Blog

  • ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತ ಸಮಾಜ ತಿಗಳ ಸಮುದಾಯವಾಗಿದೆ – ಶಾಸಕ ಧೀರಜ್ ಮುನಿರಾಜು

    ದೊಡ್ಡಬಳ್ಳಾಪುರ: ಸಮಾಜದಲ್ಲಿ ಸಮುದಾಯಗಳ ಸಂಘಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋದಾಗ ಮಾತ್ರ ಪರಿಪೂರ್ಣತೆ ಸಿಗುತ್ತದೆ. ಸಂಘದ ಜೊತೆ ಸಮುದಾಯದ ಪ್ರತಿಯೊಬ್ಬರು ಒಡನಾಟ ಇಟ್ಟುಕೊಳ್ಳುವ ಮೂಲಕ ಸಂಘವನ್ನು ಬೆಳಸಬೇಕು ಎಂದು ತಿಪಟೂರಿನ ಶನೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ತಿಳಿಸಿದರು.

    ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ತಿಗಳ ಕ್ಷತ್ರೀಯ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು ಸಮಾಜದ ಯುವ ಜನತೆಯ ಶಿಕ್ಷಣ ಮಟ್ಟವನ್ನು ಹೆಚ್ಚಿಸಬೇಕು. ಕೇವಲ ಕೃಷಿಯನ್ನು ಮಾತ್ರ ನಂಬಿ ಜೀವನ ಮಾಡುವುದು ಕಷ್ಟಕರವಾಗಿದೆ. ಎಲ್ಲಾ ರಂಗದಲ್ಲಿಯೂ ಮುಂದುವರೆಯುವ ಅಗತ್ಯತೆ ಸೃಷ್ಟಿಯಾಗಿದೆ ಎಂದರು.

    ಶಾಸಕ ಧೀರಜ್ ಮುನಿರಾಜು ಮಾತನಾಡಿ ತೋಟಗಾರಿಕೆ ಕೃಷಿಯ ಬಗ್ಗೆ ಅಧ್ಯಯನ ಮಾಡಬೇಕಾದರೆ ತಿಗಳ ಸಮುದಾಯದವರನ್ನ ಕೇಳಿ ತಿಳಿದುಕೊಳ್ಳುವಷ್ಟು ನಿಪುಣರಾಗಿದ್ದಾರೆ. ಕೊಟ್ಟ ಮಾತನ್ನ ಉಳಿಸಿಕೊಳ್ಳುವಂತ ಸಮಾಜ ತಿಗಳ ಸಮುದಾಯವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಗಿ ಸಮಗ್ರ ಕೃಷಿ ಮಾಡುವಲ್ಲಿ ನಿಪುಣರಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಜಮೀನು ಮಂಜೂರು ಮಾಡಲು ಹಿಂದುಳಿದ ವರ್ಗದ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು ಎಂದರು.

     

    ಮಾಜಿ ಶಾಸಕ ನೆ.ಲ ನರೇಂದ್ರಬಾಬು ಮಾತನಾಡಿ ಸಮಾಜದ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಶಾಸಕರು 10 ಎಕರೆ ಜಮೀನು ಮೀಸಲಿಡಬೇಕು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಬಸವರಾಜು, ಜೆಡಿಎಸ್ ಮುಖಂಡ ಮುನೇಗೌಡ, ಸಂಘದ ಅಧ್ಯಕ್ಷ ಮುದ್ದಪ್ಪ, ಉಪಾಧ್ಯಕ್ಷ ನಾರಾಯಣಪ್ಪ, ಗೋವಿಂದಗೌಡ, ಲಕ್ಷ್ಮೀನಾರಾಯಣ, ರಾಜಣ್ಣ, ಬಸವರಾಜು, ಡಿಪಿಎ ಮಾಜಿ ಸದಸ್ಯ ಆನಂದಮೂರ್ತಿ, 18ಗಡಿ ಯಜಮಾನರಾದ ಜಗದೀಶ್, ಯಜಮಾನ್ ನೆಲಮಂಗಲ ಉಮೇಶ್ ಸೇರಿದಂತೆ ದೊಡ್ಡಬಳ್ಳಾಪುರ ತಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಜರಿದ್ದರು.

  • ಜೂನ್ 04 ರಿಂದ ಹಸಿಶುಂಠಿ ಖರೀದಿ ನೋಂದಣಿ ಆರಂಭ

    ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಮಾರಾಟ ಇಲಾಖೆ, ಸಹಕಾರ ಇಲಾಖೆ ಸಹಯೋಗದೊಂದಿಗೆ 2024-25ನೇ ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹಸಿಶುಂಠಿಯನ್ನು ರೈತರಿಂದ ಖರೀದಿಸಲು ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಗೆ 2445 ರೂ.ಗಳ ದರ ನಿಗದಪಡಿಸಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ವತಿಯಿಂದ ಖರೀದಿ ಮಾಡಲಾಗುವುದು.

     

    ನೋಂದಣಿ ಮತ್ತು ಖರೀದಿ ಕೇಂದ್ರವನ್ನು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಎಸ್.ಎಫ್.ಸಿ ಬ್ಯಾಂಕ್ ಇಲ್ಲಿ ನಿರ್ಮಿಸಲಾಗಿದ್ದು ಜೂನ್ 04 ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು ಜಿಲ್ಲೆಯ ಎಲ್ಲಾ ರೈತರು ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಹಸಿಶುಂಠಿ ಖರೀದಿ ಅನುಕೂಲವನ್ನು ಸದುಪಯೋಗ ಪಡಿಸಿಕೊಳ್ಳಬೇಕು.

     

    ನೋಂದಣಿ ಪ್ರಕ್ರಿಯೆಗೆ ರೈತರು ಪಹಣಿ/ ಆರ್.ಟಿ.ಸಿ ಆಧಾರ್ ಮತ್ತು ಬ್ಯಾಂಕ್ ಖಾತೆಯ ಪುಸ್ತಕದ ಜೆರಾಕ್ಸ್ ಪ್ರತಿ (ಆಧಾರ್ ಜೋಡಣೆಯಾಗಿರಬೇಕು), ಭಾವಚಿತ್ರ ಹಾಗೂ FRUITS ತಂತ್ರಾಂಶದ ರೈತ ನೋಂದಣಿ ಸಂಖ್ಯೆ(FID)ಯನ್ನು ಕಡ್ಡಾಯವಾಗಿ ಹೊಂದಿರಬೇಕು.

    FRUITS ತಂತ್ರಾಂಶದ ರೈತ ನೋಂದಣಿ ಸಂಖ್ಯೆ(FID)ಯನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕಿನ ಕೃಷಿ ಇಲಾಖೆಯಿಂದ ಪಡೆಯಬಹುದು.

     

    ಬೆಳೆ ಸಮೀಕ್ಷೆಯಲ್ಲಿ ಹಸಿಶುಂಠಿ ಬೆಳೆ ಎಂದು RTC ವಾರು ನಮೂದಿಸಿರುವ ರೈತರು ಮಾತ್ರ ಇದಕ್ಕೆ ಅರ್ಹರು. ಈ ಯೋಜನೆಯಡಿ ಎಕರೆಗೆ 30 ಕ್ವಿಂಟಾಲ್ ಹಾಗೂ ಪ್ರತಿ ರೈತರಿಂದ 60 ಕ್ವಿಂಟಾಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಹಸಿಶುಂಠಿಯನ್ನು ಮಾತ್ರ ಖರೀದಿಸಲಾಗುವುದು. ಆಧಾರ್ ಸಂಖ್ಯೆಗೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಪಾವತಿಸಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಯ ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿಯಮಿತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಖಾ ವ್ಯಸ್ಥಾಪಕರ ಕಚೇರಿ ಹಾಗೂ ಸಹಾಯವಾಣಿ ಸಂಖ್ಯೆ:082 26223358 ಗೆ ಸಂಪರ್ಕಿಸಬಹುದಾಗಿದೆ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ರೈತ ಸಮೃದ್ಧಿ ಯೋಜನೆಯಡಿ ಸಹಾಯಾಧನಕ್ಕೆ ಅರ್ಜಿ ಆಹ್ವಾನ

    ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವ ಉದ್ದೇಶದಿಂದ ವಿವಿಧ ರೈತ ಪರ ಯೋಜನೆಗಳನ್ನು ಒಗ್ಗೂಡಿಸಿ, ಸಮಗ್ರ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೃಷಿ ಇಲಾಖೆ ವತಿಯಿಂದ ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ.

    ಸಮಗ್ರ ಕೃಷಿ ಅಭಿವೃದ್ಧಿ ಯೋಜನೆಯಡಿ ನಾಲ್ಕು ಘಟಕಗಳಿದ್ದು, ಸಮಗ್ರ ಕೃಷಿ ಘಟಕದಡಿಯಲ್ಲಿ ಕೃಷಿ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಾಮರ್ಥ್ಯ ಅಭಿವೃದ್ಧಿ ಘಟಕದಡಿ ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯಕ ಸಂಘಗಳು ಮತ್ತು ರೈತ ಗುಂಪುಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಹಾಗೂ ಸಂಸ್ಥೆಗಳು ಅಥವಾ ಗುಂಪುಗಳು ಸಿದ್ಧಪಡಿಸುವ ಉತ್ಪನ್ನಗಳಿಗೆ ಬ್ರಾಂಡಿಂಗ್ ಹಾಗೂ ಮಾರುಕಟ್ಟೆ ಕಲ್ಪಿಸಿ, ರಪ್ತು ಮಾಡಲು ಅನುಕೂಲವಾಗುವಂತೆ ಸಹಾಯಧನ ಒದಗಿಸಲಾಗುವುದು. ಜೊತೆಗೆ ಮಣ್ಣಿನ ಗುಣಧರ್ಮಗಳ ಆಧಾರದ ಮೇಲೆ ಬೆಳೆಗಳ ಆಯ್ಕೆ ಕುರಿತು, ರೈತರಿಗೆ ಮಾರ್ಗದರ್ಶನವನ್ನು ನೀಡುಲಾಗುವುದು.

    Ad

    ಆಸಕ್ತ ರೈತರು ಮತ್ತು FPO/SHG/ರೈತ ಗುಂಪುಗಳು ಅರ್ಜಿಯನ್ನು ಹಾಕಲು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಬಿ.ಜಿ ಕಲಾವತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ತಂಬಾಕು ತ್ಯಜಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ – ಕೆ.ಮಹಾಲಿಂಗಯ್ಯ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಪಾಲನಜೋಗಹಳ್ಳಿ ಓಂಶಕ್ತಿ ದೇವಾಲಯ ಆವರಣದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಆಚರಿಸಲಾಯಿತು

    ಸಂಪನ್ಮೂಲ ವ್ಯಕ್ತಿಗಳು ಹಾಗೂ ನಿವೃತ್ತ ಉಪನ್ಯಾಸಕರಾದ ಮಹಾಲಿಂಗಯ್ಯ ಇವರು ಮಾತನಾಡಿ ತಂಬಾಕು ಗುಡ್ಕ ಮದ್ಯಪಾನದಿಂದ ಯುವ ಸಮುದಾಯದಲ್ಲಿ ಹಲವರು ಸಮಸ್ಯೆಗಳು ಉಂಟಾಗುತ್ತಿದೆ ಈ ಕುರಿತು ಪರಿಣಾಮಗಳ ಬಗ್ಗೆ ಹಲವಾರು ರೀತಿ ಮಾಹಿತಿ ನೀಡಿದರು ಪ್ರತಿ 13 ರಿಂದ 15 ವರ್ಷ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಶೇಕಡಾ 1 ಗಂಡು ಮಕ್ಕಳಲ್ಲಿ ಶೇಕಡಾವಾರು 2 ರಷ್ಟು ದುಶ್ಚಟಕ್ಕೆ ದಾಸರಗುತ್ತಿದ್ದಾರೆ ಇದರ ನಿಯಂತ್ರಣಕ್ಕಾಗಿ ಮನೆಯ ಪರಿಸರದಲ್ಲಿ ಕುಟುಂಬಸ್ಥರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಈರೀತಿಯ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮೂಡಿಸುತಿದ್ದು, ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಮೂಲಕ ಪೇರಣೆ ಹೊಂದಬೇಕು ಎಂದು ತಿಳಿಸಿದರು

    Ad

     

    ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ದಿನೇಶ್,ಒಕ್ಕೂಟದ ಅಧ್ಯಕ್ಷರಾದ ಭಾರತಿ, ಮೇಲ್ವಿಚಾರಕರಾದ ಗಿರೀಶ್, ಜನಜಾಗೃತಿ ಸಧಸ್ಯರಾದ ರಮೇಶ್, ಸಂಸ್ಥೆಯ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು

  • ಶಿಕ್ಷಣ ಕ್ಷೇತ್ರಕ್ಕೆ ಜಾಲಪ್ಪ ಅವರ ಕೊಡುಗೆ ದೊಡ್ಡದು – ಬೇಳೂರು ಗೋಪಾಲಕೃಷ್ಣ

     

    *ದೊಡ್ಡಬಳ್ಳಾಪುರ*: ರಾಜ್ಯ ರಾಜಕಾರಣದಲ್ಲಿ ಆರ್.ಎಲ್.ಜಾಲಪ್ಪ ಒಂದು ಅನನ್ಯ ಅಧ್ಯಾಯವಾಗಿದ್ದು, ಅವರ ಸಾಮಾಜಿಕ ಕಾಳಜಿ, ರಾಜಕೀಯ ನಿಲುವುಗಳು ಯುವ ರಾಜಕಾರಣಿಗಳಿಗೆ ದಾರಿದೀಪ ಎಂದು ಸಾಗರ ಕ್ಷೇತ್ರದ ಶಾಸಕ, ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

    Ad

     

    ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆ ಕ್ಯಾಂಪಸ್‌ನಲ್ಲಿರುವ ದಿವಂಗತ ಆರ್.ಎಲ್.ಜಾಲಪ್ಪ ಅವರ ಸ್ಮೃತಿವನ ಹಾಗೂ ಮ್ಯೂಸಿಯಂಗೆ ಸೋಮವಾರ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಅವರು, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಜನಪರ ಕಾಳಜಿಯುಳ್ಳ ರಾಜಕಾರಣಿಗಳು ಇಂದಿನ ಅಗತ್ಯವಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಜಾಲಪ್ಪ ಅವರ ಕೊಡುಗೆ ದೊಡ್ಡದು. ಉತ್ತಮ ವಿದ್ಯಾ ಸಂಸ್ಥೆಗಳನ್ನು ನಿರ್ಮಾಣ ಮಾಡುವ ಮೂಲಕ ಗ್ರಾಮೀಣ ಬಡವರು, ಹಿಂದುಳಿದ ವರ್ಗಗಳ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳಿಗೆ ಸದೃಢ ಭವಿಷ್ಯ ನಿರ್ಮಾಣಕ್ಕೆ ಉತ್ತಮ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

    ಶ್ರೀ ದೇವರಾಜ್‌ ಅರಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಪ್ರಾಂಶುಪಾಲ ಡಾ.ವಿಜಯಕಾರ್ತಿಕ್, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಜೆ.ಆರ್.ರಾಕೇಶ್, ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಕ್ಯಾಂಪಸ್‌ನ ಮಾನವ ಸಂಪನ್ಮೂಲ ನಿರ್ದೇಶಕ ಎನ್.ಎಸ್.ಬಾಬುರೆಡ್ಡಿ, ದೊಡ್ಡಬಳ್ಳಾಪುರ ಲಯನ್ಸ್‌ ಕ್ಲಬ್ ಮಾಜಿ ಅಧ್ಯಕ್ಷ ಎಳ್ಳುಪುರ ರಾಮಾಂಜಿನಪ್ಪ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

  • ಕೆಂಪೇಗೌಡ ತೀಮ್ ಪಾರ್ಕ್ ಕಾಮಗಾರಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿರುವ 108 ಅಡಿ ಎತ್ತರದ ನಾಡ ಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಆವರಣದಲ್ಲಿ ನಡೆಯುತ್ತಿರುವ ಕೆಂಪೇಗೌಡ ತೀಮ್ ಪಾರ್ಕ್ ಕಾಮಗಾರಿಯನ್ನು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಪರಿಶೀಲನೆ ನಡೆಸಿದರು.

    Ad

    ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಸುತ್ತಲೂ 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣಗೊಳ್ಳುತ್ತಿದ್ದು, ಅಧಿಕಾರಿಗಳಿಂದ ಥೀಮ್ ಪಾರ್ಕ್ ನಿರ್ಮಾಣದ ಇಂಚಿಂಚು ಮಾಹಿತಿ ಪಡೆದರು.

     

    ಕಾಮಗಾರಿಯು ಗುಣಮಟ್ಟ ಕಾಪಾಡಿಕೊಂಡು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಕಂದಾಯ ಸಚಿವರು ಮುಂದಿನ ನಾಲ್ಕು ತಿಂಗಳಲ್ಲಿ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳ್ಳುವ ಭರವಸೆ ಇದೆ ಎಂದರು.

    ಕಾಮಗಾರಿ ವೀಕ್ಷಣೆ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಉಷಾರಾಣಿ, ಪಂಚಾಯತ್ ರಾಜ್ ಇಲಾಖೆಯ ಜಿಲ್ಲಾ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಧರ್ಮಸ್ಥಳ ಸಂಘದ ವತಿಯಿಂದ ಕ್ರಿಟಿಕಲ್ ಇಲ್ ನೆಸ್ ಫಂಡ್ ಅಡಿಯಲ್ಲಿ 25,000 ರೂಪಾಯಿಗಳ ಡಿ ಡಿ ವಿತರಣೆ

    ದೊಡ್ಡಬಳ್ಳಾಪುರ ತಾಲೂಕಿನ ಕಂಚಿನಾಳ ಗ್ರಾಮದ ಗೌರಮ್ಮ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದು ಇವರಿಗೆ ಧರ್ಮಸ್ಥಳ ವತಿಯಿಂದ ಚಿಕಿತ್ಸೆಗೆ ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮದಡಿಯಲ್ಲಿ 25,000 ಮೊತ್ತದ ಸಹಾಯಧನ ನೀಡಲಾಯಿತು

     

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಮಂಜೂರಾಗಿದ್ದ ಹಣದ ಡಿ ಡಿ ಯನ್ನು ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ರವರು ವಿತರಣೆ ಮಾಡಿದರು

    ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ದಿನೇಶ್ , ಗ್ರಾಮ ಪಂಚಾಯತಿ ಸದಸ್ಯರಾದ ಮಧು ,ವಲಯದ ಮೇಲ್ವಿಚಾರಕರಾದ ರಘು ಸೇವಾ ಪ್ರತಿನಿಧಿ ಸರ್ವೇಶ್ ಸಂಘದ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ : ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

    ಕನ್ನಡ ಸುಗಮಸಂಗೀತಕ್ಕೆ ಅತ್ಯುತ್ತಮ ಭಾವಗೀತೆಗಳನ್ನು ನೀಡಿದವರು    ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಆಗಿದ್ದಾರೆ   ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ  ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಕನ್ನಡ ಸಾಹಿತಿಗಳ ಯಾವ ಪಂಥಕ್ಕೂ ಸೇರದ ಡಾ.ಎಚ್.ಎಸ್.ವೆಂಕಟೇಶಮೂರ್ತಿ  ತಮ್ಮ ಸೃಜನಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದವರು. ಕಾವ್ಯ, ನಾಟಕ, ವಿಮರ್ಶೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ  ಮುಂತಾದ ಹಲವು ಪ್ರಕಾರಗಳಲ್ಲಿ  ಸಾಹಿತ್ಯ ರಚನೆ ಮಾಡುವ‌‌ ಮೂಲಕ‌ ಕನ್ನಡ ಸಾಹಿತ್ಯಕ್ಕೆ ಉತ್ತಮ‌ ಕೊಡುಗೆ  ನೀಡಿದರು ಎಂದರು.

    Ad

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ನಂ.ಮಹಾದೇವ ಮಾತನಾಡಿ, ಡಾ.ಎಚ್.ಎಸ್. ವೆಂಕಟೇಶ ಮೂರ್ತಿಯವರ ಬುದ್ಧಚರಣ ಮಹಾಕಾವ್ಯ ಗಮಕವಾಚನ ಮತ್ತು ಗೀತಗಾಯನದ ಮೂಲಕ‌ ಸಹೃದಯರಿಗೆ ಸುಲಭವಾಗಿ ಅರ್ಥವಾಗುತ್ತದೆ. ಮಹಾಕಾವ್ಯ ಪರಂಪರೆಯನ್ನು ಮುಂದುವರಿಸಿದ ಕವಿ ಎಲ್ಲಾ ವಯೋಮಾನದ ಓದುಗರಿಗೂ ಪ್ರೀತಿ ಪಾತ್ರರಾಗಿದ್ದರು ಎಂದರು.

     

     

    ಜವಾಹರ್ ನವೋದಯ ವಿದ್ಯಾಲಯದ  ನಿವೃತ್ತ  ಅಧ್ಯಾಪಕ ವಿ.ಎಸ್.ಹೆಗಡೆ ಮಾತನಾಡಿ, ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸುಗಮಸಂಗೀತ, ಕಿರುತೆರೆ, ಸಿನಿಮಾ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ. ಐದು ಬೆರಳು ಕೂಡಿ ಒಂದು ಮುಷ್ಟಿಯು ಹಲವು ಮಂದಿ ಸೇರಿ ಈ ಸಮಷ್ಟಿಯು ಬೇರೆ ಬೇರೆ ಒಕ್ಕಲು ಒಂದೆ ತಾಯ ಮಕ್ಕಳು” ಎಂದು ಬರೆದ ಈ ಹಾಡು ರಾಷ್ಟ್ರೀಯ ಭಾವನೆಗಳನ್ನು ತೋರಿಸುತ್ತದೆ ಎಂದರು.

     

     

    ಕನ್ನಡ ಸಾಹಿತ್ಯ ಪರಿಷತ್ತು  ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ,  ಗಾಯಕ ಸಿ.ಅಶ್ವಥ್ ಮತ್ತು ಕವಿ ಎಚ್.ಎಸ್.ವೆಂಕಟೇಶಮೂರ್ತಿ ಜೋಡಿ ಕನ್ನಡ ಭಾವಗೀತೆ ಮೂಲಕ   ಜನಪ್ರಿಯರಾದವರು. ಚಲನಚಿತ್ರ ಮತ್ತು ರಂಗಭೂಮಿಯೊಡನೆ ನಿರಂತರ ಸಂಪರ್ಕ ಹೊಂದಿದ್ದ ಅವರು   ಚಲನಚಿತ್ರಗಳಿಗೆ ರಚಿಸಿದ ಹಾಡುಗಳು,  ಸಂಭಾಷಣೆ. ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ. ಭಾವಗೀತೆಗಳ ಧ್ವನಿ ಸುರಳಿಗಳಿಗೆ  ರಚಿಸಿದ ಹಾಡುಗಳು ಕನ್ನಡಿಗರ ಮನಗೆದ್ದಿವೆ ಎಂದರು.

     

    ಕಾರ್ಯಕ್ರಮದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ,  ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಸೂರ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ  ಎಂ.ಸಿ.ಮಂಜುನಾಥ್,  ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ,   ಜ್ಞಾನಗಂಗಾ ಪ್ರೌಢಶಾಲೆ ಶಿಕ್ಷಕ ಕೋದಂಡರಾಮ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್,  ಕೋಶಾಧ್ಯಕ್ಷ  ಸಾ.ಲ.ಕಮಲನಾಥ್,   ಸಾಸಲು ಹೋಬಳಿ ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್,   ಪ್ರತಿನಿಧಿ ನಾಗರತ್ನಮ್ಮ, ಷಫೀರ್,  ಕಲಾವಿದ   ಬಾಶೆಟ್ಟಿಹಳ್ಳಿ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು.

  • ಕನ್ನಡಿಗರನ್ನು ಬೇಷರತ್ತಾಗಿ ಕ್ಷಮೆ ಕೇಳಿ : ರಾಜ್ಯ ವಿ – ಕರವೇ ಒತ್ತಾಯ

    ದೊಡ್ಡಬಳ್ಳಾಪುರ : ಕನ್ನಡ ನಾಡಿನ ಕುರಿತು ಕನ್ನಡಿಗರ ಕುರಿತು ನೆಲ, ಜಲ ಭಾಷೆ, ಗಡಿಯ ವಿಷಯದಲ್ಲಿ ಖ್ಯಾತೆ ತೆಗಿಯುತ್ತಿರುವ ತಮಿಳು ನಾಡಿನ ಕೆಲ ಕೀಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ವಿ ಕರವೇ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಒತ್ತಾಯಿಸಿದರು.

     

    ನಗರದ ತಾಲೂಕು ಕಚೇರಿ ಮುಂಭಾಗ ರಾಜ್ಯ ವಿ-ಕರವೇ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು ತಮಿಳು ಭಾಷೆಯಿಂದ ಕನ್ನಡ ಉದಯವಾಗಿದ್ದು ಎಂಬಾ ಅವಹೇಳನಕಾರಿ ಹೇಳಿಕೆಯನ್ನು ನಟ ಕಮಲ್ ಹಾಸನ್ ನೀಡಿದ್ದಾರೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ(ರಿ) ಈ ಹೇಳಿಕೆಯನ್ನು ಖಂಡಿಸುತ್ತದೆ. ಈ ಕೂಡಲೇ ನಟ ಕಮಲಹಾಸನ್ ಬೇಷರತ್ತಾಗಿ ಕ್ಷಮೆಯಾಚಿಸಬೇಕು,ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆ ನೀಡಿದ್ದೆ ಆದರೆ ಕರ್ನಾಟಕ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.

    Ad

    ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಹೆಚ್. ಮಂಜುನಾಥ್ ಮಾತನಾಡಿ, ವರ ನಟ ಡಾ. ರಾಜಕುಮಾರ್ ಅವರ ಪುತ್ರ ಡಾ.ಶಿವರಾಜ್ ಕುಮಾರ್ ರವರ ಮುಂದೆ ಕಮಲ್ ಹಾಸನ್ ಈ ರೀತಿ ಕನ್ನಡದ ಕುರಿತು ಹೇಳಿಕೆ ನೀಡಿರುವುದು ಖಂಡನೀಯ ಎಂದರು.

    ಪ್ರತಿಭಟನೆಯಲ್ಲಿ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಹರಿಕುಮಾ‌ರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರವೀಣ್, ಬಿ.ನಯಾಜ್ ಖಾನ್, ಗಂಗರಾಜು, ಕುಮುದ, ಶಶಿಕಲಾ, ರೇಷ್ಮಾ, ರಾಗಿಣಿ, ಶಾರದಮ್ಮ, ವಿನಯ್, ಕಿರಣ್, ಲಕ್ಷಣ್, ಮಧು, ಚಂದ್ರಶೇಖರಯ್ಯ, ಪಿ‌ರ್ ಪಾಷ ಹಾಜರಿದ್ದರು.

  • ತೂಬಗೆರೆ : ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂಪಾಯಿಗಳ ಅನುದಾನ

    ದೊಡ್ಡಬಳ್ಳಾಪುರ : ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲುಗುದಿಗೆ ಗ್ರಾಮದ ಶ್ರೀ ಆಂಜಿನೇಯ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಲಕ್ಷ ರೂಗಳ ಡಿ ಡಿ ಯನ್ನು ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ವಿತರಣೆ ಮಾಡಿದರು.

    ಅವರು ಮಾತನಾಡಿ ಗ್ರಾಮದ ದೇವಾಲಯದ ಅಭಿವೃದ್ದಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಹಲವಾರು ಯೋಜನೆಗಳ ಮೂಲಕ ಅಂಗನವಾಡಿ ಕಟ್ಟಡ ನಿರ್ಮಾಣ,ಹಾಲಿನ ಡೇರಿ ಸ್ಥಾಪನೆ, ಟೈಲರಿಂಗ್ ತರಬೇತಿ,ವಾತ್ಸಲ್ಯ ಯೋಜನೆಯಡಿ ಗೃಹ ನಿರ್ಮಾಣ, ಕೃಷಿಗಾಗಿ ಅನುದಾನ, ಕೆರೆಗಳ ಪುನಶ್ಚೇತನ,ಶುದ್ದ ನೀರಿನ ಘಟಕ ಸ್ಥಾಪನೆ,ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ವ್ಯವಸ್ಥೆ ಹೀಗೆ ಹತ್ತಾರು ವಿಶೇಷ ಕಾರ್ಯಗಳನ್ನು ಸಮಾಜದ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ ಅಂತೆಯೇ ಇಂದು ನೆಲ್ಲುಗುದಿಗೆ ಗ್ರಾಮದ ಶ್ರೀ ಆಂಜಿನೇಯ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂಗಳ ಚೆಕ್ ವಿತರಣೆ ಮಾಡಿದ್ದೇವೆ ಎಂದರು

    Ad

     

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿ ದಿನೇಶ್ ಪ್ರಾಸ್ತಾವಿಕ ಮಾಹಿತಿ ನೀಡಿದರು

     

    ಈ ಕಾರ್ಯಕ್ರಮದಲ್ಲಿ. ಶ್ರೀ ಆಂಜಿನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಗೌರವಾಧ್ಯಕ್ಷ ಪಿಳ್ಳಪ್ಪ ಕಾರ್ಯನಿರತ ಪತ್ರ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗು ಶ್ರೀ ಆಂಜಿನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ನೆಲ್ಲುಗುದಿಗೆ ಚಂದ್ರು

    ದೇವಾಲಯ ಸಮಿತಿ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮುನಿರಾಜು, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಮಿತಿ ಖಜಾಂಚಿ ಮಂಜುನಾಥ್,ನಿರ್ದೇಶಕರಾದ ಆನಂದ್ ಆರ್ಚಕ ರಾಮಾನುಜ ಚಾರ್ಯ ಗೆದ್ದಲಹಳ್ಳಿ ಒಕ್ಕೂಟದ ಅಧ್ಯಕ್ಷರಾದ ಧನಂಜಯ್ ,ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ಒಕ್ಕೂಟದ ಪದಾಧಿಕಾರಿಗಳು ಊರಿನ ಗ್ರಾಮಸ್ಥರು ಟಿ ಎಂ ಸಿದ್ದಪ್ಪ, ಕೆ ಸಿದ್ದಪ್ಪ, ಎಂ ಸಿದ್ದಪ್ಪ, ಬೀರಪ್ಪ, ಗಂಗಾಧರ ಹಾಗು ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳಾದ ರಿಜ್ವಾನ್,ಭಾರತಿ. ವಿ ಎಲ್ ಐ ಇ ಮಂಜುಳ, ಶೃತಿ ಸೇರಿದಂತೆ ಹಲವರು ಹಾಜರಿದ್ದರು.