Blog

  • ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಪುಣ್ಯಸ್ಮರಣೆ

    ದೊಡ್ಡಬಳ್ಳಾಪುರ : ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್‌ ಅವರ 44ನೇ ಪುಣ್ಯಸ್ಮರಣೆ ಕಾರ್ಯಕ್ರಮ ಆರ್‌ಎಲ್‌ಜೆಐಟಿ ಆವರಣದಲ್ಲಿ ಶುಕ್ರವಾರ ನಡೆಯಿತು.

     

    ಅರಸು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.ಈ ವೇಳೆ ಮಾತನಾಡಿದ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜೆ.ಆರ್.ರಾಕೇಶ್‌, ಹಿಂದುಳಿದ ವರ್ಗಗಳ ದನಿಯಾಗಿ, ಯುವಜನರ ಆಶೋತ್ತರಗಳನ್ನು ಪ್ರಭಾವಿಸಿದ ಅರಸು ಅವರು ಜಾಲಪ್ಪ ಅವರ ರಾಜಕೀಯ ಬೆಳವಣಿಗೆಗೆ ಪ್ರೇರಕಶಕ್ತಿಯಾಗಿದ್ದರು ಎಂದು ತಿಳಿಸಿದರು.

     

    ಮುಖ್ಯ ಭಾಷಣಕಾರರಾಗಿ ಮಾತನಾಡಿದ ಲಯನ್ಸ್‌ ಕ್ಲಬ್‌ ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್‌, ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಬಲ ಅಸ್ತಿತ್ವವನ್ನು ಪ್ರತಿಪಾದಿಸಿದ ಅರಸು ಅವರು, ಉಳುವವನೇ ಭೂಮಿಯ ಒಡೆಯ ಎಂಬ ಘೋಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್‌.ಜಿ.ಹಾವನೂರ್‌ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಪ್ರಬಲ ಸಮುದಾಯಗಳ ನಡುಗೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆಯನ್ನು ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು. ಅರಸು ಅವರ ಒತ್ತಾಸೆಯಿಂದಲೇ ಆರ್.ಎಲ್.ಜಾಲಪ್ಪ ಅವರು ಮೊದಲ ಬಾರಿಗೆ ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು ಎಂದು ತಿಳಿಸಿದರು.

     

    ಲಯನ್ಸ್‌ ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ ಕಾರ್ತಿಕ್,ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ ನಾಗಸಂದ್ರ, ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ನಾಗರಾಜ್, ಪ್ರೌಢಶಾಲೆ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್, ಎಸ್‌ಡಿಯುಐಎಂ ಆಡಳಿತಾಧಿಕಾರಿ ಐ.ಎಂ.ರಮೇಶ್‌ಕುಮಾರ್, ವ್ಯವಸ್ಥಾಪಕ ಯತಿನ್, ವಿವಿಧ ವಿಭಾಗಗಳು ಹಾಗೂ ಶೈಕ್ಷಣಿಕ ಘಟಕಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ಹಾಜರಿದ್ದರು.

  • ಶಾಲೆಯ ಆವರಣದಲ್ಲಿ ಸಸಿ ನೆಟ್ಟು “ಹಸಿರು ಉಳಿಸುವಂತೆ ಯುವ ಸಮುದಾಯಕ್ಕೆ ಮನವಿ ಮಾಡಿದ ತೂಬಗೆರೆ ಯೂಥ್ ಕಾಂಗ್ರೆಸ್

    ತೂಬಗೆರೆ ಯೂಥ್ ಕಾಂಗ್ರೆಸ್ ವತಿಯಿಂದ ಹೋಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಸಸಿ ನೆಡುವ ಮೂಲಕ ಆಚರಿಸಲಾಯಿತು.

    ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆಯಾಗದ್ದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಿದೆ

     

    ಹೌದು ತೂಬಗೆರೆ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತೂಬಗೆರೆ ಯೂಥ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು.

    ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಯೂಥ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಗಿರೀಶ್ ಮಾತನಾಡಿ ಪ್ರತಿಫಲ ಬಯಸದೆ ನಮಗೆ ಅವಶ್ಯಕವಾದ ಶುದ್ಧ ಗಾಳಿ, ತಂಪಾದ ವಾತಾವರಣ ನೀಡುವ ಪರಿಸರದ ಸಂರಕ್ಷಣೆ ಕಾರ್ಯ ಪ್ರತಿನಿತ್ಯ ನೆಡೆಯಬೇಕಿದೆ, ನಮ್ಮ ತೂಬಗೆರೆ ಯುವ ಸಮುದಾಯವು ಇದು ಸಂಕೇತಿಕವಾಗಿ ಸಸಿ ನೆಡುವ ಮೂಲಕ ಸಮೃದ್ಧ ಪರಿಸರ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂಬುದನ್ನು ತಿಳಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

     

    ತೂಬಗೆರೆ ಹೋಬಳಿ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ ಇಂದಿನ ಯುವ ಪೀಳಿಗೆ ಮೋಜು ಮಸ್ತಿಯ ಹೆಸರಿನಲ್ಲಿ ಪರಿಸರ ಹಾಳು ಮಾಡಲು ಮುಂದಾಗಿದೆ ಯುವ ಸಮುದಾಯದ ಈ ವರ್ತನೆ ಬದಲಾಗಬೇಕು ಈ ನಿಟ್ಟಿನಲ್ಲಿ ನಮ್ಮ ತೂಬಗೆರೆ ಯೂಥ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಸಸಿ ನೆಡುವ ಮೂಲಕ ಯುವ ಸಮುದಾಯದ ಜಾಗೃತಿಗೆ ಮುಂದಾಗಿದ್ದೇವೆ . ಇಂದಿನ ನಮ್ಮ ಶ್ರಮ ಮುಂದೆ ನಮ್ಮ ಪೀಳಿಗೆಗೆ ವರದಾನವಾಗಲಿ ಪ್ರತಿ ಯುವಕ ಯುವತಿಯರು ತಮ್ಮ ಕೈಲಾದಷ್ಟು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರದ ಸಮತೋಲನ ಕಾಪಾಡುವಲ್ಲಿ ಹಾಗೂ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು ಅಲ್ಲದೇ ವಿಶ್ವ ಪರಿಸರ ದಿನಾಚರಣೆಯಂದು ಪರಿಸರವನ್ನು ಉಳಿಸುವ ಹಾಗೂ ಬೆಳೆಸುವ ಶಪಥವನ್ನು ಯುವ ಪೀಳಿಗೆ ಮಾಡಬೇಕಿದೆ ಎಂದರು

    ಈ ಸಂದರ್ಭದಲ್ಲಿ ದೇವನಹಳ್ಳಿ ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಸಾಗರ್, ತೂಬಗೆರೆ ಹೋಬಳಿ ಅಧ್ಯಕ್ಷರಾದ ನರಸಿಂಹಮೂರ್ತಿ, ದೇವನಹಳ್ಳಿ ಬ್ಲಾಕ್ ಅಧ್ಯಕ್ಷರಾದ ಪೃಥ್ವಿ, ವಿಜಯಪುರ ಬ್ಲಾಕ್ ಅಧ್ಯಕ್ಷರಾದ ಭಾನುಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರ್ವಿಜ್ ಹಾಗೂ ಗಿರೀಶ್, ಉಪಾಧ್ಯಕ್ಷರಾದ ವೆಂಕಟೇಶ್, ಇಂಧದ್, ಕಾರ್ಯದರ್ಶಿ ರಾಜೇಶ್, ಹಾಗೂ ಯುವ ನಾಯಕರಾದ ಪುಟ್ಟು, ಚಂದ್ರು, ಮುನಿರಾಜ, ತೇಜಸ್, ಕಿರಣ್, ನಿತಿನ್, ಧನುಷ್,ಆಫ್ಫಾನ್ ಸೇರಿದಂತೆ ಹಲವು ಯುವಕರು ಹಾಜರಿದ್ದರು.

  • ಬಾಶೆಟ್ಟಿಹಳ್ಳಿ : ಜೀವವೈವಿಧ್ಯ ಸಂರಕ್ಷಿಸಲು ಪಟ್ಟಣ ಪಂಚಾಯತಿ ವತಿಯಿಂದ ಕೆರೆ ಅಂಗಳದಲ್ಲಿ ವಿಶೇಷ ಪಾರ್ಕ್ ನಿರ್ಮಾಣ : ನೂತನ ಪಾರ್ಕ್ ಉದ್ಘಾಟಿಸಿ ಶುಭ ಕೋರಿದ ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಬಾಶೆಟ್ಟಿಹಳ್ಳಿ ಕೆರೆ ಅಂಗಳದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಶಾಲಾ ಮಕ್ಕಳೊಂದಿಗೆ ಗಿಡ ನೆಡಲಾಯಿತು.

     

    ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ರೀತಿಯ ವೇಷ ಧರಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನು ನೀಡಿದ ರೀತಿ ವಿಶೇಷವಾಗಿತ್ತು

     

    ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಮಾತನಾಡಿ ಈ ಬಾರಿಯ ವಿಶ್ವ ಪರಿಸರ ದಿನಾಚರಣೆ ವಿಶೇಷವಾಗಿದ್ದು, ಈ ವರ್ಷ ತಾಲೂಕಿನ ಹುಲಿಕುಂಟೆ ಟೋಲ್ 10 ಕಿ.ಮೀಗಳ ಉದ್ದದವರೆಗೂ ಅರಣ್ಯ ಇಲಾಖೆ ವತಿಯಿಂದ ವಿವಿಧ ರೀತಿಯ ಸಸಿಗಳನ್ನು ನೆಡುವ ಕಾರ್ಯಕ್ರಮ ಪೂರ್ಣಗೊಂಡಿರುವುದು ಸಂತಸ ತಂದಿದೆ . ಅಲ್ಲದೆ ಶಾಲಾ ಮಕ್ಕಳು ಪರಿಸರ ಸಂರಕ್ಷಣೆ ಕುರಿತುಂತೆ ವಿಶೇಷವಾಗಿ ಜಾಗೃತಿ ಮೂಡಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

    ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ , ಗಿಡ ಮರ ಸಸಿಗಳನ್ನು ರಕ್ಷಣೆ ಮಾಡುವ ಮೂಲಕ ಪ್ರತಿನಿತ್ಯವೂ ಆಚರಿಸುವಂತಾಗಲಿ ಎಂದರು.

    ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ ಮಾತನಾಡಿ ಸ್ಥಳೀಯ ಶಾಸಕರ ಮಾರ್ಗದರ್ಶನ ಹಾಗೂ ಸ್ಥಳೀಯ ಮುಖಂಡರ ಬೆಂಬಲದೊಂದಿಗೆ ಇಂದು ಕೆರೆಯಂಗಳದಲ್ಲಿ ಕಾರ್ಖಾನೆಗಳ ಸಹಭಾಗಿತ್ವದಲ್ಲಿ ವಿಶೇಷ ಸಸಿಗಳನ್ನು ನಡೆಯುವ ಮೂಲಕ ಜೀವವೈವಿಧ್ಯ ರಕ್ಷಣೆಗೆ ಮುಂದಾಗಿದ್ದೇವೆ, ಈ ಕಾರ್ಯವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ನಡೆಯಲಿ ಎಂಬುದೇ ನಮ್ಮೆಲ್ಲರ ಆಶಯ , ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಸಂರಕ್ಷಣೆ ಬಗ್ಗೆ ವಿಶೇಷವಾಗಿ ಜಾಗೃತಿ ಮೂಡಿಸಿದ ಶಾಲಾ ಮಕ್ಕಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು

     

    ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಕೃಷ್ಣಪ್ಪ, ಪ್ರೇಮ್ ಕುಮಾರ್, ಮುನಿರಾಜಪ್ಪ, ಮುನಿನಾರಾಯಣಸ್ವಾಮಿ, ಮುನಿಚಂದ್ರ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ನರಸಿಂಹಮೂರ್ತಿ, ಉಮಾಶಂಕರ್, ಪಟ್ಟಣ ಪಂಚಾಯಿತಿ ಸಿಬ್ಬಂಧಿವರ್ಗ, ಪೌರಕಾರ್ಮಿಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.

  • ನ್ಯಾಯಕ್ಕಾಗಿ ದಲಿತ ಕುಟುಂಬದ ಪರದಾಟ : ದಲಿತ ಕುಟುಂಬದ ಬೆಂಬಲಕ್ಕೆ ನಿಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ

    ದೊಡ್ಡಬಳ್ಳಾಪುರ : ಕಳೆದ ಸೋಮವಾರ ಆರೂಢಿ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಸಿಬ್ಬಂದಿಗಳು ಬನವತಿ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತೆಯ ಮನೆಯನ್ನು ನೆಲಸಮ ಮಾಡಿದ್ದರು , ಈ ಸ್ವತ್ತು ಗ್ರಾಮ ಪಂಚಾಯಿತಿ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂದು ನಾಮಫಲಕ ಹಾಕಿದ್ದರು , ಕಳೆದ ಮೂರು ದಿನಗಳಿಂದ ಚಳಿ,ಮಳೆ,ಗಾಳಿಯಲ್ಲೇ ಇಡೀ ಕುಟುಂಬ ರಾತ್ರಿ ಕಳೆದಿದ್ದು, ತಾಲೂಕು ದಂಡಾಧಿಕಾರಿಗಳು, ಉಪ ವಿಭಾಗ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತೆ ಹಾಗೂ ಪುಟ್ಟ ಮಕ್ಕಳನ್ನು ಸಾಂತ್ವನಕ್ಕೇನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.

     

     

     

    ಏನಿದು ಘಟನೆ

     

    ತಾಲೂಕಿನ ಬನವತಿ ಗ್ರಾಮದಲ್ಲಿ ಬಲಾಢ್ಯನ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ಥ ಮಹಿಳೆ ಪೊಲೀಸರ ರಕ್ಷಣೆಯ ನಂಬಿಕೆಯ ಮೇಲೆ ಗ್ರಾಮದಲ್ಲಿ ವಾಸವಾಗಿದ್ದರು,ಆ ಕುಟುಂಬ ವಾಸವಾಗಿದ್ದ ಮನೆ ಗ್ರಾಮಠಾಣಾಗೆ ಸೇರಿತ್ತು, ಇದೇ ನೆಪ ಇಟ್ಕೊಂಡು ಆರೂಢಿ ಗ್ರಾಮ ಪಂಚಾಯಿತಿ ಸಂತ್ರಸ್ತೆಯ ಮನೆಯನ್ನು ನೆಲಸಮ ಮಾಡಿದೆ, ಬಡ ಕುಟುಂಬಕ್ಕೆ ಆಸರೆಯಾಗಿದ್ದ ಮನೆ ಕಳೆದುಕೊಂಡ ಆ ಸಂತ್ರಸ್ತೆಯ ಕುಟುಂಬ ಬೀದಿಗೆ ಬಂದಿದೆ.

     

    ಬನವತಿ ಗ್ರಾಮದ ಸಂತ್ರಸ್ಥೆ ಬದುಕು ಕರುಣಾಜನಕವಾಗಿದೆ, ಗ್ರಾಮದ ಬಲಾಢ್ಯನಿಂದ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಆಕೆ, ಸಂತ್ವಾನ ಕೇಂದ್ರದಿಂದ ಬಂದು ಮತ್ತೆ ಎತ್ತಿನಂದೆ ಗಂಡ ಮಕ್ಕಳ ಜೊತೆಯಲ್ಲಿ ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದ್ದರು , ಆ ಕುಟುಂಬಕ್ಕೆ ಆಶ್ರಯ ನೀಡಬೇಕಾದ ಆರೂಢಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು, ಗ್ರಾಮಠಾಣಾಕ್ಕೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ವಾಸವಾಗಿದ್ದಾರೆಂದು ತೆರವು ಕಾರ್ಯಚರಣೆ ನಡೆಸಿದ್ದಾರೆ.

    ಆರೂಢಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಈ ಗುಡಿಸಲನ್ನು ತೆರವುಗೊಳಿಸಿದ್ದಾರೆ, ಈ ಸ್ವತ್ತು ಗ್ರಾಮ ಪಂಚಾಯಿತಿ ಸ್ವತ್ತಾಗಿದ್ದು, ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ…. ಪ್ರಕಟಣೆ ಆರೂಢಿ ಗ್ರಾಮ ಪಂಚಾಯಿತಿ” ಎಂಬ ಬರಹದ ಫಲಕವನ್ನು ನೆಟ್ಟು ಹೋಗಿದ್ದಾರೆ. ಈ ವಿಚಾರ ತಿಳಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ‌ ರಾಜ್ಯ ಸಂಘಟನ ಸಂಚಾಲಕ ನೆಲಮಂಗಲ ಬಸವರಾಜು, ಜಿಲ್ಲಾ ಸಂಚಾಲಕ ರಾಮಮೂರ್ತಿ(ರಾಮು‌ ನೇರಳೇಘಟ್ಟ) ನಿರಾಶ್ರಿತ ಕುಟುಂಬದ ನೆರವಿಗೆ ಧಾವಿಸಿದ್ದಾರೆ.

     

    ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ನೆಲಮಂಗಲ ಬಸವರಾಜು, ಗ್ರಾಮದಲ್ಲಿನ ಪ್ರಬಲ ಜಾತಿ ಯುವಕನ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂಸ್ರಸ್ತೆ ಮತ್ತು ಆಕೆಯ ಕುಟಂಬ ಈಗತ್ತಾನೆ ಚೇತರಿಸಿಕೊಳ್ಳುತ್ತಿದೆ. ಈ ಘಟನೆಯಿಂದ ಆಕೆಯ ಸಂಬಂಧಿಕರು ಯಾರು ಮನೆಯೊಳಗೆ ಸೇರಿಸುತ್ತಿಲ್ಲ. ಮನೆಯಿಂದ ಹೊರಹಾಕಿದ್ದಾರೆ. ಒತ್ತುವರಿ ತೆರವು ಕಾರ್ಯಾಚರಣೆ ಮಾಡುವ ಮುನ್ನ ಸಂತ್ರಸ್ತೆ ಕುಟುಂಬಕ್ಕೆ ನೋಟಿಸ್ ನೀಡಬೇಕು, ಇಲ್ಲಿ ಯಾವುದೇ ನೋಟಿಸ್ ನೀಡಿಲ್ಲ, ಯಾವ ನೋಟಿಸ್ ನೀಡದೇ ಆಕೆ ವಾಸ ಮಾಡುತ್ತಿರುವ ಗುಡಿಸಲು ನೆಲಸಮ‌ ಮಾಡಿದ್ದಾರೆ ಎಂದು ಆರೋಪಿಸಿದರು

    ಇದರ ನೇರ ಹೊಣೆ ಪಿಡಿಒ, ಪಿಡಿಓ ಕ್ರಮದ ವಿರುದ್ಧ ನಾವು ಪೊಲೀಸ್ ದೂರು ನೀಡಲಿದ್ದೇವೆ . ಆ ಕುಟುಂಬಕ್ಕೆ ನಿವೇಶನ ಮತ್ತು ಮನೆಯನ್ನು ನೀಡುವುದರ ಜೊತೆಗೆ ರಕ್ಷಣೆಯನ್ನು ಕಲ್ಪಿಸಬೇಕು ಇಲ್ಲದಿದ್ದಾರೆ ನಮ್ಮ ಸಂಘಟನೆ ವತಿಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

     

    ಸಂತ್ರಸ್ತೆ ಗಂಡ ರವಿಕುಮಾರ್ ಮಾತನಾಡಿ, ನಾವು ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಗ್ರಾಮ ಠಾಣಾಗೆ ಸೇರಿದ ಈ ಜಾಗದಲ್ಲಿ ಕಳೆದ 5 ವರ್ಷಗಳಿಂದ ವಾಸವಾಗಿದ್ದೇವೆ, ನಮ್ಮಂತೆ ಗ್ರಾಮದ ಬಹುತೇಕ ಕುಟುಂಬಗಳು ಇದೇ ಜಾಗದಲ್ಲಿ ಮನೆಗಳನನ್ನು ಕಟ್ಟಿಕೊಂಡಿದ್ದಾರೆ, ಹೊಲ ಜಮೀನು ಮಾಡಿಕೊಂಡಿದ್ದಾರೆ, ಒತ್ತುವರಿ ತೆರವು ಮಾಡುವುದಾದರೆ ಎಲ್ಲರನ್ನು ತೆರವು ಮಾಡಬೇಕು, ಬಡವರಾದ ನಮ್ಮ ಮೇಲೇಕೆ ಗ್ರಾಮ ಪಂಚಾಯಿತಿ ನಿರ್ದಾಕ್ಷಿಣ ಕ್ರಮ, ಏಕಾಏಕಿ ಬಂದು ನಮ್ಮನ್ನು ಗುಡಿಸಲಿನಿಂದ ಹೊರ ದಬ್ಬಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕಿ ಗುಡಿಸಲನ್ನು ನೆಲಸಮ ಮಾಡಿದ್ದಾರೆ. ನಮಗೆ ಆಶ್ರಯ, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

     

     

    ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮತ್ತು ಅಧಿಕಾರಿಗಳ ತಂಡ, ಸಂತ್ರಸ್ತೆ ಮತ್ತು ಆಕೆಯ ಮಕ್ಕಳು ಬೀದಿಯಲ್ಲಿ ಇರುವುದು ಸುರಕ್ಷಿತವಲ್ಲ, ಕಾಡು ಪ್ರಾಣಿಗಳು ಮತ್ತು ಪುಂಡಪೋಕರಿಗಳ ಕಾಟ ಇದೆ, ಸಂತ್ರಸ್ತೆಯ ಮನವೊಲೈಸಿದ ಅಧಿಕಾರಿಗಳ ತಂಡ ಸಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ, ಜೊತೆಯಲ್ಲಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.

     

    ಆರೂಢಿ ಗ್ರಾಮ ಪಂಚಾಯಿತಿ ಪಿಡಿಓ ಮಲ್ಲೇಶ್ ಮಾತನಾಡಿ, ರವಿಕುಮಾರ್ ರವರಿಗೆ ಗ್ರಾಮದಲ್ಲಿ ಖಾಲಿ ನಿವೇಶನ ಇದ್ದು, ಆ ಸ್ಥಳದಲ್ಲೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಲಾಗುವುದು, ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅನುದಾನ ನೀಡುವುದ್ದಾಗಿ ಹೇಳಿದ್ದಾರೆ.

  • ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದ ಪೊಲೀಸ್ ಇಲಾಖೆ : ನವೀಕೃತ ಜಿಲ್ಲಾ ಮಹಿಳಾ ಠಾಣೆ ಉದ್ಘಾಟಿಸಿ ಶುಭ ಕೋರಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆಬಾಬಾ ಅವರು ಸಸಿ ನೆಡುವ ಮೂಲಕ‌ ವಿಶ್ವ ಪರಿಸರ ದಿನದ ಆಚರಣೆ ಮಾಡಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ನೇತೃತ್ವದಲ್ಲಿ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಮಾವು, ಹಲಸು, ಸೇರಿದಂತೆ ಹಣ್ಣು, ಹೂ ನಂತಹ 50 ಗಿಡಗಳನ್ನು ನೆಡುವ ಮೂಲಕ ವಿಶೇಷ ರೀತಿಯಲ್ಲಿ ವಿಶ್ವ ಪರಿಸರ ದಿನದ ಆಚರಣೆ ಮಾಡಲಾಯಿತು.

     

    ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ನವೀಕೃತಗೊಂಡ ಕಟ್ಟಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಆಪ್ತ ಸಲಹೆ – ಕಾನೂನು ಸೇವಾ ಕೇಂದ್ರ ವನ್ನು ಉಪವಿಭಾಗಾಧಿಕಾರಿ ದುರ್ಗಾ ಶ್ರೀ ಹಾಗೂ ಪೊಲೀಸ್ ವರಿಷ್ಠರು ಉದ್ಘಾಟಿಸಿ ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನದ ಆಚರಣೆ ಮಾಡಲಾಗುತ್ತದೆ ಅಂತೆಯೇ ನಮ್ಮ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪ್ರತಿ ಠಾಣೆಗಳಲ್ಲಿ 50 ಗಿಡಗಳನ್ನು ನೆಡುವ ಮೂಲಕ ಹಸಿರು ಪರಿಸರ ಬೆಳೆಸಿ ಉಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ವಿಶ್ವ ಪರಿಸರ ದಿನದ ಆಚರಣೆಗೆ ಮುಂದಾಗಿದ್ದೇವೆ.

    ಈ ಹಸಿರು ಉಳಿಸುವ ನಿಟ್ಟಿನಲ್ಲಿ ಆರಂಭಿಸಿರುವ ಅಭಿಯಾನದಲ್ಲಿ ನಮ್ಮ ಇಲಾಖೆಯ ಪ್ರತಿ ಸಿಬ್ಬಂದಿಯು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಪೊಲೀಸ್ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದರು.

    ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಸಾಕಷ್ಟು ಶ್ರಮವಹಿಸಿ ಉತ್ತಮ ರೀತಿಯಲ್ಲಿ ನವೀಕರಣಗೊಳಿಸಿದ್ದಾರೆ ಕೇವಲ ಠಾಣೆ ಅಷ್ಟೇ ಅಲ್ಲದೆ ಆಪ್ತ ಸಲಹೆ – ಕಾನೂನು ಸೇವಾ ಕೇಂದ್ರವನ್ನು ವಿಶೇಷವಾಗಿ ನಿರ್ಮಾಣ ಮಾಡಿದ್ದು ಇನ್ಸ್ಪೆಕ್ಟರ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೆ ಮುಂದಿನ ದಿನಗಳಲ್ಲಿ ಠಾಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಂಥಾಲಯ, ಮಕ್ಕಳಿಗಾಗಿ ವಿಶೇಷ ಕೊಠಡಿ ನಿರ್ಮಿಸುವ ಉದ್ದೇಶ ಇದೆ ಎಂದರು.

    ತಾಲೂಕಿನಲ್ಲಿ ಇತ್ತೀಚೆಗೆ ನೆಡೆದ ಹಂದಿ ಕಳ್ಳತನ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ರಾಯಚೂರು ಸಿಂಧನೂರು ಭಾಗದ ಗುಂಪೊಂದು ಈ ಹಂದಿ ಕಳ್ಳತನದಲ್ಲಿ ಭಾಗಿಯಾಗಿತ್ತು ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಗುಂಪು ಸುಮಾರು 7 ರಿಂದ 8 ಲಕ್ಷ ರೂಪಾಯಿ ಮೌಲ್ಯದ ಹಂದಿಗಳನ್ನು ಸುಮಾರು 5 ಕಡೆ ಕಳವು ಮಾಡಿರುತ್ತದೆ.ನಮ್ಮ ಪೊಲೀಸ್ ಇಲಾಖೆ ಶೀಘ್ರಗತಿಯಲ್ಲಿ ತನಿಖೆ ಆರಂಭಿಸಿ ಈಗಾಗಲೇ ಕಳ್ಳರ ಎಡೆಮುರಿ ಕಟ್ಟಿದ್ದೇವೆ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

    ಈ ವೇಳೆ ಎಎಸ್ಪಿ ಡಾ.ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ರವಿ.ಪಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಪೌರಾಯುಕ್ತ ಕಾರ್ತೀಕೇಶ್ವರ್,‌ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ, ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ, ಪೊಲೀಸ್ ಅಧಿಕಾರಿಗಳು,‌ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಐಪಿಎಲ್ ಸಂಭ್ರಮಾಚರಣೆ ಈಗ ಶೋಕಾಚರಣೆಯಾಗಿದೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ – ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ : ರಾಜ್ಯದಲ್ಲಿ ಸಂಭ್ರಮಾಚರಣೆ ಮಾಡಬೇಕಿದ್ದ ಸಮಯದಲ್ಲಿ ಶೋಕಾಚರಣೆ ಮಾಡುವಂತಾಗಿದೆ ಈ ಕೃತ್ಯಕ್ಕೆ ಅಧಿಕಾರಿಗಳ ನಿರ್ಲಕ್ಷತೆ ಹಾಗೂ ರಾಜ್ಯ ಸರ್ಕಾರದ ನಿಲುವು ಕಾರಣ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಮೃತಪಟ್ಟ 11 ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಲಿ ಇಲ್ಲವೇ ರಾಜೀನಾಮೆ ನೀಡಲಿ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಆಗ್ರಹಿಸಿದರು

     

     

     

    ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 47 ಕ್ಕೂ ಮಂದಿ ಗಾಯಗೊಂಡಿದ್ದಾರೆ,ಮೃತಪಟ್ಟವರ ಕುಟುಂಬದ ವಾರೀಸುದಾರರಿಗೆ ಕೇವಲ ರೂ.10 ಲಕ್ಷ ಪರಿಹಾರ ಧನ ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದೆ , ಇದು ಆಕಸ್ಮಿಕ ಘಟನೆಯಲ್ಲ ಯಾವುದೇ ರೂಪರೇಷೆಗಳಿಲ್ಲದೆ , ಸೂಕ್ತ ಭದ್ರತೆ ಕಲ್ಪಿಸದೆ ಕಾರ್ಯಕ್ರಮ ಮಾಡಲು ಹೊರಟ ರಾಜ್ಯ ಸರ್ಕಾರದ ನಿರ್ಲಕ್ಷಕ್ಕೆ ನಿದರ್ಶನವಾಗಿದೆ. ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ಮೃತ ಕುಟುಂಬಗಳಿಗೆ 10 ಲಕ್ಷದ ಬದಲಾಗಿ ಒಂದು ಕೋಟಿ ಪರಿಹಾರ ಧನ ನೀಡಲಿ, ಮೃತರ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲಿ ಇಲ್ಲವೇ ನೈತಿಕ ಹೊಣೆ ಹೊತ್ತು ರಾಜ್ಯದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಲಿ ಎಂದರು.

     

    ಪ್ರಚಾರದ ಭರದಲ್ಲಿ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸುವುದನ್ನು ಮರೆತಿದೆ ಲಕ್ಷಾಂತರ ಅಭಿಮಾನಿಗಳನ್ನು ನಿಭಾಯಿಸಲು ಅವಶ್ಯಕವಿರುವ ಪೊಲೀಸ್ ಸಿಬ್ಬಂದಿ ನಿಯೋಜಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

     

     

    ಘಟನೆಯ ತನಿಖೆ ಹೈಕೋರ್ಟ್ ನ್ಯಾಯಾಧೀಶರಿಂದ ಆಗಲಿ

     

     

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಘಟನೆ ಸಂಬಂಧ ತನಿಖೆಯು ವಿಶೇಷ ತಂಡ ರಚನೆ ಮಾಡುವ ಮೂಲಕ ಹೈಕೋರ್ಟ್ ನ್ಯಾಯಾಧೀಶರ ಮುಂದೆ ನಡೆಯಲಿ ಕಾರ್ಯಕ್ರಮದ ಆಯೋಜನೆಗೂ ಮುನ್ನ ರಾಜ್ಯ ಸರ್ಕಾರ ನಡೆಸಿರುವ ಪೂರ್ವಭಾವಿ ಸಭೆ, ಕಾರ್ಯಕ್ರಮದ ರೂಪರೇಷೆಗಳ ಪಟ್ಟಿ , ಕೈಗೊಂಡಿರುವ ಭದ್ರತೆ, ಪೂರ್ವ ಸಿದ್ಧತಾ ತಯಾರಿ , ಪೋಲಿಸ್ ನಿಯೋಜನೆ ಕುರಿತಂತೆ ಎಲ್ಲ ಪತ್ರ ವ್ಯವಹಾರಗಳನ್ನು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಸಲ್ಲಿಸಲಿ ಎಂದು ಅಗ್ರಹಿಸಿದರು.

     

    ರಾಜ್ಯ ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ ಮಾತನಾಡಿ ಈ ಹಿಂದೆ ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾಗಿದ್ದ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಇಂದು ನಮ್ಮ ರಾಜ್ಯದ ಜನರ ಸಾವಿಗೆ ಕೇವಲ 10 ಲಕ್ಷ ಪರಿಹಾರ ಘೋಷಣೆ ಮಾಡಿರುವುದು ವಿಪರ್ಯಾಸವೇ ಸರಿ.. ಪೂರ್ವಯೋಜನೆ ಇಲ್ಲದೆ ಕೇವಲ ತಮ್ಮ ಘನತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಆಯೋಜನೆಗೆ ಮುಂದಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಮೆರವಣಿಗೆಗೆ ಅವಕಾಶ ಕಲ್ಪಿಸಿದ್ದಾರೆ ಈ ದುರಂತ ಸಂಭವಿಸುತ್ತಿರಲಿಲ್ಲ ಸ್ಟೇಡಿಯಂ ಬಳಿ ಲಕ್ಷಾಂತರ ಜನ ಸೇರುತ್ತಿರಲಿಲ್ಲ ಎಂದರು .

     

    ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ,ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸ್ಥಳೀಯ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಜಿಲ್ಲಾ ವಕ್ತರರು ಪುಷ್ಪ ಶಿವಶಂಕರ್, ಬಿಜೆಪಿ ಪಕ್ಷದ ನಗರ ಅಧ್ಯಕ್ಷ ಮುದ್ದಪ್ಪ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

     

  • ಬಕ್ರೀದ್ ಹಬ್ಬದ ಆಚರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಿಗೆ ಕಿವಿಗೋಡಬೇಡಿ – ಜಿಲ್ಲಾಧಿಕಾರಿ ಎ.ಬಿ.ಬಸವರಾಜು

    ದೊಡ್ಡಬಳ್ಳಾಪುರ : ಬಕ್ರೀದ್ ಹಬ್ಬದ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ವತಿಯಿಂದ ವತಿಯಿಂದ ನಗರದ ಎ ಬಿ ಎಂ ಕನ್ವೆನ್ಷನ್ ಹಾಲ್ ನಲ್ಲಿ ಜಿಲ್ಲಾ ಮಟ್ಟದ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಹಾಗೂ ಕಾನೂನು ಉಲ್ಲಂಘನೆ ಮಾಡದ್ದಂತೆ ಹಿಂದೂ ಮುಸ್ಲಿಂ ಮುಖಂಡರಿಗೆ ಬಕ್ರೀದ್ ಹಬ್ಬದ ಆಚರಣೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬೆಂಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಾನ್ಯ ಸಿ ಕೆ ಬಾಬಾ ಸವಿಸ್ತಾರವಾಗಿ ತಿಳಿಸಿದರು.

     

    ಸಾಮೂಹಿಕ ಪ್ರಾರ್ಥನೆ, ಅತಿಥಿ ಸತ್ಕಾರದ ಇಫಿಯಾ‌ರ್ ಕೂಟ ಸೇರಿದಂತೆ ಧಾರ್ಮಿಕ ವಿವಿಧ ಸೇವಾ ಚಟುವಟಿಕೆ ವೇಳೆ ಯಾವುದೇ ಅವಘಡಗಳಿಗೆ ಅವಕಾಶ ನೀಡದೆ ಕಾನೂನು ಪಾಲನೆ ಮಾಡುವ ಮೂಲಕ ಇಸ್ಲಾಂ ಧರ್ಮದ ಪದ್ಧತಿಯಂತೆ ಬಕ್ರೀದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದರು .

     

    ಯಾವುದೇ ಅಹಿತಕರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ನೀಡಬೇಕು. ಯಾವುದೇ ಧರ್ಮದ ಆಚರಣೆ ಮತ್ತೊಂದು ಧರ್ಮದವರಿಗೆ ತೊಡಕು ಉಂಟಾಗದ ರೀತಿಯಲ್ಲಿ ಆಚರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

     

     

    ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋನಕಾರಿ ವಿಡಿಯೋ, ಆಡಿಯೋ ಮತ್ತು ವಾಟ್ಸಾಪ್ ಸಂದೇಶಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಅದರಿಂದ ಪ್ರಚೋದನೆಗೆ ಒಳಗಾಗಬೇಡಿ. ಅದನ್ನು ನೋಡಿಕೊಳ್ಳಲು ಪೊಲೀಸ್‌ ಇಲಾಖೆ ಇದೆ. ನೀವು ಶಾಂತಿ ಸೌಹಾರ್ದತೆಯಿಂದ, ಪರಸ್ಪರ ಪ್ರೀತಿ ವಿಶ್ವಾಸದಿಂದ ದೇವರ ಧ್ಯಾನ ಮಾಡಿ. ಅಶಕ್ತರಿಗೆ ನಿಮ್ಮ ಕೈಲಾದಷ್ಟು ಧಾನ ನೀಡಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿ ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ತರಹದ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

     

    ಈ ವೇಳೆ ವಿವಿಧ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ , ತಾಲೂಕು ದಂಡಾಧಿಕಾರಿ ವಿದ್ಯಾವಿಭಾ ರಾಠೋಡ್‌, ನಗರಸಭೆ ಪೌರಾಯುಕ್ತ ಕಾರ್ತೀಕೇಶ್ವರ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿವರ್ಗ, ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.

     

     

  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂಪಾಯಿಗಳ ಪರಿಹಾರಧನ ಘೋಷಣೆ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟವರ ಕುಟುಂಬಗಳಿಗೆ (ವಾರೀಸುದಾರರಿಗೆ) ರೂ.10 ಲಕ್ಷ ಪರಿಹಾರಧನ ಘೋಷಿಸಿದ ರಾಜ್ಯ ಸರ್ಕಾರ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದ್ದು ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 47 ಮಂದಿ ಗಾಯಗೊಂಡಿದ್ದಾರೆ,ಮೃತಪಟ್ಟವರ ಕುಟುಂಬದವರ ವಾರೀಸುದಾರರಿಗೆ ರೂ.10 ಲಕ್ಷ ಪರಿಹಾರವಾಗಿ ನೀಡಲಿದ್ದೇವೆ ಹಾಗೂ ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

     

    ಇಂದು ಕಾವೇರಿಯಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಿನ್ನೆ ತಡರಾತ್ರಿವರೆಗೂ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ಕ್ರಿಕೆಟ್ ಅಸೋಸಿಯೇಶನ್ ಅವರು ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಂದು ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಿದೆ , ಸದ್ಯ ಕಾಲ್ತುಳಿತಕ್ಕೆ ಒಳಗಾಗಿ ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

     

    ಈ ದುರಂತದ ಬಗ್ಗೆ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದೇವೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. 15ದಿನಗಳ ಒಳಗಾಗಿ ತನಿಖೆಯ ವರದಿಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ.ನಾನು ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂತಹ ದುರಂತ ನಡೆಯಬಾರದಾಗಿತ್ತು. ಸರ್ಕಾರ ಇದಕ್ಕಾಗಿ ಬಹಳ ದುಃಖ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.

     

    ನಮ್ಮ ನಿರೀಕ್ಷೆಗೂ ಮೀರಿ ಜನ, ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದುರು ಸುಮಾರು 1ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧ ಎದುರು ನಡೆದ ಸಮಾರಂಭದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು, ದುರಂತ ನಡೆದಿಲ್ಲ.ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದುರಂತ ಸಂಭವಿಸಿದೆ. ಯಾರೂ ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕ್ರಿಕೆಟ್ ಅಸೋಸಿಯೇಶನ್ ಅಥವಾ ನಾವು ನಿರೀಕ್ಷಿಸಿರಲಿಲ್ಲ. ಕ್ರಿಕೆಟ್ ಸ್ಟೇಡಿಯಂನಲ್ಲಿ 35ಸಾವಿರ ಜನರು ಕುಳಿತುಕೊಳ್ಳುವ ಆಸನ ವ್ಯವಸ್ಥೆಯಿದೆ. ಆದರೆ 2-3 ಲಕ್ಷ ಜನರು ಆಗಮಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಮಾಡಿರಲಿಲ್ಲ. ಸ್ಟೇಡಿಯಂ ಸಾಮರ್ಥ್ಯದಷ್ಟು ಜನರ ನಿರೀಕ್ಷೆಯಿತ್ತು ಎಂದಿದ್ದಾರೆ.

     

    ಗಾಯಗೊಂಡವರಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ನೆರವು ಸರ್ಕಾರ ಒದಗಿಸಲಿದೆ. ಈ ವಿಷಯದಲ್ಲಿ ರಾಜಕೀಯ ನಡೆಸುವುದು ಸರಿಯಲ್ಲ. ಈ ದುರಂತ ನಡೆಯಬಾರದಿತ್ತು. ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ಅತ್ಯಂತ ಹೆಚ್ಚಿನ ದುಃಖ ವ್ಯಕ್ತಪಡಿಸುತ್ತದೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ; ಅವರ ಕುಟುಂಬ ವರ್ಗ, ವಾರೀಸುದಾರರಿಗೆ, ಪೋಷಕರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ತಿಳಿಸಿದರು.

    ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಜೂ.19 ರಂದು ನಂದಿ ಗಿರಿಧಾಮದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ : ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಚರ್ಚೆ: ಸಚಿವ ಮುನಿಯಪ್ಪ

    ಜೂನ್ 19 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ವತಿಯಿಂದ ಐತಿಹಾಸಿಕ ಸಚಿವ ಸಂಪುಟ ಸಭೆ ಏರ್ಪಡಿಸಲಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾತಿನಿಧ್ಯ ಕಲ್ಪಿಸಲು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಹೇಳಿದರು.

     

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಂದಿ ಗಿರಿಧಾಮದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೆ ಸಂಬಂಧಿಸಿದಂತೆ ಚರ್ಚಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಗೆ ಕಾವೇರಿ ನೀರು ಪೂರೈಕೆ,ಮೆಟ್ರೋ, ಎಸ್.ಟಿ.ಪಿ ಮತ್ತು ಯು.ಜಿ.ಡಿ ಕಾಮಗಾರಿಗೆ ಅನುದಾನ, ಜಿಲ್ಲಾ ಆಸ್ಪತ್ರೆಗೆ ಅನುದಾನ, ರಸ್ತೆಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ, ಜಿಲ್ಲಾ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ, ಬ್ಲಡ್ ಬ್ಯಾಂಕ್, ರೇಷ್ಮೆ ಸೀರೆ ಮಾರ್ಕೆಟಿಂಗ್ ಕಾಂಪ್ಲೆಕ್ಸ್ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು.

     

    ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು, ದೇವನಹಳ್ಳಿ ಪುರಸಭೆಯನ್ನು, ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು, ಮೆಡಿಕಲ್, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಕಾಲೇಜು, ಟ್ರಾಮಾ ಕೇರ್ ಸೆಂಟರ್, ಎತ್ತಿನಹೊಳೆ ಯೋಜನೆ ಸೇರಿದಂತೆ ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಕುರಿತು ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಸಚಿವರು ತಿಳಿಸಿದರು.

     

    ಹೊಸಕೋಟೆ ಶಾಸಕರು ಹಾಗೂ ಕಿಯೋನಿಕ್ಸ್ ಅಧ್ಯಕ್ಷರಾದ ಶರತ್ ಬಚ್ಚೆಗೌಡ ಅವರು ಮಾತನಾಡಿ ನಾಲ್ಕು ತಾಲೂಕುಗಳಲ್ಲಿ ರಿಂಗ್ ರೋಡ್ ನಿರ್ಮಿಸಿದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು, ದೇವನಹಳ್ಳಿ ಇಂದ ಮಾಸ್ತಿ ವರೆಗೆ ರಸ್ತೆ ಅಭಿವೃದ್ಧಿ ಪಡಿಸಿದಲ್ಲಿ ಕೈಗಾರಿಕೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಬಹುದು, ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ದಿಗೆ ಅನುದಾನ, ಕೃಷಿ ಕಾಲೇಜು ಸ್ಥಾಪನೆ ಆದರೆ ಜಿಲ್ಲೆಗೆ ಅನುಕೂಲವಾಗಲಿದೆ, ನಗರ ಪ್ರದೇಶಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಗೆ ಸಚಿವರಿಗೆ ಸಲಹೆ ನೀಡಿದರು.

     

    ನೆಲಮಂಗಲ ಶಾಸಕರಾದ ಶ್ರೀನಿವಾಸ್ ಅವರು ಮಾತನಾಡಿ ನೆಲಮಂಗಲದಲ್ಲಿ ಡಿಪ್ಲೊಮಾ ಕಾಲೇಜು ಸ್ಥಾಪಿಸಿದರೆ ಉತ್ತಮ, ಶಿವಗಂಗೆ ಅಭಿವೃದ್ಧಿ ಪ್ರಾಧಿಕಾರ ಆಗಬೇಕಿದೆ, ಭೂಗತ ಕೇಬಲ್ ಅಳವಡಿಕೆ ಅನುದಾನ, ರಸ್ತೆ ಅಭಿವೃದ್ಧಿ, ನೆಲಮಂಗಲದ ತ್ಯಾಮಗೊಂಡ್ಲು, ಹೊಸಕೋಟೆಯ ಸಮೇತನಹಳ್ಳಿ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಲು ಸಚಿವರಿಗೆ ಮನವಿ ಮಾಡಿದರು.

    ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್ ಅನುರಾಧ, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಬೈರಾಪುರ ತಾಂಡದಲ್ಲಿ ನೆಡಿತಿದ್ಯಾ ವಾಮಾಚಾರ : ಬ್ರೆಕ್ ಹಾಕುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

    ದೊಡ್ಡಬಳ್ಳಾಪುರ :ವಿಜ್ಞಾನ ಮುಂದುವರೆದಿರುವ 21ನೇ ಶತಮಾನದಲ್ಲೂ ಜನರಲ್ಲಿ ಮೂಢನಂಬಿಕೆ ಹೋಗಿಲ್ಲ, ಇದಕ್ಕೆ ಪುಷ್ಠಿ ನೀಡುವಂತೆ ಅಮಾವಾಸ್ಯೆ ಹುಣ್ಣಿಮೆಗಳ ಸಂದರ್ಭದಲ್ಲಿ ತಾಲ್ಲೂಕಿನ ಬೈರಾಪುರ ತಂಡದ ಕೆಲ ಕಿಡಿಗೇಡಿಗಳು ಮನೆಗಳ ಮುಂದೆ ಅಕ್ಕಿಕಾಳು,ನಿಂಬೆಹಣ್ಣು, ಕುಂಕುಮ ಇಟ್ಟು ಗ್ರಾಮಸ್ಥರನ್ನು ಭಯಪಡಿಸಲು ಮುಂದಾಗಿದ್ದಾರೆ.

     

    ದೊಡ್ಡಬಳ್ಳಾಪುರ ತಾಲೂಕಿನ ಬೈರಾಪುರ ತಾಂಡದಲ್ಲಿ ಮಾಟ- ಮಂತ್ರದ ಹಾವಳಿ ಜೋರಾಗಿದೆ, ಗ್ರಾಮದ ಮುನಿಶಾಮ ನಾಯ್ಕ್ ಎಂಬವರ ಮನೆ ಮುಂದೆ ವಾಮಾಚಾರ ಮಾಡಲಾಗಿದ್ದು, ಬೆಳಗ್ಗೆದ್ದು ನೋಡಿದಾಗ ಮನೆ ಮುಂದೆ ಅಕ್ಕಿಕಾಳು, ನಿಂಬೆಹಣ್ಣು, ಕುಂಕುಮ ಸೇರಿದಂತೆ ಇತರೆ ವಸ್ತುಗಳು ಪೇಪರ್ ನಲ್ಲಿ ಪತ್ತೆಯಾಗಿವೆ. ಇದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

     

    ಹೌದು ಮಾಟ- ಮಂತ್ರದ ಹಾವಳಿಯಿಂದ ಬೈರಾಪುರ ತಂಡದ ಗ್ರಾಮಸ್ಥರು ಆತಂಕದ ವಾತಾವರಣದಲ್ಲಿ ಜೀವಿಸುವಂತಗಿದೆ

     

     

    ಘಟನೆ ಕುರಿತು ಗ್ರಾಮಸ್ಥರಾದ ಮುನಿಶಾಮ ನಾಯ್ಕರವರ ಪುತ್ರ ಮಂಜುನಾಥ್ ಮಾತನಾಡಿ ಬೈರಾಪುರ ತಾಂಡದಲ್ಲಿ ವಯಸ್ಸಾದ ನಮ್ಮ ತಂದೆ ತಾಯಿ ವಾಸವಾಗಿದ್ದಾರೆ. ಯಾರೋ ದುಷ್ಕರ್ಮಿಗಳು ನಮ್ಮನ್ನು ವೈಯಕ್ತಿವಾಗಿ ಗುರಿಯಾಗಿಸಿಕೊಂಡು ನಮ್ಮ ಮನೆ ಬಳಿ ನಿಂಬೆಹಣ್ಣು, ತಾಯತ, ಅರಿಶಿಣ, ಕುಂಕುಮ, ಹೂ, ಮೂಳೆ, ರಕ್ತವನ್ನು ಚೆಲ್ಲಿ ಮಾಟ ಮಂತ್ರ ಮಾಡಿ ಮಾನಸಿಕವಾಗಿ ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

     

    ಇತ್ತೀಚೆಗೆ ಗ್ರಾಮದಲ್ಲಿ ನಡೆಯುತ್ತಿದ್ದ ಕೆಲವೊಂದು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಿ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಿದ್ದೆ. ಅಂದಿನಿಂದ ಈ ರೀತಿಯಾದಂತಹ ಕೃತ್ಯಗಳು ನಮಗೆ ಕಂಡುಬರುತ್ತಿವೆ. ನಾವು ಯಾರಿಗೂ ಯಾವುದೇ ರೀತಿಯ ಮೋಸ, ಅನ್ಯಾಯ ಮಾಡಿಲ್ಲ. ನಮ್ಮ ಪೋಷಕರಿಗೆ ವಯಸ್ಸಾಗಿದೆ. ಇಬ್ಬರೇ ಊರಲ್ಲಿ ವಾಸವಾಗಿದ್ದಾರೆ. ನಾವು ನಗರದಲ್ಲಿ‌ ವಾಸ ಇದ್ದೇವೆ . ಅಮಾವಾಸ್ಯೆ ಬಂದರೆ ಮನೆಯ ಮುಂದೆ ವಾಮಾಚಾರ ಕೃತ್ಯಗಳನ್ನ ನಡೆಸುತ್ತಿದ್ದಾರೆ, ನಮ್ಮನ್ನು ಬೆದರಿಸುವ ಮೂಲಕ ಗ್ರಾಮದಿಂದ ನಮ್ಮನ್ನು ಹೊರ ಹಾಕುವ ಕೃತ್ಯವನ್ನ ಕಿಡಿಗೇಡಿಗಳು ನಡೆಸುತ್ತಿದ್ದಾರೆ ಎಂದರು.

    ಕೇವಲ ನಮ್ಮ ಕುಟುಂಬಕ್ಕೆ ಮಾತ್ರ ಕಿರುಕುಳ ನೀಡುತ್ತಿಲ್ಲ, ಗ್ರಾಮದ ಬಹುತೇಕ ಕುಟುಂಬಗಳಿಗೆ ವಾಮಾಚಾರವನ್ನ ಕಿಡಿಗೇಡಿಗಳು ಮಾಡುತ್ತಿದ್ದಾರೆ, ಇದರಿಂದ‌ ಗ್ರಾಮಸ್ಥರಲ್ಲಿ ಆತಂಕ‌ ಮನೆ ಮಾಡಿದೆ ವಾಮಾಚಾರದ ಹಾವಳಿ ಪ್ರಾರಂಭವಾದ ನಂತರಗ್ರಾಮದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ , ಕಿಡಿಗೇಡಿಗಳಿಗೆ ಕಡಿವಾಣ ಹಾಕದಿದ್ದಾರೆ, ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ, ಈ ಸಂಬಂಧ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.

     

    ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ತನಿಖೆ ಹಂತದಲ್ಲಿದೆ, ತನಿಖೆ ನಂತರವೇ ಸತ್ಯ ಸತ್ಯತೆ ತಿಳಿಯಲಿದೆ.