Blog

  • ಜನಕ್ರಾಂತಿ ಸಮಾವೇಶಕ್ಕೆ ಜಿಲ್ಲಾಧ್ಯಕ್ಷ ರಾಮು ನೇರಳೆ ಘಟ್ಟ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಜಿಲ್ಲೆಯ 200ಕ್ಕೂ ಅಧಿಕ ಕಾರ್ಯಕರ್ತರು ಭಾಗಿ

    ದೊಡ್ಡಬಳ್ಳಾಪುರ : ಬೆಂಗಳೂರಿನ ವಸಂತನಗರದ ಬಿ.ಆರ್. ಅಂಬೇಡ್ಕ‌ರ್ ಭವನದಲ್ಲಿ ನೆಡೆಯುತ್ತಿರುವ ಜನಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ 200ಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಮೂರ್ತಿ ( ರಾಮು ನೆರಳೇಘಟ್ಟ ) ತಿಳಿಸಿದರು.

    ನಗರದ ಪ್ರವಾಸಿ ಮಂದಿರ ಮುಂಭಾಗ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟಿರುವ ಕಾರ್ಯಕರ್ತರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು , ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜನ್ಮದಿನದ ಅಂಗವಾಗಿ ಕೋಮುವಾದ ಧಿಕ್ಕರಿಸಿ- ಸಂವಿಧಾನ ರಕ್ಷಿಸಿ ಎಂಬ ಘೋಷ ವಾಕ್ಯದಡಿ ದಲಿತರ ಅಭಿವೃದ್ಧಿಗಾಗಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ. ನಂ. 47/74-75) ಹಮ್ಮಿಕೊಂಡಿರುವ ಜನಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಿಂದ ಸುಮಾರು 200ಕ್ಕೂ ಅಧಿಕ ಮಂದಿ ಎರಡು ಬಸ್ ಹಾಗೂ ಹಲವು ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದು ಸಾಂಕೇತಿಕವಾಗಿ ಬಸ್ ಗಳಿಗೆ ಚಾಲನೆ ನೀಡುವ ಮೂಲಕ ಬೃಹತ್ ಮಟ್ಟದಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು

     

    -: ಪ್ರಮುಖ ಹಕ್ಕೊತ್ತಾಯಗಳು :-

    1.ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪನವರ ಜನ್ಮದಿನ ಜೂನ್ 19ನ್ನು ರಜೆ ರಹಿತ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುವಂತೆ ಆದೇಶ ಹೊರಡಿಸಬೇಕು ಹಾಗೂ ಮರಣೋತ್ತರವಾಗಿ ಕನಾ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು.

    2. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದವರ (SCSP/TSP) ಉಪ ಯೋಜನೆಯಡಿ ಒದಗಿಸುವ ಆನುದಾನ ದುರ್ಬಳಕೆ ತಡೆಯಲು ಸೆಕ್ಷನ್ 7(D) ರದ್ದುಪಡಿಸಿದಂತೆ, ಸೆಕ್ಷನ್ 7(C)ಯನ್ನು ರದ್ದುಪಡಿಸಬೇಕು ಹಾಗೂ 2025-26ನೇ ಬಜೆಟ್‌ನಲ್ಲಿ ಘೋಷಿಸಲಾದ 42 ಸಾವಿರ ಕೋಟಿ ರೂಪಾಯಿ SCSP/TSP ಅನುದಾನವನ್ನು ಗ್ಯಾರಂಟಿ ಯೋಜನೆ ಸೇರಿದಂತೆ ಅನ್ಯ ಉದ್ದೇಶಕ್ಕೆ ಬಳಸದೆ ದಲಿತರ ಅಭಿವೃದ್ಧಿಗೆ ಬಳಕೆಯಾಗಬೇಕು.

    3. ಬಗ‌ರ್ ಹುಕುಂ ಸಾಗುವಳಿದಾರರು ಸಲ್ಲಿಸಿರುವ ಅರ್ಜಿಗಳನ್ನು ಅನರ್ಹವೆಂದು ತಿರಸ್ಕರಿಸುವುದನ್ನು ನಿಲ್ಲಿಸಿ, ನಮೂನೆ 50, 53 ಹಾಗೂ 57 ರಡಿ ಸಲ್ಲಿಸಿರುವ ಅರ್ಜಿಗಳನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಭೂ ರಹಿತ ಬಡವರಿಗೆ ಸಾಗುವಳಿ ಚೀಟಿ ನೀಡಬೇಕು. ಸರಕಾರಿ ಜಾಗದಲ್ಲಿ ಬಹು ವರ್ಷಗಳಿಂದ ನೆಲೆಸಿರುವ ಕುಟುಂಬಗಳಿಗೆ 94ಸಿ ಹಾಗೂ 94ಸಿಸಿ ಅಕ್ರಮ ಸಕ್ರಮದಡಿ ಕಾಯಂಗೊಳಿಸಿ ಹಕ್ಕು ಪತ್ರ ನೀಡಬೇಕು.

    4. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಧವಾ ವೇತನ, ದೇವದಾಸಿ ವೇತನ, ವಿಕಲ ಚೇತನರಿಗೆ ಹಾಗೂ ಸಂಧ್ಯಾಸುರಕ್ಷಾ ಯೋಜನೆಯಡಿ ನೀಡುತ್ತಿರುವ ಮಾಶಾಸನ ರೂ. 3,000 ವರೆಗೆ ಹೆಚ್ಚಳ ಮಾಡಬೇಕು.

    5. ಭೂ ರಹಿತ ದೇವದಾಸಿ ಮತ್ತು ವಿಧವಾ ಮಹಿಳೆಯರಿಗೆ ತಲಾ ಕನಿಷ್ಠ 3.00 ಎಕರೆ ಜಮೀನು ಮಂಜೂರು ಮಾಡಬೇಕು.

    6. ಗುಡಿಸಲು ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವ ಬಡವರು ಮನೆ ಕಟ್ಟಿಕೊಳ್ಳಲು ರೂ.6.00 ಲಕ್ಷ ಸಹಾಯಧನ ನೀಡಬೇಕು.

    7. ವಸತಿ ರಹಿತ, ನಿದೇಶನ ರಹಿತ ಹಾಗೂ ಭೂ ರಹಿತ ಕುಟುಂಬಗಳನ್ನು ಮನೆ ಮನೆ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ವಸತಿ, ನಿವೇಶನ ಹಾಗೂ ಭೂಮಿ ಸೌಲಭ್ಯ ಕಲ್ಪಿಸಲು ವಸತಿ ಆಯೋಗ ಸ್ಥಾಪಿಸಬೇಕು.

    8. SC/ST/OBC ವರ್ಗದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅಲೆಮಾರಿ ಆಯೋಗ ಸ್ಥಾಪಿಸಬೇಕು.

    9. ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಗಳು ಅನುಷ್ಠಾನಗೊಳಿಸುತ್ತಿರುವ ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಸೇರಿದಂತೆ ಇತರೆ ಸಾಲ ಸೌಲಭ್ಯಗಳ ಯೋಜನೆಗಳಡಿ ಫಲಾನುಭವಿಗಳು ಸಲ್ಲಿಸಿರುವ ಅರ್ಜಿಗಳ ಬೇಡಿಕೆಗನುಗುಣವಾಗಿ ಅನುದಾನ ಒದಗಿಸಬೇಕು.

    10. ಬೆಲೆ ಏರಿಕೆಗೆ ತಕ್ಕಂತೆ ಸರ್ಕಾರಿ ಹಾಗೂ ಅನುದಾನಿತ ವಸತಿ ನಿಲಯಗಳ ವಿದ್ಯಾರ್ಥಿಗಳ ಮಾಸಿಕ ಭೋಜನಾ ವೆಚ್ಚವನ್ನು ರೂ.3.000 ವರೆಗೆ ಹೆಚ್ಚಳ ಮಾಡಬೇಕು.

    11. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಹೊರಸಂಪನ್ಮೂಲದಡಿ ದುಡಿಯುತ್ತಿರುವ ದಿನಗೂಲಿ ನೌಕರರನ್ನು ಖಾಯಂ ಗೊಳಿಸಬೇಕು. ಅವರಿಗೆ ಸಿಗಬೇಕಾದ ವೇತನ, ಭತ್ಯೆ ಸೇರಿದಂತೆ ಇತರೆ ಹಿಂಬಾಕಿ ವೇತನವನ್ನು ನಿಯಮ ಬದ್ಧವಾಗಿ ನೀಡಬೇಕು.

    12. ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದ ಕಾಲೇಜ್ ವಿದ್ಯಾರ್ಥಿಗಳಿಗೆ ಸರಕಾರಿ ವಸತಿ ನಿಲಯಗಳಲ್ಲಿ ಪ್ರವೇಶ ಕಲ್ಪಿಸಬೇಕು ಹಾಗೂ ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕು.

    13. ಕರ್ನಾಟಕ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(APMC)ಗಳಲ್ಲಿ SC/ST ಗಳಿಗೆ ಮೀಸಲಿರಿಸಿದ ವ್ಯಾಪಾರ ಮಳಿಗೆಗಳ ಠೇವಣಿ ಮತ್ತು ಮಾಸಿಕ ಬಾಡಿಗೆ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಬೇಕು.

    14. ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ NHM ನೌಕರರನ್ನು ಖಾಯಂ ಗೊಳಿಸಬೇಕು.

    15. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಸರಳ ಸಾಮೂಹಿಕ ವಿವಾಹಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರೂ. 50,000 ಬದಲಿಗೆ ರೂ. 1.00 ಲಕ್ಷ ವರೆಗೆ ಹೆಚ್ಚಿಸಬೇಕು.

     

    ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರ ನೇತೃತ್ವದಲ್ಲಿ ಈ ಜನಾಕ್ರಾಂತಿ ಸಮಾವೇಶವನ್ನು ಹಮ್ಮಿಕೊಂಡಿದ್ದು , ಪ್ರಮುಖ ಹಾಕ್ಕೋತ್ತಾಯಗಳನ್ನು ಸರ್ಕಾರಕ್ಕೆ ತಲುಪಿಸಲಿದ್ದೇವೆ, ದಲಿತರ ಅಭಿವೃದ್ಧಿಗಾಗಿ ನಮ್ಮ ತಂಡ ಸದಾ ಶ್ರಮಿಸಲಿದೆ ಎಂದರು.

    ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

  • ಮಾವು-ಹಲಸು ಮಾರಾಟ ಮೇಳಕ್ಕೆ ರೈತರು ನೋಂದಾಯಿಸಿ

    ಮಾವು ಮತ್ತು ಹಲಸು ಒಂದು ಋತುಮಾನ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಮಾವು ಮತ್ತು ಹಲಸು ಬೆಳೆ ಕಟಾವಿಗೆ ಬಂದಿದ್ದು ಮಾವು ಹಾಗೂ ಹಲಸು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಮಾಡುವ ಹಿನ್ನೆಲೆಯಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ತೋಟಗಾರಿಕೆ ಇಲಾಖೆ ವತಿಯಿಂದ “ಮಾವು ಮತ್ತು ಹಲಸು ಪ್ರದರ್ಶನ ಮತ್ತು ಮಾರಾಟ ಮೇಳ’ ವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

     

    ಈ ಮೇಳದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಿಧ ಮಾವು ತಳಿ, ಹಲಸು ತಳಿ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಹಮ್ಮಿಕೊಂಡು ರೈತರಿಂದ ನೇರವಾಗಿ ಖರೀದಿಸಲು ಅವಕಾಶ ಕಲ್ಪಿಸಲಾಗುವುದು.

     

    ರೈತರು ತಾವು ಬೆಳೆದ ಮಾವು ಮತ್ತು ಹಲಸು ಬೆಳೆಗಳನ್ನು ಮಾರಾಟ ಮಾಡಲು ಮೇ 08 ರಿಂದ 14 ರ ವರೆಗೆ ಹತ್ತಿರದ ತಾಲೂಕು ತೋಟಗಾರಿಕೆ ಕಛೇರಿಯಲ್ಲಿ ನೊಂದಾಯಿಸಿಕೊಳ್ಳಬೇಕು.

    ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ದೂರವಾಣಿ ಸಂಖ್ಯೆ 9448999214, ದೇವನಹಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂಖ್ಯೆ 9480461234, ದೊಡ್ಡಬಳ್ಳಾಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂಖ್ಯೆ 94821296648, ಹೊಸಕೋಟೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂಖ್ಯೆ 9880210892 ಹಾಗೂ ನೆಲಮಂಗಲ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂಖ್ಯೆ 9880461607 ಗೆ ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 66 ನವ ಜೋಡಿ

    ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದು 66 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಘಾಟಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 66 ನೂತನ ಜೋಡಿಗಳು ಸತಿ-ಪತಿಗಳಾದರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರ ಸಮ್ಮುಖದಲ್ಲಿ ನೂತನ ವಧು-ವರರಿಗೆ ಆಶೀರ್ವದಿಸಿ ಶುಭ ಹಾರೈಸಿದರು.

    ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವರು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಾದ ಮಾಡಲು ಬಂದಿರುವ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ ಶುಭ ಲಗ್ನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆದಿರುವುದು ವಿಶೇಷವಾಗಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ಬಂದಿರುವುದು ನನಗೂ ಹೆಮ್ಮೆ ಇದೆ. ಬಡವರಿಗೆ, ಹಿಂದುಳಿದವರಿಗೆ, ಸರಳ ವಿವಾಹ ಬಯಸುವವರಿಗೆ ಈ ಸಾಮೂಹಿಕ ವಿವಾಹ ಬಹಳ ಸಹಕಾರಿಯಾಗಿದೆ.

     

    ಸಾಲ ಮಾಡಿ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಆಗುವ ಮದುವೆಗಳಿಂದ, ಮುಂದೆ ಸಾಲ ತೀರಿಸಲಾಗದ ಪರಿಸ್ಥಿತಿ ನಿರ್ಮಾಣ ಆಗಬಹುದು. ಸರಳ ವಿವಾಹ ಆಗುವುದರಿಂದ ನೆಮ್ಮದಿಯ ಜೀವನ ನಡೆಸಬಹುದು. ದೇವರ ಸನ್ನಿದಾನದಲ್ಲಿ ನೆರವೇರಿರುವ ಈ ಸಾಮೂಹಿಕ ವಿವಾಹ ಶ್ರೇಷ್ಠವಾಗಿದೆ. ತಮಗೆ ಉತ್ತಮ ಜೀವನ, ಆರೋಗ್ಯ ಭಾಗ್ಯ, ಆಯಸ್ಸು ಕೊಟ್ಟು ದೇವರು ಕಾಪಾಡಲಿ ಎಂದು ನವ ದಂಪತಿಗಳಿಗೆ ಶುಭ ಹಾರೈಸಿದರು.

    ನವ ದಂಪತಿಗಳಾದ ತಾವು ಪ್ರೀತಿ ವಾತ್ಸಲ್ಯದಿಂದ ಜೀವನ ಮಾಡಬೇಕು ಮತ್ತು ತಮ್ಮ ತಂದೆ-ತಾಯಿ, ಕುಟುಂಬವನ್ನು ಚೆನ್ನಾಗಿ ಪೋಷಿಸಿ ಉತ್ತಮ ಜೀವನ ಸಾಗಿಸಲು ಸಲಹೆ ನೀಡಿದರು.

     

    ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಪ್ರಾಧಿಕಾರ ಹಾಗೂ ಅಧಿಕಾರಿಗಳಿಗೆ ಸಚಿವರು ಧನ್ಯವಾದ ತಿಳಿಸಿದರು.

    ಮಾಂಗಲ್ಯ ಭಾಗ್ಯ ಯೋಜನೆಯಡಿ ಪ್ರಾಧಿಕಾರದ ವತಿಯಿಂದ ನವ ಜೋಡಿಗೆ ತಾಳಿ, ಎರಡು ಚಿನ್ನದ ಗುಂಡು, ಪಂಚೆ-ಶಲ್ಯ, ಬೆಳ್ಳಿ ಕಾಲುಂಗುರವನ್ನು ಉಚಿತವಾಗಿ ನೀಡಲಾಗಿದೆ.

     

    ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶಿಲ್ದಾರ್ ವಿಭಾ ರಥೊಡ್, ಇಒ ಮುನಿರಾಜು, ಪ್ರಾಧಿಕಾರದ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.

  • ಮೇ 11 ಮತ್ತು 12 ರಂದು ನಡೆಯಲಿದೆ ಅರ್ಕಾವತಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಜಯಂತೋತ್ಸವ, ಹಾಗೂ ವಾರ್ಷಿಕ ಮಹೋತ್ಸವ

    ದೊಡ್ಡಬಳ್ಳಾಪುರ : ನಗರದ ಅರ್ಕಾವತಿ ತೀರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಜಯಂತೋತ್ಸವ, ಹಾಗೂ ವಾರ್ಷಿಕ ಮಹೋತ್ಸವವನ್ನು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ.)ವತಿಯಿಂದ 11-05-2025 ಭಾನುವಾರ ಹಾಗೂ 12-05-2025ನೇ ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

     

    ಶ್ರೀ ವಿಶ್ವಾವಸುನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಶುಕ್ಲಪಕ್ಷದ 11-05-2025ರ ಭಾನುವಾರ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಜಯಂತೋತ್ಸವ     ಹಾಗೂ ವಾರ್ಷಿಕ ಮಹೋತ್ಸವ ಮತ್ತು ಸೋಮವಾರ ಪೌರ್ಣಮಿಯಂದು ಸತ್ಯನಾರಾಯಣಸ್ವಾಮಿ ಪೂಜೆ ಆಯೋಜನೆ ಮಾಡಲಾಗಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

    ಕಾರ್ಯಕ್ರಮದ ವಿವರ :

    11-05-2025 ರ ಭಾನುವಾರದಂದು ಬೆಳ್ಳಿಗೆ 6 ರಿಂದ ಸುಪ್ರಭಾತಸೇವೆ, ಭಗವದನುಜ್ಞೆ, ವಿಶ್ವಕ್ಷೇನಾರಾಧನೆ, ಭಗವದ್ವಾಸುದೇವ ಪುಣ್ಯಾಹ, ಸ್ನಪನ ಕಳಶಾರಾಧನೆ ಜೊತೆಗೆ ಹಲವು ಬಗೆಯ ಹೋಮ ಕಾರ್ಯಗಳು ಸ್ವಾಮಿಯವರಿಗೆ ಮಹಾ ಕುಂಭ ಪ್ರೋಕ್ಷಣೆ, ಅಲಂಕಾರಸೇವೆ ನೆಡೆಯಲಿದ್ದು ಮಧ್ಯಾಹ್ನ 12:30 ಗಂಟೆಗೆ ಪ್ರಾಕಾರೋತ್ಸವ, ಸರ್ವದರ್ಶನ ಹಾಗೂ ತೀರ್ಥಪ್ರಸಾದ ವಿನಿಯೋಗ ಆಯೋಜನೆ ಮಾಡಲಾಗಿದೆ ಹಾಗೂ ಸಂಜೆ 06:00 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಸಾಯಂಮಾರಾಧನೆ. ಸಹಸ್ರ ನಾಮಾರ್ಚನೆ, ಮಹಾ ಮಂಗಳಾರತಿ ನೆಡೆಯಲಿದೆ.

    ತಾ|| 12-05-2025 ಸೋಮವಾರ ಬೆಳಿಗ್ಗೆ 07:30 ಗಂಟೆಗೆವಿಶ್ವಕ್ಷೇನಾರಾಧನೆ, ಭಗವದ್ವಾಸುದೇವ ಪುಣ್ಯಾಹ, ಸತ್ಯನಾರಾಯಣಸ್ವಾಮಿ ವ್ರತ. ಮಧ್ಯಾಹ್ನ 12:30 ಗಂಟೆಗೆ ಮಹಾಮಂಗಳಾರತಿ, ಸರ್ವದರ್ಶನ ಹಾಗೂ ತೀರ್ಥಪ್ರಸಾದ ವಿನಿಯೋಗ ನೆಡೆಯಲಿದೆ.

    ಶ್ರೀ ನರಸಿಂಹಸ್ವಾಮಿಯವರ ಜಯಂತೋತ್ಸವ, ಹಾಗೂ ವಾರ್ಷಿಕ ಮಹೋತ್ಸವ ಕಾರ್ಯಕ್ರಮಕ್ಕೆ ತಾಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ತನು ಮನ ಧನ ಸಮರ್ಪಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535658866

  • 42 ಕೋಟಿ ವೆಚ್ಚದಲ್ಲಿ ನೆಲಮಂಗಲ ತಾಲ್ಲೂಕು ಆಸ್ಪತ್ರೆ ನಿರ್ಮಾಣ: ದಿನೇಶ್ ಗುಂಡೂರಾವ್

    ಬೆಂಗಳೂರು ಗ್ರಾಮಾಂತರ ಜಿಲ್ಲೆ : ಜಿಲ್ಲೆಯ ನೆಲಮಂಗಲ, ಸೋಲೂರು, ದಾಬಸ್ ಪೇಟೆ ಮತ್ತು ಬೇಗೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಇಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪರಿಶೀಲಿಸಿದರು.

    ಈ ವೇಳೆ ಮಾತನಾಡಿದ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಸಾರ್ವಜನಿಕರಿಗೆ ಉತ್ತಮ ಆರೋಗ್ಯವನ್ನು ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳ ಪಾತ್ರ ಬಹಳ ಮುಖ್ಯ, ಆಸ್ಪತ್ರೆಗಳಲ್ಲಿ ಎಲ್ಲಾ ಮೂಲಭೂತ, ಔಷಧೋಪಚಾರ ಸೌಕರ್ಯ ಇರಬೇಕು. ಹಾಗಾಗಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ನಮ್ಮ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ.

     

    ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಸೋಲೂರು ಮತ್ತು ದಾಬಸ್ ಪೇಟೆ , ಬೇಗೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಂದ, ವೈದ್ಯರಿಂದ ಅಭಿಪ್ರಾಯ, ಮಾಹಿತಿ ಪಡೆದ ಸಚಿವರು ಅಸ್ಪತ್ರೆಗಳಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

     

    *42 ಕೋಟಿ ವೆಚ್ಚದಲ್ಲಿ ಹೊಸ ತಾಲ್ಲೂಕು ಆಸ್ಪತ್ರೆ ನಿರ್ಮಾಣ*

     

     

    ಕಳೆದ ಆಯವ್ಯಯ ಬಜೆಟ್ ನಲ್ಲಿ ನೆಲಮಂಗಲ ಹಾಗೂ ಹೊಸಕೋಟೆ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಬಳಿ ನಾವು ತಿಳಿಸಿದಾಗ ಆಸ್ಪತ್ರೆಗಳ ನಿರ್ಮಾಣಕ್ಕೆ ಹಣ ಮೀಸಲಿರಿಸಿದ್ದಾರೆ. ಇದು ಖುಷಿಯ ವಿಚಾರವಾಗಿದೆ.

     

    ನೆಲಮಂಗಲ ತಾಲ್ಲೂಕು ಆಸ್ಪತ್ರೆಯು ಹಳೆಯದಾಗಿದೆ, ಸಮಯಕ್ಕೆ ನೀಡಬೇಕಾದ ಸೇವೆಗಳನ್ನು ಒದಗಿಸಲು ಆಗುತ್ತಿಲ್ಲ, ಇಲ್ಲಿ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ದೂರದ ಹಳ್ಳಿಗಳಿಂದ ಜನರು ಬರುತ್ತಾರೆ.

     

    ಆದ್ದರಿಂದ ಈಗಿರುವ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸಲು ಜಾಗ ಸಾಕಾಗುವುದಿಲ್ಲ, ಹಾಗಾಗಿ ಆದಷ್ಟು ಬೇಗ ಜನರಿಗೆ ಹತ್ತಿರವಾಗುವ ಸ್ಥಳವನ್ನು ಗುರ್ತಿಸಿ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮಾಡುತ್ತೇವೆ. ಇನ್ನೂ ಒಂದೆರಡು ತಿಂಗಳೊಳಗೆ ಕಾಮಗಾರಿಯನ್ನು ಪ್ರಾರಂಭ ಮಾಡುತ್ತೇವೆ. ಪ್ರಸ್ತುತ ಇರುವ ಆಸ್ಪತ್ರೆಯನ್ನು ಹೊಸದಾಗಿ ನವೀಕರಣ ಮಾಡಿ, ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು ಎಂದರು.

    ನೆಲಮಂಗಲ ಶಾಸಕರಾದ ಶ್ರೀನಿವಾಸ್, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು, ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಹಂಕಾರ ಬದಿಗಿಟ್ಟು ಕನ್ನಡಿಗರಿಗೆ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್

    ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಕನ್ನಡಿಗರಿಗೆ ಕ್ಷಮೆ ಕೋರಿದ್ದಾರೆ.

    ಹೌದು ” ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು” ಎಂದು ಗಾಯಕ ಸೋನು ನಿಗಮ್ ಹೇಳಿದ್ದಾರೆ.

     

    ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಾಗ ಸೋನು ನಿಗಮ್ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ‘ಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದು’ ಎಂದು ಅವರು ಹೇಳಿದ್ದರು. ಅವರ ಹೇಳಿಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು,ಕನ್ನಡಿಗರು ಒತ್ತಾಯಿಸಿದ್ದರು. ಅದರಂತೆ ಅವರೀಗ ಕರುನಾಡಿನ ಜನರಲ್ಲಿ ಕ್ಷಮೆ ಕೇಳಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸೋನು ನಿಗಮ್ ಪೋಸ್ಟ್ ಮಾಡಿದ್ದಾರೆ.

     

    ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು’ ಎಂದು ಅವರು ಹೇಳಿದ್ದಾರೆ.

     

     

  • ಫಾಕ್ಸ್ ಕಾನ್ ಸಮೀಪ ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು

    ದೊಡ್ಡಬಳ್ಳಾಪುರ : ನಗರದ ಫಾಕ್ಸ್ ಕಾನ್ ಕಂಪನಿ ಸಮೀಪ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

     

    ಬಹು ರಾಷ್ಟ್ರೀಯ ಕಂಪನಿಯಾದ ಫಾಕ್ಸ್ ಕಾನ್ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಯನ್ನು ಕರೆದುಕೊಂಡು ಬರಲು ಹೋಗಿದ್ದ ಯುವಕ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ.

    ಸ್ಥಳೀಯವಾಗಿ ಪ್ರತಿನಿತ್ಯ ಸಾವಿರಾರು ಕಾರ್ಮಿಕರು ಸಂಚರಿಸುವ ರಸ್ತೆಯಲ್ಲಿ ಅಧಿಕ ಜನ ದಟ್ಟನೆ ಇರುತ್ತದೆ, ಈ ರಸ್ತೆಯಲ್ಲಿ ವಾಹನಗಳು ಅತೀ ವೇಗದಿಂದ ಚಲಿಸುತ್ತವೆ, ಈ ಕುರಿತು ಸ್ಥಳೀಯ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ಸ್ಥಳೀಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಪರಿಶಿಷ್ಟಜಾತಿಯ ಬಲಗೈ ಸಂಬಂಧಿತ ಉಪ-ಜಾತಿಗಳನ್ನು “ಛಲವಾದಿ” ಹೊಲೆಯ ಎಂದು ನಮೂದಿಸಿ – ಸೋಣ್ಣಪ್ಪನಹಳ್ಳಿ ರಮೇಶ್

    ದೊಡ್ಡಬಳ್ಳಾಪುರ : ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟಜಾತಿಯ ಬಲಗೈ ಸಂಬಂದಿತ ಉಪ-ಜಾತಿಗಳನ್ನು “ಛಲವಾದಿ” ಹೊಲೆಯ ಎಂದು ನಮೂದಿಸುವ ಮೂಲಕ ರಾಜಕೀಯವಾಗಿ,ಆರ್ಥಿಕವಾಗಿ , ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ನಮ್ಮ ನಮ್ಮ ಹಕ್ಕನ್ನು ಪಡೆಯಲು ಸಹಕರಿಸಬೇಕೆಂದು ಸೋಣ್ಣಪ್ಪನ ಹಳ್ಳಿ ರಮೇಶ್ ಮನವಿ ಮಾಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಸಮುದಾಯಗಳ ನೈಜ ಸ್ಥಾನ, ಅಭಿವೃದ್ಧಿ ತಿಳಿಯಲು ನಾಗಮೋಹನ್ ದಾಸ್ ಆಯೋಗದ ಮುಖೇನ ಸಮೀಕ್ಷೆಗೆ ಮುಂದಾಗಿದ್ದು, ಮನೆ ಬಾಗಿಲಿಗೆ ಬರುವ ಶಿಕ್ಷಕರ ಬಳಿ ಮೂಲ ಜಾತಿಯನ್ನು ಹೊಲಯ / ಛಲವಾದಿ ಎಂದು ಸ್ಪಷ್ಟವಾಗಿ ನಮೂದಿಸುವ ಮೂಲಕ ಸಮುದಾಯದ ಬಂಧುಗಳು ಸಹಕರಿಸಬೇಕು ಎಂದರು.

     

     

    ಮುಖಂಡರಾದ ಗೂಳ್ಯ ಹನುಮಣ್ಣ ಮಾತನಾಡಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1 ರಲ್ಲಿ ಆಯಾ ರಾಜ್ಯಗಳಿಗೆ ದತ್ತಾಂಶದ ಮಾನದಂಡದ ಆಧಾರದ ಮೇಲೆ ಒಳಮೀಸಲು ಜಾರಿ ಮಾಡುವ ಅಧಿಕಾರವನ್ನು ನೀಡಿದ್ದು, ಈ ಹಿನ್ನಲೆ ರಾಜ್ಯ ಸರ್ಕಾರವು ಈ ಹಿಂದಿನ ಸರ್ಕಾರಗಳು ಮಾಡಿದ ಲೋಪಗಳನ್ನು ಸರಿಪಡಿಸುವ ಸಲುವಾಗಿ ಸಮೀಕ್ಷೆಗೆ ಮುಂದಾಗಿದೆ, ಸಮುದಾಯದ ಬಂಧುಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ಮೂಲ ಜಾತಿ ಯನ್ನು ಆದಿ ದ್ರಾವಿಡ ಅಥವಾ ಆದಿ ಕರ್ನಾಟಕ ಎಂದು ನಮೂದಿಸದೆ ಹೊಲಯ ಎಂದು ನಮೂದಿಸಬೇಕಿದೆ ಎಂದರು.

     

    ಮುಖಂಡರಾದ ಮುನಿಯಪ್ಪ ಮಾತನಾಡಿ ನಮ್ಮ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು,ಕೆಲ ದ್ವಂದ್ವಗಳಿಂದ ನಾವು ಹೆಚ್ಚಿದ್ದೇವೆ ಎಂಬ ಭಾವನೆ ಹಲವು ಸಮುದಾಯಗಳಲ್ಲಿ ಇದೆ, ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ಈ ಸಮೀಕ್ಷೆ ನೀಡುವ ಭರವಸೆ ಇದೆ ಎಂದರು.

    ಈ ಸಮೀಕ್ಷೆಯನ್ನು ಸೂಕ್ತ ರೀತಿಯಲ್ಲಿ ನೆಡೆಸಿ ವರದಿ ಸಲ್ಲಿಕೆ ಮಾಡಲು ನ್ಯಾ. ನಾಗಮೋಹನ್ ದಾಸ್ ಅವರ ಅಯೋಗ ನೇಮಕ ಮಾಡಿದೆ.ಹಾಗಾಗಿ ಆಯಾ ಜಾತಿಗಳು ಮೂಲ ಜಾತಿಯನ್ನು ಸ್ಪಷ್ಟವಾಗಿ ನಮೂದು ಮಾಡಿಸಬೇಕು ಎಂದು ಸಮುದಾಯಗಳಲ್ಲಿ ಮನವಿ ಮಾಡುತ್ತೇನೆ ಎಂದರು.

     

     

    ನಮ್ಮ ಹೊಲಯ ಸಮುದಾಯದಲ್ಲಿ 37 ಕ್ಕೂ ಅಧಿಕ ಉಪಜಾತಿಗಳಾಗಿದ್ದು, ಮೂಲ ಜಾತಿ ಕಾಲಂನಲ್ಲಿ ಹೊಲಯ ಅಥವಾ ಛಲವಾದಿ ಎಂದು ನಮೂದು ಮಾಡಿ ಎಂಬ ಮಾಹಿತಿಯನ್ನು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಮನೆಗೆ ಕರಪತ್ರ ತಲುಪಿಸಿ ಪ್ರಚಾರ ಮಾಡುವ ಮೂಲಕ ಜಾಗೃತಿ ಮೂಡಿಸಲಿದ್ದೇವೆ ಎಂದು ಮುಖಂಡರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಛಲವಾದಿ ಸಮುದಾಯದ ಮುಖಂಡರಾದ ಮುನಿಯಪ್ಪ, ಮರಿಯಪ್ಪ, ಮುನಿರಾಜು, ಕೊನಘಟ್ಟ ರಾಮಾಂಜಿನಪ್ಪ , ತಳಗವಾರ ಪುನೀತ್, ಕನ್ನಮಂಗಲ ರಮೇಶ್, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

  • ದೊಡ್ಡಬಳ್ಳಾಪುರ : ESI ಆಸ್ಪತ್ರೆಗೆ ಚಾಲನೆ ನೀಡುವಂತೆ ಕನ್ನಡ ಜಾಗೃತಿ ವೇದಿಕೆ ಒತ್ತಾಯ

    ದೊಡ್ಡಬಳ್ಳಾಪುರ : ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ESI ಹಾಸ್ಪಿಟಲ್ ಶೀಘ್ರವಾಗಿ ಚಾಲನೆ ಸೇವೆ ಆರಂಭಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

     

    ಈ ಕುರಿತು ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಎಂ.ನಾಗರಾಜ್ ಮಾತನಾಡಿ ಈಗಾಗಲೇ ESI ಹಾಸ್ಪಿಟಲ್ ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷಗಳು ಕಳೆದರೂ ಸಹ ಈ ಭಾಗದ ಕಾರ್ಮಿಕರಿಗೆ ಸೇವೆ ಸಿಗುತ್ತಿಲ್ಲ.ಇಲ್ಲಿಯ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ESI ಹಾಸ್ಪಿಟಲ್ ಗಾಗಿ ದೂರದ ಬೆಂಗಳೂರಿಗೆ ಹೋಗಬೇಕಾಗುತ್ತದೆ.ಅಲ್ಲದೆ ಈ ಭಾಗದಲ್ಲಿ ಸುಮಾರು 250ಕ್ಕೂ ಹೆಚ್ಚು ಕಾರ್ಖಾನೆಗಳಿವೆ, ಮತ್ತು ಸುಮಾರು 60 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಥಳೀಯವಾಗಿ ಇಎಸ್ಐ ಆಸ್ಪತ್ರೆಯನ್ನು ಪ್ರಾರಂಭಿಸುವ ಮೂಲಕ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರು.

    ನಮ್ಮ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲಿ ಎರಡನೇ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ವಿಷಯ.. ಆದರೆ ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಕೇಳುವವರು ಯಾರು ಇಲ್ಲ, ಇಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವವರು ಯಾರು ಇಲ್ಲದಂತಾಗಿದೆ.. ಅಲ್ಲದೆ ಈ ಭಾಗದಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಸಂದಾಯ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ನಂತರ ಮಾತನಾಡಿದ ತಾಲೂಕು ಅಧ್ಯಕ್ಷರಾದ ಶಶಿಧರ್ ESI ಹಾಸ್ಪಿಟಲ್ ಸೇವೆ ಪ್ರತಿಯೊಬ್ಬ ಕಾರ್ಮಿಕರಿಗೂ ಅತಿ ಮುಖ್ಯವಾಗಿದೆ.. ಏಕೆಂದರೆ ಈ ಭಾಗದಲ್ಲಿ ಹೆಚ್ಚಾಗಿ ರೈತಾಪಿ ಜನ ವಾಸಿಸುತ್ತಾರೆ.. ಇವರ ಮಕ್ಕಳು ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಆರೋಗ್ಯ ಸಂಬಂಧಿತ ಸಮಸ್ಯೆಗಳು ಎದುರಾದಲ್ಲಿ ಕಾರ್ಮಿಕರು ಬೆಂಗಳೂರಿಗೆ ಹೋಗಬೇಕಾಗುತ್ತದೆ ನಮ್ಮಲ್ಲೇ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದು ಇನ್ನು ಪ್ರಾರಂಭ ಗೊಳ್ಳದೆ ಇರುವುದು ವಿಪರ್ಯಾಸವೇ ಸರಿ ಕೂಡಲೇ ಮಾನ್ಯ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಸ್ಥಳೀಯ ಶಾಸಕರು ಇಎಸ್ಐ ಆಸ್ಪತ್ರೆಯನ್ನು ಪ್ರಾರಂಭಿಸುವ ಮೂಲಕ ಕಾರ್ಮಿಕರಿಗೆ ಅನುಕೂಲ ಕಲ್ಪಿಸಬೇಕು, ತಕ್ಷಣ ESi ಹಾಸ್ಪಿಟಲ ಸೇವೆ ಆರಂಭವಾಗಬೇಕು.. ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

    ರಾಜ್ಯ ಸಂಘಟನಾ ಕಾರ್ಯದರ್ಶಿ ಅಗ್ನಿ ವೆಂಕಟೇಶ್ ಮಾತನಾಡಿ ನಾವು ಈ ದಿನ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ನಮ್ಮ ದೊಡ್ಡಬಳ್ಳಾಪುರ ತಾಲೂಕಿನ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ.. ಅತಿ ಶೀಘ್ರದಲ್ಲೇ ಇಎಸ್ಐ ಹಾಸ್ಪಿಟಲ್ ಸೇವೆ ಆರಂಭಿಸಬೇಕು..ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಹೇಳಿದರು

     

    ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಗುರುಪ್ರಸಾದ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಸುರೇಶ್ ಸಿಂಗಂ, ತಾಲೂಕು ಉಪಾಧ್ಯಕ್ಷರಾದ ಮಹದೇವ್, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್, ಶಿವಕುಮಾರ ಸ್ವಾಮಿ, ಮಂಜುನಾಥ್ ನಿಜಗಲ್ ಸೇರಿದಂತೆ ಹಲವು ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.

  • ದೊಡ್ಡಬಳ್ಳಾಪುರ : ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹತ್ವ ಸ್ಥಾನವಿದೆ – ಡಿ.ಶ್ರೀಕಾಂತ್

    ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹನೀಯರ ಆಶಯ ಸಾಕಾರಗೊಂಡಾಗ ಮಾತ್ರ ಕನ್ನಡ ಭಾಷೆ,  ಸಾಹಿತ್ಯ, ಮತ್ತು ಸಂಸ್ಕೃತಿ ಸಂವರ್ಧನೆಗೊಳ್ಳುತ್ತದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ತಿಳಿಸಿದರು.

     

    ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ  ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ   ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹತ್ವ ಸ್ಥಾನವಿದೆ. ಮೊದಲಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು  ನಂತರ ಕನ್ನಡ ಸಾಹಿತ್ಯ ಪರಿಷತ್ತು ಎಂಬ ಹೆಸರು ಪಡೆದ ಈ ಸಂಸ್ಥೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರವಾಗಿದೆ ಎಂದರು.

     

    ಕನ್ನಡ ನಾಡು,ನುಡಿ ಮತ್ತು ಕನ್ನಡಿಗರ ಬದುಕಿನ ವಿಚಾರಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ನಿರ್ವಹಿಸಬೇಕಾಗಿದೆ. ನಮ್ಮ ರಾಜ್ಯದಲ್ಲಿ ನೆಲೆಸುವ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಯೋಜನೆ ರೂಪಿಸಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ರತ್ನ, ಕಾವ್ಯ, ಜಾಣ ಪರೀಕ್ಷೆಯ ಬಗ್ಗೆ ಪ್ರಚಾರ ಮಾಡುವುದು ಮತ್ತು ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಬೇಕಾಗಿದೆ ಎಂದರು.

     

    ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು   ಕನ್ನಡದ ಮಹತ್ವದ ಕವಿಗಳ  ಕೃತಿಗಳ  ಹಕ್ಕು ಸ್ವಾಮ್ಯ ಹೊಂದಿದೆ. ಕನ್ನಡ ನಿಘಂಟು ರಚನೆ ಮತ್ತು ಪರಿಷ್ಕರಣೆಯಲ್ಲಿ  ಮಹತ್ವದ ಸಾಧನೆ  ಮಾಡಿದೆ.  ಉತ್ತಮ ಗ್ರಂಥಾಲಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು  ಕನ್ನಡ  ಭಾಷೆಯ ಬೆಳವಣಿಗೆಗೆ, ಅಧ್ಯಯನ ಮತ್ತು‌ ಸಂಶೋಧನೆಗೆ ಸಹಕಾರಿಯಾಗಿದೆ.  ಇದರ ಸದುಪಯೋಗ ಕನ್ನಡಿಗರಿಗೆ ತಲುಪಬೇಕಾಗಿದೆ.‌ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣೆಯಲ್ಲಿ ಬದಲಾವಣೆ ಆಗಬೇಕಾಗಿದೆ.‌ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಆಶೋತ್ತರಗಳನ್ನು ಈಡೇರಿಸಿದಾಗ ಮಾತ್ರ ಅದು ಜನಸಾಮಾನ್ಯರ ಪರಿಷತ್ತು ಆಗುತ್ತದೆ ಎಂದರು.

     

     

    ಕಾರ್ಯಕ್ರಮದಲ್ಲಿ ಕನ್ನಡಪರ ಹಿರಿಯ ಹೋರಾಟಗಾರ ಗುರುರಾಜಪ್ಪ,  ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ಇಸ್ತೂರು  ಕೋದಂಡರಾಮ ಭಜನಾ ಮಂಡಲಿ  ಕಾರ್ಯದರ್ಶಿ ರಂಗಸ್ವಾಮಯ್ಯ,  ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ,  ಕನ್ನಡಪರ ಸಂಘಟನೆಯ ದೊಡ್ಡಹೆಜ್ಜಾಜಿ ಮೂರ್ತಿ, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು,  ನಿಕಟಪೂರ್ವ ಅಧ್ಯಕ್ಷೆ  ಪ್ರಮೀಳಾ‌ಮಹಾದೇವ್,  ಗೌರವ ಕಾರ್ಯದರ್ಶಿ ಎ.ಜಯರಾಮ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ  ಕಸಾಪ  ಘಟಕದ ಅಧ್ಯಕ್ಷ ದಾದಾಪೀರ್,  ಕೋಶಾಧ್ಯಕ್ಷ  ಜಿ.ಸುರೇಶ್,  ಪ್ರತಿನಿಧಿಗಳಾದ  ನಾಗರತ್ನಮ್ಮ,   ಷಫೀರ್, ಸೂರ್ಯ ಪದವಿಪೂರ್ವ ಕಾಲೇಜು ಪ್ರಾಚಾರ್ಯ  ಎಂ.ಸಿ.ಮಂಜುನಾಥ್,  ಡಾ.ಬಿ.ಆರ್.ಅಂಬೇಡ್ಕರ್  ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಅಣ್ಣಯ್ಯ,  ಕಲಾವಿದ  ದರ್ಗಾಜೋಗಿಹಳ್ಳಿ ಮಲ್ಲೇಶ್  ಮುಂತಾದವರು ಭಾಗವಹಿಸಿದ್ದರು