Blog

  • ಜನಗಣತಿಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ- ಸಿಎಂ ಸಿದ್ದರಾಮಯ್ಯ

    ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯೂ ನಡೆಸಬೇಕು. ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು.‌ ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎನ್ನುವುದು ನನ್ನ ಒತ್ತಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

     

    ಕೇಂದ್ರ ಸರ್ಕಾರ ಕೈಗೊಂಡಿರುವ ಜನಗಣತಿ ಕುರಿತು ಮಾತನಾಡಿದ ಅವರು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕೂಡಾ ಇದನ್ನೇ ಆಗ್ರಹಿಸಿದ್ದು, ಜಾತಿ ಗಣತಿ ವೇಳೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವಂತೆ ಅವರು ಹಿಂದಿನಿಂದಲೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

     

    ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳುತ್ತದೆ. ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಿದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಲು ಅನುಕೂಲವಾಗುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ.

     

    ಈ ರೀತಿ 2015 ರಲ್ಲಿಯೇ ನಮ್ಮ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ 192 ಕೋಟಿ ವೆಚ್ಚ ಮಾಡಿ 1. 33 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿದೆ. ಇದರಿಂದ ಪ್ರೇರಿತವಾಗಿ ಮತ್ತು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು

    ಕೇಂದ್ರ ಸರ್ಕಾರವು ಈಗ ಸಮೀಕ್ಷೆಗೆ ಮುಂದಾಗಿದೆ ಎಂದರು.

     

    50% ಮೀಸಲಾತಿಯನ್ನು ಬದಲಾಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ 15 ವಿಧಿ, ಕಲಂ (5) ರಂತೆ ಮೀಸಲಾತಿಯನ್ನು ಕೊಡಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನು ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ.

     

    ಕೇವಲ ಜಾತಿಗಣತಿಯ ಘೋಷಣೆ ಮಾಡಿದರೆ ಸಾಲದು, ಅದನ್ನು ಜಾರಿಗೆ ತರಬೇಕು. 73-74 ರ ತಿದ್ದುಪಡಿಗಳನ್ನು ಬಿಜೆಪಿ ವಿರೋಧಿಸಿತ್ತು. ಇತಿಹಾಸ ನೋಡಿದರೆ ಬಿಜೆಪಿ ಸಾಮಾಜಿಕ ನ್ಯಾಯದ ಪರ ಎಂದಿಗೂ ಇಲ್ಲ ಎಂಬುದರ ಅರಿವಾಗುತ್ತದೆ. ಕೂಡಲೇ ಯಾವ ದಿನಾಂಕದಿಂದ ಜನಗಣತಿ, ಜಾತಿ ಗಣತಿ ಮಾಡುತ್ತಾರೆ ಎಂದು ತಿಳಿಸಬೇಕು. ಜಾತಿ ಗಣತಿ ಮಾಡುವಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕೂಡ ಆಗಬೇಕು. ಇಲ್ಲಿಯವರೆಗೂ ಇದನ್ನು ವಿರೋಧಿಸುತ್ತಿದ್ದವರು ಈಗ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದಾರೆ.

    ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಾಗ ಕೇಂದ್ರ ಸರ್ಕಾರ ಅದನ್ನು ವಿರೋಧಿಸಿ, ಟೀಕಿಸಿತ್ತು. ಈಗ ಬೇರೆ ರಾಜ್ಯಗಳಲ್ಲಿ ಅದನ್ನೇ ಅವರೂ ಅಳವಡಿಸಿಕೊಳ್ಳುತ್ತಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಕೂಡ ಹಾಗೆಯೇ ಮಾಡಿದ್ದಾರೆ ಎಂದರು.

     

     

     

     

     

     

  • ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟಜಾತಿಯ ಹೊಲೆಯ ಸಂಬಂಧಿತ ಉಪ-ಜಾತಿಗಳನ್ನು “ಛಲವಾದಿ” ಎಂದು ನಮೂದಿಸಿ – ಗುರುರಾಜಪ್ಪ

    ದೊಡ್ಡಬಳ್ಳಾಪುರ : ಒಳಮೀಸಲಾತಿ ಗಣತಿಯಲ್ಲಿ ಪರಿಶಿಷ್ಟಜಾತಿಯ ಹೊಲೆಯ ಸಂಬಂದಿತ ಉಪ-ಜಾತಿಗಳನ್ನು “ಛಲವಾದಿ” ಎಂದು ನಮೂದಿಸುವಂತೆ ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಗುರುರಾಜಪ್ಪ ಮನವಿ ಮಾಡಿದ್ದಾರೆ.

     

    ಈ ಕುರಿತು ಮಾತನಾಡಿದ ಅವರು ಸರ್ವೋಚ್ಚ ನ್ಯಾಯಾಲಯವು 2024ರ ಆಗಸ್ಟ್ 1 ರಲ್ಲಿ ಆಯಾ ರಾಜ್ಯಗಳಿಗೆ ದತ್ತಾಂಶದ ಮಾನದಂಡದ ಆಧಾರದ ಮೇಲೆ ಒಳಮೀಸಲು ಜಾರಿ ಮಾಡುವ ಅಧಿಕಾರವನ್ನು ನೀಡಿ, ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.

     

    ಸಮಾಜದಲ್ಲಿ ರಾಜಕೀಯವಾಗಿ,ಆರ್ಥಿಕವಾಗಿ , ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ನಮ್ಮ ಸ್ಥಾನ-ಮಾನ ಯಾವ ಹಂತದಲ್ಲಿದೆ ಎಂದು ತಿಳಿಯಲು ಈ ಸಮೀಕ್ಷೆ ಬಹುಮುಖ್ಯವಾಗುತ್ತದೆ, ಇದೆ ತಿಂಗಳ ಮೇ 5 ರಿಂದ 21ರವರೆಗೆ ಮೂರು ಹಂತಗಳಲ್ಲಿ ನಡೆಯುವ ಜಾತಿಗಣತಿ ಅವಕಾಶವನ್ನು ಬಳಸಿಕೊಂಡು ಅಭಿವೃದ್ಧಿಯಾಗಲು ದಾರಿ ಸುಗಮಗೊಳಿಸಿಕೊಳ್ಳಬೇಕಾಗಿದೆ ಆದ್ದರಿಂದ “ಛಲವಾದಿ” ಬಂಧುಗಳು ದಿನಾಂಕ:05-05-2025ರಂದು ಪ್ರಾರಂಭವಾಗುವ ಜಾತಿಗಣತಿಯ ಸಮಯದಲ್ಲಿ ಪರಿಶಿಷ್ಟಜಾತಿಯ ಹೊಲೆಯ, ಬಲಗೈ, ಛಲವಾದಿ ಸಂಬಂದಿತ 37 ಉಪ-ಜಾತಿಗಳಲ್ಲಿ ಪ್ರಮುಖವಾದ “ಛಲವಾದಿ” ಎಂದು ಬರೆಸುವುದರ ಮೂಲಕ ಗಣತಿದಾರ ಜೊತೆಯಲ್ಲಿಯೇ ಇದ್ದು, “ಛಲವಾದಿ” ಎಂದು ಬರೆಸುವ ಮೂಲಕ ನಮ್ಮ ಛಲವಾದಿ ಸಮುದಾಯದವರಿಗೆ ಮತ್ತು ಗಣತಿದಾರರಿಗೆ ಸಹಕರಿಸಲು ವಿನಂತಿ ಮಾಡುತ್ತೇನೆ ಎಂದು ತಿಳಿಸಿದರು.

     

     

     

     

     

  • ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಂ ವಿ ಎಂ ಶಾಲೆ ಶೇ.100% ರಷ್ಟು ಫಲಿತಾಂಶ ಪಡೆದಿದೆ – ಕೆ ಎಸ್ ಗೌರವ್

    2025 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು , ಬೆಂಗಳೂರು ಗ್ರಾಮಂತರ ಜಿಲ್ಲೆಯ ದೇವನಹಳ್ಳಿಯ ದುದ್ದನಹಳ್ಳಿ ಗ್ರಾಮದಲ್ಲಿರುವ ಎಂ ವಿ ಎಂ ಶಾಲೆ ಶೇಕಡ 100 ರಷ್ಟು ಫಲಿತಾಂಶ ಪಡೆದಿದೆ.

     

    ಎಂ ವಿ ಶಾಲೆಯು ಈ ಬಾರಿಯು ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಯಲ್ಲಿ 1 ರಾಜ್ಯ ರ್ಯಾಂಕ್ , 9 ಡಿಸ್ಟಿಂಕ್ಷನ್‌ಗಳು, 22 ಪ್ರಥಮ ದರ್ಜೆ ಮತ್ತು 2 ದ್ವಿತೀಯ ದರ್ಜೆ ಫಲಿತಾಂಶವನ್ನು ಪಡೆಯುವ ಮೂಲಕ ಗ್ರಾಮೀಣ ಕ್ಷೇತ್ರದ ಮಕ್ಕಳು ಉತ್ತಮ ಸಾಧನೆ ಮಾಡಿದ್ದು, ಶಾಲಾ ಆಡಳಿತ ಮಂಡಳಿ , ಬೋಧಕ ಹಾಗೂ ಬೋಧಕರ ವರ್ಗ ಶುಭ ವಿದ್ಯಾರ್ಥಿಗಳಿಗೆ ಕೋರಿದೆ.

     

    ಪ್ರಾಂಶುಪಾಲರಾದ ಕೆ ಎಸ್ ಗೌರವ್ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಯಾರೂ ಖಾಸಗಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್‌ಗಳಿಗೆ ಹೋಗದೆ ಈ ಸಾಧನೆ ಮಾಡಿದ್ದಾರೆ, ಈ ಫಲಿತಾಂಶವು ಸಂಪೂರ್ಣವಾಗಿ ಶಾಲೆಯ ಗುಣಮಟ್ಟದ ಶಿಕ್ಷಣ, ಶಿಕ್ಷಕರ ಶ್ರಮ ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಮಾದರಿಯಿಂದ ಸಾಧ್ಯವಾಗಿದೆ ಎಂದರು.

    ಪೋಷಕರು ಮತ್ತು ಶಿಕ್ಷಕ ತಂಡ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಶಾಲಾ ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕರ ಸಿಬ್ಬಂದಿ ವರ್ಗಕ್ಕೆ ಶುಭ ಕೋರಿ ಅಭಿನಂದನೆಗಳನ್ನು ತಿಳಿಸಿದರು.

    ಎಂವಿಎಂ ಶಾಲೆ ಸಮಗ್ರ ಮತ್ತು ಹೈಬ್ರಿಡ್ ಶಿಕ್ಷಣದ ಮಾದರಿ ಶಾಲೆಯಾಗಿ ಪರಿಗಣಿಸಲ್ಪಟ್ಟಿದ್ದು, ಈ ಬಾರಿಯ ಫಲಿತಾಂಶವು ಶಾಲೆಯ ದೃಷ್ಟಿಕೋನವನ್ನು ಮತ್ತಷ್ಟು ದೃಢಪಡಿಸಿದೆ,ಅಲ್ಲದೇ ಗ್ರಾಮೀಣ ಪ್ರದೇಶದಿಂದಲೂ ಶ್ರೇಷ್ಟ ಶಿಕ್ಷಣ ನೀಡಬಹುದೆಂಬ ಸಂದೇಶವನ್ನು ಸ್ಪಷ್ಟವಾಗಿ ಸಮಾಜಕ್ಕೆ ತಿಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

     

    ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.ಗ್ರಾಮೀಣ ಕ್ಷೇತ್ರದಿಂದ ರಾಜ್ಯ ಮಟ್ಟದ ಸಾಧನೆಮಾಡಿರುವುದು ಸಂತಸ ತಂದಿದೆ ಇದು ಶಾಲೆಯ ಶ್ರೇಷ್ಠತೆ ಹಾಗೂ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

     

    ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಮಾತನಾಡಿ ನಮ್ಮ ಶಾಲೆಯಲ್ಲಿ ಶಿಕ್ಷಕರು ನಮ್ಮೊಂದಿಗೆ ಆತ್ಮೀಯವಾಗಿ ಬೆರೆಯುವ ಮೂಲಕ ಕಲಿಕೆಯ ನೂನ್ಯತೆಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿ, ಉತ್ತಮ ಅಭ್ಯಾಸ ನೀಡುವುದರ ಜೊತೆಗೆ ಪರೀಕ್ಷೆಯನ್ನು ಹೇಗೆ ಎದುರಿಸಬೇಕೆಂಬ ಮನೋಬಲವನ್ನು ಸಹ ತುಂಬುತ್ತಾರೆ , ನಮ್ಮ ಶಾಲೆಯೂ ಉತ್ತಮ ಆಡಳಿತ ಮಂಡಳಿ ಹೊಂದಿದ್ದು, ಉತ್ತಮ ಮೂಲಭೂತ ಸೌಕರ್ಯಗಳಿಂದ ಕೂಡಿದೆ ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುವ ಶಿಕ್ಷಕರು ಹಾಗೂ ಆಡಳಿತ ವರ್ಗ ನಮ್ಮ ಇಂದಿನ ಸಾಧನೆಗೆ ಕಾರಣವಾಗಿದೆ ಎಂದರು.

     

    ಪೋಷಕರಾದ ಸುಮಾ ಮಾತನಾಡಿ ನನ್ನ ಮಗ ಇಂದು ಹತ್ತನೇ ತರಗತಿಯಲ್ಲಿ ಉತ್ತೀರ್ಣನಾಗಲು ಕಾರಣ ಶಾಲೆಗೆ ಸಿಬ್ಬಂದಿ ವರ್ಗ ಓದಿನಲ್ಲಿ ಹಿಂದುಳಿದಿದ್ದ ನನ್ನ ಮಗನನ್ನು ಇಂದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣವಾಗುವಂತೆ ಮಾಡಿದ್ದಾರೆ, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ, ಜೊತೆಗೆ ಶಾಲೆ ಆಡಳಿತ ಮಂಡಳಿ ಸದಾ ನಮ್ಮೊಟ್ಟಿಗಿದ್ದು ಮಕ್ಕಳನ್ನು ಹೇಗೆ ಬೆಳೆಸಬೇಕು , ಅವರಿಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು ಎಂಬ ಸಲಹೆಯನ್ನು ಸದಾ ನೀಡುತ್ತಿದ್ದರು , ಇಂದು ನನ್ನ ಮಗ ಹತ್ತನೇ ತರಗತಿಯಲ್ಲಿ ಶೇಕಡ 70ರಷ್ಟು ಅಂಕ ಪಡೆಯುವ ಮೂಲಕ ಉತ್ತೀರ್ಣನಾಗಿದ್ದಾನೆ ಶಾಲೆಯ ಆಡಳಿತ ಮಂಡಳಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಚಿರಋಣಿ ಎಂದರು.

     

    ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ. ಶ್ರೀನಿವಾಸ, ಕಾರ್ಯದರ್ಶಿ ರಾಧಾ ಶ್ರೀನಿವಾಸ, ಪ್ರಾಂಶುಪಾಲರಾದ ಕೆ ಎಸ್ ಗೌರವ್ , ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಮತ್ತು ನಾಗೇಶ್ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಜಾತಿಗಣತಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಜನಗಣತಿ ಪೂರಕ – ರವಿಕುಮಾರ್

    ದೇಶದಲ್ಲಿನ ಪ್ರತಿ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ವಾಸ್ತವಿಕ ದತ್ತಾಂಶ ಪಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾತಿಗಣತಿ ಮಾಡುವ ಐತಿಹಾಸಿಕ ನಿಲುವನ್ನು ಕೈಗೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ತಿಳಿಸಿದರು.

    ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಾತಿ ಗಣತಿ ಕುರಿತು ಕೇಂದ್ರ ಸರ್ಕಾರ ಸಮೀಕ್ಷೆ ನಡೆಸುವ ನಿರ್ಧಾರ ಕೈಗೊಂಡಿದೆ,1931ರಲ್ಲಿ ಬ್ರಿಟಿಷ್ ಸರ್ಕಾರ ಈ ಜಾತಿಗಣತಿ ಕಾರ್ಯಕ್ರಮವನ್ನು ಕೈಗೊಂಡಿತ್ತು. ಆದರೆ ಸ್ವಾತಂತ್ರ್ಯ ನಂತರ ಯಾವುದೇ ಜಾತಿಗಣತಿ ನೆಡೆದಿಲ್ಲ. ಈ ಕುರಿತಂತೆ ಕೇಂದ್ರ ಸರ್ಕಾರ ಸಾಕಷ್ಟು ಚಿಂತನೆ ನಡೆಸಿ ಜಾತಿಗಣತಿ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿ ಸಮುದಾಯಗಳ ಅಭಿವೃದ್ಧಿ ತಿಳಿಯುವ ನಿಟ್ಟಿನಲ್ಲಿ ಈ ಸಮೀಕ್ಷೆ ನೆಡೆಯಲಿದೆ ಎಂದರು.

     

    ಜನಗಣತಿಯನ್ನ  ಕಾಂಗ್ರೆಸ್  ಏಕೆ ಮಾಡಲಿಲ್ಲ.????

     

    ಕಳೆದ 75 ವರ್ಷಗಳಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿದ್ದ ಸಂದರ್ಭದಲ್ಲಿ ಏಕೆ ಜಾತಿಗಣತಿ ಮಾಡಲಿಲ್ಲ. 2011 ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಮಾಡಿದ ಸಮೀಕ್ಷೆ ವರದಿ ಅಪೂರ್ಣ ಎಂದು ಮುನ್ನಲೆಗೆ ತರಲೆ ಇಲ್ಲ. ಇಂದು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಕಾಂಗ್ರೆಸ್ ಪ್ರಮುಖರು ಪ್ರಶ್ನೆ ಮಾಡುತ್ತಿದ್ದಾರೆ. ಪ್ರತಿ ಸಮುದಾಯಕ್ಕೂ ನ್ಯಾಯ ಕೊಡಿಸುವ ಸಲುವಾಗಿ ಈ ಜಾತಿಗಣತಿ ಸಮೀಕ್ಷೆ ನೆಡೆಯಲಿದೆ ಈ ಕಾರ್ಯಕ್ಕೆ ಕಾಂಗ್ರೆಸ್ ಬೆಂಬಲಿಸಿದರೆ ಸ್ವಾಗತಿಸುತ್ತೇವೆ ಎಂದರು .

    ಪಕ್ಷದ ಮುಖಂಡರಾದ ಲಕ್ಷ್ಮಿನಾರಾಯಣ, ರಾಜ್ಯ ಕಾರ್ಯದರ್ಶಿ ನಿಚ್ಚಿತ, ಎಸ್.ಸಿ ಮೋರ್ಚಾ ಅಧ್ಯಮ್ಷ ಬುಳ್ಳಳ್ಳಿ ರಾಜಪ್ಪ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮತ್ತಿತ್ತರರು ಇದ್ದರು.

  • ತಾಲ್ಲೂಕಿಗೆ ಬಿ ಬಿ ಎಂ ಪಿ ಮಾದರಿಯ ಮೊದಲ ವೈಟ್ ಟಾಪಿಂಗ್ ರಸ್ತೆ: ಭೂಮಿ ಪೂಜೆ ಸಲ್ಲಿಸಿ ಶುಭಕೋರಿದ ಶಾಸಕ ಧೀರಜ್ ಮುನಿರಾಜು

    ನಗರದ ರಾಮೇಗೌಡ ವೃತ್ತದಿಂದ ಟೋಲ್ ಗೇಟ್ ವೃತ್ತ, ನ್ಯಾಷನಲ್ ಪ್ರೈಡ್ ಶಾಲೆಯಿಂದ ಮೇಘಾಂಜಲಿ ವೃತ್ತದವರಗೆ ಕಾಂಕ್ರೀಟ್ ರಸ್ತೆ/ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಭೂಮಿ ಪೂಜೆ ನೆರವೇರಿಸಿದರು.

     

    ರಾಷ್ಟ್ರೀಯ ಹೆದ್ದಾರಿ-4 ನೆಲಮಂಗಲದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ರಾ.ಹೆ-7ಕ್ಕೆ ಚಿಕ್ಕಬಳ್ಳಾಪುರ ಸೇರುವ ರಾಜ್ಯ ಹೆದ್ದಾರಿ-74ರ ರಸ್ತೆಯ ಸರಪಳಿ 27.90 ರಿಂದ 31.40ಕಿ.ಮೀಯವರೆಗೆ ಕಾಂಕ್ರೀಟ್ ರಸ್ತೆ/ವೈಟ್‌ಟಾಪಿಂಗ್ ರಸ್ತೆ ನಿರ್ಮಾಣದ ಕಾಮಗಾರಿಯನ್ನು ಭೂಮಿ ಪೂಜೆ ಸಲ್ಲಿಸಿ ಗುದ್ದಲಿ ಪೂಜೆ ಮಾಡುವ ಮೂಲಕ ನೂತನ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿ ಮಾತನಾಡಿದರು. ಎಸ್ ಎಚ್ ಡಿ ಪಿ ಯೋಜನೆ ಅಡಿಯಲ್ಲಿ ನಮ್ಮ ನಗರದ ನಗರಸಭೆ ವ್ಯಾಪ್ತಿಯ ಮೂಲಕ ಹಾದುಹೋಗುವ ಪ್ರಮುಖ ರಸ್ತೆ (ಚಿಕ್ಕಬಳ್ಳಾಪುರದಿಂದ ನೆಲಮಂಗಲ ಸೇರುವ ಮುಖ್ಯರಸ್ತೆ )ಗೆ ವೈಟ್‌ಟಾಪಿಂಗ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ, ಕಳೆದ ಹತ್ತಾರು ವರ್ಷಗಳಿಂದ ಮಳೆ ಬಂದ ಸಂದರ್ಭದಲ್ಲಿ ತಾಲ್ಲೂಕು ಕಚೇರಿ ಮುಂಭಾಗ ನೀರು ನಿಲ್ಲುವ ಸಮಸ್ಯೆ, ಕನ್ನಡ ಜಾಗೃತಿ ಭವನದ ಮುಂಭಾಗ ಒಳಚರಂಡಿ ಸಮಸ್ಯೆ ನಿರಂತರವಾಗಿ ಕಾಣಿಸುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಕಾಂಕ್ರೀಟ್ ರಸ್ತೆ/ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ಮಾಡುವ ಮೂಲಕ ಪರಿಹಾರ ದೊರೆಯಲಿದೆ ಎಂದರು.

    ಇದೆ ಮೊದಲ ಬಾರಿಗೆ ದೊಡ್ಡಬಳ್ಳಾಪುರದಲ್ಲಿ ಬಿ ಬಿ ಎಂ ಪಿ ರೀತಿಯಲ್ಲಿ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ, ಮುಂದುವರೆದಂತೆ ಆಲಹಳ್ಳಿ ವರೆಗೂ ದ್ವಿಮುಖ ರಸ್ತೆ ನಿರ್ಮಾಣವಾಗಲಿದೆ, ನಗರಕ್ಕೆ ಪ್ರವೇಶ ಪಡೆಯುವ ನಾಲ್ಕು ದ್ವಾರಗಳಲ್ಲಿಯೂ ದ್ವಿಮುಖ ರಸ್ತೆ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿ ನಗರ ಬೆಳೆದು ವಾಹನಗಳ ದಟ್ಟಣೆ ಹೆಚ್ಚಾದರೂ ಸಮಸ್ಯೆಯಗದಂತೆ ನಿರ್ವಹಿಸುವ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದೇವೆ ಎಂದರು.

    ಅನುಭವದಂತೆ ಖಾತೆ ರಸ್ತೆ ಅಗಲೀಕರಣಕ್ಕೆ ಮಾರಕ

    ನಗರ ಸಭೆ ಈ ಹಿಂದೆ ಮಾಡಿರುವ ಮೂಲ ದಾಖಲಾತಿ ಇಲ್ಲದ ಕೆಲವು ಜಾಗಗಳಿಗೆ ಕೆಲ ಬೇಜವಾಬ್ದಾರಿ ಅಧಿಕಾರಿಗಳು ಮಾಡಿಕೊಟ್ಟಿರುವ ಅನುಭವದಂತೆ ಖಾತೆಗಳು ಇಂದು ರಸ್ತೆ ಅಗಲೀಕರಣ ಮಾಡಲು ಸಮಸ್ಯೆ ಆಗಿದೆ,ಭೂ ಮಾಲೀಕರಿಗೆ ಪರಿಹಾರ ಧನ ನೀಡುವ ಜವಾಬ್ದಾರಿ ಸ್ಥಳೀಯ ಆಡಳಿತ ವಹಿಸಬೇಕಾಗುತ್ತದೆ, ಆದರೆ ದೊಡ್ಡಬಳ್ಳಾಪುರ ನಗರಸಭೆಯ ಆದಾಯ 8 ಕೋಟಿ ಖರ್ಚು 14 ಕೋಟಿ ಇದೆ, ರಸ್ತೆ ಅಗಲೀಕರಣ ವಿಚಾರವಾಗಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರವು ವಿಶೇಷ ಅನುದಾನ ನೀಡುವ ಮೂಲಕ ಸಹಕರಿಸಲಿ ಈಗಾಗಲೇ ಬಿ ಎಂ ಆರ್ ಡಿ ಎ ಅಧಿಕಾರಿ ರಾಜೇಂದ್ರ ಚೋಳನ್ ರವರಿಗೆ ಪತ್ರದ ಮೂಲಕ ಮಾಹಿತಿ ತಿಳಿಸಿ ಮನವಿ ಮಾಡಿದ್ದು , ಮಾನ್ಯ ಉಪಮುಖ್ಯಮಂತ್ರಿಗಳಿಗೂ ಪತ್ರದ ಮೂಲಕ ಮನವಿ ಸಲ್ಲಿಸಲಿದ್ದೇನೆ , ನಗರದ ಒಳಿತಿಗಾಗಿ ವಿಶೇಷ ಅನುದಾನದ ಅಡಿಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರವು ಅನುದಾನ ನೀಡುವ ಮೂಲಕ ರಸ್ತೆ ಅಗಲೀಕರಣದ ಪ್ರಕ್ರಿಯೆಗೆ ಸಹಕರಿಸಲಿ ಎಂದರು.

    ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷರಾದ ಸುಮಿತ್ರ ಆನಂದ್, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕುಮಾರ್, ನಗರಸಭೆ ಸದಸ್ಯರಾದ ಬಂತಿ ವೆಂಕಟೇಶ್, ಶಿವು, ಎಂಜಿ ಶ್ರೀನಿವಾಸ, PWD ಎಇಇ ಪುರುಷೋತ್ತಮ, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಮುದ್ದಪ್ಪ,ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖರಾದ ವಾಣಿ ನಂದಕುಮಾರ್, ಪ್ರಿಯಾಂಕಾ ಮೋಹನ್, ಸಂಜು, ಸೇರಿದಂತೆ ಇದ್ದರು.

  • 2025 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ : 9 ನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ : ದೊಡ್ಡಬಳ್ಳಾಪುರ ತಾಲ್ಲೂಕಿನ ರಂಜಿತಾ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ

    ದೊಡ್ಡಬಳ್ಳಾಪುರ : 2025 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು , ಬೆಂಗಳೂರು ಗ್ರಾಮಂತರ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

     

    ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಟೌನ್ ನ ನೀಲಗಿರೇಶ್ವರ ಪ್ರೌಢಶಾಲೆಯ ಸಿ. ಭಾವನ ಎಂಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

     

    ದೊಡ್ಡಬಳ್ಳಾಪುರ ಟೌನ್ ನ ಮೆಳೆಕೋಟೆ ಕ್ರಾಸ್ ನಲ್ಲಿರುವ ಎಸ್.ಜೆ.ಸಿ.ಆರ್ ಶಾಲೆಯ ರಂಜಿತಾ ಎ.ಸಿ ಎಂಬ ವಿದ್ಯಾರ್ಥಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

  • ಸಾರ್ವಜನಿಕ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಕಾರ್ಮಿಕ ದಿನದ ಆಚರಣೆ ಮಾಡಿದ ಕೆ ಆರ್ ಎಸ್ ಪಕ್ಷ

    ದೊಡ್ಡಬಳ್ಳಾಪುರ : ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಕಾರ್ಮಿಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಕೆಆರ್‌ಎಸ್ ಪಕ್ಷ ಆಚರಿಸಿತು.

     

    ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ಯಾವುದೇ ಸಂಸ್ಥೆಯಾಗಲಿ ತಳಮಟ್ಟದಲ್ಲಿ ಕಾರ್ಮಿಕರು ಶ್ರಮಿಸದೆಯಿದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ, ಕಾರ್ಮಿಕರ ಹಿತಾಸಕ್ತಿ ಕಾಯುವ ಹಾಗೂ ಅವರ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಮೇ 1ರಂದು ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಿದ್ದೇವೆ, ಅಂತೆಯೇ ಇಂದು ಪ್ರತಿನಿತ್ಯ ಸಾರ್ವಜನಿಕ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ ಶ್ರಮಿಸುವ ಸಿಬ್ಬಂದಿ ವರ್ಗಕ್ಕೆ ಗೌರವ ಸಮರ್ಪಣೆ ಮಾಡುವ ಮೂಲಕ ನಮ್ಮ ಕೆಆರ್‌ಎಸ್ ಪಕ್ಷವು ಕಾರ್ಮಿಕ ದಿನವನ್ನು ಆಚರಣೆ ಮಾಡಿದೆ ಎಂದರು.

     

    ಈ ವಿಶೇಷ ರೀತಿ ಆಚರಣೆಗೆ ಬೆಂಗಳೂರು ಗ್ರಾಮಾಂತರ ಕಾರ್ಮಿಕ ಘಟಕದ ಅಧ್ಯಕ್ಷ ಮಾರುತಿ ಹಾಗೂ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಲೀಲಾರಾಮ್ ಸೇರಿದಂತೆ ಪಕ್ಷದ ಸೇನಾನಿಗಳು ಮುಂದಾಳತ್ವ ವಹಿಸಿದ್ದು ಸಂತಸ ತಂದಿದೆ, ಇಂದು ಶ್ರಮಿಕರ ದಿನ ಈ ದಿನವನ್ನು ಸಂಭ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳಿಗೆ ಶುಭವಾಗಲಿ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ , ಜಿಲ್ಲಾ ಸಮಿತಿಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಮಾರುತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮುರಾರಿ ದೊಡ್ಡಬಳ್ಳಾಪುರ , ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಬಿ ಎಲ್ ರಾಮ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ,ತಾಲ್ಲೂಕು ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಅಲೀಮ್,ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲೂಕು ಉಪಾಧ್ಯಕ್ಷರು, ಹೆಚ್ ಏನ್ ವೇಣು ದೊಡ್ಡಬಳ್ಳಾಪುರ ತಾಲೂಕು ಉಸ್ತುವಾರಿಗಳು, ಸಮೀರ್ ದೊಡ್ಡಬಳ್ಳಾಪುರ ತಾಲೂಕು ಅಲ್ಪಸಂಖ್ಯಾತರ ಘಟಕ,ಸುಬ್ರಮಣಿ, ಭಾಷಾ, ಲಲಿತಮ್ಮ, ಕುಮಾರ್ ನೆಲಮಂಗಲ, ಶಶಿ ಹೊಸಕೋಟೆ, ನಾರಾಯಣಸ್ವಾಮಿ ಹೊಸಕೋಟೆ, ರಮೇಶ್ ನೆಲಮಂಗಲ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ಚಿಕ್ಕಬೆಳವಂಗಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚಿಕಿತ್ಸೆಗಾಗಿ ಸಹಾಯಧನ ವಿತರಣೆ

    ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮ ಅಡಿಯಲ್ಲಿ ಮಂಜೂರಾಗಿದ್ದ 37,500ರೂಗಳ ಸಹಾಯಧನ ವನ್ನು ದೊಡ್ಡಬಳ್ಳಾಪುರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎನ್. ಆರ್.ದಿನೇಶ್ ಚಿಕ್ಕ ಬೆಳವಂಗಲ ಗ್ರಾಮದ ಫಲನುಭವಿ ಸುರೇಖಾರವರಿಗೆ ವಿತರಣೆ ಮಾಡಿದರು.

     

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ದೊಡ್ಡ ಬೆಳವಂಗಲ ಹೋಬಳಿಯ ಚಿಕ್ಕ ಬೆಳವಂಗಲ ಗ್ರಾಮದ ಧರ್ಮೇಂದ್ರರವರ ಪತ್ನಿ ಸುರೇಖಾರವರು ತೀವ್ರ ತರದ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮ ಅಡಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಯಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 37,500/ ಸಹಾಯಧನ ಮಂಜೂರಾತಿ ಮಾಡಿದ್ದು ಈ ದಿನ ತಾಲ್ಲೂಕು ಯೋಜನಾಧಿಕಾರಿ ದಿನೇಶ್ N.R ವಿತರಣೆ ಮಾಡಿದರು.

    ಈ ಸಂದರ್ಭದಲ್ಲಿ ದೊಡ್ಡ ಬೆಳವಂಗಳ ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಶಿವಕುಮಾರ್,ತೊಪಯ್ಯ, ಜಿಲ್ಲಾ ಜನಜಾಗೃತಿ ಸದಸ್ಯರಾದ ಧರ್ಮೇಂದ್ರ, ಮೇಲ್ವಿಚಾರಕರಾದ ಅನ್ನಪೂರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಕಾರ್ಮಿಕ ದಿನಾಚರಣೆ ಎಂದು ರಜೆ ಕೊಡದೆ ಕರ್ತವ್ಯ ನಿರ್ವಹಣೆ : ಸೂಕ್ತಕ್ರಮಕ್ಕೆ ಕನ್ನಡಾಂಬೆ ಚಿರಋಣಿ ಹೋರಾಟ ಸಮಿತಿ ಒತ್ತಾಯ

    ಕಾರ್ಮಿಕ ದಿನಾಚರಣೆಯಂದು ಕೆಲಸಗಾರರಿಗೆ ರಜೆ ಕೊಡದೆ ಖಾಸಗಿ ಕಂಪನಿಯೊಂದು ಕರ್ತವ್ಯ ನಿರ್ವಹಿಸುತ್ತಿದೆ ಎಂದು ಕನ್ನಡಾಂಬೆ ಚಿರಋಣಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ .

     

    ಹೌದು ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಖಾಸಗಿ ಕೈಗಾರಿಕೆ ಒಂದು ತನ್ನ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆ ಪ್ರಯುಕ್ತ ರಜೆ ಘೋಷಿಸದೆ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ರವಿ ಮಾವಿನಕುಂಟೆ ಇವರ ಸಾರಥ್ಯದಲ್ಲಿ ತಾಲೂಕು ಘಟಕದ ಪದಾಧಿಕಾರಿಗಳು ಕಾರ್ಖಾನೆ ಮುಂಭಾಗ ಪ್ರತಿಭಟನೆ ಮಾಡಿದರು , ಕಾರ್ಖಾನೆಯ ಒಳಗೆ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲಾ ಕಾರ್ಮಿಕರನ್ನು ಪ್ರತಿಭಟನೆಗೆ ಮಣಿದ ಕಾರ್ಖಾನೆ ಸಿಬ್ಬಂದಿ ರಜೆ ನೀಡಿ ಮನೆ ಕಳಿಸಿದ್ದಾರೆ.

     

    ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಎಸ್. ಸುಬ್ರಮಣಿ ಮಾತನಾಡಿ ಕಾರ್ಮಿಕರಿಗಾಗಿ ಇರುವ ವಿಶೇಷ ದಿನವಾದ ಕಾರ್ಮಿಕರ ದಿನಾಚರಣೆಯಂದು ಸಹ ಕೆಲಸ ಮಾಡುತ್ತಿರುವುದು ಖಂಡನೀಯ ಸ್ಥಳೀಯವಾಗಿ ಗಮನಿಸಬೇಕಾಗಿರುವ ಅಧಿಕಾರಿ ವರ್ಗ ಸುಮ್ಮನೆ ಕುಳಿತಿರುವುದು ವಿಪರ್ಯಾಸವೆ ಸರಿ , ಕಾರ್ಮಿಕರ ದಿನಾಚರಣೆಯನ್ನು ಸಂಭ್ರಮಿಸದೆ ಅಂದು ಸಹ ಕೇವಲ ದುಡ್ಡಿನ ಆಮಿಷಕ್ಕೆ ಒಳಗಾಗಿ ಕಾರ್ಮಿಕರ ದುಡಿಸಿಕೊಳ್ಳುತ್ತಿರುವ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಶ್ರೀರಾಮ್,ದೊಡ್ಡ ತುಮಕೂರು ಯಮನೂರು,ಪ್ರಕಾಶ್, ಹೇಮಂತ್,ಶಿವಕುಮಾರ್, ಅನ್ನದಾಸೋಹಿ ಮಲ್ಲೇಶ್ ಹಾಗೂ ಪದಾಧಿಕಾರಿಗಳು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

  • ತೂಬಗೆರೆ ಯಲ್ಲಿ ಸಂಭ್ರಮದಿಂದ ಬಸವಜಯಂತಿ ಆಚರಣೆ

    ದೊಡ್ಡಬಳ್ಳಾಪುರ (ತೂಬಗೆರೆ): ತಾಲೂಕಿನ ತೂಬಗೆರೆ ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೋಬಳಿ ಘಟಕದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಶ್ವಾರ್ಚನೆ ಮಾಡಿ ಪ್ರಸಾದ ವಿನಿಯೋಗ ಮಾಡುವುದರ ಮೂಲಕ ಬಸವ ಜಯಂತಿಯನ್ನು ಆಚರಿಸಿದರು.

    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಾಸಭಾ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಉದಯ ಆರಾಧ್ಯ ರವರು ಮಾತನಾಡಿ 12 ನೇ ಯ ಶತಮಾನದಲ್ಲಿ ಬಿಜ್ಜಳ ರಾಜನ ಆಸ್ಥಾನದ ಪ್ರಧಾನಮಂತ್ರಿಯಾಗಿದ್ದ ಜಗಜ್ಯೋತಿ ಬಸವೇಶ್ವರರು ಸಮಾನತೆ, ಸಹೋದರತೆ, ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಮೂಲಕ ಅನುಷ್ಠಾನಗೊಳಿಸಲು ಮುಂದಾದರು.

    ಬ್ರಾಹ್ಮಣ್ಯ – ವೈದಿಕ ಪರಂಪರೆಗೆ ಸೇರಿದ ಅನಿಷ್ಟಗಳ ವಿರುದ್ಧ ಹೋರಾಡಿ ಶೋಷಿತ ವ್ಯಕ್ತಿಗಳ ಸುಧಾರಣೆಗೆ ನಿಂತ ಮಹಾ ಮಾನವತಾವಾದಿ ಬಸವಣ್ಣನವರು. ಭಾರತ ಸಂವಿಧಾನವು ಬಸವಣ್ಣನವರ ಆಶಯಗಳಿಗೆ ಪೂರಕವಾಗಿದೆ ಆದ್ದರಿಂದ ಬಸವಣ್ಣನನ್ನು ಸರ್ಕಾರ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ.

     

    ಈ ಮೇರು ವ್ಯಕ್ತಿಯ ವಿಚಾರಧಾರೆಗಳನ್ನು ವಿಶ್ವಕ್ಕೆ ಪರಿಚಯಿಸಲು ಕರ್ನಾಟಕದ ಗಾಂಧಿಯಂದೇ ಪ್ರಸಿದ್ಧರಾಗಿರುವ ಹರ್ಡೇಕರ್ ಮಂಜಪ್ಪನವರು  1913ರಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ ಜಾರಿಗೆ ತಂದರು. ಹಾಗೂ ಇಂದು ದೇಶದ ಸಂಸತ್ ಭವನದಲ್ಲಿ ಪ್ರಥಮಬಾರಿಗೆ ಬಸವ ಜಯಂತಿ ಆಚರಣೆ ನಡೆಯುತ್ತಿರುವುದು ಇಡೀ ರಾಜ್ಯದ ಗೌರವ ಎಂದರು.

     

    ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್ ಮಾತಾನಾಡಿ ಬಸವ ಜಯಂತಿಯನ್ನು ನಮ್ಮ ಭಾಗದ ರೈತಾಪಿ ಜನರು ತಮ್ಮ ಮನೆಯ ಹಸುಗಳು ಎತ್ತುಗಳನ್ನು ಪೂಜಿಸುವುದು ಸಾಕೆತ್ತುಗಳಿಗೆ ವಿಶೇಷ ಭಕ್ಷಗಳನ್ನು ನೀಡಿ ಆಚರಿಸುತ್ತಾರೆ ಎಂದರು.

    ವಾದ್ಯ -ಮೇಳದೊಂದಿಗೆ ಆರತಿ ಗಳನ್ನು ಹಿಡಿದ ಹೆಂಗಸರು,  ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರಗೆ ಸ್ವಾಮಿ ಅರ್ಪಿಸಿದರು.

    ನೂರಾರು ಭಕ್ತರು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಬಸವ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ಪೂಜಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು.

    ವಿಶೇಷ ಪೂಜಾ ಕಾರ್ಯಕ್ರಮಗಳು ನಂತರ  ಸಂಜೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು ವೀರಗಾಸೆ ಸೇರಿದಂತೆ ಅನೇಕ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

     

    ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಲಕ್ಷ್ಮಮ್ಮ ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಸ್ ಆರ್ ಮುನಿರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಅಪ್ಪಯ್ಯಣ್ಣ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ವಕೀಲ ಪ್ರತಾಪ್, ಮುಖಂಡರಾದ ವೆಂಕಟೇಶ್, ಜಗನ್ನಾಥ, ಕನಕದಾಸ, ನಾರಾಯಣಪ್ಪ, ಮುರುಳಿ, ರವಿಸಿದ್ದಪ್ಪ, ಕಸಾಪ ಅಧ್ಯಕ್ಷ ಕುಮಾರ್, ನಿವೃತ್ತ ಯೋಧ ಗೋಪಾಲ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹಾನಂದ ಆರಾಧ್ಯ, ಬೇಕರಿ ಬಸವರಾಜ್, ವೀರಭದ್ರಾರಾಧ್ಯ, ಸೋಮಣ್ಣ, ರೇಣುಕಾರಾಧ್ಯ, ಲೋಕೇಶ್, ಜಗದೀಶ್ ಮತ್ತಿತರರು ಹಾಜರಿದ್ದರು.