Blog

  • ಜಾಹೀರಾತುಗಳಲ್ಲಿ ಕನ್ನಡ ಭಾಷೆ ಬಳಸದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ – ರಾಜಘಟ್ಟ ರವಿ

    ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯೊಳಗಿನ ಹೋರ್ಡಿಂಗ್ಸ್ ಗಳಲ್ಲಿ ಕನ್ನಡವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಈ ಕುರಿತು ದೊಡ್ಡಬಳ್ಳಾಪುರ ವತಿಯಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು

     

    ಈ ಕುರಿತು ಮಾತನಾಡಿದ ಅವರು ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಹೋರ್ಡಿಂಗಗಳಿದ್ದು ಅದರಲ್ಲಿ ಪ್ರದರ್ಶಿಸುವ ಜಾಹೀರಾತುಗಳಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಫಲಕದ ತುಂಬಾ ಆಂಗ್ಲ ಭಾಷೆ ರಾರಾಜಿಸುತ್ತಿರುತ್ತದೆ ಹಾಗೂ ಕೆಲವು ಫಲಕಗಳಲ್ಲಿ ಅಶ್ಲೀಲ ಚಿತ್ರಗಳು ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ತೀವ್ರ ಮುಜುಗರ ತರಿಸುವಂತಿರುತ್ತವೆ, ಅಲ್ಲಿ ಮಹಿಳೆಯರು ಓಡಾಡಲು ಕೂಡ ಮುಜುಗರವಾಗುತ್ತದೆ ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

     

    ನಗರಸಭೆ ಈ ಕೂಡಲೇ ಸಂಬಂಧಪಟ್ಟ ಫಲಕಗಳ ಮಾಲೀಕರಿಗೆ ತುರ್ತು ಸಭೆ ನಡೆಸಿ ಅವರು ಕಡ್ಡಾಯವಾಗಿ ಕನ್ನಡ ಭಾಷೆ ಹಾಗೂ ಅಶ್ಲೀಲವೆನಿಸುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನಿಯಮ ಪಾಲಿಸಲು ಆದೇಶಿಸಬೇಕು ಹಾಗೂ ಈಗಾಗಲೇ ಕನ್ನಡ ಬಾಷೆ ನಿರ್ಲಕ್ಷಿಸಿರುವ ಜಾಹೀರಾತುಗಳನ್ನು ಕೂಡಲೇ ತೆರವುಗೊಳಿಸಬೇಕು ಇಲ್ಲವಾದಲ್ಲಿ ಕರವೇ ನೇರ ಕಾರ್ಯಾಚರಣೆಯ ಮೂಲಕ ತೆರವುಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

     

     

     

     

  • ಮೇ 25 ರಂದು ತಾಲ್ಲೂಕಿನಲ್ಲಿ ನೆಡೆಯಲಿದೆ ಇಷ್ಟಲಿಂಗ ಮಹಾಪೂಜೆ : ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಭಾಗಿ

    ದೊಡ್ಡಬಳ್ಳಾಪುರ : ಇದೆ ಮೇ ತಿಂಗಳ 25ರಂದು ಇಷ್ಟಲಿಂಗ ಮಹಾಪೂಜೆ ಹಾಗೂ ಭಾವೈಕ್ಯ ಧರ್ಮಸಮಾರಂಭವನ್ನು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್ ನಾಗಸಂದ್ರ ತಿಳಿಸಿದರು.

     

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ (ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ) ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೇ 25ರಂದು ಬೆಳಗ್ಗೆ 7-00 ಗಂಟೆಗೆ ಗುರುವರ್ಯರಿಂದ ಶಿವಧೀಕ್ಷೆ ನೀಡುವ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಬೆಳಗ್ಗೆ 8 ಗಂಟೆಗೆ ಪೂರ್ಣ ಕುಂಭ ಸಹಿತ ಮಂಗಳವಾದ್ಯಗಳೊಂದಿಗೆ ನಗರದ ಸೋಮೇಶ್ವರ ದೇವಾಲಯದಿಂದ ಪಾದಯಾತ್ರೆ ಮೂಲಕ ರಂಭಾಪುರಿ ಜಗದ್ಗುರುಗಳು ಬಸವ ಭವನಕ್ಕೆ ಆಗಮಿಸಲಿದ್ದಾರೆ, ಬೆಳಿಗ್ಗೆ 9 ಗಂಟೆಗೆ ಇಷ್ಟಲಿಂಗ ಮಹಾಪೂಜೆ ಪ್ರಾರಂಭವಾಗಲಿದೆ ಎಂದರು.

     

    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಸುಜಯ್ ಕುಮಾರ್ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಸಾಮೂಹಿಕ ಶಿವಧೀಕ್ಷೆ, ಇಷ್ಟಲಿಂಗ ಮಹಾಪೂಜೆ ಜೊತೆಗೆ ಭಾವೈಕ್ಯ ಧರ್ಮ ಸಮಾರಂಭ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಬಾಳೆ ಹೊನ್ನೂರು ಮಠದ ಶ್ರೀ ಷ.ಬ್ರ.ರೇಣುಕ ಶಿವಾಚಾರ್ಯ ಸ್ವಾಮಿಗಳು, ಷ. ಬ್ರ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಬಿ. ಈಶ್ವರಖಂಡ್ರೆ, ಭಾರತೀಯ ಜನತಾ ಪಾರ್ಟಿ,ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ,ಸಂಸದರಾದ ಡಾ. ಕೆ. ಸುಧಾಕರ್‌, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಆದ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

     

     

    ವಿಶೇಷ ಸೂಚನೆ : ತಾಲ್ಲೂಕಿನ ಜನತೆ ಗುರುವರ್ಯರಿಂದ ಶಿವಧೀಕ್ಷೆ ಪಡೆಯಲು ಇಚ್ಛೆಸುವವರು ಮೋಹನ್ ಕುಮಾರ್ : 9242042361 ಹಾಗೂ ಸುಜಯ್ ಕುಮಾರ್ : 9686456222 ರವರನ್ನು ಸಂಪರ್ಕಿಸಲು ಕೋರಿದೆ

     

    ಸುದ್ದಿಗೊಷ್ಟಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು ಗ್ರಾಮಾಂತರ ಯುವ ಘಟಕ ಜಿಲ್ಲಾಧ್ಯಕ್ಷ ಲೋಕೇಶ್ ನಾಗಸಂದ್ರ, ಜಿಲ್ಲಾ ನಿರ್ದೇಶಕರಾದ ಪ್ರಭಾಕರ್,ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ ಸುಜಯ್ ಕುಮಾರ್ , ಖಜಾಂಚಿ ವೀರಣ್ಣ,ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

     

     

     

     

  • ವಯಸ್ಕರ ಬಿಸಿಜಿ ಲಸಿಕಾ ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಿ TB ಸೋಲಿಸಿ – ದೊಡ್ಡಬಳ್ಳಾಪುರ ಕ್ಷಯರೋಗ ನಿರ್ಮೂಲನ ಘಟಕ

    ದೊಡ್ಡಬಳ್ಳಾಪುರ : ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಯರೋಗ(TB) ತಡೆಗಟ್ಟುವ ನಿಟ್ಟಿನಲ್ಲಿ ವಯಸ್ಕರಿಗೆ ಬಿಸಿಜಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದು, ವಯಸ್ಕರು ಈ ಲಸಿಕೆಯನ್ನು ಪಡೆಯುವ ಮೂಲಕ ಕ್ಷಯರೋಗದಿಂದ ಉಂಟಾಗುವ ತೊಂದರೆ / ಅಡ್ಡಪರಿಣಾಮಗಳಿಂದ ಪಾರಾಗಬಹುದಾಗಿದೆ ಎಂದು ದೊಡ್ಡಬಳ್ಳಾಪುರ ಕ್ಷಯರೋಗ ನಿರ್ಮೂಲನ ಘಟಕ ತಿಳಿಸಿದೆ.

     

    ಈಗಾಗಲೇ ರಾಜ್ಯದ ಬಾಗಲಕೋಟೆ, ಬೀದರ್, ದಕ್ಷಿಣ ಕನ್ನಡ, ಕಲಬುರಗಿ, ಉಡುಪಿ, ವಿಜಯಪುರ, ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು,ç ದಾವಣಗೆರೆ, ಧಾರವಾಡ, ಕೋಲಾರ ಮತ್ತು ಉತ್ತರಕನ್ನಡ 16 ಜಿಲ್ಲೆಗಳಲ್ಲಿ ವಯಸ್ಕರ ಬಿಸಿಜಿ ಲಸಿಕಾ ಕಾರ್ಯಕ್ರಮ ಪ್ರಾರಂಭವಾಗಿದ್ದು 1,63,084 ಫಲಾನುಭವಿಗಳಿಗೆ ಯಶಸ್ವಿ ಲಸಿಕಾಕರಣ ಮಾಡಲಾಗಿದೆ.

    ಈ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಮಾತನಾಡಿ ವಯಸ್ಕರ ಬಿಸಿಜಿ ಲಸಿಕೆಯನ್ನು ಕಳೆದ 05 ವರ್ಷಗಳಲ್ಲಿ ಕ್ಷಯರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆದವರು,ಕ್ಷಯರೋಗಿಗಳ ಜೊತೆ ಸಂಪರ್ಕದಲ್ಲಿರುವವರು(ಕುಟುಂಬಸ್ಥರು ),ಅತ್ಯಂತ ಕಡಿಮೆ ದೇಹತೂಕ ಹೊಂದಿರುವವರು, ಮಧುಮೇಹಿಗಳು,ಧೂಮಪಾನಿಗಳು, 60 ವರ್ಷಕ್ಕಿಂತ ಮೇಲ್ಪಟ್ಟವರು ಪಡೆಯಬಹುದಾಗಿದೆ ಎಂದು ತಿಳಿಸಿದರು.

     

    ಬಿಸಿಜಿ ಲಸಿಕೆಯು ಸಂಪೂರ್ಣ ಉಚಿತ ಹಾಗೂ ಸುರಕ್ಷಿತವಾಗಿದ್ದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಅಥವಾ ನಿಮ್ಮ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪಡೆಯಬಹುದಾಗಿದೆ.

     

  • ಸರ್ಕಾರಿ ಜಾಗ ಉಳಿಸುವಂತೆ ಅಭಿಯಾನ ಪ್ರಾರಂಭಿಸಿದ ಕೆ ಆರ್ ಎಸ್ : ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್

    ದೊಡ್ಡಬಳ್ಳಾಪುರ : ನಮ್ಮ ತಾಲ್ಲೂಕಿನಲ್ಲಿ ಹಲವಾರು ಸರ್ಕಾರಿ ಸ್ಥಳಗಳನ್ನು ಪ್ರಭಾವಿಗಳು ಹುನ್ನಾರ ನೆಡೆಸಿ ಕಬಳಿಕೆ ಮಾಡಿದ್ದಾರೆ ಸದರಿ ಜಾಗಗಳನ್ನು ಉಳಿಸುವಂತೆ ನಮ್ಮ ಕೆ ಆರ್ ಎಸ್ ಪಕ್ಷವು ಅಧಿಕಾರಿಗಳನ್ನು ಭೇಟಿಮಾಡಿ ಒತ್ತಾಯಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.

     

    ನಗರದ ತಾಲ್ಲೂಕು ಕಚೇರಿ ಮುಂಭಾಗ ಮಧ್ಯಮಗಳೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಗೋಮಾಳ, ಗುಂಡು ತೋಪು, ಇತರೆ ಸ್ಥಳಗಳು ಕಾಣೆಯಾಗುತ್ತಿವೆ, ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಕೆಲ ಪ್ರಭಾವಿಗಳು ಸರ್ಕಾರಿ ಜಾಗಗಳನ್ನು ಕಬಳಿಸುತ್ತಿದ್ದಾರೆ, ಭೂಮಿ ಬೆಲೆ ಗಗನಕ್ಕೆರಿದ ಹಿನ್ನಲೆ ಭೂ ಗಳ್ಳರ ಹಾವಳಿ ಹೆಚ್ಚಾಗಿದೆ ಈ ರೀತಿಯ ಕೃತ್ಯಾಗಳಲ್ಲಿ ಅಧಿಕಾರಿಗಳು ಭಾಗಿಯಾಗುತ್ತಿರುವುದು ವಿಪರ್ಯಾಸ ಎಂದರು.

    ನಮ್ಮ ತಾಲ್ಲೂಕಿನ ಹಲವು ಗ್ರಾಮ ಹಾಗೂ ನಗರ ಭಾಗದಲ್ಲಿ ಈಗಾಗಲೇ ಹಲವು ಸರ್ಕಾರಿ ಜಾಗಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ. ಅಂತಹ ಭೂಗಳ್ಳರ ವಿರುದ್ಧ ದಕ್ಷ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಜಾಗ ಉಳಿಸಬೇಕೆಂದು ಮನವಿ ಮಾಡಿತ್ತೇವೆ, ಮಾನ್ಯ ಉಪವಿಭಾಗಾಧಿಕಾರಿಗಳು ಹಾಗೂ ಮಾನ್ಯ ತಾಲ್ಲೂಕು ದಂಡಧಿಕಾರಿಗಳು ಸ್ಪಂದಿಸಿದ್ದು, ಶೀಘ್ರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

     

    ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಜಾಗಗಳನ್ನು ಉಳಿಸದೆ ಇದ್ದ ಪಕ್ಷದಲ್ಲಿ ನಮ್ಮ ಕೆ ಆರ್ ಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟ ಖಂಡಿತಾ ಕೈಗೊಳ್ಳಲಾಗುವುದು, ಸಾಂಕೇತಿಕ ಪ್ರತಿಭಟನೆ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ,ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಅಲೀಮ್,ಶ್ರೀನಿವಾಸ್, ವೆಂಕಟೇಶ್, ಫಾರೂಕ್, ಸರಸ್ವತಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ಕಾಂಗ್ರೆಸ್ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ : ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ರವರಿಗೆ ಬೇಷರತ್ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕರು

    ದೊಡ್ಡಬಳ್ಳಾಪುರ : ನೆನ್ನೆ ತಾನೇ ಜೆಡಿಎಸ್ ಜಿಲ್ಲಾ ಮತ್ತು ತಾಲ್ಲೂಕು ಘಟಕ ಪತ್ರಿಕಾ ಗೋಷ್ಠಿ ನೆಡೆಸಿ ತನ್ನ ಅಧಿಕೃತ ಅಭ್ಯರ್ಥಿಯಾಗಿ ಹುಸ್ಕೂರ್ ಟಿ ಆನಂದ್ ರವರನ್ನು ಘೋಷಣೆ ಮಾಡಿತ್ತು, ಕಾಂಗ್ರೆಸ್ ಬಮೂಲ್ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಹಾಕದೆ ಕುತೂಹಲ ಮೂಡಿಸಿತ್ತು ಇಂದು ಆ ಕುತೂಹಲಕ್ಕೆ ತೆರೆ ಬಿದಿದ್ದೆ.

    ಹೌದು ಸ್ಥಳೀಯ ಕಾಂಗ್ರೆಸ್ ಪಕ್ಷವು ತನ್ನ ಬಾಹ್ಯ ಬೆಂಬಲ ಸುಚಿಸುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಯಾವುದೇ ಷರತ್ತು ವಿಧಿಸದೆ ಬೆಂಬಲ ಸೂಚಿಸಿದೆ.

    ನಗರದ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಮಾಜಿ ಶಾಸಕರಾದ ಟಿ. ವೆಂಕಟರಮಣಯ್ಯ ಮಾತನಾಡಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್, ಹಾಗೂ ಪಕ್ಷದ ವರಿಷ್ಟರಾದ ಡಿಕೆ ಸುರೇಶ್, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ಒಳಗೊಂಡತೆ ಹಲವು ಹಿರಿಯ ಪ್ರಮುಖರ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇವೆ, ಕ್ರಮ ಸಂಖ್ಯೆ 2 ಹಣ್ಣಿನ ಬುಟ್ಟಿ ಚಿನ್ಹೆ ಹೊಂದಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ರವರನ್ನು ಬೆಂಬಲಿಸಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು

     

    ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ಮಾತನಾಡಿ ಯಾವುದೇ ಷರತ್ತು ವಿಧಿಸದೇ ನನಗೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಅಬಾರಿಯಾಗಿದ್ದೇನೆ, ಈ ಬೆಂಬಲ ಕುರಿತು ನಮ್ಮ ಜೆಡಿಎಸ್ ಪಕ್ಷದ ವರಿಷ್ಟರ ಸಲಹೆ ಮೇರೆಗೆ ಈ ನಿರ್ಧಾರಕ್ಕೆ ಮುಂದಾಗಿದ್ದು, ಸ್ಥಳೀಯವಾಗಿ ನಮಗೆ ಬೆಂಬಲ ಸೂಚಿಸಿರುವ ಮಾಜಿ ಶಾಸಕರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

     

     

  • ಬಡ ರೋಗಿಗಳಿಗೆ ಕಿಟ್ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ರಾಜಘಟ್ಟ ಗ್ರಾಮಪಂಚಾಯತಿ ಸದಸ್ಯ ಶಿವ ಕುಮಾರ್

    ದೊಡ್ಡಬಳ್ಳಾಪುರ : ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಆಹಾರ ವಿತರಣೆ ಮಾಡುವ ಮೂಲಕ ರಾಜಘಟ್ಟ ಗ್ರಾಮಪಂಚಾಯತಿ ಸದಸ್ಯ ಶಿವಕುಮಾರ್ ತಮ್ಮ 35ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

     

    ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಇತರೆ ಪದಾರ್ಥಗಳು ಹೊಂದಿರುವ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆಗೂಡಿ ಬಡ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ಹಾಗೂ ಇತರೆ ಆಹಾರ ಪದಾರ್ಥಗಳು ಒಳಗೊಂಡ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದೇನೆ, ಮುಂದೆಯೂ ಇದೇ ರೀತಿ ಸಾರ್ವಜನಿಕರ ಸೇವೆ ಮಾಡುವ ಮೂಲಕ ವಿಶೇಷ ದಿನಗಳನ್ನು ಆಚರಿಸಲಾಗುವುದು ಎಂದರು.

    ಜೆಡಿಎಸ್ ಮುಖಂಡರಾದ ಹರೀಶ್ ಮಾತನಾಡಿ ಸ್ನೇಹಿತರಾದ ಶಿವಕುಮಾರ್ ರವರು ತಮ್ಮ ಹುಟ್ಟು ಹಬ್ಬವನ್ನು ಪ್ರತಿ ವರ್ಷವೂ ಹಲವಾರು ಸೇವ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದು ಸಂತಸ ತಂದಿದೆ . ಅವರಿಂದ ಮತ್ತಷ್ಟು ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡುವಂತೆ ಭಗವಂತ ಆಶೀರ್ವದಿಸಲಿ ಎಂದು ಹಾರೈಸಿದರು .

     

    ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರವೀಶ್,ಆರ್. ಸಿ, ಶಿವಕುಮಾರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ ಎಸ್ ಹರೀಶ್, ಆರ್. ಜಿ. ಚಂದ್ರ ಶೇಖರ್, ಮಂಜುನಾಥ್, ಆರ್ ಎ ಹರೀಶ್, ಆರ್ ಯಶವಂತ್, ಪಾನಿಪುರಿ ಚಂದ್ರಶೇಖರ್, ಗಗನ್, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.

     

  • ಬಮೂಲ್ ಚುನಾವಣೆ : ಜೆಡಿಎಸ್ ಅಭ್ಯರ್ಥಿಯನ್ನಾಗಿ ಹುಸ್ಕೂರು ಟಿ ಆನಂದ್ ಘೋಷಣೆ : ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಪಾಲಿಸಲೇಬೇಕೆಂಬ ನಿಯಮವಿಲ್ಲ ಎಂದ ಮುಖಂಡರು

    ದೊಡ್ಡಬಳ್ಳಾಪುರ : ಇದೇ ಮೇ ತಿಂಗಳ 25 ರಂದು ನಡೆಯಲಿರುವ ಬಮೂಲ್ ಚುನಾವಣೆಗೆ ಸ್ಥಳೀಯವಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಹುಸ್ಕೂರು ಟಿ ಆನಂದ್ ರವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

     

    ನಗರದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ ಅಭ್ಯರ್ಥಿಯ ಘೋಷಣೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯವಾಗಿ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಬಮೂಲ್ ಚುನಾವಣೆಯ ವಿಷಯದಲ್ಲಿ ಸ್ಥಳೀಯವಾಗಿ ನಮ್ಮ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಗಳೇ ಇಲ್ಲ ಎಂಬ ಮಾತು ಕೇಳಿಬಂದಿತ್ತು, ಆದರೆ ಪ್ರತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಮ್ಮ ಜೆಡಿಎಸ್ ಪಕ್ಷಕ್ಕೆ ತನ್ನ ಸ್ವಂತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಮರ್ಥ್ಯವಿದೆ ಎಂಬುದನ್ನು ಇತರರಿಗೆ ಅರ್ಥ ಮಾಡಿಸಲು ಇದೊಂದು ಸೂಕ್ತ ಉದಾಹರಣೆ ಎಂದರು.

     

    ಕ್ರಮ ಸಂಖ್ಯೆ. 2, ಗುರುತು, ಹಣ್ಣಿನ‌ ಬುಟ್ಟಿ ಗುರುತು. ದಿ.ಎಚ್.ಅಪ್ಪಯ್ಯಣ್ಣನವರಿಗೆ ಆತ್ಮಕ್ಕೆ ಶಾಂತಿ ಹಾಗೂ ನ್ಯಾಯ ಒದಗಿಸಲು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಹೇಳಿದರು.

     

     

    ಸ್ಥಳೀಯವಾಗಿ ಮೈತ್ರಿ ನಿಭಾಯಿಸುವ ನಿಯಮವೇನು ಇಲ್ಲ  

    ಬಮೂಲ್ ಚುನಾವಣೆ ಕುರಿತಂತೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷವೂ ಪ್ರತಿ ಚುನಾವಣೆಯಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಬಾರಿ ನಮ್ಮ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷವು ಬೆಂಬಲ ನೀಡಲಿದೆ ಎಂಬ ವಿಶ್ವಾಸ ಇದೆ, ಇದು ಕಾಂಗ್ರೆಸ್ ನೊಂದಿಗೆ ಮೈತ್ರಿ ಅಲ್ಲ, ಬಮೂಲ್ ಚುನಾವಣೆ ಯಾವುದೇ ರಾಜಕೀಯ ಪಕ್ಷದ ಚಿಹ್ನೆಯ ಅಡಿಯಲ್ಲಿ ನಡೆಯುವುದಿಲ್ಲ ಇದೊಂದು ರೈತಾಪಿ ವರ್ಗದ ಚುನಾವಣೆ, ಹಾಗಾಗಿ ಯಾವುದೇ ರೀತಿಯ ಮೈತ್ರಿ ಇಲ್ಲ , ಸ್ಥಳೀಯ ಚುನಾವಣೆಗಳಲ್ಲಿ ನಮ್ಮ ಪಕ್ಷದ ಉಳಿವು ಮತ್ತು ಬಲಪಡಿಸುವ ನಿಟ್ಟಿನಲ್ಲಿ ಇಂತಹ ನಿರ್ಧಾರಗಳ ಅವಶ್ಯಕತೆವಾಗಿರುತ್ತವೆ. ಅಲ್ಲದೆ ಸ್ಥಳೀಯ ಚುನಾವಣೆಗಳಲ್ಲಿ ಎನ್ ಡಿ ಎ ಮೈತ್ರಿ ಪಾಲಿಸಲೇಬೇಕೆಂಬ ನಿಯಮವೇನು ಇಲ್ಲ. ರಾಷ್ಟ್ರ ನಾಯಕರು ರಾಜ್ಯನಾಯಕರ ಆದೇಶದ ಮೇರೆಗೆ ಮೈತ್ರಿ ನಿಯಮ ಪಾಲನೆ ಮಾಡಲಾಗುವುದು ಎಂದರು.

     

    ನಮ್ಮ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ರವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಲವಾರು ತೊಂದರೆ ಕೊಟ್ಟಿದ್ದಾರೆ ಆದರೆ ನೆನಪಿರಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷವು ಸುಭದ್ರವಾಗಿದೆ , ರೈತಾಪಿ ವರ್ಗದ ಪಕ್ಷವಾಗಿರುವ ಜೆಡಿಎಸ್ ತನ್ನದೇ ಆದ ಬಲ ಹೊಂದಿದೆ ಈ ಬಾರಿಯ ಬಮೂಲ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದು ಶತಸಿದ್ದ ಎಂದರು.

     

    ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷವು ನಮ್ಮ ಪಕ್ಷದ ಅಭ್ಯರ್ಥಿ ಬೆಂಬಲಿಸುತ್ತದೆ ಎಂಬ ವಿಶ್ವಾಸ ಇದೆ , ಬಿಜೆಪಿ ಪಕ್ಷದ ಅಭ್ಯರ್ಥಿಗೆ ಕಾನೂನು ತೊಡಕು ಇರುವುದರಿಂದ ಮತದಾರ ಬಂಧುಗಳು ತಮ್ಮ ವೋಟನ್ನು ವ್ಯರ್ಥ ಮಾಡದೆ ಜೆಡಿಎಸ್ ಅಭ್ಯರ್ಥಿಗೆ ನೀಡುವ ಮೂಲಕ ಬಮೂಲ್ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

     

    ಈ ಸಂದರ್ಭದಲ್ಲಿಮುಖಂಡರಾದ ಎ.ನರಸಿಂಹಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ಹರೀಶ್ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ನಗರ ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ, ಬೆಂ.ಗ್ರಾ ಮಹಿಳಾ ವಕ್ತಾರೆ ಶಶಿಕಲಾ, ಹೋಬಳಿ ಅಧ್ಯಕ್ಷರಾದ ಜಗನ್ನಾಥ ಚಾರಿ, ರಂಗಸ್ವಾಮಿ, ಸತೀಶ್, ಸಿದ್ದಪ್ಪ, ರಾಜಗೋಪಾಲ್, ಜಗದೀಶ, ಅಶ್ವತ್ಥನಾರಾಯಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

     

  • ಖಾಸಗಿ ಶಾಲೆಗಳು ಸರ್ಕಾರಿ ಮಾನದಂಡದಂತೆ ಶುಲ್ಕ ಪಡೆಯಲಿ – ಸಂಜೀವ್ ನಾಯಕ್

    ದೊಡ್ಡಬಳ್ಳಾಪುರ : ಖಾಸಗಿ ಪ್ರಾಥಮಿಕ, ಪ್ರಾಥಮಿಕ ಪೂರ್ವ ಮತ್ತು ಪ್ರೌಢಶಿಕ್ಷಣ ಶಾಲೆಗಳಿಗೆ ಸರ್ಕಾರಿ ಮಾನದಂಡದಲ್ಲಿ ಶುಲ್ಕ ನಿಗದಿ ಪಡಿಸಲು ಹಾಗೂ ಕೂಡಲೇ ಆದೇಶ ಹೊರಡಿಸುವಂತೆ ಉಪನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಲಾಗಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2025-26ನೇ ಸಾಲಿನ ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ, ಸರ್ಕಾರದ ಮಾನದಂಡದ ಪ್ರಕಾರ ಶುಲ್ಕ ಪಡೆದು ಕೊಳ್ಳದೆ ತಮಗಿಷ್ಟ ಬಂದಂತೆ ವಾರ್ಷಿಕ ಶುಲ್ಕ 25 ಸಾವಿರದಿಂದ 1 ಲಕ್ಷ ರೂಪಾಯಿಗಳವರೆಗೂ ವಸೂಲಿ ಮಾಡಿ ಶಾಲಾ ಶಿಕ್ಷಣವನ್ನು ಧಂಧೆ ಮಾಡಿಕೊಂಡಿದ್ದಾರೆ. ಇದಲ್ಲದೆ ಪುಸ್ತಕಗಳಿಗೆ ಸಮವಸ್ತ್ರಕ್ಕೆಂದು ಇಂತಿಷ್ಟು ಹಣವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

     

    ಸರ್ಕಾರಿ ಶಾಲಾ ಶಿಕ್ಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ನಂಬಿಕೆ ಇಲ್ಲ ಏಕೆಂದರೆ ಅವರೆ ಶಾಲೆಗಳಲ್ಲಿ ಪಾಠ ಮಾಡದೆ ಹಾಜರಾತಿ ಹಾಕಿ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ ಅವರು, ಸರ್ಕಾರಿ ಅಧಿಕಾರಿಗಳು, ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವ್ಯಾಪಾರಕ್ಕೆ ಇಳಿದಿದ್ದಾರೆ ಹಾಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಯಾರಿಗೂ ಕಾಳಜಿ ಇಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

    ಕನ್ನಡ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ.ಪಿ ಅಂಜನೇಯ ಅವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವರದಾನವಾಗಿದೆ. ಬಡವರು, ಮಧ್ಯಮ ವರ್ಗದವರು, ನೇಕಾರರು, ರೈತ, ಕಾರ್ಮಿಕರು ಮತ್ತು ಎಲ್ಲಾ ರೀತಿಯ ಶ್ರಮಿಕ ವರ್ಗದ ಜನರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬುದು ಅವರ ಹೆಬ್ಬಯಕೆ. ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳು, ಆಹಾರಪದಾರ್ಥಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಹಾಗಾಗಿ ತಳ ಸಮುದಾಯಗಳ ಆರ್ಥಿಕ ಮಟ್ಟ ದಿನೆ ದಿನೆ ಕುಸಿಯುತ್ತಿದ್ದು ದುಬಾರಿ ಬೆಲೆಗಳನ್ನು ತೆತ್ತು ಜೀವನ ಸಾಗಿಸುವುದೇ ಕಷ್ಟವಾಗಿದೆ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಸಾಲ ಸೋಲ ಮಾಡಿ ತಮ್ಮಲ್ಲಿರುವ ಚೂರು ಪಾರು ಒಡವೆಗಳನ್ನು ಅಡವಿಟ್ಟು ಶಾಲೆಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಏಕೆಂದರೆ ಇಂದು ಯಾವುದೇ ಖಾಸಗಿ ಶಾಲೆಗಳನ್ನು ತೆಗೆದು ಕೊಂಡರು ಸರ್ಕಾರಿ ಮಾನದಂಡದಲ್ಲಿ ಶುಲ್ಕ ಪಡೆದು ಕೊಳ್ಳದೆ ಎಲ್ಲವನ್ನೂ ಗಾಳಿಗೆ ತೂರಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಪೋಷಕರು ಶುಲ್ಕ ಕಟ್ಟಲು 2-3 ದಿನ ಅಥವಾ ಒಂದು ವಾರ ತಡವಾದರೂ ಮಕ್ಕಳನ್ನು ಶಾಲೆಯ ಹೊರಗೆ ನಿಲ್ಲಿಸುವ ಮಟ್ಟಕ್ಕೆ ಖಾಸಗಿ ಶಾಲೆಗಳವರು ಇಳಿದಿರುವುದು ದೊಡ್ಡ ದುರಂತ, ಇದರಿಂದ ಬಡವರು, ಮಧ್ಯಮ ವರ್ಗದವರು, ನೇಕಾರರು, ರೈತ ಕಾರ್ಮಿಕರು ಮತ್ತು ಎಲ್ಲಾ ರೀತಿಯ ಶ್ರಮಿಕ ವರ್ಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಅಲ್ಪ ಸಂಖ್ಯಾತರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ದುಡಿಮೆಯ ಅರ್ಧದಷ್ಟು ಪಾಲನ್ನು ದುಬಾರಿ ಶುಲ್ಕ ಪಾವತಿಸಿ ಶಿಕ್ಷಣ ಕೊಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಎಲ್ಲ ಖಾಸಗಿ ಶಾಲೆಗಳಿಗೆ ಸರ್ಕಾರಿ ಮಾನದಂಡ ಅಳವಡಿಸಿಕೊಂಡು ಶುಲ್ಕ ಪಡೆಯಲು ಆದೇಶ ಹೊರಡಿಸಬೇಕೆಂದು ಮತ್ತು ತಪ್ಪಿದಲ್ಲಿ ಅವರಿಗೆ ಶಾಲೆಗಳನ್ನು ನಡೆಸಲು ಕೊಟ್ಟಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಕನ್ನಡ ಪಕ್ಷ ಆಗ್ರಹಿಸುತ್ತದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್ ರಾಜ್ಯ ಕಾರ್ಯದರ್ಶಿ ಡಿ.ಪಿ.ಆಂಜನೇಯ ತಾಲ್ಲುಕು ಅದ್ಯಕ್ಷ ಡಿ.ವೆಂಕಟೇಶ್ ತಾ. ಗೌರವಾದ್ಯಕ್ಷ ರಂಗಣ್ಣ ತಾ.ಉಪಾದ್ಯಕ್ಷ ಮಂಜುನಾಥ್, ಮುಖಂಡರಾದ ಪರಮೇಶ್ ವೆಂಕಟಪ್ಪ. ಅಂಜನ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

     

  • ಆಪರೇಷನ್‌ ಸಿಂಧೂರ್‌ ಯಶಸ್ಸು: ಲಯನ್ಸ್‌ ಕ್ಲಬ್‌ ನೇತೃತ್ವದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಬೃಹತ್‌ ಜಾಥಾ

    ದೊಡ್ಡಬಳ್ಳಾಪುರ: ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ದ ನಡೆಸಿದ ಆಪರೇಷನ್‌ ಸಿಂಧೂರ್‌ ಯಶಸ್ವಿಯಾದ ಹಿನ್ನಲೆ ಸೇನಾ ಪಡೆಗಳ ಪರಾಕ್ರಮವನ್ನು ಸ್ಮರಿಸಿ ಹಾಗೂ ಉಗ್ರವಾದವನ್ನು ಖಂಡಿಸಿ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ನೇತೃತ್ವದಲ್ಲಿ ಬೃಹತ್‌ ವಿದ್ಯಾರ್ಥಿ ಜಾಥಾ ಶನಿವಾರ ನಡೆಯಿತು.

    ನೆಲದಾಂಜನೇಯಸ್ವಾಮಿ ದೇವಾಲಯ, ಬಸವ ಭವನ ವೃತ್ತ ಹಾಗೂ ಕೆಸಿಪಿ ವೃತ್ತದ ಬಳಿಯಿಂದ 3 ಪ್ರತ್ಯೇಕ ಜಾಥಾಗಳು ಹೊರಟು ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಬಂದು ಸೇರಿದರು. ಬಳಿಕ, ಭಗತ್‌ಸಿಂಗ್ ಕ್ರೀಡಾಂಗಣದ ಬಳಿಯಿಂದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದ ಬಳಿಗೆ, ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು, 500 ಮೀಟರ್‌ ಉದ್ದದ ತ್ರಿವರ್ಣ ಧ್ವಜದೊಂದಿಗೆ ಜಾಥಾ ನಡೆಸಿದರು. ಜಾಥಾದಲ್ಲಿ ದೇಶಭಕ್ತಿ ಸಾರುವ ಹಾಗೂ ಉಗ್ರವಾದವನ್ನು ಖಂಡಿಸುವ ಘೋಷಣೆಗಳು ಮೊಳಗಿದವು.

     

    ಶಾಂತಿನಗರದಲ್ಲಿ ಮುತ್ಯಾಲಮ್ಮ ಸಾಂಸ್ಕೃತಿಕ ಸೇವಾ ಸಮಿತಿ ವತಿಯಿಂದ ಜಾಥಾದಲ್ಲಿನ ವಿದ್ಯಾರ್ಥಿಗಳ ಮೇಲೆ ಹೂ ಮಳೆಗರೆದು ಸ್ವಾಗತಿಸಲಾಯಿತು. ಮಾರ್ಗಮಧ್ಯೆ ಪುಟಾಣಿ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

    ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ವಿಜಯೇಂದ್ರ ರಾವ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ಮಾತನಾಡಿ, ದೇಶದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಬೇಕು. ಇಂದು ದೇಶವನ್ನು ಕಾಯುತ್ತಿರುವ ನಮ್ಮಂತಹ ಸೈನಿಕರು, ಹಗಲು ರಾತ್ರಿ, ಚಳಿ ಮಳೆ ಎನ್ನದೇ ದೇಶವನ್ನು ಕಾಯುತ್ತಿದ್ದಾರೆ. ಅವರಿಗೆ ಇಡೀ ದೇಶ ನೀಡುತ್ತಿರುವ ಬೆಂಬಲ ರೋಮಾಂಚಕವಾಗಿದೆ. ದೇಶ ಸೇವೆ ಎಂದರೆ ಯುದ್ಧ ಭೂಮಿಯಲ್ಲಿಯೇ ಹೋರಾಟ ನಡೆಸಬೇಕೆಂದೇನಿಲ್ಲ. ನೀವಿರುವ ಸ್ಥಳದಲ್ಲಿಯೇ ದೇಶ ಭಕ್ತಿ ತೋರಿಸಬಹುದು. ನಮ್ಮ ದೇಶ ಎನ್ನುವ ಅಭಿಮಾನ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದ್ದು, ಇದು ಸೈನಿಕರಿಗೆ ಉತ್ಸಾಹ ತುಂಬಲಿದೆ. ಕಾರ್‍ಯಾಚರಣೆ ಹಾಗೂ ಯುದ್ದಕ್ಕೆ ವ್ಯತ್ಯಾಸವಿದ್ದು, ಆಪರೇಷನ್ ಸಿಂಧೂರ, ಹಾಗೂ ಕಾರ್ಗಿಲ್ ಎನ್ನುವುದು ಕಾರ್‍ಯಾಚರಣೆಯಾಗಿದ್ದು, ದೇಶದ ಯೋಧರು ಉಗ್ರರನ್ನು ದಮನ ಮಾಡಿರುವುದು ನಾವು ಹಬ್ಬದಂತೆ ಸಂಭ್ರಮಿಸಬೇಕಿದೆ. ಈ ಹಿಂದೆ ನಾವು ಕಾರ್ಗಿಲ್ ಕಾರ್‍ಯಾಚರನೆಯಲ್ಲಿ ಮೈನಸ್ 15 ಡಿಗ್ರಿ ಕೊರೆಯುವ ಚಳಿಯಲ್ಲಿ ಯುದ್ದ ಭೂಮಿಯಲ್ಲಿ ಹೋರಾಟ ನಡೆಸಿದ್ದ ಘಟನೆಯನ್ನು ಸ್ಮರಿಸಿದ ಅವರು, ಇಂದು ದೇಶದ ಸೈನ್ಯ ಬಲಿಷ್ಟವಾಗಿದ್ದು, ಅತ್ಯಾಧುನಿಕ ಯುದ್ದ ಸಾಮಗ್ರಿಗಳಿವೆ ಯಾವುದೇ ದೇಶ ಆಕ್ರಮಣ ಮಾಡಿದರು ಹಿಮ್ಮೆಟ್ಟಿಸುವ ಶಕ್ತಿ ಭಾರತಕ್ಕಿದೆ ಎಂದರು.

     

    ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಪರೇಷನ್ ಸಿಂಧೂರ್ ಯಶಸ್ವಿಯಾದ ಹಿನ್ನಲೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ವಿಜಯೆಂದ್ರ ರಾವ್‌ ಅವರನ್ನು ಸನ್ಮಾನಿಸಲಾಯಿತು.

    ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ದೇಶದ ತಂಟೆಗೆ ಬಂದ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದು, ಇಡೀ ದೇಶ ಸೈನಿಕರ ಕಾರ್‍ಯಕ್ಷಮತೆಗೆ ಮೆಚ್ಚುಗೆ ಸೂಚಿಸಿ ಬೆಂಬಲಿಸ್ತಿದೆ. ಇಂದು ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ. ಉಗ್ರವಾದ, ಭಯೋತ್ಪಾದನೆಗಳು ಜಗತ್ತಿಗೆ ಮಾರಕವಾಗಿದ್ದು, ಇವು ಅಳಿಯಬೇಕು. ದೇಶದಲ್ಲಿ ಶಾಂತಿ ನೆಲೆಸಬೇಕು ಎಂದರು.

     

    ಲಯನ್ಸ್ ಕ್ಲಬ್‌ನ ವೀರಭದ್ರ ಗೌಡ, ನಾಗರತ್ನ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್‌, ಲಯನ್ಸ್ ಕ್ಲಬ್ ಆಫ್ ಆರ್.ಎಲ್‌.ಜಾಲಪ್ಪ ಇನ್ಸ್ಟಿಟ್ಯೂಷನ್ಸ್‌ ಅಧ್ಯಕ್ಷ ಜೆ.ಆರ್.ರಾಕೇಶ್, ಉಪಾಧ್ಯಕ್ಷ ಕೆ.ಆರ್.ರವಿಕಿರಣ್, ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸ ರೆಡ್ಡಿ, ಕಾರ್ಯದರ್ಶಿ ಕೆ.ಸಿ.ನಾಗರಾಜ್, ಎಇಇ ಐ.ಎಂ.ರಮೇಶ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್‌, ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಶೈಕ್ಷಣಿಕ ಘಟಕಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಭಾಗಗಳ ಮುಖ್ಯಸ್ಥರು, ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

     

     

  • ಘಾಟಿ ಸುಬ್ರಹ್ಮಣ್ಯ : ಹುಂಡಿ ಎಣಿಕೆ ಕಾರ್ಯ ಮುಕ್ತಾಯ : ಸಂಗ್ರಹವಾದ ಒಟ್ಟು ಮೊತ್ತ ಎಷ್ಟು.. ಗೊತ್ತಾ ???

    ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಹುಂಡಿ ಏಣಿಕೆ ಕಾರ್ಯ ಮುಕ್ತಾಯವಾಗಿದ್ದು ಒಟ್ಟು 59,28,876 ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

     

     

    ಭಕ್ತಾದಿಗಳು 63, 000(1kg 400ಗ್ರಾಂ ) ರೂಗಳ ಮೌಲ್ಯದ ಬೆಳ್ಳಿ, 1,57,000( 19.500 ಮಿಲಿ ) ರೂಪಾಯಿಗಳ ಮೌಲ್ಯದ ಬಂಗಾರವನ್ನು ಕಾಣಿಕೆ ರೂಪದಲ್ಲಿ ದೇವಾಲಯದ ಹುಂಡಿಯಲ್ಲಿ ಹಾಕಿದ್ದಾರೆ. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

     

    ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಎಂ ನಾರಾಯಣಸ್ವಾಮಿ, ಪ್ರಧಾನ ಅರ್ಚಕರು ಶ್ರೀನಿಧಿ, ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜೆ.ಎನ್. ರಂಗಪ್ಪ,ಕೆ. ಎಸ್. ರವಿ, ಲಕ್ಷ್ಮ ನಾಯಕ್, ಆರ್ ವಿ ಮಹೇಶ್ ಕುಮಾರ್, ಹೇಮಲತಾ ರಮೇಶ್ ಹಾಗೂ ಇಂಡಿಯನ್ ಓವರ್ಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ದೇವಾಲಯದ ಸಿಬ್ಬಂದಿ ಮತ್ತು ಭಕ್ತಾದಿಗಳು ಹಾಜರಿದ್ದರು.