Blog

  • ಘಾಟಿ ಸುಬ್ರಮಣ್ಯ : ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಗೆ ಘಾಟಿ ಸುಬ್ರಮಣ್ಯ ಸಜ್ಜು ಪ್ಲಾಸ್ಟಿಕ್ ಬಳಸದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿದ ಕಾರ್ಯದರ್ಶಿ- ಪಿ ದಿನೇಶ್

    ದೊಡ್ಡಬಳ್ಳಾಪುರ : ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಹಾಗೂ ದೇವಾಲಯದ ಪ್ರಸಿದ್ದಿಯನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ನಿಟ್ಟಿನಲ್ಲಿ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನ ರಚನೆ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್ ತಿಳಿಸಿದರು.

     

    ಈ ಕುರಿತು ಮಾತನಾಡಿದ ಅವರು ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಆಕ್ಷನ್ ಪ್ಲ್ಯಾನ್ ಸಿದ್ದಪಡಿಸಿ ಹಂತ ಹಂತವಾಗಿ ಅನುಷ್ಟಾನಗೊಳಿಸಲು ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಿ ದೇವಾಲಯದ ವ್ಯಾಪ್ತಿಯ 10 ಎಕರೆ 23 ಗುಂಟೆ ಮತ್ತು ಎಸ್.ನಾಗೇನಹಳ್ಳಿ ಗ್ರಾಮದ (ಪಾಲ್ ಪಾಲ್ ದಿನ್ನೆ ಕೆರೆ ಹತ್ತಿರ) ಇರುವ 23 ಎಕರೆ 18 ಗುಂಟೆ ಜಮೀನುಗಳಲ್ಲಿ ಕೈಗೊಳ್ಳಬೇಕಾದ ಅತ್ಯಾವಶ್ಯಕವಾದ ಮತ್ತು ಅತಿ ತುರ್ತಾಗಿ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲಾಗಿದೆ.

     

    ಇದನ್ನೂ ಓದಿ : – ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಪಿ. ದಿನೇಶ್ ಅಧಿಕಾರ ಸ್ವೀಕಾರ https://www.vijayamitra.com/2025/06/12/as-the-new-secretary-of-sri-ghati-subrahmanya-swamy-development-authority-p-dinesh-takes-charge/

     

    ನೂತನ ಅನ್ನದಾಸೋಹ ಭವನ, ಕ್ಯೂ ಕಾಂಪ್ಲೆಕ್ಷ್, ಪಾರ್ಕಿಂಗ್ ಮತ್ತು ಇನ್ನಿತರೇ ಸೌಲತ್ತುಗಳನ್ನು ಮೊದಲನೆಯ ಹಂತದಲ್ಲಿ ಮತ್ತು ಎರಡನೆಯ ಹಂತದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ದೇವಾಯದ ಸುತ್ತಲಿನ 400 ಮೀ. ಸುತ್ತಳತೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಜಮೀನಿಗಳನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು, ಶ್ರೀ ಘಾಟಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

     

    ಪ್ರಾಧಿಕಾರದ ಬಗ್ಗೆ….ಒಂದಿಷ್ಟು ಮಾಹಿತಿ…

    ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಜರಾಯಿ ಸಚಿವರಾದ ರಾಮಲಿಂಗರೆಡ್ಡಿಯವರು ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ ಉಪಾಧ್ಯಕ್ಷರು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಸದಸ್ಯರಾಗಿದ್ದು, 05 ಜನ ನಾಮ ನಿರ್ದೇಶಿತ ಸದಸ್ಯರು ಪ್ರಾಧಿಕಾರದಲ್ಲಿರುತ್ತಾರೆ.

    ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಮತ್ತು ಆದಾಯ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ದೇವಾಲಯಕ್ಕೆ ಬರುವ ಆದಾಯವನ್ನು ಅದೇ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು, ಅದಕ್ಕಾಗಿ ವಾರ್ಷಿಕ ಆಯ-ವ್ಯಯವನ್ನು ತಯಾರಿಸಿ ಸಿಬ್ಬಂದಿ ವೇತನ, ದೇವಾಲಯದಲ್ಲಿ ನಡೆಯುವ ಸೇವೆಗಳು, ಅನ್ನದಾಸೋಹ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.

     

    ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮುಖ್ಯ ವಾಸ್ತುಶಿಲ್ಪಿಗಳಿಂದ ಪ್ಲ್ಯಾನ್ ಮಾಡಿಸಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಅಂದಾಜುಪಟ್ಟಿ ಮಾಡಿಸಿ ಮಾನ್ಯ ಪ್ರಾಧಿಕಾರದ ಅನುಮೋದನೆ ಪಡೆದು ಅನುಷ್ಟಾನಗೊಳಿಸಲಾಗುವುದು. ಘಾಟಿ ಕ್ಷೇತ್ರಕ್ಕೆ ಸಾಮಾನ್ಯ ದಿನಗಳಂದು ಸುಮಾರು 2000 ಜನ, ಭಾನುವಾರ ಮತ್ತು ಮಂಗಳವಾರಗಳಂದು 12 ರಿಂದ 15 ಸಾವಿರ ಜನರು ಆಗಮಿಸುತ್ತಿರುತ್ತಾರೆ. ಭಕ್ತದಿಗಳಿಗೆ ಸಕಲ ಸೌಲಭ್ಯ ಒದಗಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

     

    ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಗೆ ಘಾಟಿ ಸುಬ್ರಮಣ್ಯ ಸಜ್ಜು 

    ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ಆಗಸ್ಟ್ 15ರೊಳಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಚಿವರು ಸೂಚಿಸಿರುತ್ತಾರೆ. ಇದಕ್ಕಾಗಿ ಮೊದಲನೆಯ ಹಂತದಲ್ಲಿ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಯವರ ಸಹಯೋಗದೊಂದಿಗೆ ಸ್ಥಳೀಯವಾಗಿ ಅಂಗಡಿ ಮಳಿಗೆಗಳಲ್ಲಿ ಬಳಸಲಾಗುತ್ತಿರುವ ಪ್ಲಾಸ್ಟಿಕ್ ನಿಯಂತ್ರಿಸುವ ಬಗ್ಗೆ, ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಮಾಡಿದವರ ಮಾರಾಟ ಪರವಾನಿಗಿ ರದ್ದು ಮಾಡಲು ಕ್ರಮ ಕೈಗೊಳ್ಳಲಾವುದು, ದೇವಾಲಯದ ಪ್ರತಿ ಗೇಟ್ ಗಳಲ್ಲೂ ಪ್ರತಿ ಭಕ್ತಾದಿಯನ್ನು ತಪಾಸಣೆ ಮಾಡುವ ಮೂಲಕ ಪ್ಲಾಸ್ಟಿಕ್ ನಿರ್ಬಂಧಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಅಲ್ಲದೇ ದೇವಾಲಯಕ್ಕೆ ಬರುವ ಭಕ್ತಾದಿಗಳು ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವ ಮೂಲಕ ದೇವಾಲಯದ ವಾತಾವರಣ ಸ್ವಚ್ಛವಾಗಿಡಲು ಸಹಕರಿಸಬೇಕಾಗಿ ಮನವಿ ಮಾಡಿದರು .

     

     

  • ಜೂನ್ 21 ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

    ಜಿಲ್ಲಾ ಮಟ್ಟದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು. ಆ ದಿನ ಬೆಳಗ್ಗೆ 7:00 ಗಂಟೆಯಿಂದ 7:45 ಗಂಟೆಯ ವರೆಗೆ ಯೋಗಾಭ್ಯಾಸ ನಡೆಯಲಿದೆ.

     

    ಶಿಷ್ಟಾಚಾರದಂತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುದ್ರಿಸಿ, ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಕ್ರೀಡಾಂಗಣದ ಸ್ವಚ್ಛತೆ,ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

     

    ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರನ್ನು ಒಳಗೊಂಡ ಯೋಗಾಭ್ಯಾಸ ನಡೆಯಲಿದೆ. ಜೊತೆಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲಾ-ಕಾಲೇಜುಗಳು, ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯಾ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಆಯೋಜಕರಿಗೆ ಸೂಚಿಸಿದರು.

     

    ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು,ಸಂಘ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.

     

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಶುಹಬುದ್ದೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಲಕ್ಕಾ ಕೃಷ್ಣಾ ರೆಡ್ಡಿ , ಅಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ಎಲ್ಲಾ ಸಣ್ಣ ಸಣ್ಣ ಸಮಾಜಗಳೂ ಆರ್ಥಿಕವಾಗಿ ಮೇಲೆ ಬರಬೇಕು: ಸಿ.ಎಂ.ಸಿದ್ದರಾಮಯ್ಯ

    ಬೆಂಗಳೂರು : ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಕೂಡ ಸರ್ವರಿಗೂ ಸಮಾನವಾಗಿ ಕಾಣುವುದಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಕಾಂಗ್ರೆಸ್ ಪರಿಗಣಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

     

    ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡವರ ಕೊಡುಗೆ ಅಪಾರ ಎಂದು ಮೆಚ್ಚುಗೆ ಸೂಚಿಸಿದರು.

     

    ಎ.ಕೆ.ಸುಬ್ಬಯ್ಯ ಮ ಮತ್ತು ಎಂ.ಸಿ.ನಾಣಯ್ಯ ಉತ್ತಮ ಸಂಸದೀಯ ಪಟುಗಳು. ಇವರು ಸದನದಲ್ಲಿ ಸಮಾಜಮುಖಿಯಾಗಿ ಮಾತನಾಡಿದ ಫೈರ್ ಬ್ರಾಂಡ್ ಗಳು. ಪೊನ್ನಣ್ಣ ಅವರಿಗೂ ಫೈರ್ ಬ್ರಾಂಡ್ ಆಗುವ ಎಲ್ಲಾ ಲಕ್ಷಣಗಳೂ ಇವೆ ಎಂದರು.

     

    ಯಾವುದೇ ಸಮುದಾಯಗಳು ಜಾಗ ಕೇಳಿದರೂ ಗೈಡೆನ್ಸ್ ಬೆಲೆಯಲ್ಲಿ ಶೇ10 ರಷ್ಟು ಬೆಲೆಗೆ ಕೊಡಬೇಕು ಎಂದು ಕಂದಾಯ ಸಚಿವರಿಗೆ ಸೂಚಿಸಿದ್ದೇನೆ. ಅದರಂತೆ ಕೊಡವ ಸಮಾಜಕ್ಕೂ ನೀಡಿದ್ದೇವೆ ಎಂದರು.

     

    ನಾವೆಲ್ಲರೂ ಭಾರತೀಯರು ಮತ್ತು ಕನ್ನಡಿಗರು. ದೇಶ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಕೊಡವರು ಜಾತಿ-ಧರ್ಮ ಮಾಡುವವರಲ್ಲ. ಎಲ್ಲರನ್ನೂ ಭಾರತೀಯರು ಎಂದು ಗೌರವಿಸುವವರು ಎಂದರು.

     

    ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಕೂಡ ಸರ್ವರಿಗೂ ಸಮಾನವಾಗಿ ಕಾಣುವುದಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಕಾಂಗ್ರೆಸ್ ಪರಿಗಣಿಸುತ್ತದೆ ಎಂದರು.

     

    ಜಾತಿ ಇರಲಿ, ಧರ್ಮ‌ ಇರಲಿ ಅದೆಲ್ಲಾ ಮನೆಯೊಳಗೆ ಆಚರಣೆಯಾಗಲಿ. ಹೊರಗೆ ಬಂದ ಕೂಡಲೇ ನಾವೆಲ್ಲರೂ ಒಂದೇ, ನಾವು ಭಾರತೀಯರಾಗಬೇಕು ಎಂದು ಕರೆ ನೀಡಿದರು.

     

    ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವ ಸಂಬಂಧ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದರು.

     

    ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿಚರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಕೃಷ್ಣಬೈರೇಗೌಡ ಹಾಗೂ ಶಾಸಕರೂ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಹಾಗೂ ಶಾಸಕ ಮಂಥರ್ ಗೌಡ ಅವರು ಉಪಸ್ಥಿತರಿದ್ದರು.

  • ಶಾಸಕ, ಸಂಸದ ಆಗೋದು ನನ್ನ ಗುರಿಯಲ್ಲ : ಪಕ್ಷವನ್ನ ಬಲಿಷ್ಠವಾಗಿ ಸಂಘಟಿಸಲು ಬೂತ್ ಮಟ್ಟದಲ್ಲಿ ತಂಡ ರಚಿಸಿ ಎಂದು ನಿಖಿಲ್ ಕರೆ

    ತುಮಕೂರು : ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ತುಮಕೂರು ಪ್ರವಾಸ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಅವರು ಗುಬ್ಬಿ ಮತ್ತು ಕುಣಿಗಲ್ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.

    ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ಇವತ್ತಿಂದ ರಾಜ್ಯ ಪ್ರವಾಸ ಮಾಡುತ್ತಿರುವುದು ನನ್ನ ಸೌಭಾಗ್ಯ ಇದು. ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿರುವುದು ನಿಮ್ಮ ಜತೆಗೆ ಸಂಬಂಧ ಬೇಕು, ಸಂಪರ್ಕ ಬೇಕು, ಭಾಂದವ್ಯ ಬೇಕು ನಮ್ಮ ನಿಮ್ಮ ನಂಟು ಬೆಳಿಯಬೇಕು ಎಂದು ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.

     

    ಈ ಪಕ್ಷದಲ್ಲಿ ದುಡಿದಿರುವ ಎಲ್ಲಾ ಹಿರಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡ್ತೀನಿ. ಯುವಕರು ಇಂದು ದೊಡ್ಡ ಮಟ್ಟದಲ್ಲಿ ನನ್ನ ಜತೆ ಹೆಜ್ಜೆ ಹಾಕಲು ಮುಂದೆ ಬಂದಿದ್ದಾರೆ. ನಾವೆಲ್ಲರೂ ಮೊದಲು ಪಕ್ಷದಲ್ಲಿನ ಹಿರಿಯರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗೋಣ ಎಂದು ಯುವಕರಿಗೆ ಮನವಿ ಮಾಡಿದರು.

     

    ನಾನು ಶಾಸಕನಾಗಬೇಕು, ಸಂಸದನಾಗಬೇಕೆಂದು ರಾಜ್ಯ ಪ್ರವಾಸ ಮಾಡುತ್ತಿಲ್ಲ, ನಾನು ಶಾಸಕನಾಗಬೇಕಾಗಿದ್ರೆ ನಾನು ರಾಜ್ಯ ಪ್ರವಾಸ ಮಾಡುವ ಅಗತ್ಯ ಇರಲಿಲ್ಲ. ಸಂಸದ ಆಗೋದು ನನ್ನ ಗುರಿಯಲ್ಲ.ಪಕ್ಷ ಕಟ್ಟಿದವರಿಗೆ ದಡ ಮುಟ್ಟಿಸಬೇಕು ನೀವೆಲ್ಲಾ ನಮ್ಮ ಜೊತೆ ಕೈ ಜೋಡಿಸಿ ಎಂದು ಮನವಿ ಮಾಡಿದರು.

     

    ಸಾರ್ವತ್ರಿಕ ಚುನಾವಣೆ ಯಾವಾದರೂ ಆಗಲಿ ತಾಲೂಕು.. ಜಿಲ್ಲಾ ಪಂಚಾಯತಿ ಚುನಾವಣೆ ಬುನಾದಿಯಾಗಲಿ. ಸಾಕಷ್ಟು ಜನ ದೊಡ್ಡ ದೊಡ್ಡ ಹಿರಿ ತಲೆಗಳು ದೇವೇಗೌಡರ ಜತೆ ರಾಜಕಾರಣ ಮಾಡಿದ್ದಾರೆ, ಅಂದು 58 ಶಾಸಕರನ್ನ ಜೆಡಿಎಸ್ ಗಳಿಸಿತ್ತು. ಆದ್ರೆ ಇವತ್ತು ನಾವೆಲ್ಲರೂ ಶಪಥ ಮಾಡೋಣ. ಮುಂದಿನ ದಿನಗಳಲ್ಲಿ ಎರಡು ರಾಷ್ಟೀಯ ಪಕ್ಷಗಳಿಗಿಂತ ಅತೀ ಹೆಚ್ಚು ಸ್ಥಾನಗಳನ್ನ ಗಳಿಸೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಅಕ್ಕ ಪಕ್ಕದ ತಮಿಳುನಾಡು -ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷ ಆಡಳಿತ ನಡೆಸುತ್ತಿದೆ. ಆದರೆ ದೇವೇಗೌಡರ ಕೊಡುಗೆ, ಅವರ ಸಾಧನೆಗಳು ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ, ಈಗ ಕುಮಾರಣ್ಣ ಅವರು ಏಕಾಂಗಿಯಾಗಿ ಪಕ್ಷವನ್ನ ಕಟ್ಟಿದ್ದಾರೆ.ಈ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎಂದರು.

     

    ನನಗೆ ಒಂದು ಬೇಸರಯಿದೆ. ನಮ್ಮ ಕಾರ್ಯಕರ್ತರು ಎಲ್ಲಾ ರೀತಿಯಲ್ಲಿ ಹಿಂದುಳಿದಿದ್ದಾರೆ. ಅಧಿಕಾರದಲ್ಲಿದ್ದಾಗ ಅವರನ್ನ ಗುರುತಿಸಬೇಕು. ಆ ಹೊಣೆಗಾರಿಕೆಯನ್ನು ನೀವು ಹೊತ್ತುಕೊಳ್ಳಬೇಕು ಎಂದು ನನಗೆ ಸುರೇಶ್ ಬಾಬಣ್ಣ ಹೇಳ್ತಿದ್ರು. ನನಗೆ ದೊಡ್ಡ ಜವಾಬ್ದಾರಿ ಇದೇ 2028ಕ್ಕೆ ಅತೀ

    ಶಾಸಕರನ್ನ ಗೆಲ್ಲಿಸಿಕೊಂಡು ಬರಬೇಕು ನಿಮ್ಮ ಜತೆ ನಾವಿದ್ದೇವೆ ಎಂದು ಧೈರ್ಯತುಂಬಿದರು.

     

    ರಾಜ್ಯದ 31 ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ, 21 ಜಿಲ್ಲೆ ಬಳಿಕ ಎರಡನೇ ಹಂತದಲ್ಲಿ ಅಭಿಯಾನ ಮಾಡ್ತೀವಿ ಕಾರ್ಯಕರ್ತರ ಜೊತೆ ನಾವಿದ್ದೇವೆ ಪಕ್ಷ ಇದೇ. HDD ಮತ್ತು HDK ಅವರ ನಾಯಕತ್ವದಲ್ಲಿ ನಾವು ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ತಿಳಿಸಿದರು.

     

    ಚುನಾವಣೆಯಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ, ಸೋಲಿನಿಂದ ಎದೆಗುಂದದೆ ಮುಂದೆ ಹೋಗಬೇಕು. ಯಾರಿಗೂ ಅಧಿಕಾರ ಶ್ವಾಶ್ವತ ಅಲ್ಲ. ಗುಬ್ಬಿ ಕ್ಷೇತ್ರದಲ್ಲಿ ನಾವು ಸೋತಿರಬಹುದು ಆದರೆ ‌ಮುಂದೆ ಜನ ನಮ್ಮನ್ನ ಗುರುತಿಸುತ್ತಾರೆ. ರಾಜ್ಯಕ್ಕೆ ಕುಮಾರಣ್ಣನ ಅನಿವಾರ್ಯವಿದೆ ಎಂದು ಸಾಮಾನ್ಯ ಜನ ಮಾತಾಡುತ್ತಿದ್ದಾರೆ. ಅದು ಮುಂದಿನಗಳಲ್ಲಿ ಆಗಲಿದೆ ಎಂದು ತಿಳಿಸಿದರು.

    ದೇವೇಗೌಡ, ಕುಮಾರಸ್ವಾಮಿ ಕೂತು ಪಂಚಾಯ್ತಿ ಚುನಾವಣೆಗಳ ಅಭ್ಯರ್ಥಿಗಳ ಅಂತಿಮ ಮಾಡಲಿದ್ದಾರೆ. ಮೈತ್ರಿ ಗೊಂದಲದ ಬಗ್ಗೆ ತಳ‌ ಮಟ್ಟದಲ್ಲಿ ನಾವು ಗಟ್ಟಿಯಾದರೆ ನಿಮ್ಮ ಗೊಂದಲಕ್ಕೆ ಉತ್ತರ ಸಿಗಲಿದೆ. ಮೈತ್ರಿ ಗೊಂದಲಕ್ಕೆ ಅವರು ತೆರೆ ಎಳೆದರು.

     

    ದೇವೇಗೌಡರು ಹಾಗೂ ಕುಮಾರಣ್ಣನವರಿಗೆ ನೀವು ತೋರಿಸಿದ ಪ್ರೀತಿ ವಿಶ್ವಾಸ ಅಪಾರ, ಬಹಳ ಆತ್ಮೀಯತೆಯಿಂದ ಈ ಪಕ್ಷವನ್ನು ನಿಷ್ಠಾವಂತ ಕಾರ್ಯಕರ್ತರು ಬೆಳೆಸಿದ್ದೀರಿ. ಅದೇ ರೀತಿ ನಿಮ್ಮ ವಿಶ್ವಾಸ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.

     

    ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಅವರು,ಮಾಜಿ ಸಚಿವರಾದ ಡಿ ನಾಗರಾಜಯ್ಯ, ಆಂಜಿನಪ್ಪ ಅವರು, ಗುಬ್ಬಿ ನಾಗರಾಜು ಅವರು, ಬೆಟ್ಟಸ್ವಾಮಿ, ಹೊನ್ನಾಗಿರಿ ಗೌಡ ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು.

  • ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಸುಮಾರು 23 ಸೋಲಾರ್ ಸಿಸಿ ಟಿವಿಗಳ ಅಳವಡಿಕೆ

    ಹೊಸಹಳ್ಳಿ: ಅಪರಾಧ ಪತ್ತೆಹಚ್ಚುವ ಮತ್ತು ಅಪರಾಧಗಳನ್ನು ತಡೆಯುವ ಸಲುವಾಗಿ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕೂಡು ರಸ್ತೆ, ಮುಖ್ಯ ಸರ್ಕಲ್, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಸುಮಾರು 23 ಸೋಲಾರ್ ಸಿಸಿ ಟಿವಿಗಳನ್ನು ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ನೇತೃತ್ವದಲ್ಲಿ ಅಳವಡಿಸಲಾಗಿದೆ.

     

     

    ಸುಮಾರು 23 ಸೋಲಾರ್ ಸಿಸಿ ಟಿವಿ ಗಳನ್ನು ದಾನಿಗಳು ಮತ್ತು ಸ್ಥಳೀಯ ಮುಖಂಡರ ನೆರವಿನಿಂದ ಹೊಸಹಳ್ಳಿ ಗ್ರಾಮ ಪಂಚಾಯಿತಿ, ಅರೂಢಿ ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಿಲಾಗಿದೆ.ಈ ಸೋಲಾರ್ ಸಿಸಿ ಟಿವಿ ಗಳು 180ಡಿಗ್ರಿ ಧ್ವನಿಸಹಿತ ಗ್ರಹಿಸುವ ವ್ಯವಸ್ಥೆ ಹಾಗೂ ಸ್ಪೀಕರ್ ಹೊಂದಿದ್ದು, ಎಲ್ಲಾ ಸಿಸಿ ಕ್ಯಾಮೆರಾ ಗಳನ್ನು ಠಾಣೆಯ ಮಾನಿಟರ್ ಗೆ ನೇರ ಸಂಪರ್ಕ ಮಾಡಲಾಗಿದೆ ಅಲ್ಲದೇ 24/7 ಮಾನಿಟರ್ ಮಾಡಲಾಗುತ್ತದೆ, ಇದರ ಜೊತೆಗೆ ಠಾಣಾ ಸಿಬ್ಬಂದಿಯ ಮೊಬೈಲ್ ಗೆ ಲಿಂಕ್ ಮಾಡಲಾಗಿದ್ದು ತುರ್ತು ಸಂಧರ್ಭಗಳಲ್ಲಿ ಮೊಬೈಲ್ ಮುಖಾಂತರ ಎಚ್ಚರಿಕೆಗಳನ್ನು ನೀಡುವ ವ್ಯವಸ್ಥೆ ಕೂಡ ಹೊಂದಿವೆ.

    ಅಪರಾಧ ತಡೆಯುವ ಮತ್ತು ಪತ್ತೆ ಹಚ್ಚುವಲ್ಲಿ ಅತ್ಯಂತ ಅಗತ್ಯವಿದ್ದ ಸಿಸಿ ಟಿವಿ ಗಳ ಅಳವಡಿಕೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಸಿಸಿ ಟಿವಿ ಅಳವಡಿಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೊಸಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ತಿಳಿಸಿದ್ದಾರೆ.

  • ಬೆಂಗಳೂರಿಗೆ ಕಾವೇರಿ ನೀರು ದೊಡ್ಡಬಳ್ಳಾಪುರಕ್ಕೆ ಬಿಬಿಎಂಪಿ ಕಸದ ನೀರು ಇದು ಯಾವ ನ್ಯಾಯ – ಶಾಸಕ ಧೀರಜ್ ಮುನಿರಾಜು

    ಸಭೆಯಲ್ಲಿ ಪ್ರಮುಖವಾಗಿ ವೃಷಭಾವತಿ ನೀರು ತಾಲೂಕಿಗೆ ಹರಿಸುವ ಕುರಿತು ಹಾಗೂ ಎಂ ಎಸ್ ಜಿ ಪಿ ಕಸ ವಿಲೇವಾರಿ ಘಟಕದ ವಿರುದ್ಧ ಹೋರಾಟ ಕುರಿತಂತೆ ತಾಲೂಕಿನ ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು.

    ನಗರದ ಡಾ.ಬಾಬುಜಗಜೀವನ್ ರಾಂ ಭವನದಲ್ಲಿ ಶನಿವಾರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಸಭೆ, ತಾಲ್ಲೂಕು ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಲ್ಲಿ ಬಿಬಿಎಂಪಿ ವತಿಯಿಂದ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅನುದಾನವನ್ನು ಪಡೆಯದೆ ಕಸ ಹಾಕುವುದನ್ನು ನಿಲ್ಲಿಸುವಂತೆ ಅಗ್ರಹ ಮಾಡುತ್ತಿದ್ದೇನೆ . ನಮ್ಮ ತಾಲ್ಲೂಕಿಗೆ ಸದಾ ತಂದು ಸುರಿಯುತ್ತಿರುವ ಕಸ ನಿಲ್ಲಬೇಕು ಎಂಬುದೇ ನನ್ನ ಹೋರಾಟ ಎಂದರು.

     

    ಬಿಬಿಎಂಪಿ ಕಸದಿಂದಾಗಿ ದೊಡ್ಡಬೆಳವಂಗಲ ಹಾಗೂ ಸಾಸಲು ಭಾಗದ ಹತ್ತಾರು ಗ್ರಾಮಗಳ ಅಂತರ್ಜಲ ಸಂಪೂರ್ಣ ಕಲುಷಿತಗೊಂಡು ಜನರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಜಾನುವಾರುಗಳು ಸಾಯುತ್ತಿವೆ. ಕಲುಷಿತ ನೀರಿನ ಬಳಕೆಯಿಂದ ಬೆಳೆಗಳು ಹಾಳಾಗಿ ರೈತರು ಶಾಪ ಹಾಕುತ್ತಿದ್ದಾರೆ. ಇದರ ವಿರುದ್ಧ ಈಗಾಗಲೇ ಹಲವಾರು ರೈತರು, ಮುಖಂಡರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರುಗಳನ್ನು ದಾಖಲಿಸಿದ್ದಾರೆ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ಈಗಾಗಲೇ ವರದಿ ಸಲ್ಲಿಸಿದ್ದು. ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಘಟಕ ಮುಚ್ಚುವಂತೆ ನಿರ್ಣಯ ಅಂಗೀಕರಿಸಿದ್ದಾರೆ ಎಂದರು.

    ತಾಲ್ಲೂಕಿನಲ್ಲಿ ಕಸ ವಿಲೇವಾರಿ ಘಟಕವು 2014 ರಲ್ಲಿ ಪ್ರಾರಂಭವಾಯಿತು ಎಂದು ಸಾರ್ವಜನಿಕರು ಹೇಳುತ್ತಾರೆ ಆದರೆ 2011ರಲ್ಲಿ ಪ್ರಾರಂಭವಾಗಿದೆ ಎಂದು ಕೆಲ ದಾಖಲೆಗಳು ಹೇಳುತ್ತವೆ ಅದೇನೇ ಇರಲಿ ನನ್ನ ಅಧಿಕಾರದ ಅವಧಿಯಲ್ಲಿ ಈ ಎಂ ಎಸ್ ಜಿ ಪಿ ಕಸ ವಿಲೇವಾರಿ ಘಟಕವನ್ನು ಮುಚ್ಚಿಸಿಯೇ ತೀರುತ್ತೇನೆ. BBMP ಕಸ ನನ್ನ ತಾಲ್ಲೂಕಿಗೆ ಬರಬಾರದು, ತಾಲ್ಲೂಕಿಗೆ ಕಸ ಬಾರದಂತೆ ತಡೆಯಲು ನಾನು ಯಾವ ಹಂತದ ಹೋರಾಟಕ್ಕದರೂ ಸಿದ್ದ. ನಾವು ಕಾವೇರಿ ನೀರು ಕೇಳಿದರೆ ಕೊಡದ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಕಸವನ್ನು ನೀಡುತ್ತಿದೆ, ಕಾವೇರಿ ನೀರು ಅವರಿಗೆ ಕಸ ದೊಡ್ಡಬಳ್ಳಾಪುರಕ್ಕಾ ನಮಗೆ ಬಿಬಿಎಂಪಿ ಕಸ ಬೇಡ ಈಗಾಗಲೇ ನಮ್ಮಲ್ಲಿ (ರಾಜ್ಯದಲ್ಲಿ) ಸುಮಾರು 8 ಬಿಬಿಎಂಪಿ ಕಸ ವಿಲೇವಾರಿ ಘಟಕಗಳು ಇದ್ದು ನಮ್ಮ ದೊಡ್ಡಬಳ್ಳಾಪುರದಲ್ಲಿ ಇರುವ ಕಸ ವಿಲೇವಾರಿ ಘಟಕ ಖಾಸಗಿ ಒಡೆತನದಲ್ಲಿ ಇದೆ. ಇನ್ನುಳಿದ 7 ಕಸವಿಲೇವಾರಿ ಘಟಕಗಳು ಸರ್ಕಾರ ನೋಡಿಕೊಳ್ಳುತ್ತಿದೆ. ಖಾಸಗಿಯವರ ಉದ್ದಾರ ಆಗೋದಕ್ಕೆ ನಾವು ಕಸ ಹಾಕಿಸಿಕೊಳ್ಳಬೇಕಾ…? ಕೂಡಲೇ ಈ ಘಟಕಕ್ಕೆ ಬರುವ ಕಸ ನಿಲ್ಲಿಸಬೇಕು ಇಲ್ಲವೇ ಉಗ್ರ ಹೋರಾಟ ಖಂಡಿತಾ ಎಂದು ಎಚ್ಚರಿಸಿದರು.

    ನಮ್ಮ ಮೇಲೆ ಅಷ್ಟು ಪ್ರೀತಿ ಇದ್ದರೆ ಈ ಬಾರಿಯೇ ತಾಲೂಕಿನ ಮಜರಾಹೊಸಹಳ್ಳಿ, ದೊಡ್ಡತುಮಕೂರು ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನೀರು ಒದಗಿಸಲಿ ಎಂದರು.

     

    ಸಭೆಯಲ್ಲಿ ಕಾಂಗ್ರೆಸ್ ಮುಖಂಡರ ಗೈರು  

     

    ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಜನಪ್ರತಿನಿಧಿಗಳು ಗೈರಾಗಿದ್ದು, ಈ ಕುರಿತು ಉತ್ತರಿಸಿದ ಶಾಸಕರು ಸಭೆಗೆ ಹಾಜರಾಗಿಲ್ಲ ಎಂದರೆ ಅವರ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರ್ಥ, ಇದು ತಾಲೂಕಿನ ವಿಚಾರ ಯಾವುದೇ ಪಕ್ಷ ಬೇಧ ಮಾಡದೆ ಎಲ್ಲರೂ ಒಟ್ಟಾಗಿ ಪಕ್ಷತೀತವಾಗಿ ತಾಲೂಕಿನ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಅಲ್ಲದೆ ಯಾವುದೇ ಹೋರಾಟ ಮಾಡಿದರು ಸರ್ವ ಪಕ್ಷಗಳ ಮುಖಂಡರಿಗೆ ಆಹ್ವಾನ ಕಳಿಸಲಾಗುವುದು ಇದು ನಮ್ಮ ತಾಲೂಕಿನ ವಿಷಯ ಎಲ್ಲಾ ಪಕ್ಷಗಳ ನಾಯಕರು ಮುಖಂಡರು ಹಾಗೂ ಜನಪ್ರತಿನಿಧಿಗಳು ಸ್ವಯಂ ಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೊಳ್ಳುವುದು ಉತ್ತಮ ಎಂದರು.

     

    ವೈಯಕ್ತಿಕವಾಗಿ ವೃಷಭಾವತಿ ನೀರು ನಮ್ಮ ತಾಲೂಕಿಗೆ ಬೇಡ ಎಂಬುದು ನನ್ನ ವಾದ ಈ ಕುರಿತಂತೆ ತಾಲೂಕಿನ ಎಲ್ಲ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಂವಾದ ನಡೆಸಿದ್ದೇನೆ , ನಾನು ಸಾರ್ವಜನಿಕರ ಧ್ವನಿ, ವೃಷಭಾವತಿ ನೀರು ಬೇಕೋ ಬೇಡವೋ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತೆರಾವು ನೀಡಲು ತಿಳಿಸಿದ್ದೇನೆ. ಸಾರ್ವಜನಿಕರ ನಿರ್ಧಾರವೇ ನನ್ನ ಅಂತಿಮ ನಿರ್ಧಾರವಾಗುತ್ತದೆ .ತಾಲೂಕಿಗೆ ನೀರು ಹರಿಸಬೇಕು ಬೇಡವೋ ಎಂಬುದನ್ನು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರೇ ನಿರ್ಧರಿಸಲಿದ್ದಾರೆ. ಅವರ ತೀರ್ಮಾನವನ್ನು ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು.

     

     

     

     

  • ಬಮೂಲ್ ಚುನಾವಣೆ : ಸ್ಥಳೀಯ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಇನ್ನೂ 6 ತಿಂಗಳಲ್ಲಿ ಮರುಚುನಾವಣೆ ನೆಡೆಯಲಿದೆ – ಹುಸ್ಕೂರ್ ಟಿ ಆನಂದ್

    ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ಈಗಾಗಲೇ ತಡೆಯಾಗದೆ ಇದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿರುವ ಅಭ್ಯರ್ಥಿಯು ನ್ಯಾಯಾಲಯದ ತೀರ್ಪಿನ ಬಳಿಕ ಅನರ್ಹವಾಗಲಿದ್ದಾರೆ ನಮ್ಮ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮರುಚುನಾವಣೆ ನಡೆಯಲಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರು ಟಿ ಅನಂದ್ ತಿಳಿಸಿದ್ದಾರೆ.

     

    ಹೌದು ಮೇ ತಿಂಗಳ 25ರಂದು ನಡೆದ ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ ಹೊಸ ಬಾಂಬ್ ಸಿಡಿಸಿದ್ದಾರೆ. ಈಗಾಗಲೇ ಬಮುಲ್ ನಿರ್ದೇಶಕರನ್ನು ನ್ಯಾಯಾಲಯವು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು , ಆದರೆ ತಡೆಯಾಜ್ಞೆ(ಸ್ಟೇ )ತರುವ ಮೂಲಕ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಬಿ.ಸಿ ಆನಂದ್ ಕುಮಾರ್ ತಡೆಯಾಜ್ಞೆ ತೆರೆವಾದ ಕೂಡಲೇ ಅನರ್ಹರಾಗುತ್ತಾರೆ,ಈಗಾಗಲೇ ಸ್ಟೇ ವೆಕೆಟ್ ಮಾಡುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ,ಈ ಹಿನ್ನಲೆ ನಮ್ಮ ತಾಲೂಕಿನಲ್ಲಿ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮರುಚುನಾವಣೆ ನಡೆಯಲಿದೆ ಎಂದು ಹೇಳಿದರು.

     

    ಕಳೆದ ಬಮೂಲ್ ಚುನಾವಣೆಯಲ್ಲಿ ಸ್ಥಳೀಯ ಹಾಲಿ ಶಾಸಕರು ನಮ್ಮ ಜೆಡಿಎಸ್ ಪಕ್ಷದ ಮುಖಂಡರಿಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳುವ ಮೂಲಕ ದಾರಿ ತಪ್ಪಿಸಿದ್ದಾರೆ ಅಲ್ಲದೆ ಹಲವಾರು ಕುತಂತ್ರಗಳು ಮಾಡುವ ಮೂಲಕ ಚುನಾವಣೆಯಲ್ಲಿ ಜಯಸಾಧಿಸಿದ್ದಾರೆ. ಈ ಜಯ ತುಂಬ ದಿನ ಉಳಿಯುವುದಿಲ್ಲ, ನಾನು ಚುನಾವಣೆಗೆ ನಿಲ್ಲಬಾರದೆಂದು ಹಲವಾರು ರೀತಿ ತೊಂದರೆ ಕೊಟ್ಟಿದ್ದರು ಆದರೆ ನ್ಯಾಯಾಲಯವು ನಾನು ಚುನಾವಣೆಗೆ ನಿಲ್ಲಲು ಅವಕಾಶ ಕಲ್ಪಿಸಿತ್ತು . ಕೆಲ ಜೆಡಿಎಸ್ ಮುಖಂಡರ ಅಪ್ರಾಮಾಣಿಕತೆಯಿಂದ ನನ್ನ ಸೋಲಾಗಿದೆ ಆದರೆ ಹಿಂದಿನ ನಿರ್ದೇಶಕರ ಕುರಿತಂತೆ ನ್ಯಾಯಾಲಯದಲ್ಲಿ ಇಂದಿಗೂ ಕೇಸ್ ನಡೆಯುತ್ತಿದೆ . ತಡೆಯಾಜ್ಞೆ ತೆರವಾಗುತ್ತಿದ್ದಂತೆ ನಿರ್ದೇಶಕ ಸ್ಥಾನಕ್ಕೆ ಮರು ಚುನಾವಣೆ ತಪ್ಪಿದ್ದಲ್ಲ , ಈ ಬಾರಿ ನನ್ನ ಗೆಲುವು ಖಚಿತ ಎಂದು ತಿಳಿಸಿದರು.

    ಗೆಲುವು ಸಾಧಿಸಿರುವ ಅಭ್ಯರ್ಥಿ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯಾ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ ಮುನೇಗೌಡರ ತಂದೆ ವಿಚಾರವಾಗಿ ಮಾತನಾಡಿರುವುದು ನೋವುಂಟುಮಾಡಿದೆ, ಚುನಾವಣೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ ಆದರೆ ಮಾತನಾಡುವ ಭರದಲ್ಲಿ ಕುಟುಂಬಗಳ ಬಗ್ಗೆ ಮಾತನಾಡುವುದು ಶೋಭೆಯಲ್ಲ ಎಂದರು.

     

    ನಮ್ಮ ರಾಷ್ಟ್ರ ಅಧ್ಯಕ್ಷರಾದ ದೇವೇಗೌಡ ಅಪ್ಪಾಜಿ ಹಾಗೂ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನಾನು ಬಮುಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಜೆಡಿಎಸ್ ಪಕ್ಷದ ವರ್ಚಸ್ಸನ್ನು ಶಕ್ತಿಯನ್ನು ತೋರ್ಪಡಿಸಲು ನಿರ್ಧರಿಸಿದ್ದೆ, ನನಗೆ ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಾಮಾಣಿಕ ಹಾಗೂ ಅಪ್ರಾಮಾಣಿಕರ ಪರಿಚಯವಾಗಿದೆ. ಚುನಾವಣೆಯಲ್ಲಿ ಸೋಲು ಎನ್ನುವುದಕ್ಕಿಂತ ಉತ್ತಮ ಅನುಭವ ದೊರೆತಿದೆ , ಸ್ಥಳೀಯ ಮುಖಂಡರ ನಡವಳಿಕೆ ಕುರಿತು ರಾಜ್ಯ ಹಾಗೂ ರಾಷ್ಟ್ರ ನಾಯಕರು ಗಮನಕ್ಕೆ ತರಲಾಗುವುದು ಎಂದರು .

     

     

     

     

     

  • ಫಾದರ್ಸ್ ಡೇ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಿದ ಕಿಡ್ಜೀ ( KIDZEE ) ತಂಡ

    ದೊಡ್ಡಬಳ್ಳಾಪುರ : ಮಗುವಿನ ಜೀವನದ ಪ್ರತಿ ಹಂತದಲ್ಲೂ ಶಕ್ತಿಯಾಗಿ ನಿಲ್ಲುವ ತಂದೆಯನ್ನು ಗೌರವಿಸಿ, ಸಂಭ್ರಮಿಸುವ ನಿಟ್ಟಿನಲ್ಲಿ ಫಾದರ್ಸ್ ಡೇ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಕಿಡ್ಜೀ ( KIDZEE )ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ. ಸಂದೀಪ್ ತಿಳಿಸಿದರು.

    ನಗರದ ಖಾಸಗಿ ಭವನದಲ್ಲಿ ಸೌಭಾಗ್ಯ ಟ್ರಸ್ಟ್ ಸಹಯೋಗದೊಂದಿಗೆ ಕಿಡ್ಜೀ ( KIDZEE ) ಆಡಳಿತ ಮಂಡಳಿ ಆಯೋಜಿಸಿದ್ದ “ಫಾದರ್ಸ್ ಡೇ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಮಗುವಿಗೂ ತನ್ನ ತಂದೆಯ ಹೀರೋ ಆಗಿರುತ್ತಾರೆ , ಸಾವಿರಾರು ಕಷ್ಟಗಳನ್ನು ಎದುರಿಸಿದರು ತನ್ನ ಕಷ್ಟಗಳನ್ನು ತೋರ್ಪಡಿಸಿಕೊಳ್ಳದೆ ಮಗುವಿಗೆ ಸುಖ ಸಂತೋಷವನಷ್ಟೇ ನೀಡುವ ವಿಶ್ವದ ಎಲ್ಲ ತಂದೆಯರಿಗೆ ಈ ವೇದಿಕೆ ಅರ್ಪಣೆ ಮಾಡಿದ್ದೇವೆ, ತನ್ನ ಹೆಗಲ ಮೇಲೆ ಹೊತ್ತು ಪ್ರಪಂಚದ ಪರಿಚಯ ಮಾಡಿಸುವ ಎಲ್ಲಾ ತಂದೆಯರಿಗೂ ವಿಶ್ವ ತಂದೆಯರ ದಿನದ ಶುಭಾಶಯಗಳನ್ನು ಕೋರುತೇನೆ ಅಲ್ಲದೇ ಇಂದಿನ ಈ ವೇದಿಕೆ ವಿಶೇಷವಾಗಿದ್ದು ಅಂತಹ ಎಲ್ಲ ತಂದೆಯರನ್ನು ಸಂಭ್ರಮಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ ಕಿಡ್ಜೀ ( KIDZEE ) ಶಾಲೆಯ ಎಲ್ಲಾ ಸಿಬ್ಬಂದಿ ವರ್ಗ ವಿಶೇಷ ಕುತೂಹಲಕಾರಿ ಆಟಗಳನ್ನು ಆಯೋಜನೆ ಮಾಡಿದ್ದು ಒಟ್ಟಾರೆ ಪೋಷಕರೊಂದಿಗೆ ಸಂಭ್ರಮಿಸಲಿದ್ದೇವೆ ಎಂದರು.

    ಫಾದರ್ಸ್ ಡೇ ಸ್ಪೆಷಲ್ ಫ್ರೇಮ್ ಅಲ್ಲಿ ಫೋಟೋ ಕ್ಲಿಕ್ಕಿಸಿಕೊಂಡ ಪೋಷಕರು

    ಫಾದರ್ಸ್ ಡೇ ಸ್ಪೆಷಲ್ ಫೋಟೋ ಫ್ರೇಮ್ ಎಲ್ಲರ ಗಮನ ಸೆಳೆಯಿತು ಕಾರ್ಯಕ್ರಮಕ್ಕೆ ಬಂದ ಪುಟಾಣಿಗಳು ತಮ್ಮ ಪೋಷಕ ರೊಟ್ಟಿಗೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು ತುಂಬಾ ಉತ್ಸಾಹಕರಾಗಿದ್ದು ಕಾರ್ಯಕ್ರಮ ಕುರಿತು ಸಂತಸ ವ್ಯಕ್ತಪಡಿಸಿದರು.

    ಸ್ಥಳೀಯ ಮುಖಂಡರು ಸೌಭಾಗ್ಯ ಟ್ರಸ್ಟ್ ನ ಮುಖ್ಯಸ್ಥರಾದ ಎಚ್ ರಾಜಗೋಪಾಲ್ ಮಾತನಾಡಿ ತಂದೆಯರಿಗಾಗಿ ಮೀಸಲಿರುವ ವಿಶೇಷ ದಿನವನ್ನು ಕಿಡ್ಜೀ ( KIDZEE ) ತಂಡವು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ,ಕಿಡ್ಜೀ ( KIDZEE ) ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು .

    ಅಲ್ಲದೇ ಸೌಭಾಗ್ಯ ಟ್ರಸ್ಟ್ ವತಿಯಿಂದ ತುರ್ತು ಸಂದರ್ಭಗಳಿಗಾಗಿ ರಕ್ತ ನಿಧಿ ಕೇಂದ್ರ , ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆಪ್ತ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು , ಸಾರ್ವಜನಿಕರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಸೌಭಾಗ್ಯ ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕಿಡ್ಜೀ ( KIDZEE )ಆಡಳಿತ ಮಂಡಳಿ, ಭೋದಕ ಹಾಗೂ ಭೋದಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

     

  • ಮಜರಾಹೊಸಹಳ್ಳಿ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕೆ ಸಿ ರುದ್ರಣಮ್ಮ ಮಂಜುನಾಥ್ ಆಯ್ಕೆ

    ದೊಡ್ಡಬಳ್ಳಾಪುರ : ತಾಲೂಕಿನ ಮಜರಾಹೊಸಹಳ್ಳಿಪಂಚಾಯತಿ ಅಧ್ಯಕ್ಷರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಕೆ ಸಿ ರುದ್ರಣಮ್ಮ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .

     

    18 ಸದಸ್ಯರ ಬಲ ಹೊಂದಿರುವ ಮಜರಾ ಹೊಸಹಳ್ಳಿ ಪಂಚಾಯಿತಿಯಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ ಸಿ ರುದ್ರಣಮ್ಮ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

     

     

    ನೂತನ ಅಧ್ಯಕ್ಷರಿಗೆ ಪುಷ್ಪಮಾಲೆ ನೀಡಿ ಸಿಹಿ ತಿನಿಸುವ ಮೂಲಕ ಸದಸ್ಯರು, ಸರ್ವ ಪಕ್ಷಗಳ ಮುಖಂಡರು ಶುಭ ಕೋರಿದರು. ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

     

    ನೂತನ ಅಧ್ಯಕ್ಷರಿಗೆ ಸ್ಥಳೀಯ ಮುಖಂಡರಾದ ಮಾಜಿ ಎಪಿಎಂಸಿ ಅಧ್ಯಕ್ಷ ತಿ.ರಂಗರಾಜು, ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.

     

    ನೂತನ ಅಧ್ಯಕ್ಷರಾದ ರುದ್ರಣಮ್ಮ ಮಂಜುನಾಥ್ ಮಾತನಾಡಿ ಸರ್ವ ಸದಸ್ಯರು ಒಮ್ಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ , ನನಗೆ ಸಿಕ್ಕಿರುವ ಈ ಅವಕಾಶವನ್ನು ಉಪಯೋಗಿಸಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಬಾರದಂತೆ ಸಾಧ್ಯವಾದಷ್ಟು ಉನ್ನತ ಮಟ್ಟದಲ್ಲಿ ಶ್ರಮಿಸುತ್ತೇನೆ ಇದೇ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಹಂಬಲವಿದೆ, ಸರ್ವ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

     

    ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.

     

     

     

  • ಎಂವಿಎಂ(MVM)ಶಾಲೆಯಲ್ಲಿ ವಿದ್ಯಾರಂಭ ಸಂಭ್ರಮ : ಪುಟಾಣಿ ಮಕ್ಕಳೊಂದಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಷಕರು

    ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿ ಶುಭ ದಿನ, ಸಮಯ ನೋಡಿ ಪೋಷಕರು ಶೃಂಗೇರಿ ಶಾರದಾಂಬೆ ಅಥವಾ ಕೊಲ್ಲೂರು ಮೂಕಾಂಬಿಕ ದೇವಾಲಯಗಳಲ್ಲಿ ವಿದ್ಯಾರಂಭವನ್ನು ಮಾಡಿಸುತ್ತಾರೆ ನಮ್ಮ ಶಾಲೆಯ ಪೋಷಕರು ಬಹುತೇಕ ರೈತರಾಗಿದ್ದು ಅವರ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಎಂವಿಎಂ ಆಡಳಿತ ಮಂಡಳಿಯು ಅಕ್ಷರಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಗೌರವ್ ತಿಳಿಸಿದರು.

    ಪ್ರೀ ನರ್ಸರಿ ಹಾಗೂ ಎಲ್ ಕೆ ಜಿ ಮಕ್ಕಳಿಗೆ ಇಂದು ಎಂವಿಎಂ ಶಾಲೆಯ ಆವರಣದಲ್ಲಿ ಶಾಲಾ ಆಡಳಿತ ಮಂಡಳಿ ವತಿಯಿಂದ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ವರ್ಷವೂ ನಮ್ಮ ಶಾಲೆಗೆ ಬರುವ ಪುಟಾಣಿ ಮಕ್ಕಳ ವಿದ್ಯಾರಂಭವನ್ನು ಅಕ್ಷರಭ್ಯಾಸ ಮಾಡಿಸುವ ಮೂಲಕ ಆರಂಭಿಸುವುದು ನಮ್ಮ ಶಾಲೆಯ ವಿಶೇಷವಾಗಿದೆ, ಅಲ್ಲದೆ ನಮ್ಮ ಶಾಲೆಗೆ ಬರುವ ಮಕ್ಕಳು ರೈತಾಪಿ ಕುಟುಂಬಗಳಿಂದ ಬರುವ ಮಕ್ಕಳಾಗಿದ್ದಾರೆ , ಎಲ್ಲಾ ಪೋಷಕರಿಗೂ ದೂರದ ಶೃಂಗೇರಿ ದೇವಾಲಯಕ್ಕೆ ಹೋಗಿ ಅಕ್ಷರಭ್ಯಾಸ ಮಾಡಿಸುವುದು ಕಷ್ಟ ಸಾಧ್ಯವಾಗುತ್ತದೆ ಇದನ್ನು ಅರಿತ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಲ್ಲಿ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜನೆ ಮಾಡಿದ್ದು . ಇಂದಿನ ಕಾರ್ಯಕ್ರಮದಲ್ಲಿ ಸಾಕಷ್ಟು ಪೋಷಕರು ಭಾಗವಹಿಸಿ ತಮ್ಮ ಮಕ್ಕಳ ಪ್ರಥಮ ಅಕ್ಷರಭ್ಯಾಸವನ್ನು ಸಂಭ್ರಮದಿಂದ ಮಾಡಿಸಿದ್ದಾರೆ ಎಂದರು.

    ನಮ್ಮ ಶಾಲೆಯಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಸಮುದಾಯದ ಬಾಂಧವರು ಒಟ್ಟಾಗಿ ಸೇರಿ ಈ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ ಎಂದರು.

    ಈ ಪೂಜೆ ವಿಶೇಷವಾಗಿದ್ದು ಮಕ್ಕಳಲ್ಲಿ ಧನಾತ್ಮಕ ಬದಲಾವಣೆ ಬರುವುದೆಂಬ ನಂಬಿಕೆ ಇದೆ, ವಿದ್ಯಾಭ್ಯಾಸಕ್ಕೆ ಮೊದಲ ಹೆಜ್ಜೆ ಇಡುತ್ತಿರುವ ಮಕ್ಕಳಿಗೆ ಸಾಂಪ್ರದಾಯಕವಾಗಿ ಸ್ವಾಗತ ಕೋರಿರುವ ಶಾಲಾ ಆಡಳಿತ ಮಂಡಳಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಎಂವಿಎಂ ಶಾಲೆಯ ಶಿಕ್ಷಕರು ಮಕ್ಕಳೊಂದಿಗೆ ಅತ್ಯಂತ ಸ್ನೇಹಮಯವಾಗಿ ನಡೆದುಕೊಳ್ಳುವುದರಿಂದ ಮಕ್ಕಳು ಯಾವುದೇ ಆತಂಕವಿಲ್ಲದೆ ಶಾಲೆಗೆ ಖುಷಿಯಿಂದ ಬರುತ್ತಿದ್ದಾರೆ. ಜೊತೆಗೆ ಅತ್ಯುತ್ತಮ ಶಿಕ್ಷಣವನ್ನು ಈ ಸಂಸ್ಥೆ ನೀಡುತಿದ್ದು , ನಮ್ಮ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿದೆ ಎಂದು ಪೋಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

    ವಿದ್ಯಾರಂಭದ ಸಲುವಾಗಿ ಆಯೋಜನೆ ಮಾಡಲಾಗಿದ್ದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಪೋಷಕರು ಭಾಗವಹಿಸಿ ತಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿ ಸಂತೋಷ ವ್ಯಕ್ತಪಡಿಸಿದರು ಹಾಗೂ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುಟಾಣಿ ಮಕ್ಕಳು ವಿಶೇಷ ಆಚರಣೆ ನೋಡಿ ಸಂಭ್ರಮಿಸಿದರು.

     

    ಈ ಸಂದರ್ಭದಲ್ಲಿ ಎಂವಿಎಂ ಶಾಲೆಯ ಆಡಳಿತ ಮಂಡಳಿ ವರ್ಗ, ಶಿಕ್ಷಕ ವೃಂದ, ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.