Blog

  • ಅರಳು ಮಲ್ಲಿಗೆ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಂಗಳ ಗೌರಮ್ಮ ಕೃಷ್ಣಮೂರ್ತಿ ಆಯ್ಕೆ

    ದೊಡ್ಡಬಳ್ಳಾಪುರ : ತಾಲೂಕಿನ ಅರಳುಮಲ್ಲಿಗೆ ಪಂಚಾಯಿತಿಯಲ್ಲಿ ಅಧ್ಯಕ್ಷರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಮಂಗಳ ಗೌರಮ್ಮ ಕೃಷ್ಣಮೂರ್ತಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

     

    18 ಸದಸ್ಯರ ಬಲ ಹೊಂದಿರುವ ಅರಳು ಮಲ್ಲಿಗೆ ಪಂಚಾಯಿತಿಯಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 11 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಗಳ ಗೌರಿ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿದ್ದ ನಿರ್ಮಲಾ ಸಿದ್ದೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಮಂಗಳ ಗೌರಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಮಂಗಳ ಗೌರಮ್ಮನವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

     

     

     

    ನೂತನ ಅಧ್ಯಕ್ಷರಿಗೆ ಪುಷ್ಪಮಾಲೆ ನೀಡಿ ಸಿಹಿ ತಿನಿಸುವ ಮೂಲಕ ಸದಸ್ಯರು, ಕಾಂಗ್ರೆಸ್ ಮುಖಂಡರು ಶುಭ ಕೋರಿದರು. ಪಟಾಕಿ ಸಿಡಿಸುವ ಮೂಲಕ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.

     

    ನೂತನ ಅಧ್ಯಕ್ಷರಾದ ಮಂಗಳ ಗೌರಮ್ಮ ಮಾತನಾಡಿ ಸರ್ವ ಸದಸ್ಯರು ಒಮ್ಮತದಿಂದ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ , ನಾನು ಬಡ ಕುಟುಂಬದ ಹೆಣ್ಣು ಮಗಳು ನನಗೆ ಈ ಅವಕಾಶ ಸಿಕ್ಕಿರುವುದು ಭಾಗ್ಯವೆಂದೇ ಭಾವಿಸುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರಾಗಿ ಸತತ ನಾಲ್ಕು ಬಾರಿ ಜಯಗಳಿಸಿದ್ದು ಇದೇ ಮೊದಲ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಹಂಬಲವಿದೆ, ಸರ್ವ ಸದಸ್ಯರ ಸಲಹೆ ಸೂಚನೆಗಳನ್ನು ಪಡೆದು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಪಂಚಾಯ್ತಿ ಉಪಾಧ್ಯಕ್ಷ ಡಿ.ಆರ್. ಧ್ರುವಕುಮಾರ್, ಮಾಜಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಕೆಂಪಣ್ಣ, ನಗರಸಭಾ ಸದಸ್ಯರಾದ ಚಂದ್ರ ಮೋಹನ್, ರಘು, ಮಂಜುನಾಥ್, ಭೀಮಣ್ಣ ಮುಂತಾದವರು ಹಾಜರಿದ್ದರು.

     

  • ದೇಶವನ್ನು ಬಲಿಷ್ಠಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಅಪಾರ – ರಾಮಕೃಷ್ಣಪ್ಪ

    ದೊಡ್ಡಬಳ್ಳಾಪುರ : ಭಾರತದ ಪ್ರತಿ ಪ್ರಜೆಗೂ ಸಮಾನ ಹಕ್ಕು ಹಾಗೂ ಘನತೆಯ ಜೀವನವನ್ನು ರೂಪಿಸುವ ನಿಟ್ಟಿನಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದ ಅಡಿಯಲ್ಲಿ ನೂರಾರು ಯೋಜನೆಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸತತ 11 ವರ್ಷಗಳಿಂದ ನರೇಂದ್ರ ಮೋದಿಜಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು.

     

     

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 11 ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ದಶಕಗಳ ಜಡತ್ವ ಮುರಿದು, ದಿಟ್ಟ ನಿರ್ಧಾರಗಳ ಮೂಲಕ ‘ವಿಕಸಿತ ಭಾರತ’ಕ್ಕೆ ಭದ್ರ ಬುನಾದಿ ಹಾಕಿದೆ. ಒಂದು ಕಡೆ GST, ನೋಟು ಅಮಾನೀಕರಣದಂತಹ ಆರ್ಥಿಕ ಸುಧಾರಣೆಗಳು, ಮತ್ತೊಂದೆಡೆ ಉರಿ-ಬಾಲಾಕೋಟ್ ನಂತಹ ಸರ್ಜಿಕಲ್ ಸ್ಟೈಸ್ ಮತ್ತು ಆಪರೇಷನ್ ಸಿಂಧೂರ್‌ಗಳಿಂದ ರಾಷ್ಟ್ರದ ಭದ್ರತೆಗೆ ಬಲ ನೀಡಲಾಗಿದೆ. ಹಾಗೆಯೇ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ ಹಾಗೂ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಿಸಿ ಭಾರತೀಯರ ಶತಮಾನಗಳ ಕನಸನ್ನು ನನಸು ಮಾಡಿದ್ದು ಐತಿಹಾಸಿಕ ಸಾಧನೆಗಳಾಗಿವೆ. ಎಂದರು.

     

    ಇಂದು, ನಾವು ಜಲ ಜೀವನ್ ಮಿಷನ್‌ನ ಹರ್ ಘರ್ ಜಲ್ ಯೋಜನೆಯಡಿ ಕುಡಿಯುವ ನೀರು, ಹರ್ ಘರ್ ಬಿಜಲಿ ಯೋಜನೆಯಡಿ ವಿದ್ಯುತ್ ಸಂಪರ್ಕ, ಉತ್ತಮ ಆರೋಗ್ಯ ಸೇವೆಗಳು, ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ಶೌಚಾಲಯಗಳು, ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಮತ್ತು ಸೂರು ಇಲ್ಲದವರಿಗೆ ವಸತಿ ಸೌಲಭ್ಯಗಳಂತಹ ಅಗತ್ಯ ಸೌಕರ್ಯಗಳನ್ನು ಪ್ರತಿಯೊಬ್ಬ ಭಾರತೀಯನಿಗೆ ತಲುಪಿಸಿದೆ ಇದು ಕೇವಲ ಒಂದು ಕನಸಾಗಿ ಉಳಿದಿಲ್ಲ, ಇದು ನಮ್ಮ ಮೋದಿ ಸರ್ಕಾರದ ಬದ್ಧತೆಯಾಗಿದೆ ಎಂದರು.

    11 ವರ್ಷಗಳ ಸಾಧನೆಯನ್ನು ಪ್ರತಿ ಮನೆ ಮನೆಗೆ ತಲುಪಿಸುತ್ತೇವೆ 

    ಈ ಹಿಂದೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ರವರು  ದೇಶದ ಬಡಜನರ ಅಭಿವೃದ್ಧಿಗಾಗಿ  ನೂರಾರು ಯೋಜನೆಗಳನ್ನು ರೂಪಿಸಿದ್ದರು  ಆದರೆ ಸೂಕ್ತ ಪ್ರಚಾರದ ಕೊರತೆ ಕಾರಣ  ಜನತೆಗೆ ಬಿಜೆಪಿ ಪಕ್ಷದ ಶ್ರಮ  ದೂರ ದೃಷ್ಟಿ ಅರಿವಾಗಲಿಲ್ಲ  ಹಾಗಾಗಿ ಅಧಿಕಾರಕ್ಕೆ ಬರಲು ಸಾಕಷ್ಟು ಸಮಯ ಪಡೆಯಿತು. ಆದರೆ ಈ ಬಾರಿ ಹಾಗೆ ಆಗುವುದಿಲ್ಲ  ದೇಶದ ಪ್ರತಿ ಮನೆಮನೆಗೂ  ನಮ್ಮ ಬಿಜೆಪಿ ಕಾರ್ಯಕರ್ತರು  ನರೇಂದ್ರ ಮೋದಿಜಿ ಅವರ  ವಿಶೇಷ ಯೋಜನೆಗಳ ಬಗ್ಗೆ  ಸಂಪೂರ್ಣ ಮಾಹಿತಿ ನೀಡಲಿದ್ದಾರೆ , ಅಲ್ಲದೆ  ಮೋದಿಜಿ ನೇತೃತ್ವದ  ಬಿಜೆಪಿ ಸರ್ಕಾರದ ಶಕ್ತಿಯನ್ನು  ಸಾಮಾನ್ಯ ಜನತೆಗೆ ತಿಳಿಸಲಿದ್ದಾರೆ ಎಂದರು.

     

    ಜಿಲ್ಲಾ ವಕ್ತರರಾದ ಪುಷ್ಪ ಶಿವಶಂಕರ್ ಮಾತನಾಡಿ ಮಹಿಳೆಯರ ಶಕ್ತಿಕರಣವೇ ಭಾರತದ ಶಕ್ತಿಕರಣ ಎಂಬ ಉದ್ದೇಶದಿಂದ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಉಜ್ವಲ ಯೋಜನೆ ಮುಖಾಂತರ ರಾಜ್ಯದ 37.5 ಲಕ್ಷ ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಮುದ್ರಾ ಯೋಜನೆ ಮೂಲಕ ರಾಜ್ಯದಲ್ಲಿ ಮಹಿಳೆಯರಿಗೆ ನೀಡಲಾದ 4.14 ಕೋಟಿ ಮುದ್ರಾ ಸಾಲಗಳಲ್ಲಿ ಶೇ. 69 ರಷ್ಟು ಮಹಿಳೆಯರೇ ಪಡೆದಿದ್ದಾರೆ. ಹೆಣ್ಣು ಮಕ್ಕಳ ಉಜ್ವಲ ಭವಿಷ್ಯ ಮತ್ತು ಆರ್ಥಿಕ ಭದ್ರತೆಗಾಗಿ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯಡಿ, ಕರ್ನಾಟಕ ಒಂದರಲ್ಲೇ 27.6 ಲಕ್ಷ ಖಾತೆಗಳನ್ನು ತೆರೆಯಲಾಗಿದ ಅಲ್ಲದೇ ರಾಜಕೀಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಮನ್ನಣೆ ಕಲ್ಪಿಸುತ್ತಿದ್ದು ಮಹಿಳೆಯರಿಗೆ ಶಾಸಕಾಂಗದಲ್ಲಿ 33% ಮೀಸಲಾತಿ ನೀಡುವ ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗವನ್ನು (Permanent Commission) ಸ್ಥಾಪಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದರು.

     

    ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಹಾಗೂ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಹಾಜರಿದ್ದರು

     

  • ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಪಿ. ದಿನೇಶ್ ಅಧಿಕಾರ ಸ್ವೀಕಾರ

    ಬೆಂಗಳೂರು ಗ್ರಾಮಾಂತರ ಜಿಲ್ಲೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಶ್ರೀ.ಪಿ. ದಿನೇಶ್ ರವರನ್ನು ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಪಿ. ದಿನೇಶ್ ಅಧಿಕಾರ ಸ್ವೀಕಾರ ಮಾಡಿದರು .

    ಸರ್ಕಾರದ ಅಧಿಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಾಯಕ ಆಯುಕ್ತ ರಾದ ಪಿ.ದಿನೇಶ್ ರವರನ್ನು ಸಮೂಹ “ಎ” ಕಿರಿಯ ಶ್ರೇಣಿ ವೃಂದದಿಂದ ಸಮೂಹ “ಎ” ಹಿರಿಯ ಶ್ರೇಣಿ ವೃಂದಕ್ಕೆ ಪದೋನ್ನತಿ ನೀಡಿ, ಅದೇ ಹುದ್ದೆಯಲ್ಲಿ ತಾತ್ಕಾಲಿಕವಾಗಿ ಮುಂದುವರೆಸಿ ಆದೇಶಿಸಲಾಗಿದೆ.

    ಧಾರ್ಮಿಕ ದತ್ತಿ ಇಲಾಖೆಯಲ್ಲಿ ಖಾಲಿ ಇರುವ ಸಮೂಹ-ಎ ಹಿರಿಯ ಶ್ರೇಣಿ ವೃಂದದ ಕಾರ್ಯದರ್ಶಿಯಾಗಿ ತಾಲ್ಲೂಕಿನ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

     

    ನೂತನ ಕಾರ್ಯದರ್ಶಿಗಳಿಗೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸದಸ್ಯರು ಒಳಗೊಂಡಂತೆ ದೇವಾಲಯದ ಸಿಬ್ಬಂದಿ ವರ್ಗ ಸ್ವಾಗತ ಕೋರಿದರು.

     

     

    ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆ ತಹಸಿಲ್ದಾರ್ ಜಿ.ಜೆ. ಹೇಮಾವತಿ ರವರು, ಪ್ರಾಧಿಕಾರದ ಉಪಕಾರ್ಯದರ್ಶಿ ನಾರಾಯಣ ಸ್ವಾಮಿ, ಇಲಾಖೆ ಅಧಿಕಾರಿ ಬೃಂದಾ ಮತ್ತು ಪ್ರಧಾನ ಅರ್ಚಕರು ಶ್ರೀನಿಧಿ, ದೇವಾಲಯದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಜೆ.ಎನ್ ರಂಗಪ್ಪ, ಕೆ. ಎಸ್ .ರವಿ, ಲಕ್ಷ್ಮ ನಾಯಕ್,ಆರ್. ವಿ ಮಹೇಶ್ ಕುಮಾರ್, ಹೇಮಲತಾ ರಮೇಶ್ ದೇವಾಲಯದ ನಂಜಪ್ಪ ಮತ್ತು ದೇವಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು.

  • ಕೌಶಲ್ಯಾಭಿವೃದ್ದಿ ತರಬೇತಿಗೆ ಅರ್ಜಿ ಆಹ್ವಾನ

    ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 2024-25ನೇ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಅರ್ಜಿ ಆಹ್ವಾನಿಸಲಾಗಿದೆ.

     

    ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 292 ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ (FCI) ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (IHM) ಬೆಂಗಳೂರು ರವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.

     

    ತರಬೇತಿ ಹಂತದಲ್ಲಿ ಒದಗಿಸುವ ಸೌಲಭ್ಯಗಳು :

    ಈಗಾಗಲೇ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಕೆಲಸ ಖಾತರಿಯಾಗಿರುವುದು.

    ತರಬೇತಿ ಪಡೆಯುವ ವೇಳೆ ರೂ.2000/- ಗಳು ಮಾಹೆಯಾನ ಸ್ಟೈಪೆಂಡ್ ನೀಡಲಾಗುವುದು.

    ತರಬೇತಿ ಹಾಜರಾಗುವವರಿಗೆ ವಸತಿ, ಊಟ ಹಾಗೂ ಸಮವಸ್ತ್ರ ನೀಡಲಾಗುವುದು.

    ತರಬೇತಿ ಜೊತೆಗೆ ರಾಜ್ಯದ ವಿವಿಧ ಪಂಚತಾರಾ ಹಾಗೂ ಇತರೆ ಹೋಟೆಲ್ ಗಳಲ್ಲಿ ಕೆಲಸದ ನೈಜ ಅನುಭವ ಸಹ ನೀಡಲಾಗುವುದು.

    IHM,ಬೆಂಗಳೂರು ಹಾಗೂ FCI ಮೈಸೂರು ಸಂಸ್ಥೆಗಳು ಪ್ರತಿಷ್ಠಿತ ಆತಿಥ್ಯ ಕ್ಷೇತ್ರದಲ್ಲಿ ತರಬೇತಿ ನೀಡುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಈ ಸಂಸ್ಥೆಗಳಿಂದ ತರಬೇತಿ ನೀಡಿ ಪ್ರಮಾಣ ಪತ್ರ ನೀಡುವುದರಿಂದ ರಾಜ್ಯದೊಳಗೆ ಅಲ್ಲದೇ ದೇಶದ ಯಾವುದೇ ಭಾಗದ ಹೋಟೆಲ್ ಉದ್ಯಮದಲ್ಲಿ ಕೆಲಸ ಖಾತರಿಯಾಗುವುದು.

     

    ತರಬೇತಿಗಳು:

    1. Food and Beverage Service Steward) ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 4 ತಿಂಗಳ ತರಬೇತಿಯಿದ್ದು,SSLC ಅಥವಾ ಹತ್ತನೇ ತರಗತಿ ಉತ್ತೀರ್ಣವಾಗಿರಬೇಕು, 20 ರಿಂದ 45 ರ ವಯಸ್ಸಿನವರಾಗಿರಬೇಕು.

     

    2. ಬಹು ತಿನಿಸು ಅಡುಗೆ (Multi Cuisine Cook) ಈ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 5 ತಿಂಗಳ ತರಬೇತಿಯಿದ್ದು, 8ನೇ ತರಗತಿ ಉತ್ತೀರ್ಣವಾಗಿರಬೇಕು, 20 ರಿಂದ 45 ರ ವಯಸ್ಸಿನವರಾಗಿರಬೇಕು.

     

    ತರಬೇತಿ ಪಡೆಯಲು ಆಸಕ್ತಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 19 ರಂದು 5:30ರ ಒಳಗೆ ಕ ಕಚೇರಿಯ ಸಮಯದಲ್ಲಿ ಸಲ್ಲಿಸಬೇಕು.

     

    ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,ನಂ.09,ನೆಲಮಹಡಿ,ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂರವಾಣಿ ಸಂಖ್ಯೆ:080-22040633 ಇವರನ್ನು ಕಚೇರಿಯ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಆಚರಣೆ

    ಸಮಾಜದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾರ್ವಜನಿಕರಿಗೆ ಕಾನೂನು ಅರಿವು ಅಗತ್ಯವಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ದುಡಿಮೆಗೆ ಕಳುಹಿಸದೆ, ಉತ್ತಮ ಶಿಕ್ಷಣ ಪಡೆಯಲು ಕಳುಹಿಸಬೇಕು ಎಂದು ದೇವನಹಳ್ಳಿಯ ಗೌರವಾನ್ವಿತ 5 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ ರಾಮು ಕುರಣಿ ಅವರು ಹೇಳಿದರು.

     

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಸಮಿತಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಇಲಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ದೇವನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ-2025” ರ ಪ್ರಯುಕ್ತ ‘ಕಾನೂನು ಅರಿವು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು,ಸಂವಿಧಾನದಲ್ಲಿ ಮಕ್ಕಳಿಗಾಗಿ ಇರುವ ಕಾಯ್ದೆಗಳು, ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಮಕ್ಕಳು ಶಿಕ್ಷಣ ಪಡೆಯುವಾಗ ಅಲಕ್ಷ್ಯ ಮಾಡದೇ, ಶ್ರದ್ಧೆಯಿಂದ ಕಲಿತರ ಮಾತ್ರವೇ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿದೆ, ಇದಲ್ಲದೆ ಮಕ್ಕಳನ್ನು ಅಪಹರಣ ಮಾಡಿ ಭಿಕ್ಷಾಟನೆಗೆ ಅಥವಾ ಇತರೆ ಚಟುವಟಿಕೆಗಳಾದ ಅಂಗಡಿಗಳಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು, ಇಂತಹ ಘಟನೆಗಳನ್ನು ಸಾರ್ವಜನಿಕರು ಗಮನಿಸಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕರೆ ಮಾಡಿ ಮಾಹಿತಿ ನೀಡಿ ಅಥವಾ ಸ್ಥಳೀಯ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ತಿಳಿಸಿದರು.

    ಈ ವೇಳೆ ದೇವನಹಳ್ಳಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್ ಅವರು ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.

     

    *ರಸ ಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ*

     

    ಕಾರ್ಯಕ್ರಮದ ವೇದಿಕೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಥಮ ಬಹುಮಾನ ಸಿಂಚನ ಮತ್ತು ಮೌಲ ಶ್ರೀ ಶಾರದಾ ಪ್ರೌಢಶಾಲೆ ದೊಡ್ಡಬಳ್ಳಾಪುರ,ದ್ವಿತೀಯ ಬಹುಮಾನ ಹಿಂಜಾಮುಲ್ ಮತ್ತು ಜಗದೀಶ್ ಸರ್ಕಾರಿ ಜೂನಿಯರ್ ಶಾಲೆ ದೇವನಹಳ್ಳಿ , ತೃತೀಯ ಬಹುಮಾನ ಸಂತೋಷ್ ಮತ್ತು ರುದ್ರೇಶ್ ಶ್ರೀನಿವಾಸ ಪ್ರೌಢಶಾಲೆ ನೆಲಮಂಗಲ.

    ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಪ್ರವೀಣ್ ನಾಯಕ್, ದೇವನಹಳ್ಳಿ ತಾಲ್ಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ವೆಂಕಟೇಶ್ ಎನ್, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಹರ್ಷವರ್ಧನ್ ಎಸ್.ಎಲ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ರಮೇಶ್ ಬಿ.ಆರ್, ದೇವನಹಳ್ಳಿ ತಾಲ್ಲೂಕಿನ ತಹಶೀಲ್ದಾರ್ ಹೆಚ್.ಸಿ ಬಾಲಕೃಷ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾ ಲಕ್ಷ್ಮೀ, ದೇವನಹಳ್ಳಿ ತಾಲ್ಲೂಕಿನ ವಕೀಲರ ಸಂಘದ ಅಧ್ಯಕ್ಷರು ಎಂ.ಆರ್ ಮುನಿರಾಜು, ಜೊತೆಗೆ ಜಿಲ್ಲೆಯ ನಾಲ್ಕು ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರು ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಸಿಬ್ಬಂದಿಗಳು ಹಾಗೂ ವಿವಿಧ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ಕೃಷಿ ಹೊಂಡಕ್ಕೆ ಬಿದ್ದ ಬಾಲಕ : ಪ್ರಥಮ ಚಿಕಿತ್ಸೆ, ಅಂಬ್ಯೂಲೆನ್ಸ್ ಕೊರತೆಯಿಂದ ಬಾಲಕ ಸಾವು

    ದೊಡ್ಡಬಳ್ಳಾಪುರ : ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಇಂದು ಮಧ್ಯಾಹ್ನದ ಸುಮಾರಿಗೆ 8 ವರ್ಷದ ನಾಗಚೈತನ್ಯ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

     

    ಮೃತ ಬಾಲಕನ ತಂದೆ ನರಸಿಂಹಲು ತಾಯಿ ಭಾಗ್ಯಮ್ಮ ಆಂಧ್ರಪ್ರದೇಶದ ಪೆನಗೊಂಡ ಬಳಿಯ ಮುದ್ದೆಪಲ್ಲಿ ಗ್ರಾಮದವರಾಗಿದ್ದು, ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮಕ್ಕೆ ಕಳೆದ ಭಾನುವಾರ ಕಟ್ಟಡ ನಿರ್ಮಾಣಕ್ಕೆಂದು ಮನೆ ಕಟ್ಟುವ ಕೆಲಸಕ್ಕೆ ಕೂಲಿಯಾಳುಗಳಾಗಿ ಬಂದಿದ್ದರು, ಜೊತೆಯಲ್ಲಿ ಇಬ್ಬರು ಮುದ್ದಾದ ಮಕ್ಕಳನ್ನು ಕರೆದುಕೊಂಡು ಬಂದಿದ್ದರು ಆದರೆ ಇಂದು ಈ ದುರ್ಘಟನೆ ಸಂಭವಿಸಿದೆ.

     

    ಕಟ್ಟಡ ಕೆಲಸ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿಯೇ ದೇವರಾಜ್ ಎಂಬುವರಿಗೆ ಸೇರಿದ ತೋಟವಿದ್ದು , ಮೃತ ಬಾಲಕ ತನ್ನ ತಂಗಿ ಜೊತೆ ಶೌಚ ಕಾರ್ಯಕ್ಕೆಂದು ತೋಟಕ್ಕೆ ತೆರಳಿದ್ದಾಗ, ಕೃಷಿ ಹೊಂಡಕ್ಕೆ ಬಾಲಕ ನಾಗ ಚೈತನ್ಯ ಬಿದ್ದಿದ್ದಾನೆ, ಆತನ ತಂಗಿ ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದಲ್ಲಿಗೆ ಬಂದು ಸುದ್ದಿ ತಿಳಿಸಿದ್ದಾಳೆ. ಮೃತ ಬಾಲಕನ ತಾಯಿ ಚಿರಾಡುತ್ತಿದ್ದನ್ನು ಗಮನಿಸಿದ ಮೇಸ್ತ್ರಿ ತಮ್ಮಯ್ಯ ಎಂಬುವರು, ಕೃಷಿ ಹೊಂಡದ ಬಳಿ ಬಂದಿದ್ದಾರೆ, ಕೃಷಿ ಹೊಂಡಕ್ಕೆ ಜಿಗಿದು ಬಾಲಕನ ಪ್ರಾಣ ಕಾಪಾಡಿದ್ದಾರೆ, ತಕ್ಷಣವೇ ಬಾಲಕನನ್ನು ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಬಂದಿದ್ದಾರೆ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದೇಳಿ ಅಲ್ಲಿನ ಸಿಬ್ಬಂದಿ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕಳಿಸಿದ್ದಾರೆ, ಆದರೆ ಆಸ್ಪತ್ರೆಗೆ ಬಂದಾಗ ಪರೀಕ್ಷೆ ನಡೆಸಿದ ವೈದ್ಯರು ಬಾಲಕ ಮೃತ ಪಟ್ಟಿರುವುದನ್ನ ದೃಢಪಡಿಸಿದ್ದಾರೆ.

     

    ಘಟನೆ ಸಂಬಂಧ ಸ್ಥಳೀಯರಾದ ವೆಂಕಟೇಶ್ ಮಾತನಾಡಿ, ಕೃಷಿ ಹೊಂಡದ ಸುತ್ತ ತಂತಿ ಬೇಲಿಯನ್ನ ಹಾಕಿಲ್ಲ, ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ, ತೋಟದ ಮಾಲೀಕನ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ, ಜೊತೆಗೆ ಕೊನಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಅಂಬ್ಯೂಲೆನ್ಸ್ ನಲ್ಲಿ ದೊಡ್ಡಬಳ್ಳಾಪುರ ಆಸ್ಪತ್ರೆಗೆ ಕಳಿಸಿದ್ದರೆ ಬಾಲಕ ಬದುಕುಳಿಯುತ್ತಿದ್ದ, ಬಾಲಕ ಸಾವಿಗೆ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯವು ಕಾರಣ ಎಂದು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.

    ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

  • ಹಾದ್ರೀಪುರ : ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಪಿಡಿಒ ಅವರದ್ದೇ ದರ್ಬಾರ್ ಎಂಬ ಆರೋಪ : ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದ ಗ್ರಾಮಸ್ಥರು

    ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಪಿಡಿಓ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಪಂಚಾಯತಿ ಒಳಕ್ಕೆ ಹೋಗುತ್ತಿದ್ದಂತೆ ಮೊದಲು ಕಾಣುವುದು ಅಧ್ಯಕ್ಷರ ಅಪ್ಪಣೆ ಪತ್ರಗಳು. ಪಿಡಿಓ ಕಚೇರಿಯ ಬಾಗಿಲಿನಲ್ಲಿಯೇ ಈ ಆದೇಶವನ್ನು ಅಂಟಿಸಲಾಗಿದೆ ಪಂಚಾಯಿತಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ ಆಗಲ್ಲ. ಒಂದು ಇ ಖಾತೆ ಮಾಡಿಸಲು ಕನಿಷ್ಠ 25 ಸಾವಿರ ಹಣ ಬೇಡಿಕೆ ಇಡುತ್ತಾರೆ. ಹಣ ಕೊಟ್ಟವರಿಗೆ ಕೇವಲ 15 ದಿನದಲ್ಲೇ ಇ ಖಾತೆ ಬರುತ್ತದೆ. ಚೌಕಾಸಿ ಮಾಡಿದವರಿಗೆ ತಡವಾಗುತ್ತದೆ ಎಂದು ಆರೋಪಿಸಿದ್ದಾರೆ.

     

    ಇದಕ್ಕೆ ತಾಜಾ ಉದಾಹರಣೆಗೆ ಎಂದರೆ‌ ಹಾದ್ರೀಪುರ ಗ್ರಾಮದ ಚೆನ್ನಲಕ್ಷ್ಮಯ್ಯ ಎಂಬುವವರು ಕಳೆದ ಮೂರು ತಿಂಗಳ ಹಿಂದೆ ಇ ಖಾತೆ ಮಾಡಿಸಲು ದಾಖಲೆಗಳನ್ನು ಕೊಟ್ಟರು ಈ ವೇಳೆ ಲಂಚಕ್ಕೆ ಆಮೀಷವೊಡ್ಡಿದ್ದಾರೆ ಅವರು ಕೇಳಿದಷ್ಟು ಅಲ್ಲದೇ ಇದ್ದರೂ, ಲಂಚ ಅಂತೂ ಕೊಟ್ಟರೂ. ಮಳೆ ಬಂದಾಗ ಮನೆಗೆ ನೀರು ನುಗ್ಗುತ್ತದೆ. ನೀರು ನುಗ್ಗಿದಾಗ ಪ್ರತೀ ಬಾರಿ ಪಿಡಿಓಗೆ ಹೇಳಿದರೂ ಬರೀ ಹಾರಿಕೆ ಉತ್ತರ ನೀಡಿ ಸುಮ್ಮನೆ ಆಗುತ್ತಾರೆ. ಹಾಗಾಗಿ ಹೇಗೋ ಸಾಲ ಮಾಡಿ ಮನೆ ಕಟ್ಟಿಕೊಳ್ಳೋಣ ಅಂತ ಇ ಖಾತೆಗೆ ಹಾಕಿದರೆ ಮೂರು ತಿಂಗಳಿನಿಂದ ಕಚೇರಿಗೂ ಮನೆಗೂ ಅಲೆಸಿ, ಪಿಐಡಿ ನಂಬರ್ ಇಲ್ಲ, ಮಿಸ್ಸಿಂಗ್ ಪ್ರಾಪರ್ಟಿಗೆ ಸೇರಿಸಿ ಮಾಡಿಸಬೇಕು ಎಂದು ಹೇಳಿ,‌ ಈಗ ಮೂರು ದಿನಗಳ‌ ಹಿಂದೆ ಸರಕಾರ ಪಿಐಡಿ ನಂಬರ್ ಮಾಡುವುದನ್ನು ನಿಲ್ಲಿಸಿದೆ ಎಂದು ಹೇಳಿ ಫೈಲ್ ವಾಪಸ್ ನೀಡುತ್ತಾರೆ. ಮೂರು ತಿಂಗಳಿನಿಂದ ಇವರು ಏನು ಮಾಡುತ್ತಿದ್ದರು ಎಂದು ಪ್ರಶ್ನೆ ಮಾಡಿದರೆ ಹಾರಿಕೆ ಉತ್ತರ ಎಂದು‌ ಚೆನ್ನಲಕ್ಷ್ಮಯ್ಯ ಆರೋಪಿಸಿದ್ದಾರೆ‌‌

     

    *ಅಧ್ಯಕ್ಷ ಮತ್ತು ಪಿಡಿಓ ದರ್ಬಾರ್*

     

    ಈ ಪಂಚಾಯತಿಯಲ್ಲಿ ಅಧ್ಯಕ್ಷರ ಅಪ್ಪಣೆ ಇಲ್ಲದೆ ಯಾವುದೇ ಕೆಲಸ ಆಗಲ್ಲ. ಕೆಲಸ ಆಗಬೇಕು ಎಂದರೆ ಮೊದಲು ಅಧ್ಯಕ್ಷನ‌ ಬಕೆಟ್ ಹಿಡಿಯಬೇಕು. ಇಲ್ಲದೇ ಇದ್ದರೆ ಇಲ್ಲಿ ಯಾವ ಕೆಲಸನೂ ಆಗಲ್ಲ. ಇದಕ್ಕೆ‌ ತಾಜಾ ಉದಾಹರಣೆ ಅವರು ಅಂಟಿಸಿರುವ ನೋಟೀಸ್. ಇನ್ನೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಮರಿಕೇರಿ 2016 ರಲ್ಲಿ ಹಾದ್ರೀಪುರ ಪಂಚಾಯತಿಗೆ ಬಂದರು. ಅಲ್ಲಿಂದ ಇಲ್ಲಿಯವರೆಗೆ ಇವರದ್ದೇ ದರ್ಬಾರ್. ಪಂಚಾಯತಿಯ ಪ್ರತಿ ಮನೆ ಮನೆ ಗೊತ್ತಿರುವುದರಿಂದ ಬಡವರಿಗೆ ಇವರು ಕೆಲಸವೇ ಮಾಡಲ್ಲ, ಬರೀ ಸಿರಿವಂತರಿಗೆ ಮಾತ್ರ ಕೆಲಸ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಸರಕಾರ 5 ವರ್ಷ ಮಾತ್ರ ಒಂದು ಪಂಚಾಯತಿಯಲ್ಲಿ ಕೆಲಸ ಮಾಡಲು ಪಿಡಿಓ ಗೆ ಅವಕಾಶ ನೀಡಿರುವುದು. ಆದರೆ ಅವಧಿ ಮುಗಿದರೂ ಇನ್ನೂ ಇಲ್ಲೇ ಏಕೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

     

    ಕಳೆದ ಮೂರು ತಿಂಗಳ ಹಿಂದೆ ಈ ಖಾತೆ ಮಾಡಿಸಲು ದಾಖಲೆಗಳನ್ನು ನೀಡಿದ್ದೆ. ಕೇಳಿದಾಗ ಪ್ರತಿ ಬಾರಿ ಆ ದಾಖಲೆ ಸರಿ ಇಲ್ಲ,‌ ಮಾಡಿಸಿಕೊಂಡು ಬಾ, ಸರಿ ಪಡಿಸಿಕೊಂಡು ಹೋದರೆ ಮತ್ತೊಂದು ದಾಖಲೆ ಹೇಳುತ್ತಿದ್ದರು. ಅಧ್ಯಕ್ಷರ ಮೇಲೆ‌ ಪಿಡಿಓ, ಪಿಡಿಓ ಮೇಲೆ ಅಧ್ಯಕ್ಷರ ಹೇಳಿಕೊಂಡು, ಇಂದು ಸರಕಾರ ಪಿಐಡಿ ಮಾಡುವುದನ್ನು ಅನುಮತಿ ನೀಡಿಲ್ಲ ಎಂದು ಹೇಳಿ ದಾಖಲೆ ವಾಪಸ್ ನೀಡುತ್ತಿದ್ದಾರೆ. ಬಡವರಿಗೆ ಈ ಪಂಚಾಯತಿಯಲ್ಲಿ ನ್ಯಾಯವೇ ಇಲ್ಲ ಚೆನ್ನಲಕ್ಷ್ಮಯ್ಯ ಆರೋಪಿಸಿದ್ದಾರೆ.

  • ಭಕ್ತರಹಳ್ಳಿ : ಸರ್ಕಾರಿ ಜಮೀನು ಕಬಳಿಕೆ ಆರೋಪ : ಗೋಮಾಳ ಭೂಮಿ ಉಳಿಸುವಂತೆ ರೈತರ ಅಗ್ರಹ

    ದೊಡ್ಡಬಳ್ಳಾಪುರ : ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರ್ಕಾರಿ ಗೋಮಾಳವಿದೆ, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜಾನುವಾರುಗಳ ಮೇವಿನ ತಾಣ, ಹೈನುಗಾರಿಕೆಗೆ ಬೆನ್ನೆಲುಬಾಗಿರುವ ಸರ್ಕಾರಿ ಗೋಮಾಳ ಭೂಗಳ್ಳರ ಪಾಲಾಗುತ್ತಿದೆ ಎಂದು ರೈತರು ಆತಂಕವನ್ನ ವ್ಯಕ್ತಪಡಿಸಿದ್ದಾರೆ.

     

    ಭಕ್ತರಹಳ್ಳಿಯ ಸರ್ವೆ ನಂಬರ್ 27ರ ಸರ್ಕಾರಿ ಗೋಮಾಳದಲ್ಲಿ ಸುಮಾರು 100 ಎಕರೆ ಜಾಗವಿದೆ, ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಜಮೀನು ಮಂಜೂರಾಗಿದೆ, ರೈತರಿಗೆ ಪ್ರತ್ಯೇಕವಾಗಿ ಪೋಡಿಯಾಗದ ಹಿನ್ನಲೆ ಜಂಟಿ ಖಾತೆ ಇದೆ. ಇದರಲ್ಲಿನ ಬಲಾಢ್ಯನೊಬ್ಬ ಜಮೀನಿಗೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾನೆ, ಸರ್ಕಾರಿ ಗೋಮಾಳ ಸೇರಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಇದಕ್ಕೆ ಅಧಿಕಾರಿಗಳ ಬೆಂಬಲವಿದೆ, ರೈತರ ಜಮೀನಿನಲ್ಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಇದನ್ನ ತಡೆಯಲು ಮುಂದಾದ ರೈತರ ವಿರುದ್ಧ ಪ್ರಕರಣವನ್ನ ದಾಖಲು ಮಾಡಲಾಗಿದೆ ಎಂದು ರೈತರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಲ್ಲೇಗೌಡನಹಳ್ಳಿಯ ರೈತರಾದ ನಂಜಮ್ಮ ಮಾತನಾಡಿ, ಜಮೀನಿಗೆ ಸಂಬಂಧಪಟ್ಟ ಪಹಣಿ ಮತ್ತು ಮ್ಯೂಟೇಷನ್ ಸೇರಿದಂತೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ, ಆದರೂ ನನ್ನ ಜಮೀನಿಗೆ ಬಲವಂತದಿಂದ ಬೇಲಿ ಹಾಕಲು ಮುಂದಾಗಿದ್ದಾರೆ. ತಡೆಯಲು ಹೋದರೆ ನಮ್ಮ ವಿರುದ್ಧ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ನೋವು ಅಳಲು ತೋಡಿಕೊಂಡರು.

     

    ಶಿರಸ್ತೆದಾರನಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರಾಜಣ್ಣ ಮಾತನಾಡಿ,  ದಾಖಲೆಗಳು ಪ್ರಕಾರ ಮತ್ತು ಸರ್ವೆ ನಂಬರ್ ನಲ್ಲಿ ಎಷ್ಟು ಜಮೀನು ಇದೆಯೋ ಆ ಜಾಗಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಸಾವಿರಾರು ಜಾನುವಾರುಗಳಿಗೆ ಮೇವಿನ ತಾಣವಾಗಿರುವ ಗೋಮಾಳವನ್ನ ಸೇರಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಜೊತೆಗೆ ಜಾನುವಾರುಗಳಿಗೆ ನೀರಿನ ಮೂಲವಾಗಿದ್ದ ಗೋಕುಂಟೆಗಳನ್ನ ನೆಲಸಮ ಮಾಡಿ ಒತ್ತುವರಿ ಮಾಡಲಾಗುತ್ತಿದೆ.

    ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಗೌಡನಹಳ್ಳಿ, ಶಿರಸ್ತೇದಾರನಪಾಳ್ಯ, ಅವಲಯ್ಯನಪಾಳ್ಯ, ಲಕ್ಕೇನಹಳ್ಳಿ,ಸಿಂಗೇನಹಳ್ಳಿ, ನರಸಾಪುರ ಸೇರಿದಂತೆ ಹತ್ತಾರು ಗ್ರಾಮಗಳ ಜಾನುವಾರುಗಳಿಗೆ ಈ ಗೋಮಾಳವೇ ಆಧಾರ, ಹೈನುಗಾರಿಕೆ ನಂಬಿ ಕೊಂಡು ರೈತರು ಜೀವನ ನಡೆಸುತ್ತಿದ್ದಾರೆ, ಕುರಿ-ಮೇಕೆ ಸಾಕಾಣಿಕೆ ಮಾಡಿ ಸ್ವಾವಲಂಬಿ ಜೀವನ ಮಾಡುತ್ತಿದ್ದಾರೆ, ರೈತರು ಮತ್ತು ಜಾನುವಾರುಗಳ ಜೀವನಾಧರವಾಗಿರುವ ಗೋಮಾಳ ಬಲಾಢ್ಯರ ಪಾಲುಗುತ್ತಿದೆ, ಇದರಿಂದ ಮುಂದಿನ ದಿನಗಳಲ್ಲಿ ರೈತರ ಜೀವನ ಮಾಡುವುದು ಕಷ್ಟವಾಗಲಿದೆ, ನಮ್ಮ ಮನವಿ ಇಷ್ಟೇ ಬಲಾಢ್ಯರಿಗೆ ಸೇರಿದ ಜಾಗ ಮತ್ತು ರೈತರಿಗೆ ಮಂಜೂರು ಆಗಿರುವ ಜಾಗವನ್ನ ಹೊರತು ಪಡಿಸಿ ಇನ್ನುಳಿದ ಸರ್ಕಾರಿ ಗೋಮಾಳವನ್ನ ಸರ್ಕಾರ ವಶಕ್ಕೆ ಪಡೆಯ ಬೇಕೆಂದು ಆಗ್ರಹಿಸಿದರು.

     

     

    ಸ್ಥಳೀಯ ರೈತ ಮಾರುತಿ ಮಾತನಾಡಿ, ಯಾವುದೋ ಜಮೀನಿಗೆ ಯಾವುದೋ ಸರ್ವೇ ನಂಬರ್ ತೋರಿಸಿ ನಮ್ಮದೇ ಜಾಗ ಎನ್ನುತ್ತಾರೆ, ಪ್ರಶ್ನೆ ಮಾಡಲು ಹೋದವರ ಮೇಲೆ ಕೇಸ್ ಹಾಕಿಸುತ್ತಾರೆ. ಬಡ ರೈತರ ಪರ ಇರಬೇಕಾದ ಅಧಿಕಾರಿಗಳು ಬಲಾಢ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ನೂರಾರು ಎಕರೆ ಇದ್ದ ಸರ್ಕಾರಿ ಗೋಮಾಳ ಮತ್ತು ಗೋಕುಂಟೆಗಳು ನೋಡು ನೋಡುತ್ತಿದಂತೆ ಕಣ್ಮರೇಯಾಗುತ್ತಿವೆ, ಒತ್ತುವರಿ ಮಾಡಿಕೊಂಡ ಗೋಮಾಳಕ್ಕೆ ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಕೋಟಿ ಕೋಟಿ ಬೆಲೆ ಮಾರಾಟ ಮಾಡುತ್ತಾರೆ. ನೂರಾರು ವರ್ಷಗಳಿಂದ ಇಲ್ಲೇ ಜೀವನ ಮಾಡುತ್ತಿರುವ ರೈತರಿಗೆ ಒಂದಡಿ ಜಾಗ ಇಲ್ಲದಂತೆ ಮಾಡುತ್ತಾರೆ, ಜಾನುವಾರುಗಳು ಮೇಯುವ ಜಾಗವನ್ನ ರೆಸಾರ್ಟ್ ಗಳನ್ನಾಗಿ ಮಾಡುತ್ತಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗೋಮಾಳ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕು , ಹೈನುಗಾರಿಕೆ ಉಳಿಸುವಲ್ಲಿ ಮುಂದಾಗಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

     

    ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ರೈತರಾದ ರವಿ,ಆನಂದ್, ನಾಗರಾಜು, ಮಾರುತಿ, ರಾಜಣ್ಣ, ಜಯಮ್ಮ ಸೇರಿದಂತೆ ಹಲವರು ಹಾಜರಿದ್ದರು.

  • ಕೋಪ ಬರೋದು ಪ್ರಾಮಾಣಿಕರಿಗೆ : ನನಗೆ ಭಿಕ್ಷೆಕೊಡುವಷ್ಟು ನೀವು ಯೋಗ್ಯರಲ್ಲ : ನಿಮಗಿಂತ ಮೊದಲು ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ್ದು ನಾವು – ಬಿ ಸಿ ಆನಂದ್ ಕುಮಾರ್

    ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯನವರು ನನ್ನ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ತಾಲ್ಲೂಕಿನ ಮತದಾರರಲ್ಲಿ ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರಲ್ಲಿ ಗೊಂದಲ ಸೃಷ್ಟಿ ಮಾಡಲು ಹೊರಟಿದ್ದಾರೆ . ಅವರ ಆರೋಪಗಳು ಸತ್ಯಕ್ಕೆ ದೂರವಾದುದ್ದು, ಅವರ ಹೇಳಿಕೆ ಸತ್ಯವೇ ಆಗಿದ್ದರೆ ಅವರು ಯಾರಿಗೂ ಮೋಸ ಮಾಡಿಲ್ಲ ಎಂಬುದೇ ಆದರೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಲಿ ಎಂದು ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ತಿಳಿಸಿದರು.

    ನಗರದ ಬಮೂಲ್ ಶಿಬಿರ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು ನೆನ್ನೆ ತಾಲೂಕಿನ ಮಾಜಿ ಶಾಸಕ ಟಿ ವೆಂಕಟರಮಣಯ್ಯನವರು ನನ್ನ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದು, ಅವರ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ , ಬಮೂಲ್ ನಿರ್ದೇಶಕ ಸ್ಥಾನವನ್ನು ನನ್ನ ತಮ್ಮ ಭಿಕ್ಷೆ ನೀಡಿದ್ದಾನೆ ಎನ್ನುವ ಮಾಜಿ ಶಾಸಕರು 2013ರಲ್ಲಿ ತಾಲ್ಲೂಕಿಗೆ ಬಂದವರು ಆದರೆ ನಾನು 1995 ರಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆ , ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ಬೂತ್ ಮಟ್ಟದಿಂದ ದುಡಿದಿದ್ದೇನೆ, ಅಲ್ಲದೆ ಅಂದಿನಿಂದ ಸ್ಥಳೀಯ ಮುಖಂಡರಾದ ತಿ.ರಂಗರಾಜುರವರ ನೇತೃತ್ವದಲ್ಲಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ. ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯ ಪರ ಬೆಂಬಲವಾಗಿ ನಿಂತು ಯಾವುದೇ ಅಮಿಷಗಳಿಗೆ ಒಳಗಾಗದೆ ಸಂಪೂರ್ಣ ಶುದ್ಧ ಹಸ್ತದಿಂದ ದುಡಿದ್ದಿದ್ದೇನೆ, ಅದನ್ನು ಮಾಜಿ ಶಾಸಕರು ಅರಿತುಕೊಳ್ಳಲಿ ಎಂದರು.

     

    ಮಾಜಿ ಶಾಸಕರು ದೊಡ್ಡಬಳ್ಳಾಪುರ ತಾಲೂಕಿಗೆ ಬರುವ ಮುಂಚೆಯೇ ನಾನು ಡಿ.ಕೆ ಶಿವಕುಮಾರ್ ನೇತೃತ್ವದ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರದ ಪ್ರತಿನಿಧಿಯಾಗಿದ್ದೆ ಎಂಬುದು ಮಾಜಿ ಶಾಸಕರಿಗೆ ಗೊತ್ತಿಲ್ಲ ಅಲ್ಲದೇ ಅವರು ಬರುವ ಮೊದಲೇ ನಾನು ಗ್ರಾಮಪಂಚಾಯತಿ ಸದಸ್ಯನಾಗಿ, ಪಂಚಾಯತಿ ಉಪಾಧ್ಯಕ್ಷನಾಗಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಕೂಡ ಮಾಡಿದ್ದೆ. ಕಾಂಗ್ರೆಸ್ ಪಕ್ಷವು ನನಗೆ ಕೊಟ್ಟಿರುವುದಕ್ಕಿಂತ ಡಬಲ್ ನಾನು ಸೇವೆ ರೂಪದಲ್ಲಿ ಪಕ್ಷಕ್ಕೆ ವಾಪಾಸ್ ನೀಡಿದ್ದೇನೆ ಎಂದರು.

    ವಿಧಾನಸಭಾ ಚುನಾವಣೆಯಲ್ಲಿ ಆರ್ ಜಿ ವೆಂಕಟಚಾಲಯ್ಯ ನವರು ಸ್ಪರ್ಧಿಸಿದ್ದ ಸಂದರ್ಭದಲ್ಲಿ ನನ್ನ ಗ್ರಾಮದ ಬೂತ್ ನಲ್ಲಿ ಅತಿಹೆಚ್ಚು ಲೀಡ್ ಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆ ತೋರ್ಪಡಿಸಿದ್ದೇನೆ ತಾಲೂಕಿನ ಪ್ರತಿ ಮನೆಮನೆಗೂ ಭೇಟಿ ನೀಡಿ ಪಕ್ಷವನ್ನು ಕಟ್ಟಿದ್ದೇನೆ.ನಾನು ಈವರೆಗೂ ಯಾವುದೇ ಫ್ರೀ ಪೋಸ್ಟ್ ತಗೊಂಡಿಲ್ಲ ನಂಗೆ ಯಾರು ಭಿಕ್ಷೆ ಕೊಟ್ಟಿಲ್ಲ ಎಂದರು.

     

    ನೀವು ಭಿಕ್ಷೆಕೊಡುವಷ್ಟು ಯೋಗ್ಯರಲ್ಲ 

    ಹಲವಾರು ಭಿಕ್ಷೆಗಳನ್ನು ಪಡೆದು ಬಿ.ಸಿ.ಆನಂದ್ ಕುಮಾರ್ ಬಮುೂಲ್ ಸ್ಥಾನ ಪಡೆದಿದ್ದಾರೆ ಎಂಬ ಮಾಜಿ ಶಾಸಕರ ಹೇಳಿಕೆಗೆ ಉತ್ತರ ನೀಡಿದ ಅವರು ನಾನು ಈವರೆಗೂ ಯಾರ ಬಳಿಯೂ ಯಾವುದೇ ಸ್ಥಾನಮಾನವನ್ನು ಕೇಳಿಲ್ಲ , ಅಂದಿನ ಬಮೂಲ್ ಚುನಾವಣೆಯ ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರು ನಮ್ಮ ಕಾಂಗ್ರೆಸ್ ಓಟು 32ರಿಂದ 40ಕ್ಕೆ ನಿಂತು ಹೋಯಿತು, ಹಲವು ಅಭ್ಯರ್ಥಿಗಳನ್ನು ನಿರ್ಧರಿಸಿ 8 -10ಮೀಟಿಂಗ್ ಮಾಡಿ ದಿ.ಅಪ್ಪಯ್ಯಣ್ಣ ನವರ ವಿರುದ್ಧ ನಿಲ್ಲಿಸಲು ಪ್ರಯತ್ನ ನೆಡೆಸಿದ್ದರು ಆದರೆ ಅಂದು ಅವರ ವಿರುದ್ಧ ನಿಲ್ಲಲು ಯಾವ ಅಭ್ಯರ್ಥಿಯೂ ಒಪ್ಪದ ಕಾರಣ ನನ್ನನ್ನು ನಿಲ್ಲಿಸಿದ್ರು. ಇಂತಹ ಪರಿಸ್ಥಿತಿಯಲ್ಲಿ ಮುಖಂಡರ ಒತ್ತಾಯದ ಮೇರೆಗೆ ಬಮೂಲ್ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಇಂದು ಮಾಜಿ ಶಾಸಕರು ಹೇಳುತ್ತಾರೆ ನನ್ನ ತಮ್ಮ ಕೊಟ್ಟ ಭಿಕ್ಷೆಯಿಂದ ಆನಂದ್ ಬಮೂಲ್ ನಲ್ಲಿ ಇದ್ದಾರೆ ಎಂದು. ತಮ್ಮ ತಮ್ಮನನ್ನು ಕಣಕ್ಕಿಳಿಸದ ಮಾಜಿ ಶಾಸಕರು ಇಂದು ಆಕ್ರೋಶದಲ್ಲಿ ಮಾತನಾಡುವುದು ನೋಡಿದರೆ ವಿಪರ್ಯಾಸ ಎನಿಸುತ್ತದೆ. ಹತ್ತು ವರ್ಷಗಳ ಸುಧೀರ್ಘ ಆಡಳಿತ ಮಾಡಿರುವ ಮಾಜಿ ಶಾಸಕರು ಬಮೂಲ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಹಾಕಲು ಸಾಧ್ಯವಾಗಲಿಲ್ಲ ಇಂದು ನಮ್ಮ ವಿರುದ್ಧವಾಗಿ ವಾಗ್ದಾಳಿ ಮಾಡುತ್ತಾರೆ ಇದು ಎಷ್ಟು ಸರಿ ನಾನು ಭಿಕ್ಷೆ ಬೇಡುವಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ ನನಗೆ ಭಿಕ್ಷೆ ಕೊಡುವಷ್ಟು ಯೋಗ್ಯರು ಅವರಲ್ಲ ಅದನ್ನು ಅವರು ಅರಿತುಕೊಳ್ಳಲಿ. ನನ್ನ ಜೀವನದಲ್ಲಿ ನಾನು ಯಾರಿಗಾದರೂ ಋಣಿಯಾಗಿದ್ದೇನೆ ಎಂದರೆ ಅದು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆ ಮಾತ್ರ ಕಾರಣ ಕೆಎಂಎಫ್ ವಿಚಾರದಲ್ಲಿ ಅವರ ಸಹಕಾರ ಎಂದಿಗೂ ನಾನು ಮರೆಯುವುದಿಲ್ಲ ಎಂದರು.

     

    2014-15 ನೇ ಸಾಲಿನಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಮುಖಂಡರಾದ ತಿ. ರಂಗರಾಜು ರವರು ಅದು ನೆನಪಿರಲಿ.ಅಲ್ಲದೇ ಜಿಲ್ಲಾ ಪಂಚಾಯಿತಿ ಚುನಾವಣೆ ಟಿಕೆಟ್ ಬಗ್ಗೆ ಮಾತನಾಡುವ ಮಾಜಿ ಶಾಸಕರು Dr. ವಿಜಿಕುಮಾರ್ ಹಾಗೂ ಸಿ ನಾರಾಯಣ ಸ್ವಾಮಿ ಅವರನ್ನ ಎದುರಿಸೋ ಶಕ್ತಿ ಇಲ್ಲದೆ ಅಂದು ಕೆ ಟಿ ಕೃಷ್ಣಪ್ಪ, ಚುಂಚೇಗೌಡರು ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದರು, ತಾಲೂಕಿನ ಎಲ್ಲಾ ಮುಖಂಡರ ಒತ್ತಾಯದ ಮೇರೆಗೆ ಒಪ್ಪಿಕೊಂಡೆ ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ ಕೆ ಶಿವಕುಮಾರ್ ಸಾಹೇಬ್ರಿಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಅಂತ ಹೇಳಿದ್ದೆ. ಅವರ ಮೇಲಿನ ಪ್ರೀತಿಗಾಗಿ ಜಿಲ್ಲಾ ಪಂಚಾಯತಿ ಟಿಕೆಟ್ ಪಡೆದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದೆ ಆ ಟಿಕೆಟ್ ಕೊಟ್ಟಿದ್ದು ಭಿಕ್ಷೆಯಿಂದ ಅಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ ಎಂದರು.

     

     

     

    ನಾನು ಡಿ ಕೆ ಅಭಿಮಾನಿ 

    ನಾನು 1995 ರಿಂದಲೂ ನನ್ನ ರಾಜಕೀಯ ಆರಾಧ್ಯ ದೈವವಾಗಿ ರಾಜ್ಯದ ಉಪ ಮುಖ್ಯಮಂತ್ರಿಗಳ ಡಿ.ಕೆ ಶಿವಕುಮಾರ್ ಅವರನ್ನು ಆರಾಧಿಸುತ್ತಾ ಬಂದಿದ್ದೇನೆ, ಬಮೂಲ್ ಚುನಾವಣೆ ಸಂದರ್ಭದಲ್ಲಿ ತಾಲೂಕಿನ ಹಾಲಿ ಶಾಸಕರು, ಹಾಗೂ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಏರ್ಪಡಿಸಿದ್ದ ಸಭೆಯಲ್ಲಿ ಮೊದಲೇ ಹೇಳಿ ಡಿ ಕೆ ಶಿವಕುಮಾರ್ ರವರಿಗೆ ಹಾರಕೊಡಲು ಹೋಗಿದ್ದೆ , ನಾನು ಕದ್ದು ಮುಚ್ಚಿ ರಾತ್ರೋರಾತ್ರಿ ಹೋಗಿ ಹಾರ ಕೊಟ್ಟು ಬಂದಿಲ್ಲ, ಅದನ್ನು ಪ್ರಶ್ನೆ ಮಾಡುವ ಕೆಲ ಕಾಂಗ್ರೆಸ್ಸಿಗರಿಗೆ ಈ ಮೂಲಕ ಉತ್ತರಸುತ್ತಿದ್ದೇನೆ .ನಾನು ಡಿ ಕೆ ಶಿವಕುಮಾರ್ ಅಭಿಮಾನಿ ಅಭಿಮಾನಕ್ಕೆ ಪಕ್ಷ ಎಂಬುದಿಲ್ಲ ವ್ಯಕ್ತಿ ಅಷ್ಟೇ ಮುಖ್ಯ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಅಲ್ಲದೇ ರಾಜಕೀಯವಾಗಿ ಅವರನ್ನು ಗುರುಗಳನ್ನಾಗಿ ಸ್ವೀಕರಿಸುವ ಮೂಲಕ ಅವರ ಬೆಂಬಲಿಗನಾಗಿದ್ದೇನೆ ನೆಚ್ಚಿನ ನಾಯಕನಿಗೆ ಹಾರ ಕೊಡುವುದರಲ್ಲಿ ತಪ್ಪೇನಿದೆ ನನ್ನ ತಾಲ್ಲೂಕಿನ ಹಾಲು ಉತ್ಪಾದಕರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರಿಗೆ ಗೌರವ ಸೂಚಕವಾಗಿ ಹಾರ ನೀಡಿದ್ದೇನೆ ಎಂದರು.

     

     

     

    ನಾನು ಬೇರೆಯವರಂತೆ ಭ್ರಷ್ಟಾಚಾರ ಮಾಡದೆ ನನಗೆ ಕೊಟ್ಟಿರುವ ಅವಕಾಶ ಹಾಗೂ ಅಧಿಕಾರಗಳಲ್ಲಿ ಯಾರ ಬಳಿಯೂ ಲಂಚ ಅಪೇಕ್ಷೆ ಪಡದೆ ಪಕ್ಷಭೇದ ಮಾಡದೆ ಸೇವೆ ಸಲ್ಲಿಸಿದ್ದೇನೆ, ಹಾಗೇನಾದರೂ ನಾನು ತಪ್ಪು ಮಾಡಿದ್ದೇನೆ ಎಂದಾದರೆ ಸಾಕ್ಷಿ ಸಮೇತ ನಿರೂಪಿಸಿ ನೀವು ಹೇಳೋ ಮಾತು ಕೇಳ್ತೀನಿ ಎಂದರು.

     

    ನನ್ನ ಗೆಲುವು ನನ್ನ ಸ್ನೇಹಿತರು ಹಾಗೂ ಕಾರ್ಯಕರ್ತರದ್ದು 

     

    ಹಲವು ಕುತಂತ್ರಗಳ ನಡುವೆ ನಡೆದ ಬಮೂಲ್ ಚುನಾವಣೆಯಲ್ಲಿ ನಾನು ಪಡೆದೆದ್ದು 150ಕ್ಕೂ ಹೆಚ್ಚು ಮತಗಳು ನಮ್ಮ ಬಿಜೆಪಿ ಅಷ್ಟೇ ಅಲ್ಲದೆ ಪ್ರಾಮಾಣಿಕ ಜೆಡಿಎಸ್ ಹಾಗೂ ಪ್ರಾಮಾಣಿಕ ಕಾಂಗ್ರೆಸ್ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತದಾನ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದ್ದಾರೆ. ಈ ಗೆಲುವು ನನ್ನದಲ್ಲ ನನಗಾಗಿ ಹಗಲಿರುಳು ದುಡಿದ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ನನ್ನ ಸ್ನೇಹಿತರು ಹಾಗೂ ಕಾರ್ಯಕರ್ತರದ್ದು ಎಂದರು.

    ಮಾಜಿ ಶಾಸಕರೇ ನಿಮ್ಮ ಅಧಿಕಾರದ ಅವಧಿಯಲ್ಲಿ ನಿಮ್ಮಿಂದ ಒಬ್ಬೇ ಒಬ್ಬ ಕಾರ್ಯಕರ್ತ ಜೀವನ ಕಟ್ಟಿಕೊಂಡಿದ್ದೇನೆ ಎಂದಿದ್ದರೆ ತೋರಿಸಿ ನೋಡಣ, ನಿಮ್ಮ ಬಗ್ಗೆ ಒಬ್ಬ ಅಧಿಕಾರಿ ಒಳ್ಳೆ ಅಭಿಪ್ರಾಯ ವ್ಯಕ್ತ ಪಡಿಸಲ್ಲ ನಾನು ಡೈರಿ ಚುನಾವಣೆಯಲ್ಲಿ ಗೆಲುವು ಸಾದಿಸಿದ ಮೇಲೆ ಬುಕ್ ಅಲ್ಲಿ ಕ್ಲೂ ಕೊಟ್ರಿ ಓದು ಡೈರಿಗೆ 3ಸಾವಿರ ವಸೂಲಿ ಮಾಡು ಅಂತ ಅದನ್ನ ನಾನು ಮಾಡಿಲ್ಲ ಅವರ ವಿರುದ್ಧ ಅ**ಸ್ ಪದ ಬಳಕೆ ಮಾಡಲು ಅವರೇ ಕಾರಣ ಚುನಾವಣೆ ಮೂರು ದಿನಗಳಿದ್ದ ಸಂದರ್ಭದಲ್ಲಿ ನನ್ನ ವಿರುದ್ಧ ಪೊಲೀಸ್ ಮೊಕದ್ದಮೆ ಹೂಡಲು ಕುತಂತ್ರ ನೆಡೆಸಿದ್ದರು ಆ ಕೋಪಕ್ಕೆ ಮಾತು ತಪ್ಪಿ ಹಾಗೆ ಹೇಳಿದ್ದೇನೆ ಅದು ಉದ್ರೇಕದ ಮಾತು ಉದ್ದೇಶಪೂರಕವಾಗಿ ಹೇಳಿದ ಮಾತಲ್ಲ ಎಂದರು.

    ಸುದ್ದಿಗೋಷ್ಠಿಯಲ್ಲಿ ಮುಖಂಡರು, ಎ ಪಿ ಎಂ ಸಿ ಮಾಜಿ ಅಧ್ಯಕ್ಷರು ಆದ ತಿ ರಂಗರಾಜು, ಬಿಜೆಪಿ ತಾಲ್ಲೂಕು ಮಂಡಾಲಧ್ಯಕ್ಷ ನಾಗೇಶ್, ನಾಗರೀಕ ಹಿತ ರಕ್ಷಣಾ ಸಮಿತಿ ಬಿ ರವೀಂದ್ರ ಕುಮಾರ್, ಕಸುವನಹಳ್ಳಿ ಅಬರೀಷ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

  • ವಿಶೇಷ ದಿನವನ್ನು ಅನ್ನದಾನ ಮಾಡುವ ಮೂಲಕ ಆಚರಿಸಿದ ನಮ್ಮ ಕರ್ನಾಟಕ ಜನ ಸೈನ್ಯ ತಂಡ

    ದೊಡ್ಡಬಳ್ಳಾಪುರ : ನಿತ್ಯ ಅನ್ನದಾನ ಸಾಮಾನ್ಯದ ವಿಷಯವಲ್ಲ, ಪ್ರತಿನಿತ್ಯ ನಿರಾಶ್ರಿತ ಕಡುಬಡವರಿಗೆ ನಿರಂತರ ಅನ್ನದಾಸೋಹ ಸಮಿತಿ ಆಹಾರ ವಿತರಣೆ ಮಾಡುತ್ತಿದ್ದು, ಹಸಿವನ್ನು ನೀಗಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದು ನಮ್ಮ ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಎನ್.ವೈ ನಾಗರಾಜು ತಿಳಿಸಿದರು.

     

    ನಿರಂತರ ಅನ್ನ ದಾಸೋಹ ಸಮಿತಿಯ 1901 ನೇ ದಿನದ ಅನ್ನ ದಾಸೋಹಕ್ಕೆ ಸಹಾಯ ಹಸ್ತ ನೀಡಿ ಕುಮಾರಿ ನಿಸರ್ಗ. ಎನ್.ಇವರ ಹುಟ್ಟು ಹಬ್ಬದ ಅಂಗವಾಗಿ ನಿರಾಶ್ರಿತ ಕಡುಬಡವರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಹಾರ ವಿತರಣೆ ಮಾಡಿ ಮಾತನಾಡಿದ ಅವರು ಒಂದು ದಿನದ ದಾಸೋಹ ಕಾರ್ಯಕ್ರಮ ಮಾಡುವುದೇ ಕಷ್ಟ, ಆದರೆ ಕಳೆದ 1900 ದಿನಗಳಿಂದಲೂ ಪ್ರತಿನಿತ್ಯ ಆಹಾರ ವಿತರಣೆ ಮಾಡುತ್ತಿರುವ ಮಲ್ಲೇಶ್ ರವರ ಕಾರ್ಯ ಮೆಚ್ಚುವಂಥದ್ದು , ಈ ಅನ್ನದಾಸೋಹ ಕಾರ್ಯಕ್ರಮವು ನಿತ್ಯ ನಿರಂತರ ಸಾಗಲಿ ಎಂದರು.

     

    ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಈ. ಕೆಂಪರಾಜು ಮಾತನಾಡಿ ವಿಶೇಷ ದಿನಗಳನ್ನು ದುಂದು ವೆಚ್ಚ ಮಾಡದೆ ಅರ್ಥಪೂರ್ಣವಾಗಿ ಹತ್ತಾರು ಜನರಿಗೆ ಆಹಾರ ವಿತರಣೆ ಮಾಡುವ ಮೂಲಕ ನಿರಂತರ ಅನ್ನದಾಸೋಹ ಸಮಿತಿ ಒಟ್ಟಿಗೆ ಆಚರಿಸುವುದು ಉತ್ತಮವಾಗಿದೆ ಅಲ್ಲದೆ ನಮ್ಮ ಸಂಭ್ರಮಾಚರಣೆ ಅನ್ಯರಿಗೆ ನೋವುಂಟು ಮಾಡದೆ ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಮೂಲಕ ಆಚರಿಸುವುದು ಅರ್ಥಪೂರ್ಣವಾಗಿರುತ್ತದೆ , ಸಮಾಜದ ಎಲ್ಲರು ತಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಸಂಭ್ರಮಿಸೋಣ ಎಂದರು.

     

    ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕುಮಾರಿ ನಿಸರ್ಗ. ಎನ್.ಇವರ ಹುಟ್ಟು ಹಬ್ಬದ ಅಂಗವಾಗಿ 1901 ನೇ ದಿನದ ಅನ್ನ ದಾಸೋಹಕ್ಕೆ ಸಹಾಯ ಹಸ್ತ ನೀಡಿರುವ ಯಶೋಧಮ್ಮ ರವರು ಹಾಗೂ ನಮ್ಮ ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷರು ನಾಗರಾಜ ಎನ್ .ವೈ.ರವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ, ವಿಶೇಷ ದಿನಗಳ ಆಚರಣೆ ಹಾಗೂ ಸಂಭ್ರಮಾಚರಣೆ ಕೇವಲ ಮೋಜು ಮಸ್ತಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಆಚರಿಸಲು ಎಲ್ಲರು ಮುಂದಾಗಬೇಕೆಂದು ಮನವಿ ಮಾಡಿದರು

     

     

    ನಮ್ಮ ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷರು ಎನ್.ವೈ.ನಾಗರಾಜ್. ಜಿಲ್ಲಾ ಉಪಾಧ್ಯಕ್ಷರಾದ ಯಶೋಧಮ್ಮ ನಾಗರಾಜ್,ಕೆ.ದೇವರಾಜ್,ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ನರಸಿಂಹ ಮೂರ್ತಿ ಜಿಲ್ಲಾ ಕಾರ್ಯಾಧ್ಯಕ್ಷ .ಕೆ. ಎನ್. ದೇವರಾಜ್. ತಾಲೂಕು ಅಧ್ಯಕ್ಷರುಈ.ಕೆಂಪರಾಜು,ನಗರಾಧ್ಯಕ್ಷರಾದ ಮುನಿರಾಜು, ನಗರ ಮಹಿಳಾ ಅಧ್ಯಕ್ಷರಾದ ಪ್ರಮೀಳಮ್ಮ, ತಾಲ್ಲೂಕು ಅಧ್ಯಕ್ಷರಾದ ಗೀತಾ, ಪ್ರದಾನ ಕಾರ್ಯದರ್ಶಿ ಲತಾ ಸದಸ್ಯರಾದ ಆನಂದಪ್ಪ,ಪ್ರವೀಣ್,ಪ್ರಮೋದ್,ಕುಮಾರಣ್ಣ .ಪ್ರಕಾಶ್ ಬಾಬು .ಮಂಜುನಾಥ್,ಜಿ.ಶಿವಕುಮಾರಯ್ಯ(ಕುಮಾರ್ ಎಲೆಕ್ಟ್ರಿಕಲ್), ಹಾಗೂ ಯುವರಾಜ್ ಕುಮಾರ್ ಕನ್ನಡ ಯುವಸೇನೆ ಯ ಪದಾಧಿಕಾರಿಗಳು ಹಾಜರಿದ್ದರು.