರವನ್ನು ಮುಖಂಡರು  ಬಿಡುಗಡೆಗೊಳಿಸಿದರು 

     

    ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷದ ಸುಧಾರಣೆ ಮತ್ತು ಬಲವರ್ಧನೆಗಾಗಿ ಈ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದ್ದು ಸಭೆಯಲ್ಲಿ ಕರ್ನಾಟಕ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ ಭಾಗವಹಿಸಲಿದ್ದಾರೆ. ರಾಜ್ಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಮುಂದಿನ ಗುರಿಗಳ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶಕಲ್ಪಿಸಲಾಗಿದೆ ಜೊತೆಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪೂರ್ವಸಿದ್ಧತೆಯ ಕುರಿತಾದ ಚರ್ಚೆ ಮಾಡಲಿದ್ದಾರೆ ಎಂದರು.

     

    ಜೆಡಿಎಸ್ ರಾಜ್ಯ ಮುಖಂಡರಾದ ಡಾ ವಿಜಯ್ ಕುಮಾರ್ ಮಾತನಾಡಿ ಇತ್ತೀಚಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು. ಪಕ್ಷವು ಪ್ರತಿ 3 ವರ್ಷಕ್ಕೊಮ್ಮೆ ಎಲ್ಲಾ ಪದಾಧಿಕಾರಿಗಳನ್ನು ಪುನರ್ ಆಯ್ಕೆ ಮಾಡುವ ಪ್ರಕ್ರಿಯೆ ನೆಡೆಸುತ್ತದೆ ಅಂತೆಯೇ ಈ ಬಾರಿ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಜಿ ಸಭಾಪತಿಗಳಾದ ಜೆ ಕೆ ಕೃಷ್ಣ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದು , ಜೆಡಿಎಸ್ ಕಾರ್ಯಕರ್ತರ ಸಲಹೆ ಸೂಚನೆಗಳನ್ನು ಪಡೆಯಲು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂದುಕೊಳ್ಳಲು ಜನವರಿ 10ರಂದು ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದೆ ಎಂದರು. ಸ್ಥಳೀಯವಾಗಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಈ ಸಭೆ ಸಹಕಾರಿಯಾಗಲಿದೆ ಎಂದರು.

     

    ನಗರಸಭಾ ಸದಸ್ಯ ಹಾಗೂ ತಾಲ್ಲೂಕು ಜೆಡಿಎಸ್ ಪ್ರಮುಖರಾದ ತಾ ನ ಪ್ರಭುದೇವ್ ಮಾತನಾಡಿ ತಾಲ್ಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಕಳೆದ 20ವರ್ಷಗಳಿಂದ ತಾಲ್ಲೂಕಿನಲ್ಲಿ ಶಾಸಕರ ಸ್ಥಾನ ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ ಸ್ಥಳೀಯ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಹುಮ್ಮಸ್ಸು ಮೂಡಿಸುವ ಈ ಕಾರ್ಯಕರ್ತ ಸಭೆ ಯೋಚನೆ ಮಾಡಲಾಗಿದ್ದು. ಸಭೆಯಲ್ಲಿ ಪಕ್ಷದ ಹಲವಾರು ವಿಚಾರಗಳು ಚರ್ಚೆಯಾಗಲಿವೆ ಮುಂದಿನ ಸ್ಥಳೀಯ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಲ್ಲಿಸಲು ಈ ಕಾರ್ಯಕರ್ತ ಸಭೆ ಸಹಕಾರಿಯಾಗಲಿದೆ ಎಂದರು.

    ಈ ವೇಳೆ ರಾಜ್ಯ ಮುಖಂಡರಾದ ಡಾ. ವಿಜಯ್ ಕುಮಾರ್, ತಾಲ್ಲೂಕು ನಗರಸಭಾ ಸದಸ್ಯ ತಾ. ನ. ಪ್ರಭುದೇವ್,ವಡ್ಡರಹಳ್ಳಿ ರವಿ, ಮುಖಂಡರಾದ ಕೆಂಪರಾಜು, ಅಂಜನ್ ಗೌಡ, ನಾಗರಾಜು, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ರಾಮಚಂದ್ರ ಬಾಬು, ಶಿವಕುಮಾರ್ (ವೈರ್) ಪ್ರವೀಣ್ ಕುಮಾರ್, ಶಾಂತಕ್ಕ, ಜ್ಯೋತಿ,ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಹೆಸರಿನಲ್ಲಿ ಸೀರೆ ಮಾರಾಟ ಮಳಿಗೆ ನಿರ್ಮಾಣ : ಒಂದೆಡೆ ಶಾಸಕರಿಂದ ಶಂಕುಸ್ಥಾಪನೆ ಮತ್ತೊಂದೆಡೆ ಕಾಂಗ್ರೆಸ್ ನಿಂದ ಪ್ರತಿಭಟನೆ 

    ದೊಡ್ಡಬಳ್ಳಾಪುರ : ಸ್ಥಳೀಯ ನೇಕಾರರಿಗೆ ಅನುಕೂಲವಾಗುವಂತೆ ನೇಕಾರರಿಂದ ಗ್ರಾಹಕರಿಗೆ ನೇರ ಸೀರೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೀರೆ ಮಾರಾಟ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು.

    ನಗರದ ಡಿ ಕ್ರಾಸ್ ಸಮೀಪ ನಗರ ಪೊಲೀಸ್ ಠಾಣೆ ಮುಂಭಾಗ ಈ ಹಿಂದೆ ರೇಷ್ಮೆ ಇಲಾಖೆಗೆ ನಿಗದಿ ಮಾಡಲಾಗಿದ್ದ 10 ಕುಂಟೆ ಜಾಗದಲ್ಲಿ ನಡೆದ ಸೀರೆ ಮಾರಾಟ ಮಳಿಗೆಗಳ ನಿರ್ಮಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಸ್ಥಳೀಯ ಶಾಸಕರ ಅಭಿವೃದ್ಧಿ ನಿಧಿ ಯಲ್ಲಿ 50 ಲಕ್ಷ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 50 ಲಕ್ಷ ಹಣದಲ್ಲಿ ಸ್ಥಳೀಯ ನೇಕಾರರಿಗೆ ಅನುಕೂಲ ವಾಗುವಂತೆ ಜವಳಿ ಇಲಾಖೆಯ ಅಡಿಯಲ್ಲಿ ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಎಂಬ ಹೆಸರಿನ ಅಡಿಯಲ್ಲಿ ಸೀರೆಗಳ ಮಾರಾಟ ಮಳಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

     

     

    ರೇಷ್ಮೆ ಇಲಾಖೆಗೆ ನಿಗದಿಯಾಗಿದ್ದ ಸ್ಥಳದಲ್ಲಿ ಸೀರೆ ಮಳಿಗೆ ನಿರ್ಮಾಣ 

     

    ನಿರಂತರ ಎರಡು ವರ್ಷಗಳ ಶ್ರಮದ ಫಲವಾಗಿ ರೇಷ್ಮೆ ಇಲಾಖೆಗೆ ನಿಗದಿಪಡಿಸಲಾಗಿದ್ದ 10 ಕುಂಟೆ ಜಾಗವನ್ನು ತಿದ್ದುಪಡಿ ಮೂಲಕ ಜವಳಿ ಇಲಾಖೆಯ ಅಡಿಯಲ್ಲಿ ಸ್ಥಳೀಯ ನೇಕಾರ ಅನುಕೂಲಕ್ಕಾಗಿ ಸ್ಥಳೀಯವಾಗಿ ಮಾರುಕಟ್ಟೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸೀರೆ ಮಾರಾಟ ಮಳಿಗೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

     

    ದೇವರ ದಾಸಿಮಯ್ಯ ವಾಣಿಜ್ಯ ಮಳಿಗೆಗಳ ಸಂಕೀರ್ಣ ಹೆಸರಿನಲ್ಲಿ ಸೀರೆ ಮಾರಾಟ ಮಳಿಗೆ

    ನೇಕಾರಿಕೆ ಬ್ರಾಂಡ್ ಕಲ್ಪಿಸುವ ನಿಟ್ಟಿನಲ್ಲಿ ಮಳಿಗೆ ನಿರ್ಮಾಣ ಮತ್ತು ನೈಕಾರಿಕೆ ಉದ್ಯಮ ಉಳಿಸುವಲ್ಲಿ ಸೀರೆ ಮಾರಾಟ ಮಳಿಗೆಗಳು ಸಾಕಷ್ಟು ಪ್ರಮುಖ ಪಾತ್ರ ವಹಿಸಲಿವೆ. ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಕಟ್ಟಡದ ಕೆಳಮಹಡಿಯಲ್ಲಿ 15 ಕಟ್ಟಡಗಳು ಮತ್ತು ಒಂದನೇ ಮಹಡಿಯಲ್ಲಿ 15 ಮಳಿಗೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಮುಂದೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರೆತಲ್ಲಿ ನೇಕಾರಿಕೆಗೆ ಉಪಯೋಗವಾಗುವ ಪರಿಕರಗಳ ಮಾರಾಟ ಮಳಿಗೆಯನ್ನು ಪ್ರಾರಂಭಿಸುವ ಹಾಗೂ ಕಟ್ಟಡದ ಮೇಲ್ಭಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಯೋಜನೆಹೊಂದಿದೆ ಎಂದರು.

    ಒತ್ತುವರಿ ತೆರವುಗೊಳಿಸಲು ಹರಸಾಹಸ

    ರೇಷ್ಮೆ ಇಲಾಖೆಗೆ ನಿಗಾದಿಯಾಗಿದ್ದ 10ಗುಂಟೆ ಜಾಗವನ್ನು ಈಗಾಗಲೇ ಹಲವರು ಒತ್ತುವರಿ ಮಾಡಿಕೊಂಡಿದ್ದರು ಸದರಿ ಒತ್ತುವರಿಯನ್ನು ಬಿಡಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಶಂಕುಸ್ಥಾಪನೆ ನಂತರ ಪ್ರಾಥಮಿಕವಾಗಿ 10 ಗುಂಟೆ ಜಾಗಕ್ಕೆ ಕಾಂಪೌಂಡ್ ನಿರ್ಮಿಸುವ ಮೂಲಕ ಕಟ್ಟಡ ನಿರ್ಮಾಣಕ್ಕೆ ನಿಗದಿಯಾಗಿರುವ ಸ್ಥಳವನ್ನು ಸಂರಕ್ಷಣೆಮಾಡಲಾಗುವುದು ಎಂದು ಶಾಸಕರು ತಿಳಿಸಿದರು

     

    ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ

    ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ನೇಕಾರರಿಗೆ ವಾಣಿಜ್ಯ ಮಾರಾಟ ಮಳಿಗೆ ನಿರ್ಮಾಣ ಮಾಡುತ್ತಿದ್ದು ಒಂದು ವರ್ಷದ ಕಾಲಾವಧಿಯ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ ದೇವರ ದಾಸಿಮಯ್ಯ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಅವರ ಮುಖೇನ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದರು.

    ಒಂದೆಡೆ ಶಂಕುಸ್ಥಾಪನೆ ಮತ್ತೊಂದೆಡೆ ಪ್ರತಿಭಟನೆ

    ಹೌದು ಇಂದು ಸೀರೆ ಮಾರಾಟ ಮಳಿಗೆಗಳ ನಿರ್ಮಾಣದ ಶಂಕು ಸ್ಥಾಪನೆಗೆ ಒಂದೆಡೆ ವೇದಿಕೆ ಸಿದ್ಧವಾಗಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿತ್ತು ಸ್ಥಳೀಯ ಶಾಸಕ ಧೀರಜ್ ಮುನಿರಾಜು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ, ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪ್ರಮುಖರು ಹಲವು ಚುನಾಯಿತ ಪ್ರತಿನಿಧಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡರು , ಪ್ರತಿಭಟನಾಕಾರರು ತಡೆಯಲು ಪೊಲೀಸ್ ಹರಸಾಹಸ ಪಡಬೇಕಾಯಿತು. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪ ಅವರ ಮಾತಿಗೆ ಬೆಲೆ ಕೊಟ್ಟು ಕಾಂಗ್ರೆಸ್ ಮುಖಂಡರು ಪ್ರತಿಭಟನೆಯನ್ನು ಕೈಬಿಟ್ಟರು.

     

    ಶುಕ್ರವಾರ(ಜ. 09) ಮತ್ತೊಮ್ಮೆ ಸಚಿವರಿಂದ ಶಂಕು ಸ್ಥಾಪನೆ

    ಸ್ಥಳೀಯ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿನ್ನೆಲೆ ಇಂದು ನಡೆದ ಸೀರೆ ಮಾರಾಟ ಮಳಿಗೆಗಳ ಶಂಕುಸ್ಥಾಪನ ಕಾರ್ಯಕ್ರಮವು ಶುಕ್ರವಾರ ಮತ್ತೊಮ್ಮೆ ನಡೆಯಲಿದೆ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಭಾಗವಹಿಸಲಿದ್ದು ತಾಲೂಕಿನ ಎಲ್ಲಾ ವಿಭಾಗಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ. ಶುಕ್ರವಾರ(ಜ. 09) ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಸ್ಥಳೀಯ ನೇಕಾರ ಮುಖಂಡರೊಂದಿಗೆ ಭಾಗವಹಿಸಿ ಸಚಿವರ ಬಳಿ ಸೀರೆಗಳ ಮಾರಾಟ ಮಳಿಗೆಗೆ ಮತ್ತಷ್ಟು ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಜಿ ಶಾಸಕ ಟಿ ವೆಂಕಟರಮಣಯ್ಯ ಮಾತನಾಡಿದರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರು ಯಾವುದೇ ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ.ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಸರ್ಕಾರಿ ಕಾರ್ಯಕ್ರಮಗಳ ವಿಚಾರವಾಗಿ ತಾಲೂಕಿನ ಎಲ್ಲಾ ವಿಭಾಗಗಳ ಪ್ರಮುಖ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸುವ ಕಾರ್ಯ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಅಧಿಕಾರದಿದ್ದರೂ ಅನ್ಯ ಪಕ್ಷದಿಂದ ಗೆದ್ದು ಚುನಾಯಿತರಾದ ಪ್ರತಿನಿಧಿಗಳಿಗೆ ಆಹ್ವಾನಿಸಿ ವೇದಿಕೆ ಕಲ್ಪಿಸಿದ್ದೇವೆ ಎಂದರು.

     

    ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆರು ಬಾರಿ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದಾರೆ . ಅವರ ಕಾರ್ಯಕ್ರಮದಲ್ಲಿ ಆಗಿನ ನಗರಸಭೆಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಪಕ್ಷ ಭೇದ ಮಾಡದೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ವೇದಿಕೆ ಕೂಡ ಕಲ್ಪಿಸಿದ್ದೇವೆ. ಆದರೆ ಇಂದು ಸ್ಥಳೀಯ ಶಾಸಕರು ಕಾಂಗ್ರೆಸ್ ಹಾಗೂ ಇನ್ನುಳಿದ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಮುಂದೆಯಾದರೂ ಶಿಷ್ಟಾಚಾರ ಪಾಲನೆ ಮಾಡಲಿ ಎಂದರು.

     

     

    ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕರಿ ಗೌಡರ ನೇತೃತ್ವದಲ್ಲಿ ರೇಷ್ಮೆ ಇಲಾಖೆಗೆ 10ಗುಂಟೆ ಜಾಗವನ್ನು ಮಂಜೂರು ಮಾಡಲಾಗಿತ್ತು ಅದನ್ನು ಶಾಸಕರು ಮರೆಯಬಾರದು ಎಂದರು.

  • ಜಿಲ್ಲೆಯ ರೈತರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು  ಕುರಿತು ನಾಳೆ ರೈತರ ಸಭೆ

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಸಮಸ್ಯೆ/ಕುಂದುಕೊರತೆಗಳ ಕುರಿತು ಚರ್ಚಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ 07 ರ ಬುಧವಾರ ಬೆಳಿಗ್ಗೆ 11:30 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ.

     

    ಸಭೆಗೆ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳ ಅಧ್ಯಕ್ಷರು, ಸದಸ್ಯರು,ಮುಖಂಡರು,ರೈತ ಬಾಂಧವರು ಭಾಗವಹಿಸಲು ಜಿಲ್ಲಾಧಿಕಾರಿ ಎಬಿ ಬಸವರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅಕ್ಕ ಕೆಫೆ ನಿರ್ವಹಿಸಲು ಆಸಕ್ತ ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರಿಂದ ಅರ್ಜಿ ಆಹ್ವಾನ

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಸ್ಥಾಪಿಸಲಾಗಿರುವ ಅಕ್ಕ ಕೆಫೆ ನಿರ್ವಹಣೆ ಮಾಡಲು ಜಿಲ್ಲೆಯ ಆಸಕ್ತ ಸಂಜೀವಿನಿ ಸ್ವಸಹಾಯ ಗುಂಪುಗಳ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ.

     

    ಅರ್ಜಿ ನಮೂನೆಗಳು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಸಂಜೀವಿನಿ ಶಾಖೆ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಸಂಜೀವಿನಿ ಒಕ್ಕೂಟಗಳಲ್ಲಿ ಲಭ್ಯವಿದ್ದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿಯ ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕಕ್ಕೆ ದಿನಾಂಕ 08.01.2026 ರ ಸಂಜೆ:5.30 ರೊಳಗೆ ಸಲ್ಲಿಸಬೇಕು. ದಿನಾಂಕ ಮುಗಿದ ನಂತರ ಸ್ವೀಕೃತವಾಗುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಜೀವಿನಿ ಜಿಲ್ಲಾ, ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳನ್ನು ಸಂಪರ್ಕಿಸಿ ಎಂದು ಜಿಪಂ ಸಿಇಒ ಡಾ.ಕೆ ಎನ್ ಅನುರಾಧ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

    ಅಕ್ಕ ಕೆಫೆ ನಿರ್ವಹಿಸಲು ಮಹಿಳಾ ಸ್ವಸಹಾಯ ಗುಂಪುಗಳ ಆಯ್ಕೆ ಮಾನದಂಡಗಳು ನಿಗದಿ ಪಡಿಸಿದ್ದು ಅಕ್ಕ ಕಥೆಯಲ್ಲಿ ತೊಡಗಿಸಿಕೊಳ್ಳುವವರು ಕಡ್ಡಾಯವಾಗಿ ಜಿಲ್ಲೆಯ ಎನ್.ಆರ್.ಎಲ್.ಎಂ ಸ್ವಸಹಾಯ ಗುಂಪಿನವರಾಗಿರಬೇಕು. ವಾಕ್ ಪರಿಣಿತಿಯಲ್ಲಿ ಆಸಕ್ತಿವುಳ್ಳವರಿಗೆ ಮೊದಲ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು/ಪ್ರದೇಶ ಮಟ್ಟದ ಒಕ್ಕೂಟಗಳಡಿ ಅರ್ಹ ಮತ್ತು ಬಂಡವಾಳವನ್ನು ಹೂಡುವ ಸ್ವಸಹಾಯ ಗುಂಪುಗಳಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಯಾವುದೇ ಒಕ್ಕೂಟ/ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರಬಾರದು. ಅಕ್ಕ ಕೆಫೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸುವ ಆದೇಶ ಸುತ್ತೋಲೆಗಳನ್ನು ಪಾಲನೆ ಮಾಡಲು ಬದ್ಧರಾಗಿರಬೇಕು. ರಾಜ್ಯ/ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತರಬೇತಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. ಅಕ್ಕ ಕೆಫೆಯಲ್ಲಿ ತೊಡಗಿಸಿಕೊಳ್ಳುವ ಸ್ವಸಹಾಯ ಗುಂಪಿನಲ್ಲಿ ಕನಿಷ್ಠ 5 ರಿಂದ ಗರಿಷ್ಠ 10 ಮಹಿಳೆಯರಿರುವ ಸ್ವಸಹಾಯ ಗುಂಪನ್ನು ಆಯ್ಕೆ ಮಾಡಲಾಗುವುದು. ಅಕ್ಕ ಕೆಫೆ ಶ್ರೇಣಿಕರಣ ಪ್ರಕ್ರಿಯೆಗೆ ಬದ್ಧರಾಗಿರಬೇಕು.

     

    ಅರ್ಜಿಯೊಂದಿಗೆ ಸ್ವಸಹಾಯ ಗುಂಪು ಮತ್ತು ಸದಸ್ಯರು ಎನ್.ಆರ್.ಎಲ್.ಎಂ ನ ಎಂಐಎಸ್‌ನಲ್ಲಿ ದಾಖಲಾಗಿರುವ ಬಗ್ಗೆ ಎಂಐಎಸ್ ಕೋಡ್ ಮಾಹಿತಿ. ಪಾಕ ಪರಿಣಿತಿಯಲ್ಲಿ ತರಬೇತಿ ಪಡೆದ ಪ್ರಮಾಣ ಪತ್ರ. ದುಡಿಯುವ ಬಂಡವಾಳವನ್ನು ಸದಸ್ಯರು ಹೂಡುವ ಬಗ್ಗೆ, ದೃಢೀಕರಣ ಪತ್ರ. ಒಕ್ಕೂಟ/ಹಣಕಾಸು ಸಂಸ್ಥೆಯ ಸಾಲ ಬಾಕಿದಾರರಾಗಿರದ ಬಗ್ಗೆ ದೃಢೀಕರಣ. ಅಕ್ಕ ಕೆಫೆಯ ನಿರ್ವಹಣೆಯನ್ನು ಗುಂಪಾಗಿ 5 ರಿಂದ 10 ಜನ ಮಹಿಳೆಯರು ನಿರ್ವಹಿಸುವ ಬಗ್ಗೆ ದೃಢೀಕರಣ. ರಾಜ್ಯ/ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ತರಬೇತಿ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಿದ್ಧರಿರುವ ಬಗ್ಗೆ ದೃಢೀಕರಣ. ಅಕ್ಕ ಕೆಫೆ ಸಂಬಂಧಿಸಿದಂತೆ ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸುವ ಆದೇಶ ಸುತ್ತೋಲೆಗಳನ್ನು ಪಾಲನೆ ಮಾಡಲು ಬದ್ಧರಾಗಿರುವ ಬಗ್ಗೆ ದೃಢೀಕರಣ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

  • ದೊಡ್ಡಬಳ್ಳಾಪುರ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ : ಬಂದ್ ಗೆ ಬೆಂಬಲ ನೀಡದ ನೇಕಾರ ಕೂಲಿ ಕಾರ್ಮಿಕರು 

    ವಿಜಯಮಿತ್ರ ದೊಡ್ಡಬಳ್ಳಾಪುರ : ನೇಕಾರರ ಸಂಘಟನೆಗಳು (ಜ 05) ಸೋಮವಾರ ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

    ಸೂರತ್‌ನಿಂದ ದೊಡ್ಡಬಳ್ಳಾಪುರಕ್ಕೆ ಬರುತ್ತಿರುವ ಸೀರೆಗಳ ಹಾವಳಿಯಿಂದ ನೇಕಾರಿಕೆ ಉದ್ಯಮದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಸರಿಪಡಿಸುವಂತೆ ಆಗ್ರಹಿಸಿ ಸೋಮವಾರ ವಿವಿಧ ನೇಕಾರ ಸಂಘಟನೆಗಳ ವತಿಯಿಂದ ಬೆಳಿಗ್ಗೆ 6ಗಂಟೆಯಿಂದ ಸಂಜೆ 6 ಗಂಟೆಯವರೆಗೆಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ನೇಕಾರ ಸಂಘಟನೆಗಳ ಮುಖಂಡರು, ಬೈಕ್ ಜಾಥಾ ಮೂಲಕ ಅಂಗಡಿ ಅಂಗಡಿಗಳಿಗೆ ತೆರಳಿ ನೇಕಾರರ ಸಮಸ್ಯೆಗಳ ಬಗ್ಗೆ ತಿಳಿಸಿ ಬಂದ್‌ಗೆ ಬೆಂಬಲ್ ನೀಡುವಂತೆ ಮನವಿ ಮಾಡಿದ್ದರು. ಆದರೆ ನಗರದ ಕೆಲವೆಡೆ ಅಂಗಡಿಗಳು ಮಾತ್ರ ಬಂದ್ ಆಗಿದ್ದು, ಉಳಿದಂತೆ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬೆಂಬಲ ನೀಡದ ಕೂಲಿ ಕಾರ್ಮಿಕರು

    ನೇಕಾರರ ಸಂಘಟನೆಗಳು ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್‌ಗೆ ಕೆಲ ಕೂಲಿ ಕಾರ್ಮಿಕರು ಬೆಂಬಲವನ್ನು ನೀಡದೆ ಹೊರಗುಳಿದ್ದಿದ್ದು, ತಾಲೂಕಿನಲ್ಲಿ ಹೊಲಸಿಗತಾಲೂಕಿನಲ್ಲಿ ವಲಸಿಗ ಕಾರ್ಮಿಕರ ಹಾವಳಿ ಕಾರ್ಮಿಕರ ಹೆಚ್ಚಾಗಿದ್ದು ಸ್ಥಳೀಯ ಕಾರ್ಮಿಕರ ಪರಿಸ್ಥಿತಿ ಹದಗೆಟ್ಟಿದೆ ಮಾಲೀಕರು ತಮ್ಮ ಸಮಸ್ಯಗಳನ್ನು ಆಲಿಸುವಂತೆ ಕಾರ್ಮಿಕರು ಆಗ್ರಹಿಸಿದರು.

    ಅಂಗಡಿ ಮುಗ್ಗಟ್ಟು ಬಂದ್ 

    ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರ ಸಂಘಟನೆಗಳು ನೀಡಿದ ಬಂದ್‌ಗೆ ಸೋಮವಾರ ಬೆಳಿಗ್ಗೆ ಕೆಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು. ಇನ್ನೂ ಕೆಲ ಅಂಗಡಿಗಳು ಮಧ್ಯಾಹ್ನದ ವೇಳೆ ಮತ್ತೆ ತೆರೆದವು. ಬೆಳಿಗ್ಗೆ ಬಂದ್‌ಗೆ ಬೆಂಬಲ ನೀಡಿ ಮುಚ್ಚಲಾಗಿದ್ದ ಬೀದಿ ಬದಿ ವ್ಯಾಪಾರವೂ ಕೂಡ ಮಧ್ಯಾಹ್ನದ ಆರಂಭವಾಗಿತ್ತು. ನಗರದ ಕೃಷ್ಣರಾಜ ಮಾರುಕಟ್ಟೆಗಳಲ್ಲಿ ಕೆಲ ಅಂಗಡಿಗಳು ಕೂಡ ಬಂದ್ ಆಗಿದ್ದು, ಮಾರುಕಟ್ಟೆಯಲ್ಲಿ ಜನಸಂಖ್ಯೆ ವಿರಳವಾಗಿತ್ತು. ಇದನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಜನಜೀವನವೂ ಸಾಮಾನ್ಯದಂತೆಯೇ ಇತ್ತು. ಸಾರಿಗೆ ವ್ಯವಸ್ಥೆ ಕೂಡ ಎಂದಿನಂತೆಯೇ ಇತ್ತು. ಯಾವುದೇ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರಲಿಲ್ಲ.

    ನೇಯ್ಗೆ ಉದ್ಯಮದ ಬಿಕ್ಕಟ್ಟು ಪರಿಹರಿಸಲು ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ. ಜತೆಗೆ ಮುಖ್ಯಮಂತ್ರಿಗಳು, ಕೇಂದ್ರ ಜವಳಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಲು ತೀರ್ಮಾನಿಸಲಾಗಿದೆ ಎಂದು ನೇಕಾರ ಮುಖಂಡರು ತಿಳಿಸಿದ್ದಾರೆ.

     

     

  • ದೇಶದ ಮೊದಲ ರನ್ ವೇ ಸ್ವಚ್ಛತಾ ವಾಹನವನ್ನು ನೋಯ್ದಾದ ಎನ್.ಐ.ಎ.ಎಲ್ ಗೆ ಹಸ್ತಾಂತರಿಸಿದ ಸಚಿವ ಎಂ.ಬಿ.ಪಾಟೀಲ

     

    ಬೆಂಗಳೂರು ಗ್ರಾಮಾಂತರ:  ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಸೋಮವಾರ ನೋಯ್ಡಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ ಗೆ (ಎನ್.ಐ.ಎ.ಎಲ್) ಹಸ್ತಾಂತರಿಸಿದರು.

     

    ಭಾರತದ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಸ್ವಿಟ್ಜರ್ ಲೆಂಡ್ ನ ಮೆಸರ್ಸ್ ಬುಕರ್ ಮುನಿಸಿಪಲ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಲ್ಲಿ ಜೋಡಣೆಗೊಂಡು ತಯಾರಾಗಿರುವ ಈ ಮಾದರಿಯ ಎರಡು ವಾಹನಗಳ ಕೀಲಿಕೈಗಳನ್ನು ನೋಯ್ಡಾ ವಿಮಾನ ನಿಲ್ದಾಣದ ಪ್ರತಿನಿಧಿ ಪ್ರದೀಪ್ ರಾಣಾ ಅವರಿಗೆ ನೀಡಿದರು.

    ಈ ವೇಳೆ ಮಾತನಾಡಿದ ಅವರು ನಗರದ ರಸ್ತೆಗಳನ್ನು ಸ್ವಚ್ಛ ಮಾಡುವ ಸ್ವೀಪಿಂಗ್ ಮಿಷಿನ್ ವಾಹನಗಳ ತಯಾರಿಕೆಗೂ ಗಮನ ಕೇಂದ್ರೀಕರಿಸಿರುವ ಆನ್ ಲಾನ್ ನಂತಹ ಕಂಪನಿಗಳು ನಮ್ಮ ಪೂರೈಕೆ ಸರಪಳಿಯ ಬುನಾದಿಯಾಗಿವೆ. ಆನ್ ಲಾನ್ ಕಂಪನಿಯು ಸರ್ಕಾರದ ನೀತಿಗಳು ಹಾಗೂ ಕಾರ್ಯಪರಿಸರವನ್ನು ಬಳಸಿಕೊಂಡು ಈಗ ತಯಾರಿಸಿರುವ ವಾಹನಕ್ಕೆ ರಫ್ತು ಮಾರುಕಟ್ಟೆಗಳನ್ನು ಶೋಧಿಸಿಕೊಳ್ಳಬೇಕು. ನಮ್ಮ ಕೈಗಾರಿಕಾ ನೀತಿಯು (2025-30) ಗುರಿ ನಿರ್ದೇಶಿತ ಬೆಂಬಲ ಹಾಗೂ ಗುಣಮಟ್ಟ ಪ್ರಮಾಣಪತ್ರ ಪ್ರೋತ್ಸಾಹಕ ಕ್ರಮಗಳ ಮೂಲಕ ಆನ್ ಲಾನ್ ನಂತಹ ಕಂಪನಿಗಳಿಗೆ ಉತ್ತೇಜನ ನೀಡುತ್ತದೆ ಎಂದರು.

     

    ಕಾರ್ಯಕ್ರಮದ ನಂತರದ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಫಾಕ್ಸ್ ಕಾನ್ ಕಂಪನಿಯು ಸದ್ಯ 30,000 ಜನರಿಗೆ ಉದ್ಯೋಗ ನೀಡಿದ್ದು, ಇದರಲ್ಲಿ ಶೇ 80ರಷ್ಟು ಮಂದಿ ಮಹಿಳೆಯರೇ ಇರುವುದು ಸಂತಸದ ಸಂಗತಿ. ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ 20 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಚೀನಾ ಮತ್ತು ವಿಯೆಟ್ನಾಂ ರೀತಿ ತಯಾರಿಕಾ ವಲಯದಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

    ಕಾರ್ಯಕ್ರಮದ ನಂತರದ ಸ್ಥಳೀಯ ಉದ್ಯಮಿಗಳ ಜತೆಗೂ ಸಚಿವರು ಮಾತನಾಡಿದರು. ಕೆಲವರು ತಮ್ಮ ಉದ್ಯಮ ವಿಸ್ತರಿಸಲು ಭೂಮಿ ಕೇಳುತ್ತಿದ್ದು, ಇದನ್ನು ಲಭ್ಯವಾಗಿಸಲಾಗುವುದು ಎಂದು ಭರವಸೆ ನೀಡಿದರು.

     

    ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪಿ ಎಂ ಉನ್ನಿಕೃಷ್ಣನ್ ನಾಯರ್ ಮಾತನಾಡಿ ನಾವು ಯುರೋಪ್ ಮತ್ತು ಅಮೆರಿಕ ಮಾದರಿಗಳನ್ನು ಪ್ರತಿನಿಧಿಸುತ್ತಾ ರಕ್ಷಣಾ ಯಂತ್ರಗಳು, ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ನಗರ ಸ್ವಚ್ಛತೆ ಯಂತ್ರಗಳ ನಿರ್ಮಾಣ ಮಾಡುತ್ತಿದ್ದು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಸ್ಥಳೀಯ ಕಂಪನಿಗಳಿಂದ ಅಗತ್ಯ ವಸ್ತುಗಳನ್ನು ಪಡೆಯುವ ಮೂಲಕ ದೇಶದಲ್ಲೇ ಮೊದಲ ಬಾರಿಗೆ ವಿಮಾ ನಿಲ್ದಾಣದ ರನ್ ವೇ ಸ್ವಚ್ಛಗೊಳಿಸುವ ಯಂತ್ರವನ್ನು ನಿರ್ಮಿಸಿದ್ದೇವೆ. ವಿಮಾನದ ಟಯರ್ ಗಳಿಗೆ ಅಪಾಯಕಾರಿಯಾಗಬಹುದಾದ ಮೊಳೆಗಳು ಹಾಗೂ ಚೂಪಾದ ಲೋಹದ ತುಣುಕುಗಳನ್ನು ರನ್ ವೇ ಮೇಲಿಂದ ತೆರವುಗೊಳಿಸುವ ಕಾರ್ಯವನ್ನು ಈ ವಾಹನ ಮಾಡಲಿದೆ. ದೂಳನ್ನೂ ಹೀರಿಕೊಳ್ಳಲಿದೆ. ಜೊತೆಗೆ, ಮುಖ್ಯವಾಗಿ ವಿಮಾನಗಳು ಇಳಿಯುವಾಗ ರನ್ ವೇಯಲ್ಲಿ ಜಾರುವ ಸಾಧ್ಯತೆ ತಂದೊಡ್ಡಬಹುದಾದ ಪಾಚಿಯನ್ನು ತೆಗೆದುಹಾಕುವ ಕಾರ್ಯವನ್ನು ಇದು ನಿರ್ವಹಿಸಲಿದೆ ಎಂದರು.

    ರಸ್ತೆ ಸ್ವಚ್ಛತೆಗಾಗಿ ಜಂಬಲ್ ಪುರ ಕ್ಕೆ ಈಗಾಗಲೇ ನಮ್ಮ ಕ್ಲೀನಿಂಗ್ ಯಂತ್ರಗಳನ್ನು ನೀಡಲಾಗಿದ್ದು ನಗರದ ಪ್ರಮುಖ ರಸ್ತೆಗಳ ಸ್ವಚ್ಛತಾ ಕಾರ್ಯಕ್ಕೆ ಅತೀ ಶೀಘ್ರದಲ್ಲಿ ಮುಂದಾಗಲಿವೆ.ವಿಮಾನ ನಿಲ್ದಾಣದ ರನ್ ವೇ ಸ್ವಚ್ಛಗೊಳಿಸುವ ಯಂತ್ರಗಳು ಸುಮಾರು 4 ರಿಂದ 4.5 ಕೋಟಿ ವೆಚ್ಚದ ವಾಹನಗಳಾಗಿದ್ದು.ರಸ್ತೆ ಸ್ವಚ್ಛಗೊಳಿಸುವ ವಾಹನಗಳು ಸುಮಾರು 3 ಕೋಟಿ ವೆಚ್ಚದಲ್ಲಿ ಲಭ್ಯವಾಗಲಿವೆ e ಎಂದು ತಿಳಿಸಿದರು.

     

     

    ಈ ವೇಳೆ ಮಾಜಿ ಶಾಸಕ ವೆಂಕಟರಮಣ, ಲೆಕ್ಕಪರಿಶೋಧಕ ಜಿ.ಜಿ.ಪಾಟೀಲ, ನೋಯ್ದಾ ವಿಮಾನ ನಿಲ್ದಾಣದ ಲೀಡ್ ಗ್ರೌಂಡ್ ವಿನೋದ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

  • ರೈತರ ಶಕ್ತಿವರ್ಧನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಕೀರ್ತಿ ಅಪ್ಪಯ್ಯಣ್ಣ ಅವರದ್ದು – ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

    ದೊಡ್ಡಬಳ್ಳಾಪುರ: ದಿವಂಗತ ಅಪ್ಪಯ್ಯಣ್ಣ ಅವರ ಸವಿ ನೆನಪಿಗಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

    ತಾಲೂಕಿನ ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ದಿವಂಗತ ಅಪ್ಪಯ್ಯಣ್ಣ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ಮಾತನಾಡಿದರು. ಅಪ್ಪಯ್ಯಣ್ಣ ಅವರ ಜೀವನ ಶೈಲಿ ಹಾಗೂ ಸೇವಾ ಮನೋಭಾವ ಇಂದಿನ ರಾಜಕೀಯಕ್ಕೆ ಮಾದರಿಯಾಗಬೇಕಾದದ್ದು ಎಂದು ಅಭಿಪ್ರಾಯಪಟ್ಟರು.

    ಸಾಮಾಜಿಕ ನ್ಯಾಯದ ಪರವಾಗಿ ರಾಜಕೀಯ ಹೋರಾಟ ನಡೆಸಿ, ಸಹಕಾರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ದಿವಂಗತ ಹಾಡೋನಹಳ್ಳಿ ಹೆಚ್. ಅಪ್ಪಯ್ಯಣ್ಣ ಅವರ ನಿಧನವು ನನ್ನಂತಹ ಅವರ ಅಪಾರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

    ಒಂದು ವರ್ಷದ ಹಿಂದೆ ಅವರ ನಿಧನದ ಸುದ್ದಿ ತಿಳಿದಾಗ ನಂಬಲಾಗದೆ ಹೋಯಿತು. ಇದು ತಪ್ಪು ಮಾಹಿತಿ ಇರಬಹುದೆಂದು ಭಾವಿಸಿದ್ದೆ. ಸದಾ ಚುರುಕಾಗಿ ಸಮಾಜಸೇವೆಯಲ್ಲಿ ತೊಡಗಿದ್ದ, ಉತ್ತಮ ಆರೋಗ್ಯ ಹೊಂದಿದ್ದ ವ್ಯಕ್ತಿಯ ಅಕಾಲಿಕ ನಿಧನ ಅತೀವ ಅನಿರೀಕ್ಷಿತವಾಗಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

     

    ನಮ್ಮ ಒಡನಾಟ ತಂದೆ–ಮಗನ ಸಂಬಂಧದಂತಿತ್ತು. ಸಣ್ಣ ಹಳ್ಳಿಯ ರೈತನ ಮಗನಾಗಿ ಜನಿಸಿ, ತಾಲೂಕು ಮಟ್ಟದ ನಾಯಕನಾಗಿ ಬೆಳೆದ ಅವರ ಜೀವನ ಪಯಣ ಸುಲಭವಾಗಿರಲಿಲ್ಲ. ರೈತರ ಶಕ್ತಿವರ್ಧನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಕೀರ್ತಿ ಅವರದ್ದು. ಸಹಕಾರ ಕ್ಷೇತ್ರದಲ್ಲಿ ವಿಶೇಷವಾಗಿ ರೈತ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆಯೇ ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ನಿಸರ್ಗ ನಾರಾಯಣಸ್ವಾಮಿ ಹೇಳಿದರು.

    ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನೂರಾರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದಾನ ಶಿಬಿರಕ್ಕೂ ಉತ್ತಮ ಸ್ಪಂದನೆ ದೊರೆಯಿತು ಈ ವೇಳೆ ಎಚ್.ಅಪ್ಪಯ್ಯಣ್ಣನವರ ಅಭಿಮಾನಿಗಳಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು ಹಾಗೂ

    ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಅಲ್ಲದೆ ವೃದ್ಧರಿಗೆ ಊರುಗೋಲು ಹಾಗೂ ಕಂಬಳಿ, ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಆಂಜಿನಪ್ಪ, ಡಾ. ವಿಜಯಕುಮಾರ್, ಅಪ್ಪಯ್ಯಣ್ಣನವರ ಪುತ್ರ ನಾಗರಾಜು, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ಮಾಜಿ ಎಂಎಲ್‌ಸಿ ರಮೇಶ್ ಗೌಡ, ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪ, ಚಂದ್ರಣ್ಣ, ಹಿರಿಯ ಬಿಜೆಪಿ ಮುಖಂಡ ಹನುಮಂತರಾಯಪ್ಪ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಟಿಎಪಿಸಿಎಂಎಸ್ ಸದಸ್ಯ ಪುರೋಷೋತ್ತಮ, ಜೆಡಿಎಸ್ ಮುಖಂಡರಾದ ಹರೀಶ್ ಗೌಡ, ಹುಸ್ಕೂರು ಆನಂದ್, ಜಗನ್ನಾಥ್, ಮುದ್ದಣ್ಣ, ಬಚ್ಚಳ್ಳಿ ನಾಗರಾಜು, ಗೌರೀಶ್, ಯುವ ಮುಖಂಡ ಉದಯ ಆರಾಧ್ಯ ಸೇರಿದಂತೆ ಹಲವರು ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

  • ದಿ.ಆರ್. ನಾರಾಯಣಪ್ಪ ಅವರ ಸ್ಮರಣಾರ್ಥವಾಗಿ ತೂಬಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಆಯೋಜನೆ 

    ದೊಡ್ಡಬಳ್ಳಾಪುರ : ತಾಲ್ಲೂಕಿನ ತೂಬಗೆರೆ ಗ್ರಾಮದಲ್ಲಿ ಕೀರ್ತಿ ಶೇಷರಾದ ಆರ್. ನಾರಾಯಣಪ್ಪ ಅವರ ನೆನಪಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿ ಅರ್ಥಪೂರ್ಣವಾಗಿ ನಡೆಯಿತು.

    ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಶಾಸಕ ಧೀರಜ್ ಮುನಿರಾಜು ಉದ್ಘಾಟಿಸಿ ಮಾತನಾಡಿ, “ತಮ್ಮ ಜೀವನಪೂರ್ತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಆರ್. ನಾರಾಯಣಪ್ಪ ಅವರು ತೂಬಗೆರೆ ಭಾಗದಲ್ಲಿ ‘ಅನ್ನದಾನಿ ನಾರಾಯಣಪ್ಪ’ ಎಂದೇ ಖ್ಯಾತಿ ಪಡೆದಿದ್ದರು. ಅವರ ಅಗಲಿಕೆ ಸಮಾಜಕ್ಕೆ ಅಪಾರ ನಷ್ಟ. ಆದರೆ ಅವರ ಸೇವಾ ಪರಂಪರೆ ಇಂತಹ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಮುಂದುವರಿಯುತ್ತಿರುವುದು ಶ್ಲಾಘನೀಯ,” ಎಂದರು.

    ಇದೇ ಸಂದರ್ಭದಲ್ಲಿ ವೈ.ಕೆ.ಸಿ ಕಬ್ಬಡಿ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಶ್ರೀ ಸಬ್ಸಿಡಿ ಆರ್. ನಾರಾಯಣಪ್ಪ ಕಪ್’ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.

     

    ದೇವನಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಅಂಬರೀಶ್ ಗೌಡ ಮಾತನಾಡಿ, “ಯುವಕರು ದುಶ್ಚಟಗಳಿಂದ ದೂರವಿರಲು ಕ್ರೀಡಾಕೂಟಗಳು ಅಗತ್ಯ. ಇಲ್ಲಿ ಗೆಲುವು–ಸೋಲು ಮುಖ್ಯವಲ್ಲ; ಭಾಗವಹಿಸುವ ಮನೋಭಾವವೇ ಮಹತ್ವದ್ದು. ಕ್ರೀಡೆಯಲ್ಲಿ ಶಿಸ್ತು, ಪರಿಶ್ರಮ ಮತ್ತು ತಪಸ್ಸು ಅಡಗಿದೆ,” ಎಂದು ಹೇಳಿದರು.

    ಆಕಾಶ್ ಆಸ್ಪತ್ರೆ, ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ ಹಾಗೂ ಟಿ.ಎನ್. ಕೃಷ್ಣಪ್ಪ ಅವರ ಕುಟುಂಬಸ್ಥರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನೂರಾರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

    ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಹನುಮಂತರಾಯಪ್ಪ, ಕೆಪಿಸಿಸಿ ಸದಸ್ಯ ಮುನಿರಾಜು, ಘಾಟಿ ಪ್ರಾಧಿಕಾರ ಸದಸ್ಯ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ವಕೀಲ ಪ್ರತಾಪ್, ಓಬದೇನಹಳ್ಳಿ ಮುನಿಯಪ್ಪ, ನಿವೃತ್ತ ಯೋಧ ಅನಂತರಾಜ ಗೋಪಾಲ್, ಮುಖಂಡ ಬಿ.ಕೆ. ನಾರಾಯಣಸ್ವಾಮಿ, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ರೈತ ಮುಖಂಡ ವಾಸು, ಮುಖಂಡರಾದ ಕನಕದಾಸ, ಧನುಂಜಯ, ಮುನಿಕೃಷ್ಣಪ್ಪ, ಯುವ ಮುಖಂಡ ಉದಯ ಆರಾಧ್ಯ, ಮಧು, ನಿಖಿಲ್, ವಿನಯ್, ಲಯನ್ಸ್ ಕ್ಲಬ್ ಸದಸ್ಯರು, ಆಕಾಶ್ ಆಸ್ಪತ್ರೆಯ ಪ್ರತಿನಿಧಿಗಳು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.